ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
July 2024 » Page 3 of 8 » Dynamic Leader
October 23, 2024
Home 2024 July (Page 3)
ದೇಶ

ಗುಜರಾತ್: ಗುಜರಾತಿನಲ್ಲಿ ಚಂಡೀಪುರ ವೈರಸ್ (Chandipura Virus) ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನ ಭೀತಿ ತಗ್ಗಿರುವಾಗಲೇ ಇದೀಗ ಉತ್ತರ ರಾಜ್ಯಗಳಲ್ಲಿ ಚಂಡೀಪುರ ಸೋಂಕು ಹೊಸ ಭೀತಿಯನ್ನು ಹುಟ್ಟಿಸಿದೆ. 9 ತಿಂಗಳಿಂದ 14 ವರ್ಷದೊಳಗಿನ ಮಕ್ಕಳ ಮೇಲೆ ಮಾತ್ರ ದಾಳಿ ಮಾಡುವ ಚಂಡೀಪುರ ವೈರಸ್ ಗುಜರಾತ್, ರಾಜಸ್ಥಾನ ಸೇರಿದಂತೆ ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿದೆ.

ಈ ವೈರಸ್ ಸೋಂಕಿತರಾದರೆ 8-10 ಗಂಟೆಗಳಲ್ಲಿ ಸಾಯುತ್ತಾರೆ ಎಂಬ ಕಾರಣಕ್ಕಾಗಿ ಮಕ್ಕಳೊಂದಿಗೆ ಪೋಷಕರೂ ಆಸ್ಪತ್ರೆಗೆ ಧಾವಿಸಿದ್ದಾರೆ. ಸೊಳ್ಳೆಗಳು, ಮರಳು ನೊಣಗಳು ಮತ್ತು ಉಣ್ಣಿಗಳಿಂದ ಈ ವೈರಸ್ ಹರಡುತ್ತದೆ. ಸಾಮಾನ್ಯ ಜ್ವರದಂತೆ ಕಾಣುವುದರಿಂದ ಇದನ್ನು ಜನ ಗುರುತಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಗುಜರಾತಿನಲ್ಲಿ ನಿಗೂಢ ಜ್ವರದಿಂದ ಅಪಾರ ಸಂಖ್ಯೆಯ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದರಿಂದ ಕಳೆದ ಮಂಗಳವಾರ ಒಂದು ಮಗು ಸಾವನ್ನಪ್ಪಿದೆ. ವೈದ್ಯರು ಮಗುವಿನ ರಕ್ತದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಿದ್ದರು. ತನಿಖೆಯ ಕೊನೆಯಲ್ಲಿ ಚಂಡೀಪುರ ವೈರಸ್ ಸೋಂಕಿನಿಂದ ಮಗು ಸಾವನ್ನಪ್ಪಿರುವುದು ದೃಢಪಟ್ಟಿದೆ. ಇದೇ ರೋಗಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ರಾಜ್‌ಕೋಟ್‌ನಲ್ಲಿ 3 ಮಕ್ಕಳು, ಅಹಮದಾಬಾದ್‌ನಲ್ಲಿ 2 ಮತ್ತು ಪಂಚಮಹಲ್‌ನಲ್ಲಿ 1 ಮಗು ಚಂಡೀಪುರ ವೈರಸ್‌ನಿಂದ ಸಾವನ್ನಪ್ಪಿದೆ. ಗುಜರಾತ್ ಆರೋಗ್ಯ ಇಲಾಖೆಯ ಪ್ರಕಾರ, 15 ಮಕ್ಕಳು ಸೇರಿದಂತೆ 29 ಜನರು ಚಂಡೀಪುರ ವೈರಸ್‌ನಿಂದ ಬಳಲುತ್ತಿರುವುದು ತಿಳಿದುಬಂದಿದೆ.

ವಿದೇಶ

ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆಯ ಅಧಿಕಾರಿಗಳು ಅಲ್-ಖೈದಾ ಮುಖ್ಯಸ್ಥ ಬಿನ್ ಲಾಡೆನ್‌ನ ಆಪ್ತ ಸಹಾಯಕ ಮತ್ತು ಸಂಘಟನೆಯ ಹಿರಿಯ ನಾಯಕ ಅಮಿನ್-ಉಲ್-ಹಕ್‌ನನ್ನು ಬಂಧಿಸಿರುವುದಾಗಿ ಘೋಷಿಸಿದ್ದಾರೆ.

ಗುಪ್ತಚರ ಆಧಾರಿತ ಹುಡುಕಾಟದಲ್ಲಿ ಭಯೋತ್ಪಾದಕ ಅಮೀನ್ ಉಲ್ ಹಕ್ ನನ್ನು ಬಂಧಿಸಲಾಗಿದೆ. ಪಂಜಾಬ್‌ನಲ್ಲಿ ಯೋಜಿಸಲಾಗಿದ್ದ ದೊಡ್ಡ ದಾಳಿಯನ್ನು ಇದರ ಮೂಲಕ ವಿಫಲಗೊಳಿಸಲಾಗಿದೆ. ಅಮೆರಿಕದಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾಗಿದ್ದ ಅಮೀನ್-ಉಲ್-ಹಕ್ ನನ್ನು ಪಂಜಾಬ್ ಪ್ರಾಂತ್ಯದ ಗುಜರಾತ್ ಜಿಲ್ಲೆಯ ಸರಾಯ್ ಅಲಂಗೀರ್ ಎಂಬಲ್ಲಿ ಬಂಧಿಸಲಾಗಿದೆ ಎಂದು ಡಿಐಜಿ ಉಸ್ಮಾನ್ ಅಕ್ರಮ್ ಗೊನಾಡಲ್ (Usman Akram Gonadal ) ಹೇಳಿದ್ದಾರೆ.

“ಅಮಿನ್-ಉಲ್-ಹಕ್ ಬಂಧನವು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ರಮುಖ ಪ್ರಗತಿಯಾಗಿದೆ” ಎಂದು ಪಂಜಾಬ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ವಿಭಾಗದ ವಕ್ತಾರರು ಹೇಳಿದ್ದಾರೆ.

ಪ್ರಮುಖ ರಚನೆಗಳು ಮತ್ತು ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಪಂಜಾಬ್ ಪ್ರಾಂತ್ಯದಲ್ಲಿ ಪಿತೂರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯೋಜಿಸಿದ್ದರು ಎಂದು ತಿಳಿದುಬಂದಿದೆ. ಇವರು 1996 ರಿಂದ ಲಾಡೆನ್‌ನ ಆಪ್ತ ಸಹಾಯಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗೌಪ್ಯ ಸ್ಥಳಕ್ಕೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ. 2011ರಲ್ಲಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಬೋಟಾಬಾದ್‌ನಲ್ಲಿ ಅಡಗಿಕೊಂಡಿದ್ದ ಲಾಡೆನ್‌ನನ್ನು ಹೊಡೆದುರುಳಿಸಲಾಗಿತ್ತು. ಅಮೀನ್-ಉಲ್-ಹಕ್ 2021ರಲ್ಲಿ ಅಫ್ಘಾನಿಸ್ತಾನದಲ್ಲಿ ಪತ್ತೆಯಾಗಿದ್ದು, ಪಾಕಿಸ್ತಾನಿ ಗುರುತಿನ ಚೀಟಿ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ

ಬೆಂಗಳೂರು: ವಾಲ್ಮಿಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ಕುರಿತಾದ ನಿಯಮ‌ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.  

“ವಾಲ್ಮಿಕಿ ನಿಗಮದ ಪ್ರಕರಣದಲ್ಲಿ ಆರ್.ಅಶೋಕ್, ವಿಜಯೇಂದ್ರ ನನ್ನ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ವಿಶೇಷ ತನಿಖಾ ತಂಡವನ್ನು ಹಿಂದಕ್ಕೆ ಪಡೆಯಿರಿ ಎಂದು ಹೇಳಿದ್ದಾರೆ. ನೀವು ಗೃಹ ಮಂತ್ರಿ ಆಗಿದ್ದಾಗಲೂ ಎಸ್.ಐ.ಟಿ ಬಗ್ಗೆ ಹೀಗೆ ಹೇಳಿದ್ದೀರಾ? ಎಂಬುದನ್ನು ಅವರಲ್ಲಿ ಕೇಳಬಯಸುತ್ತೇನೆ” ಎಂದು ಹೇಳಿದರು.

“ಮೇ 26 ರಂದು ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡರು. ಇವರು ತಮಿಳುನಾಡಿನ ಬೋವಿ ಸಮುದಾಯದವರು. ವಿರೋಧ ಪಕ್ಷದವರು ಸಾವಿರ ಸಾರಿ ದಲಿತ, ದಲಿತ ಎಂದು ಮಾತನಾಡಿದ್ದಾರೆ” ಎಂದರು.

“ಸಂವಿಧಾನದಲ್ಲಿ ಪರಿಶಿಷ್ಟ ಜಾತಿ/ವರ್ಗ ಎನ್ನುವ ಉಲ್ಲೇಖ ಇದೆ. ಇಬ್ಬರೂ ಸೇರಿ 24.1% ಜನಸಂಖ್ಯೆ ಇದ್ದಾರೆ. ಇವರ ಅಭಿವೃದ್ಧಿ ಆದರೆ ಮಾತ್ರ ಸಮ ಸಮಾಜದ ಆಶಯ ಈಡೇರುತ್ತದೆ. ಈ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆ ಇರುವವರೆಗೂ ಸಮಾನತೆ ಸಾಧ್ಯವಿಲ್ಲ. ಸಂವಿಧಾನ ಬಂದು 70 ವರ್ಷ ಆದರೂ ಸಮಾನತೆ ಸಿಕ್ಕಿಲ್ಲ. ಇದನ್ನು ಸರಿಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ವಾಲ್ಮಿಕಿ, ಬೋವಿ, ಆದಿಜಾಂಭವ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸೇರಿ ಹಲವು ಅಭಿವೃದ್ಧಿ ನಿಗಮಗಳನ್ನು ಆರಂಭಿಸಲಾಗಿದೆ. ಈ ಎಲ್ಲಾ ನಿಗಮಗಳ ಉದ್ದೇಶ ಆಯಾ ಸಮುದಾಯಗಳನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವುದೇ ಆಗಿದೆ” ಎಂದು ಹೇಳಿದರು.

“2013ರ ಡಿಸೆಂಬರ್ ನಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆ ಜಾರಿಗೆ ಕೊಟ್ಟಿದ್ದು ನಮ್ಮ‌ ಸರ್ಕಾರ. ಬಜೆಟ್‌ನ 24.1% ಅಭಿವೃದ್ಧಿ ಹಣ ಈ ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಕಡ್ಡಾಯ ಮಾಡಿದ್ದು ನಾನು. ವಿಪಕ್ಷಗಳು ಬರೀ ಮೊಸಳೆ ಕಣ್ಣೀರು ಹರಿಸುತ್ತಿವೆ” ಎಂದು ಹೇಳಿದರು.

“1949ರ ನವೆಂಬರ್ 25 ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ‘ಜನವರಿ 26-1950ಕ್ಕೆ ಸಂವಿಧಾನ ಜಾರಿಗೆ ಬರುತ್ತಿದೆ. ನಾವೆಲ್ಲರೂ ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ’ ಎಂದು ಚರಿತ್ರಾರ್ಹವಾದ ಭಾಷಣದಲ್ಲಿ ಹೇಳಿದ್ದರು. ನಾವು ಪ್ರಜಾಪ್ರಭುತ್ವ ಒಪ್ಪಿಕೊಂಡಿದ್ದೇವೆ. ಇಲ್ಲಿ ಇನ್ನೂ ಆರ್ಥಿಕವಾಗಿ, ಸಾಮಾಜಿಕವಾಗಿ ಅಸಮಾನತೆ ಉಳಿದುಕೊಂಡಿರುವುದರಿಂದ ಅದನ್ನು ನಿವಾರಣೆ ಮಾಡದಿದ್ದರೆ ಜನರೇ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆಂಬ ಎಚ್ಚರಿಕೆ ಕೊಟ್ಟಿದ್ದರು” ಎಂದು ಹೇಳಿದರು.

“ಇಡೀ ದೇಶದಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆ ತಂದವರು ನಾವು. ಪರಿಶಿಷ್ಠ ಸಮುದಾಯಗಳ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಕೇಂದ್ರದ ಬಿಜೆಪಿಯಾಗಲಿ, ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಾಗಲಿ ಈ ಕಾಯ್ದೆಯನ್ನು ಏಕೆ ಜಾರಿಗೆ ತಂದಿಲ್ಲ? ಇಡೀ ದೇಶದಲ್ಲಿ ನಾವು ಮಾತ್ರ ಇಂಥಾ ಪರಿಣಾಮಕಾರಿ ಕಾಯ್ದೆಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳಿಗಾಗಿ ಜಾರಿ ಮಾಡಿದ್ದೇವೆ.

ಗುತ್ತಿಗೆಯಲ್ಲೂ ಎಸ್.ಸಿ / ಎಸ್.ಟಿ ಸಮುದಾಯಗಳಿಗೆ ಮೀಸಲಾತಿ ಜಾರಿ ಮಾಡಿರುವುದು ನಾವು ಮಾತ್ರ. ಇಂಥದ್ದನ್ನು ಬಿಜೆಪಿಯವರು ಇದುವರೆಗೂ ಏಕೆ ಜಾರಿ ಮಾಡಿಲ್ಲ?” ಎಂದು ಪ್ರಶ್ನಿಸಿದರು.

“ಎಸ್.ಸಿ / ಎಸ್.ಟಿ ಉದ್ದಿಮೆಗಳಿಗೆ / ಉದ್ಯಮಗಳಿಗೆ ವಿಶೇಷ ಸಾಲದ ಸವಲತ್ತು , KIADB ಭೂಮಿ ವಿಚಾರದಲ್ಲಿ ಈ ಸಮುದಾಯಗಳಿಗೆ ಅನುಕೂಲ ಮಾಡಿ ಕಾನೂನು ತಂದವರು ನಾವು. ನಾವು ಎಸ್.ಸಿ / ಎಸ್.ಟಿ ಸಮುದಾಯದವರ ವಿರೋಧಿಯಾಗಿದ್ದರೆ ಇಷ್ಟೆಲ್ಲವನ್ನೂ ಜಾರಿ ಮಾಡುತ್ತಿದ್ದೆವಾ?

ಕಾಂಗ್ರೆಸ್ ಇರುವವರೆಗೂ, ನಾನು ಇರುವವರೆಗೂ ಸಾಮಾಜಿಕ ನ್ಯಾಯಕ್ಕೆ ನಾವು ಬದ್ಧರು. ವಿಪಕ್ಷಗಳಿಂದ ಸಾಮಾಜಿಕ ನ್ಯಾಯದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ” ಎಂದು ಕಿಡಿಕಾರಿದರು.

ದೇಶ

ರಾಂಚಿ: ‘ಕೋವಿಡ್ ಯುಗದ ನಂತರ, ಭಾರತವು ಶಾಂತಿ ಮತ್ತು ಸಂತೋಷಕ್ಕಾಗಿ ಯೋಜನೆಯನ್ನು ಹೊಂದಿದೆ ಎಂದು ಜಗತ್ತು ಅರ್ಥಮಾಡಿಕೊಂಡಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಜಾರ್ಖಂಡ್‌ನ ಕುಮ್ಲಾದಲ್ಲಿ ಸೇವಾ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ಭಾಗವತ್, ‘ಜಾಗತೀಕವಾಗಿ ಕಳೆದ 2,000 ವರ್ಷಗಳಲ್ಲಿ ಸಂತೋಷ ಮತ್ತು ಶಾಂತಿಯನ್ನು ಹುಡುಕುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಆದರೆ ಇವೆರಡೂ ಭಾರತೀಯ ಜೀವನ ವಿಧಾನದಲ್ಲಿ ಅಂತರ್ಗತವಾಗಿವೆ. ಕೋವಿಡ್ ಹರಡಿಕೆಯ ನಂತರ, ಭಾರತವು ಶಾಂತಿ ಮತ್ತು ಸಂತೋಷಕ್ಕಾಗಿ ಯೋಜನೆಯನ್ನು ಹೊಂದಿದೆ ಎಂದು ಜಗತ್ತಿಗೆ ತಿಳಿದಿದೆ.

ಸನಾತನ ಧರ್ಮವು ಅರಮನೆಯಿಂದ ಹುಟ್ಟಿಕೊಂಡಿಲ್ಲ. ಅದು ಆಶ್ರಮದಿಂದ ಮತ್ತು ಅರಣ್ಯದಿಂದ ಬಂದಿದೆ. ಮಾನವ ಕಲ್ಯಾಣದ ಬಗ್ಗೆ ಕಾಳಜಿ ಹೊಂದಿದೆ. ಕಾಲ ಬದಲಾದರೂ ನಮ್ಮ ಬಟ್ಟೆ ಬದಲಾದರೂ ಪ್ರಕೃತಿ ಬದಲಾಗುವುದಿಲ್ಲ. ಸಮಯ ಬದಲಾದಂತೆ, ನಮ್ಮ ಕೆಲಸವನ್ನು ಮುಂದುವರಿಸಲು ಮತ್ತು ಸೇವೆ ಮಾಡಲು ನಾವು ಹೊಸ ಮಾರ್ಗಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.

ಕಾಡಿನಲ್ಲಿ ವಾಸಿಸುವ ಜನರು ಪ್ರಕೃತಿಯೊಂದಿಗೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇದು ದೊಡ್ಡ ನಗರಗಳಲ್ಲಿ ಕಾಣುವುದಿಲ್ಲ. ನಾವು ಕಣ್ಣು ಮುಚ್ಚಿ ಗ್ರಾಮಸ್ಥರನ್ನು ನಂಬಬಹುದು. ಆದರೆ ನಗರಗಳಲ್ಲಿ ನಾವು ಯಾರೊಂದಿಗೆ ಮಾತನಾಡುತ್ತೇವೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು.

ದೇಶದ ಭವಿಷ್ಯದ ಬಗ್ಗೆ ಎಂದಿಗೂ ಚಿಂತಿಸಬೇಡಿ; ದೇಶದ ಒಳಿತಿಗಾಗಿ ಅನೇಕರು ಕೆಲಸ ಮಾಡುತ್ತಿದ್ದಾರೆ. ನಾವೂ ಪ್ರಯತ್ನಿಸುತ್ತಿದ್ದೇವೆ. ಭಾರತೀಯ ಜನರು ತಮ್ಮದೇ ಆದ ಸ್ವಭಾವವನ್ನು ಹೊಂದಿದ್ದಾರೆ. ಅನೇಕರು ಯಾವುದೇ ವಸ್ತು ಅಥವಾ ಕೀರ್ತಿಯನ್ನು ಅಪೇಕ್ಷಿಸದೆ ದೇಶದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇದು ಫಲಿತಾಂಶಗಳನ್ನು ನೀಡುತ್ತದೆ.

ನಮ್ಮಲ್ಲಿ 33 ಕೋಟಿ ದೇವಾನುದೇವತೆಗಳು ಇರುವುದರಿಂದ ವಿವಿಧ ರೀತಿಯ ಆಚರಣೆಗಳನ್ನು ಹೊಂದಿರುತ್ತೇವೆ. ನಮ್ಮ ದೇಶದಲ್ಲಿ 3,800ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುತ್ತಾರೆ. ಆಹಾರ ಪದ್ಧತಿಯೂ ವಿಭಿನ್ನವಾಗಿದೆ. ನಾವು ಬೇರೆಯಾಗಿದ್ದರೂ ನಮ್ಮ ಮನಸ್ಸು ಒಂದೇ ಆಗಿದೆ. ಇದು ಇತರ ದೇಶಗಳಲ್ಲಿ ಕಂಡುಬರುವುದಿಲ್ಲ.

ನಾವು ಇತರರ ಅನುಕೂಲಕ್ಕಾಗಿ ಕೆಲಸ ಮಾಡಿದಾಗ, ನಾವೂ ಪ್ರಗತಿ ಹೊಂದುತ್ತೇವೆ. ಮನುಷ್ಯರು ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ಸಾವಿನ ಭಯವಿಲ್ಲ. ಒಬ್ಬ ವ್ಯಕ್ತಿಯು ಬೀಗ ಹಾಕಿದ ಕೋಣೆಯಲ್ಲಿ ಒಬ್ಬಂಟಿಯಾಗಿ ವಾಸಿಸಬೇಕಾದರೆ, ಅವನು ಹುಚ್ಚನಾಗುತ್ತಾನೆ. ಕೂಡಿ ಬಾಳಿದಾಗ ಮಾತ್ರ ಭಾವನೆಗಳು ಒಂದಾಗುತ್ತವೆ.

ಸಮಾಜಕ್ಕೆ ಮರಳಿ ಕೊಡುವುದು ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿದೆ ಎಂದು ತಥಾಕಥಿತ ಪ್ರಗತಿಪರರು ಈಗ ನಂಬಿದ್ದಾರೆ. ಇದು ವೇದಗಳಲ್ಲಿ ಎಲ್ಲಿಯೂ ಬರೆದಿಲ್ಲ. ಆದರೆ ಇದು ಪೀಳಿಗೆಯಿಂದ ಪೀಳಿಗೆಗೆ ನಮ್ಮ ಸ್ವಭಾವದಲ್ಲಿದೆ. ಗ್ರಾಮದ ಕಾರ್ಯಕರ್ತರು ಸಮಾಜದ ಸ್ವಾಸ್ಥ್ಯಕ್ಕಾಗಿ ಅವಿರತವಾಗಿ ಶ್ರಮಿಸಬೇಕು. ಅಭಿವೃದ್ಧಿಗೆ ಅಂತ್ಯವಿದೆಯೇ? ನಾವು ನಮ್ಮ ಗುರಿಯನ್ನು ತಲುಪಿದಾಗ, ನಾವು ಇನ್ನೂ ಬಹಳ ದೂರ ಸಾಗಬೇಕಾಗಿರುವುದು ನಮಗೆ ಅರ್ಥವಾಗುತ್ತದೆ’ ಎಂದು ಮಾತನಾಡಿದ್ದಾರೆ.

ವಿದೇಶ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಕೊರೊನಾ ಸೋಂಕು ತಗುಲಿದೆ. ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಾಗಿ ಜೋ ಬೈಡನ್ ಲಾಸ್ ವೇಗಾಸ್‌ನಲ್ಲಿ ಪ್ರಚಾರ ಮಾಡಿದರು. ಆಗ ಅವರಿಗೆ ಸೌಮ್ಯವಾದ ಕೊರೊನಾ ರೋಗಲಕ್ಷಣಗಳು ಕಂಡುಬಂದಿರುದನ್ನು ವೈದ್ಯರು ದೃಢಪಡಿಸಿದ್ದಾರೆ.

ಈ ಬಗ್ಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೇನ್ ಪಿಯರೆ, ‘ಅಧ್ಯಕ್ಷ ಬೈಡನ್ ಅವರು ಈಗಾಗಲೇ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ. ಚುನಾವಣಾ ಪ್ರಚಾರದ ನಂತರ ಅವರು ಡೆಲವೇರ್‌ನಲ್ಲಿ ಏಕಾಂತದಲ್ಲಿ ಉಳಿಯುತ್ತಾರೆ. ಅಲ್ಲಿಂದಲೇ ಕಚೇರಿ ಕೆಲಸವನ್ನು ನಿರ್ವಹಿಸಲಿದ್ದಾರೆ’ ಎಂದು ತಿಳಿಸಿದರು.

ಈ ಕುರಿತು ಮಾತನಾಡಿದ ಬೈಡನ್ ಅವರ ವಿಶೇಷ ವೈದ್ಯರು, ‘ಅಧ್ಯಕ್ಷ ಬೈಡನ್ ಅವರು ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ಹೊಂದಿದ್ದಾರೆ. ಅವರು ಈಗಾಗಲೇ `ಬಾಕ್ಸ್‌ಲೋವಿಟ್’ ಕೊರೊನಾ ಲಸಿಕೆ ತೆಗೆದುಕೊಂಡಿರುವುದರಿಂದ, ಅವರಿಗೆ ಕೊರೊನಾ ವೈರಸ್‌ನಿಂದ ಪ್ರಭಾವಿತವಾಗುವ ಯಾವುದೇ ಸಾಧ್ಯತೆಗಳಿಲ್ಲ. ಅಧ್ಯಕ್ಷರಿಗೆ ಇದುವರೆಗೆ ಯಾವುದೇ ಜ್ವರ ಮತ್ತು ಉಸಿರಾಟದ ತೊಂದರೆ ಇಲ್ಲ’ ಎಂದು ವೈದ್ಯರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ, ಲಾಸ್ ವೇಗಾಸ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೋ ಬೈಡನ್ ಅವರು ‘ನಾನು ಚೆನ್ನಾಗಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ವಿದೇಶ

ಡಿ.ಸಿ.ಪ್ರಕಾಶ್

ಜರ್ಮನಿಯಲ್ಲಿ ತೀವ್ರ ಬಲಪಂಥೀಯ ನೀತಿಗಳನ್ನು ಹರಡುತ್ತಿದ್ದ ಪ್ರಸಿದ್ಧ ‘ಕಾಂಪ್ಯಾಕ್ಟ್’ (Compact) ಪತ್ರಿಕೆಯನ್ನು ಆ ದೇಶದ ಸರ್ಕಾರ ನಿಷೇಧಿಸಿದೆ. 2010ರಲ್ಲಿ ಪ್ರಾರಂಭವಾದ ಈ ನಿಯತಕಾಲಿಕವು ಪ್ರತಿ ತಿಂಗಳು 40,000 ಪ್ರತಿಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಲಾಗುತ್ತದೆ.

ಈ ಹಿನ್ನೆಲೆಯಲ್ಲಿ, ದೇಶದ ಆಂತರಿಕ ಸಚಿವಾಲಯವು ಕಾಂಪ್ಯಾಕ್ಟ್ ನಿಯತಕಾಲಿಕವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, “ಸಾರ್ವಜನಿಕರಲ್ಲಿ ಜನಾಂಗೀಯ ದ್ವೇಷವನ್ನು ಹುಟ್ಟುಹಾಕಲು ನಿಯತಕಾಲಿಕವು ಜರ್ಮನ್ ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಿದೆ” ಎಂದು ಹೇಳಿದೆ.

ಕಳೆದ ಮೇ ತಿಂಗಳಿನಲ್ಲಿ ಪ್ರಕಟವಾದ ನಿಯತಕಾಲಿಕೆಯಲ್ಲಿ ಜರ್ಮನ್ ಆಡಳಿತವನ್ನು ಕಿತ್ತೊಗೆಯುವ ಲೇಖನವನ್ನು ಬರೆಯಲಾಗಿತ್ತು ಎಂದು ವರದಿಯಾಗಿದೆ. ಅದರ ಆಧಾರದ ಮೇಲೆ ದೇಶದಲ್ಲಿರುವ ಕಂಪನಿಯ ಶಾಖೆಗಳ ಮೇಲೆ ದಾಳಿ ನಡೆಸಲಾಗಿದೆ. ಅದರಂತೆಯೇ ಅಂತಹ ನಿಷೇಧವನ್ನು ಸರ್ಕಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಈ ಕುರಿತು ಮಾತಣಾಡಿರುವ ಜರ್ಮನಿಯ ಆಂತರಿಕ ಸಚಿವೆ ನ್ಯಾನ್ಸಿ ಫೇಸರ್ (Nancy Faeser), “ಇದು ಬಲಪಂಥೀಯ ಉಗ್ರಗಾಮಿ ಪಕ್ಷದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಪತ್ರಿಕೆಯು ಯಹೂದಿಗಳು, ವಲಸೆಯ ಇತಿಹಾಸ ಹೊಂದಿರುವ ಜನರು ಮತ್ತು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ವಿರುದ್ಧ ದ್ವೇಷವನ್ನು ಪ್ರಚೋದಿಸುತ್ತದೆ.

ನಿರಾಶ್ರಿತರು ಮತ್ತು ವಲಸಿಗರ ವಿರುದ್ಧ ದ್ವೇಷ ಮತ್ತು ಹಿಂಸೆಯ ವಾತಾವರಣವನ್ನು ಉತ್ತೇಜಿಸುತ್ತದೆ. ನಮ್ಮ ಪ್ರಜಾಪ್ರಭುತ್ವ ಸರ್ಕಾರವನ್ನು ಸೋಲಿಸಲು ಬಯಸುವ ಬುದ್ಧಿಜೀವಿಗಳ ವಿರುದ್ಧವೂ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂಬುದನ್ನು ಈ ನಿಷೇಧವು ತೋರಿಸುತ್ತದೆ” ಎಂದು ಹೇಳಿದ್ದಾರೆ.

ಈಗಾಗಲೇ, ಕಂಪನಿಯ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪುಟಗಳನ್ನು ದ್ವೇಷಪೂರಿತ ಕಾಮೆಂಟ್‌ಗಳಿಗಾಗಿ 2020ರಲ್ಲಿ ನಿಷೇಧಿಸಲಾಗಿದ್ದು, ಈಗ ‘ಎಕ್ಸ್’ ಸೈಟ್ ಪುಟವನ್ನು ಸಹ ನಿರ್ಬಂಧಿಸಲಾಗಿದೆ. ಜರ್ಮನಿಯಲ್ಲಿ ದೇಶದ ಸರ್ಕಾರವು ಬಲಪಂಥೀಯ ಮಾಧ್ಯಮವನ್ನು ನಿಷೇಧಿಸಿರುವುದು ಜಗತ್ತನ್ನು ಬೆಚ್ಚಿಬೀಳಿಸಿದೆ.

ಕಳೆದ ತಿಂಗಳು ಯುರೋಪಿಯನ್ ಪಾರ್ಲಿಮೆಂಟ್‌ಗೆ ನಡೆದ ಚುನಾವಣೆಯಲ್ಲಿ ಬಲಪಂಥೀಯ AfD ಪ್ರಬಲವಾದ ಗೆಲುವು ಸಾದಿಸಿತ್ತು. ಅಲ್ಲದೆ, ಕಳೆದ ಸೆಪ್ಟೆಂಬರ್‌ನಲ್ಲಿ ಪೂರ್ವ ಜರ್ಮನಿಯ ಮೂರು ರಾಜ್ಯಗಳ ಚುನಾವಣೆಗಳಲ್ಲಿ ಅದು ಮುನ್ನಡೆ ಸಾಧಿಸಿತ್ತು ಎಂಬುದು ಗಮನಾರ್ಹ.

ಉದ್ಯೋಗ

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಉದ್ಯೋಗ ನೀಡುವ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿರುವ ಕೈಗಾರಿಕೋದ್ಯಮಿಗಳನ್ನು ತಮ್ಮ ರಾಜ್ಯಕ್ಕೆ ಬರುವಂತೆ ಆಂಧ್ರಪ್ರದೇಶ ಆಹ್ವಾನಿಸಿದೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಕರ್ನಾಟಕದ ಎಲ್ಲಾ ಖಾಸಗಿ ವಲಯದ ಕಂಪನಿಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಶೇ.100 ರಷ್ಟು ಕನ್ನಡದವರನ್ನು ಕಡ್ಡಾಯವಾಗಿ ನೇಮಿಸುವ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕರ್ನಾಟಕದ ನಿರ್ಧಾರದಿಂದಾಗಿ ನೆರೆಯ ಆಂಧ್ರಪ್ರದೇಶ, ನಾಸ್ಕಾಮ್ ಸೇರಿದಂತೆ ಪ್ರಮುಖ ಐಟಿ ಕಂಪನಿಗಳಿಗೆ ಆಂಧ್ರ ಸಚಿವ ನಾರಾ ಲೋಕೇಶ್ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ.

ಉದ್ಯೋಗ

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಜಾರಿಯ ಐತಿಹಾಸಿಕ ನಿರ್ಣಯ ಕೈಗೊಂಡಿರುವ ಮುಖ್ಯಮಂತ್ರಿ ಅವರನ್ನು ಅಭಿನಂದಿಸಿ, ಸಮಸ್ತ ಕನ್ನಡಿಗರ ಪರವಾಗಿ ಅವರನ್ನು ಇಂದು ವಿಧಾನಸೌಧ ಕಛೇರಿಯಲ್ಲಿ ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರಾದ ಅಶ್ವಿನಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ಬಿಗೆರೆ ವಿನೋದ್ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸoಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದ ನಿಯೋಗದವರು ಮುಖ್ಯಮoತ್ರಿ ಸಿದ್ದರಾಮಯ್ಯ ಅವರನ್ನು ಇಂದು ವಿಧಾನಸೌಧದಲ್ಲಿ ಭೇಟಿಯಾಗಿ ಅಭಿನoದನೆ ಸಲ್ಲಿಸಿದರು.

ಆಗಸ್ಟ್‌ 1 ರಿಂದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವುದಾಗಿ ನಿರ್ಧರಿಸಲಾಗಿದೆ. ಈ ಮೂಲಕ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿದೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ವರದಿ ಜಾರಿ ಕುರಿತು ಸಂಪುಟ ಒಪ್ಪಿಗೆ ಸೂಚಿಸಿತ್ತು.

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ರಚಿಸಲಾದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸರ್ಕಾರ ಅoಗೀಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸoಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದ ನಿಯೋಗದವರು ಮುಖ್ಯಮoತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿನoದನೆ ಸಲ್ಲಿಸಿದರು. ಉಪಮುಖ್ಯಮಂತ್ರಿಗಳಾದ  ಡಿ.ಕೆ.ಶಿವಕುಮಾರ್ ಹಾಗೂ ಸಂಘದ ಪದಾಧಿಕಾರಿಗಳು ಈ ವೇಳೆ ಹಾಜರಿದ್ದರು.

ವಿದೇಶ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹತ್ಯೆಗೆ ಇರಾನ್ (Iran) ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಆರೋಪಿಸಿದೆ. ಹೀಗಾಗಿ ಟ್ರಂಪ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದಾಗ, ಗುಂಪಿನಲ್ಲಿದ್ದ ಯುವಕನೊಬ್ಬ ಟ್ರಂಪ್ ಮೇಲೆ ಗನ್‌ನಿಂದ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಅವರು ಜೀವಂತವಾಗಿ ಪಾರಾಗಿದ್ದಾರೆ. ಕಿವಿಯ ಭಾಗದಲ್ಲಿ ಗಾಯವಾಗಿದೆ.

ಈ ಹಿನ್ನೆಲೆಯಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್ ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಆರೋಪಿಸಿದೆ. ಕಳೆದ 2020ರಲ್ಲಿ, ಅಮೆರಿಕ ಇರಾನ್‌ನ ಸೇನಾ ಮುಖ್ಯಸ್ಥ ಕಾಸ್ಸೆಮ್ ಸೊಲೈಮಾನಿಯನ್ನು (Qasem Soleimani) ಹತ್ಯೆ ಮಾಡಿತ್ತು. ಆಗ ಅಧ್ಯಕ್ಷರಾಗಿದ್ದ ಟ್ರಂಪ್ ಅವರು ಈ ಆದೇಶವನ್ನು ನೀಡಿದ್ದರು.

ಇದಕ್ಕಾಗಿಯೇ ಇರಾನ್ ಟ್ರಂಪ್ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಿದೆ. ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ. ಹೀಗಾಗಿ ಟ್ರಂಪ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈ ಕುರಿತು ಮಾತನಾಡಿದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಆಡ್ರಿಯನ್ ವ್ಯಾಟ್ಸನ್ (Adrienne Watson), “ಟ್ರಂಪ್ ವಿರುದ್ಧ ಇರಾನ್‌ನ ಬೆದರಿಕೆಗಳನ್ನು ನಾವು ವರ್ಷಗಳಿಂದ ಗಮನಿಸುತ್ತಿದ್ದೇವೆ. ಕಾಸ್ಸೆಮ್ ಸೊಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್‌ನ ಪ್ರಯತ್ನಗಳಿಂದ ಬೆದರಿಕೆಗಳಿವೆ” ಎಂದು ಹೇಳಿದ್ದಾರೆ.

“ಟ್ರಂಪ್ ಮೇಲೆ ಗುಂಡು ಹಾರಿಸಿದವನಿಗೂ ನಮಗೂ ಯಾವ ಸಂಬಧವೂ ಇಲ್ಲ. ಅಮೆರಿಕದ ಆರೋಪ ನಿರಾಧಾರ” ಎಂದು ಇರಾನ್ ಹೇಳಿದೆ.