ನವದೆಹಲಿ: ಕನ್ಸಲ್ಟೆನ್ಸಿ ಹೆಸರಿನಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ (Madhabi Puri Buch) ಅವರು ಮಹೀಂದ್ರಾ ಸೇರಿದಂತೆ ಕಂಪನಿಗಳಿಂದ 2.95 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಮಾಧವಿ ಬುಚ್ ಅವರು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ (SEBI) ಅಧ್ಯಕ್ಷರಾಗಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಹಲವಾರು ಆರೋಪಗಳನ್ನು ಮಾಡುತ್ತಿದೆ.
ಇಂದು ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರ, “ಸೆಬಿ ಮುಖ್ಯಸ್ಥೆ ಮಾಧವಿ ಅವರು 2016 ರಿಂದ 2024ರ ಅವಧಿಯಲ್ಲಿ ಮಹೀಂದ್ರಾದಿಂದ 2.95 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಅವರ ಸಲಹಾ ಸಂಸ್ಥೆ ಅಗೋರಾ ಅಡ್ವೈಸರಿ (Agora Advisory) ಮೂಲಕ ಮೊತ್ತವನ್ನು ಸ್ವೀಕರಿಸಲಾಗಿದೆ.
ಮಾಧವಿ ಈ ಕಂಪನಿ ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಅದು ತಪ್ಪು. ಆ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಹಣಕಾಸು ಕೂಡ ಪಡೆದಿದೆ. ಅದರಲ್ಲಿ ಮಾಧವಿ ಶೇ.99ರಷ್ಟು ಪಾಲು ಹೊಂದಿದ್ದಾರೆ. ಮಹೀಂದ್ರಾ ಅಲ್ಲದೆ ಡಾ.ರೆಡ್ಡೀಸ್, ಬಿಡ್ಲೈಟ್, ಐಸಿಐಸಿಐ, ಸೆಂಬ್ಕಾರ್ಪ್, ವಿಸು ಲೀಸಿಂಗ್ ಮುಂತಾದ ಕಂಪನಿಗಳು ಮಾಧವಿಯವರ ಅಗೋರಾ ಕಂಪನಿ ಸೇವೆಯನ್ನು ಪಡೆದುಕೊಂಡಿವೆ.
ಕಳೆದ ತಿಂಗಳು, ಐಸಿಐಸಿಐ ಬ್ಯಾಂಕ್‌ನಲ್ಲಿ ಉಭಯ ಸ್ಥಾನಗಳನ್ನು ನಿರ್ವಹಿಸುವ ಮೂಲಕ 16.80 ಕೋಟಿ ರೂಪಾಯಿ ಲಾಭ ಗಳಿಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಬ್ಯಾಂಕಿನವರೇ ಅದನ್ನು ನಿರಾಕರಿಸಿದ್ದು, ಇಂದು ಮತ್ತೊಂದು ಹೊಸ ಆರೋಪವನ್ನು ಕಾಂಗ್ರೆಸ್ ಮಾಡಿದೆ.