ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಶಾಂತಿನಗರ Archives » Dynamic Leader
November 25, 2024
Home Posts tagged ಶಾಂತಿನಗರ
ಬೆಂಗಳೂರು

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಮೂರು ಭಾರಿ ಆಯ್ಕೆಯಾಗಿದ್ದ ಶಾಸಕ ಎನ್.ಎ.ಹ್ಯಾರಿಸ್ ಅವರು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗುವ ನಿರೀಕ್ಷೆಯಿತ್ತು. ಆದರೆ ಕಾರಣಾಂತರಗಳಿಂದ ಆ ಸೌಭಾಗ್ಯ ಕೂಡಿಬರಲಿಲ್ಲ. ನಿಗಮ-ಮಂಡಳಿಗಳಲ್ಲಿ ಉನ್ನತ ಸ್ಥಾನ ಸಿಗುವ ನಿರೀಕ್ಷೆಯಿತ್ತು ಅದು ನೆರವೇರಿದೆ. ಕೆಲವು ದಿನಗಳ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹ್ಯಾರಿಸ್ ಅವರು ಪ್ರತ್ಯೇಕವಾಗಿ ಬೇಟಿಯಾಗಿ ಬಂದಿದ್ದು ಗಮನಾರ್ಹ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಸಚಿವ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳೊಂದಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧ್ಯಕ್ಷರಾಗಿ ನೇಮಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಸಚಿವ ಸಂಪುಟದಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಯಾವುದೇ ಸ್ಥಾನಮಾನ ನೀಡದೇ ಶಾಂತಿನಗರ ಕ್ಷೇತ್ರವನ್ನು ನಿರ್ಲಕ್ಷ್ಯೆ ಮಾಡಿಬಂದಿದ್ದ ಹಿನ್ನಲೆಯಲ್ಲಿ ಈಗಲಾದರೂ ಸಚಿವ ಸಂಪುಟ ದರ್ಜೆಗೆ ಸರಿಸಮಾನವಾಗಿ ಬಿಡಿಎ ಅಧ್ಯಕ್ಷ ಸ್ಥಾನ ನೀಡಿರುವುದು ಕ್ಷೇತ್ರದ ಜನರಲ್ಲಿ ಸಂತಸ ತಂದಿದೆ.   

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಶಾಂತಿನಗರ ವಿಧಾನಸಭಾ ಕ್ಷೇತ್ರವು ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಪುಟ್ಟ ಕ್ಷೇತ್ರವಾಗಿದೆ. ಅದು ಸರ್ವ ಜನಾಂಗದ ಶಾಂತಿಯ ತೋಟವೂ ಹೌದು. ಈ ಕ್ಷೇತ್ರವನ್ನು ಮೇಲ್ನೋಟಕ್ಕೆ ನೋಡಿದರೆ ನಮಗೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರಿಚ್ಮಂಡ್ ರಸ್ತೆ, ಮಾರ್ಕ್ಸ್ ರಸ್ತೆ, ಲವಲ್ಲಿ ರಸ್ತೆ, ಚರ್ಚ್ ಸ್ಟ್ರೀಟ್, ವಿಠಲ್ ಮಲ್ಯ ರಸ್ತೆ, ಕಸ್ತೂರಿಬಾಯ್ ರಸ್ತೆ ಮುಂತಾದ ವಿಶ್ವಖ್ಯಾತಿಯ ಐಷಾರಾಮಿ ರಸ್ತೆಗಳು, ಅಲ್ಲಿನ ಮಾಲ್‌ಗಳು, ಅಂತರಾಷ್ಟ್ರೀಯ ಬ್ರಾಂಡೆಡ್ ಶೋರೂಂಗಳೆಲ್ಲವೂ ಕಾಣಸಿಗುತ್ತವೆ.

ಯೂಟಿಲಿಟಿ ಬಿಲ್ಡಿಂಗ್, ಮೇಯೋಹಾಲ್, ಮಿತ್ತಲ್ ಟವರ್, ಕಾವೇರಿ ಎಂಪೋರಿಯಂ, ಬಾರ್ಟನ್ ಸೆಂಟರ್, ಹಿಗ್ಗಿನ್ ಬಾಥಮ್ಸ್, ಬೈಬಲ್ ಸೊಸೈಟಿ, ಮಲ್ಯ ಟವರ್ಸ್, ವಾರ್ ಮೆಮೋರಿಯಲ್, ಗರುಡ ಮಾಲ್, ಲೈಫ್‌ಸ್ಟೈಲ್ ಹೀಗೆ ಹೇಳುತ್ತಾ ಹೋಗಬಹುದು. ಆದರೆ, ಇದೆಲ್ಲವನ್ನು ನೋಡಿ, ಕ್ಷೇತ್ರವನ್ನು ಐಷಾರಾಮಿ-ಶ್ರೀಮಂತ ಕ್ಷೇತ್ರವೆಂದು ಭಾವಿಸಿಕೊಂಡರೆ ಅದು ಮೂರ್ಖತನ.

ಮೇಲಿನ ಎಲ್ಲವೂ ವ್ಯಾಪಾರ ವಹಿವಾಟು ನಡೆಯುವ ಸ್ಥಳ. ಇದಕ್ಕೂ ಕ್ಷೇತ್ರದ ಜನತೆಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಇಲ್ಲಿರುವ 90% ಜನ ಯಾರೂ ಕೂಡ ಕ್ಷೇತ್ರದ ಮತದಾರರಲ್ಲ. ಇಲ್ಲಿನದು ಜಾತ್ರೆಯ ಸಂಸ್ಕೃತಿ. ಇದನ್ನು ನೋಡಿ ಕ್ಷೇತ್ರವನ್ನು ತೂಕ ಮಾಡಬಾರದು. ಮತ್ತು ಕ್ಷೇತ್ರವನ್ನು ಸ್ವಲ್ಪ ಆಳವಾಗಿ ಇಣುಕಿ ನೋಡಿದರೆ, ನಮಗೆ ಗೋಚರಿಸುವುದೆಲ್ಲವೂ ಬರೀ ಆಶ್ಚರ್ಯ ಮತ್ತು ಅಘಾತವೇ ಆಗಿರುತ್ತದೆ.

ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯದ ಕೊರೆತೆಯಿರುವ ಶ್ರೀ.ಎನ್. ಲಕ್ಷ್ಮಣರಾವ್ ನಗರ (ಎಲ್.ಆರ್.ನಗರ), ಅಂಬೇಡ್ಕರ್ ನಗರ, ಸಮತಾನಗರ, ಸೊನ್ನೇನಹಳ್ಳಿ, ಮಾಯಾಬಜಾರ್, ತಿಮ್ಮರಾಯಪ್ಪ ಗಾರ್ಡನ್, ವಿನಾಯಕ ನಗರ, ಇಸ್ರೋ ಸ್ಲಂ, ಹಟ್ಟಿಂಗ್ ಕಾಲೋನಿ ಹಾಗೂ ಶಕ್ತಿವೇಲ್ ನಗರ ಮುಂತಾದ 10 ಕೊಳಗೇರಿ ಪ್ರದೇಶಗಳು ಇನ್ನು ಕೂಡ ಮೂಲಭೂತ ಸೌಲಭ್ಯಕ್ಕಾಗಿ ಹಾತೊರೆಯುತ್ತಿದೆ.

ನೀಲಸಂದ್ರ, ರೋಸ್ ಗಾರ್ಡನ್, ಅನೇಪಾಳ್ಯ, ಶಾಂತಿನಗರ, ಅಶೋಕ್ ನಗರ, ಗೌತಮಪುರಂ, ದೀನಬಂಧು ನಗರ, ರುದ್ರಪ್ಪ ಗಾರ್ಡನ್, ಜಯರಾಜ್ ನಗರ, ಆಸ್ಟೀನ್ ಟೌನ್ ಸಿಮೆಂಟ್ ಲೇನ್, ಸಿದ್ಧಾರ್ಥನಗರ, ಬಿಡಿಎ ಕ್ವಾಟ್ರಸ್, ವನ್ನಾರಪೇಟೆ ಮುಂತಾದ ಪ್ರದೇಶಗಳು ಇನ್ನೂ ಕೂಡ ಯಾವ ಅಭಿವೃದ್ಧಿಯೂ ಕಾಣದೆ 5 ದಶಕಗಳಿಂದ ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಕ್ಷೇತ್ರದಲ್ಲಿ ಒಂದು ಒಳ್ಳೆಯ ಸರ್ಕಾರಿ ಶಾಲೆ – ಕಾಲೇಜುಗಳು ಇಲ್ಲ. ಸುಸುಜ್ಜಿತವಾದ ಸರ್ಕಾರಿ ಆಸ್ಪತ್ರೆಗಳು ಇಲ್ಲ. ಸಮುದಾಯ ಭವನಗಳಿಲ್ಲ. ಇದ್ದ ಒಂದೆರಡು ಲೈಬ್ರರಿಗಳು ಕೂಡ ಕಣ್ಮರೆಯಾಗುತ್ತಿವೆ. ಆಸ್ಟೀನ್ ಟೌನ್ ಬಿಡಿಎ ಕಾಂಪ್ಲೆಕ್ಸ್, ಅಸ್ಟೀನ್ ಟೌನ್ ಮಾರ್ಕೆಟ್, ಜಾನ್ಸನ್ ಮಾರ್ಕೆಟ್ ಹಾಗೂ ದೊಮ್ಮಲೂರು ಬಿಡಿಎ ಕಾಂಪ್ಲೆಕ್ಸ್ ಎಲ್ಲವೂ ನಿರ್ವಹಣೆಯಿಲ್ಲದೆ ಅವಸಾನದ ಸ್ಥಿತಿಯಲ್ಲಿದೆ.

ಶಾಂತಿನಗರ ವಿಧಾನಸಭಾ ಕ್ಷೇತ್ರವು ಈ ರೀತಿ ಹದೆಗೆಡಲು ಈ ಹಿಂದೆ ಇದ್ದ ಸರ್ಕಾರಗಳು ಮತ್ತು ನಿದ್ರಾವಸ್ಥೆಯಲ್ಲಿರುವ ಬಿಬಿಎಂಪಿಯೇ ಕಾರಣ. ಅದುಮಾತ್ರವಲ್ಲ, ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾಗುವ ಶಾಸಕರು ಯಾರಿಗೂ ಇಲ್ಲಿಯವರೆಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡದೇ ನಿರಂತರವಾಗಿ ವಂಚಿಸಲಾಗುತ್ತಿದೆ ಇದು ಮತ್ತೊಂದು ಕಾರಣ. 2008ರಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ರಚನೆಯಾದ ಬಿಜೆಪಿ ಸರ್ಕಾರವು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ಕೊಡದೇ ವಂಚಿಸಿದ್ದು ಕ್ಷೇತ್ರ ಹದೆಗೆಡಲು ಇದುವೇ ಮೂಲ ಕಾರಣವಾಯಿತು. 

2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯವು ಸ್ವಲ್ಪ ಮಟ್ಟಿಗೆ ಸುಧಾರಣೆಯನ್ನು ಖಂಡಿದ್ದು ನಿಜ. ತದನಂತರ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ಒಂದು ವರ್ಷವಷ್ಟೆ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸವೂ ನಡೆಯಲಿಲ್ಲ.

ನಂತರ ಆಪರೇಷನ್ ಕಮಲದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಮತ್ತು ಅವರ ನಂತರ ಬಂದ ಬಸವರಾಜ ಬೊಮ್ಮಾಯ್ ಸರ್ಕಾರ ಈ ಕ್ಷೇತ್ರಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಏನು ಮಾಡಿದೆ ಎಂಬುದನ್ನು ಶಾಸಕ ಎನ್.ಎ.ಹ್ಯಾರಿಸ್ ನವರೇ ಬಂದು ಹೇಳಬೇಕು ಎಂದೇನಿಲ್ಲ. ಅದು ಈ ರಾಜ್ಯದ ಪ್ರತಿಯೊಬ್ಬರಿಗೂ ತಿಳಿದ ವಿಚಾರ.

ಶಾಂತಿನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೇ ಇರುವುದು ಮತ್ತು ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡದಿರುವುದರಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾದವು. ಅಲ್ಪ ಸಂಖ್ಯಾತ ಸಮುದಾಯದ ಎನ್.ಎ.ಹ್ಯಾರಿಸ್ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ದಲಿತರು ಬಹುಸಂಖ್ಯಾತರಾಗಿದ್ದಾರೆ. ಹಿಂದುಳಿದ ವರ್ಗಗಳ ಮತಗಳು ಇಲ್ಲಿ ನಿರ್ಣಾಯಕವಾಗಿದೆ.

ಶಾಸಕ ಎನ್.ಎ.ಹ್ಯಾರಿಸ್ ಮೇಲೆ ನಂಬಿಕೆಯಿಟ್ಟು ಕ್ಷೇತ್ರದ ಜನ ಮತ್ತೊಮ್ಮೆ (4ನೇ ಬಾರಿಗೆ) ಅವರನ್ನು ಆರಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ಕಾರಣ, ಅವರಿಂದ ಕ್ಷೇತ್ರಕ್ಕೆ ಒಳ್ಳೆಯದು ಆಗುತ್ತದೆ ಎಂಬ ನಂಬಿಕೆಯಿಂದಲೇ. ಜನರ ಆಶಯ ಈ ಬಾರಿ ನೆರವೇರಬೇಕು. ಕ್ಷೇತ್ರದ ಪ್ರತಿಯೊಂದು ಪ್ರದೇಶವೂ ಅಭಿವೃದ್ಧಿಯನ್ನು ಕಾಣಬೇಕು. ಅದಕ್ಕೆ ಅವರಿಗೆ ಹೆಚ್ಚಿನ ಅಧಿಕಾರ ಶಕ್ತಿಯನ್ನು ತುಂಬಬೇಕು. ಕ್ಷೇತ್ರದ ಮತದಾರರಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ಅದು ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಬಾರದು.

ಕಾಂಗ್ರೆಸ್ ಪಕ್ಷವು ಜನರ ಬಳಿ ಮುಂದಿಟ್ಟ 1) ಗೃಹ ಜ್ಯೋತಿ (200 ಯೂನಿಟ್ ವಿದ್ಯುತ್ ಉಚಿತ), 2) ಗೃಹಲಕ್ಷ್ಮಿ (2000 ಪ್ರತಿ ಮನೆ ಯಜಮಾನಿಗೆ ಖಚಿತ), 3) ಅನ್ನಭಾಗ್ಯ (ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನಿಶ್ಚಿತ), 4) ಯುವ ನಿಧಿ (ನಿರುದ್ಯೋಗ ಭತ್ಯೆ ರೂ.3000 ಪದವೀಧರರಿಗೆ ರೂ.1500 ಡಿಫ್ಲೋಮ ಪದವೀಧರರಿಗೆ) ಮುಂತಾದ ಗ್ಯಾರೆಂಟಿಗಳು ಖಂಡಿತವಾಗಿ ಜನರಿಗೆ ಸಿಗುತ್ತವೆ ಎಂಬ ಬರವಸೆ ಇದೆ. ಆದರೆ, ಅದುಮಾತ್ರ ಸಾಲದು. ನಮ್ಮ ಬಡಾವಣೆ ಮತ್ತು ನಮ್ಮ ಸುತ್ತಮುತ್ತ ಇರುವ ಪ್ರದೇಶಗಳೆಲ್ಲವೂ ಕೂಡ ಇತರರಂತೆ ಅಭಿವೃದ್ಧಿ ಕಾಣಬೇಕು.

ಅತಿ ಹಿಂದುಳಿದ ಅಹಿಂದ ಕ್ಷೇತ್ರವಾದ ಶಾಂತಿನಗರ ವಿಧಾನಸಭಾ ಕೇತ್ರವನ್ನು ಇಷ್ಟು ವರ್ಷಗಳು ಕಡೆಗಣಿಸಲಾಗಿತ್ತು; ಅದು ಇನ್ನು ಮುಂದುವರಿಯುವುದು ಬೇಡ. ಇತರೆ ಕ್ಷೇತ್ರಗಳಂತೆ ಶಾಂತಿನಗರವೂ ಅಭಿವೃದ್ಧಿಯನ್ನು ಕಾಣಬೇಕಾದರೆ ಖಂಡಿತ ಈ ಬಾರಿ ಎನ್.ಎ.ಹ್ಯಾರಿಸ್ ಸಚಿವರಾಗಬೇಕು. ಅಹಿಂದ ವರ್ಗದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದನ್ನು ಖಂಡಿತ ನೆರೆವೇರಿಸಿ ಕೋಡುತ್ತರೆ ಎಂದು ಕ್ಷೇತ್ರದ ಜನರು ನಂಬಿದ್ದಾರೆ.

ಒಂದು ವೇಳೆ, ಅಕಸ್ಮಾತ್ ಎನ್.ಎ.ಹ್ಯಾರಿಸ್ ಸಚಿವರಾಗುವುದು ಈ ಬಾರಿ ಕೈತಪ್ಪಿದರೆ, ಕ್ಷೇತ್ರದ ಒಳಿತಿಗಾಗಿ ಅವರಿಗೆ ಸಚಿವ ಸ್ಥಾನ ಸಿಗುವವರೆಗೂ ಜನಶಕ್ತಿ ವೇದಿಕೆಯ ನೇತೃತ್ವದಲ್ಲಿ ನಿರಂತರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಜನಶಕ್ತಿ ವೇದಿಕೆ ಎಚ್ಚರಿಕೆಯನ್ನು ಕೊಟ್ಟಿದೆ.