ಧನ್ಬಾದ್: ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನಡುವೆ ಧನ್ಬಾದ್‌ನಲ್ಲಿ ಡಿಸೆಂಬರ್ 1959 ರಲ್ಲಿ ಪಂಚೆಟ್ ಅಣೆಕಟ್ಟನ್ನು ತೆರೆಯಲಾಯಿತು. ಅದನ್ನು ಬುಡಕಟ್ಟು ಜನಾಂಗದವರೊಬ್ಬರಿಂದ ತೆರೆಯಬೇಕು ಎಂದು ಭಾವಿಸಿದ್ದ ಪ್ರಧಾನಿ ನೆಹರು, ಅಣೆಕಟ್ಟು ನಿರ್ಮಾಣದಲ್ಲಿ ತೊಡಗಿದ್ದ 16 ವರ್ಷದ ಸಂತಾಲ್ ಬುಡಕಟ್ಟು ಬಾಲಕಿ ಬಧ್ನಿ ಮಂಜಿಯಾನ್ ಅವರಿಂದ ಅಣೆಕಟ್ಟನ್ನು ಉದ್ಘಾಟಿಸಿದ್ದಾರೆ. ನಂತರ ಅವರನ್ನು ಮೆಚ್ಚಿಸಲಿಕ್ಕಾಗಿ ನೆಹರು ಅವರು ಬಧ್ನಿಗೆ ಹೂವಿನ ಹಾರವನ್ನು ಹಾಕಿದ್ದಾರೆ.
ಹೂವಿನ ಮಾಲೆಯ ಕಾರಣದಿಂದ, ಸಂತಾಲ್ ಬುಡಕಟ್ಟು ಜನಾಂಗದ ಸಂಪ್ರದಾಯದಂತೆ ನೆಹರು ಅವರು ಬಧ್ನಿ ಮಂಜಿಯಾನ್ ಅವರನ್ನು ವಿವಾಹವಾದರು ಎಂದು ಸಂತಾಲ್ ಬುಡಕಟ್ಟು ಜನಾಂಗದವರು ನಂಬಿದ್ದಾರೆ. ಮತ್ತು ಬುಡಕಟ್ಟು ಅಲ್ಲದವರನ್ನು ಮದುವೆಯಾದ ಕಾರಣಕ್ಕಾಗಿ ಸಂತಾಲ್ ಬುಡಕಟ್ಟು ಜನಾಂಗದವರು ಬಧ್ನಿಯನ್ನು ಬಹಿಷ್ಕರಿಸಿ, ಗ್ರಾಮಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದ್ದಾರೆ.
ಇದರಿಂದ ಬದ್ನಿಯ ಜೀವನವೇ ಬದಲಾಯಿತು. ನಂತರ ಅಲ್ಲಿಂದ ಹೊರಟು ಪಂಚೆಟ್ ಪ್ರದೇಶದಲ್ಲಿ ನೆಲೆಸಿದ್ದ ಬಧ್ನಿ, ಅಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆದರು.
ದೇಶದ ಮೊದಲ ಪ್ರಧಾನಿ ನೆಹರು ಅವರ ಮೊದಲ ಬುಡಕಟ್ಟು ಪತ್ನಿ ಎಂದು ಸ್ಥಳೀಯರಿಂದ ಕರೆಸಿಕೊಳ್ಳುತ್ತಿದ್ದ ಬಧ್ನಿ ಬಗ್ಗೆ ತಿಳಿದುಕೊಂಡ ರಾಜೀವ್ ಗಾಂಧಿ, 1985ರಲ್ಲಿ ಅವರು ಪ್ರಧಾನಿಯಾಗಿದ್ದಾಗ ಪಶ್ಚಿಮ ಬಂಗಾಳದ ಅಸನ್ಸೋಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿನ ಕಾಂಗ್ರೆಸ್ ನಾಯಕರ ಮೂಲಕ ಬಧ್ನಿ ಮಂಜಿಯಾನ್ ಅವರನ್ನು ಭೇಟಿಯಾದರು.
ಹಿಂದಿನ ದುರಂತವನ್ನು ಮೆಲುಕು ಹಾಕಿದ ಬಧ್ನಿಗೆ, ಪ್ರಧಾನಿ ರಾಜೀವ್ ಗಾಂಧಿ ‘ದಾಮೋದರ್ ಕಣಿವೆ ಕಾರ್ಪೊರೇಷನ್’ (ಡಿವಿಸಿ) ನಲ್ಲಿ ಉದ್ಯೋಗ ನೀಡಲು ಆದೇಶಿಸಿದರು. ಅಲ್ಲಿ ಕೆಲಸ ಮಾಡುತ್ತಿದ್ದ ಬಧ್ನಿ 2005ರಲ್ಲಿ ನಿವೃತ್ತರಾದರು. ಅವರು ನವೆಂಬರ್ 17 ರಂದು ತಮ್ಮ 80ನೇ ವಯಸ್ಸಿನಲ್ಲಿ ತಮ್ಮ ಮಗಳು ರತ್ನ ಅವರ ಮನೆಯಲ್ಲಿ ನಿಧನರಾಗಿದ್ದಾರೆ.