ಡಿ.ಸಿ.ಪ್ರಕಾಶ್
ಬಿಜೆಪಿಯ ಮೇಲೆ ಅದರ ಮಾತೃ ಸಂಘಟನೆಯಾದ ಆರ್ಎಸ್ಎಸ್ ಅತೃಪ್ತದಲ್ಲಿದೆ ಎಂಬ ಸುದ್ದಿ ಪ್ರಕಟವಾಗುತ್ತಲೇ ಇದೆ!
ಇತ್ತೀಚೆಗೆ ಬಿಜೆಪಿ ಮತ್ತು ಅದರ ಸಂಘಟನೆಯಾದ ಆರ್ಎಸ್ಎಸ್ ನಡುವೆ ಸಂಘರ್ಷ ನಡೆಯುತ್ತಿದೆ. ಅದರಲ್ಲೂ 2024ರ ಲೋಕಸಭೆ ಚುನಾವಣೆ ವೇಳೆಗೆ ಈ ಸಂಘರ್ಷ ಹೆಚ್ಚಿರುವುದನ್ನು ಕಾಣಬಹುದು.
ಬಿಜೆಪಿ ಅಧಿಕಾರದಲ್ಲಿರುವುದರಿಂದ ಆರ್ಎಸ್ಎಸ್ ಸಂಘಟನೆಗೆ ಮನ್ನಣೆ ನೀಡದಿರುವುದು ಆರ್ಎಸ್ಎಸ್ ನಿರ್ವಾಹಕರಿಗಾಗಿ ಸಿಟ್ಟು ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಬಿಜೆಪಿಗೆ ಬೆಂಬಲವಾಗಿ ಚುನಾವಣಾ ಕೆಲಸ ಮಾಡಿಲ್ಲ ಎಂಬ ಸುದ್ದಿ ಹೊರಬಿದ್ದಿರುವಾಗಲೇ ಆರ್ಎಸ್ಎಸ್ ಸಂಘಟನೆಯ ಮುಖವಾಣಿಯಾದ ‘ಆರ್ಗನೈಸರ್’ನಲ್ಲಿ ಈ ಕುರಿತು ಲೇಖನ ಪ್ರಕಟವಾಗಿದೆ.
ಆರ್ಎಸ್ಎಸ್ನ ರತನ್ ಶಾರದಾ ಅವರು ಈ ಲೇಖನವನ್ನು ಬರೆದಿದ್ದಾರೆ. ‘ಮೋದಿ 3.0 – ತಪ್ಪುಗಳನ್ನು ಸರಿಪಡಿಸಲಿಕ್ಕಾಗಿ ಒಂದು ಸಂಭಾಷಣೆ’ ಎಂಬ ಶೀರ್ಷಿಕೆಯ ಲೇಖನದಲ್ಲಿ, ‘ಬಿಜೆಪಿ ನಾಯಕರು ಮತ್ತು ಆಡಳಿತಗಾರರಿಗೆ ಬೀದಿಯಲ್ಲಿ ಧ್ವನಿಸುವ ಜನರ ಕೂಗು ಕೇಳುವುದಿಲ್ಲ. ಬದಲಿಗೆ, ಪ್ರಧಾನಿ ಮೋದಿಯವರ ಜನಪ್ರಿಯತೆಯ ಬೆಳಕಿನಲ್ಲಿ ಅವರು ಬಿಸಿಲು ಕಾಯುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
ಅಲ್ಲದೆ, ‘ಬಿಜೆಪಿ ನಾಯಕರು ತಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾದಲ್ಲಿದ್ದರು. ಆದರೆ ವಾಸ್ತವ ಏನೆಂಬುದನ್ನು ಚುನಾವಣಾ ಫಲಿತಾಂಶ ತೋರಿಸಿದೆ’ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ನೋಡಿದರೆ ಲೋಕಸಭೆ ಚುನಾವಣೆಯಲ್ಲಿ ಆರ್ಎಸ್ಎಸ್ ಸಂಘಟನೆ ಬಿಜೆಪಿ ಪರ ಕೆಲಸ ಮಾಡಿಲ್ಲ ಎಂಬ ವರದಿಗಳು ನಿಜ ಎಂಬುದನ್ನು ಈ ಲೇಖನ ಅಧಿಕೃತವಾಗಿ ಬಹಿರಂಗಪಡಿಸಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ವೇಳೆ ಆರ್ಎಸ್ಎಸ್ ನಾಯಕ ಮೋಹನ್ ಭಾಗವತ್ ಅವರು ಕೆಲವು ಹೇಳಿಕೆಗಳನ್ನು ವ್ಯಕ್ತಪಡಿಸಿದ್ದರು. ಆ ವೇಳೆ ‘ನಿಜವಾದ ಸೇವಕರು ದುರಹಂಕಾರಿಯಾಗಿರುವುದಿಲ್ಲ’ ಎಂದು ಬಿಜೆಪಿ ಸದಸ್ಯರನ್ನು ಪರೋಕ್ಷವಾಗಿ ಟೀಕಿಸಿದ್ದರು.’ಆರ್ಗನೈಸರ್’ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ‘ಚುನಾವಣಾ ಕೆಲಸಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಯಂಸೇವಕರನ್ನು (ಆರ್ಎಸ್ಎಸ್ ಕಾರ್ಯಕರ್ತರು) ಸಂಪರ್ಕಿಸಿಲ್ಲ’ ಎಂದು ಉಲ್ಲೇಖಿಸಲಾಗಿದೆ.
ಲೋಕಸಭೆ ಚುನಾವಣೆ ನಡೆಯುತ್ತಿರುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆರ್ಎಸ್ಎಸ್ ಮತ್ತು ಬಿಜೆಪಿ ನಡುವಿನ ಅಹಂಕಾರವನ್ನು (Ego) ಬಹಿರಂಗಪಡಿಸುವ ಕೆಲವು ಹೇಳಿಕೆಗಳನ್ನು ನೀಡಿದ್ದರು. ಅಂದರೆ, ‘ತನ್ನ ಸ್ವಂತ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುವ ಸ್ಥಿತಿಯಲ್ಲಿ ಬಿಜೆಪಿ ಇದೆ. ಅದಕ್ಕೆ ಆರ್ಎಸ್ಎಸ್ ಬೇಡ’ ಎಂದು ಅವರು ಹೇಳಿದರು.
ಅಲ್ಲದೆ, ವಾಜಪೇಯಿ ಪ್ರಧಾನಿಯಾಗಿದ್ದ ಸಮಯ ಹಾಗೂ ಮೋದಿ ಪ್ರಧಾನಿಯಾಗಿದ್ದ ಸಮಯವನ್ನು ಹೋಲಿಕೆ ಮಾಡಿ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ವಾಜಪೇಯಿ ಕಾಲದಲ್ಲಿ ಬಿಜೆಪಿ, ಆರ್ಎಸ್ಎಸ್ ಸಹಾಯ ಪಡೆಯುವ ಮಟ್ಟೆಕ್ಕೆ ಒಂದು ಸಣ್ಣ ಶಕ್ತಿಯಾಗಿತ್ತು. ಈಗ ಬಿಜೆಪಿ ಬೆಳೆದಿದೆ. ಯಾರ ಕೃಪಾಕಟಾಕ್ಷವೂ ಇಲ್ಲದೇ ಬಿಜೆಪಿ ಸ್ವಂತ ಬಲದಿಂದ ನಡೆಯುತ್ತಿದೆ’ ಎಂದು ಜೆ.ಪಿ.ನಡ್ಡಾ ಹೇಳಿದ್ದರು.
ಆದರೆ ಜೆ.ಪಿ.ನಡ್ಡಾ ಹೇಳಿದ್ದಕ್ಕೆ ವ್ಯತಿರಿಕ್ತವಾಗಿ ಲೋಕಸಭೆ ಚುನಾವಣೆ ಫಲಿತಾಂಶ ಬಂದಿದೆ. ಬಿಜೆಪಿ 370 ಮತ್ತು ಎನ್ಡಿಎ 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಬಿಜೆಪಿ ಗೆದ್ದಿರುವುದು 240 ಕ್ಷೇತ್ರಗಳಲ್ಲಿ ಮಾತ್ರ. ಸರ್ಕಾರ ರಚನೆಗೆ ಬೇಕಾದ 272 ಸಂಖ್ಯಾಬಲವನ್ನೂ ಬಿಜೆಪಿ ಮುಟ್ಟಲು ಸಾಧ್ಯವಾಗಲಿಲ್ಲ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಒಟ್ಟು 293 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಹೀಗಾಗಿ ಬಿಜೆಪಿ ನಾಯಕರು ಇದನ್ನು ಅರಿಯದೆ ತೇಲಾಡುತ್ತಿದ್ದಾರೆ ಎಂದು ಆರ್ಎಸ್ಎಸ್ ಕಡೆಯವರು ಹೇಳುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸುತ್ತಿರುವ ರಾಜಕೀಯ ವಿಮರ್ಶಕರು, “ಬಿಜೆಪಿ ಆರ್ಎಸ್ಎಸ್ ಹಿಡಿತದಲ್ಲಿರಬೇಕು. ಅವರ ರಾಜಕೀಯ ಅಜೆಂಡಾಗಳನ್ನು ಬಿಜೆಪಿ ಆಡಳಿತಗಾರರು ಈಡೇರಿಸಬೇಕು ಎಂದು ಆರ್ಎಸ್ಎಸ್ ನಿರೀಕ್ಷಿಸುತ್ತದೆ. ಆದರೆ ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವಷ್ಟು ಬೆಳೆದಿರುವಾಗ ಬಿಜೆಪಿ ನಾಯಕರು, ಆರ್ಎಸ್ಎಸ್ ಸಂಘಟನೆಯ ಮೇಲೆ ಅವಲಂಬಿತರಾಗಿರಲು ಬಯಸುತ್ತಿಲ್ಲ. ಅದುವೇ ಸಮಸ್ಯೆಗೆ ಕಾರಣ” ಎಂದು ಹೇಳುತ್ತಾರೆ.
ಮಣಿಪುರ ರಾಜ್ಯದಲ್ಲಿ ಜನಾಂಗೀಯ ಸಂಘರ್ಷಗಳಿಂದ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೂ, ಸಾವಿರಾರು ಮಂದಿ ಮನೆ ಕಳೆದುಕೊಂಡು, ಮಹಿಳೆಯರು ಅಧೋಗತಿಗೆ ಒಳಗಾಗಿದ್ದರೂ ಪ್ರಧಾನಿ ಮೋದಿ ಇದುವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ, ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು ‘ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಮೋದಿ ಸರ್ಕಾರದ ಭದ್ರತೆಯ ವೈಫಲ್ಯವೇ ಕಾರಣ’ ಎಂದು ಟೀಕಿಸಿದ್ದಾರೆ. ‘ಚುನಾವಣೆ ವಿಜಯೋತ್ಸವದ ಸಂಭ್ರಮ ಸಾಕು. ಮಣಿಪುರ ಶಾಂತಿಗಾಗಿ ಕಾಯುತ್ತಿದೆ’ ಎಂದು ಟೀಕಿಸಿದ್ದಾರೆ.
ಬೀದಿಗೆ ಬಂದ ಆರ್ಎಸ್ಎಸ್-ಬಿಜೆಪಿ ಘರ್ಷಣೆ ಇನ್ನೂ ತೀವ್ರವಾಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ? ಕಾಲವೇ ಉತ್ತರಿಸಬೇಕು.