ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಹೆಚ್.ಡಿ.ಕುಮಾರಸ್ವಾಮಿ Archives » Page 4 of 5 » Dynamic Leader
November 23, 2024
Home Posts tagged ಹೆಚ್.ಡಿ.ಕುಮಾರಸ್ವಾಮಿ (Page 4)
ರಾಜಕೀಯ

ಕೆಲವೊಮ್ಮೆ ಅಧಿಕಾರ ಮತ್ತು ಅಜ್ಞಾನ ಒಟ್ಟೊಟ್ಟಿಗೆ ಸಾಗುತ್ತವೆ; ಅದಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವೇ ಜೀವಂತ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. “2018ರಲ್ಲಿ ತಮ್ಮ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಹೊರರಾಜ್ಯಗಳ ಗಣ್ಯರಿಗೆ ಆತಿಥ್ಯ ನೀಡಲು ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿರಲಿಲ್ಲವೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಸ್ವತಃ ಮುಖ್ಯಮಂತ್ರಿಗಳು, ಸಂಸದೀಯ ಸಚಿವರು, ಇನ್ನೂ ಕೆಲ ಮಂತ್ರಿಗಳು ಸದನವನ್ನೇ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಆಗ ನಾನು ಕೇವಲ ನಿಯೋಜಿತ ಮುಖ್ಯಮಂತ್ರಿ. ರಾಜಭವನದ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಲ್ಲಾ ವ್ಯವಸ್ಥೆ ಮಾಡಿರುತ್ತದೆ ಎಂಬುದು ಇವರಿಗೆ ತಿಳಿಯದೆ?

ಪ್ರಮಾಣವನ್ನೇ ಸ್ವೀಕರಿಸದ ನಿಯೋಜಿತ ಮುಖ್ಯಮಂತ್ರಿ ಯಾವುದಾದರೂ ಆದೇಶ ನೀಡಲು ಸಾಧ್ಯವೇ? ಇಷ್ಟಕ್ಕೂ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭಕ್ಕೂ, ಪಕ್ಷದ ಕಾರ್ಯಕ್ರಮಕ್ಕೂ ಹೋಲಿಕೆಯೇ?

ಇಷ್ಟು ಸಾಮಾನ್ಯ ತಿಳಿವಳಿಕೆ ಸ್ವತಃ ಮುಖ್ಯಮಂತ್ರಿ ಹಾಗೂ ಸಂಸದೀಯ ಸಚಿವರಿಗೆ ಇಲ್ಲ ಎಂದರೆ ಏನು ಹೇಳುವುದು? ಇಂಡಿಯಾ ಒಕ್ಕೂಟದ ಸಭೆಗೆ ಬಂದ ಹೊರರಾಜ್ಯಗಳ ನಾಯಕರಿಗೆ ಐಎಎಸ್ ಅಧಿಕಾರಿಗಳನ್ನು ಚಾಕರಿಗೆ ಬಿಟ್ಟಿದ್ದು ತಪ್ಪು ಎಂಬುದು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಗಿಳಿಪಾಠ ಒಪ್ಪಿಸುವ ಸ್ವಯಂಘೋಷಿತ ಸಂವಿಧಾನ ತಜ್ಞರಿಗೆ ಶೋಭೆಯೇ?

ಉಪ ಸಭಾಧ್ಯಕ್ಷರು ದಲಿತರೆನ್ನುವ ಟ್ರಂಪ್ ಕಾರ್ಡ್ ತೇಲಿಬಿಟ್ಟಿದೆ ಸರಕಾರ. ದಲಿತರೆನ್ನುವ ಕಾರಣಕ್ಕೆ ಉಪ ಸಭಾಧ್ಯಕ್ಷರ ಮೇಲೆ ಅನುಕಂಪದ ಹೊಳೆ ಹರಿಸುವ ಕಾಂಗ್ರೆಸ್, ಅವರಿಗೆ ಸಚಿವ ಸ್ಥಾನವನ್ನೇ ನೀಡಬಹುದಿತ್ತು. ನೀಡಲಿಲ್ಲ ಯಾಕೆ? ಶಾಸಕ ಪುಟ್ಟರಂಗಶೆಟ್ಟಿ ಅವರು ಬೇಡವೇ ಬೇಡ ಎಂದ ಹುದ್ದೆಯನ್ನು ರುದ್ರಪ್ಪ ಲಮಾಣಿ ಅವರ ತಲೆಗೆ ಕಟ್ಟಿದ್ದು ಯಾಕೆ?

ಇಂಥ ಅತಿಯಾದ ಜಾಣತನ, ಭಂಡತನ ಯಾಕೆ? ಸಂಪುಟ ರಚನೆ ವೇಳೆ ರುದ್ರಪ್ಪ ಲಮಾಣಿ ಅವರು ದಲಿತರೆನ್ನುವುದು ಕಾಂಗ್ರೆಸ್’ಗೆ ಗೊತ್ತಿರಲಿಲ್ಲವೇ? ದಲಿತ ಕಾರ್ಡ್ ಬಿಟ್ಟ ಪ್ರಿಯಾಂಕ್ ಖರ್ಗೆ ಅಥವಾ ಕೃಷ್ಣ ಭೈರೇಗೌಡರಿಗೆ ಅಷ್ಟು ದಲಿತಪ್ರೇಮ ಇದ್ದರೆ ಅವರ ಸಚಿವಗಿರಿಯನ್ನು ಲಮಾಣಿ ಅವರಿಗೇ ಬಿಟ್ಟುಕೊಟ್ಟು ಈ ಇಬ್ಬರಲ್ಲಿ ಒಬ್ಬರು ಉಪ ಸಭಾಧ್ಯಕ್ಷರಾಗಲಿ.

ಅಷ್ಟೇ ಅಲ್ಲ; ದಲಿತ ಮುಖ್ಯಮಂತ್ರಿ ಕೂಗು ಕಾಂಗ್ರೆಸ್ ಪಕ್ಷದಲ್ಲಿ ಬಹಳ ದಿನಗಳಿಂದ ಇದೆ. ಹಿಂದೆ ಖರ್ಗೆ ಅವರಿಗೆ ಸಿಎಂ ಹುದ್ದೆ ಕೈ ತಪ್ಪುವಂತೆ ಮಾಡಲಾಗಿತ್ತು. ಈಗ ದಲಿತ ಮುಖ್ಯಮಂತ್ರಿ ಮಾಡಲು ಇದೇ ಸಕಾಲ. ದಲಿತರನ್ನೇ ಸಿಎಂ ಮಾಡಲಿ. ನುಡಿದಂತೆ ನಡೆಯುವ ಪಕ್ಷಕ್ಕೆ ಇದು ಅಸಾಧ್ಯವೇನಲ್ಲ. ಅಲ್ಲವೇ? ಎಂದು ಕಿಡಿಕಾರಿದ್ದಾರೆ.

ರಾಜಕೀಯ

ಬಿಜೆಪಿ ಬಿ ಟೀಂ ಜೆಡಿಎಸ್ ಎಂದು ನಾವು ಅನೇಕ ಬಾರಿ ಹೇಳಿದ್ದೆವು. ಈಗ  ಹೆಚ್.ಡಿ.ಕುಮಾರಸ್ವಾಮಿ ನಮ್ಮ‌ ಮಾತು ಸತ್ಯ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ದಾಂತಗಳಿಲ್ಲ.‌ ಕೋಮುವಾದಿ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಜೆಡಿಎಸ್‌ಗೆ ಯಾವ ಸಿದ್ದಾಂತವಿದೆ? ಅದೊಂದು ಅವಕಾಶವಾದಿ ಪಕ್ಷ.‌ ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ ಎನ್ನುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಜೆಡಿಎಸ್ ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ. 2006ರಲ್ಲಿ ಬಿಜೆಪಿ ಜೊತೆ ಸೇರಿ 20-20 ಸರ್ಕಾರ ಮಾಡಿದಾಗಲೇ ಜಾತ್ಯಾತೀತ ತತ್ವಕ್ಕೆ ಕುಮಾರಸ್ವಾಮಿ ಎಳ್ಳು‌ ನೀರು ಬಿಟ್ಟಿದ್ದರು. ಆಗಲೇ ಜೆಡಿಎಸ್ ಅವನತಿ ಶುರುವಾಗಿದ್ದು. 2004ರಲ್ಲಿ 59 ಸ್ಥಾನ ಗೆದ್ದಿದ್ದ ಜೆಡಿಎಸ್ ಈ ಬಾರಿ 19 ಸ್ಥಾನಕ್ಕೆ ಕುಸಿಯಲು ಈ ನಕಲಿ ಜಾತ್ಯತೀತ ಸಿದ್ದಾಂತವೇ ಕಾರಣ.

ಬಿಜೆಪಿಗೆ ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತವಾಗಿ ವಿಪಕ್ಷ ನಾಯಕನಾಗಬಹುದು. ಈ ಮೂಲಕವಾದರೂ ಕುಮಾರಸ್ವಾಮಿ ಅವರ ಸುಳ್ಳು ಜಾತ್ಯತೀತತೆಯ ನಕಲಿ‌ ಶ್ಯಾಮನ ಅವತಾರ ಕೊನೆಯಾಗಲಿ‌. ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯ

ವೈದ್ಯ ಕೋರ್ಸಿನಲ್ಲಿ ಸ್ವರ್ಣ ಪದಕಗಳನ್ನು ಗಳಿಸಿ, ಆ ನಂತರ ಸ್ನಾತಕೋತ್ತರ ಪರೀಕ್ಷೆಯಲ್ಲೂ ಇಡೀ ಭಾರತಕ್ಕೆ 2000ನೇ ಸ್ಥಾನ ಪಡೆದಿರುವುದು ಅಸಾಮಾನ್ಯ ಸಾಧನೆ ಎಂದು ಬಣ್ಣಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,

“ನನ್ನ ಮತಕ್ಷೇತ್ರ ಚನ್ನಪಟ್ಟಣದ ಚಕ್ಕಲೂರು ಗ್ರಾಮದ ರೈತರ ಮನೆಯ ಮಗಳು ಡಾ.ಅನುಶ್ರೀ ಅವರು ವೈದ್ಯಕೀಯ ಶಿಕ್ಷಣದಲ್ಲಿ ಮಾಡಿರುವ ಅನುಪಮ ಸಾಧನೆ ಬಗ್ಗೆ ತಿಳಿದು ನನಗೆ ಬಹಳ ಸಂತೋಷವಾಗಿದೆ. ಅವರ ಪ್ರತಿಭೆ ಎಲ್ಲರಿಗೂ ಮಾದರಿ ಹಾಗೂ ಪ್ರೇರಣೆ. ಅವರು ಚನ್ನಪಟ್ಟಣದ ಕೀರ್ತಿಯ ಕಳಸ.

ವೈದ್ಯ ಕೋರ್ಸಿನಲ್ಲಿ ಸ್ವರ್ಣ ಪದಕಗಳನ್ನು ಗಳಿಸಿ, ಆ ನಂತರ ಸ್ನಾತಕೋತ್ತರ ಪರೀಕ್ಷೆಯಲ್ಲೂ ಇಡೀ ಭಾರತಕ್ಕೆ 2000ನೇ ಸ್ಥಾನ ಪಡೆದಿರುವುದು ಅಸಾಮಾನ್ಯ ಸಾಧನೆ. ಡಾ.ಅನುಶ್ರೀ ಅವರಿಗೆ ಎಲ್ಲವೂ ಒಳ್ಳೆಯದಾಗಲಿ, ಭವಿಷ್ಯದಲ್ಲಿ ಅವರು ಇನ್ನೂ ಎತ್ತರದ ಸ್ಥಾನ ತಲುಪಲಿ ಎಂದು ಹಾರೈಸುತ್ತೇನೆ. ಅವರ ಪೋಷಕರಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ.

 

ರಾಜಕೀಯ

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಹಂಗಾಮಿ ಸ್ಪೀಕರ್ ಶ್ರೀ.ಆರ್.ವಿ.ದೇಶಪಾಂಡೆ ಅವರಿಂದ ವಿಧಾನಸಭೆಯ ನೂತನ ಶಾಸಕನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾನ್ಯ ಸಭಾಧ್ಯಕ್ಷರ ಕಚೇರಿಯಲ್ಲಿ ಪ್ರಮಾಣ ಸ್ವೀಕಾರ ಮಾಡುವ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹೊಳೆನರಸೀಪುರದ ಶಾಸಕರೂ ಆದ ಹೆಚ್.ಡಿ.ರೇವಣ್ಣ ಜೊತೆಯಲ್ಲಿದ್ದರು.

ಬೆಂಗಳೂರು

ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿನೀಡಿ ಬೆಂಗಳೂರಿನ ಕೆ.ಆರ್.ವೃತ್ತದ ಅಂಡರ್ ಪಾಸ್ ಬಳಿ ಮಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ 23 ವರ್ಷದ ಭಾನುರೇಖಾ ಅವರ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಿದರು. ಇದೇ ವೇಳೆ ದುರ್ಘಟನೆಯಲ್ಲಿ ಸಾವನ್ನಪ್ಪಿದ ಯುವತಿಯ ಕುಟುಂಬಕ್ಕೆ ರೂ. 5 ಲಕ್ಷ ಪರಿಹಾರ ಹಾಗೂ ಅಸ್ವಸ್ಥಗೊಂಡಿರುವ ಎಲ್ಲರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದರು.

ಅಂಡರ್ ಪಾಸ್ ಗಳಿಂದ ನೀರು ಹೊರಹೋಗುವ ಚರಂಡಿಗಳು ಹೂಳು ತುಂಬಿರುವುದರಿಂದ ಏಕಾಏಕಿ ಮಳೆ ಸುರಿದಾಗ ನೀರು ಸಂಗ್ರಹಗೊಂಡು ಇಂಥ ಅವಘಡಕ್ಕೆ ಕಾರಣವಾಗುತ್ತಿದೆ. ನಗರದಲ್ಲಿ ಮಳೆ ನೀರು ಸಂಗ್ರಹಗೊಳ್ಳುವ ಎಲ್ಲಾ ಅಂಡರ್ ಪಾಸ್ ಗಳನ್ನು ಗುರುತಿಸಿ ಸರಿಪಡಿಸಲಾಗುವುದು ಹಾಗೂ ಕಾಲುವೆ ಒತ್ತುವರಿಯನ್ನು ತೆರವು ಮಾಡಿ ನೀರಿನ ಸರಾಗ ಹರಿವಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಮಳೆನೀರಿಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಸಾವು: ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೋಂಡ ಹೆಚ್.ಡಿ.ಕುಮಾರಸ್ವಾಮಿ.

https://twitter.com/CMofKarnataka/status/1660266705476784128?s=20

ಬೆಂಗಳೂರು

ಬೆಂಗಳೂರು: “ಬೆಂಗಳೂರು ನಗರದಲ್ಲಿ ಇಂದು ಸುರಿದ ಭಾರೀ ಮಳೆಯಿಂದ ಕೆ.ಆರ್.ವೃತ್ತದ ಅಂಡರ್ ಪಾಸ್ ನಲ್ಲಿ ಮಳೆನೀರಿಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಎಂಬ ಯುವತಿ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ರಭಸ ಮಳೆಯ ಮುನ್ನೆಚ್ಚರಿಕೆ ಇದ್ದರೂ ಬಿಬಿಎಂಪಿ ಆಡಳಿತ ಎಚ್ಚೆತ್ತುಕೊಳ್ಳದೇ ಇರುವುದು ನಿರ್ಲಕ್ಷ್ಯದ ಪರಮಾವಧಿ” ಎಂದು ಹೆಚ್.ಡಿ.ಕುಮಾರಸ್ವಾಮಿ ಬಿಬಿಎಂಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಅಂಡರ್ ಪಾಸ್ ಗಳಲ್ಲಿ ಕಸಕಡ್ಡಿ ತೆಗೆದು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕಾಗಿದ್ದ ಪಾಲಿಕೆ, ಮೈಮರೆತು ಕರ್ತವ್ಯಲೋಪ ಎಸಗಿದೆ. ಪ್ರತೀಸಲವೂ ಮಳೆ ಬಂದಾಗ ಅವಾಂತರ, ಪ್ರಾಣಹಾನಿ ಸಂಭವಿಸಿದ ಮೇಲೆ ಪಾಲಿಕೆ ಎಚ್ಚೆತ್ತುಕೊಳ್ಳುತ್ತದೆ, ಯಾಕೆ? ಮಳೆ ಬಂದರೆ ಜನರು ಸಾಯಲೇಬೇಕೆ?

ಭಾರೀ ಮಳೆ ಸುರಿಯುತ್ತಿದ್ದ ಅಪಾಯದ ಸಮಯದಲ್ಲಿ ವಾಹನ ಚಾಲಕರು ಅತ್ಯಂತ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡಿದ್ದನ್ನು ಕಂಡ ಮೇಲೂ ಚಾಲಕ ಕಾರನ್ನು ಅಂಡರ್ ಪಾಸ್ ಮೂಲಕ ಚಾಲನೆ ಮಾಡಬಾರದಿತ್ತು. ಸಂಚಾರಿ ಪೊಲೀಸರು ಮೊದಲೇ ಮುನ್ನೆಚ್ಚರಿಕೆ ನೀಡಬೇಕಿತ್ತು.

 

ಬಿಬಿಎಂಪಿ ಅಧಿಕಾರಿಗಳು ಕೂಡಲೇ ನಗರದ ಉದ್ದಗಲಕ್ಕೂ ಎಲ್ಲಾ ಅಂಡರ್ ಪಾಸ್ ಗಳನ್ನು ವಿಸ್ತೃತವಾಗಿ ಪರಿಶೀಲಿಸಿ, ಕಸಕಡ್ಡಿ ವಿಲೇವಾರಿ ಮಾಡಿಸಿ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಇನ್ನೊಂದು ಪ್ರಾಣನಷ್ಟವೂ ಆಗುವುದಕ್ಕೆ ಅವಕಾಶ ನೀಡಬಾರದು.

ಮೃತ ನತದೃಷ್ಟ ಯುವತಿ ಕುಟುಂಬಕ್ಕೆ ಪರಿಹಾರ ನೀಡಿರುವುದು ಸ್ವಾಗತಾರ್ಹ. ಆದರೆ, ಇಂತಹ ದುರಂತಗಳು ಮರುಕಳಿಸದಂತೆ ರಾಜ್ಯ ಕಾಂಗ್ರೆಸ್ ಸರಕಾರ ಶಾಶ್ವತ ಪರಿಹಾರ ರೂಪಿಸಬೇಕು. ಅಂಡರ್ ಪಾಸ್, ರಸ್ತೆ, ಚರಂಡಿ, ಒಳಚರಂಡಿಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎನ್ನುವುದು ನನ್ನ ಆಗ್ರಹ” ಎಂದು ಹೇಳಿದ್ದಾರೆ.

ರಾಜಕೀಯ

ಕೃಪೆ: The New Indian Express,
ಕನ್ನಡ ಪ್ರಭ, ಬೆಂಗಳೂರು.

ಬೆಂಗಳೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಆರಂಭವಾಗಲಿದೆ. ಮೋದಿಯವರು ಅಖಾಡಕ್ಕಿಳಿದಾಗ ಕರ್ನಾಟಕ ಚುನಾವಣೆಯ ಚಿತ್ರಣವೇ ಬದಲಾಗಲಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಹೊತ್ತಿನಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಮೋದಿಯವರ ಪ್ರಚಾರದಿಂದ ಈ ಬಾರಿ ವಿಧಾನಸಭೆ ಚುನಾವಣೆ ಮೇಲೆ ಅಷ್ಟು ಪರಿಣಾಮ ಬೀರುವುದಿಲ್ಲ, ಬದಲಿಗೆ ಮುಂದಿನ ವರ್ಷ ಲೋಕಸಭೆ ಚುನಾವಣೆ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದಿದ್ದಾರೆ. ಸಂದರ್ಶನದ ಆಯ್ದ ಭಾಗ ಹೀಗಿದೆ:

ಪಕ್ಷದ ಪರ ಪ್ರಚಾರವನ್ನು ಮಾಡುತ್ತಿದ್ದೀರಿ. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ನೀವು ಹೇಗೆ ನೋಡುತ್ತೀರಿ?
ನನ್ನ ಪ್ರಚಾರದಲ್ಲಿ ವಿಶೇಷವೇನೂ ಇಲ್ಲ. ದಿನಕ್ಕೆ ಮೂರು ಕಾರ್ಯಕ್ರಮಗಳನ್ನು ನಿಗದಿಪಡಿಸಿ ಎಂದು ಪಕ್ಷದ ನಾಯಕರಿಗೆ ಹೇಳಿದ್ದೇನೆ. ಸುಮಾರು 40 ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಕಳೆದ 60 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕುಮಾರಸ್ವಾಮಿಯವರು ತಮ್ಮ ಕಾರ್ಯಕ್ರಮಗಳಿಂದ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿದ್ದಾರೆ. ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರೂ ಕಷ್ಟಪಡುತ್ತಿದ್ದಾರೆ.

ಜೆಡಿಎಸ್ ಸೇರಿದಂತೆ ಮೂರೂ ಪಕ್ಷಗಳು ಬಹುಮತ ಪಡೆಯುವುದಾಗಿ ಹೇಳಿಕೊಂಡಿವೆ. ನಿಮ್ಮ ಮೌಲ್ಯಮಾಪನ ಏನು?
ನಾನು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ದೇಶದಲ್ಲೇ ಪ್ರಪ್ರಥಮ ಕುಮಾರಸ್ವಾಮಿ ಅವರು ವಿಶಿಷ್ಟ ಕಾರ್ಯಕ್ರಮ ಪಂಚರತ್ನ ರಥಯಾತ್ರೆಯನ್ನು ರಾಜ್ಯದ ಜನತೆಯ ಮುಂದಿಟ್ಟು ಶ್ರಮಿಸುತ್ತಿದ್ದಾರೆ. ಈ ಸಂದೇಶವನ್ನು ಹಳ್ಳಿಗಳ ಜನರಿಗೆ ತಲುಪಿಸಲಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಮುನ್ನ ಅದನ್ನು ಜನರ ಬಳಿಗೆ ಕೊಂಡೊಯ್ಯಲಿದ್ದಾರೆ. ಇದು ಸಾಕಷ್ಟು ಪರಿಣಾಮ ಬೀರಿದ್ದು, ಜೆಡಿಎಸ್ ಬಹುಮತ ಪಡೆಯುವ ವಿಶ್ವಾಸವಿದೆ.

ಕೃಷಿ ಸಾಲ ಮನ್ನಾ, ವೃದ್ಧಾಪ್ಯ ವೇತನ, ಇನ್ನೂ ಹಲವು ಕ್ರಮಗಳನ್ನು ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೈಗೊಂಡಿದ್ದರು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ರಾಜಕಾರಣಿ ಎಂದು ಅವರ ಶತ್ರುಗಳೂ ಒಪ್ಪಿಕೊಳ್ಳುತ್ತಾರೆ.

ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತ ಎಂಬ ಅಭಿಪ್ರಾಯವಿದೆ. ಅದು ನಿಜವೇ?
ಕಳೆದ 2018ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಒಮ್ಮೆ ನೋಡಿ. ವಿಜಯಪುರ ಮತ್ತು ರಾಯಚೂರಿನಲ್ಲಿ ತಲಾ ಮೂರು, ಬೀದರ್‌ನಲ್ಲಿ ಎರಡು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಒಂದನ್ನು ಗೆದ್ದಿದ್ದೇವೆ. ನಾವು ಆ ಪ್ರದೇಶದಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿದ್ದೇವೆ. ಈ ಬಾರಿ ಆ ಪ್ರದೇಶದಲ್ಲಿ ಹೆಚ್ಚು ಗೆಲ್ಲುತ್ತೇವೆ. ಕೆಲವರು ಜೆಡಿಎಸ್ ನ್ನು ಕೇವಲ ಹಳೆಯ ಮೈಸೂರು ಪಾರ್ಟಿ ಎಂದು ಬ್ರಾಂಡ್ ಮಾಡಲು ಬಯಸುತ್ತಾರೆ. ಸತ್ಯ, ವಾಸ್ತವ ಬೇರೆ ಇದೆ.

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅದರಲ್ಲಿ ಏನಾದರೂ ಸತ್ಯವಿದೆಯೇ?
ವರುಣಾದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವುದರಿಂದ ಯಡಿಯೂರಪ್ಪ ಅವರ ಪುತ್ರ ಸ್ಪರ್ಧೆಯಿಂದ ಹಿಂದೆ ಸರಿದ ಬಗ್ಗೆ ಅವರು ಏನು ಹೇಳುತ್ತಾರೆ? ಬಿಜೆಪಿ ಹೈಕಮಾಂಡ್ ಪ್ರತಿಕ್ರಿಯೆ ಏನು? ಅದು ಏನನ್ನು ಸೂಚಿಸುತ್ತದೆ?

2024ರ ಚುನಾವಣೆಯ ಮೊದಲು ಮೈತ್ರಿ ಮಾಡಿಕೊಳ್ಳಲು ವಿರೋಧ ಪಕ್ಷಗಳ ಪ್ರಯತ್ನಗಳ ಬಗ್ಗೆ ನಿಮ್ಮ ಅಭಿಪ್ರಾಯಗಳು?
ಇದು ಕಷ್ಟ. ಬಿಜೆಪಿ 303 ಸ್ಥಾನ ಗೆದ್ದಿದ್ದು, ಈ ಬಾರಿ ಅವರಿಗೆ ಕಷ್ಟ. ಇತರರ ನೆರವಿನಿಂದ ಸರ್ಕಾರ ರಚಿಸಬೇಕು. ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ರಾಜಸ್ಥಾನವನ್ನು ನೋಡಿ, ಅಲ್ಲಿ ಹೋರಾಟ ಮಾಡುತ್ತಿದ್ದಾರೆ. ಇತರ ಪಕ್ಷಗಳು ಕಾಂಗ್ರೆಸ್ ನಾಯಕತ್ವವನ್ನು ಒಪ್ಪಿಕೊಳ್ಳುವುದಿಲ್ಲ.

ಪ್ರಧಾನಿ ಮೋದಿಯವರ ರ್‍ಯಾಲಿ ಕರ್ನಾಟಕದಲ್ಲಿ ಬಿಜೆಪಿ ಅಲೆಯನ್ನು ಬದಲಾಯಿಸಬಹುದು ಎಂದು ಪಕ್ಷ ಆಶಿಸುತ್ತಿದೆ.ಈ ಬಗ್ಗೆ ಏನು ಹೇಳುತ್ತೀರಿ?
ಪ್ರಧಾನಿ ಮೋದಿಯವರ ರ್‍ಯಾಲಿಗಳು ಕರ್ನಾಟಕದಲ್ಲಿ ಅಲೆಯನ್ನು ಬದಲಾಯಿಸಬಹುದು ಎಂದು ಬಿಜೆಪಿ ಆಶಿಸುತ್ತಿದೆ. ಅವರು ಸುಮಾರು 40 ರಿಂದ 50 ಸ್ಥಳಗಳಲ್ಲಿ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರ ಪರಿಣಾಮ ಸಂಸತ್ ಚುನಾವಣೆ ಮೇಲೆ ಹೆಚ್ಚು. ಅಸೆಂಬ್ಲಿ ಚುನಾವಣೆ ಪ್ರಾದೇಶಿಕ ಸಮಸ್ಯೆಯಾಗಿದೆ. ಅವರ ಭಾಷಣಗಳು ಸಂಸತ್ತಿನ ಚುನಾವಣೆಯ ಸಮಯದಲ್ಲಿ ಹೆಚ್ಚು ಪರಿಣಾಮ ಬೀರುತ್ತವೆ, ಆದರೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅದು ಕಷ್ಟ.

ಬಿಜೆಪಿ ವಿರುದ್ಧ ಒಗ್ಗಟ್ಟಿನ ಪ್ರತಿಪಕ್ಷ ರೂಪುಗೊಂಡರೆ, ನೀವು ಅದರ ಭಾಗವಾಗುತ್ತೀರಾ?
ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ವಿವಿಧ ಪಕ್ಷಗಳ ನಾಯಕರನ್ನು ಭೇಟಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ.ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಒಬ್ಬರು ಅದಾನಿ ಬಗ್ಗೆ ಮಾತನಾಡುತ್ತಿದ್ದರೆ ಮತ್ತೊಬ್ಬರು ಇನ್ನೇನೋ ಮಾತನಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಅರ್ಥವಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಎದುರಿಸುತ್ತಿರುವ ಜೆಡಿಎಸ್ ವಿಶಿಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪಕ್ಷ ಉಳಿಸಲು ಹೋರಾಟ ನಡೆಸುತ್ತಿದ್ದೇವೆ. ಇದು ರೈತರ ಪಕ್ಷವಾಗಿದ್ದು, ರೈತನ ಮಗನಾಗಿ ನಾನು ಆ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಜೆಡಿಎಸ್ ರೈತರ ಮತ್ತು ಬಡ ಜನರ ವಿಶ್ವಾಸ ಗಳಿಸಿದೆ. ನಾವು ಯಾವಾಗಲೂ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದೇವೆ. ಅದನ್ನು ಜನ ಮರೆತಿಲ್ಲ.

ರಾಜ್ಯ ಸರ್ಕಾರವು ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು ಅದನ್ನು ಜಾರಿಗೆ ತಂದಿದ್ದೆ, ಆದರೆ ಬಿಜೆಪಿ ಅದನ್ನು ರದ್ದುಗೊಳಿಸಿತು. ಬಿಜೆಪಿ ಮಾಡಿದ್ದು ತಪ್ಪು. ಅದನ್ನು ನಾವು ಅಧಿಕಾರಕ್ಕೆ ಬಂದರೆ ಮರುಸ್ಥಾಪಿಸುತ್ತೇವೆ.

ಜನಾದೇಶ ಮುರಿದು ಬಿದ್ದರೆ ಜೆಡಿಎಸ್ ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಹೋಗಲಿದೆಯೇ?
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದು ನಡೆಯುತ್ತದೆ ಎಂದು ನಾನು ಭಾವಿಸುವುದಿಲ್ಲ. ಜೆಡಿಎಸ್ ಸರಳ ಬಹುಮತ ಪಡೆಯಲಿದೆ.

ರಾಜಕೀಯ

ಮಂಗಳವಾರ ತಮ್ಮ ನಿವಾಸದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,  ‘ಬಿಜೆಪಿಯವರು ಪ್ರಚಾರಕ್ಕೆ ಪ್ರಧಾನಿಯನ್ನದರೂ ಕರೆಸಲಿ, ಅಮೆರಿಕದ ಅಧ್ಯಕ್ಷರನ್ನಾದರೂ ಕರೆಸಲಿ ನನಗೇನು ಆತಂಕ ಇಲ್ಲ’ ಎಂದು ಹೇಳಿದರು. ಇದಕ್ಕೆ ಕರ್ನಾಟಕ ಬಿಜೆಪಿ, ‘ನಾವು ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ನಮ್ಮ ಪಕ್ಷದ ಪ್ರಚಾರಕ್ಕೆ ಆಹ್ವಾನಿಸಿದರೆ ನಿಮಗೇಕೆ ಈ ಪರಿ ಹೊಟ್ಟೆ ಉರಿ? ಅಂದ ಹಾಗೆ, ನಿಮ್ಮ ರೀತಿ ನಾವು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕೂತು ಮಮತಾ ಬ್ಯಾನರ್ಜಿಯವರನ್ನು ಬೆನ್ನು ಬಗ್ಗಿಸಿ ಬಿನ್ನವಿಸಿಕೊಂಡು ಕರೆತರುವುದಿಲ್ಲ ಬಿಡಿ’ ಎಂದು ಪ್ರತಿಕ್ರಿಯೆ ನೀಡಿತು.

ಇದಕ್ಕೆ ಜೆಡಿಎಸ್ ಪಕ್ಷವು ‘ಚುನಾವಣೆ ವೇಳೆ ಮಾತ್ರ ರಾಜ್ಯಕ್ಕೆ ಬರುವ ‘ಚುನಾವಣಾಜೀವಿ’ ನರೇಂದ್ರ ಮೋದಿ ಅವರನ್ನು ನೀವು ಹೆಮ್ಮೆ ಎಂದು ಹೇಳುತ್ತಿದ್ದೀರಿ. ಇದನ್ನೆ ನಾವು ಗುಲಾಮಗಿರಿ ಎಂದು ಕರೆಯುವುದು. ಹಿಂದಿ ಮತ್ತು ಗುಜರಾತಿಗಳ ಗುಲಾಮಗಿರಿ ಮಾಡುವ ನಿಮ್ಮಿಂದ ಸ್ವಾಭಿಮಾನ ಕಲಿಯುವ ಅಗತ್ಯತೆ ಕುಮಾರಸ್ವಾಮಿಗೆ ಅವರಿಗೆ ಬಂದಿಲ್ಲ.

ಗುಜರಾತಿನ ಹಿಂದಿ ದೊರೆಗಳ ಮುಂದೆ ನಡುಬಗ್ಗಿಸಿ ನಿಂತು ‘ಜೀ ಹುಜೂರ್’ ಅನ್ನುವುದಕ್ಕೂ, ಮಹಿಳೆಯೊಬ್ಬರಿಗೆ ಗೌರವ ಕೊಡುವುದಕ್ಕೂ ವ್ಯತ್ಯಾಸವಿದೆ. ಓಟಿಗಾಗಿ ಮಾತ್ರ ಸಂಸ್ಕೃತಿ ಪಾಠ ಮಾಡುವ ನಿಮಗೆ, ಮಹಿಳೆಯೊಬ್ಬರಿಗೆ ಮನಸ್ಸಿನಿಂದ ಗೌರವ ನೀಡುವುದನ್ನು ಯೋಚಿಸಲು ಕೂಡಾ ಸಾಧ್ಯವೇ ಇಲ್ಲ. ನಿಮ್ಮದೇನಿದ್ದರೂ ಢಾಂಬಿಕತೆ ಮಾತ್ರ.

ಅಷ್ಟೊಂದು ಸ್ವಾಭಿಮಾನವಿದ್ದರೆ ಅಮಿತ್ ಶಾ ಮುಂದೆ ನಿಂತು ಹಿಂದಿ ಹೇರಿಕೆ ವಿರುದ್ಧ ಒಂದೇ ಒಂದು ಶಬ್ಧ ಮಾತನಾಡಿ. ನೀವು ‘ಚುನಾವಣಾಜೀವಿ’ ಯನ್ನು ಕರೆಸಿರುವುದರಲ್ಲಿ ನಮಗೆ ಯಾವ ತಕರಾರೂ ಇಲ್ಲ. ಆದರೆ, ಇನ್ನೂ ಪೂರ್ಣಗೊಳ್ಳದ ಕಾಮಗಾರಿಯ ಉದ್ಘಾಟನೆ ಹೆಸರಿನಲ್ಲಿ ಅವರನ್ನು ಕರೆಸಿ ಜನರ ತೆರಿಗೆ ಹಣ ಪೋಲು ಮಾಡಿದ್ದೀರಿ ಎಂಬುವುದೇ ನಮ್ಮ ತಕರಾರು’ ಎಂದು ಜೆಡಿಎಸ್ ಪಕ್ಷ ಕಾರವಾಗಿ ಉತ್ತರ ನೀಡಿದೆ.

ರಾಜಕೀಯ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ನಾಮಪತ್ರ ಭರಾಟೆ ಜೋರಾಗಿದೆ. ಅದರಂತೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಂದ ಬಿ ಫಾರಂ ಸ್ವೀಕರಿಸುವಾಗ ನಿಖಿಲ್‌ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ತಂದೆ ಹೆಚ್​.ಡಿ.ಕುಮಾರಸ್ವಾಮಿ, ತಾಯಿ ಅನಿತಾ ಕುಮಾರಸ್ವಾಮಿ ಅವರ ಜತೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಂದ ಬಿ ಫಾರ್ಮ್ ಪಡೆದುಕೊಂಡರು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಚೆನ್ನಮ್ಮರ ಆಶೀರ್ವಾದ ಪಡೆದರು. ನಿಖಿಲ್ ಕುಮಾರಸ್ವಾಮಿ ಬಿ ಫಾರಂ ಪಡೆಯುವ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಹಾಗೂ ಪತ್ನಿ ರೇವತಿ ಭಾಗಿಯಾಗಿದ್ದರು.

ಹೆಚ್​.ಡಿ.ಕುಮಾರಸ್ವಾಮಿ ಅವರಿಂದ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ನಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು.

ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ತಾಲ್ಲೂಕು ಕಚೇರಿ ಮುಂಭಾಗ ಜೆಡಿಎಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಬೆಳಗ್ಗೆ 10 ಗಂಟೆಗೆ ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ನಿಖಿಲ್ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಚರ್ಚ್ ಹಾಗೂ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಬೃಹತ್ ಮೆರವಣಿಗೆ ತೆರಳಿ ಮಧ್ಯಾಹ್ನ 12:30ಕ್ಕೆ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ರಾಜಕೀಯ

ಬೆಂಗಳೂರು: ಚಿತ್ರದುರ್ಗದ ಮಾಜಿ ವಿಧಾನ ಪರಿಷತ್ ಸದಸ್ಯರಾದ ರಘು ಆಚಾರ್ ಇಂದು ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಅಧಿಕೃತವಾಗಿ ಜಾತ್ಯತೀತ ಜನತಾದಳ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಾತ್ಯತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಸಿಎಂ ಇಬ್ರಾಹಿಂ ರವರು, ವಿಧಾನಪರಿಷತ್ ಸದಸ್ಯರಾದ ಶ್ರೀ ಭೋಜೇಗೌಡರು, ಟಿ.ಎ ಶರವಣ ಅವರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಟ್ಟಿ ಪ್ರಕಟವಾದ ಬೆನ್ನಲ್ಲೆ ಕೋಟೆನಾಡು ಚಿತ್ರದುರ್ಗದಲ್ಲಿ ಭಾರಿ ಬಂಡಾಯ ಬಿಸಿ ಆವರಿಸಿತು. ಇದೀಗ ಅಲ್ಲಿನ ಮಾಜಿ ವಿಧಾನ ಪರಿಷತ್ ಸದಸ್ಯರಾದ ರಘು ಆಚಾರ್ ಇಂದು ಬೆಂಗಳೂರಿನಲ್ಲಿ ಜೆಡಿಎಸ್ ಸೇರಿದ್ದಾರೆ.

ಇವರಲ್ಲೆದೇ ಜೇವರ್ಗಿಯ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಶಹಾಪುರದ ಮಾಜಿ ಶಾಸಕರಾದ ಗುರುಲಿಂಗಪ್ಪ ಗೌಡ, ಗುರು ಪಾಟೀಲ್ ಸೇರಿ ಅವರ ಅಪಾರ ಬೆಂಬಲಿಗರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಸವದತ್ತಿಯ ಶ್ರೀ ಸೌರಭ್ ಚೋಪ್ರಾ, ಕಾರವಾರದ ಶ್ರೀಮತಿ ಚೈತ್ರಾ ಕೊಡೇಕರ್, ಪಾವಗಡದ ಶ್ರೀರಾಮ್, ಮಾಯಕೊಂಡದ ಸವಿತಾ ಬಾಯಿ, ಪುತ್ತೂರಿನ ದಿವ್ಯಾ ಪುತ್ತೂರು, ಶ್ರೀಮತಿ ದಿವ್ಯಪ್ರಭಾ ಗೌಡ ಸೇರಿದಂತೆ ಇನ್ನೂ ಅನೇಕ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು. ಎಲ್ಲರನ್ನೂ ಸಂತೋಷದಿಂದ ಪಕ್ಷಕ್ಕೆ ಸ್ವಾಗತಿಸಲಾಯಿತು.