ಡಿ.ಸಿ.ಪ್ರಕಾಶ್
ಮಡೆ ಸ್ನಾನ ಮಾಡಿ ದೇವರಿಗೆ ಹರಕೆ ಅರ್ಪಿಸುವುದರ ಮೇಲಿನ ನಿಷೇಧವನ್ನು ರದ್ದುಗೊಳಿಸಿರುವ ಚೆನ್ನೈ ಹೈಕೋರ್ಟ್ ಮಧುರೈ ಪೀಠದ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್ ಅವರ ತೀರ್ಪು ಆಘಾತಕಾರಿಯಾಗಿದೆ. ‘ಸಮುದಾಯ ಔತಣ’ದಲ್ಲಿ ಪಾಲ್ಗೊಳ್ಳುವ ಭಕ್ತರು, ಬಿಟ್ಟುಹೋದ ಬಾಳೆ ಎಲೆಗಳ ಮೇಲೆ ಉರುಳು ಹಾಕುವುದರಿಂದ ಆಧ್ಯಾತ್ಮಿಕ ಲಾಭವಾಗುತ್ತದೆ ಎಂಬ ನಂಬಿಕೆಯು, ವ್ಯಕ್ತಿಯ ಆಧ್ಯಾತ್ಮಿಕ ಆಯ್ಕೆಯಾಗಿದೆ ಎಂದು ತೀರ್ಪು ಹೇಳಿದೆ.
ಭಾರತೀಯ ಸಂವಿಧಾನವು ಒಬ್ಬರ ಧಾರ್ಮಿಕ ನಂಬಿಕೆಯನ್ನು ಅನುಸರಿಸಲು ಅಥವಾ ಯಾವುದೇ ಧರ್ಮವನ್ನು ಅನುಸರಿಸದಿರಲು ಸಂಪೂರ್ಣ ಹಕ್ಕನ್ನು ನೀಡುತ್ತದೆ. ಅದನ್ನು ಸಂರಕ್ಷಿಸಬೇಕು ಎಂಬುದಕ್ಕೆ ಪರ್ಯಾಯ ಅಭಿಪ್ರಾಯವಿರಲಾರದು. ಆದರೆ ಎಲ್ಲವನ್ನೂ ಧಾರ್ಮಿಕ ನಂಬಿಕೆ, ಆಧ್ಯಾತ್ಮಿಕ ಭಾವನೆ ಎಂದು ಸಮರ್ಥಿಸಿ ಅದು ಅವರ ವೈಯಕ್ತಿಕ ಹಕ್ಕು ಎಂದು ಹೇಳಿಕೊಳ್ಳುವುದು ಸೂಕ್ತವಲ್ಲ.
ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಾಹ್ಮಣರು ಆಹಾರವನ್ನು ಸೇವಿಸಿದ ನಂತರ, ಭಕ್ತರು ಆ ಬಾಳೆ ಎಲೆಗಳ ಮೇಲೆ ಉರುಳುವ ಮಡೆ ಸ್ನಾನ ಪದ್ಧತಿ ಇತ್ತು. ಇದು ಅಸ್ಪೃಶ್ಯತೆ ಆಧಾರಿತ ಪ್ರಕರಣವಾಗಿದೆ ಎಂದು ಹೇಳಿ, ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ವಜಾಮಾಡಿತ್ತು. 2014ರಲ್ಲಿ, ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿದಾಗ ಲಾಲಾರಸದ (ಎಂಜಲು) ಎಲೆಗಳ ಮೇಲೆ ಉರುಳಿ ಹರಕೆ ಅರ್ಪಿಸುವುದಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿತು.
2015ರಲ್ಲಿ, ತಮಿಳುನಾಡಿನಲ್ಲಿ ಇದೇ ವಿಷಯದ ಮೇಲೆ ದಾಖಲಾದ ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಾಧೀಶ ಮಣಿಕುಮಾರ್ ಸೇರಿದಂತೆ ದ್ವಿಸದಸ್ಯ ಪೀಠವು ಈ ಆಚರಣೆಯನ್ನು ನಿಷೇಧಿಸಿದೆ.
ಬಾಲ್ಯ ವಿವಾಹ, ಸತಿ ಪದ್ಧತಿ, ವಿಧವಾ ಪುನರ್ವಿವಾಹದ ನಿರಾಕರಣೆ, ದೇವದಾಸಿ ಪದ್ಧತಿಯಂತಹ ಪ್ರತಿಗಾಮಿ ಪದ್ಧತಿಗಳನ್ನು ತಮ್ಮ ಧಾರ್ಮಿಕ ನಂಬಿಕೆ ಎಂದು ಸಮರ್ಥಿಸಿಕೊಂಡಿದ್ದ ಈ ದೇಶದಲ್ಲಿ, ದೊಡ್ಡ ಪ್ರಮಾಣದಲ್ಲಿ ಸಮಾಜ ಸುಧಾರಣಾ ಚಳವಳಿಗಳ ಹೋರಾಟದಿಂದಾಗಿ ಪರಿಸ್ಥಿತಿಯು ಭಾಗಶಃ ಬದಲಾಗಿದೆ.
ಮನುಷ್ಯ ಮನುಷ್ಯನನ್ನು ಅವಮಾನಿಸುವ ಅಸ್ಪೃಶ್ಯತೆಯನ್ನು ಸಮರ್ಥಿಸಿಕೊಳ್ಳಲು, ಧಾರ್ಮಿಕ ಪುರಾವೆಗಳನ್ನು ತರುವ ದಡ್ಡ ಶಿಖಾಮಣಿಗಳು ಇಂದಿಗೂ ನಮ್ಮಲ್ಲಿ ಇದ್ದಾರೆ. ನ್ಯಾಯಾಂಗದ ತೀರ್ಪುಗಳು ಸಮಾಜವನ್ನು ಮುನ್ನಡೆಸಬೇಕೇ ಹೊರತು ಹಿಂದಕ್ಕೆ ಎಳೆಯಬಾರದು.
ಸುಪ್ರೀಂ ಕೋರ್ಟ್ ನಿಷೇಧ ಹಾಗೂ ಹೈಕೋರ್ಟ್ ದ್ವಿಸದಸ್ಯ ಪೀಠದ ಹಿಂದಿನ ಆದೇಶಗಳಿಗೆ ವ್ಯತಿರಿಕ್ತವಾಗಿ ಹೈಕೋರ್ಟ್ನ ಮಧುರೈ ಶಾಖೆಯ ಏಕ ನ್ಯಾಯಾಧೀಶರು ನೀಡಿರುವ ತೀರ್ಪು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ತೀರ್ಪಿನ ವಿರುದ್ಧ ತಮಿಳುನಾಡು ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕು.