ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಅನೈತಿಕ ಪೋಲಿಸ್‌ ಗಿರಿ Archives » Dynamic Leader
November 23, 2024
Home Posts tagged ಅನೈತಿಕ ಪೋಲಿಸ್‌ ಗಿರಿ
ರಾಜ್ಯ

ಮೊನ್ನೆ ಪೊಲೀಸರ ಮೇಲೆ ಹಲ್ಲೆ; ಈಗ ಪತ್ರಕರ್ತರ ಮೇಲೆ ಗೂಂಡಾಗಿರಿ. ಈ ಅಮಾನವೀಯ, ಸಂವಿಧಾನ ವಿರೋಧಿ ಕಾನೂನು ಬಾಹಿರ ಘಟನೆಗಳು ನಡೆದದ್ದು ಮುಸ್ಲಿಮ್ ಎಂಬ ಗುಮಾನಿಯ (… ಮುಸ್ಲಿಮ್ ಆಗಿದ್ದರೆ..!? ) ಮೇಲೆ ಮಾತ್ರ. ಕೋಮುವಾದಿ(ವ್ಯಾದಿ)ಗಳ ಅನೈತಿಕ ಪೋಲಿಸ್‌ ಗಿರಿಯನ್ನು ತಡೆಯುವ ನಿಟ್ಟಿನಲ್ಲಿ, ರಾಜ್ಯ ಗೃಹ ಇಲಾಖೆಯು, ಆ್ಯಂಟಿ ಕಮ್ಯೂನಲ್ ವಿಂಗನ್ನು ರಚನೆ ಮಾಡಿತ್ತು. ಇದು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾದಂತಿದೆ ಎಂದು ಕರ್ನಾಟಕ ಮುಸ್ಲಿಮ್ ಯೂನಿಟಿಯ ರಾಜ್ಯಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ, ಕೋಮುವಾದಿಗಳ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ಎಗ್ಗಿಲ್ಲದೆ ಮಿತಿಮೀರಿ ನಡೆಯುತ್ತಿದ್ದವು. ಇದಕ್ಕೆ ಸಹಕಾರಿ ಎಂಬಂತೆ ಕೆಲ ಅಧಿಕಾರಿಗಳು ಸಹ ಸಾತ್ ನೀಡುತ್ತಿದ್ದದ್ದು ಬಹಿರಂಗಗೊಂಡಿದೆ. ಇಂತಹ ಕಾನೂನು ಬಾಹಿರ ಕೃತ್ಯಗಳ ಕಡಿವಾಣಕ್ಕೆ, ಕಾಂಗ್ರೆಸ್ ಪಕ್ಷ, ತಾನು ಆಡಳಿತಕ್ಕೆ ಬಂದರೆ ಇಂತಹ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕುವುದಾಗಿ ಆಶ್ವಾಸನೆ ನೀಡಿತ್ತು.

ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಈ ರೀತಿಯ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ, ಆಂಟಿ ಕಮ್ಯುನಲ್ ವಿಂಗ್ ಅನ್ನು ರಚಿಸಿತು. ಆದರೆ, ಈ ವಿಂಗ್‌ನ ಕಾರ್ಯವೈಖರಿ ಮತ್ತು ಪರಿಣಾಮಗಳು ಮಾತ್ರ ಈವರೆಗೆ ಶೂನ್ಯವೆ ಆಗಿದೆ. ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಯ ಅಧಿಕೃತ ವರದಿಗಾರರಾದ ಅಭಿಜಿತ್ ಅವರ ಮೇಲೆ, ಗೂಂಡಾಗಿರಿ ನಡೆಸಿರುವ ಕೋಮುವಾದಿಗಳ ವಿರುದ್ಧ, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಖಾಸಿಂ ಸಾಬ್ ಆಗ್ರಹಿಸಿದ್ದಾರೆ.

ಈ ವಿಂಗ್ ಜಾರಿಗೆ ಬಂದ ನಂತರವೂ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂಬ ಸತ್ಯವು ಇದರ ಸೀಮಿತತೆ ಮತ್ತು ನಿಸ್ಕ್ರಿಯತೆಯನ್ನು ಸೂಚಿಸುತ್ತದೆ. ಮುರುಡೇಶ್ವರ ಬೀಚ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ, ಬೆಂಗಳೂರಿನಲ್ಲಿ ಬಿಎಂಟಿಸಿಯ ಮುಸ್ಲಿಮ್ ನಿರ್ವಾಹಕರ ಟೋಪಿಯನ್ನು ಬಲವಂತವಾಗಿ ತೆಗೆಸಿದ್ದು ಸೇರಿದಂತೆ, ಕೋಮುವಾದಿ ಪುಂಡಾಟಗಳು ಮೊದಲಿನಂತೆಯೇ ಮುಂದುವರಿದಿವೆ.

ನೈತಿಕ ಪೊಲೀಸ್ ಗಿರಿ ಮಾಡಿದರೆ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಜಿಲ್ಲೆಗೆ ಕೆಟ್ಟ ಹೆಸರು ತರಲು ಕೋಮುವಾದಿ ಶಕ್ತಿಗಳು ಉದ್ದೇಶಪೂರ್ವಕವಾಗಿ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದಾರೆ.

ಇಂತಹ ದಬ್ಬಾಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಈ ಸ್ಪಷ್ಟನೆಗಳು ಸ್ವಾಗತಾರ್ಹವೆ. ಆದರೆ, ಈ ವಿಂಗ್ ಅನ್ನು ಶಕ್ತ ಸಕ್ರಿಯಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳೇನು ಎಂಬುದು ಪ್ರಶ್ನೆ.

ಕೂಡಲೇ ಈ ವಿಂಗ್ ಅನ್ನು ಸಕ್ರಿಯಗೊಳಿಸುವ ಕುರಿತು ಮತ್ತಷ್ಟು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು; ಕೋಮು ಗೂಂಡಾಗಿರಿಗಳನ್ನು ನಿಲ್ಲಿಸಬೇಕು ಎಂದು ಖಾಸಿಂ ಸಾಬ್ ಸರ್ಕಾರವನ್ನು ಆಗ್ರಹಿಸಿದ್ದಾರೆ.