ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಂಸತ್ ಚುನಾವಣೆ 2024 Archives » Page 8 of 8 » Dynamic Leader
October 23, 2024
Home Posts tagged ಸಂಸತ್ ಚುನಾವಣೆ 2024 (Page 8)
ದೇಶ

“ಈ ನಾಚಿಕೆಗೇಡಿನ ಭದ್ರತಾ ಲೋಪಕ್ಕಾಗಿ ಉನ್ನತ ಅಧಿಕಾರಿಗಳನ್ನು ಶಿಕ್ಷಿಸದೆ, ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದು, ಆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ”

“ಪ್ರಧಾನಿ ಮತ್ತು ಅವರ ಪಕ್ಷವು ದೇಶದಲ್ಲಿ ಏಕಪಕ್ಷೀಯ ಆಡಳಿತವನ್ನು ಸ್ಥಾಪಿಸಲು ಬಯಸುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ‘ಎಕ್ಸ್’ ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಭದ್ರತೆ ಕೊರತೆ ಕುರಿತು ಗೃಹ ಸಚಿವರಿಂದ ವರದಿ ಕೇಳಿದ ಕಾರಣಕ್ಕಾಗಿ 141 ಸಂಸದರನ್ನು ಅಮಾನತು ಮಾಡಲಾಗಿದೆ. 6 ಅತಿಕ್ರಮಣ ಪ್ರವೇಶ ಮಾಡಿದವ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತಿಕ್ರಮಣ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದರು ಮುಕ್ತರಾಗಿದ್ದಾರೆ. ಅವರನ್ನು ಇನ್ನೂ ವಿಚಾರಣೆ ಮಾಡಿಲ್ಲ.

ಇದು ಯಾವ ರೀತಿಯ ವಿಚಾರಣೆ? ಸಂಸತ್ತಿನ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಹಿರಿಯ ಅಧಿಕಾರಿಗಳು ಏಕೆ ಇದರ ಹೊಣೆಯನ್ನು ವಹಿಸಿಕೊಂಡಿಲ್ಲ? ನಿಸ್ಸಂಶಯವಾಗಿ ಅತಿಕ್ರಮಣಕಾರರು ತಿಂಗಳಿನಿಂದ ಈ ಯೋಜನೆ ರೂಪಿಸಿರುತ್ತಾರೆ. ಈ ಗುಪ್ತಚರ ವೈಫಲ್ಯಕ್ಕೆ ಯಾರು ಹೊಣೆ? ಸಂಸತ್ತಿನ ಬಹು-ಪದರದ ಭದ್ರತೆಯನ್ನು ಗಮನಿಸಿ, ಇಬ್ಬರು ಅತಿಕ್ರಮಣ ಪ್ರವೇಶ ಮಾಡಿದವರು ತಮ್ಮ ಶೂಗಳಲ್ಲಿ ಹಳದಿ ಅನಿಲ ಡಬ್ಬಿಗಳನ್ನು ಮರೆಮಾಡಿ ಕಟ್ಟಡದೊಳಗೆ ನುಸುಳಿ, ಭಾರತೀಯ ಪ್ರಜಾಪ್ರಭುತ್ವದ ತೊಟ್ಟಿಲನ್ನು ಹೇಗೆ ತಲುಪಿದರು?

ಪ್ರಧಾನಿ ಮತ್ತು ಅವರ ಪಕ್ಷವು ದೇಶದಲ್ಲಿ “ಏಕಪಕ್ಷೀಯ ಆಡಳಿತ” ಸ್ಥಾಪಿಸಲು ಬಯಸುತ್ತಿದ್ದಾರೆ. ಅವರು “ಏಕ್ ಅಕೇಲಾ” ಎಂದು ಹೇಳುತ್ತಾರೆ. ಇದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವುದಕ್ಕೆ ಸಮ. ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ಮೂಲಕ ಅವರು ನಿಖರವಾಗಿ ಇದನ್ನೇ ಮಾಡಿದ್ದಾರೆ. ಈ ನಾಚಿಕೆಗೇಡಿನ ಭದ್ರತಾ ಲೋಪಕ್ಕಾಗಿ ಉನ್ನತ ಅಧಿಕಾರಿಗಳನ್ನು ಶಿಕ್ಷಿಸದೆ, ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದು, ಆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

ರಾಜಕೀಯ

‘ಇಂಡಿಯಾ’ ಮೈತ್ರಿಕೂಟದ ಮೊದಲ ಮೂರು ಸಮಾಲೋಚನಾ ಸಭೆಗಳು ಕ್ರಮವಾಗಿ ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದವು.

ನವದೆಹಲಿ,
2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಜಂಟಿಯಾಗಿ ‘ಇಂಡಿಯಾ’ ಮೈತ್ರಿಕೂಟ ರಚಿಸಿದ್ದವು. ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಯುನೈಟೆಡ್ ಜನತಾ ದಳ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳನ್ನು ಒಳಗೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ಮೊದಲ ಮೂರು ಸಮಾಲೋಚನಾ ಸಭೆಗಳು ಕ್ರಮವಾಗಿ ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದವು.

ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಿಜೋರಾಂ ಎಂಬ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಲ್ಕನೇ ಸಭೆ ನಡೆಯಲಿದೆ ಎಂದು ಘೋಷಿಸಲಾಯಿತು. ಆದರೆ ಮೈತ್ರಿ ಪಕ್ಷಗಳ ಪ್ರಮುಖ ನಾಯಕರಾದ ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್, ನಿತೀಶ್ ಕುಮಾರ್ ಮತ್ತು ಅಖಿಲೇಶ್ ಯಾದವ್ ಸಭೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಸಭೆಯನ್ನು ರದ್ದುಗೊಳಿಸಲಾಯಿತು.

ಇದರ ಬೆನ್ನಲ್ಲೇ ಡಿಸೆಂಬರ್ 19 ರಂದು ಮಧ್ಯಾಹ್ನ 3 ಗಂಟೆಗೆ ‘ಇಂಡಿಯಾ’ ಮೈತ್ರಿಕೂಟದ 4ನೇ ಸಭೆ ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದರು.

ಈ ಹಿನ್ನಲೆಯಲ್ಲಿ, ‘ಇಂಡಿಯಾ’ ಮೈತ್ರಿಕೂಟದ 4ನೇ ಸಭೆ ದೆಹಲಿಯಲ್ಲಿ ಆರಂಭವಾಗಿದೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ, ಎಂ.ಕೆ.ಸ್ಟಾಲಿನ್, ರಾಹುಲ್ ಗಾಂಧಿ, ಟಿ.ಆರ್.ಬಾಲು. ಸೀತಾರಾಮ್ ಯೆಚೂರಿ, ಶರದ್ ಪವಾರ್, ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್. ಮೆಹಬೂಬ ಮುಫ್ತಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ ಮುಂತಾದ ನಾಯಕರು ಭಾಗವಹಿಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಸಂಸತ್ತಿನ ಚುನಾವಣಾ ಕಾರ್ಯತಂತ್ರ ಮತ್ತು ಕ್ಷೇತ್ರಗಳ ಹಂಚಿಕೆ ಕುರಿತು ಚರ್ಚೆ ನಡೆಯಲಿದೆ ಎಂದು ದೆಹಲಿಯ ಮೂಲಗಳು ತಿಳಿಸಿವೆ.

ರಾಜಕೀಯ

ಡಿ.ಸಿ.ಪ್ರಕಾಶ್

‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಂಸತ್ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಖಚಿತವಾಗಿ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮೋದಿ ನಾಯಕತ್ವದಲ್ಲಿ ಮೂರನೇ ಬಾರಿಗೆ ಗೆದ್ದು ಅಧಿಕಾರವನ್ನು ಉಳಿಸಿಕೊಳ್ಳಲು, ಕೇಂದ್ರ ಬಿಜೆಪಿ ಸರ್ಕಾರವು ಹಿಂದೂ ಮತಗಳನ್ನು ಗುರಿಯಾಗಿಟ್ಟುಕೊಂಡು, ಸಿಎಎ ವಿಷಯವನ್ನು ಮತ್ತೆ ಕೈಗೆತ್ತಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯನ್ನು ಪ್ರತಿಪಕ್ಷಗಳು ಎತ್ತುತ್ತಿವೆ.

ಡಿಸೆಂಬರ್ 31, 2014 ಕ್ಕಿಂತ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಬಂದ ಹಿಂದೂಗಳು, ಪಾರ್ಸಿಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಜೈನರಿಗೆ ಭಾರತೀಯ ಪೌರತ್ವ ನೀಡುವ ಮಸೂದೆಯನ್ನು 2019ರಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲಾಯಿತು.

ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ತಕ್ಷಣವೇ ಈ ಮಸೂದಗೆ ಅನುಮೋದನೆ ನೀಡಿದರು. ನಂತರ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿತು. ಇದಕ್ಕೆ ಸಂಬಂಧಿಸಿದ ಸಮೀಕ್ಷೆ ಮುಂದಿನ ಒಂದು ವರ್ಷ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತು.

ಅದೇ ಸಮಯದಲ್ಲಿ, ಕೇಂದ್ರ ಬಿಜೆಪಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಲು ಎಷ್ಟು ಗಂಭೀರವಾದ ಕ್ರಮಗಳನ್ನು ಕೈಗೊಂಡಿತೋ, ಅದಕ್ಕಿಂತ ಎರಡು ಪಟ್ಟು ಅಧಿಕವಾಗಿ ಸದರಿ ಕಾಯ್ದೆಗೆ ದೇಶಾದ್ಯಂತ ವಿರೋಧವೂ ಹುಟ್ಟಿಕೊಂಡಿತು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತದಲ್ಲಿ ನೆಲೆಸಿರುವ ಹಿಂದೂಗಳು, ಸಿಖ್ಖರು ಮತ್ತು ಇತರ ಧರ್ಮಗಳಿಗೆ ಭಾರತೀಯ ಪೌರತ್ವವನ್ನು ನೀಡುವ ಪೌರತ್ವ ತಿದ್ದುಪಡಿ ಕಾಯ್ದೆ (CAA), ಆ ದೇಶಗಳಿಂದ ಬಂದು ಭಾರತದಲ್ಲಿ ನೆಲೆಸಿರುವ ಮುಸ್ಲಿಮರಿಗೆ ಮಾತ್ರ ಪೌರತ್ವವನ್ನು ನೀಡಲಾಗುವುದಿಲ್ಲ ಎಂದು ಹೇಳುತ್ತದೆ.

ಈ ಕಾರಣಕ್ಕಾಗಿಯೇ ಆ ಕಾನೂನಿನ ವಿರುದ್ಧ ಭಾರತದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಂತಹ ರಾಜಧಾನಿಗಳಲ್ಲಿ ಪ್ರಮುಖ ಪ್ರತಿಭಟನೆಗಳು ನಡೆಯುತ್ತಿದ್ದರೆ, ಪ್ರತಿಭಟನೆಗಳು ಸಣ್ಣ ಪಟ್ಟಣಗಳಲ್ಲಿಯೂ ಹರಡಿತು. ಈ ಪ್ರತಿಭಟನೆ ಕೇಂದ್ರ ಬಿಜೆಪಿ ಸರ್ಕಾರಕ್ಕೂ ಬೆದರಿಕೆಯೊಡ್ಡಿತು. ಪ್ರತಿಭಟನೆಯನ್ನು ಎದುರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ, ಹಠಾತ್ ಕೊರೋನ ವೈರಸ್‌ನ ಉಲ್ಬಣದಿಂದಾಗಿ, ಸಿಎಎ ವಿರುದ್ಧದ ಪ್ರತಿಭಟನೆ ಆ ಸಂದರ್ಭದಲ್ಲಿ ಅಂತ್ಯಗೊಂಡಿತು.

ಆ ಬಳಿಕ ಸಿಎಎ ವಿಚಾರದಲ್ಲಿ ಶಾಂತಿ ಕಾಪಾಡಿಕೊಂಡು ಬಂದಿದ್ದ ಕೇಂದ್ರ ಬಿಜೆಪಿ ಸರ್ಕಾರ, ಸಿಎಎ ಕಾಯ್ದೆಗೆ ನಿಯಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಕೇಂದ್ರ ಗೃಹ ಸಚಿವಾಲಯವು ಈ ನಿಯಮಗಳನ್ನು ರೂಪಿಸಲು ಹಲವು ಬಾರಿ ಕಾಲಾವಕಾಶ ಕೋರಿದೆ. ಈ ಹಿನ್ನಲೆಯಲ್ಲಿ, ಕೋಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಖಂಡಿತವಾಗಿಯೂ ಸಿಎಎ ಕಾನೂನನ್ನು ತರಲಾಗುವುದು’ ಎಂದು ಹೇಳಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯವನ್ನು ಹಾಳು ಮಾಡಿದ್ದಾರೆ. ಇಲ್ಲಿ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಅದಕ್ಕೂ ಮುನ್ನ 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು.

ಪೌರತ್ವ ತಿದ್ದುಪಡಿ ಕಾಯ್ದೆ ಈ ದೇಶದ ಕಾನೂನು; ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.

ಇತ್ತೀಚೆಗೆ, ಪಶ್ಚಿಮ ಬಂಗಾಳದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಸಂಸದ ಅಜಯ್ ಮಿಶ್ರಾ, ‘ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳನ್ನು ಮಾರ್ಚ್ 30, 2024 ರೊಳಗೆ ಕೇಂದ್ರ ಸರ್ಕಾರವು ರೂಪಿಸಲಿದೆ’ ಎಂದು ಹೇಳಿದ್ದರು.

ಮೇ ತಿಂಗಳಿನಲ್ಲಿ ಸಂಸತ್ ಚುನಾವಣೆ ನಡೆಯಲಿರುವುದರಿಂದ ಅದಕ್ಕೂ ಮುನ್ನ ಸಿಎಎ ಕಾನೂನಿಗೆ ನಿಯಮ ರೂಪಿಸಿದರೆ ಹಿಂದೂಗಳನ್ನು ಒಗ್ಗೂಡಿಸಿ, ಗಣನೀಯ ಪ್ರಮಾಣದಲ್ಲಿ ಹಿಂದೂ ಮತಗಳನ್ನು ಗಿಟ್ಟಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ರಾಜಕೀಯ ವಿಮರ್ಶಕರು ಹೇಳುತ್ತಿದ್ದಾರೆ. ಇದು ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ದೇಶ

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯನ್ನು ವಿರೋಧಿಸಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ವಿದ್ಯಾರ್ಥಿ ಸಂಘಟನೆಗಳು ಜನವರಿ 12 ರಂದು ಸಂಸತ್ತಿಗೆ ಮುತ್ತಿಗೆ ಹಾಕಲು ನಿರ್ಧರಿಸಿದೆ.

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಸೋಲಿಸಲು ‘ಇಂಡಿಯಾ’ ಎಂಬ ಮೈತ್ರಿಕೂಟವನ್ನು ವಿರೋಧಪಕ್ಷಗಳ ನಾಯಕರು ರಚಿಸಿದ್ದಾರೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ 28 ಪಕ್ಷಗಳು ಸೇರಿವೆ. ಈ ಮೈತ್ರಿಕೂಟದ ವಿದ್ಯಾರ್ಥಿ ಸಂಘಟನೆಗಳ ಸಮಾಲೋಚನಾ ಸಭೆ ನಿನ್ನೆ ನವದೆಹಲಿಯಲ್ಲಿ ನಡೆಯಿತು.

ಈ ಸಭೆಯಲ್ಲಿ, ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ವಿರೋಧಿಸಿ ಜನವರಿ 12 ರಂದು ಸಂಸತ್ತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಖಿಲ ಭಾರತ ವಿದ್ಯಾರ್ಥಿ ಸಂಘ ಮತ್ತು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಸೇರಿದಂತೆ 16 ವಿದ್ಯಾರ್ಥಿ ಸಂಘಟನೆಗಳ ಪರವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಈ ಕುರಿತು ವಿದ್ಯಾರ್ಥಿ ಸಂಘಟನೆಯ ಮುಖಂಡರೊಬ್ಬರು ಮಾತನಾಡುತ್ತಾ, ‘ಕೇಂದ್ರ ಸರ್ಕಾರ, ಶಾಲಾ ಶಿಕ್ಷಣದಿಂದ ಪದವಿವರೆಗೆ ಉಚಿತ ಶಿಕ್ಷಣವನ್ನು ಖಾತರಿಪಡಿಸಬೇಕು. ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಜನವರಿ 12 ರಂದು ನವದೆಹಲಿಯಲ್ಲಿ. ಮತ್ತು ಫೆಬ್ರವರಿ 1 ರಂದು ಚೆನ್ನೈನಲ್ಲಿ ಮೆರವಣಿಗೆ ಮತ್ತು ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ರಾಜಕೀಯ

ದೇಶದ ಹಿತವನ್ನು ಬಯಸದ, ಸದಾ ವೈಯುಕ್ತಿಕ ಹಿತಾಸಕ್ತಿಗಳ ಮೇಲಾಟದಲ್ಲಿ ತೊಡಗುವ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ “ಅವಕಾಶವಾದಿಗಳ ಸಭೆ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಜಗಮೆಚ್ಚಿದ ನಾಯಕ ನರೇಂದ್ರ ಮೋದಿ ಅವರ ಮೇಲೆ ದ್ವೇಷ ಕಾರುವುದಷ್ಟೇ ಇವರ ಪ್ರಮುಖ ಅಜೆಂಡಾ ಎಂದು ಕರ್ನಾಟಕ ಬಿಜೆಪಿ ಹೇಳಿದೆ.

ಸದಾ ಅಧಿಕಾರಕ್ಕಾಗಿ ಕಚ್ಚಾಡುವ ಇವರುಗಳು ರಾಜಕಾರಣದಲ್ಲಿ ಇದುವರೆಗೂ ಬದ್ಧತೆ ಎಂಬುದನ್ನು ಒಮ್ಮೆಯೂ ಪ್ರದರ್ಶಿಸಿಲ್ಲ. ಭೃಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತಗಳು ಇವರ ಮುಖ್ಯ ಸಿದ್ದಾಂತವಾಗಿದ್ದು, ಅದನ್ನು ಸಾಧಿಸಲು ಈಗ ಒಂದಾಗುವ ನಾಟಕವಾಡುತ್ತಿದ್ದಾರೆ. ಈ ಸಭೆಯ ಆಯೋಜಕರು ಯಾರು? ಈ ಸಭೆಯ ಅಧ್ಯಕ್ಷರು ಯಾರು? ಈ ಸಭೆಯ ಸಂಯೋಜನೆ ಯಾವ ಪಕ್ಷದ್ದು? ಇದ್ಯಾವುದರ ಬಗ್ಗೆ ಸ್ವಲ್ಪವೂ ಸ್ಪಷ್ಟತೆ ಇಲ್ಲ. “ಯುನೈಟೆಡ್ ವಿ ಸ್ಟಾಂಡ್” ಎಂಬ ಈ ಕಿಟ್ಟಿ ಪಾರ್ಟಿಯ ಹೆಸರೇ ಇವರ ಮಧ್ಯೆ ಒಗ್ಗಟ್ಟು ದೂರದ ಬೆಟ್ಟ ಎಂಬುದನ್ನು ನಿರೂಪಿಸುತ್ತದೆ!

ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಪರಸ್ಪರ ಕಚ್ಚಾಡುತ್ತಿರುವ ಮಮತಾ ಬ್ಯಾನರ್ಜಿಯ ಟಿಎಂಸಿ ಹಾಗೂ ಕಮ್ಯುನಿಸ್ಟರು ಇಂದು ಒಂದೇ ಟೇಬಲ್‌ನಲ್ಲಿ ಕುಳಿತು ಒಗ್ಗಟ್ಟು ಪ್ರದರ್ಶಿಸುತ್ತಾರಂತೆ!! ಕೇರಳದಲ್ಲಿ ಅಧಿಕಾರಕ್ಕಾಗಿ ಹೊಡೆದಾಡುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಕಾಮ್ರೇಡ್‌ಗಳಂತೆ!! ಪಂಜಾಬ್‌ನಲ್ಲಿ ಬಾಯಿಗೆ ಬಂದಂತೆ ಪರಸ್ಪರ ಬೈದಾಡಿಕೊಳ್ಳುವ ಆಮ್ ಆದ್ಮಿ ಪಕ್ಷದವರು ಹಾಗೂ ಕಾಂಗ್ರೆಸ್‌ನವರು, ಇಲ್ಲಿ ಮಾತ್ರ ಬಾಂಧವರಂತೆ!!

ಕನ್ನಡಿಗರ ಕುಡಿಯುವ ನೀರಿಗೆ, ಕಾವೇರಿ ಹಾಗೂ ಮೇಕೆದಾಟು ಯೋಜನೆಗಳಿಗೆ ಸದಾ ಇನ್ನಿಲ್ಲದಂತೆ ತೊಂದರೆ ಕೊಡುವ ತಮಿಳುನಾಡಿನ ಸಿಎಂ ಸ್ಟಾಲಿನ್‌ಗೆ, ಕರ್ನಾಟಕದ ಕಾಂಗ್ರೆಸ್ ಪಕ್ಷ ಚಿನ್ನತಂಬಿಯಂತೆ!! ಕನ್ನಡಿಗರಿಗೆ ಮಹಾದಾಯಿ ನದಿಯ ಒಂದು ತೊಟ್ಟು ನೀರು ಬಿಡುವುದಿಲ್ಲವೆಂದು ಗೋವಾದಲ್ಲಿ ಘೋಷಿಸಿದ್ದ ಸೋನಿಯಾ ಗಾಂಧಿಗೆ ಇಲ್ಲಿ ದೊಡ್ಡ ಕುರ್ಚಿಯಂತೆ!!

ಸೋನಿಯಾ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬಾರದೆಂದು, ಕಾಂಗ್ರೆಸ್ ಪಕ್ಷವನ್ನೇ ತುಂಡರಿಸಿ ಹೊರ ಬಂದ ಎನ್.ಸಿ.ಪಿ ಸಹ ಇಲ್ಲಿ ಅತಿಥಿಯಂತೆ!! ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಬಿಹಾರವನ್ನು ‘ಬಿಮಾರು’ಗೊಳಿಸಿದ್ದ ನಿತೀಶ್ ಕುಮಾರ್ & ಲಾಲೂ ಪ್ರಸಾದ್ ಯಾದವ್, ಇಲ್ಲಿ ಭಾಯಿ-ಭಾಯಿಗಳಂತೆ!! ಭಾರತವನ್ನು ತುಂಡರಿಸುವಂತಹ ಹೇಳಿಕೆಗಳನ್ನು ನೀಡುವ, ಪಾಕಿಸ್ಥಾನ ಪ್ರೇಮಿ ಫಾರೂಕ್ ಅಬ್ದುಲ್ಲಾಗೂ ಸಹ ಇಲ್ಲಿಗೆ ಆಹ್ವಾನವಿದೆಯಂತೆ!!

ಹಿಂದೂ ಧರ್ಮವನ್ನು ಸದಾ ಅವಹೇಳನ ಮಾಡುವ, ಹಿಂದೂಗಳನ್ನು ಅತ್ಯಂತ ಕೆಟ್ಟದಾಗಿ ನಿಂದಿಸುವ, ದ್ವೇಷಿಸುವ ತಮಿಳುನಾಡಿನ ತೋಳ್ ತಿರುಮಾವಳವನ್, ಮುಸ್ಲಿಂ ಲೀಗ್‌ಗೆ ಇಲ್ಲಿ ಪಾಲಿದೆಯಂತೆ!! ಇಂತಹವರಿಂದ ಸಧೃಡ ಭಾರತ ಹಾಗೂ ಸಶಕ್ತ ಭಾರತವನ್ನು ನಿರ್ಮಿಸಲು ಸಾಧ್ಯವೇ..? ತಿಂಡಿ ತಿನ್ನುವ ವೇಳೆ ಇರುವ ಇವರುಗಳ ಸ್ನೇಹ, ಊಟದ ವೇಳೆಗೆ ಮಾಯವಾದರೂ ಅಚ್ಚರಿ ಇಲ್ಲ. ಎಂದು ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಮಾಡಿ ಆಕ್ರೂಶ ವ್ಯಕ್ತ ಪಡಿಸಿದೆ.

ದೇಶ ರಾಜಕೀಯ

ಬಿಜೆಪಿಯ ಪ್ರಮುಖ ನಾಯಕರ ಜೊತೆ ನಿನ್ನೆ ಮಧ್ಯರಾತ್ರಿಯವರೆಗೂ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಆಗಿರುವ ತಪ್ಪುಗಳು ಮತ್ತೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೇವಲ ಎಂಟು ತಿಂಗಳೇ ಬಾಕಿ ಉಳಿದಿರುವ ಹಿನ್ನಲೆಯಲ್ಲಿ, ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಕಾರ್ಯವನ್ನು ಬಿರುಸಿನಿಂದ ಆರಂಭಿಸಿವೆ. ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು, ಕಳೆದ 23 ರಂದು ಬಿಹಾರದ ಪಾಟ್ನಾದಲ್ಲಿ ವಿಪಕ್ಷ ನಾಯಕರು ಸಭೆ ನಡೆಸಿದ್ದಾರೆ.

ಈ ಹಿನ್ನಲೆಯಲ್ಲಿ ನವದೆಹಲಿಯಲ್ಲಿರುವ ಪ್ರಧಾನಿ ಮೋದಿ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಜಂಟಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಬನ್ಸಾಲ್, ಅರುಣ್ ಸಿಂಗ್ ಮತ್ತಿತರರೊಂದಿಗೆ ಮೋದಿ ಸಮಾಲೋಚನೆ ನಡೆಸಿದ್ದಾರೆ. ಸಭೆ ರಾತ್ರಿ 10 ಗಂಟೆಯ ಸುಮಾರಿಗೆ ಪ್ರಾರಂಭವಾಗಿ, ಮುಂಜಾನೆ 3.30 ರವರೆಗೆ ಮುಂದುವರೆದಿದೆ.

ಸಭೆಯ ಪ್ರಾರಂಭದಲ್ಲೇ, ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆಯ ಬಗ್ಗೆ ಮೋದಿ ವಿಚಾರಿಸಿದ್ದಾರೆ. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಮೋದಿ, ‘ವಿರೋಧ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಕ್ಕೂಟ ರಚನೆ ಮಾಡಲು ಸಾಧ್ಯವಿಲ್ಲ. ಇದೇ ವೇಳೆ ವಿರೋಧ ಪಕ್ಷಗಳ ತಂತ್ರಗಾರಿಕೆಯನ್ನು ಸೋಲಿಸಲು ಪ್ರತಿ ರಾಜ್ಯದಲ್ಲೂ ಬಲಿಷ್ಠವಾದ ಮೈತ್ರಿಕೂಟ ರಚನೆಯಾಗಬೇಕು. ಪ್ರತಿಯೊಂದು ಕ್ಷೇತ್ರವೂ ಮುಖ್ಯ ಎಂಬ ಕಲ್ಪನೆಯೊಂದಿಗೆ ಯೋಜನೆ ಮಾಡಬೇಕು.

10 ವರ್ಷಗಳಿಂದ ಅಧಿಕಾರ ಇಲ್ಲದ ಕಾರಣ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮಾತ್ರವಲ್ಲದೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮಾಧ್ಯಮಗಳು ಮತ್ತು ಉದ್ಯಮಿಗಳು ಸೇರಿದಂತೆ ರಾಜಕೀಯ ಹೊರತಾಗಿಯೂ ನಾವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಿರುತ್ತದೆ.

ಇವೆಲ್ಲಕ್ಕೂ ಸಿದ್ಧರಾಗಿರಬೇಕು. ಕಾಂಗ್ರೆಸ್ ಮತ್ತು ರಾಜ್ಯ ಪಕ್ಷಗಳ ಭ್ರಷ್ಟಾಚಾರ ಹಾಗೂ ಉತ್ತರಾಧಿಕಾರ ರಾಜಕಾರಣದ ಬಗ್ಗೆ ಜನರಲ್ಲಿ ಪ್ರಚಾರ ಮಾಡಬೇಕು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ರಚನೆಯಾಗದಿದ್ದರೂ ಕನಿಷ್ಠ 90 ಸ್ಥಾನ ಗೆಲ್ಲುತ್ತೇವೆ ಎಂದು ನೀವೆಲ್ಲರೂ ಹೇಳಿದ್ದೀರಿ. ಇದಕ್ಕಾಗಿ ನೀವು ತೀವ್ರ ವಿರೋಧದ ನಡುವೆಯೂ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದ್ದೀರಿ.

ಆದರೆ ಗೆದ್ದಿದ್ದು ಬರೀ 66 ಕ್ಷೇತ್ರಗಳಲ್ಲಿ ಮಾತ್ರ. ಕರ್ನಾಟಕದಲ್ಲಿ ಆದ ತಪ್ಪುಗಳು, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಮರುಕಳಿಸಬಾರದು’ ಎಂದು ಮೋದಿ ಕಟ್ಟುನಿಟ್ಟಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಮುಂದೆ, ಪಕ್ಷದ ಕೆಲಸಕ್ಕಾಗಿ ಕೆಲವು ಕೇಂದ್ರ ಮಂತ್ರಿಗಳನ್ನು ವಿಶೇಷವಾಗಿ ರಾಜ್ಯಗಳಲ್ಲಿ ಚುನಾವಣಾ ಉಸ್ತುವಾರಿಗಳಾಗಿ ನೇಮಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ರಾಜ್ಯಪಾಲರಾಗಿರುವ ಕೆಲವರು ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಮತ್ತೆ ಅವರನ್ನು ಪಕ್ಷದ ಕೆಲಸಕ್ಕೆ ಕರೆತರಬಹುದೇ; ಕೆಲವು ಹಿರಿಯ ನಾಯಕರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ಏಕರೂಪ ನಾಗರಿಕ ನೀತಿಸಂಹಿತೆ ತರುವುದರಿಂದ ರಾಜಕೀಯ ಪರಿಣಾಮ ಏನಾಗಬಹುದು; ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದಂತೆ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು ಎಂದು ಹೇಳಲಾಗುತ್ತಿದೆ. Plan For 2024 Polls, Reshuffle Discussed At Late-Night BJP Meet

ದೇಶ ರಾಜಕೀಯ

ಜುಲೈ 10-12ರ ನಡುವೆ ಮುಂದಿನ ಹಂತದ ವಿಪಕ್ಷ ನಾಯಕರ ಚರ್ಚೆ ನಡೆಯಲಿರುವ ಶಿಮ್ಲಾ ಸಭೆಯಲ್ಲಿ ಪಿಡಿಎಗೆ (Patriotic Democratic Alliance) ಅಂತಿಮ ರೂಪ ನೀಡಲಾಗುವುದು.

ಪ್ರಸ್ತಾವಿತ ವಿರೋಧ ಪಕ್ಷದ ಹೆಸರು ‘ದೇಶಭಕ್ತಿಯ ಪ್ರಜಾಸತ್ತಾತ್ಮಕ ಒಕ್ಕೂಟ’ ಅಥವಾ PDA ಆಗಿರಬಹುದು ಮತ್ತು ಮುಂದಿನ ತಿಂಗಳು ಶಿಮ್ಲಾದಲ್ಲಿ ನಡೆಯುವ ವಿರೋಧ ಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು ಶನಿವಾರ ಪಾಟ್ನಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಕುರಿತು ಪ್ರತಿಪಾದಿಸಿದರು ಎಂದು ಹೇಳಲಾಗುತ್ತಿದೆ. ಶಿಮ್ಲಾ ಸಭೆಯಲ್ಲಿ ಪಿಡಿಎಗೆ ಅಂತಿಮ ರೂಪ ನೀಡಲಾಗುವುದು ಎಂದು ಅವರು ಹೇಳಿದಾರೆ. ಜುಲೈ 10-12 ರ ನಡುವೆ ಪ್ರತಿಪಕ್ಷ ನಾಯಕರ ಮುಂದಿನ ಹಂತದ ಚರ್ಚೆ ನಡೆಯಲಿದೆ.

ಡಿ.ರಾಜಾ ಅವರು, ಭಾನುವಾರ ಮೈತ್ರಿಯ ಹೆಸರು ‘ಪಿಡಿಎ’ ಆಗಿರಬಹುದು ಎಂದು ಹೇಳಿದ್ದಾರೆ. ಆದರೆ, ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಒತ್ತಿ ಹೇಳಿದರು. ಹೊಸ ಮೈತ್ರಿಯನ್ನು ಪೇಟ್ರಿಯಾಟಿಕ್ ಡೆಮಾಕ್ರಟಿಕ್ ಅಲೈಯನ್ಸ್ (ಪಿಡಿಎ) ಎಂದು ಹೆಸರಿಸಬಹುದು ಎಂದು ನಾವು ಹೇಳಬಹುದು. ಅದರ ಬಗ್ಗೆ ನಾವು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಎನ್‌ಡಿಎಯನ್ನು ಸೋಲಿಸುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ ಮತ್ತು ಎಲ್ಲಾ ವಿರೋಧ ಪಕ್ಷಗಳಿಗೆ ಅದರ ಬಗ್ಗೆ ಸ್ಪಷ್ಟತೆ ಇದೆ ಎಂದು ಅವರು ಹೇಳಿದರು.

ಪ್ರಸ್ತಾವಿತ ವೇದಿಕೆಗೆ ಬರುವ ವಿರೋಧ ಪಕ್ಷಗಳು ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸಿದ್ಧಾಂತವನ್ನು ಹೊಂದಿರುತ್ತವೆ ಮತ್ತು ಹೊಸ ವೇದಿಕೆಯ ಹೆಸರು ಅದರ ಪ್ರತಿಬಿಂಬವನ್ನು ಹೊಂದಿರುತ್ತದೆ ಎಂದು ರಾಜಾ ಹೇಳಿದ್ದಾರೆ. “ತಮಿಳುನಾಡಿನಲ್ಲಿ ಸೆಕ್ಯುಲರ್ ಡೆಮಾಕ್ರಟಿಕ್ ಫ್ರಂಟ್ ಇದೆ. ಆದರೆ, ಬಿಹಾರದಲ್ಲಿ ಮಹಾಘಟಬಂಧನ್ ಇದೆ. ಆದ್ದರಿಂದ, ಸಂಯೋಜಿತ ವಿರೋಧವಾಗಿ ನಿಮ್ಮ ಬದ್ಧತೆಯನ್ನು ಹಂಚಿಕೊಳ್ಳುವ ಹೆಸರನ್ನು ನಾವು ಹೊಂದಿದ್ದೇವೆ ”ಎಂದು ಅವರು ಹೇಳಿದ್ದಾರೆ.

2004ರಲ್ಲಿ, ಸಾರ್ವತ್ರಿಕ ಚುನಾವಣೆಯ ನಂತರ, ಕಾಂಗ್ರೆಸ್, ಎಡ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚಿಸಲು ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಅನ್ನು ರಚಿಸಿಕೊಳ್ಳಲಾಯಿತು. ಬಿಹಾರದಲ್ಲಿ, ಆರ್‌ಜೆಡಿ-ಜೆಡಿ(ಯು), ಕಾಂಗ್ರೆಸ್ ಮತ್ತು ಎಡಪಕ್ಷಗಳು 2015ರ ವಿಧಾನಸಭಾ ಚುನಾವಣೆಯ ಮೊದಲು ಮಹಾ ಮೈತ್ರಿ ಅಥವಾ ಮಹಾಘಟಬಂಧನ್ ಅನ್ನು ರಚಿಸಿ ಒಟ್ಟಿಗೆ ಸೇರಿಕೊಂಡವು.

ಡಿ.ರಾಜಾ ಅವರ ಘೋಷಣೆ, ಪಾಟ್ನಾ ಸಭೆಯ ಒಂದು ದಿನದ ನಂತರ ಹೊರ ಬರುತ್ತಿದೆ, ಪ್ರಸ್ತಾವಿತ ವೇದಿಕೆಗೆ ಔಪಚಾರಿಕ ರೂಪ ನೀಡುವ ಕಸರತ್ತು ಈಗಾಗಲೇ ಮುಂದುವರೆದಿದೆ. ಮತ್ತು ಶಿಮ್ಲಾ ಸಭೆಯು ಅದರ ರಚನೆ ಮತ್ತು ವಿವಿಧ ಕ್ಷೇತ್ರಗಳ ನಡುವೆ ಸೀಟು ಹಂಚಿಕೆಯ ವಿವಿಧ ಅಂಶಗಳ ಮೇಲೆ ಮುದ್ರೆ ಹಾಕುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಪ್ರಾಸಂಗಿಕವಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರತಿಪಕ್ಷಗಳ ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯ ತಮ್ಮ ಭಾಷಣದಲ್ಲಿ “ಅವರೆಲ್ಲರೂ ದೇಶದ ಪ್ರಜೆಗಳಾಗಿರುವುದರಿಂದ ಅವರನ್ನು ‘ವಿರೋಧ ಪಕ್ಷದವರು’ ಎಂದು ಕರೆಯಬಾರದು ಅವರನ್ನು ‘ದೇಶಭಕ್ತರು’ ಎಂದು ಕರೆಯಬೇಕು” ಎಂದು ಒತ್ತಾಯಿಸಿದ್ದರು.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್

ಬಿಜೆಪಿ ವಿರುದ್ಧ, ಪಕ್ಷಗಳನ್ನು ಒಗ್ಗೂಡಿಸುವ ಹೊಣೆ ಹೊತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಜೂನ್ 23 ರಂದು ಪಕ್ಷದ ಮುಖಂಡರೊಂದಿಗೆ ಪಾಟ್ನಾದಲ್ಲಿ ಸಭೆ ನಡೆಸಿದರು. ಇದರಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ತೃಣಮೂಲ ಕಾಂಗ್ರೆಸ್, ಎಡಪಂಥೀಯ ಪಕ್ಷಗಳು, ರಾಷ್ಟ್ರೀಯವಾದಿ ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಶಿವಸೇನೆ, ಜಾರ್ಖಂಡ್ ಮುಕ್ತಿ ಮೋರ್ಚಾ, ನ್ಯಾಷನಲ್ ಕಾನ್ಫರೆನ್ಸ್‌, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಆಮ್ ಆದ್ಮಿ ಪಕ್ಷದ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸುಮಾರು 4 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ, ವಿರೋಧ ಪಕ್ಷಗಳ ಬಲವರ್ಧನೆ ಕುರಿತು ಚರ್ಚೆ ನಡೆಸಲಾಯಿತು. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ಮುಖಂಡರ ಒಮ್ಮತದ ಅಭಿಪ್ರಾಯವಾಗಿತ್ತು. ಈ ಹಿನ್ನಲೆಯಲ್ಲಿ, ಭಾರತದ ರಾಜಕೀಯದಲ್ಲಿ ಬದಲಾವಣೆ ತಂದ ಮತ್ತು ಪ್ರಬಲವಾಗಿ ಅಧಿಕಾರದಲ್ಲಿದ್ದ ಸರ್ಕಾರಗಳನ್ನು ಉರುಳಿಸಿದ ವಿರೋಧ ಪಕ್ಷಗಳ ಕುರಿತು ಒಂದು ನೋಟ:

ಜಯಪ್ರಕಾಶ್ ನಾರಾಯಣ್

1975ರಲ್ಲಿ ತುರ್ತು ಪರಿಸ್ಥಿತಿ (Emergency) ಜಾರಿಗೊಳಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯ ವಿರುದ್ಧ, ವಿರೋಧ ಪಕ್ಷಗಳು ಒಟ್ಟು ಗೂಡಿ ಜನತಾ ಪಕ್ಷವನ್ನು ಆರಂಭಿಸಿದವು. ಇದರ ಬೆನ್ನಲ್ಲೇ 1977ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಜನತಾ ಪಕ್ಷ ಸೋಲಿಸಿತು. ನಂತರ ಮೊರಾರ್ಜಿ ದೇಸಾಯಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಸ್ವತಂತ್ರ ಭಾರತದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಬೀಜವನ್ನು ಬಿತ್ತಿದವರು ಜಯಪ್ರಕಾಶ್ ನಾರಾಯಣ್. ಆರಂಭದಲ್ಲಿ, ಇಂದಿರಾ ಗಾಂಧಿ ವಿರುದ್ಧ ಅವರು ಪ್ರಾರಂಭಿಸಿದ ಬಿಹಾರ ಚಳವಳಿ, ಜನತಾ ಪಕ್ಷದ ರಚನೆಗೆ ಪ್ರಮುಖ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ರಾಜೀವ್ ಗಾಂಧಿಯನ್ನು ಅಧಿಕಾರದಿಂದ ಕೆಳಗಿಳಿಸಲು ಜನತಾ ದಳದ ಸಂಸ್ಥಾಪಕ ವಿ.ಪಿ.ಸಿಂಗ್, ನ್ಯಾಷನಲ್ ಫ್ರಂಟ್ ಎಂಬ ಮೈತ್ರಿಕೂಟವನ್ನು ರಚಿಸಿದರು. ಬೋಪರ್ಸ್ ಹಗರಣದ ಹಿನ್ನೆಲೆಯಲ್ಲಿ ರಚನೆಯಾದ ಮೈತ್ರಿಕೂಟಕ್ಕೆ ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್.ಟಿ.ರಾಮರಾವ್ ನಾಯಕರಾಗಿ, ವಿ.ಪಿ.ಸಿಂಗ್ ಸಂಘಟಕರಾಗಿದ್ದರು. ಈ ಮೈತ್ರಿಕೂಟ ರಚನೆಗೆ ತಮಿಳುನಾಡಿನ ಡಿಎಂಕೆ ನಾಯಕ ಎಂ.ಕರುಣಾನಿಧಿ ಪ್ರಮುಖ ಪಾತ್ರ ವಹಿಸಿದ್ದರು.

ಎಂ.ಕರುಣಾನಿಧಿ

1989ರಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಫ್ರಂಟ್ ಗೆ ಬಿಜೆಪಿ ಮತ್ತು ಎಡರಂಗ ಬೆಂಬಲ ನೀಡಿತ್ತು. ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಷನಲ್ ಫ್ರಂಟ್ ಸರ್ಕಾರ ಒಂದು ವರ್ಷವೂ ಉಳಿಯಲಿಲ್ಲ. ಪಕ್ಷದೊಳಗಿನ ಅಧಿಕಾರದ ಕಚ್ಚಾಟ, ಮಂಡಲ್ ಆಯೋಗದ ವಿರುದ್ಧ ಬಿಜೆಪಿಯ ನಿಲುವು, ಮತ್ತು ರಾಮಜನ್ಮ ಭೂಮಿ ಸಮಸ್ಯೆಯಿಂದಾಗಿ ನ್ಯಾಷನಲ್ ಫ್ರಂಟ್ ಸರ್ಕಾರವನ್ನು ಉರುಳಿಸಲಾಯಿತು. ಕಾಂಗ್ರೆಸ್ ವಿರುದ್ಧ ರಚನೆಯಾದ ನ್ಯಾಷನಲ್ ಫ್ರಂಟ್, ಕಾಂಗ್ರೆಸ್ ಬೆಂಬಲದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿತು. ಚಂದ್ರಶೇಖರ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಮತ್ತೆ ಚಂದ್ರಶೇಖರ್ ಆಡಳಿತವನ್ನು ಕಾಂಗ್ರೆಸ್ ಏಳು ತಿಂಗಳಲ್ಲೇ ಉರುಳಿಸಿತು.

ಅದೇ ರೀತಿ 1998ರಲ್ಲಿ ಕಾಂಗ್ರೆಸ್ ವಿರುದ್ಧ ರಚನೆಯಾದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಜಯಲಲಿತ ನೇರುತ್ವದ ಎಐಎಡಿಎಂಕೆ ಬೆಂಬಲ ಕಳೆದುಕೊಂಡು ಒಂದೇ ವರ್ಷದಲ್ಲಿ ಸರ್ಕಾರ ಉರುಳಿತು. ನಂತರ, ಡಿಎಂಕೆ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು 1999 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ವಾಜಪೇಯಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಪೂರ್ಣ ಅವಧಿಯನ್ನು ಪೂರ್ಣಗೊಳಿಸಿತು.

ಎನ್.ಟಿ.ರಾಮರಾವ್

ವಿರೋಧ ಪಕ್ಷಗಳ ಮೈತ್ರಿಯು ವಿವಿಧ ಅವಧಿಗಳಲ್ಲಿ ವಿಜಯಶಾಲಿಯಾಗಿದ್ದರೂ, ಈಗ ಕೇಂದ್ರದಲ್ಲಿ ಪ್ರಬಲವಾಗಿರುವ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ವಿರುದ್ಧ, ವಿರೋಧ ಪಕ್ಷಗಳ ಒಕ್ಕೂಟ ರಚನೆಯ ಪ್ರಯತ್ನ ಫಲ ನೀಡುತ್ತದೆಯೇ ಕಾದು ನೋಡಬೇಕಿದೆ.

ರಾಜಕೀಯ

ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್ ಪಕ್ಷವು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಲು ಚಿಂತನೆ ನಡೆಸುತ್ತಿದೆ?

2014ರಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಿ ಘೋಷಿಸಿ, ಬಿಜೆಪಿ ಸಂಸತ್ ಚುನಾವಣೆಯನ್ನು ಎದುರಿಸಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮೋದಿ ಪ್ರಧಾನಿಯಾದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡನೇ ಬಾರಿಗೆ ಗೆಲುವು ಸಾಧಿಸಿತು.

ಸದ್ಯ ಒಂಬತ್ತು ವರ್ಷಗಳ ಕಾಲ ಪ್ರಧಾನಿಯಾಗಿರುವ ಮೋದಿಗೆ, ಭಾರತದಲ್ಲಿ ಸಮಾನ ನಾಯಕರಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಈ ಹಿನ್ನಲೆಯಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು, ಕಾಂಗ್ರೆಸ್ ಪಕ್ಷ ಚಿಂತನೆ ನಡೆಸಿದೆ ಎಂಬ ಸುದ್ದಿ ಹೊರಬಿದ್ದಿದೆ.

ಬಿಜೆಪಿಗೆ ಮೂರನೇ ಬಾರಿ ಅಧಿಕಾರಕ್ಕೆ ಬರಲು ಬಿಡಬಾರದು ಎಂಬ ಹಠಕ್ಕೆ ಬಿದ್ದಿರುವ ವಿರೋಧ ಪಕ್ಷಗಳು, ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ತೀವ್ರ ಪ್ರಯತ್ನ ನಡೆಸುತ್ತಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಉಪಕ್ರಮದಲ್ಲಿ ಭಾಗಿಯಾಗಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಜೂನ್ 23 ರಂದು ನಡೆಯಲಿರುವ ಪ್ರತಿಪಕ್ಷ ನಾಯಕರ ಸಭೆಯಲ್ಲಿ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸಲಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಕೆಲವು ಪಕ್ಷಗಳನ್ನು ಹೊರತುಪಡಿಸಿ, ಇತರ ಎಲ್ಲ ವಿರೋಧ ಪಕ್ಷಗಳು ಜೂನ್ 23ರ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಆದರೆ, ಮೈತ್ರಿಯನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಅದರಲ್ಲೂ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಚುನಾವಣೆಯಲ್ಲಿ ಹೆಚ್ಚು ಸಂಸದರನ್ನು ಪಡೆಯುವ ಪಕ್ಷದ ವ್ಯಕ್ತಿಗೆ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಿದೆ. ಆ ಮೂಲಕ ಕಾಂಗ್ರೆಸ್ ಹೆಚ್ಚು ಸಂಸದರನ್ನು ಪಡೆಯಲಿದೆ.

ಹಾಗಾಗಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ಕಾಂಗ್ರೆಸ್ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. ತೃಣಮೂಲ ಕಾಂಗ್ರೆಸ್ ಸೇರಿದಂತೆ ಪಕ್ಷಗಳು ನೆಹರೂ ಕುಟುಂಬದ ಒಬ್ಬರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಸ್ವೀಕರಿಸಲು ಸಿದ್ಧರಿಲ್ಲ.

ಈ ಹಿಂದೆ ಮಮತಾ ಬ್ಯಾನರ್ಜಿಯಂತಹವರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ, ಕರ್ನಾಟಕದ ಗೆಲುವಿನಿಂದಾಗಿ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಾದ ನಂತರವೇ ಕಾಂಗ್ರೆಸ್ ಪಕ್ಷದ ಬಗ್ಗೆ ಮಮತಾ ಬ್ಯಾನರ್ಜಿಯವರ ನಿಲುವು ಬದಲಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಯಶಸ್ಸಿನಲ್ಲಿ ಖರ್ಗೆಯವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸುದೀರ್ಘ ಕಾಲ ರಾಜಕೀಯದಲ್ಲಿರುವ ಖರ್ಗೆ ಅವರು ಒಂಬತ್ತು ಬಾರಿ ಶಾಸಕರಾಗಿ, ಎರಡು ಬಾರಿ ಲೋಕಸಭೆ ಸಂಸದರಾಗಿದ್ದ ಅವರು ಪ್ರಸ್ತುತ ರಾಜ್ಯಸಭಾ ಸಂಸದರಾಗಿದ್ದಾರೆ. ಭಾರತದ ಹಿರಿಯ ರಾಜಕೀಯ ನಾಯಕರಲ್ಲಿ ಖರ್ಗೆಯವರೂ ಒಬ್ಬರು.

ಬಿಜೆಪಿ ಸದಸ್ಯರು ಪ್ರಧಾನಿ ಮೋದಿಯನ್ನು ಬಲಿಷ್ಠ ನಾಯಕ, ಪ್ರಭಾವಿ ನಾಯಕ ಮತ್ತು ಅಚಲ ನಾಯಕ ಎಂದು ಬಣ್ಣಿಸುತ್ತಾರೆ. ಆದರೆ, ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ‘ಮೋದಿ ವಿಷಪೂರಿತ ಹಾವಿದ್ದಂತೆ’ ಎಂದು ಖರ್ಗೆ ಕಟು ಟೀಕೆ ಮಾಡಿದ್ದರು. ಆ ವಿಮರ್ಶೆ ವಿವಾದಕ್ಕೆ ಎಡೆಮಾಡಿಕೊಟ್ಟಿತು. ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ಕಾಂಗ್ರೆಸ್ ಪಕ್ಷ ನನಗೆ 91 ಬಾರಿ ಅವಮಾನ ಮಾಡಿದೆ. ಪ್ರತಿ ಬಾರಿ ನನ್ನನ್ನು ಅವಮಾನಿಸಿದಾಗಲೂ ಕಾಂಗ್ರೆಸ್ ಪಕ್ಷವೇ ನಾಶವಾಗಿದೆ’ ಎಂದು ಹೇಳಿದರು.

ಆದರೆ, ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿತು. ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಸೂಚಿಸಿದರೆ ಅದು ಉತ್ತಮ ನಿರ್ಧಾರವಾಗಿರುತ್ತದೆ ಎಂದು ರಾಷ್ಟ್ರಮಟ್ಟದಲ್ಲಿ ವಿಶ್ಲೇಷಿಸಲಾಗುತ್ತಿದೆ.

ದೇಶ ರಾಜಕೀಯ

ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಚರಣ್ ಸಿಂಗ್ ಮುಂಬರುವ ಸಂಸತ್ ಚುನಾವಣೆಯಲ್ಲಿ 6ನೇ ಬಾರಿಗೆ ಸ್ಪರ್ಧಿಸುವುದಾಗಿ ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ಲೈಂಗಿಕ ಕಿರುಕುಳ ಆರೋಪದಲ್ಲಿ ಭಾಗಿಯಾಗಿರುವ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಚರಣ್ ಸಿಂಗ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ, ಆತನನ್ನು ಇನ್ನೂ ಬಂಧಿಸಿಲ್ಲ. ಆತನನ್ನು ಬಂಧಿಸಿದರೆ ಮಾತ್ರ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸುವುದಾಗಿ ಕಸ್ತಿ ಪಟುಗಳು ಹೇಳಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಪೂರ್ವ ಉತ್ತರ ಪ್ರದೇಶದ ತಮ್ಮ ಲೋಕಸಭಾ ಕ್ಷೇತ್ರ ಕೈಸರ್‌ಗಂಜ್‌ನಲ್ಲಿ ರೋಡ್ ಶೋ ನಡೆಸಿ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 9 ವರ್ಷಗಳ ಸಾಧನೆಗಳನ್ನು ಪಟ್ಟಿ ಮಾಡಿ ಮಾತನಾಡಿದರು. “ದೇಶದಾದ್ಯಂತ ಗುಣಮಟ್ಟದ ರಸ್ತೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಮಿಲಿಟರಿ ಉಪಕರಣಗಳನ್ನು ಸ್ಥಳೀಯವಾಗಿ ನಿರ್ಮಿಸಲು ಪ್ರಧಾನಿ ಮೋದಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸರ್ಕಾರ ರಚಿಸಲಿದೆ. ಲೋಕಸಭೆ ಚುನಾವಣೆಯಲ್ಲಿ ಕೈಸರ್‌ಗಂಜ್ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತೇನೆ” ಎಂದು ಹೇಳಿದರು. ಬ್ರಿಜ್ ಭೂಷಣ್ 6ನೇ ಅವಧಿಗೆ ಕೈಸರ್‌ಗಂಜ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂಬ ಸುದ್ದಿಯಿಂದ ಕುಸ್ತಿಪಟುಗಳು ಆಘಾತಕ್ಕೊಳಗಾಗಿದ್ದಾರೆ.

Will contest 2024 Lok Sabha polls from Kaiserganj: Brij Bhushan Singh

BJP MP and former WFI chief Brij Bhushan Sharan Singh held a road show and addressed a public meeting in his Lok Sabha constituency Kaiserganj in east Uttar Pradesh.

Bharatiya Janata Party (BJP) member of Parliament (MP) and former Wrestling Federation of India (WFI) chief, Brij Bhushan Sharan Singh, who is facing allegations of sexual harassment by women wrestlers, on Sunday asserted that he would contest the Lok Sabha polls from his parliamentary constituency Kaiserganj in east Uttar Pradesh again in 2024.