ಶಿಷ್ಯನ ಬಳಿ ಹೀನಾಯವಾಗಿ ಸೋತ ಬಿಜೆಪಿ ಮುಖಂಡ ಸಿ.ಟಿ.ರವಿ! » Dynamic Leader
October 21, 2024
ರಾಜಕೀಯ

ಶಿಷ್ಯನ ಬಳಿ ಹೀನಾಯವಾಗಿ ಸೋತ ಬಿಜೆಪಿ ಮುಖಂಡ ಸಿ.ಟಿ.ರವಿ!

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ತಮ್ಮ ಶಿಷ್ಯನಿಂದಲೇ ಹೀನಾಯವಾಗಿ ಸೋಲು ಕಂಡಿದ್ದು, ಬಿಜೆಪಿ ಪಾಳಯಕ್ಕೆ ದೊಡ್ಡ ಶಾಕ್ ನೀಡಿದೆ.

ಕರ್ನಾಟಕದಲ್ಲಿ ಕಳೆದ 10 ರಂದು ವಿಧಾನಸಭೆ ಚುನಾವಣೆ ಮುಗಿದಿದ್ದು, ನಿನ್ನೆ ಮತ ಎಣಿಕೆ ನಡೆಸಲಾಯಿತು. ಇದರಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ತಮ್ಮ ಶಿಷ್ಯನ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ್ದು ಬಿಜೆಪಿ ವರಿಷ್ಠರಿಗೆ ಶಾಕ್ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಿ.ಟಿ.ರವಿ, ಬಿಜೆಪಿ ಮತ್ತು ಸಂಘಪರಿವಾರದ ಜೊತೆ ಬಾಲ್ಯದಿಂದಲೂ ಗುರುತಿಸಿಕೊಂಡಿದ್ದರು. ಪಕ್ಷದಲ್ಲಿ ಹಂತಹಂತವಾಗಿ ಬೆಳೆದ ಸಿ.ಟಿ.ರವಿ 1999ರಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಗೀರ್ ಅಹಮದ್ ವಿರುದ್ಧ ಸ್ಪರ್ಧಿಸಿ 982 ಮತಗಳ ಅಂತರದಿಂದ ಸೋತಿದ್ದರು. ನಂತರ 2004ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಸಗೀರ್ ಅಹಮದ್ ಅವರನ್ನು 25 ಸಾವಿರ ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲುವನ್ನು ಸಾಧಿಸಿದರು.

ನಂತರ ಚಿಕ್ಕಮಗಳೂರಿನಲ್ಲಿ ನಾಲ್ಕು ಬಾರಿ ಗೆದ್ದಿದ್ದ ಸಿ.ಟಿ.ರವಿ. ಆ ಪ್ರದೇಶದಲ್ಲಿ ಬಿಜೆಪಿಯ ಅನಿವಾರ್ಯ ನಾಯಕರಾಗಿ ಬೆಳೆದರು. ಎರಡು ಬಾರಿ ಸಚಿವರು, ತಮಿಳುನಾಡು ಚುನಾವಣಾ ಉಸ್ತುವಾರಿ, ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇದಲ್ಲದೇ ಪ್ರತಿಪಕ್ಷಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವುದು, ‘ಸಿದ್ದರಾಮಯ್ಯ ಹಿಂದೂ ವಿರೋಧಿ’ ಎಂದು ಪ್ರಚಾರ ಮಾಡುವುದು, ಹಿಂದುತ್ವ ಪರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸಿ.ಟಿ.ರವಿಯ ಕಾಯಕವಾಗಿತ್ತು.

‘ಬಿಜೆಪಿಯ ಮುಂದಿನ ತಲೆಮಾರುಗಳಿಗೆ ನಾನೇ ಸೀನಿಯರ್’ ಎಂದು ಬೀಗುತ್ತಿದ್ದ ಸಿಟಿ ರವಿ, ಕರ್ನಾಟಕ ಚುನಾವಣೆಯಲ್ಲಿ ಈ ಬಾರಿ ಶಿಷ್ಯನ ವಿರುದ್ಧ ಹೀನಾಯ ಸೋಲನ್ನು ಕಂಡಿದ್ದಾರೆ. ಹೆಚ್.ಡಿ.ತಮ್ಮಯ್ಯ ಈ ಹಿಂದೆ ಸಿ.ಟಿ.ರವಿಯ ಕಾರ್ಯದರ್ಶಿಯಾಗಿ ಮತ್ತು ಬಿಜೆಪಿಯ ಜಿಲ್ಲಾ ಉಸ್ತುವಾರಿಯಾಗಿದ್ದರು. ಲಿಂಗಾಯತ ಸಮುದಾಯಕ್ಕೆ ಸೇರಿದ ಇವರು, ರವಿ ಮತ್ತು ಬಿಜೆಪಿ ವಿರುದ್ಧದ ಅಸಮಾಧಾನದಿಂದ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.

ಕ್ಷೇತ್ರದಲ್ಲಿ ಸಿ.ಟಿ.ರವಿಯಷ್ಟು ಪ್ರಭಾವ ತಮ್ಮಯ್ಯ ಅವರಿಗೂ ಇದ್ದಿದ್ದರಿಂದ ರಣತಂತ್ರ ರೂಪಿಸಿದ್ದ ಕಾಂಗ್ರೆಸ್ ನ ಚುನಾವಣಾ ‘ವಾರ್ ರೂಂ’ ಹಾಗೂ ವರಿಷ್ಠರು ಸಿ.ಟಿ.ರವಿಯ ವಿರುದ್ಧ ತಮ್ಮಯ್ಯ ಅವರನ್ನು ಕಣಕ್ಕಿಳಿಸಿದರು. ಸಿ.ಟಿ.ರವಿಯ ಪ್ರಭಾವದ ಮುಂದೆ ತಮ್ಮಯ್ಯನವರು ಹೀನಾಯ ಸೋಲನ್ನು ಅನುಭವಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿಗರಿಗೆ ತಮ್ಮಯ್ಯನ ಗೆಲುವು ಅಘಾತವನ್ನು ನೀಡಿತು.

ಮೇಲಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ರಣತಂತ್ರ ರೂಪಿಸಿ ಮತ ಸಂಗ್ರಹಣೆ, ಸಾರ್ವಜನಿಕ ಸಭೆ, ತಮ್ಮಯ್ಯನವರ ಪರ ಕಾಂಗ್ರೆಸ್ ನಾಯಕರು ನಡೆಸಿದ ಪ್ರಚಾರದಂತಹ ಹಲವು ಕಾರ್ಯಗಳು ತಮ್ಮಯ್ಯನವರಿಗೆ ಅನುಕೂಲವಾದ ವಾತಾವರಣವನ್ನು ನಿರ್ಮಿಸಿಕೊಟ್ಟಿತು. ಇದರಿಂದ ತಮ್ಮಯ್ಯನವರು ಒಟ್ಟು 85,054 ಮತಗಳನ್ನು ಪಡೆದು 5,926 ಮತಗಳ ಅಂತರದಿಂದ ಸಿ.ಟಿ.ರವಿಯನ್ನು ಸೋಲಿಸಿ ಶಾಸಕರಾಗಿದ್ದಾರೆ. ಸಿ.ಟಿ.ರವಿ ತಮ್ಮ ಶಿಷ್ಯನಿಂದಲೇ ಸೋಲನುಭವಿಸಿರುವುದು ಬಿಜೆಪಿ ಪಾಳಯಕ್ಕೆ ದೊಡ್ದ ಶಾಕ್ ನೀಡಿದೆ.

Related Posts