ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೋಳಿಯ ವಿರುದ್ಧ ಇಂದು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ದೂರನ್ನು ದಾಖಲಿಸಿದ್ದಾರೆ.
ಇದರ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್ ‘ಕರ್ನಾಟಕ ಹಗರಣಗಳಿಂದ ಗ್ರಹಣ ಹಿಡಿದಿದ್ದು, ಇವುಗಳಿಗೆ ಕಡಿವಾಣ ಹಾಕಲು ಸಿಎಂ ಬೊಮ್ಮಾಯಿ ಗಂಭೀರವಾಗಿ ಚಿಂತಿಸಿದ್ದರೆ ಏನಾದರೂ ಮಾಡುತ್ತಿದ್ದರು.
ಸಿಐಡಿ ಅಧಿಕಾರಿ 3 ಕೋಟಿ ಲಂಚ ಕೇಳಿದ್ದಾರೆ ಎಂದು ಪಿಎಸ್‌ಐ ಹಗರಣದ ಆರೋಪಿ ಬಹಿರಂಗವಾಗಿ ಹೇಳಿಕೊಂಡಿರುವುದು ಕೊಳೆತ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ.
ರಾಜ್ಯ BJP ಸರ್ಕಾರದ ಲಂಚಾವತಾರ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಇಲ್ಲಿ ಹಗರಣಗಳ ಸಂಬಂಧ ನಡೆಯುತ್ತಿರುವ ತನಿಖೆಗಳೂ ನ್ಯಾಯಸಮ್ಮತವಾಗಿಲ್ಲ. PSI ಹಗರಣ ಸಂಬಂಧ ನಡೆಯುತ್ತಿರುವ CID ತನಿಖೆಯ ದಾರಿ ತಪ್ಪಿಸಲು ಅಧಿಕಾರಿಗಳು ರೂ.3 ಕೋಟಿ ಲಂಚ ಕೇಳಿದ್ದರು, ಈಗಾಗಲೇ ರೂ.76 ಲಕ್ಷ ನೀಡಿರುವುದಾಗಿ RD ಪಾಟೀಲ್ ಹೇಳಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತದಾರರಿಗೆ 6ಸಾವಿರ ಲಂಚ ನೀಡುವುದಾಗಿ ಹೇಳುತ್ತಿದ್ದಾರೆ. ಒಂದು ಕಡೆ ನ್ಯಾಯಸಮ್ಮತ ತನಿಖೆಯೂ ನಡೆಯುತ್ತಿಲ್ಲ, ಮತ್ತೊಂದು ಕಡೆ PSI ಉದ್ಯೋಗಾಕಾಂಕ್ಷಿಗಳಿಗೆ ಮರು ಪರೀಕ್ಷೆಯನ್ನೂ ನಡೆಸುತ್ತಿಲ್ಲ. ಮತದಾರರಿಗೆ ಲಂಚ ನೀಡುವುದಾಗಿ ಹೇಳುತ್ತಿರುವ ತಮ್ಮ ಪಕ್ಷದ ನಾಯಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ತಮ್ಮ ಮೂಗಿನ ಕೆಳಗೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಪಿಎಸ್‌ಐ ಹಗರಣದ ಸಂಬಂಧ ನ್ಯಾಯಯುತ ತನಿಖೆ ನಡೆಸದ ಗೃಹ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು. ಹಾಗೆಯೇ ಪ್ರಕರಣ ಸಂಬಂಧ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.