ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಂತಾಪ Archives » Dynamic Leader
November 21, 2024
Home Posts tagged ಸಂತಾಪ
ದೇಶ

ತಿರುವನಂತಪುರಂ: ಕೇರಳದ ತಿರುವನಂತಪುರದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದೆ. ಕಳೆದ ಕೆಲವು ವಾರಗಳಿಂದ ಭಾರೀ ಮಳೆಯಾಗುತ್ತಿದೆ. ಆ ಮೂಲಕ ಕೇರಳದ ವಯನಾಡು ಪ್ರದೇಶದಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದೆ. ಈ ಭಾರಿ ಮಳೆಯ ನಂತರ ಮುಂಜಾನೆ ಭೂಕುಸಿತ ಸಂಭವಿಸಿದೆ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಸೂರಲ್ಮಲೈ ಪ್ರದೇಶದಲ್ಲಿ ಮೊದಲ ಭೀಕರ ಭೂಕುಸಿತ ಸಂಭವಿಸಿದೆ.

ನಂತರ, ಮುಂಜಾನೆ 4.30ಕ್ಕೆ 2ನೇ ಭಾರಿ ಮತ್ತೊಂದು ಭೂಕುಸಿತ ಸಂಭವಿಸಿದೆ. ಸತತ ಭೂಕುಸಿತದಿಂದಾಗಿ ವೈತ್ತಿರಿ, ವೆಲ್ಲೇರಿಮಲೈ ಮತ್ತು ಮೇಪ್ಪಾಡಿ ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ. ಅಟ್ಟಮಲೈನಿಂದ ಮುಂಡಗಿ ಪ್ರದೇಶಕ್ಕೆ ತೆರಳಲು ಇದ್ದ ಒಂದೇ ಒಂದು ಸೇತುವೆ ಕೂಡ ಕೊಚ್ಚಿ ಹೋಗಿದೆ.

ಹೀಗಾಗಿ, 500 ಮನೆಗಳಿಗೆ ಸೇರಿದ ಸಾವಿರಾರು ಜನರು ಪ್ರತ್ಯೇಕ ದ್ವೀಪದಲ್ಲಿ ಸಿಕ್ಕಿಕೊಂಡಂತೆ ಆಗಿದ್ದಾರೆ. ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಹೆಲಿಕಾಪ್ಟರ್ ಮೂಲಕ ಸಂತ್ರಸ್ತ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯ ನಡೆಯುತ್ತಿದೆ. ಹಲವರ ಸ್ಥಿತಿ ತಿಳಿಯದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಭೂಕುಸಿತದಲ್ಲಿ ನೂರಾರು ಮಂದಿ ಸಿಲುಕಿರುವ ಬಗ್ಗೆ ವರದಿಯಾಗಿದೆ. ಬಳಿಕ ನಾಪತ್ತೆಯಾದವರನ್ನು ರಕ್ಷಿಸುವ ಕಾರ್ಯ ಚುರುಕುಗೊಂಡಿದೆ. ಅರಕ್ಕೋಣಂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಧಾವಿಸಿದೆ.

ಭೂಕುಸಿತ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯ ನಡೆಸಲು ತೊಂದರೆಯಾಗಿದೆ ಎಂದು ವರದಿಗಳಾಗಿವೆ. ಏತನ್ಮಧ್ಯೆ, ವಯನಾಡು ಭೂಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

“ವಯನಾಡಿನ ಕೆಲವು ಭಾಗಗಳು ಭೂಕುಸಿತದಿಂದ ಹಾನಿಗೊಳಗಾಗಿವೆ. ನನ್ನ ಆಲೋಚನೆಗಳು ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೂ ಇವೆ; ಗಾಯಾಳುಗಳೊಂದಿಗೆ ಪ್ರಾರ್ಥನೆಗಳೂ ಇವೆ. ಎಲ್ಲಾ ಸಂತ್ರಸ್ತರಿಗೆ ಸಹಾಯ ಮಾಡಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ” ಕೇರಳಕ್ಕೆ ಎಲ್ಲ ನೆರವು ನೀಡಲು ಕೇಂದ್ರ ಸರಕಾರ ಸಿದ್ಧವಿದೆ ಎಂದ ಮೋದಿ, ಕೇರಳ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ.

ಅಲ್ಲದೆ, “ವಯನಾಡು ಭೂಕುಸಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂ.ಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗುವುದು” ಎಂದೂ ಅವರು ಹೇಳಿದ್ದಾರೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ರಾಜ್ಯ ಸಚಿವ ಸುರೇಶ್ ಗೋಪಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ವಯನಾಡಿನ ಪರಿಸ್ಥಿತಿಯನ್ನು ವಿಚಾರಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು:
“ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ಮೃತಪಟ್ಟ ಘಟನೆ ನೋವಿನ ಸಂಗತಿಯಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಹಾಗೂ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ಪರ್ತಿಪಕ್ಷದ ನಾಯಕ ರಾಹುಲ್ ಗಾಂಧಿ:
“ವಯನಾಡಿನ ಮೇಪ್ಪಾಡಿ ಬಳಿ ಸಂಭವಿಸಿದ ಭಾರೀ ಭೂಕುಸಿತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪವನ್ನು ಅರ್ಪಿಸುತ್ತೇನೆ. ಇನ್ನೂ ಸಿಕ್ಕಿಬಿದ್ದಿರುವವರನ್ನು ಶೀಘ್ರದಲ್ಲೇ ರಕ್ಷಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ನಾನು ಕೇರಳ ಮುಖ್ಯಮಂತ್ರಿ ಮತ್ತು ವಯನಾಡು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ನನಗೆ ಭರವಸೆ ನೀಡಿದ್ದಾರೆ.

ಎಲ್ಲಾ ಏಜೆನ್ಸಿಗಳೊಂದಿಗೆ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು, ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಮತ್ತು ಪರಿಹಾರ ಕಾರ್ಯಗಳಿಗೆ ನೆರವು ಅಗತ್ಯವಿದ್ದರೆ ನಮಗೆ ತಿಳಿಸಲು ನಾನು ಅವರನ್ನು ಕೇಳಿದ್ದೇನೆ. ನಾನು ಕೇಂದ್ರ ಸಚಿವರೊಂದಿಗೆ ಮಾತನಾಡುತ್ತೇನೆ ಮತ್ತು ವಯನಾಡಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಕೇಳುತ್ತೇನೆ. ಎಲ್ಲಾ ಯುಡಿಎಫ್ (UDF) ಕಾರ್ಯಕರ್ತರು ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಆಡಳಿತಕ್ಕೆ ಸಹಾಯ ಮಾಡಲು ನಾನು ವಿನಂತಿಸುತ್ತೇನೆ” ಎಂದು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ:
“ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಮತ್ತು ತುರ್ತು ವೈದ್ಯಕೀಯ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ನಾನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ:
“ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಘಟನೆಗಳು ತೀವ್ರ ಕಳವಳಕಾರಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಯುದ್ಧಕಾಲದ ಆಧಾರದ ಮೇಲೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲು ಎರಡನೇ ತಂಡ ತೆರಳಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ದೇಶ

ಚೆನ್ನೈ: ಕರ್ನಾಟಕ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದ ನಾಮಕ್ಕಲ್ ಮತ್ತು ಕೃಷ್ಣಗಿರಿ ಜಿಲ್ಲೆಗಳ ಇಬ್ಬರು ಲಾರಿ ಚಾಲಕರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಮೃತರ ಕುಟುಂಬಗಳಿಗೆ 3 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಆದೇಶಿಸಿದ್ದಾರೆ.

ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಸಂತಾಪ ಸೂಚಿಸಿ ಹೊರಡಿಸಿರುವ ಸಂದೇಶದಲ್ಲಿ, “ನಾಮಕ್ಕಲ್ ಜಿಲ್ಲೆಯ ಪುದುಚತ್ರಂ ವೃತ್ತದ ತಾತಯ್ಯಂಗಾರಪಟ್ಟಿ ಗ್ರಾಮದ ಚಿನ್ನನ್ ಮತ್ತು ಕೃಷ್ಣಗಿರಿ ಜಿಲ್ಲೆಯ ಊತ್ತಂಗರೈ ಒಳ ವೃತ್ತದ ಎಂ.ವೆಲ್ಲಾಪಟ್ಟಿ ಗ್ರಾಮದ ಮುರುಗನ್ ಇಬ್ಬರೂ, ಕಳೆದ ಜುಲೈ 16 ರಂದು ಎಲ್‌ಪಿಜಿ ಟ್ಯಾಂಕರ್ ಲಾರಿಯಲ್ಲಿ ಚಾಲಕರಾಗಿ ಹೋಗಿದ್ದಾಗ, ಕರ್ನಾಟಕ ರಾಜ್ಯ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವೃತ್ತದ ಶಿರೂರು ಪ್ರದೇಶದಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದರು ಎಂಬ ದುಃಖದ ಸುದ್ದಿಯನ್ನು ಕೇಳಿ ನನಗೆ ಅತೀವ ದುಃಖ ಮತ್ತು ನೋವಾಗಿದೆ” ಎಂದು ಹೇಳಿದ್ದಾರೆ.

ಅಲ್ಲದೆ, ಅಪಘಾತದಲ್ಲಿ ಸಾವನ್ನಪ್ಪಿದ ಟ್ರಕ್ ಚಾಲಕರ ಕುಟುಂಬಗಳಿಗೆ ಮತ್ತು ಅವರ ಸಂಬಂಧಿಕರಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುವದರ ಜೊತೆಗೆ ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂಪಾಯಿಗಳನ್ನು ನೀಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.

ದೇಶ

ಬೆಂಗಳೂರು: ಹಜ್ರತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ನಿಧನಕ್ಕೆ ಕರ್ನಾಟಕ ಮುಸ್ಲಿಂ ಯುನಿಟಿಯ  (KMU) ಸಂತಾಪ ಸೂಚಿಸಿದೆ. ಈ ಕುರಿತು ಕರ್ನಾಟಕ ಮುಸ್ಲಿಂ ಯುನಿಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್.ಎ ರವರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ, “ಉಳ್ಳಾಲದ ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಸುಪುತ್ರರು, ಇಸ್ಲಾಂ ಧಾರ್ಮಿಕ ಪಂಡಿತರ ಕುಟುಂಬದ ನೇತಾರರು, ಹಲವಾರು ಮಸೀದಿಗಳ ಖಾಝಿಗಳು, ಗೌರವಾಧ್ಯಕ್ಷರು, ಆದ್ಯಾತ್ಮಿಕ ಗುರುಗಳು, ಸಾವಿರಾರು ಧಾರ್ಮಿಕ ಮುಖಂಡರ ಮಾರ್ಗದರ್ಶಿಗಳು, ತಮ್ಮ ಒಟ್ಟು ಜೀವಿತ ಅವಧಿಯನ್ನು ಸಮಾಜಕ್ಕಾಗಿ ಮುಡುಪಾಗಿ ಇಟ್ಟಿದ್ದ ಹಜ್ರತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರು ನಮ್ಮೆಲ್ಲರನ್ನು ಅಗಲಿದ್ದಾರೆ.

ಈ ಸಜ್ಜನರ ಅಗಲಿಕೆ ಇಡೀ ರಾಜ್ಯಕ್ಕೆ ವಿಶೇಷವಾಗಿ ನಾಡಿನ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಅಲ್ಲಾಹನು ಮಾನ್ಯರಾದ ಹಜ್ರತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ಪರಲೋಕ ಯಾತ್ರೆಯಲ್ಲಿ ಇವರ ಸಕಲ ಸತ್ಕರ್ಮಗಳನ್ನು ಸ್ವೀಕರಿಸಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ಶಿಷ್ಯವೃಂದಕ್ಕೆ ಮತ್ತು ಬಂಧು ಬಳಗಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹ ನೀಡಲಿ” ಎಂದು ತಿಳಿಸಿದ್ದಾರೆ.

ಅಂತಿಮ ದರ್ಶನದ ವ್ಯವಸ್ಥೆಯ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ರವರು ಪೊಲೀಸ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ!

ಮಂಗಳೂರು: ಉಳ್ಳಾಲ ದರ್ಗಾದಲ್ಲಿ ಸೈಯದ್ ಕೂರತ್ ತಂಙಳ್ ರವರ ಅಂತಿಮ ದರ್ಶನದ ವ್ಯವಸ್ಥೆಯ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ರವರು ಪೊಲೀಸ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು‌. ಈ ಸಂದರ್ಭದಲ್ಲಿ ಡಾ.ಯು.ಟಿ.ಇಫ್ತಿಕಾರ್ ಫರೀದ್, ಡಾ.ಕಣಚೂರು ಮೋನು, ಫರಾದ್ ಯೆನೆಪೋಯ ಹಾಗೂ ದರ್ಗಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂಬುದು ಗಮನಾರ್ಹ.

ದೇಶ

ಬೆಂಗಳೂರು: ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ನಾಯಕರು, ಹಿರಿಯರು ಆದ ಸೈಯ್ಯದ್ ಕೂರತ್ ತಂಙಳ್ ಅವರ ನಿಧನದ ಸುದ್ದಿ ನೋವುಂಟುಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸದಾಕಾಲ ಸಮಾಜದ ಹಿತವನ್ನು ಬಯಸುತ್ತಿದ್ದ, ಕೋಮುಸಾಮರಸ್ಯಕ್ಕಾಗಿ ದುಡಿದ ಹಿರಿಯ ಚೇತನದ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ, ಇಡೀ ನಾಡಿಗೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಯ್ಯದ್ ಕೂರತ್ ತಂಙಳ್ ಅವರ ಕುಟುಂಬವರ್ಗ ಮತ್ತು ಅನುಯಾಯಿಗಳಿಗೆ ಸಂತಾಪ ಸೂಚಿಸಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯ ಸ್ತಂಭನದಿಂದ ತಂಙಳ್ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಇಂದು ಅಪರಾಹ್ನ ಉಳ್ಳಾಲ ಸೈಯದ್ ಮದನಿ ದರ್ಗಾ ವಠಾರದಲ್ಲಿ ನಿಗದಿಯಾಗಿದ್ದ ಸೈಯದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳ ನೂತನ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬೆಳಗ್ಗೆ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಸಿದ್ಧರಾಗುತ್ತಿದ್ದರು ಈ ವೇಳೆ ಹೃದಯ ಸ್ತಂಭನ ಆಗಿ ನಿಧನರಾಗಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್

ಬಹುಜನ ಸಮಾಜ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಇಲಾಖೆ ಮೂರು ಬಾರಿ ಎಚ್ಚರಿಕೆ ನೀಡಿದ್ದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿಲ್ಲ ಎಂದು ವರದಿಯಾಗಿದೆ.

ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಕಡಿದು ಹತ್ಯೆ ಮಾಡಿದ್ದರು. ದಾಳಿಕೋರರಿಂದ ಹಲ್ಲೆಗೊಳಗಾದ ಆರ್ಮ್‌ಸ್ಟ್ರಾಂಗ್ ಅವರನ್ನು ನಿನ್ನೆ ರಾತ್ರಿ ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸದ್ಯ ಆರ್ಮ್‌ಸ್ಟ್ರಾಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಆರ್ಮ್‌ಸ್ಟ್ರಾಂಗ್

ಆರ್ಮ್‌ಸ್ಟ್ರಾಂಗ್ ಹತ್ಯೆ ಖಂಡಿಸಿ ಬಹುಜನ ಸಮಾಜ ಪಕ್ಷದ ಸದಸ್ಯರು ರಸ್ತೆ ತಡೆ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದೇ ವೇಳೆ ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಸಂಬಂಧಿಸಿದಂತೆ 8 ಮಂದಿ ಶರಣಾಗಿದ್ದಾರೆ. ತನಿಖೆ ಮುಂದುವರಿದಿದೆ.

ಅವರ ನಿಧನಕ್ಕೆ ತಮಿಳುನಾಡಿನ ಹಲವು ರಾಜಕೀಯ ಪಕ್ಷಗಳು ಸಂತಾಪ ಸೂಚಿಸುತ್ತಿವೆ. ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ, ‘ತಮಿಳುನಾಡು ವೆಟ್ರಿ ಕಳಗಂ’ ಅಧ್ಯಕ್ಷ ಮತ್ತು ನಟ ವಿಜಯ್ ಅವರು ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಸಂತಾಪ ಸೂಚಿಸಿದ್ದಾರೆ.

ನಟ ವಿಜಯ್

ಅಲ್ಲದೆ, ತಮಿಳುನಾಡು ಸರಕಾರ ಯಾವುದೇ ರಾಜಿ ಮಾಡಿಕೊಳ್ಳದೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗ ಅವರು ಪ್ರಕಟಿಸಿರುವ ಟ್ವೀಟ್‌ನಲ್ಲಿ, “ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷರಾದ ಆರ್ಮ್‌ಸ್ಟ್ರಾಂಗ್ ಅವರ ಹತ್ಯೆ ಆಘಾತಕಾರಿ ಮತ್ತು ನೋವಿನಿಂದ ಕೂಡಿದೆ.

ಆರ್ಮ್‌ಸ್ಟ್ರಾಂಗ್ ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪ. ಇನ್ನು ಮುಂದೆ ಇಂತಹ ಘೋರ ಅಪರಾಧಗಳು ನಡೆಯದಂತೆ ತಮಿಳುನಾಡು ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರಾಜಿ ಮಾಡಿಕೊಳ್ಳದೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾನು ನಿಮ್ಮನ್ನು ವಿನಂತಿಸುತ್ತೇನೆ” ಎಂದಿದ್ದಾರೆ.

ಬಿಎಸ್ ಪಿ ನಾಯಕಿ ಮಾಯಾವತಿಯೊಂದಿಗೆ ಆರ್ಮ್‌ಸ್ಟ್ರಾಂಗ್

ಈ ಹಿನ್ನೆಲೆಯಲ್ಲಿ, ಕಳೆದ ಕೆಲವು ದಿನಗಳಿಂದ ಹಂತಕರು ಆರ್ಮ್‌ಸ್ಟ್ರಾಂಗ್‌ ಅವರ ಮೇಲೆ ನಿಗಾ ಇರಿಸಿದ್ದರು ಎಂದು ಹೇಳಲಾಗಿದೆ. ಆರ್ಮ್‌ಸ್ಟ್ರಾಂಗ್ ಅವರ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಸೇವೆ ಮತ್ತು ಸಮಗ್ರ ಅಪರಾಧ ತನಿಖಾ ವಿಭಾಗ ಈಗಾಗಲೇ 3 ಬಾರಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲಾಗಿದೆ.

ಗುಪ್ತಚರ ಸಂಸ್ಥೆ ಮೂರು ಬಾರಿ ಎಚ್ಚರಿಕೆ ನೀಡಿದರೂ ಸೆಂಬಿಯಂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ರಾಜ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಸುರಪುರ ಕ್ಷೇತ್ರದ ಶಾಸಕರಾದ ರಾಜಾ ವೆಂಕಟ್ಟಪ್ಪ ನಾಯಕ ಅವರು ಇಂದು ಹೃದಯಘಾತದಿಂದ ನಿಧನ ಹೊಂದಿದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

“ನಮ್ಮ ಕುಟುಂಬದ ಆತ್ಮೀಯರಾಗಿ, ಚಿಕ್ಕಂದಿನಿಂದ ನನ್ನ ಮಾರ್ಗದರ್ಶಕರಾಗಿದ್ದ ಅವರು ನಮ್ಮನ್ನು ಅಗಲಿರುವ ವಿಚಾರ ನಂಬಲು ಅತೀವ ಕಷ್ಟವಾಗುತ್ತಿದೆ.

ಬ್ರಿಟಿಷರೊಂದಿಗೆ ಹೋರಾಡಿ ವೀರ ಮರಣ ಹೊಂದಿದ ಸುರಪುರ ಸಂಸ್ಥಾನದ ದೊರೆ ನಾಲ್ಕನೇ ರಾಜಾ ವೆಂಕಟಪ್ಪ ನಾಯಕ ಅವರ ಕುಟುಂಬದಿಂದ ಬಂದಿದ್ದ ಜನರ ಪ್ರೀತಿಯ ನಾಯಕ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಹು ದೊಡ್ಡ ಶಕ್ತಿಯಾಗಿದ್ದರು.

ಅವರ ಈ ಅಕಾಲಿಕ ಅಗಲಿಕೆ ನಮ್ಮ ಭಾಗದ ಜನತೆಗೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬ ಹಾಗೂ ಅಪಾರ ಅಭಿಮಾನಿ ವರ್ಗಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೊರಕುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ಬೆಂಗಳೂರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಖ್ಯ ಇಂಜಿನಿಯರ್ ಸಿ.ಎಂ.ಶಿವಕುಮಾರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಬಿಬಿಎಂಪಿಯ ಕ್ವಾಲಿಟಿ ಅಶ್ಯೂರೆನ್ಸ್ ಲ್ಯಾಬ್‌ನಲ್ಲಿ ಆಗಸ್ಟ್ 11 ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 45 ವರ್ಷದ ಶಿವಕುಮಾರ್ ಅವರು ಸೇರಿದಂತೆ 9 ನೌಕರರು ಗಾಯಗೊಂಡಿದ್ದರು.ಶೇ. 25 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಶಿವಕುಮಾರ್ ಅವರನ್ನು ಕಳೆದ ಕೆಲ ದಿನಗಳ ಹಿಂದೆ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಶಿವಕುಮಾರ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಪೊಲೋ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೃತರಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗುಣ ನಿಯಂತ್ರಣ ಮತ್ತು ಗುಣ ಭರವಸೆ ವಿಭಾಗದ ಮುಖ್ಯ ಅಭಿಯಂತರರಾದ ಸಿ.ಎಂ.ಶಿವಕುಮಾರ್ ಅವರು ಮೃತಪಟ್ಟಿರುವ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

ಬಿಬಿಎಂಪಿ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಅವರು ಮೈಸೂರು ಜಿಲ್ಲೆಯ ನಂಜನಗೂಡು ಮೂಲದವರಾಗಿದ್ದು, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.