ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ನರೇಂದ್ರ ಮೋದಿ Archives » Page 2 of 8 » Dynamic Leader
November 21, 2024
Home Posts tagged ನರೇಂದ್ರ ಮೋದಿ (Page 2)
ರಾಜಕೀಯ

ಲಕ್ನೋ: ತಮ್ಮ ಕುಟುಂಬದವರನ್ನು ಮುಖ್ಯಮಂತ್ರಿ ಮತ್ತು ಪ್ರಧಾನಿಯನ್ನಾಗಿ ಮಾಡುವುದೇ ವಿರೋಧ ಪಕ್ಷದ ಗುರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ‘ಕಾಶ್ಮೀರ ನಮಗೆ ಸೇರಿದ್ದು. ಮೋದಿ ಎರಡನೇ ಬಾರಿಗೆ ಪ್ರಧಾನಿಯಾದಾಗ, ಅವರು 370ನೇ ವಿಧಿಯನ್ನು ರದ್ದುಗೊಳಿಸಿ, ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಿದರು. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸಲು ಮೋದಿ ಶ್ರಮಿಸಿದ್ದಾರೆ. ಬಿಜೆಪಿ ಸರ್ಕಾರ ಉತ್ತರಪ್ರದೇಶದಿಂದ ಜನರ ವಲಸೆಯನ್ನು ನಿಲ್ಲಿಸಿದೆ, ಈಗ ಅಪರಾಧಿಗಳು ವಲಸೆ ಹೋಗುತ್ತಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಬೇಕು. ಅವರು ಬಡವರ, ರೈತರ ಅಭ್ಯುದಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಖಿಲೇಶ್ ಯಾದವ್ ಅವರ ಪಕ್ಷ ಮತ್ತು ಕಾಂಗ್ರೆಸ್ ಎಂದಿಗೂ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಬಯಸಲಿಲ್ಲ.

“ಇಂಡಿಯಾ” ಮೈತ್ರಿಕೂಟದಲ್ಲಿರುವ ದುರಹಂಕಾರಿಗಳು 12 ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿ, ಪ್ರಧಾನಿ ಮಾಡುವುದೇ ವಿರೋಧ ಪಕ್ಷಗಳ ಉದ್ದೇಶ ಎಂದು ಅವರು ಹೇಳಿದ್ದಾರೆ.

ದೇಶ

‘ಭಾರತೀಯರೆಲ್ಲರೂ ನನ್ನ ಕುಟುಂಬ’ ಎಂದು ಭಾ‍ಷಣ ಮಾಡಿದ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ನಟ ಪ್ರಕಾಶ್ ರಾಜ್, ‘ಮಣಿಪುರದ ಜನರು ಕೂಡ ನಿಮ್ಮ ಕುಟುಂಬವೇ’ ಎಂದು ಕೇಳಿದ್ದಾರೆ.

ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ಮಾರ್ಚ್ 3 ರಂದು ನಡೆದ “ಜನ್ ವಿಶ್ವಾಸ್” ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, “ಪ್ರಧಾನಿ ಮೋದಿಯವರು ರಾಷ್ಟ್ರೀಯ ಜನತಾ ದಳ ಸೇರಿದಂತೆ ವಿವಿಧ ಪಕ್ಷಗಳ ವಿರುದ್ಧ ಕುಟುಂಬ ರಾಜಕಾರಣದ ಆರೋಪಗಳನ್ನು ಎತ್ತುತ್ತಿದ್ದಾರೆ. ನರೇಂದ್ರ ಮೋದಿ ಕುಟುಂಬ ಆಡಳಿತದ ಮೇಲೆ ದಾಳಿ ನಡೆಸುತ್ತಿದ್ದಾರೆ.

ನಿಮಗೆ ಏಕೆ ಮಕ್ಕಳು ಅಥವಾ ಕುಟುಂಬವಿಲ್ಲ ಎಂಬುದನ್ನು ನೀವು (ಮೋದಿ) ಹೇಳಬೇಕು? ಹಲವು ಕುಟುಂಬಗಳು ರಾಜಕೀಯದಲ್ಲಿದ್ದರೆ ಅದು ಕುಟುಂಬ ಆಡಳಿತವೇ? ಇದು ಉತ್ತರಾಧಿಕಾರ ರಾಜಕಾರಣವೇ? ನಿಮಗೆ (ಮೋದಿ) ಕುಟುಂಬವಿಲ್ಲದಿದ್ದರೆ, ಯಾರು ಏನು ಮಾಡಲು ಸಾಧ್ಯ?” ಎಂದು ಕಟುವಾಗಿ ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ, ನಿನ್ನೆ ತಮಿಳುನಾಡಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಚೆನ್ನೈನ ನಂದನಂನಲ್ಲಿ ಬಿಜೆಪಿ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. “ನಾನು ಕುಟುಂಬ ಆಡಳಿತ ಎಂದು ಮಾತನಾಡುವುದರಿಂದ ಮೋದಿಗೆ ಕುಟುಂಬವೇ ಇಲ್ಲ ಎಂದು “ಇಂಡಿಯಾ” ಮೈತ್ರಿಕೂಟದ ನಾಯಕರು ಮಾತನಾಡುತ್ತಿದ್ದಾರೆ.

ನನ್ನ ಜೀವನ ಒಂದು ತೆರೆದ ಪುಸ್ತಕ. ದೇಶದ 140 ಕೋಟಿ ಜನರು ನನ್ನ ಕುಟುಂಬದವರೇ ಆಗಿದ್ದಾರೆ. ಕೋಟ್ಯಾಂತರ ಹೆಣ್ಣುಮಕ್ಕಳು, ತಾಯಂದಿರು ಮತ್ತು ಸಹೋದರಿಯರೆಲ್ಲರೂ ಮೋದಿಯ ಕುಟುಂಬಕ್ಕೆ ಸೇರಿದವರೇ” ಎಂದು ಹೇಳುವ ಮೂಲಕ ಲಾಲು ಪ್ರಸಾದ್ ಯಾದವ್ ಅವರ ಪ್ರಶ್ನೆಗೆ ತಕ್ಕ ಉತ್ತರ ನೀಡಿದರು.

ಈ ಹಿನ್ನೆಲೆಯಲ್ಲಿ, ದೇಶದ ಜನರೆಲ್ಲ ನನ್ನ ಕುಟುಂಬ ಎಂಬ ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ನಟ ಪ್ರಕಾಶ್ ರಾಜ್ ಪ್ರಶ್ನೆ ಎತ್ತಿದ್ದಾರೆ. ಈ ಸಂಬಂಧ ಅವರು ತಮ್ಮ ‘ಎಕ್ಸ್’ ಸೈಟ್‌ನಲ್ಲಿ, “ಮಣಿಪುರದ ಜನರು, ದೇಶದ ರೈತರು, ನಿರುದ್ಯೋಗಿ ಯುವಕರು ನಿಮ್ಮ ಕುಟುಂಬವೇ?” ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಮಣಿಪುರದಲ್ಲಿ ಭುಗಿಲೆದ್ದ ಕೋಮುಗಲಭೆ ಇಂದಿಗೂ ಮುಂದುವರೆದಿದೆ. ಈ ವಿಚಾರದಲ್ಲಿ ಮೋದಿ ಇನ್ನೂ ಆ ರಾಜ್ಯಕ್ಕೆ ಭೇಟಿ ನೀಡಿ ಜನರನ್ನು ಭೇಟಿ ಮಾಡಿಲ್ಲ. ಇನ್ನೂ ಮಣಿಪುರದಲ್ಲಿ ಉದ್ವಿಗ್ನತೆ ಕಡಿಮೆಯಾಗಿಲ್ಲ. ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಈ ಪ್ರಶ್ನೆ ಎತ್ತಿರುವುದು ಗಮ್ನಾರ್ಹ.

ರಾಜಕೀಯ

ನವದೆಹಲಿ: ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಂಸತ್ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಇವೆ. ಚುನಾವಣಾ ಆಯೋಗ ಶೀಘ್ರವೇ ಘೋಷಣೆ ಮಾಡುವ ನಿರೀಕ್ಷೆ ಇದೆ.

ಯಾವಾಗ ಬೇಕಾದರೂ ಚುನಾವಣಾ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಚುನಾವಣಾ ಕಣದಲ್ಲಿ ಮೊದಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ವಿರೋಧ ಪಕ್ಷಗಳ ಮೇಲೆ ಒತ್ತಡ ಹೇರಲು ಆಡಳಿತಾರೂಢ ಬಿಜೆಪಿ ಸಿದ್ಧವಾಗುತ್ತಿದೆ. ಆ ಮೂಲಕ ನಿನ್ನೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕತ್ವ ಸಮಾಲೋಚನೆ ನಡೆಸಿದೆ.

ಇದರ ಬೆನ್ನಲ್ಲೇ ದೇಶಾದ್ಯಂತ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿರುವಾಗಲೇ ಅಭ್ಯರ್ಥಿಗಳ ಘೋಷಣೆ ಕೂಡ ಪ್ರಕಟವಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್.ಡಿ.ಎ) ನೇತೃತ್ವ ವಹಿಸಿರುವ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಮತ್ತಿತರರು ಸೇರಿದ್ದಾರೆ. ಅದರಂತೆ ಪ್ರಧಾನಿ ಮೋದಿ ಮತ್ತೆ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಈ ಸಂಬಂಧ ಮಾತನಡಿದ ಬಿ.ಜೆ.ಪಿ.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ, “ಮೊದಲ ಹಂತವಾಗಿ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 195 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ” ಎಂದು ಹೇಳಿದರು.

ಅಭ್ಯರ್ಥಿಗಳ ಮೊದಲ ಪಟ್ಟಿಯ ಪ್ರಕಾರ 34 ಸಚಿವರು ಮತ್ತೆ ಸ್ಪರ್ಧಿಸುತ್ತಿದ್ದಾರೆ. ಪಟ್ಟಿಯಲ್ಲಿ 28 ಮಹಿಳೆಯರು ಮತ್ತು 47 ಮಂದಿ 50 ವರ್ಷದೊಳಗಿನವರು. ಉತ್ತರಪ್ರದೇಶ-51, ಪಶ್ಚಿಮ ಬಂಗಾಳ-20, ತೆಲಂಗಾಣ-9, ಗುಜರಾತ್ -15 ಮಧ್ಯಪ್ರದೇಶ-24, ರಾಜಸ್ಥಾನ-15, ಕೇರಳ-12, ಜಾರ್ಖಂಡ್, ಛತ್ತೀಸ್‌ಗಢ ತಲಾ 11.

ಪ್ರಧಾನಿ ಮೋದಿ, ವಾರಣಾಸಿ; ಸಚಿವ ಅಮಿತ್ ಶಾ, ಗಾಂಧಿನಗರದಲ್ಲಿ ಸ್ಪರ್ದಿಸುತ್ತಿದ್ದಾರೆ.

ದೇಶ

ಹಿರಿಯ ನಾಯಕರೊಬ್ಬರು ನನ್ನ ಬಳಿಗೆ ಬಂದು, ‘ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದೀರಿ; ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ’ ಎಂದು ಕೇಳಿಕೊಂಡರು.

ಲೋಕಸಭೆ ಚುನಾವಣೆಗೆ ಎಲ್ಲ ಪಕ್ಷಗಳು ಬಹಳ ಗಂಭೀರವಾಗಿ ಸಿದ್ಧತೆಗಳನ್ನು ಮಾಡಿಕೊಂಡು ಬರುತ್ತಿವೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿವೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಪ್ರತಿ ಮಂಗಳವಾರದಂದು ಸಮಾಲೋಚನಾ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಚುನಾವಣೆ ಗೆಲುವಿನ ತಂತ್ರಗಳನ್ನು ರೂಪಿಸಲು ಆರಂಭಿಸಿದ್ದಾರೆ.

ಈ ಸಮಾಲೋಚನಾ ಸಭೆಗಳಲ್ಲಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಭಾಗವಹಿಸಿ, ಮೊದಲ ಬಾರಿ ಮತ ಚಲಾಯಿಸಲಿರುವ ಹೊಸ ಮತದಾರರು, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು, ಹಿಂದುಳಿದ ವರ್ಗಗಳ ಮತದಾರರು, ಯುವಕರು ಮತ್ತು ಮಹಿಳೆಯರು ಹೀಗೆ ಪ್ರತಿಯೊಂದು ವಿಭಾಗವನ್ನು ಗುರಿಯಾಗಿಟ್ಟುಕೊಂಡು ಯೋಜನೆ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಭಾರತ್ ಮಂಟಪದಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, “ಮುಂದಿನ 100 ದಿನಗಳಲ್ಲಿ ನಾವೆಲ್ಲರೂ ಪ್ರತಿಯೊಬ್ಬ ಹೊಸ ಮತದಾರರನ್ನು, ಪ್ರತಿಯೊಬ್ಬ ಫಲಾನುಭವಿಯನ್ನು, ಪ್ರತಿ ಸಮುದಾಯವನ್ನು ತಲುಪಬೇಕಾಗಿದೆ. ಎಲ್ಲರ ವಿಶ್ವಾಸವನ್ನು ಗಳಿಸಬೇಕು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 400 ಕ್ಷೇತ್ರಗಳಲ್ಲಿ ಗೆಲುವನ್ನು ಸಾದಿಸಲು ಶ್ರಮಿಸಬೇಕು. ಅದರಲ್ಲಿ ಬಿಜೆಪಿ 370 ಸ್ಥಾನಗಳಲ್ಲಿ ಗೆಲ್ಲಬೇಕು. ಇದು ಎಲ್ಲವನ್ನು ನಾನು ಮೂರನೇ ಬಾರಿಗೆ ಆಡಳಿತವನ್ನು ಆನಂದಿಸಲಿಕ್ಕಾಗಿ ಕೇಳುತ್ತಿಲ್ಲ. ನಾನು ಇನ್ನೂ ಈ ದೇಶಕ್ಕಾಗಿ ಕೆಲಸ ಮಾಡಲು ಬಯಸುತ್ತಿದ್ದೇನೆ.

ನನ್ನ ಮನೆಯ ಬಗ್ಗೆ ಮಾತ್ರ ಯೋಚಿಸಿದ್ದರೆ ಕೋಟಿಗಟ್ಟಲೆ ಜನರಿಗೆ ಮನೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. 10 ವರ್ಷಗಳ ಸಮತೋಲಿನ ಆಡಳಿತ ಮತ್ತು 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿರುವುದು ದೊಡ್ಡ ಸಾಧನೆಯಾಗಿದೆ. ಹಿರಿಯ ನಾಯಕರೊಬ್ಬರು ನನ್ನ ಬಳಿಗೆ ಬಂದು, ‘ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದೀರಿ; ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ’ ಎಂದು ಕೇಳಿಕೊಂಡರು. ಆದರೆ ಈಗಲೂ ನಾನು ರಾಜನೀತಿಗಾಗಿ ಅಲ್ಲ ರಾಷ್ಟ್ರನೀತಿಗಾಗಿ ಕಾರ್ಯನಿರ್ವಹಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

ದೇಶ

ಅಂಬಲಾ ಬಳಿಯ ಶಂಭು ಗಡಿಯಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರಿಂದ ಉದ್ವಿಗ್ನತೆ ಹೆಚ್ಚಿದೆ.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ರಾಜ್ಯಗಳ ರೈತ ಸಂಘಟನೆಗಳು, 2021ರಲ್ಲಿ ದಿಲ್ಲಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯನ್ನು ಅಂತ್ಯಗೊಳಿಸಲು ರೈತರ ಬೇಡಿಕೆಯನ್ನು ಈಡೇರಿಸಲು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಸಮ್ಮತಿಸಿತು.

ಆದರೆ ಎರಡು ವರ್ಷ ಕಳೆದರೂ ಬೇಡಿಕೆ ಈಡೇರದ ಕಾರಣ, ಹರಿಯಾಣ ಮತ್ತು ದೆಹಲಿಯ ಗಡಿಯಲ್ಲಿ ನಿನ್ನೆಯಿಂದ ರೈತರು ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದಾರೆ. ಶಂಭು ಗಡಿಯಲ್ಲಿ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ನಡೆದಿದೆ. ಅಂಬಲಾ ಬಳಿಯ ಶಂಭು ಗಡಿಯಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರಿಂದ ಉದ್ವಿಗ್ನತೆ ಹೆಚ್ಚಿದೆ.

ಈ ಹಿನ್ನಲೆಯಲ್ಲಿ, ರೈತರು ಅಶ್ರುವಾಯು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಶ್ರುವಾಯು ಪ್ರಭಾವವನ್ನು ಕಡಿಮೆ ಮಾಡಲು ಅವರು ನೀರಿನ ಬಾಟಲಿಗಳು, ಒದ್ದೆಯಾದ ಬಟ್ಟೆಗಳು ಮತ್ತು ರಕ್ಷಣಾ ಸಾಧನಗಳೊಂದಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿದ್ದಾರೆ. ಅಲ್ಲದೆ, ಅಶ್ರುವಾಯು ಸಾಗಿಸುವ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಲು ಗಾಳಿಪಟಗಳನ್ನು ಹಾರಿಸುತ್ತಿದ್ದಾರೆ.

ಈ ಕುರಿತು ಮಾತನಾಡುವ ರೈತರು, ‘ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೈತಿಕವಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ಯಾವುದೋ ಭಯೋತ್ಪಾದಕರನ್ನು ಎದುರಿಸುತ್ತಿದ್ದೇವೆ ಎಂಬಂತೆ ಸರಕಾರಿ ಯಂತ್ರಗಳು ನಮ್ಮನ್ನು ನಡೆಸಿಕೊಳ್ಳುತ್ತಿದೆ. ಡ್ರೋನ್‌ಗಳ ಮೂಲಕ ಅಶ್ರುವಾಯು ಪ್ರಯೋಗಿಸಿ ನಮ್ಮನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾರೆ. ಅದನ್ನು ಎದುರಿಸಲು ನಾವು ಈ ರೀತಿ ಗಾಳಿಪಟವನ್ನು ಹಾರಿಸುತ್ತಿದ್ದೇವೆ’ ಎಂದು ಹೇಳಿದರು.

ಉದ್ಯೋಗ ರಾಜ್ಯ

ಬೆಂಗಳೂರು: ‘2014ರಲ್ಲಿ ಕೋಟಿಗಳ ಲೆಕ್ಕದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಹತ್ತು ವರ್ಷಗಳ ನಂತರ ಲಕ್ಷಗಳ ಲೆಕ್ಕದಲ್ಲಿ ಉದ್ಯೋಗ ನೀಡಿದ್ದನ್ನು ಸಾಧನೆ ಎಂದು ಬಿಂಬಿಸುತ್ತಿರುವುದು ತಮಾಷೆಯಾಗಿ ಕಾಣುತ್ತಿಲ್ಲವೇ? ಎಲ್ಲಿಯ 20 ಕೋಟಿ ಉದ್ಯೋಗಗಳು? ಎಲ್ಲಿಯ ರೋಜಗಾರ್ ಮೇಳದ ಲಕ್ಷಗಳ ಲೆಕ್ಕದ ಉದ್ಯೋಗಗಳು? ನಿಜ ಹೇಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನೀವು ಸೃಷ್ಟಿಸಿರುವ ಉದ್ಯೋಗಗಳ ಸಂಖ್ಯೆ ಎಷ್ಟು?’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

‘ನರೇಂದ್ರ ಮೋದಿಯವರೇ, ನಿಮ್ಮದೇ ಬಿಜೆಪಿ ಸರ್ಕಾರದ ಸಚಿವ ಸಂಪುಟದ ಜಿತೇಂದರ್ ಸಿಂಗ್ ಅವರು 2022ರ ಜುಲೈ ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “2014-15 ಮತ್ತು 2021-22ರ ಅವಧಿಯ ನಡುವೆ ಕೇವಲ 7 ಲಕ್ಷ ಹೊಸ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿತ್ತು ಎಂದು ಹೇಳಿದ್ದರು. ಅಂತಿಮ ಸತ್ಯ ಇದೇ ಇರಬಹುದಾ?’ ಎಂದು ಕೇಳಿದ್ದಾರೆ.

‘ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಈಗ ತರಾತುರಿಯಿಂದ ಉದ್ಯೋಗ ಮೇಳಗಳನ್ನು ಆಯೋಜಿಸಲು ಕಾರಣ ಯುವಜನರ ಮೇಲಿನ ಕಾಳಜಿಯೇ? ಇಲ್ಲವೇ ಉದ್ಯೋಗ ಇಲ್ಲದೆ ರೊಚ್ಚಿಗೆದ್ದಿರುವ ನಿರುದ್ಯೋಗಿ ಯುವಜನರ ಆಕ್ರೋಶವೇ?

ಪ್ರಧಾನಿಯವರೇ, ಈಗ ನಿಮ್ಮದೇ ಬಿಜೆಪಿ ಸರ್ಕಾರದ ಅಧಿಕೃತ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಮಾತಾಡೋಣ. 2017-18ರ ಎನ್.ಎಸ್.ಎಸ್.ಒ ವರದಿಯ ಪ್ರಕಾರ ಕಳೆದ 45 ವರ್ಷಗಳಲ್ಲೇ ದೇಶದ ನಿರುದ್ಯೋಗ ಪ್ರಮಾಣ ಅತಿ ಗರಿಷ್ಠ ಮಟ್ಟಕ್ಕೆ, ಅಂದರೆ 6.1 ಗೆ ತಲುಪಿದೆ. 2011-12ರಲ್ಲಿ ಈ ಪ್ರಮಾಣ ಶೇ 2.2 ಆಗಿತ್ತು.

ನೆನಪಿರಲಿ, ಕೋವಿಡ್ ಕಾಲದಲ್ಲಿ ನಿರುದ್ಯೋಗದ ಪ್ರಮಾಣ ಜಗತ್ತಿನಾದ್ಯಂತ ಹೆಚ್ಚಾಗಿದ್ದು ನಿಜ. ಆದರೆ ನಮ್ಮಲ್ಲಿ ಇದು 2014-15ರಿಂದಲೇ ಇದು ಪ್ರಾರಂಭವಾಗಿತ್ತು. 2016ರಲ್ಲಿ ನಡೆದ ನೋಟು ಅಮಾನ್ಯೀಕರಣದಿಂದ ಕೈಗಾರಿಕೆಗಳೆಲ್ಲ ಮುಚ್ಚಿಹೋಗಿ ನಿರುದ್ಯೋಗ ಪ್ರಮಾಣ ಮಿತಿ ಮೀರತೊಡಗಿದ್ದನ್ನು ಹಲವಾರು ಆರ್ಥಿಕ ತಜ್ಞರೇ ವಿವರಿಸಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ, 2017-18ರ ಎನ್.ಎಸ್.ಎಸ್.ಒ ಸರ್ವೇಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ವಿಳಂಬ ಮಾಡಿತ್ತೇ?

ವಿಶ್ವಬ್ಯಾಂಕ್ 2022ರಲ್ಲಿ ನೀಡಿದ್ದ ವರದಿ ಪ್ರಕಾರ ನಿರುದ್ಯೋಗದ ಪ್ರಮಾಣ ಪಾಕಿಸ್ತಾನದಲ್ಲಿ ಶೇ.11.3ರಷ್ಟಿದ್ದರೆ, ಬಾಂಗ್ಲಾದೇಶದಲ್ಲಿ 12.9 ರಷ್ಟಿತ್ತು. ಭೂತಾನ್ ನಲ್ಲಿ ಶೇ. 14.4 ರಷ್ಟಿದ್ದರೆ, ಚೀನಾದಲ್ಲಿ 13.2 ರಷ್ಟಿತ್ತು. ಆದರೆ, ಅದೇ ಅವಧಿಯಲ್ಲಿ ನಮ್ಮ ಭಾರತದಲ್ಲಿ ನಿರುದ್ಯೋಗ ದರ ಶೇ 23.22 ರಷ್ಟಿತ್ತು. ಇತ್ತೀಚೆಗೆ ಅಂತಾರಾಷ್ಟ್ರೀಯ ಲೇಬರ್ ಆರ್ಗನೈಸೆಷನ್ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ನಿರುದ್ಯೋಗದ ಪ್ರಮಾಣದಲ್ಲಿ ನಮ್ಮ ದೇಶ, ನೆರೆಯ ದೇಶಗಳಾದ ಮ್ಯಾನ್ಮರ್, ಬಾಂಗ್ಲಾ, ಮಾರಿಷಸ್ ಗಿಂತಲೂ ಕೆಳಗಿನ ಸ್ಥಾನದಲ್ಲಿರುವುದು ನಿಜವಲ್ಲವೇ ನರೇಂದ್ರ ಮೋದಿ ಅವರೇ?’ ಎಂದು ವ್ಯಂಗ್ಯವಾಡಿದ್ದಾರೆ.

‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್‌ ಎಕನಾಮಿ ವರದಿ ಪ್ರಕಾರ ದೇಶದ ನಿರುದ್ಯೋಗ ಪ್ರಮಾಣ 2014ರಲ್ಲಿ 5.44% ಇದ್ದದ್ದು 2023ರ ಅಕ್ಟೋಬರ್‌ನಲ್ಲಿ 10.05% ತಲುಪಿದೆ. ಇನ್ನು ವಯಸ್ಸಿನ ಆಧಾರದಲ್ಲಿ ನೋಡೋದಾದ್ರೆ 20 ರಿಂದ 24ರ ವಯೋಮಾನ – 43.65% ನಿರುದ್ಯೋಗಿಗಳಿದ್ದರೆ; 25 ರಿಂದ 29 ವಯೋಮಾನದವರಲ್ಲಿ -14.33%; 30 ರಿಂದ 34 ವಯೋಮಾನದವರಲ್ಲಿ -2.49% ನಿರುದ್ಯೋಗಿಗಳಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರವೇ ಪ್ರತಿ ಮೂರು ತಿಂಗಳಿಗೊಮ್ಮೆ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (ಪಿಎಲ್ಎಫ್ ಎಸ್) ಪ್ರಕಾರ 2019 ರಿಂದ 2022 ರವರೆಗಿನ ಅವಧಿಯಲ್ಲಿ ದೇಶದ ನಿರುದ್ಯೋಗ ಪ್ರಮಾಣ 22.9% ಏರಿಕೆಯಾಗಿದೆ. ಏರಿಕೆಯಾಗಿರುವುದು ಉದ್ಯೋಗಗಳ ಸಂಖ್ಯೆ ಅಲ್ಲ, ಸುಳ್ಳುಗಳ ಸಂಖ್ಯೆ ಅಷ್ಟೆ ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘2004-2012ರ ಅವಧಿಯಲ್ಲಿ, ಅಂದರೆ ಯುಪಿಎ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈ ಪ್ರಮಾಣ 2013ರ ನಂತರದಲ್ಲಿ 29 ಲಕ್ಷಕ್ಕೆ ಇಳಿದಿದೆ. ನಿರುದ್ಯೋಗದ ತೀವ್ರತೆ ನಮ್ಮ ದೇಶದಲ್ಲಿ ಎಷ್ಟರಮಟ್ಟಿಗೆ ಇದೆಯೆಂದರೆ, ಎನ್.ಸಿ.ಆರ್.ಬಿ ಪ್ರಕಾರ ಪ್ರತಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ! ಕರ್ನಾಟಕವೊಂದರಲ್ಲೇ 2021ರಲ್ಲಿ 1,129 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆಲ್ಲಿಯ ರೋಜಗಾರ್ ಮೇಳ ನರೇಂದ್ರ ಮೋದಿ ಅವರೇ?

ಉದ್ಯೋಗ ಅರಸಿ, ದೇಶದಿಂದ ವಿದೇಶಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಫ್ರಾನ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದ ವಿಮಾನದಲ್ಲಿ 66 ಮಂದಿ ಗುಜರಾತಿಗಳಿದ್ದರು. ತಮ್ಮನ್ನು ಗುಜರಾತಿನಿಂದ ಅಮೆರಿಕಾಗೆ ಅಕ್ರಮವಾಗಿ ಕರೆದೊಯ್ಯಲು ಏಜೆಂಟ್ ಗಳಿಗೆ ತಲಾ 60-80 ಲಕ್ಷ ರೂಪಾಯಿಗಳನ್ನು ನೀಡಿದ್ದರು ಎಂಬ ಅಂಶ ವಿಚಾರಣೆಯಲ್ಲಿ ಬಹಿರಂಗವಾಗಿತ್ತು.

2018 ರಿಂದ 2019ರ ವರೆಗೆ 8,027 ಮಂದಿ, 2019 ರಿಂದ 2020ರ ವರೆಗೆ 19,883 ಮಂದಿ, 2020 ರಿಂದ 2021ರ ವರೆಗೆ 30,662 ಮಂದಿ, 2021 ರಿಂದ 2022ರ ವರೆಗೆ 63,927 ಮಂದಿ ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿ ಬಂಧನಕ್ಕೊಳಗಾಗಿದ್ದಾರೆ. ಈ ಅಕ್ರಮ ವಲಸಿಗರ ಪೈಕಿ ಬಹುಪಾಲು ಜನರು ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿದವರು ಎಂಬುದು ಗಮನಿಸಬೇಕಾದ ಅಂಶ ಅಲ್ಲವೇ?

ಇದು ಹೊಸ ಉದ್ಯೋಗಗಳ ಸೃಷ್ಟಿಯ ಕಥೆಯಾದರೆ, ಇರುವ ಸರ್ಕಾರಿ ಉದ್ಯೋಗಗಳ ಭರ್ತಿಯಲ್ಲೂ ತೀರಾ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ವಿವಿಧ ಇಲಾಖೆಯ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ಸಣ್ಣಪುಟ್ಟ ಹುದ್ದೆಗಳಿಗೂ ಸ್ನಾತಕೋತ್ತರ ಪದವೀಧರ, ಬಿಇ, ಎಂಬಿಬಿಎಸ್ ಪದವಿ ಪಡೆದವರು ಅರ್ಜಿ ಸಲ್ಲಿಸುವ ವಿದ್ಯಮಾನ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ದೇಶದ ಯುವಜನರು ನಿರುದ್ಯೋಗದ ದಳ್ಳುರಿಯಲ್ಲಿ ಬೇಯ್ತಾ ಇದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಸಂಸತ್ತಿನ ಭದ್ರತೆಯನ್ನು ಬೇಧಿಸಿ, ಒಳನುಸುಳಿ ಹೊಗೆಬಾಂಬ್ ಸಿಡಿಸುವ ಮಟ್ಟಿಗೆ ಹತಾಶರಾಗಿದ್ದ ಯುವಕರು ಕೂಡಾ ನಿರುದ್ಯೋಗಕ್ಕೆ ಬಲಿಯಾದವರಲ್ಲವೇ  ನರೇಂದ್ರ ಮೋದಿ ಅವರೇ?

‘ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉದ್ಯೋಗ ಭರ್ತಿಗಾಗಿ ಸರ್ಕಾರಗಳು ನಿರ್ದಿಷ್ಟ ನೇಮಕಾತಿ ಪ್ರಕ್ರಿಯೆ ನಡೆಸುತ್ತವೆ. ಇದಕ್ಕಾಗಿಯೇ ಯುಪಿಎಸ್‌ಸಿ, ಎಸ್ಎಸ್‌ಸಿ, ಲೋಕಸೇವಾ ಆಯೋಗಗಳಗಳಿವೆ. ಹೀಗಿರುವಾಗ ಸಾಕ್ಷಾತ್ ಪ್ರಧಾನಿಯವರೇ ವೀಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರಗಳ ವಿತರಿಸುತ್ತಿರುವುದು ಯಾವ ಉದ್ಯೋಗಗಳಿಗೆ? ರೋಜ್ ಗಾರ್ ಮೇಳದಲ್ಲಿ ನೀಡಲಾಗುತ್ತಿರುವ ಉದ್ಯೋಗಗಳು ಯಾವುದು? ಇವುಗಳು ಖಾಯಂ ಉದ್ಯೋಗವೇ?ತಾತ್ಕಾಲಿಕವೇ? ಅರೆಕಾಲಿಕವೇ? ಪೂರ್ಣಕಾಲಿಕವೇ? ಈ ಉದ್ಯೋಗಗಳನ್ನು ನೀಡುವಾಗ ಮೀಸಲಾತಿಯನ್ನು ಅನುಸರಿಸಲಾಗಿದೆಯೇ? ಅರ್ಹತೆಗಷ್ಟೇ ಪ್ರಾಮುಖ್ಯ ನೀಡಲಾಗಿದೆಯೇ? ರಾಜಕೀಯ ಒಲವು-ನಿಲುವುಗಳನ್ನು ಪರಿಗಣಿಸಲಾಗಿತ್ತೇ? ಪ್ರಧಾನಿಗಳೇ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ’ ಎಂದು ಕಿಡಿಕಾರಿದ್ದಾರೆ.  

ದೇಶ

ಪ್ರಧಾನಿ ನರೇಂದ್ರ ಮೋದಿ ಅವರು ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಜನವರಿ 14 ರಂದು ಮಣಿಪುರದಿಂದ ಮಹಾರಾಷ್ಟ್ರಕ್ಕೆ ಭಾರತ್ ಜೋಡೋ ನ್ಯಾಯ ಯಾತ್ರೆಯ ಎರಡನೇ ಹಂತವನ್ನು ಪ್ರಾರಂಭಿಸಿದರು.

ಯಾತ್ರೆಯು ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ 15 ರಾಜ್ಯಗಳನ್ನು ಒಳಗೊಂಡಿದೆ. ಒಟ್ಟು 66 ದಿನಗಳಲ್ಲಿ 110 ಜಿಲ್ಲೆಗಳಲ್ಲಿ ಸುಮಾರು 6700 ಕಿ.ಮೀ. ಪ್ರಯಾಣಿಸುವ ಸಲುವಾಗಿ ಈ ನಡಿಗೆ ನಡೆಯಲಿದೆ.

ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಬಿಹಾರ ಮತ್ತು ಪಶ್ಚಿಮ ಬಂಗಾಳದ ನಂತರ ಇದೀಗ ಒಡಿಶಾದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ನಡೆತ್ತಿದ್ದಾರೆ. ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ವಾಸ್ತವವಾಗಿ ಮೋದಿ ಸಾಮಾನ್ಯ ಜಾತಿ ಕುಟುಂಬದಲ್ಲಿ ಜನಿಸಿದವರು.

ಇವರು “ತೆಲಿ” ಜಾತಿಗೆ ಸೇರಿದವರು. 2000 ರಲ್ಲಿ, ಗುಜರಾತ್‌ನ ಬಿಜೆಪಿ ಸರ್ಕಾರವು ತೆಲಿ ವರ್ಗವನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಕೊಂಡಿತ್ತು. ಈ ಕಾರಣಕ್ಕಾಗಿ, ತಮ್ಮ ಜೀವನ ಪರ್ಯಂತ ಅವರು ಜಾತಿವಾರು ಜನಗಣತಿ ನಡೆಸಲು ಅನುಮತಿ ಕೊಡುವುದಿಲ್ಲ” ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿಯವರ ಈ ಹೇಳಿಕೆ ಭಾರತದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಮೋದಿಯವರ ಶಿಕ್ಷಣದ ವಿವರಗಳನ್ನು ಬಹಿರಂಗಪಡಿಸದೇ ಇರುವ ಹಿನ್ನಲೆಯಲ್ಲಿ, ಈಗ ಅವರ ಜಾತಿಯ ಪ್ರಶ್ನೆಯೂ ಉದ್ಭವಿಸಿದೆ. ಪ್ರಧಾನಿ ಮೋದಿವಿವಿಧ ವೇದಿಕೆಗಳಲ್ಲಿ ತಾನು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಹೇಳಿಕೊಂಡು ಮತ ಸಂಗ್ರಹಿಸಿರುವುದು ಗಮನಾರ್ಹ.

ರಾಜಕೀಯ

ನವದೆಹಲಿ:  2014ಕ್ಕಿಂತ ಮೊದಲು ಕಾಂಗ್ರೆಸ್ ನೇತೃತ್ವದ ಒಕ್ಕೂಟ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕ ಸ್ಥಿತಿಯನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯ ಪ್ರಸ್ತುತ 10 ವರ್ಷಗಳ ಆಡಳಿತದೊಂದಿಗೆ ಹೋಲಿಸಿ ಸಂಸತ್ತಿಗೆ “ಶ್ವೇತ ಪತ್ರ” ತರಲು ಒಕ್ಕೂಟ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉಭಯ ಸದನಗಳಲ್ಲಿ ಶ್ವೇತಪತ್ರ ಮಂಡಿಸಲಿದ್ದಾರೆ. ಅದರ ಮೇಲಿನ ಚರ್ಚೆಯ ನಂತರ ಮತದಾನಕ್ಕೆ ಬಿಡಲಾಗುತ್ತದೆ.

ಈ ಹಿನ್ನಲೆಯಲ್ಲಿ, 10 ವರ್ಷಗಳ ಬಿಜೆಪಿ ಆಡಳಿತದ ಬಗ್ಗೆ “ಕಪ್ಪು ಪತ್ರ” ಹೊರಡಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ “ಕಪ್ಪು ಪತ್ರ” ಪ್ರಕಟಿಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದರಿಂದಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಬಿರುಸಿನ ಚರ್ಚೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ದೇಶ

ನವದೆಹಲಿ: 2024-25ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಂಡ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದರಿಂದ ತಿಂಗಳಿಗೆ ರೂ.15 ಸಾವಿರದಿಂದ ರೂ.18 ಸಾವಿರ ವರೆಗೆ ಆದಾಯ ಗಳಿಸಬಹುದು ಎಂದು ಹೇಳಿದ್ದಾರೆ.

ಇನ್ನೂ ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು. “ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಮುಂದಿನ 5 ವರ್ಷಗಳಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಮುಂದಿನ 5 ವರ್ಷಗಳು ಅಭಿವೃದ್ಧಿಗಾಗಿ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಬಜೆಟ್‌ನ ಮುಖ್ಯಾಂಶಗಳು:
ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು.
ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಂಡ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು.
ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಲು ವಿಶೇಷ ಸಮಿತಿಯನ್ನು ರಚಿಸಲಾಗುವುದು.
ಪೌಷ್ಟಿಕಾಂಶದ ಕೊರತೆಯನ್ನು ಸರಿಪಡಿಸಲು ಹೊಸ ಆ್ಯಪ್‌ ಪರಿಚಯಿಸಲಾಗುವುದು.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9 ರಿಂದ 18 ವರ್ಷದೊಳಗಿನ ಬಾಲಕಿಯರಿಗೆ ಲಸಿಕೆ ಕಾರ್ಯಕ್ರಮವನ್ನು ಪರಿಚಯಿಸಲಾಗುವುದು.

1 ಲಕ್ಷ ಕೋಟಿ ರೂ:
ಸಂಶೋಧನೆ ಮತ್ತು ನಾವೀನ್ಯತೆ ಯೋಜನೆಗಳನ್ನು ಉತ್ತೇಜಿಸಲು 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ವಿನಿಯೋಗಿಸಲಾಗುವುದು.
ಮೀನುಗಾರಿಕೆ ಕ್ಷೇತ್ರದಲ್ಲಿ 55 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು.
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮಾ ಯೋಜನೆ ವಿಸ್ತರಿಸಲಾಗುವುದು.
ದೇಶಾದ್ಯಂತ 41 ಸಾವಿರ ಕೋಚ್‌ಗಳನ್ನು ವಂದೇ ಭಾರತ್ ರೈಲು ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು.
ಸರಕು ರೈಲು ಸಂಚಾರಕ್ಕಾಗಿ ಪ್ರತ್ಯೇಕವಾಗಿ ಲೈನ್‌ಗಳನ್ನು ನಿರ್ವಹಿಸಲಾಗುವುದು.
ಮೆಟ್ರೊ ರೈಲು ಯೋಜನೆಗಳನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲಾಗುವುದು.

ಪ್ರವಾಸೋದ್ಯಮ:
ದೇಶದ ವಿಮಾನಯಾನ ಸಂಸ್ಥೆಗಳು 1000 ಹೊಸ ವಿಮಾನಗಳನ್ನು ಖರೀದಿಸಲು ಯೋಜಿಸುತ್ತಿವೆ.
ಉಡಾನ್ ಯೋಜನೆಯಡಿಯಲ್ಲಿ 517 ಹೊಸ ಮಾರ್ಗಗಳಲ್ಲಿ ಕಡಿಮೆ ದರದ ವಿಮಾನಯಾನ ಸೇವೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ.
ಲಕ್ಷದ್ವೀಪವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗುವುದು.
ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಡ್ಡಿ ರಹಿತ ಸಾಲ ಯೋಜನೆ ಜಾರಿಗೊಳಿಸಲಾಗುವುದು.
ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ವಿವಿಧ ಯೋಜನೆಗಳನ್ನು ಪರಿಚಯಿಸಲಾಗುವುದು.

ವಿತ್ತೀಯ ಕೊರತೆ:
2023-24ರ ಪರಿಷ್ಕೃತ ಅಂದಾಜಿನ ಪ್ರಕಾರ ಸರ್ಕಾರದ ವೆಚ್ಚ 40.90 ಲಕ್ಷ ಕೋಟಿ ರೂಪಾಯಿಗಳು.
2024-2025ರಲ್ಲಿ ದೇಶದ ವಿತ್ತೀಯ ಕೊರತೆ 5.1 ರೊಳಗೆ ನಿಯಂತ್ರಿಸಲಾಗುವುದು.
2025-26 ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇಕಡಾ 4.5 ಕ್ಕಿಂತ ಕಡಿಮೆ ಮಾಡಲು ಯೋಜಿಸಲಾಗುವುದು.
10 ವರ್ಷಗಳಲ್ಲಿ ತೆರಿಗೆದಾರರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ.

ರಕ್ಷಣಾ ಇಲಾಖೆ:
ರಕ್ಷಣಾ ವಲಯದಲ್ಲಿನ ಹೂಡಿಕೆಯನ್ನು ಶೇ 11.1ರಷ್ಟು ಹೆಚ್ಚಿಸಿ 11,11,111 ಕೋಟಿ ರೂ.ಗೆ ಹೆಚ್ಚಿಸಲಾಗುವುದು.
ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಒಟ್ಟು ದೇಶೀಯ ಬೆಳವಣಿಗೆಯಾದ ಜಿಡಿಪಿಯ ಶೇ.3.4%ರಷ್ಟು ಇರುತ್ತದೆ.

ದೇಶ

ಚೆನ್ನೈ: ಕಳೆದ 10 ವರ್ಷಗಳ ಬಿಜೆಪಿ ಸರ್ಕಾರದ ವೈಫಲ್ಯವನ್ನು ಮುಚ್ಚಿಡಲು ಅಯೋಧ್ಯೆಯಲ್ಲಿ ರಾಮನ ಅದ್ಧೂರಿ ಸಮಾರಂಭವನ್ನು ಯೋಜಿಸಲಾಗಿದೆ ಎಂದು ವಿಡುದಲೈ ಚಿರುತ್ತೈಗಳ್ (ಬಿಡುಗಡೆ ಚಿರುತೆಗಳು) ನಾಯಕ ತಿರುಮಾವಳವನ್ ಹೇಳಿದ್ದಾರೆ.

ವರ್ಣಾಶ್ರಮವನ್ನು ಸ್ಥಾಪಿಸಲು ಮೋದಿ ಹಾಗೂ ಅಮಿತ್ ಶಾ ಶ್ರಮಿಸುತ್ತಿದ್ದಾರೆ. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಆರ್‌ಎಸ್‌ಎಸ್‌ ರವಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿಯವರ 10 ವರ್ಷಗಳ ಆಡಳಿತ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ತಂದಿದೆ.

ಮೋದಿ ಆಡಳಿತ ವೈಫಲ್ಯದಿಂದ ಜನರ ಗಮನ ಬೇರೆಡೆ ಸೆಳೆಯಲು ಅಯೋಧ್ಯೆಯಲ್ಲಿ ಅದ್ಧೂರಿ ಸಮಾರಂಭ ನಡೆದಿದೆ. ಇಂಥವರ ಆಡಳಿತ ಮುಂದುವರಿದರೆ ಕೈಗಾರಿಕೋದ್ಯಮಿಗಳೇ ಬಲಗೊಳ್ಳಲು ಸಾಧ್ಯ. ಮೋದಿ ಆಡಳಿತವನ್ನು ತೊಡೆದುಹಾಕುವುದು ದೇಶದ ಪ್ರಮುಖ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

­—–

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿನ್ನೆ ಅದ್ಧೂರಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಮನ ಪ್ರತಿಮೆಯನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಭಾರತದ ಪ್ರಮುಖ ರಾಜಕೀಯ ನಾಯಕರು, ಆಧ್ಯಾತ್ಮಿಕ ನಾಯಕರು, ಗಣ್ಯ ವ್ಯಕ್ತಿಗಳು, ಸಿನಿಮಾ ತಾರೆಯರು, ಕ್ರೀಡಾ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸದಸ್ಯರು ಅಯೋಧ್ಯೆ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಈ ಹಿನ್ನಲೆಯಲ್ಲಿ, ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಚುನಾವಣಾ ರಾಜಕೀಯಕ್ಕಾಗಿ ಬಿಜೆಪಿ ಸರ್ಕಾರ ಬಳಸಿಕೊಂಡಿದೆ ಮತ್ತು ಅಯೋಧ್ಯೆ ಕಾರ್ಯಕ್ರಮವನ್ನು ಪ್ರಚಾರ ವೇದಿಕೆಯನ್ನಾಗಿ ಮಾಡಿದೆ ಎಂದು ದೇಶಾದ್ಯಂತ ವಿರೋಧ ಪಕ್ಷಗಳು ಟೀಕಿಸುತ್ತಿವೆ. ಈ ಹಿನ್ನಲೆಯಲ್ಲಿ, ಮುಸ್ಲಿಮರ ವಿರುದ್ಧ ದ್ವೇಷದ ರಾಜಕಾರಣ, ರಾಮನ ಹೆಸರಿನಲ್ಲಿ ಗೆಲುವು ಸಾಧಿಸಿದೆ ಎಂದು ತಿರುಮಾವಳವನ್ ಟೀಕಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿದಂತೆ ವಿಡುದಲೈ ಚಿರುತ್ತೈಗಳ್ (ಲಿಬರೇಶನ್ ಟೈಗರ್ಸ್) ಪಕ್ಷದ ನಾಯಕ ಹಾಗೂ ಸಂಸದ ತೊಲ್.ತಿರುಮಾವಳವನ್ ಪ್ರಕಟಿಸಿದ ‘ಎಕ್ಸ್’ ಸೈಟ್ ಪೋಸ್ಟ್‌ನಲ್ಲಿ, “ಮುಸ್ಲಿಮರ ವಿರುದ್ಧ ದ್ವೇಷದ ರಾಜಕಾರಣ ರಾಮನ ಹೆಸರಿನಲ್ಲಿ ಗೆಲುವು ಸಾಧಿಸಿದೆ.

ರಾಮ ಎಂಬ ಕ್ಷತ್ರಿಯ ಗುರುತನ್ನು ಆಯುಧವಾಗಿ ಬಳಸಿ, ಮೋದಿ ಎಂಬ ವೈಶ್ಯರೊಂದಿಗೆ ಸೇರಿ, ಅಮಾಯಕ ಶೂದ್ರ ಹಿಂದೂಗಳನ್ನು ಹಿಮ್ಮೆಟ್ಟಿಸಿ, ಅವರನ್ನು ಬೀಳಿಸಿದ ಬ್ರಾಹ್ಮಣ ಸನಾತನಿಯರ ರಾಜಕೀಯ ಜೂಜಿನ ವಿಜಯೋತ್ಸವವೇ ಅಯೋಧ್ಯೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ.

ಹಿಂದುತ್ವದ ಹೆಸರಿನಲ್ಲಿ, ಶೈವ ಧರ್ಮ ಸೇರಿದಂತೆ ಇತರ ಎಲ್ಲ ಹಿಂದೂ ಅಸ್ಮಿತೆಗಳನ್ನು ವೈಷ್ಣವೀಕರಣಗೊಳಿಸುವ ಷಡ್ಯಂತ್ರವನ್ನು ಪ್ರದರ್ಶಿಸಲಾಗಿದೆ. ಇದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಮಾತ್ರವಲ್ಲದೆ ಇಡೀ ರಾಷ್ಟ್ರ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ” ಎಂದು ಟೀಕಿಸಿದ್ದಾರೆ.