ಬೆಂಗಳೂರು: ವಾಲ್ಮಿಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ಕುರಿತಾದ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.
“ವಾಲ್ಮಿಕಿ ನಿಗಮದ ಪ್ರಕರಣದಲ್ಲಿ ಆರ್.ಅಶೋಕ್, ವಿಜಯೇಂದ್ರ ನನ್ನ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ವಿಶೇಷ ತನಿಖಾ ತಂಡವನ್ನು ಹಿಂದಕ್ಕೆ ಪಡೆಯಿರಿ ಎಂದು ಹೇಳಿದ್ದಾರೆ. ನೀವು ಗೃಹ ಮಂತ್ರಿ ಆಗಿದ್ದಾಗಲೂ ಎಸ್.ಐ.ಟಿ ಬಗ್ಗೆ ಹೀಗೆ ಹೇಳಿದ್ದೀರಾ? ಎಂಬುದನ್ನು ಅವರಲ್ಲಿ ಕೇಳಬಯಸುತ್ತೇನೆ” ಎಂದು ಹೇಳಿದರು.
“ಮೇ 26 ರಂದು ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡರು. ಇವರು ತಮಿಳುನಾಡಿನ ಬೋವಿ ಸಮುದಾಯದವರು. ವಿರೋಧ ಪಕ್ಷದವರು ಸಾವಿರ ಸಾರಿ ದಲಿತ, ದಲಿತ ಎಂದು ಮಾತನಾಡಿದ್ದಾರೆ” ಎಂದರು.
“ಸಂವಿಧಾನದಲ್ಲಿ ಪರಿಶಿಷ್ಟ ಜಾತಿ/ವರ್ಗ ಎನ್ನುವ ಉಲ್ಲೇಖ ಇದೆ. ಇಬ್ಬರೂ ಸೇರಿ 24.1% ಜನಸಂಖ್ಯೆ ಇದ್ದಾರೆ. ಇವರ ಅಭಿವೃದ್ಧಿ ಆದರೆ ಮಾತ್ರ ಸಮ ಸಮಾಜದ ಆಶಯ ಈಡೇರುತ್ತದೆ. ಈ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆ ಇರುವವರೆಗೂ ಸಮಾನತೆ ಸಾಧ್ಯವಿಲ್ಲ. ಸಂವಿಧಾನ ಬಂದು 70 ವರ್ಷ ಆದರೂ ಸಮಾನತೆ ಸಿಕ್ಕಿಲ್ಲ. ಇದನ್ನು ಸರಿಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ವಾಲ್ಮಿಕಿ, ಬೋವಿ, ಆದಿಜಾಂಭವ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸೇರಿ ಹಲವು ಅಭಿವೃದ್ಧಿ ನಿಗಮಗಳನ್ನು ಆರಂಭಿಸಲಾಗಿದೆ. ಈ ಎಲ್ಲಾ ನಿಗಮಗಳ ಉದ್ದೇಶ ಆಯಾ ಸಮುದಾಯಗಳನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವುದೇ ಆಗಿದೆ” ಎಂದು ಹೇಳಿದರು.
“2013ರ ಡಿಸೆಂಬರ್ ನಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆ ಜಾರಿಗೆ ಕೊಟ್ಟಿದ್ದು ನಮ್ಮ ಸರ್ಕಾರ. ಬಜೆಟ್‌ನ 24.1% ಅಭಿವೃದ್ಧಿ ಹಣ ಈ ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಕಡ್ಡಾಯ ಮಾಡಿದ್ದು ನಾನು. ವಿಪಕ್ಷಗಳು ಬರೀ ಮೊಸಳೆ ಕಣ್ಣೀರು ಹರಿಸುತ್ತಿವೆ” ಎಂದು ಹೇಳಿದರು.
“1949ರ ನವೆಂಬರ್ 25 ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ‘ಜನವರಿ 26-1950ಕ್ಕೆ ಸಂವಿಧಾನ ಜಾರಿಗೆ ಬರುತ್ತಿದೆ. ನಾವೆಲ್ಲರೂ ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ’ ಎಂದು ಚರಿತ್ರಾರ್ಹವಾದ ಭಾಷಣದಲ್ಲಿ ಹೇಳಿದ್ದರು. ನಾವು ಪ್ರಜಾಪ್ರಭುತ್ವ ಒಪ್ಪಿಕೊಂಡಿದ್ದೇವೆ. ಇಲ್ಲಿ ಇನ್ನೂ ಆರ್ಥಿಕವಾಗಿ, ಸಾಮಾಜಿಕವಾಗಿ ಅಸಮಾನತೆ ಉಳಿದುಕೊಂಡಿರುವುದರಿಂದ ಅದನ್ನು ನಿವಾರಣೆ ಮಾಡದಿದ್ದರೆ ಜನರೇ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆಂಬ ಎಚ್ಚರಿಕೆ ಕೊಟ್ಟಿದ್ದರು” ಎಂದು ಹೇಳಿದರು.
“ಇಡೀ ದೇಶದಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆ ತಂದವರು ನಾವು. ಪರಿಶಿಷ್ಠ ಸಮುದಾಯಗಳ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಕೇಂದ್ರದ ಬಿಜೆಪಿಯಾಗಲಿ, ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಾಗಲಿ ಈ ಕಾಯ್ದೆಯನ್ನು ಏಕೆ ಜಾರಿಗೆ ತಂದಿಲ್ಲ? ಇಡೀ ದೇಶದಲ್ಲಿ ನಾವು ಮಾತ್ರ ಇಂಥಾ ಪರಿಣಾಮಕಾರಿ ಕಾಯ್ದೆಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳಿಗಾಗಿ ಜಾರಿ ಮಾಡಿದ್ದೇವೆ.
ಗುತ್ತಿಗೆಯಲ್ಲೂ ಎಸ್.ಸಿ / ಎಸ್.ಟಿ ಸಮುದಾಯಗಳಿಗೆ ಮೀಸಲಾತಿ ಜಾರಿ ಮಾಡಿರುವುದು ನಾವು ಮಾತ್ರ. ಇಂಥದ್ದನ್ನು ಬಿಜೆಪಿಯವರು ಇದುವರೆಗೂ ಏಕೆ ಜಾರಿ ಮಾಡಿಲ್ಲ?” ಎಂದು ಪ್ರಶ್ನಿಸಿದರು.
“ಎಸ್.ಸಿ / ಎಸ್.ಟಿ ಉದ್ದಿಮೆಗಳಿಗೆ / ಉದ್ಯಮಗಳಿಗೆ ವಿಶೇಷ ಸಾಲದ ಸವಲತ್ತು , KIADB ಭೂಮಿ ವಿಚಾರದಲ್ಲಿ ಈ ಸಮುದಾಯಗಳಿಗೆ ಅನುಕೂಲ ಮಾಡಿ ಕಾನೂನು ತಂದವರು ನಾವು. ನಾವು ಎಸ್.ಸಿ / ಎಸ್.ಟಿ ಸಮುದಾಯದವರ ವಿರೋಧಿಯಾಗಿದ್ದರೆ ಇಷ್ಟೆಲ್ಲವನ್ನೂ ಜಾರಿ ಮಾಡುತ್ತಿದ್ದೆವಾ?
ಕಾಂಗ್ರೆಸ್ ಇರುವವರೆಗೂ, ನಾನು ಇರುವವರೆಗೂ ಸಾಮಾಜಿಕ ನ್ಯಾಯಕ್ಕೆ ನಾವು ಬದ್ಧರು. ವಿಪಕ್ಷಗಳಿಂದ ಸಾಮಾಜಿಕ ನ್ಯಾಯದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ” ಎಂದು ಕಿಡಿಕಾರಿದರು.