ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಡಿ.ಕೆ.ಶಿವಕುಮಾರ್ Archives » Dynamic Leader
November 21, 2024
Home Posts tagged ಡಿ.ಕೆ.ಶಿವಕುಮಾರ್
ರಾಜಕೀಯ

ಬೆಂಗಳೂರು: ರಾಜ್ಯದಲ್ಲಿ ಖಾಲಿಯಾಗಿದ್ದ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 13 ರಂದು ಚುನಾವಣೆ ನಡೆಯಲಿದೆ.   

ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಪಟ್ಟಂತೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಳಾದ ಡಿ.ಕೆ.ಶಿವಕುಮಾರ್ ಅವರು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಶಾಸಕರು, ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಮುಖಂಡರ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಅವರು ಕೂಡ ವರ್ಚುವಲ್ ಆಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರು

ಬೆಂಗಳೂರು: ರಾಜಧಾನಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಇಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಮತ್ತು ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ್ ವಿಸ್ತೃತ ಚರ್ಚೆ ನಡೆಸಿದರು.

ನಂತರ ಮಾಧ್ಯಮ ಗೋಷ್ಠಿಯಲ್ಲಿ ವಿಚಾರ ಹಂಚಿಕೊಂಡ ಸಚಿವರು, “ನೂತನ ವಿಮಾನ ನಿಲ್ದಾಣಕ್ಕೆ ಐಡೆಕ್ ಸಂಸ್ಥೆಯು 7 ಜಾಗಗಳನ್ನು ಗುರುತಿಸಿದೆ. ವಿಮಾನ ನಿಲ್ದಾಣಕ್ಕೆ ಯಾವ ಜಾಗ ಸೂಕ್ತ ಎನ್ನುವುದನ್ನು ಬೆಂಗಳೂರು ಮತ್ತು ಕರ್ನಾಟಕದ ಹಿತದೃಷ್ಟಿಯಿಂದ ತೀರ್ಮಾನಿಸಲಾಗುವುದು. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಜತೆ ಮಂಗಳವಾರ ಅಥವಾ ಬುಧವಾರ ಚರ್ಚಿಸಿ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಕ್ಷಿಪ್ರಗತಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ಹೇಳಿದರು.

“ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಮಾತನಾಡಿ, “ನೂತನ ವಿಮಾನ ನಿಲ್ದಾಣದ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಈಗಾಗಲೇ ಹತ್ತಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿ, ಅವಕಾಶ ಮತ್ತು ಪ್ರಯಾಣಿಕರು ಹಾಗೂ ಸರಕು ಸಾಗಣೆ ಒತ್ತಡ ಪರಿಗಣಿಸಿ, ಮುಂದಿನ ಹೆಜ್ಜೆ ಇಡಲಾಗುವುದು” ಎಂದರು.

ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್, BBMP ಆಯುಕ್ತರಾದ ತುಷಾರ್ ಗಿರಿನಾಥ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಕೊರ್ಲಪಟಿ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ

40% ಕಮಿಷನ್ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಹುಲ್ ಗಾಂಧಿ ಇಂದು ಬೆಂಗಳೂರು ನ್ಯಾಯಾಲಯದಲ್ಲಿ ಹಾಜರಾದರು.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಕಳೆದ ವರ್ಷ (2023) ನಡೆದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಆರೋಪಿಸಿದರು. ಇದು ಅವರ ಪ್ರಚಾರದ ಮುಖ್ಯ ವಿಷಯವಾಗಿತ್ತು. ಈ ಆರೋಪ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತು.

ಈ ಪ್ರಕರಣದ ತನಿಖೆ ಕಳೆದ 1 ರಂದು ನಡೆದಿತ್ತು. ಅಂದು ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಕೋರ್ಟ್ ಆದೇಶಿಸಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಾತ್ರ ಖುದ್ದು ಹಾಜರಾಗಿದ್ದರು. ಅವರಿಗೆ ಜಾಮೀನು ನೀಡಲಾಯಿತು.

ರಾಹುಲ್ ಗಾಂಧಿ ಪರ ವಕೀಲರು ಖುದ್ದು ಹಾಜರಾಗಲು ಕಾಲಾವಕಾಶ ಕೋರಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಲಯ ಜೂನ್ 7 ರಂದು (ಇಂದು) ರಾಹುಲ್ ಗಾಂಧಿ ಖುದ್ದು ಹಾಜರಾಗುವಂತೆ ಆದೇಶಿಸಿತು.

ಈ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಇಂದು ಬೆಂಗಳೂರು ನ್ಯಾಯಾಲಯಕ್ಕೆ ಖುದ್ದು ಹಾಜರಾದರು. ಬಳಿಕ ಅವರಿಗೆ ಜಾಮೀನು ನೀಡಲಾಯಿತು. ಇದಕ್ಕಾಗಿ ಇಂದು ಬೆಳಗ್ಗೆ ದೆಹಲಿಯಿಂದ ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದರು ಎಂಬುದು ಗಮನಾರ್ಹ.

ರಾಜ್ಯ

ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ): ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರ್ಷ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ. ಜನರ ಕಷ್ಟ – ನಷ್ಟಗಳೆಲ್ಲವೂ ದೂರಾಗಿ ಸುಖ, ಶಾಂತಿ, ಸಮೃದ್ಧಿ ಎಲ್ಲರ ಬದುಕಲ್ಲಿ ನೆಲೆಸಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರು ಆದ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ, ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಉಪಸ್ಥಿತರಿದ್ದರು.

“ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಕೆಲವು ಮಹಿಳೆಯರು ನಗುಮೊಗದಲ್ಲಿ ನನ್ನ ಬಳಿ ಬಂದು ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿಯಿಂದ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ, ನೀವು ಶಕ್ತಿ ಯೋಜನೆ ಜಾರಿ ಮಾಡಿದ್ದರಿಂದ ಇಂದು ನಾವು ದೂರದ ಊರಿನಿಂದ ದೇವರ ದರ್ಶನಕ್ಕೆ ಬರಲು ಅನುಕೂಲ ಆಗಿದೆ, ನಿಮಗೆ ಮಂಜುನಾಥ ಸ್ವಾಮಿ ದೀರ್ಘ ಆಯಸ್ಸು, ಆರೋಗ್ಯ ನೀಡಲಿ, ಬಡವರಿಗೆ ಇನ್ನಷ್ಟು ಅನುಕೂಲ ಆಗುವಂತಹ ಕಾರ್ಯಕ್ರಮಗಳು ನಿಮ್ಮಿಂದ ಜಾರಿಯಾಗಲಿ ಎಂದು ಆಶೀರ್ವದಿಸಿದರು” ಎಂದು ಮುಖ್ಯಮಂತ್ರಿಗಳು ಹೇಳಿಕೊಂಡಿದ್ದಾರೆ.

“ಈ ದಿನ ದೇವರ ದರ್ಶನ ಭಾಗ್ಯದ ಜೊತೆಗೆ ಹತ್ತಾರು ತಾಯಂದಿರ ಆಶೀರ್ವಾದ ಪಡೆದ ಧನ್ಯತಾಭಾವ ನನ್ನದು” ಎಂದು ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ಸರ್ಕಾರವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಪ್ರೆಸ್‌ಕ್ಲಬ್ ನಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಈ ಸಂವಾದದ ಕೆಲವು ಪ್ರಮುಖ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರವನ್ನು ಮುಖ್ಯಮಂತ್ರಿಗಳು ಪೋಸ್ಟರ್ ಆಗಿ ಬಿಡುಗಡೆ ಮಾಡಿದ್ದಾರೆ. 

ನೇಹಾ ಪ್ರಕರಣದ ಸ್ಥಿತಿಗತಿ?

ಪೆನ್ ಡ್ರೈವ್ ಪ್ರಕರಣದ ಬಗ್ಗೆ ಏನ್ ಹೇಳ್ತೀರಾ?

ಜಾತಿ ಗಣತಿ ಜಾರಿ ಮಾಡುತ್ತೀರಾ?

ಬರ ಪರಿಹಾರಕ್ಕೆ ಕೇಂದ್ರದ ಸ್ಪಂದನೆ ಹೇಗಿತ್ತು?

ಲೋಕಸಭಾ ಚುನಾವಣೆ ಫಲಿತಾಂಶ ಏನಾಗುತ್ತದೆ?

ಪ್ರಧಾನ ಮಂತ್ರಿ ಯಾರಾಗ್ತಾರೆ?

ಎನ್.ಡಿ.ಎ ಮೈತ್ರಿಕೂಟವಲ್ಲವೆ?

ಅಂತೆಯೇ, ನಾಡಿನ ಏಳು ಕೋಟಿ ಕನ್ನಡಿಗರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ ತುಂಬಿದೆ. ಈ ಒಂದು ವರ್ಷದ ಅವಧಿಯಲ್ಲಿ ಪಾರದರ್ಶಕ, ಭ್ರಷ್ಟಾಚಾರ ರಹಿತವಾದ ಜನಪರ ಆಡಳಿತ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕೆಂಬ ಆಶಯ ನಮ್ಮದು, ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ. ಕಳೆದೊಂದು ವರ್ಷದಿಂದ ನಮ್ಮ ಸರ್ಕಾರಕ್ಕೆ ತಾವು ನೀಡುತ್ತಿರುವ ಸಹಕಾರ, ನಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಅನಂತ ಧನ್ಯವಾದಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬಿಜೆಪಿ ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ; ಹಾಗಾಗಿ “ಇಂಡಿಯಾ” ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಇದೆ. ಆದರೆ, ಯಾರೇ ಅಧಿಕಾರಕ್ಕೆ ಬಂದರೂ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು; ಮರೆಯಬಾರದು.

ಅಖಿಲ ಕಾಂಗ್ರೆಸ್ ಸಮಿತಿಯು ಚುನಾವಣಾ ಭರವಸೆಗಳನ್ನು ಸಿದ್ಧಪಡಿಸಲು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ದೇಶದೆಲ್ಲೆಡೆ ಸಂಚರಿಸಿ ಹಲವರಿಂದ ಸಲಹೆ ಪಡೆಯಲಾಯಿತು. ವೆಬ್‌ಸೈಟ್ ಮೂಲಕವೂ ಪ್ರತಿಕ್ರಿಯೆಗಳನ್ನು ಪಡೆಯಲಾಯಿತು. ಅದರ ಆಧಾರದ ಮೇಲೆ ಭರವಸೆಗಳನ್ನು ಸಿದ್ಧಪಡಿಸಿ ಮೊನ್ನೆ ಪ್ರಕಟಿಸಲಾಯಿತು.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಆಗ ಮಾತನಾಡಿದ ಪಿ.ಚಿದಂಬರಂ, “ಕಳೆದ 10 ವರ್ಷಗಳಲ್ಲಿ ಯಾರನೆಲ್ಲ ಹೊರಗಿಡಲಾಯಿತೋ ಅಂತಹವರಿಗೆಲ್ಲ ನ್ಯಾಯ ಕೊಡಿಸಲು ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ” ಎಂದರು.

ಪ್ರಣಾಳಿಕೆಯಲ್ಲಿ, ದೇಶಾದ್ಯಂತ ಸಾಮಾಜಿಕ-ಆರ್ಥಿಕ ಮತ್ತು ಜಾತಿವಾರು ಸಮೀಕ್ಷೆ ನಡೆಸಲಾಗುವುದು. ರಾಜ್ಯ ಸರ್ಕಾರಗಳು ಬಯಸಿದಲ್ಲಿ NEET, CUET ನಂತಹ ಪರೀಕ್ಷೆಗಳನ್ನು ನಡೆಸಿಕೊಳ್ಳಬಹುದು. ಪ್ರತಿ ಕುಟುಂಬದಲ್ಲಿ ಒಬ್ಬ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡಲಾಗುವುದು. ಎಲ್ಲ ಜಾತಿಗಳಿಗೂ ಶೇ.10ರಷ್ಟು ಮೀಸಲಾತಿಯನ್ನು ವಿಸ್ತರಿಸಲಾಗುವುದು. ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರಲಾಗುವುದು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿದ ನಂತರವೇ ಜಾರಿಗೆ ತರಲಾಗುವುದು. 12ನೇ ತರಗತಿವರೆಗೆ ಕಡ್ಡಾಯ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು. ಒಂದು ದೇಶ, ಒಂದು ಚುನಾವಣಾ ವ್ಯವಸ್ಥೆಯನ್ನು ತರುವುದಿಲ್ಲ. ಚುನಾವಣಾ ಪತ್ರಗಳ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು. ಎಂ.ಎಸ್.ಸ್ವಾಮಿನಾಥನ್ ಅವರ ಶಿಫಾರಸ್ಸು ಜಾರಿಗೆ ತರಲಾಗುವುದು. ಸರ್ಕಾರಿ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು ಮನ್ನಾ ಮಾಡಲಾಗುವುದು.

ಪಾಂಡಿಚೇರಿಗೆ ರಾಜ್ಯ ಸ್ಥಾನಮಾನ ನೀಡಲಾಗುವುದು. ಮಾಧ್ಯಮ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. 10 ವರ್ಷಗಳಲ್ಲಿ ಯಾವುದೇ ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ಬಿಜೆಪಿ ಜಾರಿಗೊಳಿಸಿದ ಕಾನೂನುಗಳನ್ನು ವಿಶ್ಲೇಷಿಸಿ ಬದಲಾವಣೆಗಳನ್ನು ಮಾಡಲಾಗುವುದು. ನೋಟು ಅಮಾನ್ಯೀಕರಣ, ರಫೇಲ್ ಡೀಲ್, ಪೆಗಾಸಸ್ ಬೇಹುಗಾರಿಕೆ, ಚುನಾವಣಾ ಬಾಂಡ್ ಯೋಜನೆ ಕುರಿತು ತನಿಖೆ ನಡೆಸಲಾಗುವುದು. ಬಿಜೆಪಿ ಸೇರುವ ಮೂಲಕ ಕ್ರಿಮಿನಲ್ ಪ್ರಕರಣಗಳಿಂದ ಪಾರಾದವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗುವುದು.

ಜನರ ಆಹಾರ, ಉಡುಗೆ, ಪ್ರೇಮ ವಿವಾಹ ಮತ್ತು ಭಾರತದ ಯಾವುದೇ ಭಾಗದಲ್ಲಿ ಪ್ರಯಾಣ ಬೆಳಸಿ ವಾಸಿಸುವಂತಹ ಜನರ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಸೇನಾ ನೇಮಕಾತಿಗಾಗಿ ‘ಅಗ್ನಿಪತ್’ ಯೋಜನೆಯನ್ನು ರದ್ದುಗೊಳಿಸಲಾಗುವುದು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ನೀಡಲಾಗುವ ವೇತನವನ್ನು ರೂ.400ಕ್ಕೆ ಹೆಚ್ಚಿಸಲಾಗುವುದು. ಚೀನಾ ಆಕ್ರಮಿಸಿಕೊಂಡಿರುವ ನಮ್ಮ ನೆಲದ ಭಾಗವನ್ನು ಪುನಃಸ್ಥಾಪಿಸಲು ಕ್ರಮ. ಜಮ್ಮು ಮತ್ತು ಕಾಶ್ಮೀರಕ್ಕೆ ತಕ್ಷಣವೇ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಲಾಗುವುದು. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು.

ಕಳೆದೆರಡು ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್‌ಗೆ ಈ ಭರವಸೆಗಳು ಫಲ ನೀಡುತ್ತವೆಯೇ?
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ, ಬಯಸಿರುವ ರಾಜ್ಯಗಳಲ್ಲಿ ಮಾತ್ರ ನೀಟ್ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದೆ. ಇದು ದೇಶಾದ್ಯಂತ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಉತ್ತರ ಭಾರತದಲ್ಲಿ ಹಾಗಲ್ಲ; ಶಾಲೆಗಳಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಕೂಡ ಅಕ್ರಮ ನಡೆಸಲಾಗುತ್ತದೆ. ಇದನ್ನು ಸಾಕ್ಷರ ಕುಟುಂಬಗಳು ಸ್ವಾಗತಿಸಿವೆ. ಜನರ ಆಹಾರ, ಉಡುಗೆ, ಪ್ರೇಮ ವಿವಾಹ ಮತ್ತು ಭಾರತದ ಯಾವುದೇ ಭಾಗದಲ್ಲಿ ಪ್ರಯಾಣ ಬೆಳಸಿ ವಾಸಿಸುವಂತಹ ಜನರ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಹಾಗಾಗಿ ಇದು ಎಲ್ಲಾ ವರ್ಗದ ಜನರನ್ನು ಆಕರ್ಷಿಸಲಿದೆ. ಅದೇ ರೀತಿ ಒಂದು ಭಾಷಾ ನೀತಿಯನ್ನು ಜಾರಿಗೆ ತರಲು ಬಿಜೆಪಿ ಯೋಜಿಸಿದೆ. ಅದನ್ನು ತಡೆಯಲಿಕ್ಕಾಗಿ ಒಂದು ದೇಶ ಒಂದು ಚುನಾವಣೆಯನ್ನು ತರುವುದಿಲ್ಲ ಎಂದು ಹೇಳಲಾಗಿದೆ. ಕರ್ನಾಟಕದಂತಹ ರಾಜ್ಯಗಳಿಂದ ಹೆಚ್ಚಿನ ಯುವಕರು ಸೇನೆಗೆ ಸೇರುತ್ತಿದ್ದರು. ಅವರನ್ನು ತಡೆಯಲಿಕ್ಕಾಗಿಯೇ ‘ಅಗ್ನಿಪತ್’ ಯೋಜನೆಯನ್ನು ಜಾರಿಗೆ ತರಲಾಯಿತು.

ಅದನ್ನು ರದ್ದುಪಡಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಒಂದು ತಿಂಗಳ ಹಿಂದೆ ಪ್ರಕಟವಾದ ಸಮೀಕ್ಷೆಯಲ್ಲಿ ಬಿಜೆಪಿ 370 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ಹೇಳಲಾಗಿತ್ತು. ಆಗ ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತ, ಕೇಜ್ರಿವಾಲ್ ಬಂಧನದಂತಹ ಸಮಸ್ಯೆಗಳಿರಲಿಲ್ಲ. ಹಾಗಾಗಿ ಈಗ ಬಿಜೆಪಿ ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ; ಹಾಗಾಗಿ “ಇಂಡಿಯಾ” ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಇದೆ. ಆದರೆ ಯಾರೇ ಅಧಿಕಾರಕ್ಕೆ ಬಂದರೂ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು; ಮರೆಯಬಾರದು.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವೃಷಭಾವತಿ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಬೆಜೆಪಿ ಕೇವಲ ನಿಮ್ಮ ಭಾವನೆಗಳನ್ನು ಕೆರಳಿಸುತ್ತದೆ – ನಾವು ನಿಮ್ಮ ಬದುಕಿಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ನಾವು ಮಾಡುವ ನೀರಾವರಿ ಯೋಜನೆ, ಕುಡಿಯುವ ನೀರಿನ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಹಿಂದಿನ ಸರ್ಕಾರ ಏಕೆ ಮಾಡಲಿಲ್ಲ? ಕೇವಲ ನಿಮ್ಮನ್ನು ಭಾವನಾತ್ಮಕವಾಗಿ ಮರುಳು ಮಾಡಿದರೆ ಸಾಕಾ? ನಾವು ನಿಮ್ಮನ್ನು ದೇವರು – ಧರ್ಮದ ಹೆಸರಲ್ಲಿ ಮರುಳು ಮಾಡಿ ಅಧಿಕಾರ ನಡೆಸುವುದಿಲ್ಲ. ಅನ್ನ, ಆರೋಗ್ಯ, ಅಕ್ಷರ, ಸೂರು, ನೀರಿಗಾಗಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ಹೇಳಿದರು.

3 ಸಾವಿರ ಕೋಟಿ ರೂಪಾಯಿಯನ್ನು ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿಗೆ ನಾವು ಖರ್ಚು ಮಾಡಿದ್ದೆವು ಮತ್ತು ಈಗ ವೃಷಭಾವತಿ ಯೋಜನೆಯನ್ನು 2,240 ಕೋಟಿ ಖರ್ಚು ಮಾಡಿ ಜಾರಿ ಮಾಡುತ್ತಿದ್ದೇವೆ. ಇದರಿಂದ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಜಿಲ್ಲೆಗಳ ಜನರ ನೀರಿನ ಬವಣೆ ಶಾಶ್ವತವಾಗಿ ತೀರುತ್ತದೆ. ಮೊದಲ ಹಂತದಲ್ಲಿ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಇದರಿಂದ ನಾಲ್ಕೂ ಜಿಲ್ಲೆಗಳ ಅಂತರ್ಜಲ ಪ್ರಮಾಣ ವೃದ್ಧಿಯಾಗುತ್ತದೆ. ಜಮೀನುಗಳಿಗೆ ನೀರಿನ ಆಸರೆ ಹೆಚ್ಚಾಗಿ ಜನರ ಆರ್ಥಿಕ ಶಕ್ತಿಯೂ ಹೆಚ್ಚಾಗುತ್ತದೆ ಎಂದು ಹೇಳಿದರು.

ಶಾಸಕ ಶ್ರೀನಿವಾಸ್ ಅವರು ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲಿ ರೂ.850 ಕೋಟಿಗೂ ಹೆಚ್ಚು ಹಣವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಶ್ರೀನಿವಾಸ್ ಬಹಳ ಕ್ರಿಯಾಶೀಲ ಶಾಸಕ. ಹಿಡಿದ ಕೆಲಸ ಬಿಡಲ್ಲ. ನನ್ನ ಬಳಿಗೆ ಬಂದಾಗೆಲ್ಲಾ ನೆಲಮಂಗಲದ ಅಭಿವೃದ್ಧಿ ಬಗ್ಗೆಯೇ ಚರ್ಚೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಹಣ ತರುತ್ತಿದ್ದಾರೆ. ಆದ್ದರಿಂದ ಶ್ರೀನಿವಾಸ್ ಅವರನ್ನು ಶಾಶ್ವತವಾಗಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ ಜನರಿಗೆ ಅನ್ನ ಕೊಡಬೇಕು. ಅದಕ್ಕಾಗಿ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿ ಕೊಡ್ತೀವಿ, ನಮಗೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದೆವು. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಅನ್ನ ಕೊಡಲು ನಿರಾಕರಿಸಿತು. ಬಡವರ ಅನ್ನ ವಿರೋಧಿಸುವ ಬಿಜೆಪಿಗೆ ನಾಚಿಕೆ ಕೂಡ ಆಗಲಿಲ್ಲ. ಬಳಿಕ ನಾವೇ ಅಕ್ಕಿ ಬದಲಿಗೆ ಹಣವನ್ನು ಪ್ರತಿಯೊಬ್ಬರ ಖಾತೆಗೆ ಹಾಕಿದರೆ, ಈ ಫಲಾನುಭವಿಗಳನ್ನು ಬಿಜೆಪಿ ನಿರಂತರವಾಗಿ ಅವಮಾನಿಸುತ್ತಿದೆ. ಬಡವರನ್ನು ಅವಮಾನಿಸುವುದು ಬಿಜೆಪಿಗೆ ಚಾಳಿ ಆಗಿಬಿಟ್ಟಿದೆ. ಬಡವರ ಹಸಿವನ್ನು ಹೀಯಾಳಿಸುವುದನ್ನು ಅವರು ತಕ್ಷಣ ನಿಲ್ಲಿಸಬೇಕು ಎಂದು ಕಿಡಿಕಾರಿದರು.

ದೇಶ

ನವದೆಹಲಿ: ಉತ್ತರಪ್ರದೇಶಕ್ಕೆ ಹಂಚಿಕೆಯಾದ ಮೊತ್ತವು ಒಟ್ಟು 5 ರಾಜ್ಯಗಳಿಗೆ ಹಂಚಿಕೆಯಾದ ಮೊತ್ತಕ್ಕಿಂತ ಸುಮಾರು 50 ಸಾವಿರ ಕೋಟಿ ಹೆಚ್ಚು ಎಂದು ತಮಿಳುನಾಡು ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಸಚಿವ ಡಾ.ಪಳನಿವೇಲ್ ತ್ಯಾಗರಾಜನ್ (ಪಿಟಿಆರ್) ಹೇಳಿದ್ದಾರೆ.

ಕೇರಳ, ತಮಿಳುನಾಡು ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ನಾಯಕರು “GST ಹಣದ ಮರು ಹಂಚಿಕೆ ಮತ್ತು ಅನುದಾನ ಹಂಚಿಕೆಯಲ್ಲಿ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ರಾಜಧಾನಿ ದೆಹಲಿಯಲ್ಲಿ ನೆನ್ನೆ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ತಮಿಳುನಾಡು ಸರ್ಕಾರದ ಪರವಾಗಿ ಭಾಗವಹಿಸಿ ಡಾ.ಪಳನಿವೇಲ್ ತ್ಯಾಗರಾಜನ್ ಮಾತನಾಡಿದರು.

“ಕಳೆದ 5 ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳು GST ಮತ್ತು ನೇರ ತೆರಿಗೆಗಳಿಗೆ ಕೊಡುಗೆ ನೀಡಿದ ಒಟ್ಟು ತೆರಿಗೆ (ಆಮದು ಸುಂಕದ ಮೇಲಿನ GST ಹೊರತುಪಡಿಸಿ) – 22,26,983.39 ಕೋಟಿ.

ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶ ಕೊಡುಗೆ ನೀಡಿದ ಮೊತ್ತ ರೂ.3,41,817.60 ಕೋಟಿಗಳು.
(Difference in Contribution: Rs.18,85,166 Crores)

ಕಳೆದ 5 ವರ್ಷಗಳಲ್ಲಿ ಮೇಲೆ ತಿಳಿಸಲಾದ ದಕ್ಷಿಣದ ರಾಜ್ಯಗಳಿಗೆ ಬಿಡುಗಡೆಯಾದ ಕೇಂದ್ರ ತೆರಿಗೆಗಳು ಮತ್ತು ಸುಂಕಗಳು (ಒಟ್ಟು) – ರೂ.6,42,295.05 ಕೋಟಿಗಳು.

ಉತ್ತರ ಪ್ರದೇಶಕ್ಕೆ ಬಿಡುಗಡೆಯಾದ ಮೊತ್ತ – 6,91,375.12 ಕೋಟಿ ರೂ.
(Difference in sharing: Rs.49,080 Crores)

ಒಂದು ರಾಜ್ಯಕ್ಕೆ ಹಂಚಿಕೆಯಾದ ಮೊತ್ತವು ಒಟ್ಟು 5 ರಾಜ್ಯಗಳಿಗೆ ಹಂಚಿಕೆಯಾದ ಮೊತ್ತಕ್ಕಿಂತ ಸುಮಾರು 50 ಸಾವಿರ ಕೋಟಿ ಹೆಚ್ಚು” ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕಾಗಿ ಮೊನ್ನೆ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದಾಳುತ್ವದಲ್ಲಿ ದೆಹಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಎಂಬುದು ಗಮನಾರ್ಹ.

ರಾಜ್ಯ

ಬೆಂಗಳೂರು: ವಿಧಾನಸೌಧದಲ್ಲಿ ಇಂದು ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

“ದೇಶದಲ್ಲಿ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ನಲ್ಲಿ ಅನ್ಯಾಯ ಮಾಡಿದ್ದು, ಈ ಬಜೆಟ್​ನಿಂದ ನಮಗೆ ಬಹಳ ನಿರಾಸೆಯಾಗಿದೆ. ಇದರ ಬಗ್ಗೆ ಹೋರಾಟ ಮಾಡುವ ಕುರಿತು ನಿರ್ಧಾರ ಮಾಡುತ್ತೇವೆ. ಲೋಕಸಭೆ ಚುನಾವಣೆ ಹಿನ್ನೆಲೆ ಜನರಿಗೆ ಏನು ಕೊಡುತ್ತೇವೆ ಎಂಬ ದಿಕ್ಸೂಚಿಯನ್ನಾದರೂ ಹೇಳಬೇಕಿತ್ತು. ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಎಲ್ಲವೂ ಹುಸಿಯಾಗಿದೆ” ಎಂದು ಹೇಳಿದ್ದಾರೆ.

“ಬಿಜೆಪಿ ಸಂಸದರು ಈ ಕುರಿತು ಪ್ರಶ್ನೆ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ತಂದಿರುವ ಜನಪರ ಯೋಜನೆಗಳನ್ನು ನೋಡಿಯಾದರೂ ಕೇಂದ್ರ ಸರಕಾರ ಬಜೆಟ್ ಮಂಡಿಸಬಹುದಿತ್ತು. ಈಗಾಗಲೇ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿರುವ ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರ ಮೇಲೆ ಮತ್ತಷ್ಟು ಹೊರೆ ಹೊರಿಸುವುದರಲ್ಲಿ ಸಂದೇಹವಿಲ್ಲ” ಎಂದು ಹೇಳಿದ್ದಾರೆ.

ರಾಜ್ಯ

“ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ” ಎಂದು ವಿವೇಕಾನಂದರು ತಿಳಿಸಿದರು: ಸಿದ್ದರಾಮಯ್ಯ

ಶಿವಮೊಗ್ಗ: ಶಿವಮೊಗ್ಗದಲ್ಲಿ ಲಕ್ಷಾಂತರ ಯುವಸಮೂಹದ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಗ್ಯಾರಂಟಿ “ಯುವನಿಧಿ” ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಇವರ ಜನ್ಮ ದಿನದಂದೇ ನನ್ನ ಯುವಕ, ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೇವಾಲ ಅವರು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ ಹೆಚ್ಚಾಗಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿರುವ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗಗಳ ಸಮಸ್ಯೆಗೆ ಪರಿಹಾರವಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು; ಪ್ರಣಾಳಿಕೆಯಲ್ಲಿ ಘೋಷಿಸಿದೆವು. ಘೋಷಿಸಿದಂತೆ ಜಾರಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು, ಯುವತಿಯರು 130 ಕೋಟಿ 28 ಲಕ್ಷ ಉಚಿತ ಟಿಕೇಟ್ ಪಡೆದು ಪ್ರಯಾಣ ಮಾಡಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬಗಳಿಗೆ ಉಚಿತವಾಗಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಈ ಕೋಟಿ ಕುಟುಂಬಗಳು ನಯಾಪೈಸೆ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ ಎಂದು ಹೇಳಿದರು.

ಇದೇ ರೀತಿ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಪ್ರತೀ ಕುಟುಂಬಗಳಿಗೆ ಕೊಡುತ್ತಿದ್ದೇವೆ. 1 ಕೋಟಿ 17 ಲಕ್ಷ ಮಹಿಳೆಯರಿಗೆ, ಯುವತಿಯರಿಗೆ ಪ್ರತೀ ತಿಂಗಳು 2,000 ರೂ ತಲುಪಿಸುತ್ತಿದ್ದೇವೆ‌. ಇಂಥ ಸಾಧನೆ ಹಿಂದೆ ಯಾವ ಕಾಲದಲ್ಲೂ ಆಗಿಲ್ಲ. ಇದನ್ನೆಲ್ಲಾ ಮಾಡಿದ್ದು ನಾವು. ನಮ್ಮದು ನುಡಿದಂತೆ ಮಾಡಿ ತೋರಿಸಿದ ಸರ್ಕಾರ ಎಂದು ಹೇಳಿದರು.

ಯುವಕ ಯುವತಿಯರಿಗೆ ಹಣದ ಜತೆಗೆ ಉದ್ಯೋಗ ಪಡೆದುಕೊಳ್ಳಲು ಅಗತ್ಯವಾದ ಕೌಶಲ್ಯ ತರಬೇತಿಯನ್ನೂ ನೀಡಿ ಅವರಿಗೆ ಉದ್ಯೋಗ ಕೊಡಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಮುಂದುವರೆಯಲಿದೆ. ಯುವಕ ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಈ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದರು.

ವಿವೇಕಾನಂದರ ಜನ್ಮ ದಿನದಂದೇ ಯುವನಿಧಿ ಯೋಜನೆಯನ್ನು ನಾವು ಜಾರಿ ಮಾಡಿದ್ದೇವೆ. ಈಗಾಗಲೇ 70 ಸಾವಿರ ಯುವಕ-ಯುವತಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ‌. ರಾಜೀವ್ ಗಾಂಧಿ ಅವರು ದೇಶದ ಯುವಕರ ಭವಿಷ್ಯಕ್ಕಾಗಿ ಸದಾ ತುಡಿಯುತ್ತಿದ್ದರು. ಅವರ ಆಶಯಕ್ಕೆ ಪೂರಕವಾಗಿ ಯುವನಿಧಿ ಯೋಜನೆ ಮತ್ತು ನಮ್ಮ ಸರ್ಕಾರ ಕೆಲಸ ಮಾಡಲಿದೆ. ಪ್ರತಿ ನಿರುದ್ಯೋಗಿ ಯುವಕ ಯುವತಿಯರು ಯೋಜನೆಗೆ ನೋಂದಾಯಿಸಿಕೊಂಡು ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡೀದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ತಿಳಿಸಿದರು. 1985ರಲ್ಲಿ ರಾಜೀವ್ ಗಾಂಧಿ ಅವರು ದೇಶದಲ್ಲಿ ಮೊದಲ ಬಾರಿಗೆ ವಿವೇಕಾನಂದ ಜಯಂತಿಯನ್ನು ಆರಂಭಿಸಿದರು. ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು, ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು; ಜಾರಿಗೆ ತರಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಅದನ್ನೇ. ಹೋರಾಟದ ಹಿನ್ನೆಲೆಯ ಜಿಲ್ಲೆ ಶಿವಮೊಗ್ಗದಿಂದಲೇ “ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ” ಆಗಲಿ. ಇದಕ್ಕಾಗಿ ಜನ ಚಳವಳಿ ನಡೆಯಲಿ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕ್ರೀಡಾ ಸಚಿವ ನಾಗೇಂದ್ರ, ಮೀನುಗಾರಿಕಾ ಸಚಿವ ಮಾಂಕಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಭೀಮಣ್ಣ ನಾಯಕ್, ಸಂಗಮೇಶ್, ತಮ್ಮಯ್ಯ, ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಾರದಾ ಪೂರ್ಯಾನಾಯಕ, ಚನ್ನಬಸಪ್ಪ, ತರೀಕೆರೆ ಶ್ರೀನಿವಾಸ್, ಅರುಣ್ ಕುಮಾರ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.