ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
2023 ಬಜೆಟ್ Archives » Dynamic Leader
November 24, 2024
Home Posts tagged 2023 ಬಜೆಟ್
ರಾಜಕೀಯ ರಾಜ್ಯ

1) ಕೇಂದ್ರದ ಟ್ರಬಲ್ ಎಂಜಿನ್ ಬಿಜೆಪಿ ಸರ್ಕಾರ ಕಳೆದ 8 ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ‘ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್’ (ಶ್ರೀಮಂತರ ಪೋಷಣೆ ಮತ್ತು ಬಡವರ ವಿನಾಶ) ಎಂಬ ಜನವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ 2023-2024ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ.

2) ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತ ಮತ್ತು ಕೊರೊನಾ ರೋಗದಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟುಹೋಗಿದೆ. ಬಹಳ ಮುಖ್ಯವಾಗಿ ದೇಶದ ಬೆನ್ನೆಲುಬು ಎಂದು ಭಾಷಣದಲ್ಲಿ ಎಲ್ಲರೂ ಕೊಂಡಾಡುವ ರೈತರ ಬದುಕು ನೆಲ ಹಿಡಿದಿದೆ.

3) ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಅಂದರೆ ಸುಮಾರು ಶೇಕಡಾ 54ರಷ್ಟು ಉದ್ಯೋಗವನ್ನು ಸೃಷ್ಟಿಸುವ ಮತ್ತು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುವ ಕೃಷಿ ಕ್ಷೇತ್ರವನ್ನು ಬಜೆಟ್ ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.

4) 2022-23ರ ಬಜೆಟ್ ಗೆ ಹೋಲಿಸಿದರೆ ಈ ಬಜೆಟ್ ನಲ್ಲಿ ಕೃಷಿಕ್ಷೇತ್ರಕ್ಕೆ ರೂ.8.468.21 ಕೋಟಿ ಹಣ ಕಡಿಮೆ ನೀಡಲಾಗಿರುವುದೇ ಈ ನಿರ್ಲಕ್ಷ್ಯಕ್ಕೆ ಸಾಕ್ಷಿ. ಸಣ್ಣ ಮತ್ತು ಮಧ್ಯಮ ರೈತರನ್ನು ಕೂಡಾ ಕಡೆಗಣಿಸಲಾಗಿದೆ.

5) ಎಂಎಸ್‌ಪಿಯಲ್ಲಿನ ಅನ್ಯಾಯ, ಅವೈಜ್ಞಾನಿಕ ಬೆಳೆ ವಿಮೆ, ಸಾಲದಹೊರೆ, ನೆರೆ ಮತ್ತು ಬರಪರಿಹಾರದಲ್ಲಿನ ಕೊರತೆಗಳ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲ. ರೈತರ ಆದಾಯವನ್ನು ದುಪ್ಪಟ್ಟು ಮಾಡಲಾಗುವುದು ಎಂಬ ಘೋಷಣೆ ಪೊಳ್ಳಾಗಿದೆ. ಕನಿಷ್ಠ ಸಣ್ಣ ಹಿಡುವಳಿದಾರ ರೈತರ ಸಾಲವನ್ನಾದಾರೂ ಮನ್ನಾ ಮಾಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ.

6) ರೈತರಿಗೆ ಸಾಲ ನೀಡಲು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ರೈತರನ್ನು ಋಣಮುಕ್ತಗೊಳಿಸಬೇಕಾಗಿರುವ ಸರ್ಕಾರ ಅವರನ್ನು ಇನ್ನಷ್ಟು ಸಾಲದ ಬಲೆಗೆ ನೂಕಲು ಹೊರಟಿದೆ. ಹೊಸ ಸಾಲ ಪಡೆದು ಹಳೆಸಾಲ ತೀರಿಸಿ ಎನ್ನುವುದನ್ನು ಸರ್ಕಾರ ಹೇಳಿದೆ. ಈ ಸಾಲದ ಬಡ್ಡಿದರ ಎಷ್ಟು ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.

7) ಹತ್ತಿಬೆಳೆಯನ್ನು ಹೊರತುಪಡಿಸಿದರೆ ಬೇರೆ ಯಾವ ಬೆಳೆಗಳಿಗೂ ಬೆಳೆ ಕೇಂದ್ರಿತ ಯೋಜನೆಗಳು ಬಜೆಟ್ ನಲ್ಲಿ ಇಲ್ಲ. ತೋಟಗಾರಿಕಾ ಬೆಳೆಗಳನ್ನು ಪ್ರಸ್ತಾಪ ಮಾಡಲಾಗಿದ್ದರು ಅಲ್ಲಿಯೂ ಬೆಳೆ ಕೇಂದ್ರಿತ ಯೋಜನೆ ಇಲ್ಲ. ಉದಾಹರಣೆಗೆ ತೆಂಗು, ಅಡಿಕೆ ಇತ್ಯಾದಿ ಬೆಳೆಗಳಿಗೆ ನಿರ್ಧಿಷ್ಟ ಯೋಜನೆಗಳನ್ನು ಹೇಳಿಲ್ಲ.

8) ಭದ್ರ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆ ಪೂರ್ಣಗೊಳ್ಳಬೇಕಾದರೆ ರೂ.23,000 ಕೋಟಿ ಅವಶ್ಯಕತೆಯಿದೆ. ಕೇಂದ್ರದ ಬಿಜೆಪಿ ಸರ್ಕಾರ ನೀಡಲು ಒಪ್ಪಿರುವುದು ಯೋಜನಾ ವೆಚ್ಚದ ಕಾಲುಭಾಗ ಮಾತ್ರ.

9) ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿರುವ ಹಣದಲ್ಲಿ 40% ಕಮಿಷನ್ ಕಳೆದರೆ ಕೊನೆಗೆ ಯೋಜನೆಗೆ ಸಿಗಲಿರುವುದು ರೂ.3000 ಕೋಟಿಗಿಂತಲೂ ಕಡಿಮೆ. ನಿಗದಿ ಪಡಿಸಿರುವ ಹಣ ಕೂಡಾ ಒಂದು ವರ್ಷಕ್ಕೋ ಐದು ವರ್ಷಕ್ಕೋ ಎನ್ನುವದನ್ನೂ ಸ್ಪಷ್ಟಪಡಿಸಿಲ್ಲ.

10) ಬಹಳ ಮುಖ್ಯವಾಗಿ ಕೃಷ್ಣಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಯೋಜನೆ ಅನುಷ್ಠಾನಗೊಳ್ಳಬೇಕಾದರೆ ‘ಬಿ ಸ್ಕೀಮ್’ ಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥವಾಗಬೇಕು. ಅಲ್ಲಿಯ ವರೆಗೆ ಈ ಹಣವನ್ನು ಖರ್ಚು ಮಾಡುವ ಹಾಗಿಲ್ಲ.

11) ಕೃಷ್ಣಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಪೈಸೆ ಹಣವನ್ನೂ ನೀಡಿಲ್ಲ. ಉಪನಗರ ರೈಲ್ವೆ ಮತ್ತು ಮೆಟ್ರೋ ರೈಲು ಯೋಜನೆಗೆ ಹೆಚ್ಚಿನ ಅನುದಾನ ನೀಡಬಹುದೆಂಬ ನಿರೀಕ್ಷೆ ಇತ್ತು ಅದೂ ಸುಳ್ಳಾಗಿದೆ.

12) ಆಹಾರ ಸಬ್ಸಿಡಿಯನ್ನು ಶೇಕಡಾ 31ರಷ್ಟು ಕಡಿಮೆ ಮಾಡಲಾಗಿದೆ. 2022-23ರಲ್ಲಿ ರೂ.2,87,194 ಕೋಟಿಯಷ್ಟು ಆಹಾರ ಸಬ್ಸಿಡಿ ನೀಡಲಾಗಿತ್ತು. ಈ ಬಾರಿ ಅದನ್ನು ರೂ.1,97,350 ಕೋಟಿಗೆ ಇಳಿಸಲಾಗಿದೆ.

13) ನರೇಗಾ ಯೋಜನೆಗೆ ಶೇಕಡಾ 32ರಷ್ಟು ಕಡಿಮೆ ಅನುದಾನ ನಿಗದಿಪಡಿಸಲಾಗಿದೆ. 2022-23ರಲ್ಲಿ ರೂ.89,154 ಕೋಟಿ ಗಳಷ್ಟು ನೀಡಲಾಗಿದ್ದ ಅನುದಾನವನ್ನು 2023-24ರ ಸಾಲಿನಲ್ಲಿ ರೂ.61,032 ಕೋಟಿಗೆ ಇಳಿಸಲಾಗಿದೆ.

14) ಎಲ್.ಪಿ.ಜಿ. ಸಬ್ಸಿಡಿಯನ್ನು ಶೇಕಡಾ 75ರಷ್ಟು ಕಡಿತಗೊಳಿಸಲಾಗಿದೆ. 2022-23ರಲ್ಲಿ ರೂ.9,170 ಕೋಟಿಗಳಷ್ಟಿದ್ದ ಎಲ್‌ಪಿಜಿ ಸಬ್ಸಿಡಿಯನ್ನು 2023-24ರ ಸಾಲಿಗೆ ರೂ.2,257 ಕೋಟಿಗೆ ಇಳಿಸಲಾಗಿದೆ.

15) ಪ್ರಧಾನ ಮಂತ್ರಿ ಆವಾಸ್ ಯೋಜನಾ ವೆಚ್ಚವನ್ನು ಶೇಕಡಾ 66ರಷ್ಟು ಹೆಚ್ಚಿಸಲಾಗಿದೆ. ಪ್ರತಿಮನೆ ನಿರ್ಮಾಣ ವೆಚ್ಚವನ್ನು ರೂ.48,000 ರೂಪಾಯಿಗಳಿಂದ ರೂ.79,590 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳ ಬಡ ಕುಟುಂಬಗಳಿಗೆ ನೆರವಾಗುವುದಕ್ಕೋ? ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಿಕ್ಕೋ?

16) ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರವೇ ಶೇಕಡಾ 50ರಷ್ಟು ಮನೆಗಳನ್ನು ನಿರ್ಮಿಸಲಾಗಿಲ್ಲ. ಬಹಳ ಮುಖ್ಯವಾಗಿ ನಗರ ಪ್ರದೇಶದಲ್ಲಿರುವ ಕೊಳಗೇರಿ ನಿವಾಸಿಗಳ ವಸತಿ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾಪ ಬಜೆಟ್ ನಲ್ಲಿ ಇಲ್ಲ.

17) ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದರೂ ಅವರು ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಒಂದೆರಡು ಬಾರಿ ಕರ್ನಾಟಕದ ಹೆಸರನ್ನು ಉಲ್ಲೇಖಮಾಡಿದ ಹೊರತಾಗಿ ವಿಶೇಷ ನೆರವಿನ ಘೋಷಣೆಗಳನ್ನು ಮಾಡಿಲ್ಲ.

18) ಕೇಂದ್ರ ಬಿಜೆಪಿ ಸರ್ಕಾರದ ಅಡಿಯಾಳಿನಂತೆ ವರ್ತಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯಲು ಸಂಪೂರ್ಣ ವಿಫಲವಾಗಿದೆ.

19) ಸಾಮಾನ್ಯವಾಗಿ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಸಂಸತ್ ಸದಸ್ಯರ ಜೊತೆ ಸಮಾಲೋಚನೆ ನಡೆಸಿ ರಾಜ್ಯದ ಬೇಡಿಕೆಗಳನ್ನು ಕೇಂದ್ರ ಬಿಜೆಪಿ ಸರ್ಕಾರದ ಮುಂದಿಡುವುದು ರೂಢಿ. ಆದರೆ ಈ ಬಾರಿ ಈ ಸಂಪ್ರದಾಯವನ್ನು ಮುರಿಯಲಾಗಿದೆ.

20) ರಾಜ್ಯದಿಂದ ಆರಿಸಿಹೋಗಿರುವ ರಾಜ್ಯದ 25 ಲೋಕಸಭಾ ಸದಸ್ಯರು ಮತ್ತು ಆರು ರಾಜ್ಯಸಭಾ ಸದಸ್ಯರಿದ್ದಾರೆ. ಇವರಲ್ಲಿ ಯಾರೋಬ್ಬರು ರಾಜ್ಯದ ಬೇಡಿಕೆಗಳ ಬಗ್ಗೆಯಾಗಲಿ, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆಯಾಗಲಿ ಎಲ್ಲಿಯೂ ಸೊಲ್ಲೆತ್ತಿಲ್ಲ, ಇದರಿಂದಾಗಿ ಕೇಂದ್ರ ಸರ್ಕಾರ ಕೂಡಾ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ.