ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
15ನೇ ಹಣಕಾಸು ಆಯೋಗ Archives » Dynamic Leader
December 5, 2024
Home Posts tagged 15ನೇ ಹಣಕಾಸು ಆಯೋಗ
ರಾಜಕೀಯ

ನವದೆಹಲಿ: ರಾಜ್ಯದ ರೈತರಿಗೆ ನೀಡಬೇಕಾಗಿದ್ದ ನಬಾರ್ಡ್ ಹಣದಲ್ಲಿ ಶೇ.58 ರಷ್ಟು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದರಿಂದ ರೈತರು ಅಧಿಕ ಬಡ್ಡಿಗೆ ಸಾಲ ಕೊಡುವ ಲೇವಾದೇವಿದಾರರ ಸುಳಿಗೆ ಸಿಲುಕಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು “ರೈತರಿಗೆ ನೀಡುತ್ತಿದ್ದ ಸಬ್ಸಡಿ ಸಾಲ ಕಡಿತಗೊಳಿಸಿದ್ದರಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಹಾರ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ನಬಾರ್ಡ್ ಸಾಲದ ಪ್ರಮಾಣ ಇಡೀ ದೇಶಕ್ಕೆ ಕಡಿಮೆ ಮಾಡಿದ್ದರೆ ದೇಶದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಲಿದೆ. ಇಡೀ ದೇಶದ ಕೃಷಿ ಉತ್ಪಾದನೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ” ಎಂದು ಹೇಳಿದ್ದಾರೆ.

“ನಬಾರ್ಡ್ 4.5% ಬಡ್ಡಿಗೆ ರೈತರಿಗೆ ಸಾಲದ ಹಣ ನೀಡುತ್ತಿತ್ತು. ನಾವು ರೈತರಿಗೆ ಬಡ್ಡಿ ರಹಿತವಾಗಿ ಸಾಲ ನೀಡಿ ಈ 4.5% ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿತ್ತು. ಈಗ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಂದ ಸಾಲ ಪಡೆಯುವಂತೆ ಕೇಂದ್ರ ಸರ್ಕಾರ ಹೇಳುತ್ತಿದೆ. ಶೇ10 ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಗಳು ಸಾಲ ನೀಡುತ್ತವೆ. ಇದರಿಂದ ಬ್ಯಾಂಕ್ ಗಳಿಗೆ ಲಾಭ ಆಗುತ್ತದೆಯೇ ಹೊರತು ರೈತರಿಗೆ ಅನುಕೂಲ ಇಲ್ಲ” ಎಂದು ಹೇಳಿದ್ದಾರೆ.

“15ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಅನ್ಯಾಯ ಆಯಿತು. ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,000 ಕೋಟಿ ಘೋಷಿಸಿ ಒಂದು ಪೈಸೆಯನ್ನೂ ಕೊಡಲಿಲ್ಲ. ಫೆರಿಫೆರಲ್ ರಿಂಗ್ ರಸ್ತೆಗೂ ಕೊಡಲಿಲ್ಲ. ಇವೆಲ್ಲದರಿಂದ ರೂ.11,000 ಕೋಟಿ ರೂ ರಾಜ್ಯಕ್ಕೆ ನಷ್ಟವಾಗಿದ್ದನ್ನೂ ಪ್ರಧಾನಮಂತ್ರಿಯವರಿಗೆ ನೆನಪಿಸಿದ್ದೇವೆ. ಹೀಗಾಗಿ ಈ ಬಾರಿ ಮತ್ತೆ ನಬಾರ್ಡ್ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮನವಿ ಮಾಡಿದ್ದೇವೆ” ಎಂದಿದ್ದಾರೆ.

“ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದೆ. ಮಹದಾಯಿ, ಮೇಕೆದಾಟುಗೆ ಅನುಮತಿ ನೀಡುತ್ತಿಲ್ಲ. ಇಷ್ಟಾದರೂ ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ. ಮಣ್ಣಿನ ಮಗ ಅಂದುಕೊಂಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ? ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ದೇವೇಗೌಡರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಬಾಯಿ ಬಿಡುತ್ತಿಲ್ಲ ಏಕೆ?” ಎಂದು ಕಿಡಿಕಾರಿದ್ದಾರೆ.