ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಹಂಚಿಕೆ Archives » Dynamic Leader
January 5, 2025
Home Posts tagged ಹಂಚಿಕೆ
ಬೆಂಗಳೂರು ರಾಜಕೀಯ ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

ಬೆಂಗಳೂರು: ಬೆಂಗಳೂರು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PMAY (HLF)-Phase-3 ಯೋಜನೆಯಡಿ 912 ಮನೆಗಳನ್ನು ನಿರ್ಮಿಸುತ್ತಿದ್ದೆ. (768  G+3 ಮನೆಗಳು ಮತ್ತು 144 G+4 ಮನೆಗಳು) ಕೊಳಗೇರಿ ಮಂಡಳಿಯ ನಂ.3ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ದಿನಾಂಕ: 23.12.2022ರ ಪತ್ರದ ಪ್ರಕಾರ, 912 ಮನೆಗಳು ಅಡಿಪಾಯ / ಪ್ಲಿಂತ್ ಮಟ್ಟ, 638 ಮನೆಗಳು ಮೇಲ್ಛಾವಣಿ ಮಟ್ಟ ಮತ್ತು 96 ಮನೆಗಳು ಪೂರ್ಣತಾ ಹಂತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ತಿಳಿದು ಬರುತ್ತಿದೆ.

ಸದರಿ 912 ಮನೆಗಳ ಪೈಕಿ 768 ಜಿ+3 ಮನೆಗಳನ್ನು ರಾಜೀವ್‍ಗಾಂಧಿ ನಗರಕ್ಕೆ (ದೇವಸಂದ್ರ) 107 ಮನೆಗಳು, ಸಂಜಯ್‍ಗಾಂಧಿ ನಗರಕ್ಕೆ (ದೇವಸಂದ್ರ) 245 ಮನೆಗಳು, ರಾಮಮೂರ್ತಿನಗರ ಸರ್ವೆ ನಂ.85ರಲ್ಲಿನ ಕೊಳಗೇರಿ ಪ್ರದೇಶಕ್ಕೆ 337 ಮನೆಗಳು ಹಾಗೂ ಭಟ್ಟರಹಳ್ಳಿ ಜನತಾ ಕಾಲೋನಿಗೆ 79 ಮನೆಗಳು ಒಟ್ಟು 738 ಮನೆಗಳನ್ನು ಸ್ಥಳಾಂತರ ಮಾಡುವ ಉದ್ದೇಶದಿಂದ ಕೊಳಗೇರಿ ಮಂಡಳಿ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ದಪಡಿಸಿರುವುದಾಗಿ ಹೇಳುತ್ತಿದೆ.

ವಸತಿ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆಯಲಿಕ್ಕಾಗಿ, ಕೊಳಗೇರಿ ಮಂಡಳಿ ಅನಿವಾರ್ಯತೆಯ ಕಾರಣಗಳಿಂದ ಕೆಲವೊಂದು ಸಂದರ್ಭಗಳಲ್ಲ್ಲಿ ನಕಲಿಯಾಗಿ (Dummy) ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ವಿಸ್ತೃತ ಯೋಜನಾ ವರದಿಯೊಂದಿಗೆ ಲಗತ್ತಿಸಿ ಸರ್ಕಾರಕ್ಕೆ ಸಲ್ಲಿಸುವುದು ವಾಡಿಕೆ. ಅದು ಮನೆಗಳ ಹಂಚಿಕೆಗಾಗಿ ಅಲ್ಲ. ಪ್ರಸ್ತಾಪಿತ ನಾಲ್ಕು ಕೊಳಗೇರಿ ಪ್ರದೇಶಗಳ ಪೈಕಿ ರಾಜೀವ್‍ಗಾಂಧಿ ನಗರ, ಸಂಜಯ್‍ಗಾಂಧಿ ನಗರ, ರಾಮಮೂರ್ತಿನಗರ ಮುಂತಾದ ಮೂರು ಕೊಳಗೇರಿ ಪ್ರದೇಶಗಳು ಘೋಷಿತ ಕೊಳಗೇರಿ ಪ್ರದೇಶಗಳು. ಸುಮಾರು 40 ವರ್ಷಗಳಿಗೂ ಮೇಲ್ಪಟ್ಟ ಹಳೆಯ ಪ್ರದೇಶಗಳಾಗಿದ್ದು, ಈ ಮೂರು ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಈಗಾಗಲೇ ಮಂಡಳಿ ಗುರುತು / ಹಂಚಿಕೆ ಪತ್ರಗಳನ್ನು ನೀಡಿರುತ್ತದೆ. ಈ ಪ್ರದೇಶಗಳೆಲ್ಲವೂ ಮೂಲಭೂತ ಸೌಲಭ್ಯಗಳನ್ನು ಪಡೆದು ಒಂದು ಮಟ್ಟಕ್ಕೆ ಅಭಿವೃದ್ಧಿ ಹೊಂದಿದ ಪ್ರದೇಶಗಳಾಗಿರುತ್ತದೆ. ಇವರುಗಳನ್ನು ನಗರೇಶ್ವರ ನಾಗೇನಹಳ್ಳಿಗೆ ಸ್ಥಳಾಂತರಿಸುವ ಯಾವ ಯೋಜನೆಯೂ ಮಂಡಳಿಗೆ ಇರುವುದಿಲ್ಲ.

ಈ ಹಿನ್ನಲೆಯಲ್ಲಿ ಬೆಂಗಳೂರು ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ನೇತಾಜಿ ಕಾಲೋನಿಯ 250 ನಿವಾಸಿಗಳಿಗೆ ಕೆ.ಆರ್.ಪುರಂ, ನಗರೇಶ್ವರ ನಾಗೇನಹಳ್ಳಿಯಲ್ಲಿ ಮಂಡಳಿ ನಿರ್ಮಿಸರುವ PMAY (HLF)-Phase-3 ಮನೆಗಳಿಗೆ ಅಥವಾ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ JnNURM-BSUP-Phase-3  ಯೋಜನೆಯಡಿ ನಿರ್ಮಿಸಿರುವ ಮನೆಗಳಿಗೆ ಸ್ಥಳಾಂತರಿಸಿ ಹಂಚಿಕೆ ಮಾಡುವಂತೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರು ದಿನಾಂಕ: 04.01.2022 ರಂದು ನೀಡಿದ ನಿರ್ದೇಶನದ ಮೇರೆಗೆ ಮಂಡಳಿಯ ನಂ.4ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಮಂಡಳಿಯ ನಂ.3ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ದಿನಾಂಕ: 19.01.2022 ರಂದು ಪತ್ರ ಬರೆದಿರುತ್ತಾರೆ.

ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ, ನೇತಾಜಿ ಕಾಲೋನಿ

ಇದೇ ನೇತಾಜಿ ಕಾಲೋನಿಯ 221 (250) ನಿವಾಸಿಗಳಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರ, ಮಾರತ್‍ಹಳ್ಳಿ ಸರ್ವೆ ನಂ.33ರಲ್ಲಿ JnNURM-BSUP-Phase-3 ಯೋಜನೆಯಡಿ ನಿರ್ಮಿಸಿದ್ದ 920 ಮನೆಗಳ ಪೈಕಿ 221 ಮನೆಗಳನ್ನು ಹಂಚಿಕೆ ಮಾಡಲು ಮಂಡಳಿ ಸಭೆಯಲ್ಲಿ ಈ ಮೊದಲೇ ಅನುಮೋದನೆ ನೀಡಲಾಗಿತ್ತು. ಆದರೆ, ಮಂಡಳಿಯ ಅಧಿಕಾರಿಗಳು 221 ಕುಟುಂಬಗಳನ್ನು ಮಾರತ್‍ಹಳ್ಳಿಗೆ ಸ್ಥಳಾಂತರಿಸಲು ಕಾಲವಿಳಂಬ ಮಾಡಿದ್ದ ಕಾರಣ, ಖಾಲಿಯಿದ್ದ ಮನೆಗಳಲ್ಲಿ ಅನಧೀಕೃತದಾರರು ಬಂದು ಸೇರಿಕೊಂಡರು. ಅನಧೀಕೃತದಾರರನ್ನು ಆರಂಭದ ಹಂತದಲ್ಲೆ ಕಾನೂನಿನ ನೆರವಿನಿಂದ ಖಾಲಿ ಮಾಡಿಸಿ, ನೇತಾಜಿ ಕಾಲೋನಿಗೆ ಮನೆಗಳನ್ನು ಹಂಚಿಕೆ ಮಾಡದ ಕೊಳಗೇರಿ ಮಂಡಳಿ, ಈಗ ರೈಲ್ವೆಯವರ ನೆಪ ಹೇಳಿಕೊಂಡು 221 ಮನೆಗಳನ್ನು 250ಕ್ಕೆ ಹೆಚ್ಚಿಸಿ ನಗರೇಶ್ವರ ನಾಗೇನಹಳ್ಳಿಯಲ್ಲಿ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಲು ಕಾರ್ಯರೂಪಿಸುತ್ತಿದೆ.

768 ಜಿ+3 ಮನೆಗಳನ್ನು ಘೋಷಿತ ಕೊಳಗೇರಿ ಪ್ರದೇಶಗಳಾದ ರಾಜೀವ್‍ಗಾಂಧಿ ನಗರದ 107 ಕುಟುಂಬಗಳಿಗೆ, ಸಂಜಯ್‍ಗಾಂಧಿ ನಗರದ 245 ಕುಟುಂಬಗಳಿಗೆ, ರಾಮಮೂರ್ತಿನಗರದ 337 ಕುಟುಂಬಗಳಿಗೆ ವಿಸ್ತೃತ ಯೋಜನಾ ವರದಿಯ (ಡಿಪಿಆರ್) ಪ್ರಕಾರ ಹಂಚಿಕೆ ಮಾಡುವುದಾದರೆ ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದು. ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PMAY (HLF)-Phase-3 ಯೋಜನೆಯಡಿ ನಿರ್ಮಿಸಿರುವ 912 ಮನೆಗಳನ್ನು (768 ಜಿ+3 ಮನೆಗಳು ಮತ್ತು 144 ಜಿ+3 ಮನೆಗಳು) ಮಂಡಳಿ ನಿಯಮಗಳ ಪ್ರಕಾರ ನಿಜವಾದ ಕೊಳಗೇರಿ ಬಡಜನರಿಗೆ ಹಂಚಿಕೆ ಮಾಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ಕೊಳಗೇರಿ ಮಂಡಳಿಯ ಮನೆಗಳು; ಕೊಳಗೇರಿ ಜನರಿಗೆ ಮಾತ್ರ.! ಇದು ಮಂಡಳಿ ನಿಯಮ.!!

ಈ ಹಿನ್ನಲೆಯಲ್ಲಿ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕೊಳಗೇರಿ ಮಂಡಳಿ ನಿರ್ಮಿಸಿರುವ 912 ಮನೆಗಳನ್ನು ಕೊಳಗೇರಿ ಫಲಾನುಭವಿಗಳಲ್ಲದ ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡಲಿಕ್ಕಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಲವರಿಂದ ಡಿ.ಡಿ.ರೂಪದಲ್ಲಿ ವಂತಿಗೆ ಹಣವನ್ನು ರಹಸ್ಯವಾಗಿ ಪಡೆಯುತ್ತಿರುವುದು ಈಗ ಬೆಳಕಿಗೆ ಬಂದಿದೆ. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಕೆಲವು ಮುಖಂಡರುಗಳು, ನಗರೇಶ್ವರ ನಾಗೇನಹಳ್ಳಿಯಲ್ಲಿ ಮನೆ ಕೊಡಿಸುವುದಾಗಿ ತಿಳಿಸಿ ಇತರ ಅನುಕೂಲಸ್ಥ ವರ್ಗದವರಿಂದ ಹಣ ಮತ್ತು ಡಿ.ಡಿ.ಗಳನ್ನು ಪಡೆಯುತ್ತಿರುವುದು ಕೊಳಗೇರಿ ಜನರ ಆತಂಕಕ್ಕೆ ಕಾರಣವಾಗಿದೆ.

ಕೊಳಗೇರಿ ಮಂಡಳಿಯ ಭ್ರಷ್ಟಾಚಾರವನ್ನು ಖಂಡಿಸಿ, ಈ ಹಿಂದೆ ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಪ್ರತಿಭಟನೆ.

ಕೊಳಗೇರಿ ಮಂಡಳಿ ನಿರ್ಮಿಸುವ ಮನೆಗಳನ್ನು ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡುವುದು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿ ಪಡಿಸಲಾದ ಕೊಳಗೇರಿ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳನ್ನು ಗುರ್ತಿಸಿ ವಾಸದ ಘಟಕಗಳನ್ನು ಹಂಚಿಕೆ ಮಾಡುವಲ್ಲಿ ಪಾರಾದರ್ಶಕತೆಯನ್ನು ನಿರ್ವಹಿಸುವ ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2013 (1) ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ವಾಸದ ಘಟಕವನ್ನು ಹಂಚಿಕೆ ಮಾಡಲು ಹಂಚಿಕೆ ನಿಯಮ, ನಿಬಂಧನೆ ಮತ್ತು ಷರತ್ತುಗಳ ಕುರಿತು ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2013 (2)ಕ್ಕೆ ವಿರೋಧವಾದದ್ದು.

ಈ ಹಿಂದೆ ಇದೇ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನರ್ಮ್-ಬಿಎಸ್‍ಯುಪಿ ಯೋಜನೆಯಡಿ ನಿರ್ಮಿಸಿದ್ದ 208 ಮನೆಗಳನ್ನು ಕೊಳಗೇರಿ ನಿವಾಸಿಗಳಲ್ಲದ ಇತರ ಅನಕೂಲಸ್ಥರಿಗೆ ಕೊಳಗೇರಿ ಮಂಡಳಿ ಹಂಚಿಕೆ ಮಾದಿದ್ದ ವಿಚಾರದಲ್ಲಿ ಮಾನ್ಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷರು, ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii) ರಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಿದ ಒಂಬತ್ತು ಜನರನ್ನು ಅಪರಾಧಿ ಎಂದು ತಿಳಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬಹುದಾಗಿದೆ ಎಂದು ತಮ್ಮ ವಿಚಾರಣಾ ವರದಿಯಲ್ಲಿ ಉಲ್ಲೇಖಿಸಿ ಮುಂದಿನ ಕ್ರಮಕ್ಕಾಗಿ ಮಾನ್ಯ ಲೋಕಾಯುಕ್ತರಿಗೆ ಸಲ್ಲಿಸಿದ್ದಾರೆ. ಮಾನ್ಯ ಲೋಕಾಯುಕ್ತರ ಬಳಿ ಪ್ರಕರಣವು ಬಾಕಿಯಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಚುನಾವಣೆಯ ಹೊಸ್ತಿಲಲ್ಲಿ ನಗರೇಶ್ವರ ನಾಗೇನಹಳಿ ಸರ್ವೆ ನಂ.13ರಲ್ಲಿ ನಿರ್ಮಿಸಿರು 912 (PMAY (HLF)-Phase-3 ಯೋಜನೆಯ 768 ಜಿ+3 ಮನೆಗಳು ಮತ್ತು 144 ಜಿ+3 ಮನೆಗಳು) ಮನೆಗಳ ಬಹುಪಾಲನ್ನು ಕೊಳಗೇರಿ ನಿವಾಸಿಗಳಲ್ಲದ ಇತರ ಅನೂಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡಲು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಂದಾಗಿರುವುದು ಖಂಡನೀಯ. ಇದನ್ನು ಸರ್ಕಾರ ಕೂಡಲೇ ತಡೆಗಟ್ಟಿ, ಕೊಳಗೇರಿ ಮಂಡಳಿ ನಿರ್ಮಿಸುವ ಮನೆಗಳು; ಕೊಳಗೇರಿ ಜನರಿಗೆ ಮಾತ್ರ’ ಎಂಬುದನ್ನು ಸಾಬೀತು ಪಡಿಸಿ, ಕೊಳಗೇರಿ ಜನರ ಹಕ್ಕುಗಳನ್ನು ರಕ್ಷಣೆ ಮಾಡಬೇಕಾಗಿದೆ.