ದೇಶ Archives » Page 8 of 54 » Dynamic Leader
November 24, 2024
Home Archive by category ದೇಶ (Page 8)

ದೇಶ

ದೇಶ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೀರ್ಘಕಾಲೀನ ಬಂಡವಾಳ ಗಳಿಕೆ ತೆರಿಗೆಯನ್ನು ಹೆಚ್ಚಿಸುವ ಮೂಲಕ ಜನರ ವಿಶ್ವಾಸವನ್ನು ನಾಶಪಡಿಸಿದ್ದಾರೆ ಎಂದು ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್ ದಾಸ್ ಪೈ ಟೀಕಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಸಂಸತ್ತಿನಲ್ಲಿ 2024-25ನೇ ಹಣಕಾಸು ವರ್ಷದ ಪೂರ್ಣ ಬಜೆಟ್ ಮಂಡಿಸಿದ್ದರು. ಅದರಲ್ಲಿ, ಷೇರುಗಳಿಗೆ ಸಂಬಂಧಿಸಿದ ಅಲ್ಪಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ಶೇ.15 ರಿಂದ  ಶೇ.20ಕ್ಕೆ ಮತ್ತು ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ಶೇ.10 ರಿಂದ ಶೇ.12.5ಕ್ಕೆ ಹೆಚ್ಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಮೋಹನ್ ದಾಸ್ ಪೈ ಈ ಘೋಷಣೆಯನ್ನು ಟೀಕಿಸಿದ್ದಾರೆ. ಈ ಕುರಿತು ಅವರು ಪ್ರಕಟಿಸಿರುವ ತಮ್ಮ ‘ಎಕ್ಸ್’ ಪೋಸ್ಟ್‌ನಲ್ಲಿ, “ನೀವು (ಸೀತಾರಾಮನ್) ನಿಮ್ಮ ಆಲೋಚನೆಯಿಲ್ಲದ ಕಾರ್ಯಗಳಿಂದ ಜನರ ನಂಬಿಕೆಯನ್ನು ಮುರಿದಿದ್ದೀರಿ” ಎಂದು ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿಯವರನ್ನು ಟ್ಯಾಗ್ ಮಾಡಿರುವ ಅವರು, “ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಬಂಡವಾಳ ಲಾಭದ ತೆರಿಗೆ ಹೆಚ್ಚಳದಿಂದ ಮಧ್ಯಮ ವರ್ಗ ತೀವ್ರ ಅತೃಪ್ತಿ ಮತ್ತು ಕೋಪಗೊಂಡಿದೆ. ಹಾಗಾಗಿ ನೀವು ಆ ಅಧಿಸೂಚನೆಯನ್ನು ಹಿಂಪಡೆಯಬೇಕು” ಎಂದು ಪೋಸ್ಟ್ ಮಾಡಿದ್ದಾರೆ.

ದೇಶ

ಅರಿಯಲೂರು: “ರಾಮನಿಗೆ 3 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಆದರೆ ಶ್ರೀರಾಮನಿಗೆ ಇತಿಹಾಸವೇ ಇಲ್ಲ: ಎಂದು ತಮಿಳುನಾಡು ಸಾರಿಗೆ ಸಚಿವ ಶಿವಶಂಕರ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಪುದುಕೊಟ್ಟೈ ‘ಕಂಬನ್ ಕಳಗಂ’ ಆಯೋಜಿಸಿದ್ದ ಕಂಬನ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ತಮಿಳುನಾಡು ಕಾನೂನು ಸಚಿವ ರಘುಪತಿ, “ರಾಮನ ಆಡಳಿತ ದ್ರಾವಿಡ ಮಾದರಿಯ ಆಡಳಿತಕ್ಕೆ ನಾಂದಿಯಾಗಿದ್ದು, ಇವಿ ರಾಮಸಾಮಿ, ಅಣ್ಣಾದೊರೈ, ಕರುಣಾನಿಧಿ ಹಾಗೂ ಸ್ಟಾಲಿನ್‌ಗೆ ಪೂರ್ವಭಾವಿಯಾಗಿ ರಾಮನನ್ನು ಕಾಣುತ್ತೇವೆ” ಎಂದು ಹೇಳಿದ್ದರು. ಈ ಮಾತು ಅಂದು ಸಂಚಲನ ಮೂಡಿಸಿತ್ತು.

ಈ ಹಿನ್ನೆಲೆಯಲ್ಲಿ, ಸಚಿವ ರಘುಪತಿ ಮಾತಿಗೆ ವ್ಯತಿರಿಕ್ತವಾಗಿ ಸಾರಿಗೆ ಸಚಿವ ಶಿವಶಂಕರ್ ಬಾಯಿಬಿಟ್ಟಿದ್ದಾರೆ. ಅರಿಯಲೂರಿನಲ್ಲಿ ರಾಜೇಂದ್ರ ಚೋಳರ ಜನ್ಮದಿನವನ್ನು ರಾಜ್ಯೋತ್ಸವವಾಗಿ ಆಚರಿಸುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಸಚಿವ ಶಿವಶಂಕರ್, “ಶ್ರೀರಾಮನಿಗೆ 3 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಆದರೆ ರಾಮನಿಗೆ ಇತಿಹಾಸವೇ ಇಲ್ಲ.

ದೇವಾಲಯಗಳು, ಶಾಸನಗಳು ಮತ್ತು ತಾಮ್ರ ಫಲಕದ ಶಾಸನಗಳು ರಾಜೇಂದ್ರ ಚೋಳನ ಆಳ್ವಿಕೆಗೆ ಸಾಕ್ಷಿಯಾಗಿದೆ. ರಾಜೇಂದ್ರ ಚೋಳನನ್ನು ಆಚರಿಸದಿದ್ದರೆ ಇತಿಹಾಸ ಇಲ್ಲದವರನ್ನು ನಮ್ಮ ತಲೆಗೆ ಕಟ್ಟಿಬಿಡುತ್ತಾರೆ” ಎಂದು ಹೇಳಿದ್ದಾರೆ. ಈ ಮಾತು ಡಿಎಂಕೆ ಸರ್ಕಾರಕ್ಕೆ ಮುಜುಗರವನ್ನು ಉಂಟುಮಾಡಿದೆ.

ದೇಶ

ಡಿ.ಸಿ.ಪ್ರಕಾಶ್

ನವದೆಹಲಿ: “ಪರಿಶಿಷ್ಟ ಜಾತಿಗಳಿಗೆ ಆಂತರಿಕ ಕೋಟಾ ನೀಡಲು ಯಾವುದೇ ಅಡ್ಡಿ ಇಲ್ಲ,” ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಇಂದು ಐತಿಹಾಸಿಕವಾದ ತೀರ್ಪು ನೀಡಿದೆ.

ಪಂಜಾಬ್ ಸರ್ಕಾರವು ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಕಾಯ್ದೆಯನ್ನು ಜಾರಿಗೆ ತಂದಿತು. ಪಂಜಾಬ್ ರಾಜ್ಯ ಸರ್ಕಾರವು ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯಲ್ಲಿ ವಾಲ್ಮೀಕಿ ಮತ್ತು ಮಜಾಬಿ ಸಿಖ್ ಸಮುದಾಯಗಳಿಗೆ 50% ಆಂತರಿಕ ಮೀಸಲಾತಿಯನ್ನು ಒದಗಿಸುವ ಕಾರ್ಯವಿಧಾನವನ್ನು ಪರಿಚಯಿಸಿತು.

ಅದೇ ರೀತಿ 2009ರಲ್ಲಿ ತಮಿಳುನಾಡು ಸರ್ಕಾರವು ಅರುಂಧತಿಯವರಿಗೆ ಮೀಸಲಾತಿ ನೀಡುವ ಕಾನೂನನ್ನು ಜಾರಿಗೆ ತಂದಿತು. ಈ ಸಂಬಂಧ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸೇರಿದಂತೆ ಆರು ನ್ಯಾಯಾಧೀಶರು ಪಂಜಾಬ್ ಸರ್ಕಾರದ ಪ್ರಕರಣದಲ್ಲಿ ಸರ್ವಾನುಮತದ ತೀರ್ಪು ನೀಡಿದರು. ಅದೇ ಸಮಯದಲ್ಲಿ, ಒಬ್ಬ ನ್ಯಾಯಾಧೀಶರು ಮಾತ್ರ ವಿಭಿನ್ನವಾಗಿ ತೀರ್ಪು ನೀಡಿದ್ದಾರೆ.

ಅದರಂತೆ 6 ನ್ಯಾಯಾಧೀಶರು ನೀಡಿರುವ ತೀರ್ಪಿನಲ್ಲಿ, “ಪರಿಶಿಷ್ಟ ಜಾತಿಯವರಿಗೆ ಆಂತರಿಕ ಮೀಸಲಾತಿ ನೀಡಲು ಯಾವುದೇ ನಿರ್ಬಂಧವಿಲ್ಲ. ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದವರಿಗೆ ಒಳ ಮೀಸಲಾತಿ ಒದಗಿಸಲು ಪಂಜಾಬ್ ಸರ್ಕಾರ ತಂದಿರುವ ಕಾನೂನಿಗೆ ತಡೆಯಿಲ್ಲ.

ಒಳ ಮೀಸಲಾತಿಯು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ. ಪರಿಶಿಷ್ಟ ವರ್ಗದ ವ್ಯಾಖ್ಯಾನದಿಂದ ಯಾವುದೇ ಪರಿಶಿಷ್ಟ ಉಪವಿಭಾಗಗಳನ್ನು ಹೊರಗಿಡದ ಕಾರಣ ಒಳ ಮೀಸಲಾತಿಯನ್ನು ಒದಗಿಸಬಹುದು. ಆದಾಗ್ಯೂ, ರಾಜ್ಯಗಳು ತಮ್ಮ ಸ್ವಂತ ಇಚ್ಛೆಯಿಂದ ಅಥವಾ ರಾಜಕೀಯ ಅಗತ್ಯದಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ರಾಜ್ಯಗಳ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ.

ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಳ ಮೀಸಲಾತಿಯನ್ನು ಒದಗಿಸಬಹುದು. ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ತಂದಿರುವ ಕಾನೂನುಗಳು ಸರಿಯಿದೆ” ಎಂದು ಅವರು ಸರ್ವಾನುಮತದಿಂದ ತೀರ್ಪು ನೀಡಿದ್ದಾರೆ.

ಇದೇ ವೇಳೆ, ಆಂಧ್ರದ ಇ.ವಿ.ಚಿನ್ನಯ್ಯ ಎಂಬುವರು, “ರಾಜ್ಯ ಸರ್ಕಾರಗಳು ಒಳಮೀಸಲಾತಿ ನೀಡಬಾರದು. ಒಳ ಮೀಸಲಾತಿಯನ್ನು ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲ” ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ, “ಒಳ ಮೀಸಲಾತಿಯನ್ನು ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲ” ಎಂದು 2005ರಲ್ಲಿ ತೀರ್ಪು ನೀಡಿತ್ತು.

ಈ ಹಿನ್ನೆಲೆಯಲ್ಲಿ, ಇಂದಿನ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಂವಿಧಾನ ಪೀಠವು ಸುಪ್ರೀಂ ಕೋರ್ಟ್ 2005ರ ತೀರ್ಪನ್ನು ರದ್ದುಗೊಳಿಸಿದೆ. ಸದರಿ ಪ್ರಕರಣದಲ್ಲಿ ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ಮಾತ್ರ ಭಿನ್ನವಾದ ತೀರ್ಪು ನೀಡಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಫೆಬ್ರವರಿ 8, 2024 ರಂದು ಈ ಕುರಿತು ತಮ್ಮ ತೀರ್ಪನ್ನು ಕಾಯ್ದಿರಿಸಿತ್ತು. ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಿ, ವಿಕ್ರಮ್ ನಾಥ್, ಬೇಲಾ ಎಂ. ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೂ ಒಳಗೊಂಡಿದೆ.

“ಐತಿಹಾಸಿಕ ಮತ್ತು ಪ್ರಾಯೋಗಿಕ ಪುರಾವೆಗಳು ಪರಿಶಿಷ್ಟ ಜಾತಿಗಳು ಏಕರೂಪದ ವರ್ಗವಲ್ಲ ಎಂದು ಸೂಚಿಸುತ್ತವೆ” ಎಂದು ತೀರ್ಪನ್ನು ಓದುವಾಗ ಸಿಜೆಐ ಹೇಳಿದರು.

ದೇಶ ರಾಜಕೀಯ

 ಡಿ.ಸಿ.ಪ್ರಕಾಶ್

ಬಿಹಾರದಲ್ಲಿ, 2022 ರ ದ್ವಿತೀಯಾರ್ಧದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ನಿತೀಶ್ ಕುಮಾರ್, ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅದೇ ವರ್ಷದ ಅಕ್ಟೋಬರ್‌ನಲ್ಲಿ ರಾಜ್ಯ ಮಟ್ಟದ ಜಾತಿವಾರು ಸಮೀಕ್ಷೆಯನ್ನು ಬಿಡುಗಡೆ ಮಾಡಿದರು.

ಜೊತೆಗೆ, ರಾಜ್ಯ ಸರ್ಕಾರಿ ಮೀಸಲಾತಿಯನ್ನು ಶೇ.65ಕ್ಕೆ ಹೆಚ್ಚಿಸುವುದಾಗಿಯೂ ಭರವಸೆ ನೀಡಿದರು. ಅಂದಿನಿಂದ, ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ ಮೈತ್ರಿಕೂಟ’ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಜಾತಿವಾರು ಜನಗಣತಿ ನಡೆಸುವಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿವೆ.

ಆದರೆ, ಈ ಬಗ್ಗೆ ಮೌನ ವಹಿಸಿದ್ದ ಬಿಜೆಪಿ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಎಸ್.ಸಿ, ಎಸ್.ಟಿ ಮೀಸಲಾತಿಯನ್ನು ಕಸಿಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಪ್ರಚಾರ ಮಾಡಿತ್ತು. ಜಾತಿವಾರು ಗಣತಿಯನ್ನು ಬೆಂಬಲಿಸುವ ನಿತೀಶ್ ಕುಮಾರ್ ಮತ್ತು ಇತರರ ಬೆಂಬಲದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರವೂ ಬಿಜೆಪಿ ಈ ವಿಷಯದಲ್ಲಿ ಮೌನವಾಗಿದೆ.

ಆದರೂ, ಸರ್ಕಾರದ ಎಲ್ಲಾ ಯೋಜನೆಗಳು ಹಿಂದುಳಿದ, ಪರಿಶಿಷ್ಟ ಮತ್ತು ಬುಡಕಟ್ಟು ಜನರಿಗೆ ಸರಿಯಾಗಿ ಸಿಗುವಂತೆ ಮಾಡಲು ರಾಷ್ಟ್ರಮಟ್ಟದಲ್ಲಿ ಜಾತಿವಾರು ಜನಗಣತಿ ನಡೆಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಈ ಹಿನ್ನೆಲೆಯಲ್ಲಿ, 2024-25ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಕಳೆದ ವಾರ ಮಂಡಿಸಲಾಗಿತ್ತು. ಈ ಕುರಿತು ಲೋಕಸಭೆಯಲ್ಲಿ ಸೋಮವಾರ (ಜುಲೈ 29) ರಂದು ದಿನ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಕೇಂದ್ರ ಬಜೆಟ್‌ ತಯಾರಿಸುವಲ್ಲಿ 20 ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಆದರೆ ಹಿಂದುಳಿದ, ಪರಿಶಿಷ್ಟ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ಒಬ್ಬ ವ್ಯಕ್ತಿಯನ್ನೂ ಅದರಲ್ಲಿ ಸೇರಿಸಲಾಗಿಲ್ಲ.

ದೇಶದ ಶೇ.73ರಷ್ಟು ಜನಸಂಖ್ಯೆ ಹೊಂದಿರುವ ಈ ಮೂರು ಸಮುದಾಯಗಳಿಗೆ ಬಜೆಟ್ ನಲ್ಲಿ ಏನೂ ಸಿಗಲಿಲ್ಲ. ಇಂದಿನ ಭಾರತದಲ್ಲಿ ಕಮಲ ಆಕಾರದ ಚಕ್ರವ್ಯೂಹ ಇದೆ. ಯುವಕರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಇದನ್ನು ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಮುಂತಾದ ಆರು ಜನರು ನಿಯಂತ್ರಿಸುತ್ತಾರೆ” ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ, ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿ ವಿರುದ್ಧ ಜಾತಿ, ಧರ್ಮದ ಆಧಾರದಲ್ಲಿ ಪರೋಕ್ಷ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ಇದನ್ನು ಹೊಗಳಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಅನುರಾಗ್ ಠಾಕೂರ್, “ತನ್ನ ಜಾತಿ ಗೊತ್ತಿಲ್ಲದ ವ್ಯಕ್ತಿ ಜಾತಿವಾರು ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲದೆ, ಕೆಲವರು ಆಕಸ್ಮಿಕವಾಗಿ ಹಿಂದೂಗಳಾಗಿದ್ದಾರೆ. ಆದ್ದರಿಂದ, ಮಹಾಭಾರತದ ಬಗ್ಗೆ ಅವರ ಜ್ಞಾನವು ಹಾಗೆ ಆಗಿರುತ್ತದೆ” ಎಂದು ವಾಗ್ದಾಳಿ ನಡೆಸಿದರು.

ಅನುರಾಗ್ ಠಾಕೂರ್

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, “ಆದಿವಾಸಿ, ದಲಿತ ಮತ್ತು ಹಿಂದುಳಿದವರ ಸಮಸ್ಯೆಗಳನ್ನು ಯಾರೇ ಎತ್ತಿದರೂ ಅವರನ್ನು ನಿಂದಿಸಲಾಗುತ್ತದೆ. ಆದಾಗ್ಯೂ, ನಾನು ಇದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಅನುರಾಗ್ ಠಾಕೂರ್ ನನ್ನನ್ನು ನಿಂದಿಸಿ ಅವಮಾನ ಮಾಡಿದ್ದಾರೆ.

ಆದರೆ, ನಾನು ಅವರಿಂದ ಯಾವುದೇ ಕ್ಷಮೆಯನ್ನು ಬಯಸುವುದಿಲ್ಲ. ನೀವು ನನ್ನನ್ನು ಎಷ್ಟು ಬೇಕಾದರೂ ಅವಮಾನಿಸಬಹುದು. ಸಂಸತ್ತಿನಲ್ಲಿ ಜಾತಿವಾರು ಜನಗಣತಿಯನ್ನು ನಾವು ಅಂಗೀಕರಿಸುತ್ತೇವೆ” ಎಂದರು. ಮತ್ತೊಂದೆಡೆ, ಸಮಾಜವಾದಿ ನಾಯಕ ಅಖಿಲೇಶ್ ಯಾದವ್, “ಅದು ಹೇಗೆ ಒಬ್ಬರ ಜಾತಿಯನ್ನು ಕೇಳುವುದು?” ಎಂದು ಅನುರಾಗ್ ಠಾಕೂರ್ ಅವರನ್ನು ಪ್ರಶ್ನಿಸಿದರು.

ಅಲ್ಲದೆ, ಅನೇಕ ವಿರೋಧ ಪಕ್ಷದ ಸಂಸದರು ಸಹ ಅನುರಾಗ್ ಠಾಕೂರ್ ಅವರ ಇಂತಹ ಭಾಷಣವನ್ನು ವಿರೋಧಿಸಿದರು. ಆದರೆ, ಸದನದಲ್ಲಿ ನಡೆದ ಈ ಘಟನೆಗೆ ಇನ್ನಷ್ಟು ತುಪ್ಪ ಸುರಿಯುವ ಸಲುವಾಗಿ ಪ್ರಧಾನಿ ಮೋದಿ, ನನ್ನ ಯುವ ಮತ್ತು ಶಕ್ತಿಯುತ ಸಹೋದ್ಯೋಗಿ ಅನುರಾಗ್ ಠಾಕೂರ್ ಅವರ ಈ ಭಾಷಣ, ಕೇಳಲೇಬೇಕು. ಸತ್ಯ ಮತ್ತು ಹಾಸ್ಯದ ಈ ಪರಿಪೂರ್ಣ ಮಿಶ್ರಣವು ಇಂಡಿಯಾ ಮೈತ್ರಿಕೂಟದ ಕೊಳಕು ರಾಜಕೀಯವನ್ನು ಬಹಿರಂಗಪಡಿಸುತ್ತದೆ” ಎಂದು ಟ್ವೀಟ್ ಮಾಡಿ, ಅನುರಾಗ್ ಠಾಕೂರ್ ಅವರು ಸದನದಲ್ಲಿ ಮಾಡಿದ ಭಾಷಣದ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಪುಟ X ನಲ್ಲಿ ಹಂಚಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಅನುರಾಗ್ ಠಾಕೂರ್ ಅವರು ಅಖಿಲೇಶ್ ಯಾದವ್ ಅವರ ಹಳೆಯ ವಿಡಿಯೋವನ್ನು ಕಟ್ ಮಾಡಿ, “ನೀವು ಜಾತಿಯ ಬಗ್ಗೆ ಅದು ಹೇಗೆ ಕೇಳಬಹುದು ಅಖಿಲೇಶ್ ಯಾದವ್?” ಎಂದು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ, ಕಮ್ಯುನಿಸ್ಟ್ ಪಕ್ಷದ ಸಂಸದ ಸಿ.ವೆಂಕಟೇಶನ್ ಅವರು ತಮ್ಮ ಎಕ್ಸ್ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ, “ನಿನ್ನೆ ಸಂಸತ್ತಿನಲ್ಲಿ, ‘ತನ್ನ ಜಾತಿ ಗೊತ್ತಿಲ್ಲದ ವ್ಯಕ್ತಿ ಜಾತಿವಾರು ಗಣತಿ ಬಗ್ಗೆ ಮಾತನಾಡಬಹುದಾ?’ ಎಂದು ರಾಹುಲ್ ಗಾಂಧಿ ಬಗ್ಗೆ ಅನುರಾಗ್ ಠಾಕೂರ್ ಮಾತನಾಡಿದರು.

ಈ ಭಾಷಣವನ್ನು ಎಲ್ಲರೂ ಕೇಳಲೇಬೇಕಾದ ಅತ್ಯುತ್ತಮ ಭಾಷಣ ಎಂದು ಪ್ರಧಾನಿ ತಮ್ಮ ‘ಎಕ್ಸ್’ ಸೈಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶದ ಅತ್ಯುನ್ನತ ಸದನಗಳಲ್ಲಿ ಬಿಜೆಪಿಯ ಧ್ವನಿ ಎಷ್ಟು ನೋವಿನಿಂದ ಹೊರಹೊಮ್ಮುತ್ತಿದೆ ಎಂಬುದನ್ನು ನೋಡಿ” ಎಂದು ಟೀಕಿಸಿದ್ದಾರೆ. ಅವರನ್ನು ಅನುಸರಿಸಿ ಹಲವು ವಿರೋಧ ಪಕ್ಷಗಳ ನಾಯಕರು, ಅನುರಾಗ್ ಠಾಕೂರ್ ಅವರ ಕ್ರಮವನ್ನು ಖಂಡಿಸುತ್ತಾ, ಮೋದಿಯವರ ಹೊಗಳಿಕೆಯನ್ನು ಟೀಕಿಸುತ್ತಿದ್ದಾರೆ.

ಅಲ್ಲದೆ, ಅನುರಾಗ್ ಠಾಕೂರ್ ಅವರ ವೀಡಿಯೊವನ್ನು ವೀಕ್ಷಿಸಲು ಮೋದಿಯವರ ಮನವಿಗೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷವು, ಇದು ಸಂಸತ್ತಿನ ವಿಶೇಷ ಹಕ್ಕುಗಳ ಉಲ್ಲಂಘನೆ ಮತ್ತು ಅಸಂವಿಧಾನಿಕ ಎಂದು ಲೋಕಸಭೆಯ ರೂಲ್ ಬುಕ್ ಚಾಪ್ಟರ್ 20ರ ರೂಲ್ ನಂಬರ್ 222ರ ಪ್ರಕಾರ ಮೋದಿಯವರ ವಿರುದ್ಧ ಹಕ್ಕುಚ್ಯುತಿ (Privilege Motion Notice) ಮಂಡಿಸಿದೆ.

ದೇಶ

ಕೇರಳದ ವಯನಾಡು ಜಿಲ್ಲೆಯಲ್ಲಿ ಉಂಟಾಗಿರುವ ಭೂಕುಸಿತಕ್ಕೆ ತಾಪಮಾನವೇ ಪ್ರಮುಖ ಕಾರಣ ಎಂಬ ಅಂಶ ಬಯಲಾಗಿದೆ!

“ಅರಬ್ಬೀ ಸಮುದ್ರದ ತಾಪಮಾನದಿಂದ ದಟ್ಟವಾದ ಮೋಡಗಳು ನಿರ್ಮಾಣಗೊಂಡು ಅಲ್ಪಾವಧಿಯಲ್ಲಿಯೇ ಭಾರಿ ಮಳೆಯಾಗಲು ಕಾರಣವಾಯಿತು” ಎಂದು ಋತುಮಾನಗಳ ಕುರಿತು ಅಧ್ಯಯನ ನಡೆಸುತ್ತಿರುವ ಹಿರಿಯ ವಿಜ್ಞಾನಿ ಅಭಿಲೇಶ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಾಯುಮಂಡಲದ ರಾಡಾರ್ ಸಂಶೋಧನಾ ಕೇಂದ್ರದ ನಿರ್ದೇಶಕ ಅಭಿಲೇಶ್, “ಇಡೀ ಕೊಂಕಣ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ಮುಂಗಾರು ಮಳೆ ಚುರುಕುಗೊಂಡಿರುವುದೇ ಭೂಕುಸಿತಕ್ಕೆ ಕಾರಣ.

ಈ ಕಾರಣದಿಂದಾಗಿ ಕಾಸರಗೋಡು, ಕಣ್ಣೂರು, ವಯನಾಡು, ಕೋಳಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.

ಎರಡು ವಾರಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಮಣ್ಣು ತುಂಬಾ ತೇವವಾಗಿತ್ತು. ಈ ಹಿನ್ನೆಲೆಯಲ್ಲಿ, ಅತಿಯಾದ ಕಪ್ಪು ಮೋಡಗಳು ಅರೇಬ್ಬೀ ಸಮುದ್ರದ ಕರಾವಳಿ ಪ್ರದೇಶಗಳಲ್ಲಿ ಸುತ್ತುವರಿದು, ಭಾರೀ ಮಳೆಯಾದ ಕಾರಣ, ಸಡಿಲವಾದ ಮಣ್ಣು ದುರ್ಬಲಗೊಂಡು ಭೂಕುಸಿತ ಸಂಭವಿಸಿದೆ.

ಅಂದರೆ, 2019 ರಲ್ಲಿ ಕೇರಳದಲ್ಲಿ ಪ್ರವಾಹ ಬಂದಾಗ ಮೋಡಗಳು ಎಷ್ಟು ದಟ್ಟವಾಗಿತ್ತೋ ಅದೇ ಮಟ್ಟಿಗೆ ಈಗಲೂ ಮೋಡಗಳು ದಟ್ಟವಾಗಿ ಸುತ್ತುವರಿದಿದೆ. ಇದಲ್ಲದೆ, ಆಗ್ನೇಯ ಅರಬ್ಬೀ ಸಮುದ್ರದ ಪ್ರದೇಶದಲ್ಲಿ ಏರಿಕೆಯಾಗುತ್ತಿರುವ ತಾಪಮಾನದಿಂದ ಅಲ್ಲೊಂದು ವಾಯುಮಂಡಲ ನಿರ್ಮಾಣವಾಗಿತ್ತು. ಇದಕ್ಕೂ ಹವಾಮಾನದ ತಾಪಮಾನಕ್ಕೂ ಸಂಬಂಧ ಇದೆ” ಎಂದು ಹೇಳಿದ್ದಾರೆ.

ದೇಶ ರಾಜಕೀಯ

ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮದುವೆ ಮೂಲಕ ಮತಾಂತರ ಮಾಡಲಾಗುತ್ತಿದೆ ಎಂದು ಬಿಜೆಪಿ ಹಲವು ವರ್ಷಗಳಿಂದ ಆರೋಪಿಸುತ್ತಲೇ ಬರುತ್ತಿವೆ. ಇದೇ ವೇಳೆ ಬಿಜೆಪಿ ಆಡಳಿತಾರೂಢ ಉತ್ತರಪ್ರದೇಶದಲ್ಲಿ ಯೋಗಿ ಸರಕಾರವು ಲವ್ ಜಿಹಾದ್ ವಿರುದ್ಧ 2021ರಲ್ಲಿ ಕಾನೂನನ್ನು ಜಾರಿಗೊಳಿಸಿತು.

ಈ ಕಾನೂನಿನ ಪ್ರಕಾರ, ಉದ್ದೇಶಪೂರ್ವಕವಾಗಿ ಯಾರನ್ನಾದರೂ ಪ್ರೀತಿಸಿ, ನಂತರ ಬಲವಂತವಾಗಿ ಮತಾಂತರಗೊಳಿಸಿ ಮದುವೆಯಾದರೆ, ಆ ಮದುವೆ ಅನೂರ್ಜಿತ ಎಂದು ಹಾಗೆ ಮದುವೆಯಾಗುವ ವ್ಯಕ್ತಿಯನ್ನು ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಬಂಧಿಸಿ, 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ, ಲವ್ ಜಿಹಾದ್ ಕಾಯ್ದೆಗೆ ತಿದ್ದುಪಡಿ ತರಲು ಉತ್ತರ ಪ್ರದೇಶ ಬಿಜೆಪಿ ಸರ್ಕಾರ ನಿರ್ಧರಿಸಿದ್ದು, ‘ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆ 2024’ ಎಂದು ಪ್ರಸ್ತಾಪಿಸಲಾಗುವ ಈ ತಿದ್ದುಪಡಿ ಕಾಯ್ದೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಖನ್ನಾ ಇಂದು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಡಿಸಿದರು.

ಹೊಸ ತಿದ್ದುಪಡಿಯು 10 ವರ್ಷಗಳ ಜೈಲು ಶಿಕ್ಷೆಯನ್ನು 20 ವರ್ಷಗಳಿಗೆ ಹೆಚ್ಚಿಸಲಿದೆ. ದಂಡದ ಮೊತ್ತವನ್ನು 50 ಸಾವಿರದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಲವ್ ಜಿಹಾದ್ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಆಕೆಯ ಪೋಷಕರು ಹಾಗೂ ಒಡಹುಟ್ಟಿದವರು ದೂರು ನೀಡಿದರೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿತ್ತು. ಈಗ ಆ ಮಿತಿ ಸಡಿಲಿಸಲಾಗಿದ್ದು, ತಿದ್ದುಪಡಿ ಪ್ರಕಾರ ಯಾರೇ ದೂರು ನೀಡಿದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

ದೇಶ

ತಿರುವನಂತಪುರಂ: ಕೇರಳದ ತಿರುವನಂತಪುರದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದೆ. ಕಳೆದ ಕೆಲವು ವಾರಗಳಿಂದ ಭಾರೀ ಮಳೆಯಾಗುತ್ತಿದೆ. ಆ ಮೂಲಕ ಕೇರಳದ ವಯನಾಡು ಪ್ರದೇಶದಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದೆ. ಈ ಭಾರಿ ಮಳೆಯ ನಂತರ ಮುಂಜಾನೆ ಭೂಕುಸಿತ ಸಂಭವಿಸಿದೆ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಸೂರಲ್ಮಲೈ ಪ್ರದೇಶದಲ್ಲಿ ಮೊದಲ ಭೀಕರ ಭೂಕುಸಿತ ಸಂಭವಿಸಿದೆ.

ನಂತರ, ಮುಂಜಾನೆ 4.30ಕ್ಕೆ 2ನೇ ಭಾರಿ ಮತ್ತೊಂದು ಭೂಕುಸಿತ ಸಂಭವಿಸಿದೆ. ಸತತ ಭೂಕುಸಿತದಿಂದಾಗಿ ವೈತ್ತಿರಿ, ವೆಲ್ಲೇರಿಮಲೈ ಮತ್ತು ಮೇಪ್ಪಾಡಿ ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ. ಅಟ್ಟಮಲೈನಿಂದ ಮುಂಡಗಿ ಪ್ರದೇಶಕ್ಕೆ ತೆರಳಲು ಇದ್ದ ಒಂದೇ ಒಂದು ಸೇತುವೆ ಕೂಡ ಕೊಚ್ಚಿ ಹೋಗಿದೆ.

ಹೀಗಾಗಿ, 500 ಮನೆಗಳಿಗೆ ಸೇರಿದ ಸಾವಿರಾರು ಜನರು ಪ್ರತ್ಯೇಕ ದ್ವೀಪದಲ್ಲಿ ಸಿಕ್ಕಿಕೊಂಡಂತೆ ಆಗಿದ್ದಾರೆ. ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಹೆಲಿಕಾಪ್ಟರ್ ಮೂಲಕ ಸಂತ್ರಸ್ತ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯ ನಡೆಯುತ್ತಿದೆ. ಹಲವರ ಸ್ಥಿತಿ ತಿಳಿಯದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಭೂಕುಸಿತದಲ್ಲಿ ನೂರಾರು ಮಂದಿ ಸಿಲುಕಿರುವ ಬಗ್ಗೆ ವರದಿಯಾಗಿದೆ. ಬಳಿಕ ನಾಪತ್ತೆಯಾದವರನ್ನು ರಕ್ಷಿಸುವ ಕಾರ್ಯ ಚುರುಕುಗೊಂಡಿದೆ. ಅರಕ್ಕೋಣಂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಧಾವಿಸಿದೆ.

ಭೂಕುಸಿತ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯ ನಡೆಸಲು ತೊಂದರೆಯಾಗಿದೆ ಎಂದು ವರದಿಗಳಾಗಿವೆ. ಏತನ್ಮಧ್ಯೆ, ವಯನಾಡು ಭೂಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

“ವಯನಾಡಿನ ಕೆಲವು ಭಾಗಗಳು ಭೂಕುಸಿತದಿಂದ ಹಾನಿಗೊಳಗಾಗಿವೆ. ನನ್ನ ಆಲೋಚನೆಗಳು ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೂ ಇವೆ; ಗಾಯಾಳುಗಳೊಂದಿಗೆ ಪ್ರಾರ್ಥನೆಗಳೂ ಇವೆ. ಎಲ್ಲಾ ಸಂತ್ರಸ್ತರಿಗೆ ಸಹಾಯ ಮಾಡಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ” ಕೇರಳಕ್ಕೆ ಎಲ್ಲ ನೆರವು ನೀಡಲು ಕೇಂದ್ರ ಸರಕಾರ ಸಿದ್ಧವಿದೆ ಎಂದ ಮೋದಿ, ಕೇರಳ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ.

ಅಲ್ಲದೆ, “ವಯನಾಡು ಭೂಕುಸಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂ.ಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗುವುದು” ಎಂದೂ ಅವರು ಹೇಳಿದ್ದಾರೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ರಾಜ್ಯ ಸಚಿವ ಸುರೇಶ್ ಗೋಪಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ವಯನಾಡಿನ ಪರಿಸ್ಥಿತಿಯನ್ನು ವಿಚಾರಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು:
“ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ಮೃತಪಟ್ಟ ಘಟನೆ ನೋವಿನ ಸಂಗತಿಯಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಹಾಗೂ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ಪರ್ತಿಪಕ್ಷದ ನಾಯಕ ರಾಹುಲ್ ಗಾಂಧಿ:
“ವಯನಾಡಿನ ಮೇಪ್ಪಾಡಿ ಬಳಿ ಸಂಭವಿಸಿದ ಭಾರೀ ಭೂಕುಸಿತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪವನ್ನು ಅರ್ಪಿಸುತ್ತೇನೆ. ಇನ್ನೂ ಸಿಕ್ಕಿಬಿದ್ದಿರುವವರನ್ನು ಶೀಘ್ರದಲ್ಲೇ ರಕ್ಷಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ನಾನು ಕೇರಳ ಮುಖ್ಯಮಂತ್ರಿ ಮತ್ತು ವಯನಾಡು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ನನಗೆ ಭರವಸೆ ನೀಡಿದ್ದಾರೆ.

ಎಲ್ಲಾ ಏಜೆನ್ಸಿಗಳೊಂದಿಗೆ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು, ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಮತ್ತು ಪರಿಹಾರ ಕಾರ್ಯಗಳಿಗೆ ನೆರವು ಅಗತ್ಯವಿದ್ದರೆ ನಮಗೆ ತಿಳಿಸಲು ನಾನು ಅವರನ್ನು ಕೇಳಿದ್ದೇನೆ. ನಾನು ಕೇಂದ್ರ ಸಚಿವರೊಂದಿಗೆ ಮಾತನಾಡುತ್ತೇನೆ ಮತ್ತು ವಯನಾಡಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಕೇಳುತ್ತೇನೆ. ಎಲ್ಲಾ ಯುಡಿಎಫ್ (UDF) ಕಾರ್ಯಕರ್ತರು ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಆಡಳಿತಕ್ಕೆ ಸಹಾಯ ಮಾಡಲು ನಾನು ವಿನಂತಿಸುತ್ತೇನೆ” ಎಂದು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ:
“ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಮತ್ತು ತುರ್ತು ವೈದ್ಯಕೀಯ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ನಾನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ:
“ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಘಟನೆಗಳು ತೀವ್ರ ಕಳವಳಕಾರಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಯುದ್ಧಕಾಲದ ಆಧಾರದ ಮೇಲೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲು ಎರಡನೇ ತಂಡ ತೆರಳಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಕಳೆದ 5 ವರ್ಷಗಳಲ್ಲಿ 633 ಭಾರತೀಯ ವಿದ್ಯಾರ್ಥಿಗಳು ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ವಿದೇಶದಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಒಟ್ಟು 41 ದೇಶಗಳಲ್ಲಿ ವಿದ್ಯಾರ್ಥಿಗಳ ಸಾವಿನ ಘಟನೆಗಳು ನಡೆದಿವೆ. ಕೆನಡಾದಲ್ಲಿ ಗರಿಷ್ಠ 172 ಮತ್ತು ಅಮೆರಿಕದಲ್ಲಿ 108 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದಲ್ಲದೆ, ದಾಳಿಯಲ್ಲಿ 19 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ, ಅದರಲ್ಲಿ 9 ಕೆನಡಾದಲ್ಲಿ ಮತ್ತು 6 ಅಮೆರಿಕದಲ್ಲಿ ಸಾವನ್ನಪ್ಪಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಕೊಡಿಕುನ್ನಿಲ್ ಸುರೇಶ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವಾಲಯ ಈ ಮಾಹಿತಿಯನ್ನು ಒದಗಿಸಿದೆ. ಈ ಕುರಿತು ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ. “ಅಪಘಾತಗಳು, ವೈದ್ಯಕೀಯ ಚಿಕಿತ್ಸೆ ಮುಂತಾದ ವಿವಿಧ ಕಾರಣಗಳಿಂದ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಸಾವನ್ನಪ್ಪಿದ್ದಾರೆ. ಕೆನಡಾ ಮತ್ತು ಅಮೆರಿಕದಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.

ಇದರ ನಂತರ ಇಂಗ್ಲೆಂಡ್ 58 ವಿದ್ಯಾರ್ಥಿಗಳು, ಆಸ್ಟ್ರೇಲಿಯಾ 57 ವಿದ್ಯಾರ್ಥಿಗಳು ಮತ್ತು 37 ವಿದ್ಯಾರ್ಥಿಗಳೊಂದಿಗೆ ರಷ್ಯಾ ನಂತರದ ಸ್ಥಾನದಲ್ಲಿದೆ. ಏತನ್ಮಧ್ಯೆ, ಕಳೆದ ಮೂರು ವರ್ಷಗಳಲ್ಲಿ 48 ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಗಡಿಪಾರಿಗೆ ಕಾರಣಗಳನ್ನು ಅಮೆರಿಕ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಒದಗಿಸಿಲ್ಲ” ಎಂದು ಅವರು ಹೇಳಿದ್ದಾರೆ.

ದೇಶ

ಭಾರತ ಎದುರಿಸಿದ ಇತ್ತೀಚಿನ ಯುದ್ಧವೆಂದರೆ ಅದು ಕಾರ್ಗಿಲ್ ಯುದ್ಧವೇ. ಭಾರತದ ಭೂಭಾಗಕ್ಕೆ ನುಗ್ಗಿದ ಪಾಕಿಸ್ತಾನಿ ಪಡೆಗಳನ್ನು ಹಿಮ್ಮೆಟ್ಟಿಸಿ, ವಿಜಯ ಪತಾಕೆ ಹಾರಿಸಿದ ಇತಿಹಾಸಕ್ಕೆ ಇಂದಿಗೆ 25 ವರ್ಷ!

ಕಾಶ್ಮೀರದ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ 25ನೇ ವಿಜಯ ದಿನದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಲಡಾಖ್ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಯುದ್ಧ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ನಂತರ ಪ್ರಧಾನಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.

ಆಗ, “ಕಾರ್ಗಿಲ್ ಯುದ್ಧದ ನಂತರವೂ ಪಾಕಿಸ್ತಾನ ಪಾಠ ಕಲಿತಿಲ್ಲ; ಅದು ಭಯೋತ್ಪಾದನೆ ಮತ್ತು ರಹಸ್ಯ ಯುದ್ಧಗಳನ್ನು ಮುಂದುವರೆಸಿದೆ. ಸೈನಿಕರ ನಿಸ್ವಾರ್ಥ ಸೇವೆಗೆ ನಾಡಿನ ಸಮಸ್ತ ಜನತೆ ಋಣಿಯಾಗಿದ್ದಾರೆ. ಪಾಕಿಸ್ತಾನದ ದುಷ್ಟ ಉದ್ದೇಶಗಳು ಎಂದಿಗೂ ಯಶಸ್ವಿಯಾಗುವುದಿಲ್ಲ.

ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ನಮ್ಮ ದೇಶವು ಗೌರವ ಸಲ್ಲಿಸುತ್ತದೆ; ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಎಂದಿಗೂ ಸಾಯುವುದಿಲ್ಲ. ನಮ್ಮ ಸೈನಿಕರು ಸಂಪೂರ್ಣ ಶಕ್ತಿಯಿಂದ ಭಯೋತ್ಪಾದನೆ ವಿರುದ್ಧ ಹೋರಾಡುತ್ತಾರೆ” ಎಂದು ಪ್ರಧಾನಿ ಹೇಳಿದರು.

ದೇಶ

ಮಣಿಪುರ ರಾಜ್ಯದಲ್ಲಿ ಕುಕಿ ಮತ್ತು ಮೈತೇಯಿ ಜನಾಂಗಗಳ ನಡುವೆ ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಹಿಂಸಾತ್ಮಕ ಸಂಘರ್ಷ ಒಂದು ವರ್ಷದಿಂದ ನಡೆಯುತ್ತಿದೆ. ಎರಡೂ ಕಡೆಗಳಲ್ಲಿ 250ಕ್ಕೂ ಹೆಚ್ಚು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜಿರಿಬಾಮ್‌ನಂತಹ ಪ್ರದೇಶಗಳಲ್ಲಿ ಉದ್ವಿಗ್ನತೆ ಮುಂದುವರಿದಿರುವುದರಿಂದ ಅಮೆರಿಕ ವಿದೇಶಾಂಗ ಇಲಾಖೆಯು ಭಾರತಕ್ಕೆ ತನ್ನ ಪ್ರಯಾಣದ ಸಲಹೆಯನ್ನು ನವೀಕರಿಸಿದೆ.

ಅದರಂತೆ ಮಣಿಪುರ ರಾಜ್ಯದಲ್ಲಿ ‘ಪ್ರಯಾಣ ಮಾಡಬೇಡಿ, ತುಂಬಾ ಅಪಾಯವಿದೆ’ ಎಂದು 4ನೇ ಹಂತದ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ, ಪ್ರಯಾಣದ ಮರುಪರಿಶೀಲನೆಗಾಗಿ ಮೇಘಾಲಯಕ್ಕೆ 3ನೇ ಹಂತವನ್ನು ನೀಡಲಾಗಿದೆ.

ಅಸ್ಸಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾದಲ್ಲಿ ಹಿಂಸಾಚಾರ ಇಳಿಕೆಯಿಂದಾಗಿ ಈ ರಾಜ್ಯಗಳನ್ನು 2ನೇ ಹಂತದ ಪಟ್ಟಿಗೆ ವರ್ಗಾಯಿಸಲಾಗಿದೆ. ಅಂದರೆ ಹಂತ 2ರ ಪಟ್ಟಿಯಲ್ಲಿರುವ ರಾಜ್ಯಕ್ಕೆ ತೆರಳುವವರು ಸೂಕ್ತ ಭದ್ರತೆ ಹಾಗೂ ವಿದೇಶಾಂಗ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತೆರಳಬೇಕು ಎಂದು ಆದೇಶ ಹೊರಡಿಸಲಾಗಿದೆ.

ಮಣಿಪುರ ರಾಜ್ಯದ ಮಟ್ಟಿಗೆ ಹಿಂಸಾಚಾರ ತಗ್ಗಿಲ್ಲದ ಕಾರಣ ಕೊಲೆ, ಅಪಹರಣ, ಲೈಂಗಿಕ ದೌರ್ಜನ್ಯ ಇತ್ಯಾದಿ ಸಾಧ್ಯತೆಗಳಿರುವುದರಿಂದ 4ನೇ ಹಂತದ ಎಚ್ಚರಿಕೆ ನೀಡಲಾಗಿದೆ.

ಜನಾಂಗೀಯ ಆಧಾರಿತ ನಾಗರಿಕ ಕಲಹ ಮತ್ತು ಭಾರತ ಸರ್ಕಾರದ ಗುರಿಗಳ ವಿರುದ್ಧ ನಿಯಮಿತ ದಾಳಿಯ ಕಾರಣದಿಂದ ಯಾವುದೇ ಅಮೆರಿಕ ನಾಗರಿಕರು ಮುಂದಿನ ಆರು ತಿಂಗಳ ಕಾಲ ಮಣಿಪುರ ರಾಜ್ಯಕ್ಕೆ ಪ್ರಯಾಣಿಸಬಾರದು ಎಂದು ಅಮೆರಿಕ ವಿದೇಶಾಂಗ ಇಲಾಖೆ ಹೇಳಿದೆ.

ಅಮೆರಿಕ ಸರ್ಕಾರಿ ನೌಕರರು ಹೆಚ್ಚಿನ ಅಪಾಯದ ಪ್ರದೇಶಗಳಿಗೆ ಪ್ರಯಾಣಿಸಲು ವಿಶೇಷ ಅಧಿಕಾರದ ಅಗತ್ಯವಿರುವ ಕಾರಣದಿಂದ ವಿದೇಶದಲ್ಲಿ ಹಿಂಸಾತ್ಮಕ ಸಂಘರ್ಷದ ಪ್ರದೇಶಗಳಲ್ಲಿ ಹಂತ ಹಂತವಾಗಿ ಎಚ್ಚರಿಕೆಗಳನ್ನು ನೀಡಲಾಗುತ್ತದೆ.

ಇದರಲ್ಲಿ 4ನೇ ಹಂತವು, ನಾಗರಿಕರು ಮತ್ತು ಅಮೆರಿಕ ವಿದೇಶಾಂಗ ವ್ಯವಹಾರಗಳ ಇಲಾಖೆ ಉದ್ಯೋಗಿಗಳಿಗೆ ನೀಡಲಾಗುವ ಅತ್ಯುನ್ನತ ಮಟ್ಟದ ಎಚ್ಚರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಭಾರತದ ಈಶಾನ್ಯ ರಾಜ್ಯಗಳಿಗೆ ಅಮೆರಿಕದ ನಾಗರಿಕರ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ನವೀಕರಿಸಲಾಗಿದೆ.