ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
August 2024 » Page 3 of 7 » Dynamic Leader
November 21, 2024
Home 2024 August (Page 3)
ದೇಶ

“ದೇಶದ ಸಂವಿಧಾನ ಶೇ.10ರಷ್ಟು ಮಂದಿಗೆ ಮಾತ್ರವಲ್ಲ. ಜಾತಿವಾರು ಸಮೀಕ್ಷೆ ನಡೆಸದೆ ಭಾರತದ ವಾಸ್ತವದಲ್ಲಿ ನೀತಿಗಳನ್ನು ರೂಪಿಸಲು ಸಾಧ್ಯವಿಲ್ಲ” – ರಾಹುಲ್ ಗಾಂಧಿ

ಪ್ರಯಾಗ್‌ರಾಜ್‌,
ದೇಶದಾದ್ಯಂತ ಜಾತಿವಾರು ಜನಗಣತಿ ನಡೆಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸುತ್ತ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಿನ್ನೆ ನಡೆದ ಸಾಂವಿಧಾನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಗ್ಗೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

“ದೇಶದ ಶೇ.90ರಷ್ಟು ಜನ ವ್ಯವಸ್ಥೆಯಿಂದ ಹೊರಗಿದ್ದಾರೆ. ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವ ಅವರಿಗೂ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ. ಅದಕ್ಕಾಗಿಯೇ ನಾವು ಜಾತಿವಾರು ಜನಗಣತಿಗೆ ಬೇಡಿಕೆಯನ್ನು ಎತ್ತುತ್ತಿದ್ದೇವೆ. ದೇಶದ ಸಂವಿಧಾನ ಶೇ.10ರಷ್ಟು ಮಂದಿಗೆ ಮಾತ್ರವಲ್ಲ. ಜಾತಿವಾರು ಸಮೀಕ್ಷೆ ನಡೆಸದೆ ಭಾರತದ ವಾಸ್ತವದಲ್ಲಿ ನೀತಿಗಳನ್ನು ರೂಪಿಸಲು ಸಾಧ್ಯವಿಲ್ಲ.

ಸಂವಿಧಾನದಂತೆಯೇ ಜಾತಿವಾರು ಎಣಿಕೆ ಕೂಡ ಕಾಂಗ್ರೆಸ್‌ನ ನೀತಿಯ ಚೌಕಟ್ಟಾಗಿಯೂ, ಮಾರ್ಗದರ್ಶಿಯೂ ಆಗಿದೆ. ಈ ಜಾತಿವಾರು ಜನಗಣತಿ ಬೇಡಿಕೆಯಿಂದ ನಾವು ಸಂವಿಧಾನವನ್ನು ರಕ್ಷಿಸಲು ಬಯಸುತ್ತೇವೆ” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಅವರ ಅಚ್ಚುಮೆಚ್ಚಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ.

ಸೋನಿಯಾ ಅವರು ನಾಯಿಯೊಂದನ್ನು ಬೆನ್ನ ಮೇಲೆ ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡಿರುವ ರಾಹುಲ್, ಅಮ್ಮನ ಅಚ್ಚುಮೆಚ್ಚಿನವರು ಯಾರು? ಅದು ಖಂಡಿತವಾಗಿಯೂ ನೂರಿ (ನಾಯಿಯ ಹೆಸರು) ಎಂದು ಹೇಳಿದ್ದಾರೆ. ಮುಂದಿನ 24 ಗಂಟೆಗಳಲ್ಲಿ, 5,968 ಜನರು ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. 8.6 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ‘ಲೈಕ್’ ಮಾಡಿದ್ದಾರೆ.

ಕಳೆದ ವರ್ಷ ರಾಹುಲ್ ಗೋವಾದ ಮಾಪುಸಾದಲ್ಲಿ ನೂರಿಯನ್ನು ಖರೀದಿಸಿ, ವಿಶ್ವ ಪ್ರಾಣಿ ದಿನದಂದು ಸೋನಿಯಾಗೆ ಉಡುಗೊರೆಯಾಗಿ ನೀಡಿದ್ದರು. ಅದರ ಬಗ್ಗೆ ವಿಡಿಯೊವೊಂದನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು ಎಂಬುದು ಗಮನಾರ್ಹ.

ರಾಜ್ಯ

ಬೆಂಗಳೂರು: ಕರ್ನಾಟಕ ಮುಸ್ಲಿಮರ ಪ್ರಮುಖ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಸೂಕ್ತ ಹಾಗೂ ಶೀಘ್ರವಾಗಿ ಈಡೇರಿಸಲು ಒತ್ತಾಯಿಸಿ ಇದೇ ಆಗಸ್ಟ್ 22 ರಂದು ಕರ್ನಾಟಕ ಮುಸ್ಲಿಂ ಯುನಿಟಿ ವತಿಯಿಂದ ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡರ ಚಿಂತನಾ ಸಭೆಯನ್ನು ಆಯೋಜಿಸಲಾಗಿತ್ತು.

ಕರ್ನಾಟಕ ಮುಸ್ಲಿಂ ಯುನಿಟಿಯ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲ್ಬುರ್ಗಿ ಅವರು ಅಧ್ಯಕ್ಷತೆ ವಹಿಸಿದ್ದ ಈ ಚಿಂತನಾ ಸಭೆಯಲ್ಲಿ, ರಾಜ್ಯ ಗೌರವ ಅಧ್ಯಕ್ಷರಾದ ಜಿ.ಎ.ಭಾವ, ಔಕಾಫ್ ಮಂಡಳಿ ಮಾಜಿ ಅಧ್ಯಕ್ಷರಾದ ಶಾಫಿ ಸಹದಿ, ರಾಜ್ಯ ಯುವ ಅಧ್ಯಕ್ಷ ಎಂ.ಎನ್.ನೂರ್ ಅಹಮದ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್, ಕಿತ್ತೂರು ಕರ್ನಾಟಕ ವಿಭಾಗದ ಸಂಚಾಲಕ ಎಂ.ಎಲ್.ಸರಕಾವಸ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಚಿಂತನಾ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಿಸಾರ್ ಅಹ್ಮದ್ ಮುಂತಾದವರಿಗೆ ಕಳುಹಿಸಿ ಕೊಡಲಾಗಿದೆ.

ಚಿಂತನಾ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಮತ್ತು ಮುಖ್ಯಮಂತ್ರಿಗಳು ಹಾಗೂ ಇತರರಿಗೆ ಕಳುಹಿಸಿಕೊಟ್ಟ ಮನವಿ ಪತ್ರದ ಸಾರಾಂಶ ಈ ರೀತಿಯಿದೆ: ನಮ್ಮ ಕರ್ನಾಟಕ ರಾಜ್ಯವು ಸೂಫಿ, ಶರಣರು, ದಾಸರ ನೆಲೆಯಬೀಡಾಗಿದೆ. ನ್ಯಾಯ, ಸೌಹಾರ್ದತೆ, ಸಹಬಾಳ್ವೆಯ ಕನ್ನಡನಾಡಾಗಿದೆ. ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯ ಹಾಗೂ ಸಮ ಸಮಾಜದ ಗುರಿಯೊಂದಿಗೆ ಬಸವಣ್ಣ, ಟಿಪ್ಪುಸುಲ್ತಾನ್, ಡಿ.ದೇವರಾಜ ಅರಸ್ ಅವರಂತಹ ನೂರಾರು ದಿವಂಗತ ಹುತಾತ್ಮರೆಲ್ಲರೂ ನಮ್ಮೊಂದಿಗೆ ಸೈದ್ಧಾಂತಿಕವಾಗಿ ಬದುಕಿ, ಪರಿವರ್ತನೆಯ ಸಾಮಾಜದ, ನ್ಯಾಯ ಬುನಾದಿಯ, ಸಮಾಜ ನಿರ್ಮಾಣದ ನಾಡಿಗೆ ಜೀವತುಂಬಿದ್ದಾರೆ.

ಆದರೆ, ರಾಜ್ಯದಲ್ಲಿ ಒಂದು ಕೋಟಿ ಜನಸಂಖ್ಯೆಯುಳ್ಳ ಮುಸ್ಲಿಮರ ಸಾಮಾಜಿಕ ನ್ಯಾಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಮುಸ್ಲಿಮರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಹಾಗೂ ರಾಜಕೀಯವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾರೆ.

ನಮ್ಮನ್ನು ಆಳಿದ ಜಾತ್ಯತೀತ / ಕೋಮುವಾದಿ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ಸರ್ಕಾರಗಳು ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಸರಿಯಾದ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಲಿಲ್ಲ. ಸರ್ಕಾರಗಳು ಇವುಗಳ ಅನುಷ್ಠಾನಕ್ಕಾಗಿ ಸೂಕ್ತ ಬಜೆಟ್ ಗಳ ಘೋಷಣೆಯನ್ನೂ ಮಾಡಲಿಲ್ಲ.

ಯಾವುದೇ ಪಕ್ಷ ಅಧಿಕಾರಕ್ಕೆ ಬಂದು ಸರ್ಕಾರ ನಡೆಸಿದರೂ ಆಯಾ ಪಕ್ಷಗಳ ಯೋಗ್ಯತೆಗೆ ತಕ್ಕಂತೆ ಮುಸ್ಲಿಮರನ್ನು ಅಭಿವೃದ್ಧಿಯಿಂದ ಹೊರಗಿಡುವ ಅಥವಾ ತಾರತಮ್ಯಮಾಡುವ ಯೋಚನೆಗಳಿಂದ ಮಾತ್ರ ಬದಲಾಗಲಿಲ್ಲ; ಇದು ಖಂಡನೀಯ.

ನಮ್ಮ ದೇಶ ಸ್ವಾತಂತ್ರ್ಯಗೊಂಡು ಇದೀಗ 78 ವರ್ಷಗಳು ಕಳೆದಿದೆ. ಆದರೆ, ಭಾರತೀಯ ಮುಸ್ಲಿಮರು ವಿಶೇಷವಾಗಿ, ಕರ್ನಾಟಕದ ಅತಿಹೆಚ್ಚು ಮುಸ್ಲಿಮರು ಬಡತನ, ನಿರುದ್ಯೋಗ, ಅನಕ್ಷರತೆಯಲ್ಲಿ ನಲುಗುತ್ತಿರುವುದು, ಕೋಮು ದೌರ್ಜನ್ಯಗಳಿಂದ ತಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಕಳೆದು ಕೊಳ್ಳುತ್ತಿರುವುದು ಶೋಚನಿಯ.

ಮುಸ್ಲಿಮರು ಎಲ್ಲಾ ಕ್ಷೆತ್ರ ಗಳಲ್ಲೂ ಹಿಂದುಳಿದಿದ್ದಾರೆ ಎಂಬ ನಗ್ನ ಸತ್ಯವನ್ನು ಡಾ.ಗೋಪಾಲ್ ಸಿಂಗ್ ವರದಿ, ಜಸ್ಟೀಸ್ ರಾಜೇಂದ್ರ ಸಾಚಾರ್ ಸಮಿತಿಯ ವರದಿ, ಜಸ್ಟೀಸ್ ರಂಗನಾಥ್ ಮಿಶ್ರ ವರದಿ, ಪ್ರೊಫೆಸರ್ ಕುಂಡು ಮುಂತಾದ ಕೇಂದ್ರ ಸರ್ಕಾರಗಳು ನೇಮಿಸಿದ ಸಮಿತಿ-ಆಯೋಗಗಳೇ ಮುಸ್ಲಿಮರ ಈ ಚಿಂತಾಜನಕ ದುಸ್ಥಿತಿಗಳನ್ನು ಬಹಿರಂಗ ಪಡೆಸಿವೆ.

ಅಲ್ಲದೆ, ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಆಯೋಗಗಳು ಸಹ ಮುಸ್ಲಿಮರು ಹಿಂದುಳಿದಿದ್ದಾರೆ ಮತ್ತು ಅಭಿವೃದ್ಧಿಯಿಂದಲೂ ವಂಚಿತರಾಗಿದ್ದಾರೆ ಎಂದು ಹೇಳಿವೆ. ಇಷ್ಟಲ್ಲದೆ, ಮುಸ್ಲಿಮರಿಗಾಗಿ ಸಂವಿಧಾನಬದ್ದವಾಗಿ ಜಾರಿಗೊಂಡಿದ್ದ ಮೀಸಲಾತಿಯನ್ನು ಸಹ ಕಿತ್ತುಕೊಳ್ಳಲಾಗಿದೆ.

ರಾಜ್ಯದಲ್ಲಿ OBC ಯ ಹಾವನೂರು, ಪ್ರೊ.ರವಿವರ್ಮ ಕುಮಾರ್ ಆಯೋಗಗಳಿಂದ ಹಿಡಿದು ಡಾ.ಸಿ.ಎಸ್.ದ್ವಾರಕನಾಥ್ ಆಯೋಗದವರೆಗೆ ಸ್ವತಂತ್ರ ನಂತರ ಕಳೆದ 78 ವರ್ಷಗಳಲ್ಲಿ ಬಂದಿರುವ ಎಲ್ಲ ಕೇಂದ್ರ, ರಾಜ್ಯ ಆಯೋಗಗಳು ಸಹ ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಗುರುತಿಸಿದೆ.

ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಆಯೋಗದ ಅಧ್ಯಯನದ ಪೂರ್ಣವರದಿಯ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿತ್ತು.

ವೀರಪ್ಪ ಮೊಯಿಲಿ ಅವರ ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗವನ್ನು ರಚಿಸಿ, ಅಂದಿನ ಅಧ್ಯಕ್ಷರಾಗಿದ್ದ ಕೆ.ರೆಹಮಾನ್ ಖಾನ್ ನೇತೃತ್ವದಲ್ಲಿ ಕರ್ನಾಟಕದ ಮುಸ್ಲಿಮರ ಸಾಮಾಜಿಕ, ಆರ್ಥಿಕ ವರದಿಯ ಆಧಾರದ ಮೇಲೆ ಮೊದಲ ಬಾರಿಗೆ ಶೇ.6ರಷ್ಟು ಮೀಸಲಾತಿಯನ್ನು ಕಲ್ಪಿಸಲಾಯಿತು.

ನಂತರ ರಾಜ್ಯದ ಮೀಸಲಾತಿ ಮಿತಿ ಶೇ.50ಕ್ಕೂ ಮೀರಿ ಹೆಚ್ಚಳವಾದ ಕಾರಣ, ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯಾದ ನಂತರ, ಮತ್ತೆ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ಹಿಂದಿನಂತೆಯೇ ಕಲ್ಪಿಸಲಾಯಿತು. ಇದೀಗ, ಮುಸ್ಲಿಮರ ಅಭಿವೃದ್ಧಿಗೆ ಒಂದಷ್ಟು ಆಸರೆಯಾಗಿದ್ದ ಆ ಮೀಸಲಾತಿಯನ್ನೂ ಸಹ ಕಿತ್ತುಕೊಳ್ಳಲಾಗಿದೆ.

ಇಂತಹ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದ, ತಾರತಮ್ಯಕ್ಕೆ ಒಳಗಾದ, ಅಭಿವೃದ್ಧಿಯಿಂದ ವಂಚನೆಗೆ ಒಳಗಾದ, ಕೋಮುವಾದಿಗಳ ದೌರ್ಜನ್ಯಕ್ಕೆ ಒಳಗಾದ ಹಾಗೂ ರಾಜಕೀಯವಾಗಿ ಸಮಾನ ಪಾಲುಸಿಗದ ಮುಸ್ಲಿಮರಾದ ನಾವು ನಮ್ಮ ಹಕ್ಕುಗಳಿಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಈ ಕೆಳಕಂಡ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಲು ನಾವು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ.

ಸರಕಾರಕ್ಕೆ ನಮ್ಮ ಹಕ್ಕೋತ್ತಾಯಗಳು:
ವಕ್ಫ್ ಮಂಡಳಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ವಕ್ಫ್ನ ಹಕ್ಕು ಮತ್ತು ಸ್ವತಂತ್ರವನ್ನು ಮೋಟುಕುಗೊಳಿಸುವ ಕೇಂದ್ರ ಸರ್ಕಾರದ ಹೊಸ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯವನ್ನು ಕೈಗೊಳ್ಳಬೇಕು.

ಒಬಿಸಿ ಮುಸ್ಲಿಂ 2B ಮೀಸಲಾತಿಯನ್ನು ಮರುಸ್ಥಾಪಿಸಬೇಕು. 4% ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕು.

ಸ್ಥಳೀಯವಾಗಿ ನಡೆಯುವ ಚುನಾವಣೆಗಳಲ್ಲಿ, ಒಬಿಸಿ ಮೀಸಲಾತಿಯಲ್ಲಿ ಪ್ರಬಲ ಜಾತಿಗಳಿಂದ ಮುಸ್ಲಿಮರು ಅವಕಾಶ ವಂಚಿತರಾಗುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಈ ಮೀಸಲಿನಲ್ಲಿ ಒಳಮೀಸಲು ತಂದು ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು.

ಅತಿ ಹಿಂದುಳಿದ ನದಾಫ್ – ಪಿಂಜಾರ ಸಮುದಾಯಗಳ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ / ಸಕ್ರಿಯಗೊಳಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು.

ರಾಜ್ಯದ ಮುಸ್ಲಿಮ್ ಲೈಸನ್ಸ್ ಗುತ್ತಿಗೆದಾರರಿಗೆ ಆಧ್ಯತೆ ಹಾಗೂ ವಿಶೇಷ ಅವಕಾಶಗಳನ್ನು ನೀಡಬೇಕು.

ವಿದೇಶ

ಡಿ.ಸಿ.ಪ್ರಕಾಶ್

“ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಭಾರತ ತಟಸ್ಥವಾಗಿಲ್ಲ ಮತ್ತು ಶಾಂತಿಯ ಪರವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉಕ್ರೇನ್‌ಗೆ ಐತಿಹಾಸಿಕ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ಪ್ರತ್ಯೇಕವಾಗಿ ಮತ್ತು ನಂತರ ಎರಡೂ ದೇಶಗಳ ನಿಯೋಗಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ನರೇಂದ್ರ ಮೋದಿ, ”ಸಂವಾದ ಮತ್ತು ರಾಜತಾಂತ್ರಿಕ ಪ್ರಯತ್ನಗಳಿಂದ ಮಾತ್ರ ಸಂಘರ್ಷವನ್ನು ಬಗೆಹರಿಸಿಕೊಳ್ಳಬಹುದು ಎಂಬುದು ಭಾರತದ ನಿಲುವಾಗಿದೆ.

ಉಕ್ರೇನ್ ಮತ್ತು ರಷ್ಯಾ ಮಾತುಕತೆಗಳಲ್ಲಿ ತೊಡಗಬೇಕು. ಅದರ ಮೂಲಕ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬೇಕು. ಶಾಂತಿ ಪ್ರಯತ್ನಗಳಿಗೆ ಪೂರ್ವಭಾವಿ ಕೊಡುಗೆಗಳನ್ನು ನೀಡಲು ಭಾರತ ಸಿದ್ಧವಾಗಿದೆ. ಈ ಸಂಘರ್ಷದಲ್ಲಿ ಭಾರತ ತಟಸ್ಥವಾಗಿಲ್ಲ. ಮೊದಲಿನಿಂದಲೂ ಅದು ಒಂದು ಕಡೆ ಇದೆ. ಅದು ಶಾಂತಿಯ ಕಡೆ. ಈ ಘರ್ಷಣೆಯಲ್ಲಿ ಮೊದಲ ಬಲಿಪಶು ಮಗುವಾಗಿರುವುದು ಹೃದಯವಿದ್ರಾವಕವಾಗಿದೆ” ಎಂದರು.

ಈ ಭೇಟಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಬಿಡುಗಡೆ ಮಾಡಿರುವ ‘ಎಕ್ಸ್’ ಪೋಸ್ಟ್ ನಲ್ಲಿ, “ಉಕ್ರೇನ್‌ಗೆ ನನ್ನ ಭೇಟಿ ಐತಿಹಾಸಿಕವಾದದ್ದು. ಭಾರತ-ಉಕ್ರೇನ್ ಸ್ನೇಹವನ್ನು ಗಾಢವಾಗಿಸುವ ಉದ್ದೇಶದಿಂದ ನಾನು ಈ ಮಹಾನ್ ರಾಷ್ಟ್ರಕ್ಕೆ ಬಂದಿದ್ದೇನೆ. ನಾನು ಅಧ್ಯಕ್ಷ ಝೆಲೆನ್ಸ್ಕಿಯೊಂದಿಗೆ ರಚನಾತ್ಮಕ ಮಾತುಕತೆ ನಡೆಸಿದ್ದೇನೆ. ಭಾರತವು ಯಾವಾಗಲೂ ಶಾಂತಿ ನೆಲೆಸಬೇಕು ಎಂದು ಬಲವಾಗಿ ನಂಬುತ್ತದೆ. ಉಕ್ರೇನ್ ಸರ್ಕಾರ ಮತ್ತು ಆ ಜನತೆಯ ಆತಿಥ್ಯಕ್ಕಾಗಿ ಧನ್ಯವಾದಗಳು” ಎಂದು ಹೇಳಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಉಕ್ರೇನ್ ನಡುವೆ 4 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಝೆಲೆನ್ಸ್ಕಿಯೊಂದಿಗಿನ ಸಭೆಯ ಬಗ್ಗೆ ಅವರ ‘ಎಕ್ಸ್’ ಪೇಜ್ ನಲ್ಲಿ, “ನಾನು ಅಧ್ಯಕ್ಷ ಝೆಲೆನ್ಸ್ಕಿಯೊಂದಿಗೆ ಬಹಳ ಫಲಪ್ರದ ಚರ್ಚೆಗಳನ್ನು ನಡೆಸಿದ್ದೇನೆ. ಭಾರತವು ಉಕ್ರೇನ್‌ನೊಂದಿಗೆ ಆರ್ಥಿಕ ಸಂಬಂಧಗಳನ್ನು ಗಾಢವಾಗಿಸಲು ಉತ್ಸುಕವಾಗಿದೆ. ಕೃಷಿ, ತಂತ್ರಜ್ಞಾನ, ವೈದ್ಯಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ನಾವು ಚರ್ಚಿಸಿದ್ದೇವೆ. ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಸಹ ಒಪ್ಪಿಕೊಂಡಿದ್ದೇವೆ. ನಾವು ಸಂಘರ್ಷಗಳ ಬಗ್ಗೆಯೂ ಚರ್ಚಿಸಿದ್ದೇವೆ. ಶಾಂತಿ ಕಾಪಾಡುವುದು ಬಹಳ ಮುಖ್ಯ. ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವುದೇ ಮಾನವೀಯತೆಗೆ ಉತ್ತಮವಾದದ್ದು” ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ, 4 BHISHM ಕ್ಯೂಬ್‌ಗಳನ್ನು (ಮೊಬೈಲ್ ಆಸ್ಪತ್ರೆಗಳು) ಉಕ್ರೇನ್ ಅಧ್ಯಕ್ಷರ ಬಳಿ ಹಸ್ತಾಂತರಿಸಲಾಯಿತು. BHISHM Cubes ಎಲ್ಲಾ ಕ್ಲಿನಿಕಲ್ ಸನ್ನಿವೇಶಗಳಿಗೆ ಸೂಕ್ತವಾದ ಮೊದಲ ಸಾಲಿನ ಆರೈಕೆ ಔಷಧಿಗಳು ಮತ್ತು ಸಲಕರಣೆಗಳೊಂದಿಗೆ ಆಂತರಿಕವಾಗಿ ವಿನ್ಯಾಸಗೊಳಿಸಲಾಗಿದೆ. ಉಕ್ರೇನ್‌ನಲ್ಲಿ ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆ ನೀಡಲು ಇವು ಸಹಾಯ ಮಾಡುತ್ತವೆ. ಇದು ಉಕ್ರೇನ್‌ಗೆ ಮಾನವೀಯ ನೆರವು ನೀಡುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಪ್ರಧಾನಿಯವರ ಮಾತುಕತೆಯ ಕುರಿತು ಕೀವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, “ಬಹಳ ವಿವರವಾದ, ಅತ್ಯಂತ ಮುಕ್ತ ಮತ್ತು ಅತ್ಯಂತ ರಚನಾತ್ಮಕ ಚರ್ಚೆ ನಡೆಯಿತು. ಭಾರತವು ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ಮುಂದುವರಿಸಬೇಕೆಂದು ಉಕ್ರೇನಿಯನ್ ಕಡೆಯವರು ಬಯಸುತ್ತಾರೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಝೆಲೆನ್ಸ್ಕಿ ನಡುವಿನ ಹೆಚ್ಚಿನ ಸಮಯ ಸಂಘರ್ಷದ ಬಗ್ಗೆ ಇತ್ತು.

ಭಾರತ ಇದುವರೆಗೆ 17 ಮಾನವೀಯ ನೆರವು ನೀಡಿದೆ. ಇಂದು ನಾವು 10 ಜನರೇಟರ್ ಸೆಟ್‌ಗಳ ಜೊತೆಗೆ 22 ಟನ್‌ಗಳಷ್ಟು ವೈದ್ಯಕೀಯ ಬೆಂಬಲ ಸಾಧನಗಳನ್ನು ಒಳಗೊಂಡಿರುವ BHISHM ಕ್ಯೂಬ್‌ಗಳನ್ನು ಹಸ್ತಾಂತರಿಸಿದ್ದೇವೆ. ಭಾರತದ ಪ್ರಧಾನಿ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಮಾತುಕತೆಗಳು ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಬಗ್ಗೆ ಕೇಂದ್ರೀಕರಿಸಿದ್ದವು. ವ್ಯಾಪಾರ, ಆರ್ಥಿಕತೆ, ರಕ್ಷಣೆ, ಔಷಧ, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ಚರ್ಚೆ ನಡೆಸಲಾಯಿತು.

1992ರಲ್ಲಿ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದ ನಂತರ ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಝೆಲೆನ್ಸ್ಕಿ ಅವರ ಅನುಕೂಲಕ್ಕೆ ತಕ್ಕಂತೆ ಭಾರತಕ್ಕೆ ಬರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ.

ರಷ್ಯಾದಿಂದ ಭಾರತವು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ಮೋದಿ ಅವರು ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ತಿಳಿಸಿದರು. ಮಾರುಕಟ್ಟೆ ಪರಿಸ್ಥಿತಿ ಏನು ಮತ್ತು ಭಾರತ ಏನು ಮಾಡಿದೆ ಎಂದು ವಿವರಿಸಿದರು. ಕಚ್ಚಾ ತೈಲವನ್ನು ಮಾರಾಟ ಮಾಡುವ ಅನೇಕ ದೇಶಗಳಿಗೆ ಪ್ರಸ್ತುತ ನಿಷೇಧ ಹೇರಲಾಗಿದೆ. ಇದರಿಂದಾಗಿ ಮಾರುಕಟ್ಟೆ ತುಂಬಾ ಬಿಗಿಯಾಗಿದೆ. ಅಂತಹ ಒತ್ತಾಯ ಏಕೆ ಇದೆ? ಒಟ್ಟಾರೆಯಾಗಿ ಅಂತರಾಷ್ಟ್ರೀಯ ಆರ್ಥಿಕತೆಯ ಲಾಭಕ್ಕಾಗಿ ಬೆಲೆಗಳು ಏಕೆ ನ್ಯಾಯಯುತ ಮತ್ತು ಸ್ಥಿರವಾಗಿರಬಾರದು ಎಂಬುದನ್ನು ವಿವರಿಸಲಾಯಿತು” ಎಂದು ಹೇಳಿದರು.

ಶಿಕ್ಷಣ

ಇನ್ನು ಮುಂದೆ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಕಪ್ಪು ಬಟ್ಟೆ ಧರಿಸಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನವದೆಹಲಿ: ಕಲೆ, ವಿಜ್ಞಾನ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಪದವಿ ಪ್ರದಾನ ಸಮಾರಂಭಕ್ಕೆ ವಿದ್ಯಾರ್ಥಿಗಳು ಕಪ್ಪು ಗೌನ್ ಮತ್ತು ಕಪ್ಪು ಟೋಪಿ ಧರಿಸುವುದು ವಾಡಿಕೆ.

ಈ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ನಿಯಂತ್ರಣದಲ್ಲಿರುವ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಮುಂದೆ ಪದವಿ ಸಮಾರಂಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಕಪ್ಪು ಬಟ್ಟೆ ಧರಿಸುವ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಿದೆ.

ಪದವಿ ಪ್ರದಾನ ಸಮಾರಂಭದಲ್ಲಿ ಕಪ್ಪು ಬಟ್ಟೆ ಧರಿಸುವುದು ಐರೋಪ್ಯ ರಾಷ್ಟ್ರಗಳಲ್ಲಿ ಆರಂಭವಾದ ಸಂಸ್ಕೃತಿಯಾಗಿದ್ದು, ಬ್ರಿಟಿಷರು ತಮ್ಮ ವಸಾಹತುಶಾಹಿ ರಾಷ್ಟ್ರಗಳಲ್ಲಿ ಈ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಆದ್ದರಿಂದ, ಈ ವಸಾಹತು ಪದ್ಧತಿಯನ್ನು ಬದಲಾಯಿಸಬೇಕು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನು ಮುಂದೆ ಪದವಿ ಪ್ರದಾನ ಸಮಾರಂಭದಲ್ಲಿ ಕಪ್ಪುಬಣ್ಣದ ಬದಲು ಸಾಂಪ್ರದಾಯಿಕ ಭಾರತೀಯ ಬಟ್ಟೆಗಳನ್ನು ಧರಿಸಬಹುದೆಂದು ಹಾಗೂ ವೈದ್ಯಕೀಯ ಸಂಸ್ಥೆಗಳು ನೆಲೆಗೊಂಡಿರುವ ರಾಜ್ಯದ ಸಂಪ್ರದಾಯದ ಪ್ರಕಾರ, ಪದವಿ ಸಮಾರಂಭದ ಉಡುಪನ್ನು ನಿರ್ಧರಿಸಿಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ದೇಶ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಅವರು ರಾಜಧಾನಿ ದೆಹಲಿಯ ವೀರಭೂಮಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ರೀತಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹಿಂದೆಂದೂ ಮಾಡದ ಕೆಲಸಗಳನ್ನು ಮಾಡಿ ಭಾರತವನ್ನು 21ನೇ ಶತಮಾನಕ್ಕೆ ತರಲು ಕೊಡುಗೆ ನೀಡಿದ್ದಾರೆ.

ಈ ಕುರಿತು ಖರ್ಗೆ ಅವರು ಪ್ರಕಟಿಸಿರುವ ‘ಎಕ್ಸ್’ ಸೈಟ್ ಪೋಸ್ಟ್‌ನಲ್ಲಿ, “ದೇಶವು ಇಂದು ಸಾಮರಸ್ಯ ದಿನವಾಗಿ ಆಚರಿಸುತ್ತಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭಾರತದ ಮಹಾನ್ ಪುತ್ರ. ಕೋಟ್ಯಂತರ ಭಾರತೀಯರಿಗೆ ಭರವಸೆಯ ಬೆಳಕನ್ನು ಬೆಳಗಿದವರು” ಎಂದು ಹೇಳಿದ್ದಾರೆ.

“18 ವರ್ಷ ವಯಸ್ಸಿನವರೂ ಮತದಾನ ಮಾಡುವಂತೆ ವಯೋಮಿತಿಯನ್ನು ಇಳಿಸಿದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿದ್ದು, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ, ಗಣಕೀಕರಣ ಯೋಜನೆಗಳು, ಶಾಂತಿ ಒಪ್ಪಂದಗಳನ್ನು ಅನುಸರಿಸುವುದು, ಮಹಿಳೆಯರ ಸಬಲೀಕರಣ, ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮ ಮತ್ತು ಅಂತರ್ಗತ ಶಿಕ್ಷಣಕ್ಕೆ ಒತ್ತು ನೀಡುವ ಹೊಸ ಶಿಕ್ಷಣ ನೀತಿಯಂತಹ ಅವರ ಅನೇಕ ಗಮನಾರ್ಹ ಉಪಕ್ರಮಗಳು ದೇಶದಲ್ಲಿ ಬದಲಾವಣೆಗಳನ್ನು ತಂದಿದೆ.

ಭಾರತ ರತ್ನ, ರಾಜೀವ್ ಗಾಂಧಿ ಅವರ ಜನ್ಮದಿನದಂದು ನಾವು ಅವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸುತ್ತೇವೆ” ಎಂದೂ ಅವರು ಹೇಳಿದ್ದಾರೆ.

ದೇಶ

ರಕ್ಷಾ ಬಂಧನದ ಹಿನ್ನೆಲೆಯಲ್ಲಿ ರಾಣಿ ಕರ್ಣಾವತಿ-ರಾಜ ಹುಮಾಯೂನ್ ಕಥೆಯನ್ನು ಸುಧಾ ಮೂರ್ತಿ ಅವರು ಹಂಚಿಕೊಂಡಿರುವ ವಿಡಿಯೋಗೆ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ರಾಜ್ಯಗಳಲ್ಲಿ ಅತ್ಯಂತ ಜನಪ್ರಿಯ ಹಬ್ಬವಾದ ರಕ್ಷಾ ಬಂಧನವನ್ನು ನಿನ್ನೆ (ಆಗಸ್ಟ್ 19) ಆಚರಿಸಲಾಯಿತು. ಇದು ಸಹೋದರ – ಸಹೋದರಿಯರ ನಡುವಿನ ಪ್ರೀತಿಯ ಬಾಂಧವ್ಯವನ್ನು ವ್ಯಕ್ತಪಡಿಸುವ ಸಲುವಾಗಿ ಇದನ್ನು ಪ್ರತಿ ವರ್ಷವೂ ಆಚರಿಸಲಾಗುತ್ತದೆ.

ಪ್ರಧಾನಿ ಮೋದಿ, ಸಂಸದ ರಾಹುಲ್ ಗಾಂಧಿ ಸೇರಿದಂತೆ ಹಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಾ ಬಂಧನದ ಶುಭಾಶಯಗಳನ್ನು ಹಂಚಿಕೊಂಡಿದ್ದರು. ಆ ರೀತಿಯಲ್ಲಿ, ರಾಜ್ಯಸಭಾ ಸಂಸದೆ ಹಾಗೂ ಇನ್ಫೋಸಿಸ್ ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ರಕ್ಷಾ ಬಂಧನದ ಕುರಿತು ಮಾತನಾಡುವ ವಿಡಿಯೋವೊಂದನ್ನು ತಮ್ಮ ‘ಎಕ್ಸ್’ ಪೇಜ್ ನಲ್ಲಿ ಹಂಚಿಕೊಂಡಿದ್ದರು.

ಅದರಲ್ಲಿ, 16ನೇ ಶತಮಾನದ ರಾಣಿ ಕರ್ಣಾವತಿ ತನ್ನ ಶತ್ರುಗಳಿಂದ ದಾಳಿಗೊಳಗಾದಾಗ ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ಸಣ್ಣ ಹಗ್ಗವೊಂದನ್ನು ಕಳುಹಿಸಿ, ತನ್ನನ್ನು ಕಿರಿಯ ಸಹೋದರಿ ಎಂದು ಭಾವಿಸಿ ಸಹಾಯ ಮಾಡುವಂತೆ ಕೇಳಿಕೊಂಡಳು ಎಂದು ಸುಧಾ ಮೂರ್ತಿ ವಿಡಿಯೊದಲ್ಲಿ ಉಲ್ಲೇಖಿಸಿದ್ದರು.

ಈ ಪೋಸ್ಟ್ ಅಡಿಯಲ್ಲಿ ಕಾಮೆಂಟ್ ಮಾಡಿದ ಅನೇಕರು, ರಕ್ಷಾ ಬಂಧನದ ಇತಿಹಾಸವು ಮಹಾಭಾರತದ ಕಾಲಕ್ಕೆ ಸೇರಿದ್ದು, ಶಿಶುಪಾಲನನ್ನು ಕೊಲ್ಲಲು ಕೃಷ್ಣನು ಸುದರ್ಶನ ಚಕ್ರವನ್ನು ಬಳಸಿದಾಗ, ಅದು ಅವರ ಬೆರಳನ್ನು ಕತ್ತರಿಸಿತು, ದ್ರೌಪದಿ ತಕ್ಷಣವೇ ಸಣ್ಣ ಬಟ್ಟೆಯಿಂದ ಗಾಯವನ್ನು ಕಟ್ಟಿದರು ಅದುವೆ ನಂತರ ರಕ್ಷಾ ಬಂಧನವಾಯಿತು ಎಂದು ಸೂಚಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಧಾ ಮೂರ್ತಿ, “ರಕ್ಷಾ ಬಂಧನದ ಬಗ್ಗೆ ನಾನು ಹಂಚಿಕೊಂಡ ಕಥೆಯು ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ನಾನು ವಿಡಿಯೊದಲ್ಲಿ ಹೇಳಿದಂತೆ, ಇದು ಈಗಾಗಲೇ ಭೂಮಿಯ ಸಂಪ್ರದಾಯವಾಗಿದೆ. ರಕ್ಷಾ ಬಂಧನದ ಹಿಂದಿನ ಸುಂದರವಾದ ಸಂಕೇತಗಳ ಬಗ್ಗೆ ನಾನು ಬೆಳೆದಾಗ ಕಲಿತ ಅನೇಕ ಕಥೆಗಳಲ್ಲಿ ಒಂದನ್ನು ಹೈಲೈಟ್ ಮಾಡುವುದೆ ನನ್ನ ಉದ್ದೇಶವಾಗಿತ್ತು. ರಕ್ಷಾ ಬಂಧನ ಬಹಳ ಪ್ರಾಚೀನವಾದ ಸಂಪ್ರದಾಯ” ಎಂದು ಹೇಳಿದ್ದಾರೆ.

ಉದ್ಯೋಗ ದೇಶ

ನವದೆಹಲಿ: ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು, ಉಪ ಕಾರ್ಯದರ್ಶಿಗಳು ಮತ್ತು ಇತರ ಪ್ರಮುಖ ಹುದ್ದೆಗಳನ್ನು ಐಎಎಸ್, ಐಪಿಎಸ್ ಮುಂತಾದ UPSC ಮೂಲಕ ಉತ್ತೀರ್ಣರಾದವರನ್ನು ಗ್ರೂಪ್ ಎ ಸೇವಾ ಅಧಿಕಾರಿಗಳ ಮೂಲಕವೇ ಭರ್ತಿ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಕೇಂದ್ರ ಸಚಿವಾಲಯಗಳಲ್ಲಿ ಖಾಲಿಯಿರುವ 10 ಜಂಟಿ ಕಾರ್ಯದರ್ಶಿಗಳು ಮತ್ತು 35 ನಿರ್ದೇಶಕರು / ಅಧೀನ ಕಾರ್ಯದರ್ಶಿಗಳ ಹುದ್ದೆಗಳನ್ನು ಸರ್ಕಾರೇತರ ವಲಯದ ತಜ್ಞರಿಂದ ತುಂಬಲು (Lateral Entry) ಅರ್ಜಿಗಳನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿತ್ತು.

ಇದನ್ನು ವಿರೋಧಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮ ‘ಎಕ್ಸ್’ ಸೈಟ್‌ನಲ್ಲಿ, “ಲ್ಯಾಟರಲ್ ಎಂಟ್ರಿಯು ದಲಿತರು, ಹಿಂದುಳಿದ ಮತ್ತು ಆದಿವಾಸಿಗಳ ಮೇಲಿನ ದಾಳಿಯಾಗಿದೆ. ಬಿಜೆಪಿಯ ತಿರುಚಿದ ರಾಮರಾಜ್ಯವು ಸಂವಿಧಾನವನ್ನು ನಾಶಪಡಿಸಲು ಮತ್ತು ದೀನದಲಿತರಿಂದ ಮೀಸಲಾತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಇಂದು ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ.

ಇದೇ ವೇಳೆ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ಆದೇಶವನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್ ಗೆ ಹೈಕೋರ್ಟ್ ಸೂಚಿಸಿದ್ದು ಈ ಮೂಲಕ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ನೀಡಿದರು.

ಸಾಮಾಜಿಕ ಹೋರಾಟಗಾರರಾದ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ.ಅಬ್ರಹಾಂ ಅವರು ಸಲ್ಲಿಸಿರುವ ದೂರುಗಳ ಮುಂದಿನ ವಿಚಾರಣೆಯನ್ನು ಆಗಸ್ಟ್ 20 ಮತ್ತು 21ರಂದು ವಿಶೇಷ ನ್ಯಾಯಾಲಯದಲ್ಲಿ ಕ್ರಮವಾಗಿ ನಡೆಯಲಿದೆ ಎಂದು ಅರ್ಜಿದಾರರ ಪರ ವಕೀಲರು ಸೂಚಿಸಿದ ನಂತರ ಮಧ್ಯಂತರ ಆದೇಶವನ್ನು ನೀಡಲಾಗಿದೆ. ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದೂರುದಾರರಾದ ಪ್ರತಿವಾದಿಗಳಿಗೆ ಕಾಲಾವಕಾಶ ನೀಡಲಾಗಿದೆ.

ಉದ್ಯೋಗ ದೇಶ ಶಿಕ್ಷಣ

ಚೆನ್ನೈ: ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯವನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಅಲ್ಲದೇ ಸರ್ಕಾರದ ಆಡಳಿತವನ್ನು ಆರ್‌ಎಸ್‌ಎಸ್‌ ಅಧೀನಕ್ಕೆ ನೀಡವ ಬಿಜೆಪಿ ಸರ್ಕಾರದ ಷಡ್ಯಂತ್ರವನ್ನು ವಿಫಲಗೊಳಿಸಬೇಕು” ಎಂದು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಹೇಳಿದ್ದಾರೆ.

ಈ ಕುರಿತು, ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ, ಸಾಮಾಜಿಕ ನ್ಯಾಯವನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಸರ್ಕಾರಿ ಆಡಳಿತದಲ್ಲಿ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದ ಖಾಸಗಿ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಸರ್ಕಾರಿ ಕಾರ್ಯದರ್ಶಿಗಳಾಗಿ, ಮತ್ತು ಉನ್ನತ ಅಧಿಕಾರಿಗಳಾಗಿ ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ಖಾಸಗಿ ವಲಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು (CEO) ನೇರವಾಗಿ ಐಎಎಸ್ ಅಧಿಕಾರಿಗಳಾಗಿ ನೇಮಿಸಿಕೊಳ್ಳುವ ಯೋಜನೆಯನ್ನು 2018ರಲ್ಲಿ ಪರಿಚಯಿಸಲಾಯಿತು. ಈ ಯೋಜನೆಯಲ್ಲಿ ಇದುವರೆಗೆ 63 ಜನರನ್ನು ನೇಮಿಸಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇತ್ತೀಚೆಗೆ ಇದೇ ಯೋಜನೆಯಡಿಯಲ್ಲಿ ಇನ್ನೂ 45 ಜನರನ್ನು ನೇಮಿಸಿಕೊಳ್ಳಲು ಜಾಹೀರಾತನ್ನು ಬಿಡುಗಡೆ ಮಾಡಿದೆ.

ಈ ಯೋಜನೆಯು ಕಾನೂನು ಉಲ್ಲಂಘನೆ ಮಾತ್ರವಲ್ಲ, ಸಂವಿಧಾನದ ಮೇಲಿನ ಕ್ರೂರ ದಾಳಿಯೂ ಆಗಿದೆ. ಈ ಮೂಲಕ ಸರ್ಕಾರದ ಆಡಳಿತವನ್ನು ಸಂಪೂರ್ಣವಾಗಿ ಆರ್‌ಎಸ್‌ಎಸ್‌ ಅಧೀನಕ್ಕೆ ಕೊಡಲು ಸಂಚು ರೂಪಿಸುತ್ತಿರುವುದು ಅತ್ಯಂತ ಖಂಡನೀಯವಾದದ್ದು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿನ ಪ್ರಮುಖ ಹುದ್ದೆಗಳಿಗೆ ‘ಲ್ಯಾಟರಲ್ ಎಂಟ್ರಿ’ ಮೂಲಕ ಮಾಡುತ್ತಿರುವ ನೇಮಕಾತಿಯಿಂದ SC, ST, OBC ಪಂಗಡದ ಮೀಸಲಾತಿಯನ್ನು ಕೇಂದ್ರ ಸರ್ಕಾರ ಬಹಿರಂಗವಾಗಿ ಕಿತ್ತುಕೊಳ್ಳುತ್ತಿದೆ.

ದೇಶದ ಅತ್ಯುನ್ನತ ಅಧಿಕಾರ ಸೇರಿದಂತೆ ಎಲ್ಲ ಉನ್ನತ ಹುದ್ದೆಗಳಲ್ಲಿ ಪರಿಶಿಷ್ಟ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಹೇಳುತ್ತಲೇ ಬಂದಿದ್ದೇನೆ. ಇದನ್ನು ಸುಧಾರಿಸುವ ಬದಲು, ‘ಲ್ಯಾಟರಲ್ ಎಂಟ್ರಿ’ ಮೂಲಕ ಪರಿಶಿಷ್ಟ ವರ್ಗದವರನ್ನು ಉನ್ನತ ಸ್ಥಾನಗಳಿಂದ ಇನ್ನಷ್ಟು ದೂರ ತಳ್ಳಲಾಗುತ್ತಿದೆ.

ಈ ಕಾರ್ಯವು UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪ್ರತಿಭಾವಂತ ಯುವಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಕಾರ್ಯವಾಗಿದೆ. ಮತ್ತು ‘ಇದು ತುಳಿತಕ್ಕೊಳಗಾದವರ ಸಾಮಾಜಿಕ ನ್ಯಾಯದ ಮೇಲೆ ಕೇಂದ್ರ ಸರ್ಕಾರದ ದಾಳಿಯಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿರುವುದು ಗಮನಿಸಬೇಕಾದ ಸಂಗತಿ.

“ಇಂಡಿಯಾ ಮೈತ್ರಿಕೂಟ”ದ ಪಕ್ಷಗಳು ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು, ಒಗ್ಗಟ್ಟಿನಿಂದ ಹೋರಾಡುವ ಮೂಲಕ, ಸರ್ಕಾರದ ಆಡಳಿತವನ್ನು ಆರ್‌ಎಸ್‌ಎಸ್‌ ಅಧೀನಕ್ಕೆ ನೀಡಲು ಮುಂದಾಗುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಷಡ್ಯಂತ್ರವನ್ನು ವಿಫಲಗೊಳಿಸಬೇಕು” ಎಂದು ಹೇಳಿದ್ದಾರೆ.