ಜಗಮೆಚ್ಚಿದ ನಾಯಕ ನರೇಂದ್ರ ಮೋದಿ ಅವರ ಮೇಲೆ ದ್ವೇಷ ಕಾರುವುದಷ್ಟೇ ವಿರೋಧ ಪಕ್ಷಗಳ ಅಜೆಂಡಾ!
ದೇಶದ ಹಿತವನ್ನು ಬಯಸದ, ಸದಾ ವೈಯುಕ್ತಿಕ ಹಿತಾಸಕ್ತಿಗಳ ಮೇಲಾಟದಲ್ಲಿ ತೊಡಗುವ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ “ಅವಕಾಶವಾದಿಗಳ ಸಭೆ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಜಗಮೆಚ್ಚಿದ ನಾಯಕ ನರೇಂದ್ರ ಮೋದಿ ಅವರ ಮೇಲೆ ದ್ವೇಷ ಕಾರುವುದಷ್ಟೇ ಇವರ ಪ್ರಮುಖ ಅಜೆಂಡಾ ಎಂದು ಕರ್ನಾಟಕ ಬಿಜೆಪಿ ಹೇಳಿದೆ.
ಸದಾ ಅಧಿಕಾರಕ್ಕಾಗಿ ಕಚ್ಚಾಡುವ ಇವರುಗಳು ರಾಜಕಾರಣದಲ್ಲಿ ಇದುವರೆಗೂ ಬದ್ಧತೆ ಎಂಬುದನ್ನು ಒಮ್ಮೆಯೂ ಪ್ರದರ್ಶಿಸಿಲ್ಲ. ಭೃಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತಗಳು ಇವರ ಮುಖ್ಯ ಸಿದ್ದಾಂತವಾಗಿದ್ದು, ಅದನ್ನು ಸಾಧಿಸಲು ಈಗ ಒಂದಾಗುವ ನಾಟಕವಾಡುತ್ತಿದ್ದಾರೆ. ಈ ಸಭೆಯ ಆಯೋಜಕರು ಯಾರು? ಈ ಸಭೆಯ ಅಧ್ಯಕ್ಷರು ಯಾರು? ಈ ಸಭೆಯ ಸಂಯೋಜನೆ ಯಾವ ಪಕ್ಷದ್ದು? ಇದ್ಯಾವುದರ ಬಗ್ಗೆ ಸ್ವಲ್ಪವೂ ಸ್ಪಷ್ಟತೆ ಇಲ್ಲ. “ಯುನೈಟೆಡ್ ವಿ ಸ್ಟಾಂಡ್” ಎಂಬ ಈ ಕಿಟ್ಟಿ ಪಾರ್ಟಿಯ ಹೆಸರೇ ಇವರ ಮಧ್ಯೆ ಒಗ್ಗಟ್ಟು ದೂರದ ಬೆಟ್ಟ ಎಂಬುದನ್ನು ನಿರೂಪಿಸುತ್ತದೆ!
ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಪರಸ್ಪರ ಕಚ್ಚಾಡುತ್ತಿರುವ ಮಮತಾ ಬ್ಯಾನರ್ಜಿಯ ಟಿಎಂಸಿ ಹಾಗೂ ಕಮ್ಯುನಿಸ್ಟರು ಇಂದು ಒಂದೇ ಟೇಬಲ್‌ನಲ್ಲಿ ಕುಳಿತು ಒಗ್ಗಟ್ಟು ಪ್ರದರ್ಶಿಸುತ್ತಾರಂತೆ!! ಕೇರಳದಲ್ಲಿ ಅಧಿಕಾರಕ್ಕಾಗಿ ಹೊಡೆದಾಡುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಕಾಮ್ರೇಡ್‌ಗಳಂತೆ!! ಪಂಜಾಬ್‌ನಲ್ಲಿ ಬಾಯಿಗೆ ಬಂದಂತೆ ಪರಸ್ಪರ ಬೈದಾಡಿಕೊಳ್ಳುವ ಆಮ್ ಆದ್ಮಿ ಪಕ್ಷದವರು ಹಾಗೂ ಕಾಂಗ್ರೆಸ್‌ನವರು, ಇಲ್ಲಿ ಮಾತ್ರ ಬಾಂಧವರಂತೆ!!
ಕನ್ನಡಿಗರ ಕುಡಿಯುವ ನೀರಿಗೆ, ಕಾವೇರಿ ಹಾಗೂ ಮೇಕೆದಾಟು ಯೋಜನೆಗಳಿಗೆ ಸದಾ ಇನ್ನಿಲ್ಲದಂತೆ ತೊಂದರೆ ಕೊಡುವ ತಮಿಳುನಾಡಿನ ಸಿಎಂ ಸ್ಟಾಲಿನ್‌ಗೆ, ಕರ್ನಾಟಕದ ಕಾಂಗ್ರೆಸ್ ಪಕ್ಷ ಚಿನ್ನತಂಬಿಯಂತೆ!! ಕನ್ನಡಿಗರಿಗೆ ಮಹಾದಾಯಿ ನದಿಯ ಒಂದು ತೊಟ್ಟು ನೀರು ಬಿಡುವುದಿಲ್ಲವೆಂದು ಗೋವಾದಲ್ಲಿ ಘೋಷಿಸಿದ್ದ ಸೋನಿಯಾ ಗಾಂಧಿಗೆ ಇಲ್ಲಿ ದೊಡ್ಡ ಕುರ್ಚಿಯಂತೆ!!
ಸೋನಿಯಾ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬಾರದೆಂದು, ಕಾಂಗ್ರೆಸ್ ಪಕ್ಷವನ್ನೇ ತುಂಡರಿಸಿ ಹೊರ ಬಂದ ಎನ್.ಸಿ.ಪಿ ಸಹ ಇಲ್ಲಿ ಅತಿಥಿಯಂತೆ!! ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಬಿಹಾರವನ್ನು ‘ಬಿಮಾರು’ಗೊಳಿಸಿದ್ದ ನಿತೀಶ್ ಕುಮಾರ್ & ಲಾಲೂ ಪ್ರಸಾದ್ ಯಾದವ್, ಇಲ್ಲಿ ಭಾಯಿ-ಭಾಯಿಗಳಂತೆ!! ಭಾರತವನ್ನು ತುಂಡರಿಸುವಂತಹ ಹೇಳಿಕೆಗಳನ್ನು ನೀಡುವ, ಪಾಕಿಸ್ಥಾನ ಪ್ರೇಮಿ ಫಾರೂಕ್ ಅಬ್ದುಲ್ಲಾಗೂ ಸಹ ಇಲ್ಲಿಗೆ ಆಹ್ವಾನವಿದೆಯಂತೆ!!
ಹಿಂದೂ ಧರ್ಮವನ್ನು ಸದಾ ಅವಹೇಳನ ಮಾಡುವ, ಹಿಂದೂಗಳನ್ನು ಅತ್ಯಂತ ಕೆಟ್ಟದಾಗಿ ನಿಂದಿಸುವ, ದ್ವೇಷಿಸುವ ತಮಿಳುನಾಡಿನ ತೋಳ್ ತಿರುಮಾವಳವನ್, ಮುಸ್ಲಿಂ ಲೀಗ್‌ಗೆ ಇಲ್ಲಿ ಪಾಲಿದೆಯಂತೆ!! ಇಂತಹವರಿಂದ ಸಧೃಡ ಭಾರತ ಹಾಗೂ ಸಶಕ್ತ ಭಾರತವನ್ನು ನಿರ್ಮಿಸಲು ಸಾಧ್ಯವೇ..? ತಿಂಡಿ ತಿನ್ನುವ ವೇಳೆ ಇರುವ ಇವರುಗಳ ಸ್ನೇಹ, ಊಟದ ವೇಳೆಗೆ ಮಾಯವಾದರೂ ಅಚ್ಚರಿ ಇಲ್ಲ. ಎಂದು ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಮಾಡಿ ಆಕ್ರೂಶ ವ್ಯಕ್ತ ಪಡಿಸಿದೆ.