ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಆಪ್ Archives » Dynamic Leader
December 3, 2024
Home Posts tagged ಆಪ್
ದೇಶ

ನವದೆಹಲಿ: “ಆಮ್ ಆದ್ಮಿ ಪಕ್ಷ ನಮಗೆ ಮುಖ್ಯವಲ್ಲ; ರಾಷ್ಟ್ರ ಮುಖ್ಯ” ಎಂದು ತಿಹಾರ್ ಜೈಲಿನಲ್ಲಿ ಶರಣಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಾ ಇದನ್ನು ಹೇಳಿದರು. ಇದಾದ ಬಳಿಕ ತಿಹಾರ್ ಜೈಲಿಗೆ ಹೋಗಿ ಶರಣಾದರು.

ದೆಹಲಿ ಮದ್ಯ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಮುಖ್ಯಮಂತ್ರಿ ಅರವಿಂದ್  ಕೇಜ್ರಿವಾಲ್ ಅವರಿಗೆ ನೀಡಲಾಗಿದ್ದ 21 ದಿನಗಳ ಮಧ್ಯಂತರ ಜಾಮೀನು ಇಂದು (ಜೂನ್ 02) ಮುಕ್ತಾಯಗೊಂಡಿದೆ. ಪರಿಣಾಮವಾಗಿ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ಶರಣಾಗಲು ಹೊರಟರು. ಗಾಂಧಿ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದ ಬಳಿಕ ಪತ್ನಿ ಸಮೇತ ಕನ್ನಾಟ್ ಹನುಮಾನ್ ದೇವಸ್ಥಾನದಲ್ಲಿ ಸ್ವಾಮಿ ದರ್ಶನ ಪಡೆದರು. ನಂತರ ಅವರು ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳನ್ನು ಭೇಟಿಯಾದರು.

ತ್ಯಾಗ
ಆಗ ಮಾತನಾಡಿದ ಕೇಜ್ರಿವಾಲ್,  “ನನ್ನ ವಿರುದ್ಧ ಯಾವುದೇ ಅಪರಾಧದ ಸಾಕ್ಷ್ಯಗಳಿಲ್ಲ. ಚುನಾವಣಾ ಪ್ರಚಾರಕ್ಕೆ ಅನುಕೂಲವಾಗುವಂತೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌ಗೆ ನಾನು ಕೃತಜ್ಞನಾಗಿದ್ದೇನೆ. ಆಮ್ ಆದ್ಮಿ ಪಕ್ಷ ನಮಗೆ ಮುಖ್ಯವಲ್ಲ. ರಾಷ್ಟ್ರ ಮುಖ್ಯ. 21 ದಿನಗಳಲ್ಲಿ ಒಂದು ನಿಮಿಷವನ್ನೂ ವ್ಯರ್ಥಮಾಡಲಿಲ್ಲ. ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಮತ್ತೆ ಜೈಲಿಗೆ ಹೋಗುತ್ತಿದ್ದೇನೆ. ಸರ್ವಾಧಿಕಾರದ ವಿರುದ್ಧ ಹೋರಾಡುತ್ತೇನೆ. ನನ್ನ ಪ್ರತಿ ಹನಿ ರಕ್ತವನ್ನೂ ದೇಶಕ್ಕಾಗಿ ತ್ಯಾಗ ಮಾಡುತ್ತೇನೆ. ಪ್ರಧಾನಿ ಮೋದಿ ನನ್ನನ್ನು (ಕೇಜ್ರಿವಾಲ್) ನುರಿತ ಕಳ್ಳ ಎಂದು ಕರೆಯುತ್ತಾರೆ.

ಸಮೀಕ್ಷೆಗಳು
ಎಲ್ಲಾ ಸಮೀಕ್ಷೆಗಳನ್ನು ಸುಳ್ಳಾಗಿಸಿ ಇಂಡಿಯಾ ಮೈತ್ರಿ ಪಕ್ಷಗಳು ಗೆಲ್ಲುತ್ತವೆ. ಎಲ್ಲಾ ಸಮೀಕ್ಷೆಗಳು ತಪ್ಪಾಗಿವೆ. ನನ್ನ ವಿರುದ್ಧದ ಆರೋಪಗಳಿಗೆ ಜಾರಿ ಇಲಾಖೆ ಕನಿಷ್ಠ ಒಂದೇ ಒಂದು ಸಾಕ್ಷ್ಯವನ್ನಾದರೂ ನೀಡಲು ಸಾದ್ಯವೇ? ನನ್ನ ಮನೆಯಲ್ಲಿ ಶೋಧ ನಡೆಸಿದಾಗ ಜಾರಿ ಇಲಾಖೆ ಏನನ್ನೂ ವಶಪಡಿಸಿಕೊಂಡಿಲ್ಲ. ದಬ್ಬಾಳಿಕೆಯ ಸರ್ಕಾರದ ವಿರುದ್ಧ ನೀವು ಧ್ವನಿ ಎತ್ತಬೇಕು. ಮತ ಎಣಿಕೆ ಸಂದರ್ಭದಲ್ಲಿ ಕೊನೆಯವರೆಗೂ ಇದ್ದು ನಿಗಾ ಇಡಬೇಕು.” ಎಂದು ಹೇಳಿದರು.

ಇದಾದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 4.50ರ ಹೊತ್ತಿಗೆ ತಿಹಾರ್ ಜೈಲಿಗೆ ಹೋಗಿ ಶರಣಾದರು.

ದೇಶ

ಸಂಸತ್ತಿನ ಚುನಾವಣೆಗೆ ಮುನ್ನ ಕೇಜ್ರಿವಾಲ್ ಅವರನ್ನು ಏಕೆ ಬಂಧಿಸಲಾಯಿತು ಮತ್ತು ತನಿಖೆಯ ಪ್ರಾರಂಭ ಮತ್ತು ಬಂಧನದ ನಡುವೆ ಏಕೆ ದೊಡ್ಡ ಅಂತರವಿದೆ ಎಂಬುದನ್ನು ವಿವರಿಸಿ- ಸುಪ್ರೀಂ ಕೋರ್ಟ್

ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್ ಅನ್ನು ಪದೇ ಪದೇ ನಿರ್ಲಕ್ಷಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಂಸತ್ ಚುನಾವಣೆ ಘೋಷಣೆಯಾದ ಐದನೇ ದಿನದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತು. ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಲು ಚುನಾವಣೆಗೆ ಮುನ್ನವೇ ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು ಎಂದು ಆಮ್ ಆದ್ಮಿ ಪಕ್ಷದ ಸಚಿವರು ಮತ್ತು ವಿರೋಧ ಪಕ್ಷಗಳು ಹೇಳುತ್ತಿವೆ.

ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಕೇಜ್ರಿವಾಲ್ ಅವರ ನ್ಯಾಯಾಲಯದ ಕಸ್ಟಡಿಯನ್ನು ಮೇ 7 ರವರೆಗೆ ವಿಸ್ತರಿಸಲಾಗಿದೆ. ಮತ್ತೊಂದೆಡೆ, ಮಧುಮೇಹಿಯಾಗಿರುವ ಕೇಜ್ರಿವಾಲ್‌ಗೆ ಜೈಲಿನಲ್ಲಿ ಹೆಚ್ಚು ಸಕ್ಕರೆ ಅಂಶವಿರುವ ಆಹಾರವನ್ನು ನೀಡಲಾಗುತ್ತಿದ್ದು, ಅವರ ಭೇಟಿಗೆ ಪತ್ನಿಗೂ ಅನುಮತಿ ನಿರಾಕರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಹಿನ್ನಲೆಯಲ್ಲಿ, ಸಂಸತ್ ಚುನಾವಣೆಗೂ ಮುನ್ನವೇ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ಏಕೆ ಎಂದು ಜಾರಿ ಇಲಾಖೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಜಾರಿ ಇಲಾಖೆಯ ಬಂಧನದ ವಿರುದ್ಧ ಕೇಜ್ರಿವಾಲ್ ಅವರು ಸಲ್ಲಿಸಿರುವ ಮನವಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ದೀಪಂಕರ್ ದತ್ತಾ ನೇತೃತ್ವದ ಪೀಠದಲ್ಲಿ ವಿಚಾರಣೆಗೆ ಬಂದಿತು.

ಆಗ ಜಾರಿ ಇಲಾಖೆ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರನ್ನು ಪ್ರಶ್ನಿಸಿದ ಪೀಠ, “ಜೀವನ ಮತ್ತು ಸ್ವಾತಂತ್ರ್ಯ ಅತಿಮುಖ್ಯ. ನೀವು ಅದನ್ನು ಅಲ್ಲಗಳೆಯುವಂತಿಲ್ಲ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಸಂಬಂಧಿಸಿದ ಪ್ರಕರಣದಲ್ಲಿ, ತನಿಖಾಧಿಕಾರಿಗಳು ತಮಗೆ ಕೆಲವು ಮಾಹಿತಿಗಳು ಸಿಕ್ಕಿರುವುದಾಗಿ ಹೇಳಿದ್ದರು.

ಆದರೆ ಕೇಜ್ರಿವಾಲ್ ಪ್ರಕರಣದಲ್ಲಿ ಅಂಥದ್ದೇನೂ ತರಲಾಗಿಲ್ಲ. ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಸಂಪರ್ಕ ಕ್ರಮ ಕೈಗೊಂಡಿಲ್ಲ. ಬಹುಶಃ ಅಂತಹ ಕ್ರಮ ಕೈಗೊಂಡಿದ್ದರೆ, ಕೇಜ್ರಿವಾಲ್ ಈ ವಿಷಯದಲ್ಲಿ ಹೇಗೆ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿಸಿ.

ಅಲ್ಲದೆ, ಸಂಸತ್ತಿನ ಚುನಾವಣೆಗೆ ಮುನ್ನ ಕೇಜ್ರಿವಾಲ್ ಅವರನ್ನು ಏಕೆ ಬಂಧಿಸಲಾಯಿತು ಮತ್ತು ತನಿಖೆಯ ಪ್ರಾರಂಭ ಮತ್ತು ಬಂಧನದ ನಡುವೆ ಏಕೆ ದೊಡ್ಡ ಅಂತರವಿದೆ ಎಂಬುದನ್ನು ವಿವರಿಸಿ” ಎಂದು ಹೇಳಿ ಶುಕ್ರವಾರ ಪ್ರತಿಕ್ರಿಯೆ ನೀಡುವಂತೆ ಜಾರಿ ಇಲಾಖೆಗೆ ಸೂಚಿಸಿದೆ.

ರಾಜಕೀಯ

ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯು 45 ಸಂಶಯಾಸ್ಪದ ಕಂಪನಿಗಳಿಂದ 1,068 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ನಿನ್ನೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಜಾಸ್ಮಿನ್ ಶಾ ಅವರು, “ಬಿಜೆಪಿಗೆ 45 ಸಂಶಯಾಸ್ಪದ ಕಂಪನಿಗಳು ರೂ.1,068 ಕೋಟಿಯವರೆಗೆ ದೇಣಿಗೆ ನೀಡಿದೆ. ಅವು ನಷ್ಟದ ಕಂಪನಿಗಳಾಗಿವೆ. ಅಥವಾ ಅವರು ತೆರಿಗೆಗಳನ್ನು ಪಾವತಿಸದವರು ಅಥವಾ ಲಾಭಕ್ಕಿಂತ ಹೆಚ್ಚಾಗಿ ದೇಣಿಗೆ ನೀಡಿದವರಾಗಿದ್ದಾರೆ.

ಏಳು ವರ್ಷಗಳಲ್ಲಿ 33 ಕಂಪನಿಗಳು ಒಟ್ಟು ಒಂದು ಲಕ್ಷ ಕೋಟಿ ರೂಪಾಯಿಯವರೆಗೆ ನಷ್ಟ ಅನುಭವಿಸಿದ ಕಂಪನಿಗಳಾಗಿರುತ್ತವೆ. ಈ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 450 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿರುತ್ತವೆ. ಈ ಪೈಕಿ 17 ಕಂಪನಿಗಳು ಶೂನ್ಯ ತೆರಿಗೆ ಅಥವಾ ಋಣಾತ್ಮಕ ತೆರಿಗೆ ಪಾವತಿಸಿದ ಕಂಪನಿಗಳಾಗಿವೆ.

ಇದಲ್ಲದೆ, ಈ ಕಂಪನಿಗಳು ತೆರಿಗೆ ವಿನಾಯಿತಿಗಳನ್ನು ಸಹ ಪಡೆದಿರುತ್ತವೆ. ಅಲ್ಲದೆ, ಆರು ಕಂಪನಿಗಳು ಬಿಜೆಪಿಗೆ 600 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿವೆ. ಆ ಮೊತ್ತವು ಆ ಕಂಪನಿಗಳ ಲಾಭಕ್ಕಿಂತ ಹೆಚ್ಚಿನ ಮೊತ್ತವಾಗಿರುತ್ತದೆ. ಇನ್ನೊಂದು ಕಂಪನಿ ಅವರ ಲಾಭಕ್ಕಿಂತ 93 ಪಟ್ಟು ಹೆಚ್ಚು ನೀಡಿದೆ. ಮೂರು ಕಂಪನಿಗಳು 28 ಕೋಟಿ ದೇಣಿಗೆ ನೀಡಿ ಶೂನ್ಯ ತೆರಿಗೆ ಪಾವತಿಸಿವೆ. ಉದಾಹರಣೆಗೆ, ನಷ್ಟದ ನಡುವೆಯೂ ಅನೇಕ ಕಂಪನಿಗಳು ಉದಾರವಾಗಿ ಬಿಜೆಪಿಗೆ ದೇಣಿಗೆ ನೀಡಿದವು. ಅದರಲ್ಲಿ ಪ್ರಮುಖವಾದದ್ದು ಭಾರ್ತಿ ಏರ್‌ಟೆಲ್ ಕಂಪೆನಿ.

77,000 ಕೋಟಿ ನಷ್ಟ ಅನುಭವಿಸಿದರೂ ಕಂಪನಿ 200 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇದಕ್ಕೆ ಪ್ರತಿಯಾಗಿ ರೂ.8,200 ಕೋಟಿ ತೆರಿಗೆ ರಿಯಾಯಿತಿ ಪಡೆದುಕೊಂಡಿದೆ. ಇನ್ನೊಂದು ಕಂಪನಿ DLF. 7 ವರ್ಷಗಳಲ್ಲಿ 130 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಆದರೂ 25 ಕೋಟಿ ರೂಪಾಯಿ ದೇಣಿಗೆ ನೀಡಿ, 20 ಕೋಟಿ ರೂಪಾಯಿ ತೆರಿಗೆ ಲಾಭವನ್ನು ಪಡೆದುಕೊಂಡಿದೆ. ಧರಿವಾಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ 115 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿ, ಬಿಜೆಪಿಗೆ ಸುಮಾರು 24.96 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದೆ. ಈ ಕಂಪನಿಯ ನಷ್ಟ ರೂ.299 ಕೋಟಿಯಾಗಿದೆ. ಹೀಗಾಗಿ ಅವರು ಶೂನ್ಯ ತೆರಿಗೆ ಪಾವತಿಸಿದ್ದಾರೆ.

ಅದೇ ರೀತಿ ಪಿಆರ್‌ಎಲ್ ಡೆವಲಪರ್ಸ್ 20 ಕೋಟಿ ರೂಪಾಯಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, 10 ಕೋಟಿ ರೂಪಾಯಿ ದೇಣಿಗೆ ನೀಡಿ 4.7 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ. ಈ ಕಂಪನಿ 1550 ಕೋಟಿ ನಷ್ಟವನ್ನು ಅನುಭವಿಸಿದ ಕಂಪನಿಯಾಗಿದೆ. ಯುಜಿಯಾ ಫಾರ್ಮಾ ಲಿಮಿಟೆಡ್ ಶರತ್ ಚಂದ್ರ ರೆಡ್ಡಿ ಅವರ ಕಂಪನಿಯಾಗಿದೆ. 7 ವರ್ಷದಲ್ಲಿ 28 ಕೋಟಿ ನಷ್ಟ ಅನುಭವಿಸಿದ್ದರೂ ಚುನಾವಣಾ ಬಾಂಡ್ ನಿಧಿಯಾಗಿ 15 ಕೋಟಿ ನೀಡಿ, ರೂ.7.20 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.

7 ವರ್ಷದಲ್ಲಿ ರೂ.86 ಕೋಟಿ ನಷ್ಟವನ್ನು ಉಂಟುಮಾಡಿಕೊಂಡಿದ್ದ ಮೈತ್ರಾ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿ, 19 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿ, 9.99 ಕೋಟಿ ಪಾವತಿಸುವ ಮೂಲಕ ರೂ.126 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.

ಪಿರಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 10 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ಮೂಲಕ 16,376 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದರೂ 10 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಇದಕ್ಕೆ ರೂ.5178.50 ಕೋಟಿ ರೂ. ತೆರಿಗೆ ವಿನಾಯಿತಿ ಸಿಕ್ಕಿದೆ.

ಓರಿಯಂಟಲ್ ಸೌತ್ ದೆಹಲಿ ಹೊಟೇಲ್ ಪ್ರೈವೇಟ್ ಲಿಮಿಟೆಡ್ 5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದು, 5 ಕೋಟಿ ದೇಣಿಗೆಯನ್ನೂ ನೀಡಿದೆ. ಕಂಪನಿ 49 ಕೋಟಿ ನಷ್ಟವನ್ನು ಅನುಭವಿಸಿದ್ದು, ಶೂನ್ಯ ತೆರಿಗೆ ಪಾವತಿಸಿದೆ. ವಿಲೇಜ್ ಡಿ ನಂದಿ ಪ್ರೈವೇಟ್ ಲಿಮಿಟೆಡ್ ಚುನಾವಣಾ ಬಾಂಡ್‌ಗಳನ್ನು ರೂ.5 ಕೋಟಿಗೆ ಖರೀದಿಸಿದೆ. ಮತ್ತು ರೂ.48 ಕೋಟಿ ನಷ್ಟದ ಹೊರತಾಗಿಯೂ, ಸಂಪೂರ್ಣ ಮೊತ್ತವನ್ನು ದೇಣಿಗೆಯಾಗಿ ನೀಡಿದೆ.

ರೂ.167 ಕೋಟಿ ನಷ್ಟವನ್ನು ಅನುಭವಿಸಿದ ಟಕಿಡೋ ಲೀಸಿಂಗ್ ಆಪರೇಟರ್ಸ್ ಪ್ರೈವೇಟ್ ಲಿಮಿಟೆಡ್ 4 ಕೋಟಿ ಮೌಲ್ಯದ ಬಾಂಡ್ ಖರೀದಿಸಿ ಸಂಪೂರ್ಣ ಹಣವನ್ನು ನೀಡಿದೆ. ಇದಲ್ಲದೇ ಇನ್ನೂ ಹಲವು ಕಂಪನಿಗಳು ತಮ್ಮ ಲಾಭದ ಆರು ಪಟ್ಟು ಹಣವನ್ನು ಉದಾರವಾಗಿ ನೀಡಿದೆ. ಇದೆಲ್ಲವೂ ಅತ್ಯಂತ ಅನುಮಾನಾಸ್ಪದವಾಗಿದೆ. ಈ ಕಂಪನಿಗಳು ಮತ್ತು ಸಂಬಂಧಪಟ್ಟ ಬಿಜೆಪಿ ಮುಖಂಡರ ವಿರುದ್ಧ ಕೂಡಲೇ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಜಾರಿ ಇಲಾಖೆ ಬಂಧನದ ವಿರುದ್ಧ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಪ್ರಕರಣದ ತೀರ್ಪನ್ನು ದೆಹಲಿ ಹೈಕೋರ್ಟ್ ದಿನಾಂಕವನ್ನು ನಿರ್ದಿಷ್ಟಪಡಿಸದೆ ಮುಂದೂಡಿದೆ.

ಮದ್ಯ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಕೇಜ್ರಿವಾಲ್ ಬಂಧನದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಇಂದು ನಡೆಯಿತು.

ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ತಪ್ಪಿತಸ್ಥರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ವಾದಿಸಿದರು. ನಾವು ಅಪರಾಧ ಮಾಡುತ್ತೇವೆ. ಆದರೆ ಚುನಾವಣಾ ಕಾಲವಾದ್ದರಿಂದ ನಮ್ಮನ್ನು ಬಂಧಿಸಬಾರದು ಎಂದು ಹೇಳುವ ಹಕ್ಕು ವಿಚಾರಣಾಧೀನ ಕೈದಿಗಳಿಗೆ ಇಲ್ಲ.

ಇದು ಮೂರ್ಖತನ. ಚುನಾವಣೆಗೂ ಮುನ್ನ ರಾಜಕೀಯ ವ್ಯಕ್ತಿ ಕೊಲೆ ಮಾಡಿದರೆ ಬಂಧಿಸಬಾರದೇ? ಬಂಧನ ಕ್ರಮ ಕಿರುಕುಳ ಆಗುತ್ತದೆಯೇ? ಕೊಲೆ ಮಾಡಿದ ನಂತರ ಬಂಧಿಸುವುದು ಅಪರಾಧ ಎಂದು ಹೇಳಬಹುದೇ?  ಎಂದು ವಾದಿಸಿದರು.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೇಜ್ರಿವಾಲ್ ಅವರನ್ನು ಬಂಧಿಸುವ ಏಕೈಕ ಉದ್ದೇಶ ಅವರಿಗೆ ಕಿರುಕುಳ ನೀಡುವುದು ಮತ್ತು ದೆಹಲಿಯಲ್ಲಿ ಬಿಜೆಪಿಗೆ ನಿಜವಾದ ಸವಾಲಾಗಿರುವ ಆಮ್ ಆದ್ಮಿ ಪಕ್ಷವನ್ನು ಮೌನಗೊಳಿಸುವುದು. ಆಮ್ ಆದ್ಮಿ ಪಕ್ಷವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ.

ಜಾರಿ ಇಲಾಖೆ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಚುನಾವಣೆಗೂ ಮುನ್ನ ಮುಖ್ಯಮಂತ್ರಿಯನ್ನು ಬಂಧಿಸುವುದು ಅನಗತ್ಯ ಎಂದು ವಾಗ್ದಾಳಿ ನಡೆಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯವು ತೀರ್ಪನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತು.

ದೇಶ

ಜಾರಿ ಇಲಾಖೆಯಿಂದ ಬಂಧಿಸಲಾದ ದೆಹಲಿ ಸಂಸದ ಸಂಜಯ್ ಸಿಂಗ್‌ಗೆ 6 ತಿಂಗಳ ನಂತರ ಜಾಮೀನು ನೀಡಲಾಗಿದೆ.

ನವದೆಹಲಿ: ಮದ್ಯ ನೀತಿಯ ದುರ್ಬಳಕೆ ಪ್ರಕರಣವು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ದೊಡ್ಡ ಬಿಕ್ಕಟ್ಟನ್ನು ಉಂಟುಮಾಡಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ, ಸಂಸದ ಸಂಜಯ್ ಸಿಂಗ್, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮುಂತಾದ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಈ ಹಿನ್ನೆಲೆಯಲ್ಲಿ ದೆಹಲಿ ಸಂಸದ ಸಂಜಯ್ ಸಿಂಗ್ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇಂದು ವಿಚಾರಣೆಗೆ ಬಂದಿತ್ತು. ಆಗ ಸಂಜಯ್ ಸಿಂಗ್‌ಗೆ ಜಾಮೀನು ನೀಡಲು ಜಾರಿ ನಿರ್ದೇಶನಾಲಯ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ನಂತರ ಸುಪ್ರೀಂ ಕೋರ್ಟ್ ಸಂಜಯ್ ಸಿಂಗ್‌ಗೆ ಜಾಮೀನು ನೀಡಿತು. ಈ ಆದೇಶವನ್ನು ಇತರ ಪ್ರಕರಣಗಳಿಗೆ ಮುನ್ನ ನಿದರ್ಶನವಾಗಿ ತೆಗೆದುಕೊಳ್ಳಬಾರದು ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ದೆಹಲಿ ಸಂಸದ ಸಂಜಯ್ ಸಿಂಗ್ ಅವರನ್ನು ಕಳೆದ ವರ್ಷ ಅಕ್ಟೋಬರ್ 4 ರಂದು ಜಾರಿ ಇಲಾಖೆ ಬಂಧಿಸಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಂಜಯ್ ಸಿಂಗ್ ಅವರಿಗೆ 6 ತಿಂಗಳ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಂಸತ್ ಚುನಾವಣೆಯ ಹೊಸ್ತಿಲಲ್ಲಿ ಸಂಜಯ್ ಸಿಂಗ್ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವುದು ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.

ದೇಶ

ಮನೀಶ್ ಸಿಸೋಡಿಯಾ ಸೇರಿದಂತೆ ನಾಯಕರ ಸತತ ಬಂಧನಗಳು ಮತ್ತು ಇದೀಗ ಕೇಜ್ರಿವಾಲ್ ಬಂಧನವು ಆಮ್ ಆದ್ಮಿ ಪಕ್ಷದ ಭವಿಷ್ಯವನ್ನು ಪ್ರಶ್ನಿಸುವಂತೆ ಮಾಡಿದೆ!

‘ಜೈಲಿನಲ್ಲಿದ್ದರೂ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದು ದೆಹಲಿ ಸಚಿವೆ ಆತಿಶಿ ಹೇಳಿದ್ದಾರೆ. ಆದರೆ, ಕಾನೂನು ಏನು ಹೇಳುತ್ತದೆ? ಪ್ರಜಾಪ್ರತಿನಿಧಿ ಕಾಯಿದೆ, 1951ರ ಪ್ರಕಾರ, ಜನರಿಂದ ಆಯ್ಕೆಯಾದ ನಾಯಕನನ್ನು ಕ್ರಿಮಿನಲ್ ಪ್ರಕರಣದಲ್ಲಿ ಬಂಧಿಸಿದರೆ, ಅವರು ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳುತ್ತದೆ.ಇದು ನೈತಿಕವಾಗಿ ಸರಿ ಎಂದರೆ, ಹೆಚ್ಚಿನ ತಜ್ಞರ ಉತ್ತರವು ಇಲ್ಲ ಎಂಬುದಾಗಿದೆ.

ಕೇಜ್ರಿವಾಲ್ ಅವರು ಅಧಿಕಾರದಲ್ಲಿ ಮುಂದುವರಿಯಲು ಬಯಸಿದರೂ ದೆಹಲಿ ಲೆಫ್ಟಿನೆಂಟ್ ಗವರ್ನರ್, ಸಾಂವಿಧಾನಿಕ ಯಂತ್ರೋಪಕರಣಗಳು ಸ್ಥಗಿತಗೊಂಡಿದೆ ಎಂದು ಹೇಳಿ, ಆರ್ಟಿಕಲ್ 239 ಎಬಿ ಮೂಲಕ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು. ಆರ್ಟಿಕಲ್ 239 ಎಎ ಮೂಲಕ ಸರ್ಕಾರವನ್ನು ವಿಸರ್ಜಿಸಲು ಸಹ ಆದೇಶಿಸಬಹುದು.

ತಿಹಾರ್ ಜೈಲಿನ ಮಾಜಿ ಕಾನೂನು ಅಧಿಕಾರಿ ಸುನಿಲ್ ಗುಪ್ತಾ, ‘‘ಜೈಲಿನಿಂದ ಸರಕಾರ ನಡೆಸುವುದು ತುಂಬಾ ಕಷ್ಟದ ಕೆಲಸ. ಕುಟುಂಬದವರು, ಸಂಬಂಧಿಕರು ಅಥವಾ ಪಕ್ಷದ ಸದಸ್ಯರು ಯಾರೇ ಆಗಿರಲಿ, ವಾರಕ್ಕೆ ಎರಡು ಬಾರಿ ಮಾತ್ರ ಅವರನ್ನು ಭೇಟಿ ಮಾಡಬಹುದು ಎಂಬುದು ಜೈಲಿನ ನಿಯಮ. ಈ ನಿರ್ಬಂಧಗಳೊಂದಿಗೆ ಆಡಳಿತ ನಡೆಸುವುದು ಸುಲಭವಲ್ಲ,” ಎಂದು ಹೇಳಿದ್ದಾರೆ.

ಈ ಸಮಸ್ಯೆಯು ಎಎಪಿ-ಕಾಂಗ್ರೆಸ್ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದರೂ ಮದ್ಯದ ನೀತಿ ಹಗರಣವನ್ನು ಮೊದಲು ಬಯಲಿಗೆಳೆದದ್ದು ಕಾಂಗ್ರೆಸ್ ಎಂಬುದರಿಂದ ಈ ಸಂಬಂಧ ಹಳಸಲು ಕಾರಣವಾಗಬಹುದು. ಪ್ರಧಾನಿ ಮೋದಿಯವರನ್ನು ತೀವ್ರವಾಗಿ ಟೀಕಿಸಿದ ನಾಯಕರಲ್ಲಿ ಕೇಜ್ರಿವಾಲ್ ಕೂಡಾ ಒಬ್ಬರಾಗಿದ್ದರು.

ಅವರ ರಾಜಕೀಯ ದಳಪತಿ ಮನೀಶ್ ಸಿಸೋಡಿಯಾ ಸೇರಿದಂತೆ ನಾಯಕರ ಸತತ ಬಂಧನಗಳು ಮತ್ತು ಇದೀಗ ಕೇಜ್ರಿವಾಲ್ ಬಂಧನವು ಆಮ್ ಆದ್ಮಿ ಪಕ್ಷದ ಭವಿಷ್ಯವನ್ನು ಪ್ರಶ್ನಿಸುವಂತೆ ಮಾಡಿದೆ. ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರನ್, ಕೇಜ್ರಿವಾಲ್ ಬಂಧನದಿಂದ ‘ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಮೋದಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಿದ್ದಾರೆ’ ಎಂಬ ಮಾತು ಲೋಕಸಭೆ ಚುನಾವಣೆ ವೇಳೆ ವ್ಯಾಪಕವಾಗಿ ಕೇಳಿಬರುವ ಸಾದ್ಯತೆಗಳಿವೆ.  

ದೇಶ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಮಾಧ್ಯಮದವರನ್ನು ಭೇಟಿಯಾಗಿ ಮಾತನಾಡಿದರು:

ಕೇಂದ್ರ ಸರ್ಕಾರ ಮನೀಶ್ ಸಿಸೋಡಿಯಾ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದೆ. ಅವರನ್ನು ಬಂಧಿಸಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದಲ್ಲಿ ನ್ಯಾಯಾಲಯಕ್ಕೆ ಒಂದೇ ಒಂದು ಸಾಕ್ಷ್ಯವನ್ನು ಮಂಡಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಇದೊಂದು ಸುಳ್ಳು ಪ್ರಕರಣ.

75 ವರ್ಷಗಳ ನಂತರ ಮನೀಶ್ ಸಿಸೋಡಿಯಾ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉಜ್ವಲ ಭವಿಷ್ಯದ ಭರವಸೆಯನ್ನು ತಂದರು. ಅವರು ಬಡವರ ಮಕ್ಕಳಿಗೆ ಕನಸು ಕಾಣುವ ಹಕ್ಕನ್ನು ನೀಡಿದರು. ಅಂತಹ ವ್ಯಕ್ತಿಯನ್ನು ಸುಳ್ಳು ಪ್ರಕರಣದಲ್ಲಿ ಜೈಲಿಗೆ ಹಾಕಲಾಗಿದೆ.

ಅವರು ನಮಗೆ ಉದಾಹರಣೆಯಾಗಿದ್ದಾರೆ. ಅವರು ಬಿಜೆಪಿ ಸೇರಿದ್ದರೆ ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗುತ್ತಿತ್ತು. ಆದರೆ ಅವರು ಸತ್ಯದ ಹಾದಿಯನ್ನು ಬಿಡಲಿಲ್ಲ ಎಂದು ಹೇಳಿದರು.

Uncategorized

ದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ದೆಹಲಿ ಸರ್ಕಾರದ ಮದ್ಯ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ಇಲಾಖೆ ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಕರಣ ದಾಖಲಿಸಿದೆ. ಪ್ರಕರಣದಲ್ಲಿ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡಿದರೂ ಕೇಜ್ರಿವಾಲ್ ಹಾಜರಾಗಲಿಲ್ಲ.

ಈ ಹಿನ್ನಲೆಯಲ್ಲಿ, ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರ ಮನೆ ಮೇಲೆ ಜಾರಿ ಇಲಾಖೆ ಇಂದು ದಾಳಿ ನಡೆಸುತ್ತಿದೆ. ಅದೇ ರೀತಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರ ಮನೆ ಮೇಲೂ ದಾಳಿ ನಡೆಸಲಾಗುತ್ತಿದೆ.

ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್

ಇದಕ್ಕೂ ಮುನ್ನ ಇಂದು ಬೆಳಗ್ಗೆ 10 ಗಂಟೆಗೆ ಜಾರಿ ಇಲಾಖೆಯನ್ನು ಬಹಿರಂಗಪಡಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಸಚಿವೆ ಅತಿಶಿ ಮರ್ಲೆನಾ ಹೇಳಿದ್ದ ಹಿನ್ನಲೆಯಲ್ಲಿ, ಇಂದು ಪಕ್ಷದ ಪದಾಧಿಕಾರಿಗಳ ಮನೆ ಮೇಲೆ ಜಾರಿ ಇಲಾಖೆ ದಾಳಿ ನಡೆಸಿರುವ ಘಟನೆ ಸಂಚಲನ ಮೂಡಿಸಿದೆ.

ಆಪರೇಷನ್ ಕಮಲ ನಡೆಸುವ ಹೊಣೆಯನ್ನು ಬಿಜೆಪಿ ತನಿಖಾ ಸಂಸ್ಥೆಗಳಿಗೆ ವಹಿಸಿದೆ ಎಂದು ತಟಸ್ಥವಾದ ಮಾಧ್ಯಮಗಳು ವಿಮರ್ಶಿಸುತ್ತಿದೆ. ಮತ್ತು ಕೆಲಸ ಮಾಡದ ಮಾಧ್ಯಮಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.