ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ಸಂಜೆ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಕನ್ಯಾಕುಮಾರಿಯಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ.
ಮೇ 30 ರಂದು ತಮಿಳುನಾಡಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು ಮೇ 31 ಮತ್ತು ಜೂನ್ 1 ರಂದು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಬಂಡೆಯಲ್ಲಿ ಧ್ಯಾನ ಮಾಡಲಿದ್ದಾರೆ. ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಪ್ರಧಾನಿ ಮೋದಿ ಧ್ಯಾನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ 2019ರ ಸಂಸತ್ ಚುನಾವಣೆಯ ಕೊನೆಯ ಹಂತದ ಮತದಾನದ ವೇಳೆ ಪ್ರಧಾನಿ ಮೋದಿ ಹಿಮಾಲಯಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅಲ್ಲಿನ ಗುಹೆಯೊಂದಕ್ಕೆ ತೆರಳಿ ಧ್ಯಾನ ಮಾಡಿದರು. ಈ ಪ್ರಯಾಣದಲ್ಲಿ ಅವರು ಕೇದಾರನಾಥ ಶಿವ ದೇವಾಲಯದಲ್ಲಿ ಪೂಜೆಯನ್ನೂ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಸೆಲ್ವಪೆರುಂತಗೈ ಅವರು ತಮ್ಮ ಎಕ್ಸ್ ಪೇಜ್ ನಲ್ಲಿ “ಪ್ರಜಾಪ್ರತಿನಿಧಿ ಕಾಯ್ದೆಯಂತೆ ಚುನಾವಣಾ ನೀತಿ ನಿಯಮಗಳು ಜಾರಿಯಲ್ಲಿರುವ ಕಾರಣ ಮೋದಿಯವರ ಕನ್ಯಾಕುಮಾರಿ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ಅನುಮತಿ ನೀಡಬಾರದು.
ಚುನಾವಣೆಗೆ ಮುನ್ನ 48 ಗಂಟೆಗಳ ವಿರಾಮದ ವೇಳೆಯಲ್ಲಿ ಇಂತಹ ಘಟನೆಯ ಮೂಲಕ ಮಾಧ್ಯಮಗಳನ್ನು ಬಳಸಿಕೊಂಡು ರಹಸ್ಯವಾಗಿ ಪ್ರಚಾರ ಮಾಡಲು ಮೋದಿ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ನಾಳೆ (ಇಂದು) ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ನೀಡಬೇಕಿದೆ. ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ” ಎಂದು ಹೇಳಿದ್ದಾರೆ.