ನವದೆಹಲಿ: ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವ ಸಲುವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯಲಿಂಗಿಗಳನ್ನು ನಿಷೇಧಿಸಿ ಕ್ರಮ ಕೈಗೊಂಡಿದೆ.
ಪುರುಷರಂತೆ ಮಹಿಳೆಯರೂ ಕ್ರಿಕೆಟ್ ಆಡುತ್ತಿದ್ದಾರೆ. ಪುರುಷರಿಗೆ ಸರಿಸಮನಾಗಿ ಪದಕಗಳನ್ನೂ ಗೆಲ್ಲುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ತೃತೀಯಲಿಂಗಿಗಳು ಮಹಿಳಾ ಕ್ರಿಕೆಟ್‌ನಲ್ಲಿ ಆಡದಂತೆ ಐಸಿಸಿ ನಿಷೇಧ ಹೇರಿದೆ. ಐಸಿಸಿ ಕಳೆದ 9 ತಿಂಗಳಿಂದ ಈ ಬಗ್ಗೆ ವಿವಿಧ ತಜ್ಞರೊಂದಿಗೆ ಸಮಾಲೋಚನೆ ನಡೆಸಿದೆ.
ಇದರ ಬಗ್ಗೆ ಮಾತನಾಡಿದ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡಿಸ್ (Geoff Allardice), “ಲಿಂಗ ಅರ್ಹತಾ ಮಾನದಂಡಗಳಲ್ಲಿನ ಬದಲಾವಣೆಯು ವ್ಯಾಪಕವಾದ ಸಮಾಲೋಚನೆಯ ನಂತರ ತೆಗೆದುಕೊಂಡ ನಿರ್ಧಾರವಾಗಿದೆ. ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನ ಸಮಗ್ರತೆಯನ್ನು ಕಾಪಾಡಲು ಮತ್ತು ಆಟಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾಳಜಿ ವಹಿಸಲಾಗಿದೆ” ಎಂದು ಹೇಳಿದರು.
ಐಸಿಸಿ ಕೈಗೊಂಡಿರುವ ಈ ಕ್ರಮದಿಂದಾಗಿ ಮೊದಲ ಟ್ರಾನ್ಸ್‌ಜೆಂಡರ್ ಕ್ರಿಕೆಟಿಗರಾಗಿ ಇತಿಹಾಸ ನಿರ್ಮಿಸಿದ ಡೇನಿಯಲ್ ಮೆಕ್‌ಗಾಹೆ (Danielle McGahey) ಇನ್ನು ಮುಂದೆ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆದ ಮೆಕ್‌ಗಾಹೆ ಕೆನಡಾದ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ.