“ಮುಸ್ಲಿಮರ ನಂಬಿಕೆಗೆ-ವಿಶ್ವಾಸಕ್ಕೆ ಘಾಸಿಯುಂಟು ಮಾಡಿ, ಸಮಾಜ ಒಡೆದು ಗಲಭೆಯೆಬ್ಬಿಸಿ ಅಧಿಕಾರಕ್ಕೇರುವ ಷಡ್ಯಂತ್ರ ಇದಾಗಿದೆ. ಈ ಸಂವಿಧಾನ ವಿರೋಧಿ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು” ವೆಲ್‌ಫೇರ್ ಪಾರ್ಟಿ.
ಮುಸ್ಲಿಮರ ವಿರುದ್ದ ಕೊಳಕು ನಾಲಗೆ ಹರಿಬಿಟ್ಟು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರ ವಿರುದ್ದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಸರ್ಕಾರವನ್ನು ಆಗ್ರಹಿಸಿದ್ದಾರೆ .
ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಈಶ್ವರಪ್ಪ, ಮುಸ್ಲಿಮರ ವಿರುದ್ದ ಕೊಳಕು ನಾಲಿಗೆ ಹೊರಚಾಚಿ ಹರಿಯಬಿಟ್ಟು ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ. ಲಂಗುಲಗಾಮಿಲ್ಲದೆ ಮಾತನಾಡುತ್ತಿರುವ ಈಶ್ವರಪ್ಪರ ಮಾನಸಿಕ ಆರೋಗ್ಯವನ್ನು ಪರೀಕ್ಷಿಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದ್ದಾರೆ.
ಮಸೀದಿ ಒಡೆದು ಪುಡಿ ಮಾಡುತ್ತೇವೆ ಎಂದು ಬಹಿರಂಗವಾಗಿ ಸರ್ಕಾರಕ್ಕೆ ಅವಾಝ್ ನೀಡಿ, ಮುಸಲ್ಮಾನ ಸಮುದಾಯವನ್ನು ಕೆಣಕುವ ಹುನ್ನಾರ ಮಾಡಿದ್ದಾರೆ. ಲೋಕಸಭಾ ಚುನಾವಣಾ ಸಿದ್ದತೆಯಲ್ಲಿರುವ ಬಿಜೆಪಿ, ಇಂತಹ ಕೋಮು ಪ್ರಚೋದಕ ಮಾತುಗಳನ್ನೇ ಅಸ್ತ್ರ ಮಾಡಿಕೊಳ್ಳುವ ಸೂಚನೆ ದಟ್ಟವಾಗಿದೆ ಎಂದು ಕಿಡಿಕಾರಿದ್ದಾರೆ.
ಕಲ್ಲಡಕ ಪ್ರಭಾಕರ್ ಭಟ್ ಮೂಲಕ ಅದಕ್ಕೆ ಚಾಲನೆ ನೀಡಿ, ಅದನ್ನು ಈಶ್ವರಪ್ಪ ಮುಂದುವರಿಸುತ್ತಿದ್ದಾರೆ. ಮುಸ್ಲಿಮರ ನಂಬಿಕೆಗೆ- ವಿಶ್ವಾಸಕ್ಕೆ ಘಾಸಿಯುಂಟು ಮಾಡಿ, ಸಮಾಜ ಒಡೆದು ಗಲಭೆಯೆಬ್ಬಿಸಿ ಅಧಿಕಾರಕ್ಕೇರುವ ಷಡ್ಯಂತ್ರ ಇದಾಗಿದೆ. ಈ ಸಂವಿಧಾನ ವಿರೋಧಿ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಈ ಸರಣಿ ಮುಂದುವರಿಯಲಿದೆ ಎಂದು ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಬಾಯಲ್ಲಿ ಶ್ರೀರಾಮನ ಹೆಸರು ಹೇಳಿಕೊಂಡು, ರಾಕ್ಷಸೀಯ ಮುಖ ಪ್ರದರ್ಶಿಸುವ ಮೂಲಕ ಈಶ್ವರಪ್ಪ ವರಿಷ್ಟರ ಕೃಪೆ ಗಿಟ್ಟಿಸಲು ಹವಣಿಸುತ್ತಿದ್ದಾರೆ. ಈಗಾಗಲೇ ಮೂಲೆಗುಂಪಾಗಿರುವ ಈಶ್ವರಪ್ಪರ ಬಳಿ ಕೊಳಕು ನಾಲಿಗೆ ಮಾತ್ರ ಅಸ್ತ್ರವಾಗಿದೆ. ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅದನ್ನು ಪ್ರಯೋಗಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಇವರನ್ನು ಬಂಧಿಸಿ ಈ ರಾಜ್ಯದ ಜನರ ಹಿತ ಹಾಗೂ ನೆಮ್ಮದಿಯನ್ನು ಕಾಪಾಡಲು ಸರ್ಕಾರ ಬದ್ದವಾಗಿರಬೇಕು. ಸರ್ಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದೇ ಇರವುದರಿಂದ ಇಂಥ ಸಮಾಜ ಘಾತಕ ಶಕ್ತಿಗಳಿಗೆ ಧ್ಯರ್ಯ ಸಿಗುತಿದ್ದೆ. ರಾಜಕೀಯ ಲೆಕ್ಕಚಾರ ಬಿಟ್ಟು ಸರ್ಕಾರ ಸಮಾಜದ ಹಿತದೃಷ್ಟಿಯಿಂದ ಕಠಿಣ ಕ್ರಮ ಜರುಗಿಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.