ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ತಮಿಳುನಾಡು Archives » Dynamic Leader
November 23, 2024
Home Posts tagged ತಮಿಳುನಾಡು
ರಾಜಕೀಯ ಸಿನಿಮಾ

ಚೆನ್ನೈ: ನಟ ವಿಜಯ್, ರಾಜಕೀಯ ರಂಗಕ್ಕೆ ಇಳಿದಿದ್ದಾರೆ. ಅವರ ಪಕ್ಷಕ್ಕೆ “ತಮಿಳಗ ವೆಟ್ರಿ ಕಳಗಂ” ಎಂದು ಹೆಸರಿಟ್ಟಿರುವುದಾಗಿ ಇಂದು ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಇದರ ಬಗ್ಗೆ ಅವರು ಪ್ರಕಟಿಸಿರುವ ಪತ್ರಿಕಾ ಹೇಳಿಕೆಯಲ್ಲಿ, “ವಿಜಯ್ ಪೀಪಲ್ಸ್ ಮೂವ್ಮೆಂಟ್ನ ಹೆಸರಿನಲ್ಲಿ ಅನೇಕ ವರ್ಷಗಳಿಂದ ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ವಿವಿಧ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮಾಡುತ್ತಾ ಪರಿಹಾರ ನೆರವುಗಳನ್ನು ನೀಡಿ, ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವುದು ತಮ್ಮೆಲ್ಲರಿಗೂ ತಿಳಿದಿದೆ.

ಆದಾಗ್ಯೂ, ಸಂಪೂರ್ಣವಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸುಧಾರಣೆಗಳನ್ನು ತರಲು, ಸ್ವಯಂ ಸೇವಾ ಸಂಸ್ಥೆಯಿಂದ ಸಾಧ್ಯವಿಲ್ಲ, ಅದನ್ನು ಮಾಡಲು ರಾಜಕೀಯ ಶಕ್ತಿಯ ಅಗತ್ಯವಿದೆ.

ಪ್ರಸ್ತುತ ರಾಜಕೀಯ ವಾತಾವರಣ, ಆಡಳಿತಾತ್ಮಕ ಅಸ್ವಸ್ಥತೆಗಳು ಮತ್ತು ‘ಭ್ರಷ್ಟ ರಾಜಕೀಯ ಸಂಸ್ಕೃತಿ’ ಒಂದೆಡೆಯಾದರೆ, ನಮ್ಮ ಜನರನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುವ ‘ವಿಭಜಕ ರಾಜಕೀಯ ಸಂಸ್ಕೃತಿ’ ಮತ್ತೊಂದೆಡೆಯಾಗಿದೆ. ಇದರಿಂದ ನಮ್ಮ ಏಕತೆ ಮತ್ತು ಪ್ರಗತಿಗೆ ಅಡೆತಡೆ ಉಂಟಾಗಿವೆ.

ನಿಸ್ವಾರ್ಥ, ಪಾರದರ್ಶಕ, ಜಾತಿ ರಹಿತ, ದೂರದೃಷ್ಟಿಯ ಆಲೋಚನೆ ಹೊಂದಿದ, ಲಂಚ-ಭ್ರಷ್ಟಾಚಾರ ರಹಿತ ದಕ್ಷ ಆಡಳಿತವನ್ನು ಮುನ್ನಡೆಸಬಲ್ಲ, ಮೂಲಭೂತ ರಾಜಕೀಯ ಬದಲಾವಣೆಗಾಗಿ, ನಿರ್ದಿಷ್ಟವಾಗಿ ಹೇಳುವುದಾದರೆ, ತಮಿಳುನಾಡಿನಲ್ಲಿರುವ ಪ್ರತಿಯೊಬ್ಬರೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಎಂಬುದು ವಾಸ್ತವಿಕ ಸತ್ಯವಾಗಿದೆ. ಅಂತಹ ಮೂಲಭೂತ ರಾಜಕೀಯ ಬದಲಾವಣೆಯನ್ನು, ಜನರ ಒಮ್ಮತದ ಅಭಿಮಾನ ಮತ್ತು ಪ್ರೀತಿಯನ್ನು ಪಡೆದ ಪ್ರಮುಖವಾದ ಒಂದು ಜನಶಕ್ತಿಯ ಮೂಲಕವೇ ಸಾಧ್ಯವಾಗಿಸಬಹುದಾಗಿದೆ.

ಅದರಂತೆ ನನ್ನ ನೇತೃತ್ವದಲ್ಲಿ “ತಮಿಳಗ ವೆಟ್ರಿ ಕಳಗಂ” ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಆರಂಭಿಸಿ, ಭಾರತದ ಮುಖ್ಯ ಚುನಾವಣಾ ಆಯೋಗದಲ್ಲಿ ನೋಂದಾಯಿಸಲು ನಮ್ಮ ಪಕ್ಷದ ಪರವಾಗಿ ಇಂದು ಅರ್ಜಿ ಸಲ್ಲಿಸಲಾಗಿದೆ. ಮುಂಬರುವ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಜನರು ಬಯಸುವ ಮೂಲಭೂತ ರಾಜಕೀಯ ಬದಲಾವಣೆಗೆ ಕಾರಣವಾಗುವುದು ನಮ್ಮ ಗುರಿಯಾಗಿದೆ.

ಚುನಾವಣಾ ಆಯೋಗದ ಅನುಮೋದನೆ ಪಡೆದ ನಂತರ, ಮುಂಬರುವ ಸಂಸತ್ತಿನ ಚುನಾವಣೆ ಮುಗಿದ ಮೇಲೆ, ತಮಿಳುನಾಡಿಗೆ ಸಂಬಂಧಿಸಿದ ನೀತಿಗಳ ಯಶಸ್ಸಿಗೆ ಮತ್ತು ತಮಿಳುನಾಡಿನ ಜನರ ಉನ್ನತಿಗಾಗಿ ನಮ್ಮ ಪಕ್ಷದ ನೀತಿ, ನಿಯಮಗಳು, ಧ್ವಜ, ಚಿಹ್ನೆ ಮತ್ತು ಕ್ರಿಯಾ ಯೋಜನೆಗಳನ್ನು ಮುಂದಿಟ್ಟು, ಸಾರ್ವಜನಿಕ ಸಭೆ ಸಮಾರಂಭಗಳೊಂದಿಗೆ ತಮಿಳುನಾಡಿನ ಜನತೆಗಾಗಿ ನಮ್ಮ ರಾಜಕೀಯ ಪಯಣ ಆರಂಭವಾಗಲಿದೆ.

ಮುಂಬರುವ 2024ರ ಸಂಸತ್ ಚುನಾವಣೆಯಲ್ಲಿ ನಾವು ಸ್ಪರ್ಧಿಸುವುದಿಲ್ಲ, ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ನನ್ನ ಮಟ್ಟಿಗೆ ಹೇಳುವುದಾದರೆ, ರಾಜಕೀಯವು ಕೇವಲ ಇನ್ನೊಂದು ವೃತ್ತಿಯಲ್ಲ; ರಾಜಕೀಯ ನನ್ನ ಹವ್ಯಾಸವಲ್ಲ; ಅದು ನನ್ನ ಆಳವಾದ ಆಸೆ. ಅದರಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ.

ನನ್ನ ಪರವಾಗಿ, ನಾನು ಈಗಾಗಲೇ ಒಪ್ಪಿಕೊಂಡಿರುವ ಮತ್ತೊಂದು ಚಲನಚಿತ್ರ ಸಂಬಂಧಿತ ಕೆಲಸಗಳನ್ನು, ಪಕ್ಷದ ಕೆಲಸಕ್ಕೆ ಅಡ್ಡಿಯಾಗದ ರೀತಿಯಲ್ಲಿ ಮುಗಿಸಿಕೊಟ್ಟ ನಂತರ, ನಾನು ಸಂಪೂರ್ಣವಾಗಿ ಜನಸೇವೆಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.  

ರಾಜಕೀಯ

ಚೆನ್ನೈ: 2021ರ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಕಟಿಸಲಾದ ಡಿಎಂಕೆ ಚುನಾವಣಾ ಪ್ರಣಾಳಿಕೆಯಲ್ಲಿ ‘ತಮಿಳುನಾಡಿನ ಎಲ್ಲ ಗೃಹಿಣಿಯರಿಗೆ ಮಾಸಿಕ ರೂ.1,000 ಹಕ್ಕುಭತ್ಯೆ ನೀಡುತ್ತೇವೆ’ ಎಂದು ಘೋಷಿಸಲಾಗಿತ್ತು.

ಡಿಎಂಕೆ ಚುನಾವಣೆಯಲ್ಲಿ ಗೆದ್ದು ತಮಿಳುನಾಡಿನಲ್ಲಿ ಸರ್ಕಾರ ರಚಿಸಿದಾಗ, ಹಲವಾರು ಘೋಷಣೆಗಳನ್ನು ಜಾರಿಗೆ ತಂದರೂ, ಮನೆಯ ಎಜಮಾನಿಗೆ ತಿಂಗಳಿಗೆ ರೂ.1,000 ಹಕ್ಕುಭತ್ಯೆ ನೀಡುವ ಯೋಜನೆಯನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಏತನ್ಮಧ್ಯೆ, ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2023-24ನೇ ಸಾಲಿನ ಬಜೆಟ್‌ನಲ್ಲಿ ಮನೆಯ ಎಜಮಾನಿಗೆ ಮಾಸಿಕ ರೂ.1,000 ಹಕ್ಕುಭತ್ಯೆ ನೀಡುವ ಯೋಜನೆಗೆ ರೂ.7 ಸಾವಿರ ಕೋಟಿ ಹಣವನ್ನು ನಿಗದಿಪಡಿಸಲಾಯಿತು. ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು (ಇಂದು) ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿತು.

ಕಳೆದ ಜುಲೈ 24 ರಂದು ಧರ್ಮಪುರಿ ಜಿಲ್ಲೆಯ ತೊಪ್ಪೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಹಿಳೆಯರು ಅರ್ಜಿ ಸಲ್ಲಿಸುವ ಶಿಬಿರವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉದ್ಘಾಟಿಸಿದರು. ಇದಕ್ಕಾಗಿ ರಾಜ್ಯಾದ್ಯಂತ 35 ಸಾವಿರದ 925 ಶಿಬಿರಗಳನ್ನು ನಡೆಸಲಾಗಿದೆ. 68 ಸಾವಿರದ 190 ಸ್ವಯಂಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರವು ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಯೋಜನೆಗೆ ಒಂದು ಕೋಟಿ 63 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಸುಮಾರು 56 ಲಕ್ಷದ 50 ಸಾವಿರ ಅರ್ಜಿಗಳು ಅನರ್ಹವೆಂದು ತಿರಸ್ಕೃತಗೊಂಡಿವೆ. ಅಂತಿಮವಾಗಿ 1 ಕೋಟಿ 6 ಲಕ್ಷದ 55 ಸಾವಿರ ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಹಿನ್ನಲೆಯಲ್ಲಿ, ಒಂದು ಕೋಟಿ ಮನೆಯ ಎಜಮಾನಿಗೆ ಮಾಸಿಕ ರೂ.1,000 ನೀಡುವ ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇಂದು ಉದ್ಘಾಟಿಸಿದರು. ಈ ಯೋಜನೆಯನ್ನು ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಸಚಿವರು ಉದ್ಘಾಟಿಸಿದ್ದಾರೆ.

ಈ ಯೋಜನೆಯಡಿ, ಅರ್ಹ ಗೃಹಿಣಿಯರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಒಂದು ರೂಪಾಯಿಯನ್ನು ಕಳುಹಿಸಿಕೊಟ್ಟು ಪರೀಕ್ಷಿಸಲಾಗಿದೆ. ಈ ನಡುವೆ ನಿನ್ನೆಯಿಂದ ಹಲವರ ಬ್ಯಾಂಕ್ ಖಾತೆಗೆ ರೂ.1000 ಜಮಾ ಆಗಿದೆ. ಆದರೆ, ತಕ್ಷಣವೇ ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗಲಿಲ್ಲ. ಖಾತೆಯಿಂದ ಇಂದು ಹಣವನ್ನು ತೆಗೆಯಬಹುದು. ಅಲ್ಲದೆ, ತಿರಸ್ಕರಿಸಿದ ಅರ್ಜಿದಾರರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ದಾಖಲೆ ಪರಿಶೀಲನೆಯಲ್ಲಿ ಅರ್ಹ ಫಲಾನುಭವಿಗಳಾಗಿದ್ದರೆ ಅವರನ್ನೂ ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ಸೇರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ರಾಜಕೀಯ

ಬೆಂಗಳೂರು: ಕಾವೇರಿ ಜಲವಿವಾದ ಕುರಿತಂತೆ ಇಂದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು:

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಬಿಡಬೇಕು. ಆದರೆ ದುರದೃಷ್ಟವಶಾತ್‌ ಸಂಕಷ್ಟ ಹಂಚಿಕೆ ಸೂತ್ರವಿಲ್ಲದ ಕಾರಣ ನಾವು ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದೇವೆ. ಈ ವರೆಗೆ 99 ಟಿಎಂಸಿ ನೀರು ಕೊಡಬೇಕಾಗಿತ್ತು. 37.7 ಟಿಎಂಸಿ ನೀರು ಬಿಡಲಾಗಿದೆ. ಈಗಲೂ ನೀರು ಬಿಡಲಾಗದೆ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ 70 ಟಿಎಂಸಿ ನೀರು ಬೆಳೆ ಉಳಿಸಿಕೊಳ್ಳಲು ಬೇಕು. 33 ಟಿಎಂಸಿ ಕುಡಿಯುವ ನೀರಿಗಾಗಿ ಬೇಕು. ಜೊತೆಗೆ 3 ಟಿಎಂಸಿ ಕೈಗಾರಿಕೆಗಳಿಗೆ ಬೇಕು. ಆದರೆ ಈಗ ನಾಲ್ಕೂ ಜಲಾಶಯಗಳಿಂದ ಲಭ್ಯವಿರುವುದು 53 ಟಿಎಂಸಿ ನೀರು ಮಾತ್ರ. ಬೆಳೆಗಳಿಗೆ ಕಟ್ಟುನೀರು ಬಿಡಲಾಗುತ್ತಿದೆ. ಇದರಲ್ಲಿ ನಾವು 33 ಟಿಎಂಸಿ ಕುಡಿಯುವ ನೀರಿಗೆ ಹಾಗೂ 3 ಟಿಎಂಸಿ ಕೈಗಾರಿಕೆಗಳಿಗೆ ಒದಗಿಸಬೇಕಾಗುತ್ತದೆ. ಬೆಳೆಗಳಿಗೆ ಸಾಕಾಗುವುದಿಲ್ಲ ಎಂದು ಹೇಳಿದರು.

ಕಾವೇರಿ ನೀರು ನಿರ್ವಹಣಾ ಸಮಿತಿ ನಿನ್ನೆ ಐದು ಸಾವಿರ ಕ್ಯೂಸೆಕ್ಸ್‌ ನೀರು ಬಿಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಲಾಗಿತ್ತು. ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಭೆ ಕರೆದಿದ್ದೆವು. ತುರ್ತಾಗಿ ಆಯೋಜನೆಯಾದ ಈ ಸಭೆಗೆ ಕೆಲವರು ಪೂರ್ವನಿರ್ಧಾರಿತ ಕಾರ್ಯಕ್ರಮಗಳ ಕಾರಣ ಗೈರಾಗಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮತ್ತೊಂದು ಅರ್ಜಿ ಸಲ್ಲಿಸಲಾಗುವುದು. ಸುಪ್ರೀಂ ಕೋರ್ಟಿನಲ್ಲಿಯೂ ಅರ್ಜಿ ಸಲ್ಲಿಸಲಾಗುವುದು. ಅಲ್ಲಿಯೂ ವಾಸ್ತವಾಂಶ ತಿಳಿಸುವ ಕೆಲಸ ಮಾಡಲಾಗುವುದು. ಈಗ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಬಗ್ಗೆ ಹಾಗೂ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ವಕೀಲರ ತಂಡದೊಂದಿಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

ಇದನ್ನೂ ಓದಿ: ನೆಲ, ಜಲ, ಭಾಷೆ ಬಗ್ಗೆ ತಮಿಳುನಾಡಿನವರಿಗೆ ಇರುವ ಬದ್ಧತೆ ನಮ್ಮವರಿಗಿಲ್ಲ; ನಮ್ಮವರಲ್ಲಿ ಉಪೇಕ್ಷೆ, ಉಡಾಫೆ ಹೆಚ್ಚು! – ಹೆಚ್.ಡಿ.ಕುಮಾರಸ್ವಾಮಿ

ಸರ್ವಪಕ್ಷ ನಿಯೋಗ ತೆರಳಲು ಅನುವು ಮಾಡಿಕೊಡುವಂತೆ ಪ್ರಧಾನಮಂತ್ರಿಯವರ ಸಮಯ ಕೇಳಿ ಮತ್ತೊಮ್ಮೆ ಪತ್ರ ಬರೆಯಲಾಗುವುದು. ಸಂಸದರೂ ಹೋರಾಟ ಮಾಡುವ ಭರವಸೆ ನೀಡಿದ್ದಾರೆ. 18 ರಿಂದ ಸಂಸತ್‌ ಅಧಿವೇಶನ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿ ಚರ್ಚಿಸಿ, ದೇಶದ ಗಮನ ಸೆಳೆಯಲಾಗುವುದು. ಇದಕ್ಕೆ ಎಲ್ಲರೂ ಸಹಮತಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ದ್ರಾವಿಡ ಚಳವಳಿಯ ಉಗಮಕ್ಕೆ ಕೆಲವು ವರ್ಷಗಳ ಹಿಂದೆ ಅಂದರೆ, 1912ರಲ್ಲಿ ಡಾ.ಸಿ.ನಟೇಶನಾರ್, ಅವರಂತಹ ಕೆಲವು ವಕೀಲರು ಒಟ್ಟುಗೂಡಿ, ಚೆನ್ನೈ ಕಾಲೇಜುಗಳಲ್ಲಿ ಓದುತ್ತಿದ್ದ ಬ್ರಾಹ್ಮಣೇತರ ವಿದ್ಯಾರ್ಥಿಗಳಿಗೆ ಇತರೆ ಹಾಸ್ಟೆಲ್‌ಗಳಲ್ಲಿ ಉಳಿದು ಓದುವ ಅವಕಾಶವನ್ನು ನಿರಾಕರಿಸಿದ್ದರಿಂದ ತಮ್ಮ ದುಸ್ಥಿತಿಯ ನಡುವೆಯೂ ತಾವೇ ತಿರುವಲ್ಲಿಕೇಣಿಯಲ್ಲಿ ‘ದ್ರಾವಿಡನ್ ಹಾಸ್ಟೆಲ್’ ನಡೆಸಿ ಅನೇಕರು, ತುಳಿತಕ್ಕೊಳಗಾದವರ ಶಿಕ್ಷಣಕ್ಕೆ ಸಹಾಯ ಮಾಡಿದರು.

ಜಸ್ಟೀಸ್ ಪಾರ್ಟಿಯ ಸಂಸ್ಥಾಕರು-1920

ಶೂದ್ರನಿಗೆ ಶಿಕ್ಷಣವಿಲ್ಲ ಎಂದ ಮನುಧರ್ಮ:
ಶೂದ್ರ, ಪಂಚಮ ಹಾಗೂ ಕೆಳವರ್ಗದವರಿಗೆ ಶಿಕ್ಷಣ ನೀಡಬಾರದು ಎಂಬ ಮನು ಧರ್ಮದ ನೀತಿಯನ್ನು ಪಾಲಿಸಿಕೊಂಡು ಬಂದಿತು ಇತಿಹಾಸ; ಮನು ಧರ್ಮದ ಪ್ರಕಾರ ರಾಜರ ಕಾಲದಲ್ಲೂ ಬ್ರಾಹ್ಮಣ ಮಕ್ಕಳಿಗೆ ಮಾತ್ರ ಓದಲು ಅವಕಾಶವಿತ್ತು; ಇತರರಿಗೆ ಇಲ್ಲ! ಮಧುರೈ ನಾಯಕರ ಆಳ್ವಿಕೆಯಲ್ಲಿ, ಇಟಾಲಿಯನ್ ಪಾದ್ರಿ ರಾಬರ್ಟ್ ಡಿ ನೊಬಿಲಿ ಅವರು ಅಧ್ಯಯನ ಮಾಡಿ ಹೇಳಿದಂತೆ “10 ಸಾವಿರ ಬ್ರಾಹ್ಮಣ ಮಕ್ಕಳು ಸಂಸ್ಕೃತ ಶಿಕ್ಷಣವನ್ನು ಪಡೆದಿದ್ದಾರೆ” ಎಂದು ಹೇಳಿದ್ದಾರೆ. (1610ನೇ ವರ್ಷ) ಅದನ್ನು ಹಿಮ್ಮೆಟ್ಟಿಸಿ, ತುಳಿತಕ್ಕೊಳಗಾದವರಿಗೆ ಶಿಕ್ಷಣ, ಆರೋಗ್ಯ, ವೈಚಾರಿಕತೆ ಮತ್ತು ಮಹಿಳಾ ಹಕ್ಕುಗಳನ್ನು ನೀಡಲು ಜನ್ಮ ತಾಳಿದ್ದೇ ಜಸ್ಟೀಸ್ ಪಾರ್ಟಿ ಎಂಬ ದ್ರಾವಿಡ ಹಾಗೂ ಸ್ವಾಭಿಮಾನ ಚಳುವಳಿ!

ಕೆ.ಕಾಮರಾಜ್

ಜಸ್ಟೀಸ್ ಪಾರ್ಟಿಯ ಆಹಾರ ಕಾರ್ಯಕ್ರಮ:
ಸರ್ ಪಿಟ್ಟಿ ತ್ಯಾಗರಾಯರು ಚೆನ್ನೈ ಪ್ರಾಂತ್ಯದ ಅಧ್ಯಕ್ಷರಾಗಿ (ಆಗ ಮೇಯರ್ ಹುದ್ದೆ ಇರಲಿಲ್ಲ) ಚೆನ್ನೈ ಕಾರ್ಪೊರೇಷನ್ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಆಹಾರ ನೀಡುವ ಯೋಜನೆಯನ್ನು ಮೊಟ್ಟ ಮೊದಲ ಬಾರಿಗೆ ಪ್ರಾರಂಭಿಸಿದರು. ಬ್ರಿಟಿಷ್ ಸರ್ಕಾರವು ಅದನ್ನು ಸ್ವಲ್ಪ ಕಾಲದವರೆಗೆ ನಡೆಸಲು ಅವಕಾಶ ಮಾಡಿಕೊಟ್ಟಿತು. ನಂತರ ಅನುದಾನ ನಿರಾಕರಿಸಿದ ಕಾರಣ ಯೋಜನೆಯನ್ನು ಅಲ್ಲಿಗೆ ನಿಲ್ಲಿಸಬೇಕಾಯಿತು; ಆಗ ಸರ್ಕಾರಕ್ಕೆ ಪೂರ್ಣ ಅಧಿಕಾರ ಇರಲಿಲ್ಲ!

ಎಂ.ಕರುಣಾನಿಧಿ

ಸ್ವಾತಂತ್ರ್ಯದ ನಂತರ ಮುಖ್ಯಮಂತ್ರಿಯಾದ ಕಾಂಗ್ರೆಸ್ ನ ಕೆ.ಕಾಮರಾಜ ಅವರು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮವನ್ನು ಆರಂಭಿಸಿ, ಬಡಮಕ್ಕಳು ಓದುವುದನ್ನು ಮುಂದುವರಿಸುವಂತೆ ಮಾಡಿದರು! ಬಡ ಮಕ್ಕಳು, ಹಳ್ಳಿಗಳಲ್ಲಿನ ಜನರು, ತುಳಿತಕ್ಕೊಳಗಾದ ಸಮುದಾಯದ ಮಕ್ಕಳು ಮುಂದುವರಿದು ಓದಿ ಪ್ರಗತಿ ಹೊಂದಲು ಈ ಮಧ್ಯಾಹ್ನದ ಊಟದ ಕಾರ್ಯಕ್ರಮವು ಮೆಟ್ಟಿಲು (ಆಕ್ಷನ್ ಬೂಸ್ಟರ್) ಆಗಿ ಸಹಾಯ ಮಾಡಿತು! ಅವರ ನಂತರ ಮುಖ್ಯಮಂತ್ರಿಯಾದ ಡಿಎಂಕೆ ಪಕ್ಷದ ಸಿ.ಎಂ.ಅಣ್ಣಾದುರೈ ಹಾಗೂ ಎಂ.ಕರುನಾನಿಧಿ ಆ ಯೋಜನೆಯನ್ನು ಮುಂದುವರಿಸಿಕೊಂಡು ಹೋದರು.

ಎಂಜಿಆರ್

ನಂತರ ಮುಖ್ಯಮಂತ್ರಿಯಾದ ಎಂ.ಜಿ.ರಾಮಚಂದ್ರನ್ (ಎಂಜಿಆರ್) ನೇತೃತ್ವದ ಎಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದಾಗ. ಮಧ್ಯಾಹ್ನ ಊಟ ಕಾರ್ಯಕ್ರಮ ‘ಪೌಷ್ಟಿಕ ಆಹಾರ ಯೋಜನೆ’ ಎಂಬ ಹೆಸರಿನಲ್ಲಿ ಮುಂದುವರೆಯಿತು. ಆನಂತರ ಎಂ.ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರ ಮತ್ತೆ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ, ಎರಡು ಮೊಟ್ಟೆ ಅಥವಾ ಬಾಳೆಹಣ್ಣು ನೀಡಿ ಅದನ್ನು ನಿಜವಾಗಿಯೂ ಪೌಷ್ಟಿಕಾಂಶವನ್ನಾಗಿ ಮಾಡಿದರು. ಮತ್ತು ಮಕ್ಕಳ ಹಸಿವು ನೀಗಿಸುವ ಜೊತೆಗೆ ಮಕ್ಕಳ ಪೋಷಣೆಯನ್ನು ಬೆಂಬಲಿಸಲು ಮತ್ತು ಮಕ್ಕಳ ಯೋಗಕ್ಷೇಮಕ್ಕೆ ಸಹಾಯ ಮಾಡಲು ಅವರು ಈ ಕಾರ್ಯಕ್ರಮವನ್ನು ಮತ್ತಷ್ಟು ಪರಿಷ್ಕರಿಸಿದರು. ಮುಂದಿನ ದಿನಗಳಲ್ಲಿ ಆ ಯೋಜನೆಯನ್ನು ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರವು ಕೂಡ ಮುಂದುವರಿಸಿತು.

ಜೆ.ಜಯಲಲಿತಾ

ಮುಂದುವರಿದು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ದ್ರಾವಿಡ ಮಾದರಿ ಸರ್ಕಾರದ ಎರಡು ವರ್ಷಗಳ ಆಡಳಿತದಲ್ಲಿ, ಕೆಲವು ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತವಾಗಿ ಮಧ್ಯಾಹ್ನದ ಊಟದ ಜೊತೆಗೆ ಉಪಹಾರವನ್ನೂ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಎಂ.ಕರುಣಾನಿಧಿ ಶತಮಾನೋತ್ಸವದ ಸಂದರ್ಭದಲ್ಲಿ (25.8.2023) ರಾಜ್ಯದಾದ್ಯಂತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅಪರೂಪದ ಹಸಿವು ನೀಗಿಸಿ ಶಿಕ್ಷಣ (ಮಧ್ಯಾಹ್ನದ ಊಟದ ಜೊತೆಗೆ ಉಪಹಾರ) ನೀಡುವ ವಿನೂತನ ಕಾರ್ಯಕ್ರಮವನ್ನು ಎಂ.ಕರುಣಾನಿಧಿ ಅವರು ಶಿಕ್ಷಣ ಪಡೆದ ತಂಜಾವೂರಿನ ತಿರುಕ್ಕುವಲದಲ್ಲಿನ ಶಾಲೆಯಲ್ಲಿ ಪ್ರಾರಂಭಿಸಿದ್ದಾರೆ.

ಎಂ.ಕೆ.ಸ್ಟಾಲಿನ್

ಓದಿ… ಓದಿ… ಓದಿ… ಎಂದು ಈ ಹಿಂದೆ ಹೇಳಿದಾಗ ಹಳ್ಳಿಯ ಬಡ ವಿದ್ಯಾರ್ಥಿಗಳು, ಬಡತನದ ಕಾರಣಗಳಿಂದ ದನ-ಕರುಗಳನ್ನು ಮೇಯಿಸಲು ಮುಂದಾಗಿದ್ದರು. ಹಸಿವು, ಹಸಿವು ಎಂಬ ಪರಿಸ್ಥಿತಿಯನ್ನು ಬದಲಾಯಿಸಿದ ಕರ್ಮವೀರ ಕಾಮರಾಜರು ಮಧ್ಯಹ್ನದ ಊಟದ ಕಾರ್ಯಕ್ರಮವನ್ನು ತಂದು ಹಸಿವು ನೀಗಿಸಿ ಶಿಕ್ಷಣ ನೀಡುವ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬಂದ ಸರ್ಕಾರಗಳು ಆ ಯೋಜನೆಯನ್ನು ವಿಸ್ತರಿಸಿ, ಪೌಷ್ಟಿಕ ಆಹಾರವನ್ನಾಗಿ ಪರಿವರ್ತಿಸಿತು. ಇದೀಗ ಬಂದಿರುವ ಡಿಎಂಕೆ ಸರ್ಕಾರ ವಿದ್ಯಾರ್ಥಿಗಳು ಹಸಿವಿನಿಂದ ಶಿಕ್ಷಣ ಪಡೆಯಬಾರದು ಎಂಬ ಉದ್ದೇಶದಿಂದ ಉಪಹಾರ ಸೇವಿಸಿ ತೃಪ್ತರಾಗಿ ನಂತರ ತರಗತಿಯಲ್ಲಿ ಕೂತು ಶಿಕ್ಷಣ ಪಡೆಯಲಿ ಎಂದು ತೀರ್ಮಾನಿಸಿ ಈ ಯೋಜನೆಯನ್ನು ಜಾರಿಗೆ ತಂದಿರುವುದು ಒಂದು ದೊಡ್ಡ ಶೈಕ್ಷಣಿಕ ಕ್ರಾಂತಿಯೇ ಆಗಿದೆ!

ಉಪಹಾರ ಸೇವಿಸುತ್ತಿರುವ ಶಾಲಾ ಮಕ್ಕಳು

ಆರ್ಥಿಕ ಮುಗ್ಗಟ್ಟು ಸರಕಾರದ ಗಂಟಲು ಕಟ್ಟುತ್ತಿರುವ ಈ ಸಂದರ್ಭದಲ್ಲಿ ಈ ಯೋಜನೆಗೆ ಆದ್ಯತೆ ನೀಡಲಾಗಿದ್ದು, 17 ಲಕ್ಷ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯ ಮೂಲಕ ಕಾಯಕಲ್ಪ ನೀಡಲಾಗಿದೆ. ಈ ಯೋಜನೆ ರೂಪಿಸಿದ ಮಾನ್ಯ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಮೆಚ್ಚಲೇಬೇಕು. ಇದಕ್ಕಾಗಿ ಮುಖ್ಯಮಂತ್ರಿಗಳು ಪ್ರತ್ಯೇಕ ನಿಧಿಯನ್ನು ರಚಿಸಿ ಟ್ರಸ್ಟ್‌ ಮಾಡಿ, ಜನರಲ್ಲಿ ಸುಸ್ಥಿತಿಯಲ್ಲಿರುವವರು ದೇಣಿಗೆ ನೀಡುವಂತೆ ನೋಡಿಕೊಂಡು ಎಲ್ಲಾ ಶಾಲೆಗಳಲ್ಲಿ, ಖಾಸಗಿ ಶಾಲೆಗಳಲ್ಲಿಯೂ ಸಹ ಅವರ ಜವಾಬ್ದಾರಿಯಲ್ಲೇ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ನೀಡಬಹುದು. ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು; ಸ್ವಚ್ಛತೆ ಸೇರಿದಂತೆ!

ಅತಿಯಾದ ನಿದ್ದೆ ಮಕ್ಕಳಿಗೆ ಬಾರದ ಆಹಾರವಾಗಿದ್ದು, ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲು ತಜ್ಞರು ಯೋಜಿಸಿ ಪರಿಷ್ಕರಿಸಬೇಕು. ಸನಾತನ ಶಿಕ್ಷಣದ ಕಣ್ಣುಗಳನ್ನು ಇರಿಯುತ್ತದೆ ಮತ್ತು ಕುಲ ಶಿಕ್ಷಣವನ್ನು ಹೇರುತ್ತದೆ. ದ್ರಾವಿಡವು ಹಸಿವನ್ನು ನೀಗಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತದೆ. ಇದೇ ಎರಡರ ನಡುವಿನ ವ್ಯತ್ಯಾಸ!

ರಾಜಕೀಯ

ಬೆಂಗಳೂರು: ಅಧಿಕಾರಕ್ಕೆ ಬಂದು 100 ದಿನ ಕಳೆಯುವ ಮುನ್ನವೇ ಕೊಳ್ಳಿ ಇಡುವ ಕೆಲಸ ಮಾಡಿಬಿಟ್ಟಿದೆ. ಈ ಅನ್ಯಾಯ ಸಹಿಸುವ ಪ್ರಶ್ನೆಯೇ ಇಲ್ಲ. ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಸಂಕಷ್ಟಸೂತ್ರದ ಪಾಲನೆಗೆ ಒತ್ತಡ ಹೇರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಆಡಿ, ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟ ಕಾಂಗ್ರೆಸ್, ಈಗ I.N.D.I.A.ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ್ನೇ ಬಲಿದಾನ ಮಾಡಿದೆ. ಅಂದುಕೊಂಡಿದ್ದೇ ಆಗಿದ್ದು; ನಮ್ಮ ಭಯ ನಿಜವಾಗಿದೆ. ಕಾಂಗ್ರೆಸ್ ಸರಕಾರ ಕನ್ನಡಿಗರಿಗೆ, ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸಗಿದೆ.

ಮಳೆ ಅಭಾವದಿಂದ ಜಲಾಶಯಗಳು ತುಂಬಿಲ್ಲ. ರೈತರ ಬೆಳೆಗೆ ನೀರಿಲ್ಲ, ಬೆಂಗಳೂರಿಗೆ ಕುಡಿಯುವ ನೀರಿಗೂ ತತ್ವಾರ. ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದೆ ಸರಕಾರ. ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ನೀರು ಹರಿಸುವ ಮೂಲಕ ತಮಿಳುನಾಡು ಜತೆ ರಾಜಕೀಯ ಚೌಕಾಬಾರ ಆಡುತ್ತಿದೆ! ಇದೇನು ಇನ್ನೊಂದು ಗ್ಯಾರಂಟಿನಾ?

2024ರ ಲೋಕಸಭೆ ಗೆಲುವಿಗೆ ಕಾವೇರಿ ಹಿತವನ್ನು ನೆರೆರಾಜ್ಯಕ್ಕೆ ಅಡವಿಟ್ಟಿದೆ ಹಸ್ತಪಕ್ಷ ಸರಕಾರ! ತಮಿಳುನಾಡಿಗೆ ಬೆದರಿ ಶರಣಾಗಿದೆ!! ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಯಿಂದಲೇ ಹೊರನಡೆದ, ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ ರಾಜ್ಯದೆದುರು ದೈನೇಸಿಯಾಗಿ ಮಂಡಿಯೂರಿದ್ದು ಕನ್ನಡಿಗರ ಸ್ವಾಭಿಮಾನಕ್ಕೆ ಕೊಟ್ಟ ಕೊಡಲಿಪೆಟ್ಟು.

1962ರಿಂದಲೂ ಕಾವೇರಿ ಕೊಳ್ಳದ ರೈತರಿಗಾಗಿ ಹೆಚ್.ಡಿ.ದೇವೇಗೌಡ ಅವರು ಜೀವವನ್ನೇ ತೇದರು. ಕಾವೇರಿಗಾಗಿ ಹಿಂದಿನ ಪ್ರತೀ ಸರಕಾರವೂ ಕೇಂದ್ರಕ್ಕೆ ಸೆಡ್ಡು ಹೊಡೆದು ತಮಿಳುನಾಡು ಅಬ್ಬರಕ್ಕೆ ಅಂಕೆ ಹಾಕಿದ್ದವು. ಇಂಥ ಕೆಚ್ಚಿನ ಕರ್ನಾಟಕದ ಇತಿಹಾಸದಲ್ಲೇ ಈ ಸರಕಾರವು, ನೆರೆರಾಜ್ಯ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದಾಕ್ಷಣ ಬೆದರಿ ಕೈ ಚೆಲ್ಲಿದೆ.

ಸಂಕಷ್ಟ ಸ್ಥಿತಿಯ ಬಗ್ಗೆ ಕಾಂಗ್ರೆಸ್ ಸರಕಾರ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಲಿಲ್ಲ ಯಾಕೆ? ಕಾನೂನು ತಜ್ಞರ ಜತೆ ಪ್ರತಿಪಕ್ಷ ಮುಖಂಡರ ಜತೆ ಸಮಾಲೋಚನೆ ನಡೆಸದೇ ವಾಯುವೇಗದಲ್ಲಿ ತಮಿಳುನಾಡಿಗೆ ನೀರು ಹರಿಸಿದ ಒಳಗುಟ್ಟೇನು? ಜನತೆಗೆ ಗೊತ್ತಾಗಬೇಕಿದೆ.

ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿಯವರು ತಾವು ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಅವರು ಸ್ಪಷ್ಟಪಡಿಸಬೇಕಿದೆ. ಕಾವೇರಿ ಕೀಲಿ ಕೇಂದ್ರ ಬಳಿ ಇದೆ ಎಂದಾದರೆ ಇವರ ಹೊಣೆ ಏನು? ಆ ಕೀಲಿ ಈಗ ಸ್ಟಾಲಿನ್ ಅವರ ಕೈಯ್ಯಲ್ಲಿದೆಯೋ ಅಥವಾ ಸೋನಿಯಾ ಗಾಂಧಿ ಅವರ ಕೈಯ್ಯಲ್ಲಿದೆಯೋ?

ಇದನ್ನೂ ಓದಿ: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹ!

ತಾಕತ್ತಿದ್ದರೆ ಕೋರ್ಟಿಗೆ ಹೋಗಿ ಎಂದು ರೈತರಿಗೆ ಉಪ ಮುಖ್ಯಮಂತ್ರಿಗಳು ಹೇಳಿರುವುದು ದರ್ಪ, ದುರಹಂಕಾರದ ಪರಾಕಾಷ್ಠೆ. ನಿತ್ಯವೂ ಸಾವಿರಾರು ಕ್ಯೂಸೆಕ್ ಕಾವೇರಿ ನೀರು ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ. ಇನ್ನೂ 10 ಟಿಎಂಸಿ ಬಿಡುತ್ತೇವೆ ಎಂದು ಅವರು ಹೇಳಿರುವುದು ಸರಿಯಲ್ಲ?

ಕನ್ನಡಿಗರು ಕೊಟ್ಟ ಪೆನ್ ಈಗ ಗನ್ ರೂಪ ತಳೆದಿದೆಯಾ ಹೇಗೆ? ಕನ್ನಡಿಗರನ್ನು ಕೇಳಿಕೇಳಿ ಪಡೆದುಕೊಂಡ ಪೆನ್ ಈಗ ಪೆಚ್ಚಗೆ, ತೆಪ್ಪಗೆ ಮಲಗಿದೆಯಾ? ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವೇ ರಾಜ್ಯದ ಜಲ ಸಂಕಷ್ಟದ ಬಗ್ಗೆ ಸಭೆಯಲ್ಲೇ ಅಂಕಿ-ಅಂಶ ಸಮೇತ ಹೇಳಿದೆ. ಪಾಪ ಜಲ ಸಂಪನ್ಮೂಲ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ? ಎಂದು ಕಿಡಿಕಾರಿದ್ದಾರೆ.

ಕಾವೇರಿ ವಿಷಯದಲ್ಲಿ ಕಾಂಗ್ರೆಸ್ಸಿನದು ಸದಾ ಎರಡು ನಾಲಿಗೆ! ಕಾವೇರಿ ಪಾಲಿಗೆ ಆ ಪಕ್ಷ ನಯವಂಚನೆ,ನಂಬಿಕೆ ದ್ರೋಹದ ಪ್ರತೀಕ.ಅಧಿಕಾರಕ್ಕೆ ಬಂದು 100 ದಿನ ಕಳೆಯುವ ಮುನ್ನವೇ ಕೊಳ್ಳಿ ಇಡುವ ಕೆಲಸ ಮಾಡಿಬಿಟ್ಟಿದೆ.ಈ ಅನ್ಯಾಯ ಸಹಿಸುವ ಪ್ರಶ್ನೆಯೇ ಇಲ್ಲ.ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಸಂಕಷ್ಟಸೂತ್ರದ ಪಾಲನೆಗೆ ಒತ್ತಡ ಹೇರಬೇಕು.

ರಾಜಕೀಯ

ತಮಿಳುನಾಡು ಕುರುವೈ ಬೆಳೆಗೆ ಎರಡು ಪಟ್ಟು ನೀರು ಬಳಕೆ ಮಾಡಿದೆ. ನಾಲ್ಕು ಪಟ್ಟು ಕುರುವೈ ಬೆಳೆ ಕ್ಷೇತ್ರ ವಿಸ್ತರಣೆ ಮಾಡಿದೆ. ಕರ್ನಾಟಕ ಸರ್ಕಾರ ಇದನ್ನು ಸಿಡಬ್ಲುಎಂಎದಲ್ಲಿ ಪ್ರತಿಭಟಿಸದೇ ಮತ್ತು ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ ತಕ್ಷಣ ನೀರು ಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

“ರಾಜ್ಯದ ರೈತರಿಗೆ ಈ ಮೊದಲು ನೀರು ಬಿಡದೇ ನಮ್ಮ ರಾಜ್ಯದ ರೈತರ ಪಾಲನ್ನು ಡ್ಯಾಂನಲ್ಲಿ ಸ್ಟೋರೇಜ್ ಮಾಡಿ, ರಾಜ್ಯದ ರೈತರಿಗೆ ನೀರು ಕೊಡುವ ತೀರ್ಮಾನ ವಿಳಂಬ ಮಾಡಿ ಈಗ ನಮ್ಮ ರೈತರ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸುವ ಸ್ಥಿತಿ ನೀವು ತಂದೊಡ್ಡಿದ್ದೀರಿ.

ಇದನ್ನೂ ಓದಿ: ಹುಟ್ಟಿನಿಂದ ಮನುಷ್ಯರು ಎಲ್ಲರೂ ಸಮಾನರು; ಜನರ ನಡುವೆ ತಾರತಮ್ಯ ಮಾಡುವುದು ಅವಮಾನಕರ! – ನಟ ಕಮಲಹಾಸನ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬ ಹೇಳಿಕೆ ಕೊಟ್ಟ ಮರುದಿನವೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೀರಾವರಿ ಇಲಾಖೆ ತಮಿಳುನಾಡಿಗೆ ನೀರು ಬಿಟ್ಟಿರುವುದು, ರಾಜ್ಯದಲ್ಲಿ ಕಾವೇರಿ ನೀರು ನಿರ್ವಹಣೆಯಲ್ಲಿ ಒಮ್ಮತ ಇಲ್ಲ ಹಾಗೂ ನಮ್ಮ ರಾಜ್ಯದ ನೀರಿನ ಪಾಲನ್ನು ರಕ್ಷಣೆ ಮಾಡುವಂತ ಛಲವೂ ಕಾಣಿಸುತ್ತಿಲ್ಲ.

ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ, ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಈ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಯಬೇಕು” ಎಂದು ಹೇಳಿದ್ದಾರೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು

ತಮಿಳುನಾಡು: ತಮಿಳುನಾಡು ವಿಧಾನಸಭೆಯು ಸಾಮಾನ್ಯವಾಗಿ ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರ ಭಾಷಣದೊಂದಿಗೆ ಪ್ರಾರಂಭಿಸುತ್ತದೆ. ಅದರಂತೆ ಇಂದು (ಜನವರಿ 9) ಬೆಳಗ್ಗೆ 10 ಗಂಟೆಗೆ ರಾಜ್ಯಪಾಲ ಆರ್.ಎನ್.ರವಿ ಭಾಷಣದೊಂದಿಗೆ ವರ್ಷದ ಮೊದಲ ಸಭೆ ಆರಂಭವಾಯಿತು.

ಸಭಾಧ್ಯಕ್ಷರು ಎಂ.ಅಪ್ಪಾವು ಹಾಗೂ ಕಾರ್ಯದರ್ಶಿ ಕೆ.ಶ್ರೀನಿವಾಸನ್ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು. ಇದಾದ ಬಳಿಕ ರಾಜ್ಯಪಾಲರಿಗೆ ಪೊಲೀಸ್ ಪರೇಡ್ ಗೌರವ ಸಲ್ಲಿಸಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ರಾಜ್ಯಪಾಲರು ವಿಧಾನಸಭೆಯಲ್ಲಿ ಭಾಷಣ ಆರಂಭಿಸಿದರು. ಅವರು ಭಾಷಣ ಮಾಡುವಾಗ ಸಾಮಾಜಿಕ ನ್ಯಾಯ, ಸ್ವಾಭಿಮಾನ, ಸಮಗ್ರ ಅಭಿವೃದ್ಧಿ, ಸಮಾನತೆ, ಮಹಿಳಾ ಹಕ್ಕುಗಳು, ಧಾರ್ಮಿಕ ಸೌಹಾರ್ದತೆ, ವೈವಿಧ್ಯತೆ, ಪೆರಿಯಾರ್, ಅಂಬೇಡ್ಕರ್, ಕಾಮರಾಜ್, ಅಣ್ಣಾದುರೈ, ಎಂ.ಕರುಣಾನಿಧಿ, ದ್ರಾವಿಡ ಮಾದರಿ ಆಡಳಿತ, ತಮಿಳುನಾಡು ಶಾಂತಿ ಉದ್ಯಾನದಂತಹ ಪದಗಳನ್ನು ಹೇಳಲು ನಿರಾಕರಿಸಿದರು.

ಭಾಷಣ ಆರಂಭವಾಗುತ್ತಿದ್ದಂತೆ ಡಿಎಂಕೆ ಮಿತ್ರಪಕ್ಷಗಳು “ಗೊ ಬ್ಯಾಕ್ ಗವರ್ನರ್” ಎಂಬ ಘೋಷಣೆಗಳನ್ನು ಕೂಗಿದರು. ರಾಜ್ಯಪಾಲರ ಭಾಷಣದ ನಂತರ ಅದರ ತಮಿಳು ಆವೃತಿಯನ್ನು ಸಭಾಧ್ಯಕ್ಷರು ಎಂ.ಅಪ್ಪಾವು ವಾಚಿಸಿದರು. ಅಪ್ಪಾವು ಅದನ್ನು ಓದುತ್ತಿರುವಾಗ ಮದ್ಯ ಪ್ರವೇಶಿಸಿದ ಪ್ರತಿಪಕ್ಷಗಳು ‘ಸರ್ಕಾರ ಸಿದ್ದಪಡಿಸಿದ್ದ ಭಾಷಣವನ್ನು ರಾಜ್ಯಪಾಲರು ಸರಿಯಾಗಿ ಓದಲಿಲ್ಲ’ ಎಂದು ಆರೋಪ ಮಾಡಿದವು.

ಅಪ್ಪಾವು ಮಾತು ಮುಗಿಸಿದ ಬಳಿಕ ಎದ್ದು ನಿಂತ ಮುಖ್ಯಮಂತ್ರಿ ಸ್ಟಾಲಿನ್, ಸರ್ಕಾರ ಸಿದ್ದಪಡಿಸಿದ್ದ ಭಾಷಣವನ್ನು ರಾಜ್ಯಪಾಲರು ಸರಿಯಾಗಿ ಓದಲಿಲ್ಲ ಎಂದು ಅಪಾದಿಸಿದರು. ರಾಜ್ಯಪಾಲರು ಓದಿದ ಭಾಗಗಳನ್ನು ಟಿಪ್ಪಣಿಗಳಲ್ಲಿ ಸೇರಿಸಬಾರದು ಎಂಬ ಗೊತ್ತುವಳಿಯನ್ನು ಮುಖ್ಯಮಂತ್ರಿ ಸ್ಟಾಲಿನ್ ಮಂಡಿಸಿದರು. ಮುಖ್ಯಮಂತ್ರಿ ಗೊತ್ತುವಳಿಯನ್ನು ಸಭೆಯಲ್ಲಿ ಮಂಡಿಸುತ್ತಿರುವಾಗಲೇ ರಾಜ್ಯಪಾಲರು ವಿಧಾನಸಭೆಯಿಂದ ಹೊರನಡೆದರು. ರಾಜ್ಯಪಾಲರು ತೆರಳಿದನಂತರ ಮುಖ್ಯಮಂತ್ರಿಗಳು ಮಂಡಿಸಿದ ಗೊತ್ತುವಳಿಯನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ವಿಧಾನಸಭೆ ಕಲಾಪ ಮುಗಿದ ಬಳಿಕ ರಾಷ್ಟ್ರಗೀತೆ ಮೊಳಗಿದಾಗ ರಾಜ್ಯಪಾಲರು ಸದನದಲ್ಲಿ ಇರಲಿಲ್ಲ ಎಂಬುದು ಗಮನಾರ್ಹ. ಭಾಷಣವನ್ನು ಅನುಮೋದಿಸಿದ ನಂತರ ಅದನ್ನು ಬದಲಾಯಿಸಿ ಸದನದಲ್ಲಿ ಓದುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಕಲಾಪದ ಸಂಸ್ಕೃತಿಯಲ್ಲ. ಐತಿಹಾಸಿಕವಾದ ದ್ರಾವಿಡ ಚಳುವಳಿಯನ್ನು ಕಟ್ಟಿ, ಬ್ರಾಹ್ಮಣ್ಯಕ್ಕೆ ಸೆಡ್ಡು ಹೊಡೆದು ‘ಸನಾತನ ರೋಗಕ್ಕೆ ದ್ರಾವಿಡವೇ ಮದ್ದು’ ಎಂಬ ನಂಬಿಕೆಯನ್ನು ದಕ್ಷಿಣ ಭಾರತೀಯರಿಗೆ ನೀಡಿರುವ ತಮಿಳುನಾಡು ವಿಧಾನ ಸಭೆಯಲ್ಲಿ ಸಾಮಾಜಿಕ ನ್ಯಾಯ, ಸ್ವಾಭಿಮಾನ, ಸಮಗ್ರ ಅಭಿವೃದ್ಧಿ, ಸಮಾನತೆ, ಮಹಿಳಾ ಹಕ್ಕುಗಳು, ಧಾರ್ಮಿಕ ಸೌಹಾರ್ದತೆ, ವೈವಿಧ್ಯತೆ, ಪೆರಿಯಾರ್, ಅಂಬೇಡ್ಕರ್, ಕಾಮರಾಜ್, ಅಣ್ಣಾದುರೈ, ಎಂ.ಕರುಣಾನಿಧಿ, ದ್ರಾವಿಡ ಮಾದರಿ ಆಡಳಿತ, ತಮಿಳುನಾಡು ಶಾಂತಿ ಉದ್ಯಾನದಂತಹ ಪದಗಳನ್ನು ಹೇಳಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎಂದರೆ ಇವರು ಎಂತಹ ಉಗ್ರ ಸನಾತನವಾದಿಯಾಗಿರಬೇಕು ಎಂಬುದನ್ನು ನೀವೇ ಊಹಿಸಿಕೊಳ್ಳಿ.

‘ರಾಜ್ಯಪಾಲರು ಇಂತಹ ಹಲವಾರು ಸಮಸ್ಯೆಗಳನ್ನು ದಿನನಿತ್ಯ ಸೃಷ್ಟಿಸುತ್ತಿರುವುದು ನಿಜಕ್ಕೂ ನನಗೆ ನೋವು ತಂದಿದೆ’ ಎಂದು ವಿಧಾನಸಭೆ ಸಭಾಪತಿ ಅಪ್ಪಾವು ಹೇಳಿರುವುದು ಗಮನಾರ್ಹವಾದದ್ದು.

‘ರಾಜ್ಯಪಾಲ ಆರ್.ಎನ್.ರವಿ ಉಗ್ರ ಸನಾತನವಾದಿ, ದ್ರಾವಿಡ ವಿರೋಧಿ, ಬಿಜೆಪಿ ಏಜೆಂಟ್’ ಎಂದೆಲ್ಲ ತಮಿಳುನಾಡು ಜನರು ಹೇಳುವುದು ಸರಿಯಾಗಿಯೇ ಇದೆ ಎಂಬುದನ್ನು ಇಂದಿನ ನಡವಳಿಕೆ ನಮಗೆ ತೋರಿಸಿಕೊಟ್ಟಿದೆ.