“ನ್ಯೂಸ್ ಕ್ಲಿಕ್” ಪ್ರಗತಿಪರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತದ ಆನ್‌ಲೈನ್ ಮಾಧ್ಯಮವಾಗಿದೆ. 2009ರಲ್ಲಿ ಪ್ರಾರಂಭವಾದ ನ್ಯೂಸ್ ಕ್ಲಿಕ್ ವಿವಿಧ ಜನರಪರ ಚಳುವಳಿಗಳು ಮತ್ತು ಪ್ರತಿಭಟನೆಗಳನ್ನು ವರದಿ ಮಾಡುವ ಜೊತೆಗೆ ಸರ್ಕಾರದ ತಪ್ಪು ನೀತಿಗಳ ಬಗ್ಗೆ ವಿವರವಾದ ಸುದ್ದಿಗಳನ್ನು ನೀಡುವಲ್ಲಿಯೂ ಇದು ಪ್ರಸಿದ್ಧವಾಗಿದೆ. PPK ನ್ಯೂಸ್ ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಒಡೆತನದ ಈ ಕಂಪನಿಯನ್ನು ಪ್ರಬೀರ್ ಪುರ್ಕಾಯಸ್ಥ ಸ್ಥಾಪಿಸಿದ್ದಾರೆ.
ಈ ಹಿನ್ನಲೆಯಲ್ಲಿ, ದೆಹಲಿ ಪೊಲೀಸರು ನ್ಯೂಸ್ ಕ್ಲಿಕ್ ಮಾಧ್ಯಮದ ಕಚೇರಿ ಮತ್ತು ಅದರ ವಿವಿಧ ವರದಿಗಾರರು ಹಾಗೂ ಉದ್ಯೋಗಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಭಾರತದ ವಿರುದ್ಧದ ಚಟುವಟಿಕೆಗಳಿಗಾಗಿ ಚೀನಾದಿಂದ ಪರೋಕ್ಷವಾಗಿ ಹಣ ಪಡೆದ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ವಿಶೇಷ ಪೊಲೀಸ್ ತಂಡ 30 ಸ್ಥಳಗಳಲ್ಲಿ ದಾಳಿಯನ್ನು ನಡೆಸಿದ್ದಾರೆ.
ದಾಳಿ ಪೂರ್ಣಗೊಂಡ ನಂತರ, ಅಧಿಕಾರಿಗಳು ನ್ಯೂಸ್ ಕ್ಲಿಕ್ ಕಚೇರಿಗೆ ಬೀಗ ಜಡಿದಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ವಿರುದ್ಧ ರಚನೆಯಾಗಿರುವ “ಇಂಡಿಯಾ ಮೈತ್ರಿಕೂಟ” ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಇದರ ಬಗ್ಗೆ ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ,
“ಜನಸಾಮಾನ್ಯರಿಗೆ ಸತ್ಯವನ್ನು ವಿವರಿಸುವವರ ವಿರುದ್ಧ ಬಿಜೆಪಿ ಕಾರ್ಯನಿರ್ವಹಿಸುತ್ತಲೇ ಇದೆ. ಹಿಂಸಾಚಾರ ಮತ್ತು ವಿಭಜನೆಯನ್ನು ಪ್ರಚೋದಿಸುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಉದ್ಯಮಿಗಳು ಅವರಿಗೆ ಅಗತ್ಯವಿರುವ ಮಾಧ್ಯಮಗಳನ್ನು ವಶಪಡಿಸಿಕೊಳ್ಳಲು ಸಹಾಯ ಮಾಡಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
ಸರ್ಕಾರದ ತಪ್ಪುಗಳನ್ನು ಅಂಕಿಅಂಶಗಳೊಂದಿಗೆ ಮಾಧ್ಯಮಗಳು ವಿಶ್ಲೇಷಿಸುವುದನ್ನು ಮತ್ತು ವರದಿ ಮಾಡುವುದನ್ನು ಈ ಸರ್ಕಾರ ತಡೆಯಲು ಯತ್ನಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರಬುದ್ಧ ಪ್ರಜಾಪ್ರಭುತ್ವ ಎಂದು ಪರಿಗಣಿಸಲ್ಪಟ್ಟಿದ್ದ ಭಾರತಕ್ಕೆ ಇದು ಭಾರೀ ಹಿನ್ನಡೆಯಾಗಲಿದೆ. ಬಿಬಿಸಿ, ನ್ಯೂಸ್ ಲಾಂಡ್ರಿ, ದೈನಿಕ್ ಬಜಾರ್, ಭಾರತ್ ಸಮಾಚಾರ್ ಮತ್ತು ವೈರ್ ಮುಂತಾದ ಮಾಧ್ಯಮಗಳನ್ನು ಗುರಿಯಾಗಿಸಿಕೊಂಡಿದ್ದ ಸಾಲಿನಲಿನಲ್ಲಿ ಇದೀಗ ನ್ಯೂಸ್ ಕ್ಲಿಕ್ ಸೇರ್ಪಡೆಯಾಗಿದೆ” ಎಂದು ವಿರೋಧಪಕ್ಷಗಳ “ಇಂಡಿಯಾ ಮೈತ್ರಿಕೂಟ” ತಮ್ಮ ಆಕ್ರೋಶವನ್ನು ಹೊರಹಾಕಿದೆ.