ಟ್ರಂಪ್ ಹತ್ಯೆಗೆ ಇರಾನ್ ಸಂಚು ಎಂದ ಅಮೆರಿಕ: ಆರೋಪ ನಿರಾಧಾರ ಎಂದ ಇರಾನ್!
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹತ್ಯೆಗೆ ಇರಾನ್ (Iran) ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಆರೋಪಿಸಿದೆ. ಹೀಗಾಗಿ ಟ್ರಂಪ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದಾಗ, ಗುಂಪಿನಲ್ಲಿದ್ದ ಯುವಕನೊಬ್ಬ ಟ್ರಂಪ್ ಮೇಲೆ ಗನ್‌ನಿಂದ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಅವರು ಜೀವಂತವಾಗಿ ಪಾರಾಗಿದ್ದಾರೆ. ಕಿವಿಯ ಭಾಗದಲ್ಲಿ ಗಾಯವಾಗಿದೆ.
ಈ ಹಿನ್ನೆಲೆಯಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್ ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಆರೋಪಿಸಿದೆ. ಕಳೆದ 2020ರಲ್ಲಿ, ಅಮೆರಿಕ ಇರಾನ್‌ನ ಸೇನಾ ಮುಖ್ಯಸ್ಥ ಕಾಸ್ಸೆಮ್ ಸೊಲೈಮಾನಿಯನ್ನು (Qasem Soleimani) ಹತ್ಯೆ ಮಾಡಿತ್ತು. ಆಗ ಅಧ್ಯಕ್ಷರಾಗಿದ್ದ ಟ್ರಂಪ್ ಅವರು ಈ ಆದೇಶವನ್ನು ನೀಡಿದ್ದರು.
ಇದಕ್ಕಾಗಿಯೇ ಇರಾನ್ ಟ್ರಂಪ್ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಿದೆ. ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ. ಹೀಗಾಗಿ ಟ್ರಂಪ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಕುರಿತು ಮಾತನಾಡಿದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಆಡ್ರಿಯನ್ ವ್ಯಾಟ್ಸನ್ (Adrienne Watson), “ಟ್ರಂಪ್ ವಿರುದ್ಧ ಇರಾನ್‌ನ ಬೆದರಿಕೆಗಳನ್ನು ನಾವು ವರ್ಷಗಳಿಂದ ಗಮನಿಸುತ್ತಿದ್ದೇವೆ. ಕಾಸ್ಸೆಮ್ ಸೊಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್‌ನ ಪ್ರಯತ್ನಗಳಿಂದ ಬೆದರಿಕೆಗಳಿವೆ” ಎಂದು ಹೇಳಿದ್ದಾರೆ.
“ಟ್ರಂಪ್ ಮೇಲೆ ಗುಂಡು ಹಾರಿಸಿದವನಿಗೂ ನಮಗೂ ಯಾವ ಸಂಬಧವೂ ಇಲ್ಲ. ಅಮೆರಿಕದ ಆರೋಪ ನಿರಾಧಾರ” ಎಂದು ಇರಾನ್ ಹೇಳಿದೆ.