ಚುನಾವಣೆ ವೇಳೆ ಮಾತ್ರ ರಾಜ್ಯಕ್ಕೆ ಬರುವ ‘ಚುನಾವಣಾಜೀವಿ’ ನರೇಂದ್ರ ಮೋದಿ: ಜೆಡಿಎಸ್
ಮಂಗಳವಾರ ತಮ್ಮ ನಿವಾಸದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ‘ಬಿಜೆಪಿಯವರು ಪ್ರಚಾರಕ್ಕೆ ಪ್ರಧಾನಿಯನ್ನದರೂ ಕರೆಸಲಿ, ಅಮೆರಿಕದ ಅಧ್ಯಕ್ಷರನ್ನಾದರೂ ಕರೆಸಲಿ ನನಗೇನು ಆತಂಕ ಇಲ್ಲ’ ಎಂದು ಹೇಳಿದರು. ಇದಕ್ಕೆ ಕರ್ನಾಟಕ ಬಿಜೆಪಿ, ‘ನಾವು ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ನಮ್ಮ ಪಕ್ಷದ ಪ್ರಚಾರಕ್ಕೆ ಆಹ್ವಾನಿಸಿದರೆ ನಿಮಗೇಕೆ ಈ ಪರಿ ಹೊಟ್ಟೆ ಉರಿ? ಅಂದ ಹಾಗೆ, ನಿಮ್ಮ ರೀತಿ ನಾವು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕೂತು ಮಮತಾ ಬ್ಯಾನರ್ಜಿಯವರನ್ನು ಬೆನ್ನು ಬಗ್ಗಿಸಿ ಬಿನ್ನವಿಸಿಕೊಂಡು ಕರೆತರುವುದಿಲ್ಲ ಬಿಡಿ’ ಎಂದು ಪ್ರತಿಕ್ರಿಯೆ ನೀಡಿತು.
ಇದಕ್ಕೆ ಜೆಡಿಎಸ್ ಪಕ್ಷವು ‘ಚುನಾವಣೆ ವೇಳೆ ಮಾತ್ರ ರಾಜ್ಯಕ್ಕೆ ಬರುವ ‘ಚುನಾವಣಾಜೀವಿ’ ನರೇಂದ್ರ ಮೋದಿ ಅವರನ್ನು ನೀವು ಹೆಮ್ಮೆ ಎಂದು ಹೇಳುತ್ತಿದ್ದೀರಿ. ಇದನ್ನೆ ನಾವು ಗುಲಾಮಗಿರಿ ಎಂದು ಕರೆಯುವುದು. ಹಿಂದಿ ಮತ್ತು ಗುಜರಾತಿಗಳ ಗುಲಾಮಗಿರಿ ಮಾಡುವ ನಿಮ್ಮಿಂದ ಸ್ವಾಭಿಮಾನ ಕಲಿಯುವ ಅಗತ್ಯತೆ ಕುಮಾರಸ್ವಾಮಿಗೆ ಅವರಿಗೆ ಬಂದಿಲ್ಲ.
ಗುಜರಾತಿನ ಹಿಂದಿ ದೊರೆಗಳ ಮುಂದೆ ನಡುಬಗ್ಗಿಸಿ ನಿಂತು ‘ಜೀ ಹುಜೂರ್’ ಅನ್ನುವುದಕ್ಕೂ, ಮಹಿಳೆಯೊಬ್ಬರಿಗೆ ಗೌರವ ಕೊಡುವುದಕ್ಕೂ ವ್ಯತ್ಯಾಸವಿದೆ. ಓಟಿಗಾಗಿ ಮಾತ್ರ ಸಂಸ್ಕೃತಿ ಪಾಠ ಮಾಡುವ ನಿಮಗೆ, ಮಹಿಳೆಯೊಬ್ಬರಿಗೆ ಮನಸ್ಸಿನಿಂದ ಗೌರವ ನೀಡುವುದನ್ನು ಯೋಚಿಸಲು ಕೂಡಾ ಸಾಧ್ಯವೇ ಇಲ್ಲ. ನಿಮ್ಮದೇನಿದ್ದರೂ ಢಾಂಬಿಕತೆ ಮಾತ್ರ.
ಅಷ್ಟೊಂದು ಸ್ವಾಭಿಮಾನವಿದ್ದರೆ ಅಮಿತ್ ಶಾ ಮುಂದೆ ನಿಂತು ಹಿಂದಿ ಹೇರಿಕೆ ವಿರುದ್ಧ ಒಂದೇ ಒಂದು ಶಬ್ಧ ಮಾತನಾಡಿ. ನೀವು ‘ಚುನಾವಣಾಜೀವಿ’ ಯನ್ನು ಕರೆಸಿರುವುದರಲ್ಲಿ ನಮಗೆ ಯಾವ ತಕರಾರೂ ಇಲ್ಲ. ಆದರೆ, ಇನ್ನೂ ಪೂರ್ಣಗೊಳ್ಳದ ಕಾಮಗಾರಿಯ ಉದ್ಘಾಟನೆ ಹೆಸರಿನಲ್ಲಿ ಅವರನ್ನು ಕರೆಸಿ ಜನರ ತೆರಿಗೆ ಹಣ ಪೋಲು ಮಾಡಿದ್ದೀರಿ ಎಂಬುವುದೇ ನಮ್ಮ ತಕರಾರು’ ಎಂದು ಜೆಡಿಎಸ್ ಪಕ್ಷ ಕಾರವಾಗಿ ಉತ್ತರ ನೀಡಿದೆ.