ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ವರ್ಲ್ಡ್ ಟ್ರೇಡ್ ಸೆಂಟರ್ Archives » Dynamic Leader
November 25, 2024
Home Posts tagged ವರ್ಲ್ಡ್ ಟ್ರೇಡ್ ಸೆಂಟರ್
ವಿದೇಶ

ಡಿ.ಸಿ.ಪ್ರಕಾಶ್

ವಿಶ್ವವನ್ನೇ ಬೆಚ್ಚಿಬೀಳಿಸಿದ ಅವಳಿ ಗೋಪುರದ ದಾಳಿ ನಡೆದು ಇಂದಿಗೆ 23 ವರ್ಷಗಳು. ದಾಳಿಯ ದಿನವಾದ ಸೆಪ್ಟೆಂಬರ್ 11 ಅನ್ನು ಅಮೆರಿಕದಲ್ಲಿ ಕಪ್ಪು ದಿನವಾಗಿ ಆಚರಿಸಲಾಗುತ್ತದೆ. ಈ ದುರಂತ ನಡೆದಿದ್ದು ಹೇಗೆ?… ಇತಿಹಾಸದಲ್ಲಿ ಸ್ವಲ್ಪ ಹಿಂದಕ್ಕೆ ಹೋಗೋಣ….

ಈ ಭೀಕರ ದಾಳಿಯು ಸೆಪ್ಟೆಂಬರ್ 11, 2001 ರಂದು ಬೆಳಿಗ್ಗೆ 8.46ಕ್ಕೆ ನ್ಯೂಯಾರ್ಕ್ ನಗರದಲ್ಲಿ ನಡೆಯಿತು. 19 ಅಲ್ ಖೈದಾ ಭಯೋತ್ಪಾದಕರು 4 ಪ್ರಯಾಣಿಕ ವಿಮಾನಗಳನ್ನು ಅಪಹರಿಸಿ, ನ್ಯೂಯಾರ್ಕ್‌ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್, ಸೇನಾ ಪ್ರಧಾನ ಕಛೇರಿಯಾದ ಪೆಂಟಗನ್, ಮತ್ತು ಪೆನ್ಸಿಲ್ವೇನಿಯಾ ಪ್ರದೇಶ ಮುಂತಾದ ಮೂರು ಕಡೆ ದಾಳಿಯನ್ನು ನಡೆಸಿದರು.

81 ಪ್ರಯಾಣಿಕರು ಮತ್ತು 11 ಸಿಬ್ಬಂದಿಯೊಂದಿಗೆ ವಾಷಿಂಗ್ಟನ್‌ನಿಂದ ಲಾಸ್ ಏಂಜಲೀಸ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿದ ಉಗ್ರರು, ನ್ಯೂಯಾರ್ಕ್‌ನ ಅವಳಿ ಗೋಪುರಕ್ಕೆ ಅಪ್ಪಳಿಸಿ ಸ್ಫೋಟಿಸಿದರು. ಸತತ 18 ನಿಮಿಷಗಳ ಅಂತರದಲ್ಲಿ, ವಾಷಿಂಗ್ಟನ್ ಏರ್‌ಪೋರ್ಟ್‌ನಿಂದ 56 ಪ್ರಯಾಣಿಕರು ಮತ್ತು 9 ಸಿಬ್ಬಂದಿಯೊಂದಿಗೆ ಟೇಕ್ ಆಫ್ ಆಗಿದ್ದ ಮತ್ತೊಂದು ವಿಮಾನವು ಬೆಳಿಗ್ಗೆ 9.03ಕ್ಕೆ ಅವಳಿ ಗೋಪುರದ ದಕ್ಷಿಣ ಭಾಗದ ಕಟ್ಟಡದ ಮೇಲೆ ಅಪ್ಪಳಿಸಿತು.

ಈ ಕ್ರೂರ ದಾಳಿಯಿಂದ ಗಗನಚುಂಬಿ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಸಮಗೊಂಡವು. ಅಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದವರು ದಾರುಣವಾಗಿ ಸಾವನ್ನಪ್ಪಿದರು. ಮುಂದಿನ ಕೆಲವು ನಿಮಿಷಗಳಲ್ಲಿ, ನಿಖರವಾಗಿ 9.37ಕ್ಕೆ, ಮುಂದಿನ ದಾಳಿಯು ಅಮೆರಿಕದ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಪ್ರಧಾನ ಕಛೇರಿಯಾದ ಪೆಂಟಗನ್ ಮೇಲೆ ನಡೆದಿತ್ತು. ಮತ್ತೊಂದು ವಿಮಾನವು ಪೆನ್ಸಿಲ್ವೇನಿಯಾದ ಮೈದಾನದಲ್ಲಿ ಪತನಗೊಂಡು ಸ್ಫೋಟಗೊಂಡಿತು.

ಸೂಪರ್ ಪವರ್ ಅಮೆರಿಕಕ್ಕೆ ಎಚ್ಚರಿಕೆಯಂತೆ ನಡೆದ ಈ ದಾಳಿಗಳಲ್ಲಿ 2,977 ಅಮಾಯಕರು ದಾರುಣವಾಗಿ ಸಾವನ್ನಪ್ಪಿದರು. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇದು ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದೂ ದಾಖಲಾಯಿತು. ಇದರ ಬೆನ್ನಲ್ಲೇ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದ ಅಮೆರಿಕ, 2011ರಲ್ಲಿ ಅಲ್-ಖೈದಾ ಭಯೋತ್ಪಾದಕ ಆಂದೋಲನದ ನಾಯಕ ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿತು.

ವಿಶ್ವವನ್ನೇ ಬೆಚ್ಚಿ ಬೀಳಿಸಿದ ಈ ಅವಳಿ ಗೋಪುರದ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಅಮೆರಿಕದಲ್ಲಿ ಸೆಪ್ಟೆಂಬರ್ 11ನ್ನು ದೇಶಪ್ರೇಮಿಗಳ ದಿನವನ್ನಾಗಿಯೂ ಆಚರಿಸಲಾಗುತ್ತದೆ.