ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕರ್ನಾಟಕ ವಿಧಾನಸಭೆ ಚುನಾವಣೆ 2023 Archives » Dynamic Leader
October 16, 2024
Home Posts tagged ಕರ್ನಾಟಕ ವಿಧಾನಸಭೆ ಚುನಾವಣೆ 2023
ರಾಜಕೀಯ

ಬೆಂಗಳೂರು: ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಸಭಾ ಭವನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದರು. ಇದಕ್ಕೆ ಶಾಸಕರೆಲ್ಲರೂ ಸಹಮತ ಸೂಚಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದರು.

ಕೇವಲ 25 ನಿಮಿಷ ಸಭೆ ನಡೆಸಲಾಯಿತು. ಇಂದು ನಡೆದ ಸಿಎಲ್‌ಪಿ ಸಭೆಯಲ್ಲಿ ಎಐಸಿಸಿ ವೀಕ್ಷಕರಾದ ಸುಶೀಲ್ ಕುಮಾರ್​ ಶಿಂಧೆ, ಜಿತೇಂದ್ರ ಸಿಂಗ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌  ಹಾಗೂ ನೂತನವಾಗಿ ಆಯ್ಕೆಯಾಗಿದ್ದ ಶಾಸಕರು ಭಾಗಿಯಾಗಿದ್ದರು. ಶಾಸಕರು ಬಂದ ಇಂದಿರಾಗಾಂಧಿ ಸಭಾಂಗಣದ ದ್ವಾರದಿಂದ ಸಿದ್ದರಾಮಯ್ಯ ಪ್ರವೇಶ ಮಾಡಿದರು. ಡಿಕೆಶಿ ಆಗಮನಕ್ಕೆ ಪೊಲೀಸರು ಬ್ಯಾರಿಗೇಡ್ ಹಾಕಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು.

“ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ನನ್ನನ್ನು ಆಯ್ಕೆ ಮಾಡಿದ ಶಾಸಕ ಮಿತ್ರರೆಲ್ಲರಿಗೂ ತುಂಬುಹೃದಯದ ಕೃತಜ್ಞತೆಗಳು. ನನ್ನ ಪ್ರಕಾರ ಪ್ರತಿಯೊಬ್ಬ ಶಾಸಕರು ಕೂಡಾ ನಾಯಕರು. ಈ ಸಾಮೂಹಿಕ ನಾಯಕತ್ವದ ಮೂಲಕವೇ ನವಕರ್ನಾಟಕವನ್ನು ಕಟ್ಟೋಣ. ರಾಜ್ಯದ ಜನತೆಯ ನಿರೀಕ್ಷೆಗಳನ್ನು ಸಾಕಾರಗೊಳಿಸೋಣ” ಎಂದು ಸಭೆಯ ನಂತರ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.  

ನಾಳೆ ಬೆಳಗ್ಗೆ 9 ಗಂಟೆಗೆ ಸಿದ್ದರಾಮಯ್ಯ ಅವರು ಸಂಭಾವ್ಯ ಸಚಿವರ ಪಟ್ಟಿ ಜತೆ ದೆಹಲಿಗೆ ತೆರಳಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ಪಡೆದು ನಂತರ ಸಂಪುಟ ರಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ರಾಜಕೀಯ

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಹಗ್ಗಜಗ್ಗಾಟ ನಡುವೆ, ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಸಂಜೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಇದಾದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂದು ಸಂಜೆ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಕರ್ನಾಟಕದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರವನ್ನು ನೀಡಿ, ಕರ್ನಾಟಕದಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರು ನಿರ್ಣಯವನ್ನು ಅಂಗೀಕರಿಸಿದ್ದರು. ನಿನ್ನೆ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರೆ, ಇಂದು ಬೆಳಗ್ಗೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.

ಸಾಂದರ್ಭಿಕ ಚಿತ್ರ

ನೂತನ ಮುಖ್ಯಮಂತ್ರಿ ಆಯ್ಕೆ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಕಾಂಗ್ರೆಸ್ ಮಾಜಿ ಸಂಸದ ರಾಹುಲ್ ಗಾಂಧಿ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಶಾಂತಿನಗರ ವಿಧಾನಸಭಾ ಕ್ಷೇತ್ರವು ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಪುಟ್ಟ ಕ್ಷೇತ್ರವಾಗಿದೆ. ಅದು ಸರ್ವ ಜನಾಂಗದ ಶಾಂತಿಯ ತೋಟವೂ ಹೌದು. ಈ ಕ್ಷೇತ್ರವನ್ನು ಮೇಲ್ನೋಟಕ್ಕೆ ನೋಡಿದರೆ ನಮಗೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರಿಚ್ಮಂಡ್ ರಸ್ತೆ, ಮಾರ್ಕ್ಸ್ ರಸ್ತೆ, ಲವಲ್ಲಿ ರಸ್ತೆ, ಚರ್ಚ್ ಸ್ಟ್ರೀಟ್, ವಿಠಲ್ ಮಲ್ಯ ರಸ್ತೆ, ಕಸ್ತೂರಿಬಾಯ್ ರಸ್ತೆ ಮುಂತಾದ ವಿಶ್ವಖ್ಯಾತಿಯ ಐಷಾರಾಮಿ ರಸ್ತೆಗಳು, ಅಲ್ಲಿನ ಮಾಲ್‌ಗಳು, ಅಂತರಾಷ್ಟ್ರೀಯ ಬ್ರಾಂಡೆಡ್ ಶೋರೂಂಗಳೆಲ್ಲವೂ ಕಾಣಸಿಗುತ್ತವೆ.

ಯೂಟಿಲಿಟಿ ಬಿಲ್ಡಿಂಗ್, ಮೇಯೋಹಾಲ್, ಮಿತ್ತಲ್ ಟವರ್, ಕಾವೇರಿ ಎಂಪೋರಿಯಂ, ಬಾರ್ಟನ್ ಸೆಂಟರ್, ಹಿಗ್ಗಿನ್ ಬಾಥಮ್ಸ್, ಬೈಬಲ್ ಸೊಸೈಟಿ, ಮಲ್ಯ ಟವರ್ಸ್, ವಾರ್ ಮೆಮೋರಿಯಲ್, ಗರುಡ ಮಾಲ್, ಲೈಫ್‌ಸ್ಟೈಲ್ ಹೀಗೆ ಹೇಳುತ್ತಾ ಹೋಗಬಹುದು. ಆದರೆ, ಇದೆಲ್ಲವನ್ನು ನೋಡಿ, ಕ್ಷೇತ್ರವನ್ನು ಐಷಾರಾಮಿ-ಶ್ರೀಮಂತ ಕ್ಷೇತ್ರವೆಂದು ಭಾವಿಸಿಕೊಂಡರೆ ಅದು ಮೂರ್ಖತನ.

ಮೇಲಿನ ಎಲ್ಲವೂ ವ್ಯಾಪಾರ ವಹಿವಾಟು ನಡೆಯುವ ಸ್ಥಳ. ಇದಕ್ಕೂ ಕ್ಷೇತ್ರದ ಜನತೆಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಇಲ್ಲಿರುವ 90% ಜನ ಯಾರೂ ಕೂಡ ಕ್ಷೇತ್ರದ ಮತದಾರರಲ್ಲ. ಇಲ್ಲಿನದು ಜಾತ್ರೆಯ ಸಂಸ್ಕೃತಿ. ಇದನ್ನು ನೋಡಿ ಕ್ಷೇತ್ರವನ್ನು ತೂಕ ಮಾಡಬಾರದು. ಮತ್ತು ಕ್ಷೇತ್ರವನ್ನು ಸ್ವಲ್ಪ ಆಳವಾಗಿ ಇಣುಕಿ ನೋಡಿದರೆ, ನಮಗೆ ಗೋಚರಿಸುವುದೆಲ್ಲವೂ ಬರೀ ಆಶ್ಚರ್ಯ ಮತ್ತು ಅಘಾತವೇ ಆಗಿರುತ್ತದೆ.

ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯದ ಕೊರೆತೆಯಿರುವ ಶ್ರೀ.ಎನ್. ಲಕ್ಷ್ಮಣರಾವ್ ನಗರ (ಎಲ್.ಆರ್.ನಗರ), ಅಂಬೇಡ್ಕರ್ ನಗರ, ಸಮತಾನಗರ, ಸೊನ್ನೇನಹಳ್ಳಿ, ಮಾಯಾಬಜಾರ್, ತಿಮ್ಮರಾಯಪ್ಪ ಗಾರ್ಡನ್, ವಿನಾಯಕ ನಗರ, ಇಸ್ರೋ ಸ್ಲಂ, ಹಟ್ಟಿಂಗ್ ಕಾಲೋನಿ ಹಾಗೂ ಶಕ್ತಿವೇಲ್ ನಗರ ಮುಂತಾದ 10 ಕೊಳಗೇರಿ ಪ್ರದೇಶಗಳು ಇನ್ನು ಕೂಡ ಮೂಲಭೂತ ಸೌಲಭ್ಯಕ್ಕಾಗಿ ಹಾತೊರೆಯುತ್ತಿದೆ.

ನೀಲಸಂದ್ರ, ರೋಸ್ ಗಾರ್ಡನ್, ಅನೇಪಾಳ್ಯ, ಶಾಂತಿನಗರ, ಅಶೋಕ್ ನಗರ, ಗೌತಮಪುರಂ, ದೀನಬಂಧು ನಗರ, ರುದ್ರಪ್ಪ ಗಾರ್ಡನ್, ಜಯರಾಜ್ ನಗರ, ಆಸ್ಟೀನ್ ಟೌನ್ ಸಿಮೆಂಟ್ ಲೇನ್, ಸಿದ್ಧಾರ್ಥನಗರ, ಬಿಡಿಎ ಕ್ವಾಟ್ರಸ್, ವನ್ನಾರಪೇಟೆ ಮುಂತಾದ ಪ್ರದೇಶಗಳು ಇನ್ನೂ ಕೂಡ ಯಾವ ಅಭಿವೃದ್ಧಿಯೂ ಕಾಣದೆ 5 ದಶಕಗಳಿಂದ ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಕ್ಷೇತ್ರದಲ್ಲಿ ಒಂದು ಒಳ್ಳೆಯ ಸರ್ಕಾರಿ ಶಾಲೆ – ಕಾಲೇಜುಗಳು ಇಲ್ಲ. ಸುಸುಜ್ಜಿತವಾದ ಸರ್ಕಾರಿ ಆಸ್ಪತ್ರೆಗಳು ಇಲ್ಲ. ಸಮುದಾಯ ಭವನಗಳಿಲ್ಲ. ಇದ್ದ ಒಂದೆರಡು ಲೈಬ್ರರಿಗಳು ಕೂಡ ಕಣ್ಮರೆಯಾಗುತ್ತಿವೆ. ಆಸ್ಟೀನ್ ಟೌನ್ ಬಿಡಿಎ ಕಾಂಪ್ಲೆಕ್ಸ್, ಅಸ್ಟೀನ್ ಟೌನ್ ಮಾರ್ಕೆಟ್, ಜಾನ್ಸನ್ ಮಾರ್ಕೆಟ್ ಹಾಗೂ ದೊಮ್ಮಲೂರು ಬಿಡಿಎ ಕಾಂಪ್ಲೆಕ್ಸ್ ಎಲ್ಲವೂ ನಿರ್ವಹಣೆಯಿಲ್ಲದೆ ಅವಸಾನದ ಸ್ಥಿತಿಯಲ್ಲಿದೆ.

ಶಾಂತಿನಗರ ವಿಧಾನಸಭಾ ಕ್ಷೇತ್ರವು ಈ ರೀತಿ ಹದೆಗೆಡಲು ಈ ಹಿಂದೆ ಇದ್ದ ಸರ್ಕಾರಗಳು ಮತ್ತು ನಿದ್ರಾವಸ್ಥೆಯಲ್ಲಿರುವ ಬಿಬಿಎಂಪಿಯೇ ಕಾರಣ. ಅದುಮಾತ್ರವಲ್ಲ, ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾಗುವ ಶಾಸಕರು ಯಾರಿಗೂ ಇಲ್ಲಿಯವರೆಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡದೇ ನಿರಂತರವಾಗಿ ವಂಚಿಸಲಾಗುತ್ತಿದೆ ಇದು ಮತ್ತೊಂದು ಕಾರಣ. 2008ರಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ರಚನೆಯಾದ ಬಿಜೆಪಿ ಸರ್ಕಾರವು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ಕೊಡದೇ ವಂಚಿಸಿದ್ದು ಕ್ಷೇತ್ರ ಹದೆಗೆಡಲು ಇದುವೇ ಮೂಲ ಕಾರಣವಾಯಿತು. 

2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯವು ಸ್ವಲ್ಪ ಮಟ್ಟಿಗೆ ಸುಧಾರಣೆಯನ್ನು ಖಂಡಿದ್ದು ನಿಜ. ತದನಂತರ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ಒಂದು ವರ್ಷವಷ್ಟೆ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸವೂ ನಡೆಯಲಿಲ್ಲ.

ನಂತರ ಆಪರೇಷನ್ ಕಮಲದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಮತ್ತು ಅವರ ನಂತರ ಬಂದ ಬಸವರಾಜ ಬೊಮ್ಮಾಯ್ ಸರ್ಕಾರ ಈ ಕ್ಷೇತ್ರಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಏನು ಮಾಡಿದೆ ಎಂಬುದನ್ನು ಶಾಸಕ ಎನ್.ಎ.ಹ್ಯಾರಿಸ್ ನವರೇ ಬಂದು ಹೇಳಬೇಕು ಎಂದೇನಿಲ್ಲ. ಅದು ಈ ರಾಜ್ಯದ ಪ್ರತಿಯೊಬ್ಬರಿಗೂ ತಿಳಿದ ವಿಚಾರ.

ಶಾಂತಿನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೇ ಇರುವುದು ಮತ್ತು ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡದಿರುವುದರಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾದವು. ಅಲ್ಪ ಸಂಖ್ಯಾತ ಸಮುದಾಯದ ಎನ್.ಎ.ಹ್ಯಾರಿಸ್ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ದಲಿತರು ಬಹುಸಂಖ್ಯಾತರಾಗಿದ್ದಾರೆ. ಹಿಂದುಳಿದ ವರ್ಗಗಳ ಮತಗಳು ಇಲ್ಲಿ ನಿರ್ಣಾಯಕವಾಗಿದೆ.

ಶಾಸಕ ಎನ್.ಎ.ಹ್ಯಾರಿಸ್ ಮೇಲೆ ನಂಬಿಕೆಯಿಟ್ಟು ಕ್ಷೇತ್ರದ ಜನ ಮತ್ತೊಮ್ಮೆ (4ನೇ ಬಾರಿಗೆ) ಅವರನ್ನು ಆರಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ಕಾರಣ, ಅವರಿಂದ ಕ್ಷೇತ್ರಕ್ಕೆ ಒಳ್ಳೆಯದು ಆಗುತ್ತದೆ ಎಂಬ ನಂಬಿಕೆಯಿಂದಲೇ. ಜನರ ಆಶಯ ಈ ಬಾರಿ ನೆರವೇರಬೇಕು. ಕ್ಷೇತ್ರದ ಪ್ರತಿಯೊಂದು ಪ್ರದೇಶವೂ ಅಭಿವೃದ್ಧಿಯನ್ನು ಕಾಣಬೇಕು. ಅದಕ್ಕೆ ಅವರಿಗೆ ಹೆಚ್ಚಿನ ಅಧಿಕಾರ ಶಕ್ತಿಯನ್ನು ತುಂಬಬೇಕು. ಕ್ಷೇತ್ರದ ಮತದಾರರಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ಅದು ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಬಾರದು.

ಕಾಂಗ್ರೆಸ್ ಪಕ್ಷವು ಜನರ ಬಳಿ ಮುಂದಿಟ್ಟ 1) ಗೃಹ ಜ್ಯೋತಿ (200 ಯೂನಿಟ್ ವಿದ್ಯುತ್ ಉಚಿತ), 2) ಗೃಹಲಕ್ಷ್ಮಿ (2000 ಪ್ರತಿ ಮನೆ ಯಜಮಾನಿಗೆ ಖಚಿತ), 3) ಅನ್ನಭಾಗ್ಯ (ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನಿಶ್ಚಿತ), 4) ಯುವ ನಿಧಿ (ನಿರುದ್ಯೋಗ ಭತ್ಯೆ ರೂ.3000 ಪದವೀಧರರಿಗೆ ರೂ.1500 ಡಿಫ್ಲೋಮ ಪದವೀಧರರಿಗೆ) ಮುಂತಾದ ಗ್ಯಾರೆಂಟಿಗಳು ಖಂಡಿತವಾಗಿ ಜನರಿಗೆ ಸಿಗುತ್ತವೆ ಎಂಬ ಬರವಸೆ ಇದೆ. ಆದರೆ, ಅದುಮಾತ್ರ ಸಾಲದು. ನಮ್ಮ ಬಡಾವಣೆ ಮತ್ತು ನಮ್ಮ ಸುತ್ತಮುತ್ತ ಇರುವ ಪ್ರದೇಶಗಳೆಲ್ಲವೂ ಕೂಡ ಇತರರಂತೆ ಅಭಿವೃದ್ಧಿ ಕಾಣಬೇಕು.

ಅತಿ ಹಿಂದುಳಿದ ಅಹಿಂದ ಕ್ಷೇತ್ರವಾದ ಶಾಂತಿನಗರ ವಿಧಾನಸಭಾ ಕೇತ್ರವನ್ನು ಇಷ್ಟು ವರ್ಷಗಳು ಕಡೆಗಣಿಸಲಾಗಿತ್ತು; ಅದು ಇನ್ನು ಮುಂದುವರಿಯುವುದು ಬೇಡ. ಇತರೆ ಕ್ಷೇತ್ರಗಳಂತೆ ಶಾಂತಿನಗರವೂ ಅಭಿವೃದ್ಧಿಯನ್ನು ಕಾಣಬೇಕಾದರೆ ಖಂಡಿತ ಈ ಬಾರಿ ಎನ್.ಎ.ಹ್ಯಾರಿಸ್ ಸಚಿವರಾಗಬೇಕು. ಅಹಿಂದ ವರ್ಗದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದನ್ನು ಖಂಡಿತ ನೆರೆವೇರಿಸಿ ಕೋಡುತ್ತರೆ ಎಂದು ಕ್ಷೇತ್ರದ ಜನರು ನಂಬಿದ್ದಾರೆ.

ಒಂದು ವೇಳೆ, ಅಕಸ್ಮಾತ್ ಎನ್.ಎ.ಹ್ಯಾರಿಸ್ ಸಚಿವರಾಗುವುದು ಈ ಬಾರಿ ಕೈತಪ್ಪಿದರೆ, ಕ್ಷೇತ್ರದ ಒಳಿತಿಗಾಗಿ ಅವರಿಗೆ ಸಚಿವ ಸ್ಥಾನ ಸಿಗುವವರೆಗೂ ಜನಶಕ್ತಿ ವೇದಿಕೆಯ ನೇತೃತ್ವದಲ್ಲಿ ನಿರಂತರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಜನಶಕ್ತಿ ವೇದಿಕೆ ಎಚ್ಚರಿಕೆಯನ್ನು ಕೊಟ್ಟಿದೆ.

ರಾಜಕೀಯ

ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ದಿಢೀರ್ ರದ್ದಾಗಿದೆ. “135 ಕಾಂಗ್ರೆಸ್ ಶಾಸಕರಿದ್ದಾರೆ. ನನ್ನ ಬಳಿ ಯಾವ ಶಾಸಕರೂ ಇಲ್ಲ. ನಿರ್ಧಾರವನ್ನು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದೇನೆ; ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಶಾಸಕರಿಂದ ಬಹುಮತ ಬಂದರೆ, ಅವರಿಗೆ ಶುಭ ಹಾರೈಸುತ್ತೇನೆ” ಎಂದು ಡಿ.ಕೆ.ಶಿವಕುಮಾರ್ ಸಂದರ್ಶನ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಗಿಪಟ್ಟು ಹಿಡಿದಿರುವುದರಿಂದ ನೂತನ ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್  ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ. ವರಿಷ್ಠರ ಆಹ್ವಾನದ ಮೇರೆಗೆ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ದೆಹಲಿ ತಲುಪಿದ್ದು, ಇಂದು ರಾತ್ರಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ದೆಹಲಿಗೆ ತೆರಳಬೇಕಿತ್ತು. ಸಂಜೆ 7-30ಕ್ಕೆ ಕೆಐಎಬಿಯಿಂದ ದೆಹಲಿಗೆ ತಲುಪಲು ಏರ್ ಇಂಡಿಯಾ ವಿಮಾನದ ಟಿಕೆಟ್ ಕೂಡಾ ಬುಕ್ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಭೇಟಿ ರದ್ದಾಗಿದೆ. ಈ ಕುರಿತು ತಮ್ಮ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, “ನನ್ನ ಹೊಟ್ಟೆಯಲ್ಲಿ ಸಮಸ್ಯೆಯಾಗಿದೆ, ಸ್ವಲ್ಪ ವಿಶ್ರಾಂತಿ ಬೇಕು” ಎಂದರು.

ನನಗೆ ಸಮಯ ಪ್ರಜ್ಞೆ ಇದೆ. ಹೋರಾಟದ ಕಿಚ್ಚು ಇದೆ. ಹೋರಾಟದಲ್ಲಿ ಯಶಸ್ವು ಸಿಗಬೇಕಾದರೆ ತಾಳ್ಮೆ ಇರಬೇಕು. ಧರ್ಮರಾಯರಂತೆ ತಾಳ್ಮೆ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು. ಪೂಜೆ ಪುನಸ್ಕಾರ, ಹುಟ್ಟುಹಬ್ಬ ಆಚರಣೆ ಬಳಿಕ ದೆಹಲಿಗೆ ಭೇಟಿ ನೀಡುವುದಾಗಿ ತಿಳಿಸಿದರು.

135 ಕಾಂಗ್ರೆಸ್ ಶಾಸಕರಿದ್ದಾರೆ. ನನ್ನ ಬಳಿ ಶಾಸಕರಿಲ್ಲ, ಯಾವುದೇ ನಂಬರ್ ಇಲ್ಲ, ಯಾರನ್ನೂ ದೆಹಲಿಗೆ ಕರೆದೊಯ್ಯಲ್ಲ ಅಂತಾ ಹೇಳುವ ಮೂಲಕ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಅವರ ತಂತ್ರದ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ತಮ್ಮ ಶಿಷ್ಯನಿಂದಲೇ ಹೀನಾಯವಾಗಿ ಸೋಲು ಕಂಡಿದ್ದು, ಬಿಜೆಪಿ ಪಾಳಯಕ್ಕೆ ದೊಡ್ಡ ಶಾಕ್ ನೀಡಿದೆ.

ಕರ್ನಾಟಕದಲ್ಲಿ ಕಳೆದ 10 ರಂದು ವಿಧಾನಸಭೆ ಚುನಾವಣೆ ಮುಗಿದಿದ್ದು, ನಿನ್ನೆ ಮತ ಎಣಿಕೆ ನಡೆಸಲಾಯಿತು. ಇದರಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ತಮ್ಮ ಶಿಷ್ಯನ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ್ದು ಬಿಜೆಪಿ ವರಿಷ್ಠರಿಗೆ ಶಾಕ್ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಿ.ಟಿ.ರವಿ, ಬಿಜೆಪಿ ಮತ್ತು ಸಂಘಪರಿವಾರದ ಜೊತೆ ಬಾಲ್ಯದಿಂದಲೂ ಗುರುತಿಸಿಕೊಂಡಿದ್ದರು. ಪಕ್ಷದಲ್ಲಿ ಹಂತಹಂತವಾಗಿ ಬೆಳೆದ ಸಿ.ಟಿ.ರವಿ 1999ರಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಗೀರ್ ಅಹಮದ್ ವಿರುದ್ಧ ಸ್ಪರ್ಧಿಸಿ 982 ಮತಗಳ ಅಂತರದಿಂದ ಸೋತಿದ್ದರು. ನಂತರ 2004ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಸಗೀರ್ ಅಹಮದ್ ಅವರನ್ನು 25 ಸಾವಿರ ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲುವನ್ನು ಸಾಧಿಸಿದರು.

ನಂತರ ಚಿಕ್ಕಮಗಳೂರಿನಲ್ಲಿ ನಾಲ್ಕು ಬಾರಿ ಗೆದ್ದಿದ್ದ ಸಿ.ಟಿ.ರವಿ. ಆ ಪ್ರದೇಶದಲ್ಲಿ ಬಿಜೆಪಿಯ ಅನಿವಾರ್ಯ ನಾಯಕರಾಗಿ ಬೆಳೆದರು. ಎರಡು ಬಾರಿ ಸಚಿವರು, ತಮಿಳುನಾಡು ಚುನಾವಣಾ ಉಸ್ತುವಾರಿ, ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇದಲ್ಲದೇ ಪ್ರತಿಪಕ್ಷಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವುದು, ‘ಸಿದ್ದರಾಮಯ್ಯ ಹಿಂದೂ ವಿರೋಧಿ’ ಎಂದು ಪ್ರಚಾರ ಮಾಡುವುದು, ಹಿಂದುತ್ವ ಪರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸಿ.ಟಿ.ರವಿಯ ಕಾಯಕವಾಗಿತ್ತು.

‘ಬಿಜೆಪಿಯ ಮುಂದಿನ ತಲೆಮಾರುಗಳಿಗೆ ನಾನೇ ಸೀನಿಯರ್’ ಎಂದು ಬೀಗುತ್ತಿದ್ದ ಸಿಟಿ ರವಿ, ಕರ್ನಾಟಕ ಚುನಾವಣೆಯಲ್ಲಿ ಈ ಬಾರಿ ಶಿಷ್ಯನ ವಿರುದ್ಧ ಹೀನಾಯ ಸೋಲನ್ನು ಕಂಡಿದ್ದಾರೆ. ಹೆಚ್.ಡಿ.ತಮ್ಮಯ್ಯ ಈ ಹಿಂದೆ ಸಿ.ಟಿ.ರವಿಯ ಕಾರ್ಯದರ್ಶಿಯಾಗಿ ಮತ್ತು ಬಿಜೆಪಿಯ ಜಿಲ್ಲಾ ಉಸ್ತುವಾರಿಯಾಗಿದ್ದರು. ಲಿಂಗಾಯತ ಸಮುದಾಯಕ್ಕೆ ಸೇರಿದ ಇವರು, ರವಿ ಮತ್ತು ಬಿಜೆಪಿ ವಿರುದ್ಧದ ಅಸಮಾಧಾನದಿಂದ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.

ಕ್ಷೇತ್ರದಲ್ಲಿ ಸಿ.ಟಿ.ರವಿಯಷ್ಟು ಪ್ರಭಾವ ತಮ್ಮಯ್ಯ ಅವರಿಗೂ ಇದ್ದಿದ್ದರಿಂದ ರಣತಂತ್ರ ರೂಪಿಸಿದ್ದ ಕಾಂಗ್ರೆಸ್ ನ ಚುನಾವಣಾ ‘ವಾರ್ ರೂಂ’ ಹಾಗೂ ವರಿಷ್ಠರು ಸಿ.ಟಿ.ರವಿಯ ವಿರುದ್ಧ ತಮ್ಮಯ್ಯ ಅವರನ್ನು ಕಣಕ್ಕಿಳಿಸಿದರು. ಸಿ.ಟಿ.ರವಿಯ ಪ್ರಭಾವದ ಮುಂದೆ ತಮ್ಮಯ್ಯನವರು ಹೀನಾಯ ಸೋಲನ್ನು ಅನುಭವಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿಗರಿಗೆ ತಮ್ಮಯ್ಯನ ಗೆಲುವು ಅಘಾತವನ್ನು ನೀಡಿತು.

ಮೇಲಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ರಣತಂತ್ರ ರೂಪಿಸಿ ಮತ ಸಂಗ್ರಹಣೆ, ಸಾರ್ವಜನಿಕ ಸಭೆ, ತಮ್ಮಯ್ಯನವರ ಪರ ಕಾಂಗ್ರೆಸ್ ನಾಯಕರು ನಡೆಸಿದ ಪ್ರಚಾರದಂತಹ ಹಲವು ಕಾರ್ಯಗಳು ತಮ್ಮಯ್ಯನವರಿಗೆ ಅನುಕೂಲವಾದ ವಾತಾವರಣವನ್ನು ನಿರ್ಮಿಸಿಕೊಟ್ಟಿತು. ಇದರಿಂದ ತಮ್ಮಯ್ಯನವರು ಒಟ್ಟು 85,054 ಮತಗಳನ್ನು ಪಡೆದು 5,926 ಮತಗಳ ಅಂತರದಿಂದ ಸಿ.ಟಿ.ರವಿಯನ್ನು ಸೋಲಿಸಿ ಶಾಸಕರಾಗಿದ್ದಾರೆ. ಸಿ.ಟಿ.ರವಿ ತಮ್ಮ ಶಿಷ್ಯನಿಂದಲೇ ಸೋಲನುಭವಿಸಿರುವುದು ಬಿಜೆಪಿ ಪಾಳಯಕ್ಕೆ ದೊಡ್ದ ಶಾಕ್ ನೀಡಿದೆ.

ರಾಜಕೀಯ

ಡಿ.ಸಿ.ಪ್ರಕಾಶ್

ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಚಲಾವಣೆಯಾದ ಮತಗಳನ್ನು ನಿನ್ನೆ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷ 135 ಕ್ಷೇತ್ರಗಳಲ್ಲಿ ಗೆದ್ದು ಏಕ ಬಹುಮತದೊಂದಿಗೆ ಸರ್ಕಾರ ರಚಿಸಲು ಹೊರಟಿದೆ. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷ ಹಲವು ಉಚಿತ ಯೋಜನೆಗಳನ್ನು ಘೋಷಿಸಿತ್ತು.

ಅದರಲ್ಲಿ ಪ್ರಮುಖವಾಗಿ 5 ಗ್ಯಾರಂಟಿಗಳನ್ನು ನೀಡಿತ್ತು. ಮಹಿಳೆಯರಿಗೆ ಮಾಸಿಕ ರೂ.2000 ಪ್ರೋತ್ಸಾಹಧನ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಬಡತನ ರೇಖೆಗಿಂತ ಕೆಳಗಿರುವ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ರೂ.3000 ಮತ್ತು ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮುಂತಾದ 5 ಗ್ಯಾರಂಟಿಗಳು ವಿಶೇಷವಾದದ್ದು.

ಈ ಉಚಿತ ಕಾರ್ಯಕ್ರಮಗಳು ಕಾಂಗ್ರೆಸ್ ಗೆಲುವಿಗೆ ನೆರವಾದವು ಎಂದರೆ ಅತಿಶಯೋಕ್ತಿಯಲ್ಲ. ಪ್ರಧಾನಿ ಮೋದಿ, ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯ್ ಸೇರಿದಂತೆ ಬಿಜೆಪಿಯ ಮುಖಂಡರು “ಈ ಉಚಿತ ಯೋಜನೆಗಳು ಕಾಂಗ್ರೆಸ್ ನವರ ಸುಳ್ಳು ಭರವಸೆಗಳು” ಎಂದರು. ಆದರೆ, ಕಾಂಗ್ರೆಸ್ ಮುಖಂಡರು ಮನೆ-ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ವಿತರಿಸಿ, ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ ಉಚಿತ ಯೋಜನೆಗಳಿಗೆ ಅನುಮತಿ ನೀಡುವುದಾಗಿ ಭರವಸೆ ನೀಡಿದರು.

ನಂತರ ಬಿಜೆಪಿ ಕೂಡ ಇದೇ ರೀತಿಯ ಉಚಿತ ಭರವಸೆಗಳನ್ನು ನೀಡಿತು. ಪ್ರತಿದಿನ ಅರ್ಧ ಲೀಟರ್ ಹಾಲಿನೊಂದಿಗೆ, ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್ ಉಚಿತ ಎಂಬ ಭರವಸೆಯನ್ನೂ ಕೊಟ್ಟಿತು. ಆದರೆ ಫಲಕಾರಿಯಾಗಲಿಲ್ಲ. ಜನತಾ ದಳ (ಎಸ್) ವರ್ಷಕ್ಕೆ 5 ಉಚಿತ ಗ್ಯಾಸ್ ಸಿಲಿಂಡರ್ ಸೇರಿದಂತೆ ಇತರೆ ಉಚಿತಗಳನ್ನು ಘೋಷಿಸಿತು. ಅದುವೂ ಅವರಿಗೆ ಕೈಕೊಡಲಿಲ್ಲ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಗೆದ್ದು ಈಗ ಸರ್ಕಾರ ರಚಿಸಲಿದೆ. ಆದ್ದರಿಂದ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಕಾರ್ಯಕ್ರಮಗಳು ಜಾರಿಯಾಗುವುದೇ? ಅದು ಕಾರ್ಯಸಾಧ್ಯವೇ? ಇದಕ್ಕೆ ಪ್ರತಿ ವರ್ಷ ಬೇಕಾಗುವ ಹಣವೆಷ್ಟು? ಅದರ ಬಗ್ಗೆ ಸ್ವಲ್ಪ ನೋಡೋಣ.

Congress Guarantee

ಅಂದರೆ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲು ವರ್ಷಕ್ಕೆ ಸರಾಸರಿ 25,800 ಕೋಟಿ ಬೇಕಾಗುತ್ತದೆ. ಅದೇ ರೀತಿ, ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ ಕುಟುಂಬ) ಕಾರ್ಡ್ ಹೊಂದಿರುವವರಿಗೆ ತಿಂಗಳಿಗೆ 2,000 ರೂಪಾಯಿಗಳನ್ನು ಒದಗಿಸಲು ವರ್ಷಕ್ಕೆ ಸರಾಸರಿ 30,000 ಕೋಟಿ ಬೇಕಾಗಬಹುದು. ಏಕೆಂದರೆ ರಾಜ್ಯಾದ್ಯಂತ 1.28 ಕೋಟಿ ಮಹಿಳೆಯರು ಬಿ.ಪಿ.ಎಲ್. ಕಾರ್ಡ್ ಹೊಂದಿದ್ದಾರೆ. ಇವರೆಲ್ಲರಿಗೂ ತಿಂಗಳಿಗೆ 2 ಸಾವಿರ ನೀಡಲು 30 ಸಾವಿರ ಕೋಟಿ ಬೇಕು ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ವಾರ್ಷಿಕ 3 ಸಾವಿರ ಕೋಟಿ ಬೇಕಾಗುತ್ತದೆ ಎಂದು ಊಹಿಸಲಾಗಿದೆ. ಇದಲ್ಲದೇ, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ಮತ್ತು 10 ಕೆಜಿ ಉಚಿತ ಅಕ್ಕಿ ನೀಡಲು ವರ್ಷಕ್ಕೆ 15,000 ಕೋಟಿಯಿಂದ 17,000 ಕೋಟಿಯವರೆಗೆ ಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಒಟ್ಟಾರೆಯಾಗಿ ಕಾಂಗ್ರೆಸ್ ನೀಡಿರುವ ಈ 5 ಪ್ರಮುಖ ಭರವಸೆಗಳನ್ನು ಈಡೇರಿಸಲು ವರ್ಷಕ್ಕೆ ಅಂದಾಜು 75 ಸಾವಿರ ಕೋಟಿ ರೂಪಾಯಿಗಳು ಬೇಕಾಗಬಹುದು. 2023-24ನೇ ಸಾಲಿನ ಬಜೆಟ್ ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯ್ ಅವರು 3 ಸಾವಿರ ಕೋಟಿಗೆ ಮಂಡಿಸಿದ್ದರು. 2013 ರಿಂದ 2018 ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ 1 ಲಕ್ಷದ 28 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದರು. ಕಳೆದ ಬಿಜೆಪಿ ಸರ್ಕಾರದಲ್ಲಿ ಆ ಸಾಲ 3 ಸಾವಿರ ಕೋಟಿ ಮೀರಿತ್ತು.

ಇದರಿಂದಾಗಿ ಕರ್ನಾಟಕ ಸರ್ಕಾರದ ಸಾಲ ಹೆಚ್ಚುತ್ತಲೇ ಇದೆ. ಮತ್ತು ಆ ಸಾಲದ ಮೇಲಿನ ಬಡ್ಡಿಯೂ ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿರುವ ಯೋಜನೆಗಳನ್ನು ಈಡೇರಿಸಲು ಸರ್ಕಾರ ಇನ್ನೂ ಹೆಚ್ಚಿನ ಸಾಲವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ? ಆದ್ದರಿಂದ ಕಾಂಗ್ರೆಸ್ ಉಚಿತ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಸಾದ್ಯವೇ? ಎಂಬ ಪ್ರಶ್ನೆಯನ್ನು ಅರ್ಥಶಾಸ್ತ್ರಜ್ಞರು ಮುಂದಿಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ನೀಡಿದ ಭರವಸೆಗಳು ಈಡೇರುತ್ತದೆಯೇ? ಅದಕ್ಕಾಗಿ ಕಾಂಗ್ರೆಸ್ ನಾಯಕರು ಯಾವ ಕ್ರಮಗಳನ್ನು ತೆಗೆದುಕೊಳಬಹುದು? ಎಂಬುದನ್ನು ಕಾದು ನೋಡಬೇಕಿದೆ.

ಬೆಂಗಳೂರು ರಾಜಕೀಯ

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಾಗೂ ಬೆಂಗಳೂರು ಜಿಲ್ಲೆಗೆ ಸೇರಿರುವ ಒಟ್ಟು 32 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಗರದ 5 ಸ್ಥಳಗಳಲ್ಲಿ ಏರ್ಪಡಿಸಲಾಗಿದ್ದು, ಮತ ಎಣಿಕೆ ಸ್ಥಳಗಳಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ದೃಷ್ಠಿಯಿಂದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

1. ಮತ ಎಣಿಕೆ ಕೇಂದ್ರ: ಮೌಂಟ್ ಕಾರ್ಮಲ್ ಕಾಲೇಜು, ವಸಂತ ನಗರ. ವಿಧಾನಭಾ ಕ್ಷೇತ್ರಗಳು: ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞನಗರ ಹಾಗೂ ಸಿ.ವಿ.ರಾಮನ್ ನಗರ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಪೂರ್ವ ಮತ್ತು ಡಿಸಿಪಿ ಕೇಂದ್ರ ವಿಭಾಗ.

2. ಮತ ಎಣಿಕೆ ಕೇಂದ್ರ: ಸೆಂಟ್ ಜೋಷಫ್ ಇಂಡಿಯನ್ ಹೈಸ್ಕೂಲ್. ವಿಧಾನಭಾ ಕ್ಷೇತ್ರಗಳು: ಆನೇಕಲ್, ಬೆಂಗಳೂರು ದಕ್ಷಿಣ, ಮಹದೇವಪುರ, ಬ್ಯಾಟರಾಯನಪುರ, ಯಲಹಂಕ ಹಾಗೂ ದಾಸರಹಳ್ಳಿ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಅಪರಾಧ ಮತ್ತು ಡಿಸಿಪಿ ವೈಟ್ ಫೀಲ್ಡ್ ವಿಭಾಗ.

3. ಮತ ಎಣಿಕೆ ಕೇಂದ್ರ: ಬಿಎಂಎಸ್ ಮಹಿಳಾ ಕಾಲೇಜು, ಬಸವನಗುಡಿ. ವಿಧಾನಭಾ ಕ್ಷೇತ್ರಗಳು: ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಆರ್.ಆರ್.ನಗರ ಹಾಗೂ ಶಿವಾಜಿನಗರ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ದಕ್ಷಿಣ ವಿಭಾಗ ಮತ್ತು ಡಿಸಿಪಿ ಕಮಾಂಡ್ ಸೆಂಟರ್.

4. ಮತ ಎಣಿಕೆ ಕೇಂದ್ರ: ಎಸ್.ಎಸ್.ಎಂ.ಆರ್.ವಿ ಕಾಲೇಜು, ತಿಲಕನಗರ. ವಿಧಾನಭಾ ಕ್ಷೇತ್ರಗಳು: ಪದ್ಮನಾಭ ನಗರ, ಗೋವಿಂದರಾಜನಗರ, ವಿಜಯನಗರ, ಜಯನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಹಾಗೂ ಬಸವನಗುಡಿ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಆಗ್ನೇಯ ವಿಭಾಗ ಮತ್ತು ಡಿಸಿಪಿ ಸಿಎಆರ್ ದಕ್ಷಿಣ.

5. ಮತ ಎಣಿಕೆ ಕೇಂದ್ರ: ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್, ದೇವನಹಳ್ಳಿ. ವಿಧಾನಭಾ ಕ್ಷೇತ್ರಗಳು: ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಈಶಾನ್ಯ ವಿಭಾಗ ಮತ್ತು ಡಿಸಿಪಿ ವಿವಿಐಪಿ ಭದ್ರತೆ.

ಮತ ಎಣಿಕೆ ದಿನದಂದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ಭಾರತೀಯ ದಂಡ ಪ್ರಕ್ರಿಯ ಸಂಹಿತೆ 1973ರ ಕಲಂ 144 ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1951ರ ಉಪಬಂಧಗಳು ಅನ್ವಯವಾಗುವಂತೆ ದಿನಾಂಕ: 13-05-2023ರ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆಯನ್ನು ವಿಧಿಸಿರುವುದರ ಜೊತೆಗೆ ಮೇಲ್ಕಂಡ ಅವಧಿಯಲ್ಲಿ ನಗರದಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿರುತ್ತದೆ.

ಮೇಲ್ಕಂಡ ಮುಂಜಾಗರೂಕತಾ ಕ್ರಮಗಳ ಜೊತೆಗೆ ಚುನಾವಣಾ ಫಲಿತಾಂಶವು ಪ್ರಕಟವಾದ ನಂತರ ದಿನಾಂಕ: 13-05-2023ರ ಮುಂಜಾಣೆಯಿಂದ ದಿನಾಂಕ: 14-05-2023ರ ಬೆಳಗ್ಗೆವರೆಗೆ ಸಶಸ್ತ್ರ ದಳವನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಕ್ರಮ ವಹಿಸಲಾಗಿರುತ್ತದೆ. ಈ ಬಂದೋಬಸ್ತ್ ಕರ್ತವ್ಯಕ್ಕೆ ಅಪರ ಪೊಲೀಸ್ ಅಯ್ಯುಕ್ತರು, ಪೂರ್ವ ಮತ್ತು ಪಶ್ಚಿಮ ರವರ ನೇರ ಉಸ್ತುವಾರಿಯಲ್ಲಿ 10 ಡಿಸಿಪಿ, 15 ಎಸಿಪಿ, 38 ಪೊಲೀಸ್ ಇನ್ಸ್ ಪೆಕ್ಟರ್, 250 ಪಿಎಸ್ಐ 1200 ಸಿಬ್ಬಂಧಿಗಳ ಜೊತೆಗೆ 12 ಕೇಂದ್ರಿಯ ಸಿ.ಎ.ಪಿ.ಎಫ್ ತುಕಡಿ, 36 ಕೆ.ಎಸ್.ಆರ್.ಪಿ / ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಸರಹದ್ದಿನಲ್ಲಿ ವಿಶೇಷ ಗಸ್ತು ನೇಮಕ ಮಾಡಿದ್ದು, ಪ್ರತಿಯೊಂದು ವಿಭಾಗದ ಉಸ್ತುವಾರಿಗೆ ಒಬ್ಬರು ಸಹಾಯಕ ಪೊಲೀಸ್ ಆಯುಕ್ತರನ್ನು ನಿಯೋಜಿಸಲಾಗಿದೆ. 


ರಾಜಕೀಯ

ವರದಿ: ರಾಮು ನೀರಮಾನ್ವಿ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಂಪಯ್ಯ ನಾಯಕ, ಜೆಡಿಎಸ್‌ನಿಂದ ರಾಜಾ ವೆಂಕಟಪ್ಪ ನಾಯಕ, ಬಿಜೆಪಿಯಿಂದ ಬಿ.ವಿ.ನಾಯಕ ಅಭ್ಯರ್ಥಿಗಳಾಗಿದ್ದಾರೆ. ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿಯ ಮತಯಾಚನೆ ನೆಡೆದಿದೆ. ಮತ ಬೇಟೆಯಲ್ಲಿ ಮೂರು ಪಕ್ಷಗಳು ಬಿಸಿಲಿನಲ್ಲಿ ಬೆವರು ಹರಿಸುತ್ತಿದ್ದಾರೆ. ಮಾನ್ವಿ ನಗರದಲ್ಲಿ ಜೆಡಿಎಸ್ ಪ್ರಚಾರದಲ್ಲಿ ಮುಂದೆ ಇರುವುದು ಕಂಡು ಬಂದಿದೆ. ಕಾಂಗ್ರೆಸ್ ಬಿಜೆಪಿಗಿಂತ ಮೊದಲಿಗೆ ಜೆಡಿಎಸ್ ಚುನಾವಣೆ ಪ್ರಚಾರವನ್ನು ಕೈಗೊಂಡ ಕಾರಣ ಮತದಾರರನ್ನು ತನ್ನತ್ತ ಸೆಳೆಯಲು ಯಾಶಸ್ವಿಯಾಗಿದೆ. ಕ್ಷೇತ್ರದ ಹಳ್ಳಿಗಳಲ್ಲಿ ಜೆಡಿಎಸ್ ಪಕ್ಷದ ಅಬ್ಬರದ ಪ್ರಚಾರ ಮತ್ತು ಪಕ್ಷದ ಸೇರ್ಪಡೆ ಕಾರ್ಯಕ್ರಮಗಳು ಬರದಿಂದ ಸಾಗಿದ್ದು ಪಕ್ಷಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.

ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಅದೂ ತನ್ನ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಬೇರೆ ತಾಲ್ಲೂಕಿನಿಂದ ವಲಸೆ ಬಂದ ಕಾರಣ ಮತದಾರರನ್ನು ಸೆಳೆಯುವಲ್ಲಿ ಸಪಲವಾಗಿಲ್ಲ. ಕೆಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿದ್ದು ಆ ಪಕ್ಷಕ್ಕೆ ಸ್ವಪ್ಲ ಬಲ ಹೆಚ್ಚಾಗಿದೆ. ಪಕ್ಷ ಸೇರ್ಪಡೆ ಬರದಿಂದ ಮುಂದುವರಿಯುತ್ತಿದೆ. ಇನ್ನೂ ಕಾಂಗ್ರೆಸ್ ಪಕ್ಷದ ನೆಡೆಯು ಮೋಡಮುಸುಕಿದ ವಾತಾವರಣ ಇದೆ. ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್‌ಗೆ ಸೇರಿರುವುದರಿಂದ ಆ ಪಕ್ಷಕ್ಕೆ ಹಿನ್ನಡೆಯಾಗಿದ್ದರೂ ಎಂ.ಈರಣ್ಣ ಅವರ ಸೇರ್ಪಡೆಯಿಂದ ನಿಟ್ಟುಸಿರು ಬಿಡುವಂತೆ ಅಗಿದೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿದೆ. ತಾಲ್ಲೂಕಿನ ದೊಡ್ಡ ದೊಡ್ಡ ಹಳ್ಳಿಗಳಲ್ಲಿ ಕೂಡಾ ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ. ಕೆಲವು ಕಾರ್ಯಕರ್ತರು ಕಾಂಗ್ರೆಸ್ ನಾಯಕರ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಇದು ಹಗಲಿನಷ್ಟೆ ಸತ್ಯ.

ಜೆಡಿಎಸ್, ಬಿಜೆಪಿಯಲ್ಲಿ ಕಾರ್ಯಕರ್ತರು ಹೊಸ ಹುರುಪಿನಿಂದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಆದರೇ ಈ ರೀತಿಯ ವಾತಾವರಣ ಕಾಂಗ್ರೆಸ್‌ನಲ್ಲಿ ಕಂಡು ಬರುತ್ತಿಲ್ಲ. ಇದು ಆ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ. ಚುನಾವಣೆಗೆ ಇನ್ನೂ ಕೇವಲ ಐದು ದಿನ ಬಾಕಿಯಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಮುಖ ಜೋತಾಕಿಕೊಂಡು ತಿರುಗಾಡುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ಗೆ ಇದೊಂದು ದೊಡ್ಡ ಹೊಡೆತ ಅಂದರೆ ಅತಿಶಯೋಕ್ತಿಯಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಪುಟಿದೇಳಬೇಕಾದ ಪರಸ್ಥಿತಿ ಎದುರಾಗಿದೆ. ಅದರ ನಾಯಕರು ಇತ್ತ ಕಡೆ ಗಮನ ಹರಿಸುವರೇ ಎಂಬುದನ್ನು ಕಾದು ನೋಡಬೇಕು. ಅಂತು ಮಾನ್ವಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಚಾರದಲ್ಲಿ ಜೆಡಿಎಸ್ ಎಲ್ಲರಿಗಿಂತಲು ಒಂದು ಹೆಜ್ಜೆ ಮುಂದಿದೆ. ನಂತರ ಬಿಜೆಪಿ, ಅನಂತರ ಕಾಂಗ್ರೆಸ್ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೇ ರೀತಿಯಲ್ಲಿ ಜೆಡಿಎಸ್ ಮುನ್ನೆಡೆದರೆ ಅದು ಗೆಲುವಿನ ದಡ ಸೇರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನೂ ಐದು ದಿನಗಳು ಚುನಾವಣೆಗೆ ಬಾಕಿ ಉಳಿದಿರುವುದರಿಂದ ಪಕ್ಷಗಳು ಯಾವ ತಂತ್ರಗಳನ್ನು ಅನುಸರಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ರಾಜಕೀಯ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ನಾಯಕರು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ, ಪ್ರಧಾನಿ ಮೋದಿಯನ್ನು ವಿಷ ಷರ್ಪ ಎಂದು ಮೂದಲಿಸಿದ್ದರು.

ಏತನ್ಮಧ್ಯೆ, ನಿನ್ನೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ, “ಕಾಂಗ್ರೆಸ್ ಪಕ್ಷದ ನಾಯಕರು ಇಲ್ಲಿಯವರೆಗೆ 91 ಬಾರಿ ತಮ್ಮನ್ನು ನಿಂದಿಸಿದ್ದಾರೆ” ಎಂದು ಹೇಳಿದರು.

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಾಗಲಕೋಟೆ ಜಿಲ್ಲೆಯ ಜಮಕಂಡಿ ತಾಲೂಕಿನಲ್ಲಿ ಪ್ರಚಾರ ನಡೆಸಿದರು. ನಂತರ ಮಾತನಾಡಿದ ಅವರು, “ಪ್ರಧಾನಿ ಮೋದಿ ತಮ್ಮ ಬಗ್ಗೆ 91 ಬಾರಿ ದೂಷಣೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಆ ನಿಂದನೆಯ ದೂರುಗಳು ಒಂದೇ ಪುಟದಲ್ಲಿ ಅಡಗಿಬಿಡುತ್ತವೆ. ಆದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳಿರುವ ಅಪಪ್ರಚಾರಗಳನ್ನು ಪಟ್ಟಿ ಮಾಡಿದರೆ ಪುಸ್ತಕಗಳಾಗಿ ಪ್ರಕಟಿಸಬಹುದು” ಎಂದು ಹೇಳಿದರು.

“ಸಾರ್ವಜನಿಕರನ್ನು ಭೇಟಿಯಾಗುವ ಪ್ರಧಾನ ಮಂತ್ರಿಗಳು ಜನರ ಸಮಸ್ಯೆಗಳನ್ನು ಆಲಿಸದೆ ತಮ್ಮ ಅಹವಾಲುಗಳನ್ನು ಮಾತ್ರ ಹೇಳಿಕೊಳ್ಳುತ್ತಾರೆ. ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಗುಂಡೇಟು ಪಡೆದು ಮಡಿದಿದ್ದಾರೆ. ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಅವರಂತಹ ಪ್ರಧಾನಿಗಳು ದೇಶಕ್ಕಾಗಿ ಶ್ರಮಿಸಿದ್ದಾರೆ.

ಆದರೆ ಪ್ರಧಾನಿ ಮೋದಿ ಮಾತ್ರ ಜನರ ಮುಂದೆ ತಮ್ಮ ಬಗ್ಗೆ ಅಳುತ್ತಾರೆ. ನಿಮಗೆ ಧೈರ್ಯವಿದೆಯೇ? ನನ್ನ ಸಹೋದರ ರಾಹುಲ್ ಗಾಂಧಿಯಿಂದ ಕಲಿಯಿರಿ. ನನ್ನ ಸಹೋದರ ರಾಹುಲ್ ಗಾಂಧಿ ನೀವು ನೋವಿನಿಂದ ಮಾತನಾಡಿದರೂ, ಗುಂಡು ಹಾರಿಸಿದರೂ, ಇರಿದರೂ, ಸತ್ಯದ ಮಾರ್ಗವನ್ನು ಅನುಸರಿಸುತ್ತಾರೆ. ರಾಹುಲ್ ಗಾಂಧಿ ಈ ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧ” ಎಂದು ಹೇಳಿದರು.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬಿಜೆಪಿಯವರು ಪದೇ ಪದೇ ‘ಡಬಲ್ ಎಂಜಿನ್ ಸರ್ಕಾರ; ಡಬಲ್ ಎಂಜಿನ್ ಸರ್ಕಾರ’ ಎಂದು ಹೇಳುತ್ತಿರುವುದನ್ನು ನಾವೆಲ್ಲರು ಕೇಳಿದ್ದೇವೆ. “ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ; ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ; ಅದರಿಂದ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದ್ದರಿಂದ ‘ಡಬಲ್ ಎಂಜಿನ್ ಸರ್ಕಾರ’ ಮುಂದುವರಿಯಲು ಬಿಜೆಪಿಯನ್ನು ಬೆಂಬಲಿಸಿ” ಎಂದು ಅದರ ನಾಯಕರು ಹೇಳುತ್ತೀದ್ದಾರೆ.

ಉದಾಹರಣೆಗೆ: ನೀವೆ ಹೇಳಿ, ಜೋಡೆತ್ತಿನ ಬಂಡಿಯಲ್ಲಿ ಎರಡು ಎತ್ತುಗಳು ಸಮಾನವಾದ ತೂಕದಲ್ಲಿರಬೇಕು. ಒಂದು ಗಟ್ಟಿಯಾಗಿ ಮತ್ತೊಂದು ಸಡಿಲವಾಗಿದ್ದರೆ ಅಥವಾ ಒಂದು ಎತ್ತು ಎತ್ತರಕ್ಕೆ ಮತ್ತೊಂದು ಕುಳ್ಳಗೆ ಇದ್ದರೆ ಬಂಡಿ ಓಡುತ್ತೆ? ಕೇಂದ್ರ ಸರ್ಕಾರದ ಎಂಜಿನ್ ಬೇರೆ; ರಾಜ್ಯ ಸರ್ಕಾರಗಳ ಎಂಜಿನೇ ಬೇರೆ. ಕೇಂದ್ರಾಡಳಿತ ಪ್ರದೇಶಗಳ ಎಂಜಿನ್‌ಗಳು ಇದಕ್ಕಿಂತ ಬಿನ್ನವಾದದ್ದು. ಕೇಂದ್ರ ಸರ್ಕಾರದ ಎಂಜಿನ್ 500 ಸಿಸಿ ಆದರೆ, ರಾಜ್ಯ ಸರ್ಕಾರಗಳ ಇಂಜಿನ್ 200 ಸಿಸಿ. ಕೇಂದ್ರಾಡಳಿತ ಪ್ರದೇಶಗಳ ಎಂಜಿನ್ ಬರೀ 100 ಸಿಸಿ ಮಾತ್ರ. ಎಲ್ಲವೂ ಗಾಡಿಗಳೇ ಎಲ್ಲಾ ಗಾಡಿಗಳಿಗೂ ಎಂಜಿನ್ ಇದೆ. ಆದರೆ ಒಂದಕ್ಕೊಂದು ಹೊಲಿಕೆಯಾಗುವುದಿಲ್ಲ. ಅದರದ್ದೇ ಆದ ವಿಶೇಷತೆಗಳು ಇರುತ್ತದೆ. ಒಂದು ಗಾಡಿ ರಿಪೇರಿ ಆದಾಗ, ಮತ್ತೊಂದು ಗಾಡಿಯಿಂದ ಅದನ್ನು ಎಳೆದುಕೊಂಡು ಅಥವಾ ತಳ್ಳಿಕೊಂಡು ಹೋಗಿ ನಿರ್ದಿಷ್ಟವಾದ ಜಾಗಕ್ಕೆ ಸೇರಿಸಬಹುದು. ಆದರೆ ವಿಭಿನ್ನವಾದ ಎರಡು ಗಾಡಿಗಳನ್ನು ಒಂದಾಗಿ ಜೋಡಿಸಿ, ಅದರ ಮೇಲೆ ಕೇಂದ್ರವು ಸವಾರಿ ಮಾಡುತ್ತದೆ ಎಂದರೆ ಅದು ಸಾದ್ಯವಿಲ್ಲ. ಅದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ; ಪ್ರಜಾಪ್ರಭುತ್ವ ಅದನ್ನು ಒಪ್ಪುವುದೂ ಇಲ್ಲ.

ನೆನೆಪಿರಲಿ: ಬಿಜೆಪಿಯ ‘ಒಂದು ದೇಶ ಒಂದೇ ಧರ್ಮ’, ‘ಒಂದು ದೇಶ ಒಂದೇ ಭಾಷೆ’, ಒಂದು ದೇಶ ಒಂದೇ ಚುನಾವಣೆ’ ಮಾದರಿಯಲ್ಲಿ ‘ಒಂದು ದೇಶ ಒಂದೇ ಪಕ್ಷ’ ವೆಂಬ ರಾಜಕೀಯ ಘೋಷನೆಗೆ ಮತ್ತೊಂದು ಅಡ್ಡ ಹೆಸರೇ ‘ಡಬಲ್ ಎಂಜಿನ್ ಸರ್ಕಾರ’. ಈ ಡಬಲ್ ಎಂಜಿನ್ ಸರ್ಕಾರದ ಅಂತಿಮ ಗುರಿಯೇ ಏಕ ನಾಯಕತ್ವದ ಹಿಂದೂ ಬಿಜೆಪಿ ಸರ್ವಾಧಿಕಾರ ಆಡಳಿತ. ಅದರ ಉದ್ದೇಶ ಅಖಂಡ ಭಾರತವೆಂಬ ಹಿಂದೂ ರಾಷ್ಟ್ರ. ಭಾರತವು ಅನೇಕ ರಾಜ್ಯಗಳ ರಾಷ್ಟ್ರವಾಗಿದೆ. ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂಬ ತತ್ವವನ್ನು ತರಲು ಇಲ್ಲಿ ಸಾಧ್ಯವಿಲ್ಲ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ಹಾಗೂ ವೈವಿಧ್ಯಮಯ ಸಾಮಾಜಿಕ ಸಂಸ್ಕೃತಿಗಳನ್ನು ಹೊಂದಿರುವ ಭಾರತದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫೆಡರಲ್ ರಚನೆಯ ಆಧಾರದ ಮೇಲೆ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡಬೇಕು. ಅದನ್ನು ಬಿಟ್ಟು, ಡಬಲ್ ಎಂಜಿನ್ ಸರ್ಕಾರದ ಹೆಸರಿನಲ್ಲಿ ಒಂದು ದೇಶ ಒಂದೇ ಪಕ್ಷವನ್ನು ಜಾರಿಗೊಳಿಸಲು ಮುದಾಗುವುದು ಸಮಯ ವ್ಯರ್ಥ. “ರಾಜ್ಯದಲ್ಲಿ ಸ್ವಾಯತ್ತ ಸರ್ಕಾರ ಕೇಂದ್ರದಲ್ಲಿ ಸಂಯುಕ್ತ ಸರ್ಕಾರ” ಎಂಬುದೇ ನಮ್ಮ ಘೋಷಣೆಯಾಗಬೇಕು; ಅದುವೇ ನಮಗೆ ಶ್ರೀರಕ್ಷೆ.

ಡಬಲ್ ಎಂಜಿನ್ ಸರ್ಕಾರಕ್ಕೆ ಮತ್ತೊಂದು ಅರ್ಥವಿದೆ: ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಸರ್ಕಾರ ಇದ್ದರೆ ಅದಕ್ಕೆ ಡಬಲ್ ಎಂಜಿನ್ ಸರ್ಕಾರ ಎಂದು ಕರೆಯಾಲಾಗುತ್ತದೆ. ಆದರೆ, ಅದಕ್ಕೆ ಮತ್ತೊಂದು ಅರ್ಥವಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಎರಡು ವಿಧದ ಮೂರ್ತಿಗಳು ಇರುತ್ತವೆ. ಒಂದು ‘ಮೂಲವರ್ ಮೂರ್ತಿ’ ಎಂದರೆ, ಗರ್ಭ ಗೃಹದಲ್ಲಿ ಯಾವಾಗಲೂ ಇರುವ ವಿಗ್ರಹ. ಮತ್ತು ‘ಉತ್ಸವ ಮೂರ್ತಿ’ ಎಂದರೆ, ಉತ್ಸವಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯುವ ವಿಗ್ರಹ. ಗರ್ಭ ಗೃಹದಲ್ಲೇ ಇರುವ ‘ಮೂಲವರ್ ಮೂರ್ತಿ’ ಗೃಹ ಸಚಿವ ಅಮಿತ್ ಶಾ ಅವರು ದೇಶವನ್ನು ಬಿಟ್ಟು ಎಲ್ಲೂ ಹೋಗದೆ, 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಕಾರ್ಯವೈಕರಿಯನ್ನು ನೋಡಿಕೊಂಡು, ಪಕ್ಷ ಬಲವರ್ಧನೆಗಾಗಿ ಮತ್ತು ಶತ್ರುಗಳನ್ನು ಹಾಗೂ ವಿರೋಧ ಪಕ್ಷಗಳ ನಾಯಕರುಗಳನ್ನು ಮಟ್ಟ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸದಾ ಪ್ರವಾಸ ಮತ್ತು ಉತ್ಸವಗಳಲ್ಲೇ ಇರುವ ‘ಉತ್ಸವ ಮೂರ್ತಿ’ ಪ್ರಧಾನಿ ನರೇಂದ್ರ ಮೋದಿಯವರು, ದೇಶ, ವಿದೇಶ ಪ್ರವಾಸ, ಅಂತಾರಾಷ್ಟ್ರೀಯ ನಾಯಕರುಗಳ ಭೇಟಿ ಮತ್ತು ಮಾತುಕತೆ, ವರ್ಚುವಲ್ ಮೀಟಿಂಗ್, ಚುನಾವಣೆ ಪ್ರಚಾರ, ಉದ್ಘಾಟನೆ, ರೋಡ್ ಶೋ ಹಾಗೂ ಫೋಟೋ ಸೆಷನ್‌ಗಳಲ್ಲಿಯೇ ಬಿಸಿಯಾಗಿದ್ದಾರೆ. ಒಬ್ಬರು ಪಿಎಂ ಮತ್ತೊಬ್ಬರು ಸೂಪರ್ ಪಿಎಂ. ಒಬ್ಬರು ಪ್ರಜಾಪ್ರಭುತ್ವವಾದಿ  ಮತ್ತೊಬ್ಬರು ಸರ್ವಾಧಿಕಾರಿ. ಇವರಿಬ್ಬರೇ ಕೇಂದ್ರ ಸರ್ಕಾರದ ಡಬಲ್ ಎಂಜಿನ್. ಕೇಂದ್ರ ಸರ್ಕಾರವೇ ಡಬಲ್ ಎಂಜಿನ್ ಸರ್ಕಾರ.