ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ವಕ್ಫ್ ಬೋರ್ಡ್ Archives » Dynamic Leader
December 3, 2024
Home Posts tagged ವಕ್ಫ್ ಬೋರ್ಡ್
ದೇಶ

ಗುರ್ಗಾನ್: ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ವಕ್ಫ್ ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.

ಹರಿಯಾಣದ ಗುರ್ಗಾನ್ನ (Gurgaon) ಬಾದಶಾಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill 2024) ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಿದ್ದೇವೆ. ಇದರೊಂದಿಗೆ ಮಂಡಳಿಯ ಕೋರಿಕೆಯಂತೆ ಹಣ ವಿತರಣೆಗೂ ಅನುಮತಿ ನೀಡಲಾಗಿದೆ.

ಈ ಮಸೂದೆಗೆ ಸಂಬಂಧಿಸಿದಂತೆ ವಕ್ಫ್ ಮಂಡಳಿಯ ಪ್ರತಿನಿಧಿಗಳು ಮಾಡಿರುವ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ. ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುವ ಬಿಜೆಪಿಯ ಜಗದಾಂಬಿಕಾ ಪಾಲ್ ಅವರು ಮಸೂದೆಯ ಸಂಪೂರ್ಣ ವಿವರಗಳನ್ನು ಅಧ್ಯಯನ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್

ವಕ್ಫ್ ಬೋರ್ಡ್ ತಿದ್ದುಪಡಿ ಕುರಿತು ಅಧ್ಯಯನ ನಡೆಸಲು ರಚಿಸಲಾದ ಜಂಟಿ ಸದನ ಸಮಿತಿಗೆ 1.25 ಕೋಟಿ ಪ್ರತಿಕ್ರಿಯೆಗಳು ಬಂದಿವೆ. ಇದರಲ್ಲಿ ವಿದೇಶಿಯರ ಪಾತ್ರವಿರಬಹುದೆಂದು ಬಿಜೆಪಿ, ಸಂಸದ ನಿಶಿಕಾಂತ್ ದುಬೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಕಾಂಗ್ರೆಸ್ ಖಂಡಿಸಿದೆ.

ವಕ್ಫ್ ಬೋರ್ಡ್ (Waqf Board) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ತಂದಿತು. ಲೋಕಸಭೆಯಲ್ಲಿ ಮಂಡನೆಯಾದ ಈ ಮಸೂದೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿತು. ಚರ್ಚೆಯ ಸಂದರ್ಭದಲ್ಲಿ ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಿಗಣನೆಗೆ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದರು. ಇದರ ನಂತರ, ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಯಿತು.

ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ (Jagdambika Pal) ನೇತೃತ್ವದ ಈ ಸಮಿತಿಗೆ ವಿವಿಧ ಪಕ್ಷಗಳ ಸದಸ್ಯರನ್ನು ನೇಮಿಸಲಾಗಿದೆ. ತಂಡವು ವಿವಿಧ ಪಕ್ಷಗಳಿಂದ ಸಲಹೆ ಪಡೆಯುತ್ತಿದೆ. ಸಾರ್ವಜನಿಕರು, ದತ್ತಿ ಸಂಸ್ಥೆಗಳು ಮತ್ತು ತಜ್ಞರು ಇಮೇಲ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದು ಸಮಿತಿ ತಿಳಿಸಿತ್ತು. ಇದೀಗ ಇಮೇಲ್ ಮೂಲಕ 1.25 ಕೋಟಿ ಅಭಿಪ್ರಾಯಗಳು ದಾಖಲಾಗಿವೆ. ಈ ಮಟ್ಟಿಗೆ ಅಭಿಪ್ರಾಯಗಳು ಬರುತ್ತವೆ ಎಂದು ಸಂಸತ್ತಿನ ಜಂಟಿ ಸಮಿತಿಯೇ ನಿರೀಕ್ಷಿಸಿರಲಿಲ್ಲ.

ಅನುಮಾನ
ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಕಳುಹಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey),  ‘ಜಂಟಿ ಸಮಿತಿಗೆ ಬಂದಿರುವ ಪ್ರತಿಕ್ರಿಯೆಗಳು ಹಿಂದೆಂದೂ ಕಾಣದು. ಇದು ವಿಶ್ವದಾಖಲೆ ಸೃಷ್ಟಿಸಿದೆ. ಇದರ ಹಿಂದೆ ಚೀನಾ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ, ಝಾಕಿರ್ ನಾಯಕ್ ಮುಂತಾದವರ ಕೈವಾಡ ಇರುವ ಸಾಧ್ಯತೆ ಇದೆ.

ವಿದೇಶಿ ಸಂಘಟನೆಗಳು ಅಥವಾ ಸಂಸ್ಥೆಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಅತಿಯಾಗಿ ಪ್ರತಿಕ್ರಿಯಿಸುವಲ್ಲಿ ತೊಡಗಿರುವ ಶಂಕೆ ಇದೆ. ಎಲ್ಲ ಉತ್ತರಗಳು ಎಲ್ಲಿಂದ ಬರುತ್ತಿವೆ ಎಂದು ಕೇಂದ್ರ ಗೃಹ ಸಚಿವಾಲಯದಿಂದ ವಿವರವಾದ ತನಿಖೆಯಾಗಬೇಕು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಲ್ಪನೆ
ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರರು, ‘ಇಷ್ಟೊಂದು ಪ್ರತಿಕ್ರಿಯೆಗಳು ಬರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ವಾಸ್ತವವಾಗಿ, ಜಂಟಿ ಸದನ ಸಮಿತಿಗೆ 1.25 ಕೋಟಿ ಅಭಿಪ್ರಾಯಗಳು ಬಂದಿದೆ ಎಂದು ಕಡಿಮೆಗೊಳಿಸಿ ಹೇಳಲಾಗುತ್ತಿದೆ. 3.7 ಕೋಟಿ ಮುಸ್ಲಿಮರು ನಮ್ಮ ಪರವಾಗಿ ಅಭಿಪ್ರಾಯಗಳನ್ನು ಕಳುಹಿಸಿದ್ದಾರೆ. ಇತರ ಮುಸ್ಲಿಂ ಸಂಘಟನೆಗಳೂ ವಕ್ಫ್ ಬೋರ್ಡ್ ಕಾಯಿದೆ ತಿದ್ದುಪಡಿ ಕುರಿತು ಪ್ರತಿಕ್ರಿಯೆಗಳನ್ನು ಕಳುಹಿಸಿವೆ. ಈ ಮೂಲಕ ಜಂಟಿ ಸದನ ಸಮಿತಿಗೆ 5 ಕೋಟಿ ಪ್ರತಿಕ್ರಿಯೆಗಳು ಬಂದಿರಬಹುದು.

ಸರ್ಕಾರ ಕೇಳಿದ್ದಕ್ಕೆ ಉತ್ತರಗಳು ಬಂದಿವೆ; ಇಷ್ಟೊಂದು ಜನ ಸ್ಪಂದಿಸಿರುವುದರಲ್ಲಿ ಸಮಸ್ಯೆ ಏನಿದೆ? ವಿದೇಶಿಯರ ಪಾತ್ರ ಎಂಬುದೆಲ್ಲ ಕಾಲ್ಪನಿಕ. ಏಕರೂಪ ನಾಗರಿಕ ಸಂಹಿತೆಯ (UCC) ಬಗ್ಗೆ 4.85 ಕೋಟಿ ಜನರು ಅಭಿಪ್ರಾಯಗಳನ್ನು ಕಳುಹಿಸಿದ್ದರು’ ಎಂದು ಹೇಳಿದ್ದಾರೆ.

ಖಂಡನೆ
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಶಕ್ತಿ ಸಿನ್ಹಾ ಗೋಹಿಲ್ (Shaktisinh Gohil), ‘ಭಾರತದಂತಹ ದೊಡ್ಡ ದೇಶದಲ್ಲಿ 1.5 ಕೋಟಿ ಜನರು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದು ಬಿಜೆಪಿಗೆ ನೋವು ತಂದಿದೆ. ಈ ಮೂಲಕ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

ರಾಜಕೀಯ

ನವದೆಹಲಿ: ವಕ್ಫ್ ಬೋರ್ಡ್ (Waqf Board) ತಿದ್ದುಪಡಿ ವಿಧೇಯಕವನ್ನು ಅಧ್ಯಯನ ಮಾಡಲು ರಚಿಸಲಾದ ಜಂಟಿ ಸಂಸದೀಯ ಸಮಿತಿಯು ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ತಮ್ಮ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ನೀಡಲು ಎಲ್ಲಾ ಪಕ್ಷದವರನ್ನೂ ಆಹ್ವಾನಿಸಿದೆ.

ವಕ್ಫ್ ಬೋರ್ಡ್ ಆಸ್ತಿಗಳನ್ನು ಅಂತರ್ಜಾಲದ ಮೂಲಕ ನೋಂದಣಿ ಮಾಡಿ ಸುಧಾರಣೆ ತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಇದಕ್ಕಾಗಿ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಕಳೆದ 8 ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.

ಇದರಲ್ಲಿ, ಕೇಂದ್ರೀಯ ವಕ್ಫ್ ಕೌನ್ಸಿಲ್ ರಚನೆ ಮಾಡುವುದಾಗಿ ಮತ್ತು ರಾಜ್ಯ ವಕ್ಫ್ ಮಂಡಳಿಗೆ ಮುಸ್ಲಿಂ ಮಹಿಳೆಯರು ಹಾಗೂ ಮುಸ್ಲಿಮೇತರ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಅಲ್ಲದೆ, ಆಸ್ತಿ ವಕ್ಫ್ ಬೋರ್ಡ್ ಭೂಮಿಯೇ ಅಥವಾ ಸರ್ಕಾರಿ ಭೂಮಿಯೇ ಎಂಬುದನ್ನು ಜಿಲ್ಲಾಧಿಕಾರಿ ನಿರ್ಧರಿಸುತ್ತಾರೆ ಎಂದೂ ತಿದ್ದುಪಡಿ ಮಸೂದೆಯಲ್ಲಿ ಹೇಳಲಾಗಿದೆ.

ಇದಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದು ಮುಸ್ಲಿಂ ವಿರೋಧಿ ನಡೆ ಮತ್ತು ಸಂವಿಧಾನದ ಮೇಲಿನ ದಾಳಿ ಎಂದು ವಿರೋಧ ಪಕ್ಷದ ಸಂಸದರು ಆರೋಪಿಸಿದ್ದರು. ತರುವಾಯ, ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಜಂಟಿ ಸಂಸದೀಯ ಸಮಿತಿಯ ಪರಿಗಣನೆಗೆ ಕಳುಹಿಸಲಾಯಿತು.

ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ (Jagdambika Pal) ನೇತೃತ್ವದ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಯಿತು. ಇದರ ಮೊದಲ ಸಭೆ ಈಗಾಗಲೇ ನಡೆದಿದ್ದು, ಎರಡನೇ ಸಭೆ ನಿನ್ನೆ ದೆಹಲಿಯಲ್ಲಿ ನಡೆದಿದೆ.

ಇದರಲ್ಲಿ ಮುಂಬೈನ ಅಖಿಲ ಭಾರತ ಸುನ್ನಿ ಜಮೀಯತುಲ್ ಉಲಮಾ ಸಂಘಟನೆ, ದೆಹಲಿಯಲ್ಲಿರುವ ನಾಗರಿಕ ಹಕ್ಕುಗಳಿಗಾಗಿ ಭಾರತೀಯ ಮುಸ್ಲಿಮರು (ICMR) ಮುಂತಾದ ಸಂಸ್ಥೆಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಈ ಹಿನ್ನೆಲೆಯಲ್ಲಿ, ಲೋಕಸಭೆಯ ಕಾರ್ಯದರ್ಶಿ ನಿನ್ನೆ ಹೊರಡಿಸಿದ ಅಧಿಸೂಚನೆಯಲ್ಲಿ, ‘ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ದತ್ತಿ ಸಂಸ್ಥೆಗಳು, ತಜ್ಞರು ಮತ್ತು ಸಂಘಟನೆಗಳು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ವ್ಯಕ್ತಪಡಿಸಬಹುದು ಎಂದು ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿ ಮನವಿ ಮಾಡಿದೆ.

ಹಾಗಾಗಿ 15 ದಿನದೊಳಗೆ ಎಲ್ಲ ಪಕ್ಷಗಳು ತಮ್ಮ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಈ ಸಮಿತಿಗೆ ಸಲ್ಲಿಸಬಹುದು. ಲಿಖಿತ ಅಭಿಪ್ರಾಯಗಳನ್ನು ಸಲ್ಲಿಸುವುದರ ಜೊತೆಗೆ, ಸಮಿತಿಯ ಮುಂದೆ ಹಾಜರಾಗಲು ಮತ್ತು ತಮ್ಮ ವಿವರಣೆಯನ್ನು ನೀಡಲು ಬಯಸುವವರು ಪತ್ರದ ಮೂಲಕ ತಮ್ಮ ಆದ್ಯತೆಯನ್ನು ವ್ಯಕ್ತಪಡಿಸಬಹುದು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ದೇಶ

ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ. ಧಾರ್ಮಿಕ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಬಳಸಲು ಮುಸ್ಲಿಮರು ಚರ ಮತ್ತು ಸ್ಥಿರ ಆಸ್ತಿಯನ್ನು ದಾನ ಮಾಡುತ್ತಾರೆ. ಈ ದೇಣಿಗೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ರಾಜ್ಯಗಳಲ್ಲಿ ವಕ್ಫ್ ಮಂಡಳಿಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಕ್ಫ್ ಕೌನ್ಸಿಲ್‌ಗಳಿವೆ. ಇದಲ್ಲದೇ ವಕ್ಫ್ ಟ್ರಿಬ್ಯೂನಲ್ ಕೂಡ ಇದೆ.

ವಕ್ಫ್ ಬೋರ್ಡ್ ಕಾಯ್ದೆ 1995ರಲ್ಲಿ, ವಕ್ಫ್ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹಲವಾರು ನಿಬಂಧನೆಗಳನ್ನು ಮಾಡಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ 2013ರಲ್ಲಿ, ಇದರಲ್ಲಿ ಹಲವು ನಿಬಂಧನೆಗಳನ್ನು ಸಡಿಲಗೊಳಿಸಲಾಯಿತು ಮತ್ತು ಉದಾರೀಕರಣಗೊಳಿಸಲಾಯಿತು.

ಪ್ರಸ್ತುತ, 9.4 ಲಕ್ಷ ಎಕರೆ ಪ್ರದೇಶದಲ್ಲಿ 8.7 ಲಕ್ಷ ಆಸ್ತಿಗಳು ದೇಶಾದ್ಯಂತ ವಕ್ಫ್ ಮಂಡಳಿಗಳ ಒಡೆತನದಲ್ಲಿದೆ. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರುವ ಹೊಸ ಮಸೂದೆಯನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್, ಸಮಾಜವಾದಿ ಸೇರಿದಂತೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ.

ಮಸೂದೆಯ ಕೆಲವು ಮುಖ್ಯಾಂಶಗಳು:
ಕುಟುಂಬದ ಆಸ್ತಿಯಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸಲಾಗುವುದು.

ವಕ್ಫ್ ಆಸ್ತಿಗಳನ್ನು ಸರ್ವೆ ಆಯುಕ್ತರಿಂದ ಜಿಲ್ಲಾಧಿಕಾರಿಯವರೆಗೆ ಅಥವಾ ಜಿಲ್ಲಾಧಿಕಾರಿ ನೇಮಿಸಿಸುವ ಉಪ ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುವುದು.

ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರು ಭಾಗವಹಿಸುವಿಕೆಯನ್ನು ಖಾತ್ರಿಪಡಿಸಲಾಗುವುದು.

ಬೋರ ಮತ್ತು ಅಗಕಾನಿಗಳಿಗೆ ಪ್ರತ್ಯೇಕ ಮಂಡಳಿ ಸ್ಥಾಪಿಸಲಾಗುವುದು. ವಕ್ಫ್ ಬೋರ್ಡ್‌ಗಳು ಸುನ್ನಿ, ಶಿಯಾ, ಬೋರಾ, ಅಗಾಕಾನಿಗಳು ಮತ್ತು ಆ ಧರ್ಮದ ಹಿಂದುಳಿದ ವರ್ಗಗಳನ್ನು ಒಳಗೊಂಡಿರಬೇಕು.

ಎಲ್ಲಾ ವಕ್ಫ್ ಆಸ್ತಿಗಳನ್ನು ಸಾಮಾನ್ಯ ಕೇಂದ್ರ ತಾಣದ ಮೂಲಕ ನೋಂದಾಯಿಸಬೇಕು. ಅದರ ಮಾಹಿತಿಯನ್ನು ಕ್ರೋಢೀಕರಿಸಬೇಕು.

ಆಸ್ತಿಯನ್ನು ನೋಂದಾಯಿಸುವ ಮೊದಲು, ಕಂದಾಯ ಕಾನೂನುಗಳನ್ನು ಅನುಸರಿಸಬೇಕು. ಮತ್ತು ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಲಾಗುವುದು.

ವಕ್ಫ್ ಆಸ್ತಿಗಳಿಗೆ, ಇನ್ನು ವಕ್ಫ್ ಬೋರ್ಡ್‌ಗಳು ಮಾತ್ರ ಅಧಿಕಾರವಲ್ಲ.

ವಕ್ಫ್ ಮಂಡಳಿಯ ಆಸ್ತಿಗಳು ಮತ್ತು ಅದರ ಚಟುವಟಿಕೆಗಳಿಂದ ಸಿಗುವ ಆದಾಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕೇಂದ್ರ ತಾಣದಲ್ಲಿ ಪೋಸ್ಟ್ ಮಾಡಬೇಕು.

ನ್ಯಾಯಮಂಡಳಿ ವ್ಯವಸ್ಥೆಯನ್ನು ಪರಿಷ್ಕರಿಸಲಾಗುವುದು. ಮತ್ತು ನ್ಯಾಯಾಧಿಕರಣದ ತೀರ್ಪನ್ನು ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಬಹುದು. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಸುಧಾರಣೆಗಳನ್ನು ಕೈಗೊಳ್ಳುವ ಸಲುವಾಗಿ ಹೊಸ ಮಸೂದೆಯಲ್ಲಿ ಹಲವು ತಿದ್ದುಪಡಿಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ.

ರಾಜ್ಯ

“ಮೂಲತಃ ಬಿಜೆಪಿಯು ಯಾವಾಗಲೂ ವಕ್ಫ್ ಬೋರ್ಡ್ ವಿರುದ್ಧವಾಗಿದೆ. ಇದರ ಮುಂದುವರಿದು ಈಗ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಬಿಜೆಪಿ ವಕ್ಫ್ ಬೋರ್ಡ್ ಅನ್ನು ರದ್ದುಪಡಿಸಲು ಬಯಸುತ್ತದೆ!”- ಕರ್ನಾಟಕ ಮುಸ್ಲಿಂ ಯುನಿಟಿ

“ಭಾರತದ ವಕ್ಫ್ 1954ರ ಕಾಯ್ದೆಯಡಿ ಸಂವಿಧಾನಬದ್ದ ಮಂಡಳಿಯಾಗಿ ರಚನೆ ಗೊಂಡಿದೆ. ಅಧಿಕೃತವಾಗಿ ಭಾರತ ಸರ್ಕಾರದಿಂದ ಸ್ಥಾಪಿತವಾದ ಭಾರತೀಯ ಶಾಸನಬದ್ದ ಸಂಸ್ಥೆಯಾಗಿದೆ. ಇಂದಿನ ವಕ್ಫ್ ಮಂಡಳಿಗೆ ಒಳಪಟ್ಟ ಎಲ್ಲಾ ಆಸ್ತಿಗಳು ಹಲವಾರು ದಶಕಗಳಿಂದ ಮುಸ್ಲಿಮರು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಶಾಶ್ವತವಾಗಿ ನೀಡಲ್ಪಟ್ಟ ದೇಣಿಗೆಗಳು, ಅದು ಚರ ಅಥವಾ ಸ್ಥಿರ ಆಸ್ತಿಗಳು ಎಲ್ಲವೂ ಶಾಶ್ವತ ಸಮರ್ಪಣೆಗಳೇ ಆಗಿವೆ.

ಇಡೀ ಭಾರತದ ಮುಸ್ಲಿಮರಿಂದ ಪಡೆದ ಅನುದಾನದಿಂದಲೇ ವಕ್ಫ್ ಆಸ್ತಿಗಳನ್ನು ಸಂಗ್ರಹಿಸಲಾಗಿದೆಯೇ ಹೊರತು ಯಾವುದೇ ರಾಜ್ಯಗಳ ಅಥವಾ ಕೇಂದ್ರ ಸರ್ಕಾರಗಳಿಂದ ಪಡೆದ ಆಸ್ತಿಗಳಲ್ಲ. ಇಂತಹ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿರುವುದು ಖಂಡನೀಯ” ಎಂದು ಕರ್ನಾಟಕ ಮುಸ್ಲಿಂ ಯುನಿಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

“ವಕ್ಫ್ ಮಂಡಳಿಯ ಅಧಿಕಾರ ಮತ್ತು ಅದರ ಕಾರ್ಯಚಟುವಟಿಕೆಗೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಸೂದೆಯನ್ನು ತರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಈ ನಿಲುವು ಸಂವಿಧಾನ ವಿರೋಧಿಯಾಗಿದೆ.

ಮೂಲತಃ ಬಿಜೆಪಿಯು ಯಾವಾಗಲೂ ವಕ್ಫ್ ಬೋರ್ಡ್ ವಿರುದ್ಧವಾಗಿದೆ. ಇದರ ಮುಂದುವರಿದು ಈಗ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಬಿಜೆಪಿ ವಕ್ಫ್ ಬೋರ್ಡ್ ಅನ್ನು ರದ್ದುಪಡಿಸಲು ಬಯಸುತ್ತದೆ. ಕೇಂದ್ರ ಸರ್ಕಾರವೇ ಈ ಮಸೂದೆಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ.

ನಮ್ಮ ದೇಶದಲ್ಲಿ 1995ರ ವಕ್ಫ್ ಕಾಯ್ದೆ ಇದ್ದು, 2013ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರ ಅಡಿಯಲ್ಲಿಯೇ ವಕ್ಫ್ ಆಸ್ತಿ ನಿರ್ವಹಣೆ ಮಾಡಲಾಗುತ್ತಿದೆ.

ಯಾವುದೇ ಭೂಮಿಯನ್ನು ತನ್ನ ಸ್ವಂತ ಆಸ್ತಿ ಎಂದು ಘೋಷಿಸುವ ವಕ್ಫ್ ಮಂಡಳಿಯ ಪರಮಾಧಿಕಾರವನ್ನು ಕಡಿತಗೊಳಿಸುವುದು ಸೇರಿದಂತೆ ವಕ್ಫ್ ಕಾಯ್ದೆಯಲ್ಲಿ ಹಲವಾರು ತಿದ್ದುಪಡಿಗಳನ್ನು ತರುವ ಮಸೂದೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ.

ಈ ಹೊಸ ಮಸೂದೆಯು ವಕ್ಫ್ ಕಾಯ್ದೆಯಲ್ಲಿ ಸುಮಾರು 40 ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಯೋಜನೆ ಹೊಂದಿದೆ. ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಈಗಲೇ ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ.

ಕರಡು ಮಸೂದೆಯು ಪ್ರಸ್ತಾಪಿಸಿದ ಪ್ರಮುಖ ತಿದ್ದುಪಡಿಗಳಲ್ಲಿ ವಕ್ಫ್ ಬೋರ್ಡ್‌ಗಳ ಪುನರ್‌ ರಚನೆ, ಮಂಡಳಿಗಳ ಸಂಯೋಜನೆಯನ್ನು ಬದಲಾಯಿಸುವುದು, ಮಂಡಳಿಯು ವಕ್ಫ್‌ ಆಸ್ತಿ ಎಂದು ಘೋಷಿಸುವ ಮೊದಲು ಭೂಮಿಯ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಾಯ್ದೆಯ ಕೆಲವು ಷರತ್ತುಗಳನ್ನು ರದ್ದುಗೊಳಿಸುವುದು ಸೇರಿದೆ.

ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಸಂಯೋಜನೆಯನ್ನು ಬದಲಾಯಿಸುವುದು ಮತ್ತು ವಕ್ಫ್ ಕಾಯ್ದೆಯ ಸೆಕ್ಷನ್ 9 ಮತ್ತು ಸೆಕ್ಷನ್ 14ಕ್ಕೆ ತಿದ್ದುಪಡಿ ತರುವುದು ಮತ್ತು ರಾಜ್ಯ ವಕ್ಫ್ ಮಂಡಳಿಗಳು ತನ್ನದೆಂದು ಹೇಳಿಕೊಂಡಿರುವ ವಿವಾದಿತ ಭೂಮಿಯನ್ನು ಹೊಸದಾಗಿ ಪರಿಶೀಲಿಸಲು ಮಸೂದೆಯು ಪ್ರಸ್ತಾಪಿಸಿದೆ ಎಂದು ತಿಳಿದು ಬಂದಿದೆ. ಇಂತಹ ಕೇಂದ್ರ ಸರಕಾರದ ನಿಲುವುಗಳನ್ನು ಕರ್ನಾಟಕ ಮುಸ್ಲಿಂ ಯುನಿಟಿಯ ವಿರೋಧವಿದೆ ಹಾಗೂ ಬಲವಾಗಿ ಖಂಡಿಸುತ್ತದೆ.

ಪ್ರಸ್ತುತ, ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ವಕ್ಫ್ ಮಂಡಳಿಗಳಿವೆ. 1995ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಅದಕ್ಕೆ 2013ರಲ್ಲಿ ಕೆಲ ತಿದ್ದುಪಡಿ ತರಲಾಗಿದೆ. ಇವುಗಳ ನಿರ್ದೇಶನಗಳಲ್ಲಿಯೇ ಪ್ರಸ್ತುತ ಭಾರತ ವಕ್ಫ್ ಮಂಡಳಿ ಹಾಗು ರಾಜ್ಯ ವಕ್ಫ್ ಮಂಡಳಿಗಳು ಸಕ್ರಿಯವಾಗಿವೆ. ಇಂತಹ ಸಕ್ರಿಯ ಸರ್ಕಾರಿ ವಕ್ಫ್‌ ಕಾಯ್ದೆ ಮತ್ತು ಮಂಡಳಿಗಳನ್ನು ಬಿಜೆಪಿ ಮತ್ತು ಸಂಘಪರಿವಾರ ವಿರೋಧಿಸುತ್ತಾ ಬರುತ್ತಿರುವುದು ನಾಚಿಕೆಗೇಡು.

ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದು ವಕ್ಫ್ ಮಂಡಳಿಗಳ ಅಧಿಕಾರವನ್ನು ಕಡಿತಗೊಳಿಸುವುದನ್ನು ವಕ್ಫ್ ಮಂಡಳಿಗೆ ಇರುವ ಕಾನೂನಿನ ಮಾನ್ಯತೆಯನ್ನು ಹಾಳುಮಾಡುವ ತಿದ್ದುಪಡಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.

ಸದ್ಯ ಭಾರತ ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತರಲು ಬಯಸಿರುವ ಸುಮಾರು ನಲವತ್ತು ತಿದ್ದುಪಡಿಗಳಿಗೆ ನಮ್ಮ ವಿರೋಧಿವಿದೆ.

ವಕ್ಫ್ ಮಂಡಳಿಗೆ ಸಂಬಂದಿಸಿದಂತೆ ಈ ತಿದ್ದುಪಡಿ ಕಾಯ್ದೆಗಳು ಜಾರಿಯಾದಲ್ಲಿ ಮುಂದಿನ ದಿನಗಳಲ್ಲಿ ಈ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದಲ್ಲಿ ದೊಡ್ಡಮಟ್ಟದ ಜನಾಂದೋಲನ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು” ಎಂದು ಕರ್ನಾಟಕ ಮುಸ್ಲಿಂ ಯುನಿಟಿ (KMU)ಯ ರಾಜ್ಯಾಧ್ಯಕ್ಷರಾದ ಜಬ್ಬಾರ ಕಲಬುರ್ಗಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಖಾಸಿಂ ಸಾಬ್ ಅವರು ಪತ್ರಿಕಾ ಹೇಳಿಕೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.