ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕನ್ನಡ ಚಳುವಳಿ Archives » Dynamic Leader
November 25, 2024
Home Posts tagged ಕನ್ನಡ ಚಳುವಳಿ
ಬೆಂಗಳೂರು ರಾಜ್ಯ

ಬೆಂಗಳೂರು: ಮಾಜಿ ಮಹಾಪೌರ, ನಾಡೋಜ ಡಾ.ಜಿ.ನಾರಾಯಣ ಜನ್ಮಶತಮಾನೋತ್ಸವವನ್ನು ದಿನಾಂಕ: 05.02.2023 ರಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಜಂಟಿಯಾಗಿ ಘೋಷಿಸಿದೆ.  

 ಜಿ.ನಾರಾಯಣ:
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿಯಲ್ಲಿ ಜನಿಸಿದ ಜಿ.ನಾರಾಯಣ ಅವರು ಕನ್ನಡದ ವಿದ್ವಾಂಸರಾಗಿ, ಕನ್ನಡ ನಾಡು ಕಂಡ ಮಹತ್ವದ ಆಡಳಿತಗಾರರಲ್ಲಿ ಒಬ್ಬರಾಗಿದ್ದರು. ಆಡಳಿತ ಮತ್ತು ರಾಜಕೀಯದಲ್ಲಿದ್ದರೂ ಅವರು ವಿವಾದಾತೀತರೆನಿಸಿದ್ದರು.

ಶಾಲೆಯಿಂದ ಹೊರಬಿದ್ದ ನಾರಾಯಣರು ತಮ್ಮ ಜೀವನವನ್ನು ದೇಶ ಸೇವೆಗೆ ಮುಡಿಪುಗೊಳಿಸಿದರು. ಮದ್ದೂರಿನ ವೀರಣ್ಣಗೌಡರ ಪ್ರಭಾವದ ಆಕರ್ಷಣೆಗೆ ಒಳಗಾದ ನಾರಾಯಣರು ಅವರೊಡನೆ ಸ್ವಾತಂತ್ರ್ಯ ಹೋರಾಟದ ಕೆಲಸದಲ್ಲಿ ಭಾಗಿಯಾದರು. ಶಿವಪುರದ ಸತ್ಯಾಗ್ರಹದಲ್ಲಿ ಭಾಗಿಯಾದ ನಂತರದಲ್ಲಿ ಸಾಹುಕಾರ್ ಚೆನ್ನಯ, ಕೆಂಗಲ್ ಹನುಮಂತಯ್ಯ ಅಂತಹ ಹಿರಿಯರ ಪರಿಚಯ ಒಡನಾಟಗಳು ಅವರಿಗೆ ದೊರಕಿದವು. ಪೂನಾದ ಬಳಿ ಉದಲಿ ಎಂಬಲ್ಲಿಗೆ ಹೋಗಿ ಖಾದಿ ಗ್ರಾಮೋದ್ಯೋಗದ ಬಗ್ಗೆ ತರಬೇತಿ ಪಡೆದು ಬಂದರು.

ಚಾಮರಾಜಪೇಟೆಯಲ್ಲಿ ತಮ್ಮದೇ ಆದ ಮುದ್ರಣಾಲಯ ಆರಂಭಿಸಿದರು. ಅಂದಿನ ದಿನದಲ್ಲಿ ಕಾಂಗ್ರೆಸ್ ಪತ್ರಿಕೆಯನ್ನು ಅವರೇ ಸಂಪಾದಿಸುತ್ತಿದ್ದರು. ‘ವಿನೋದ’ ಹಾಸ್ಯ ಮಾಸಪತ್ರಿಕೆ ಅವರ ಮಹತ್ವದ ಕೊಡುಗೆಗಳಲ್ಲೊಂದು. ಆ ಪತ್ರಿಕೆ ಅಂದಿನ ದಿನಗಳಲ್ಲಿ ಬಹು ಜನಪ್ರಿಯಗೊಂಡು ನಾಡಿಗೇರ ಕೃಷ್ಣರಾವ್, ಶ್ರೀನಿವಾಸ ವೈದ್ಯ, ಎಚ್.ಎಲ್.ಕೇಶವಮೂರ್ತಿ, ಅನಂತ ಕಲ್ಲೋಳ ಅಂತಹ ಮಹಾನ್ ಪ್ರತಿಭೆಗಳ ಹೊರಹೊಮ್ಮುವಿಕೆಗೆ ಕಾರಣೀಭೂತವೆನಿಸಿತ್ತು.

ಜಿ. ನಾರಾಯಣರು 1964ರ ಅವಧಿಯಲ್ಲಿ ಬೆಂಗಳೂರಿನ ಮೇಯರ್ ಆಗಿ, 1969ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, 1987ರಲ್ಲಿ ಕರ್ನಾಟಕ ಪ್ರೆಸ್ ಅಕಾಡೆಮಿ ಅಧ್ಯಕ್ಷರಾಗಿ, 1992ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಲ್ಲಿಸಿರುವ ಸೇವೆ ಸ್ಮರಣೀಯವಾದುದು. ತಾವರೆ ಎಲೆ ಕೆಸರು ನೀರುಗಳನ್ನು ಹೇಗೆ ಅಂಟಿಸಿಕೊಳ್ಳುವುದಿಲ್ಲವೋ ಹಾಗೆ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೆಸರಾದರೇ ವಿನಹ ಆಪಾದನೆ, ವಿವಾದಗಳಿಗೆ ಎಂದೂ ಸಿಲುಕಲಿಲ್ಲ. ಸಾಹಿತ್ಯದಲ್ಲಿ ಅವರು ಸೇವೆ ಮಾಡಿದ್ದಾರಾದರೂ ಅವರು ಸಾಂಸ್ಕೃತಿಕ ವಲಯದಲ್ಲಿ ಹೆಚ್ಚು ತೊಡಗಿಕೊಂಡಿದ್ದರಿಂದ ಕನ್ನಡದ ಮಹಾನ್ ಸಾಹಿತಿಗಳ ಸಾನ್ನಿಧ್ಯ ಅವರಿಗೆ ನಿರಂತರವಾಗಿ ಲಭ್ಯವಾಗಿತ್ತು. ಆಕರ್ಷಣೀಯ ವ್ಯಕ್ತಿತ್ವದ ನಾರಾಯಣರು ತಮ್ಮ ಸಮಂಜಸ ನಿಲುವುಗಳು, ಗಾಂಭೀರ್ಯ, ಆಕರ್ಷಕ ವ್ಯಕ್ತಿತ್ವಗಳಿಂದ ಎಲ್ಲಾ ಜನರಿಗೂ ಪ್ರಿಯರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟು ಸರ್ಕಾರದಿಂದ ಸೂಕ್ತ ಬೆಂಬಲಗಳು ಪರಿಷತ್ತಿಗೆ ದೊರಕುವಂತೆ ಮಾಡಿ ಸಾಹಿತ್ಯ ಪರಿಷತ್ತು ಉತ್ತಮ ಕೆಲಸ ಮಾಡುವಲ್ಲಿ ಜಿ.ನಾರಾಯಣರು ವಹಿಸಿದ ಪಾತ್ರ ಮಹತ್ವಪೂರ್ಣವಾದುದು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವರು ಅಧ್ಯಕ್ಷರಾಗಿದ್ದಾಗ ನಡೆಸಿದ ಮಹತ್ವಪೂರ್ಣ ಕಾಯಕಗಳಲ್ಲಿ ಜಾನಪದ ತಜ್ಞರ ಭಾಗವಹಿಕೆಯಲ್ಲಿ ಮೂಡಿಸಿದ ‘ಕರ್ನಾಟಕ ಜಾನಪದ ಲೋಕ’ದಂತಹ ಕೃತಿಗಳು ಈಗಲೂ ಜನಪ್ರಿಯವಾಗಿವೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷತೆಯನ್ನೂ ಅಲಂಕರಿಸಿದ್ದ ನಾರಾಯಣರು ಈ ಲೋಕವನ್ನಗಲುವ ಸಂದರ್ಭದವರೆಗೆ ‘ಜಾನಪದ ಲೋಕ’ ಟ್ರಸ್ಟಿನ ಅಧ್ಯಕ್ಷರಾಗಿದ್ದರು.

ಬಿ.ಎಂ.ಶ್ರೀ.ಪ್ರತಿಷ್ಠಾನ’, ‘ಸಾಹಿತ್ಯ ಸಂವರ್ಧಕ ಟ್ರಸ್ಟ್’, ‘ಜಾನಪದ ಲೋಕ’ ಮುಂತಾದ ಅನೇಕ ಸಂಸ್ಥೆಗಳ ದತ್ತಿಗಳ ನಿರ್ವಹಣೆ ಕೂಡಾ ಜಿ.ನಾರಾಯಣರ ತೆಕ್ಕೆಯಲ್ಲಿದ್ದು ಅವರು ಹಲವಾರು ಪ್ರತಿಷ್ಠಿತ ಸ್ಥಾನಗಳಲ್ಲಿದ್ದಾಗಿಯೂ ಸಾರ್ವಜನಿಕ ಜೀವನದಲ್ಲಿ ಗಳಿಸಿದ ಉತ್ತಮ ಹೆಸರಿಗೆ ದ್ಯೋತಕವಾಗಿವೆ. ಜಿ.ನಾರಾಯಣರು ಕರ್ನಾಟಕ ಗಮಕ ಕಲಾ ಪರಿಷತ್, ಶಶಿ ಕಲಾವಿದರು, ಲೇಖಕರ ಬಳಗ, ಶಾರದಾ ವಿದ್ಯಾಪೀಠ, ಉದಯ ಭಾನು ಕಲಾ ಸಂಘ ಮುಂತಾದ ಹಲವಾರು ಸಂಸ್ಥೆಗಳಿಗೆ ಮಾರ್ಗದರ್ಶಕರೂ ಆಗಿದ್ದವರು.

ಕನ್ನಡ ಪರವಾದ ಮಹತ್ವದ ಹೋರಾಟಗಳಲ್ಲಿ ಜಿ.ನಾರಾಯಣರು ಗಮನಾರ್ಹವಾದ ಪಾತ್ರವಹಿಸಿದ್ದಾರೆ. ಅದರಲ್ಲೂ ಅವರು ಕರ್ನಾಟಕ ಏಕೀಕರಣ ಚಳುವಳಿ ಮತ್ತು ಗೋಕಾಕ್ ಚಳುವಳಿಗಳಲ್ಲಿ ನಿರ್ವಹಿಸಿದ ಪಾತ್ರಗಳು ಗಮನಾರ್ಹವಾದದ್ದು. ಅವರು ಗೋಕಾಕ ಸಮಿತಿಯ ಸದಸ್ಯರೂ ಆಗಿದ್ದರು.

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಇವರು ವಹಿಸಿದ ಪ್ರಮುಖ ಪಾತ್ರವನ್ನು ಗುರುತಿಸಿ ರಾಜ್ಯ ಸರ್ಕಾರವು ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ.

ಇಂತಹ ಮೇರು ವ್ಯಕ್ತಿತ್ವದ ಮಾಜಿ ಮಹಾಪೌರ, ನಾಡೋಜ ಡಾ.ಜಿ.ನಾರಾಯಣ ಅವರಿಗೆ ಜನ್ಮಶತಮಾನೋತ್ಸವವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಜಂಟಿಯಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ.

ಶತಮಾನೋತ್ಸವದ ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ವಹಿಸಲಿದ್ದಾರೆ. ಡಾ.ಜಿ.ನಾರಾಯಣ ಸಂಸ್ಕೃತಿ ಪ್ರಶಸ್ತಿ ಪ್ರದಾನವನ್ನು ಜಾನಪದ ಲೋಕ ಮಾಜಿ ಅಧ್ಯಕ್ಷರಾದ ಡಾ.ಟಿ.ತಿಮ್ಮೇಗೌಡ ಮಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಧರ್ಮಗುರುಗಳಾದ ಫಾದರ್ ಸೈಮನ್ ಬರ್ತಲೋಮಿಯಾ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರಶಶ್ತಿ ಪುರಸ್ಕೃತರು: ಶೇಷಾದ್ರಿಪುರಂ ಕಾಲೇಜಿನ ಗೌರವ ಕಾರ್ಯದರ್ಶಿಗಳಾದ ನಾಡೋಜ ವೂಡೇ ಪಿ.ಕೃಷ್ಣ, ಹಿರಿಯ ಕನ್ನಡ ಹೋರಾಟಗಾರರಾದ ರಾಮಣ್ಣ ಕೋಡಿಹೊಸಹಳ್ಳಿ, ಹಿರಿಯ ಹೋರಾಟಗಾರರಾದ ಆರೋಗ್ಯಪ್ಪ ಹಾಗೂ ಫಿಲೋಮಿನ ರಾಜ್.

ಆಶಯ ನುಡಿ: ರಫಾಯಲ್ ರಾಜ್, ಅಧ್ಯಕ್ಷರು, ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ. ಬೆಂಗಳೂರು.