MUDA: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್; ಆಗಸ್ಟ್ 29ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಇಂದು ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ.
ಇದೇ ವೇಳೆ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ಆದೇಶವನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್ ಗೆ ಹೈಕೋರ್ಟ್ ಸೂಚಿಸಿದ್ದು ಈ ಮೂಲಕ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ನೀಡಿದರು.
ಸಾಮಾಜಿಕ ಹೋರಾಟಗಾರರಾದ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ.ಅಬ್ರಹಾಂ ಅವರು ಸಲ್ಲಿಸಿರುವ ದೂರುಗಳ ಮುಂದಿನ ವಿಚಾರಣೆಯನ್ನು ಆಗಸ್ಟ್ 20 ಮತ್ತು 21ರಂದು ವಿಶೇಷ ನ್ಯಾಯಾಲಯದಲ್ಲಿ ಕ್ರಮವಾಗಿ ನಡೆಯಲಿದೆ ಎಂದು ಅರ್ಜಿದಾರರ ಪರ ವಕೀಲರು ಸೂಚಿಸಿದ ನಂತರ ಮಧ್ಯಂತರ ಆದೇಶವನ್ನು ನೀಡಲಾಗಿದೆ. ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದೂರುದಾರರಾದ ಪ್ರತಿವಾದಿಗಳಿಗೆ ಕಾಲಾವಕಾಶ ನೀಡಲಾಗಿದೆ.