ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
5 Guarantee Archives » Dynamic Leader
November 22, 2024
Home Posts tagged 5 Guarantee
ರಾಜ್ಯ

“ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ” ಎಂದು ವಿವೇಕಾನಂದರು ತಿಳಿಸಿದರು: ಸಿದ್ದರಾಮಯ್ಯ

ಶಿವಮೊಗ್ಗ: ಶಿವಮೊಗ್ಗದಲ್ಲಿ ಲಕ್ಷಾಂತರ ಯುವಸಮೂಹದ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಗ್ಯಾರಂಟಿ “ಯುವನಿಧಿ” ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಇವರ ಜನ್ಮ ದಿನದಂದೇ ನನ್ನ ಯುವಕ, ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೇವಾಲ ಅವರು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ ಹೆಚ್ಚಾಗಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿರುವ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗಗಳ ಸಮಸ್ಯೆಗೆ ಪರಿಹಾರವಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು; ಪ್ರಣಾಳಿಕೆಯಲ್ಲಿ ಘೋಷಿಸಿದೆವು. ಘೋಷಿಸಿದಂತೆ ಜಾರಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು, ಯುವತಿಯರು 130 ಕೋಟಿ 28 ಲಕ್ಷ ಉಚಿತ ಟಿಕೇಟ್ ಪಡೆದು ಪ್ರಯಾಣ ಮಾಡಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬಗಳಿಗೆ ಉಚಿತವಾಗಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಈ ಕೋಟಿ ಕುಟುಂಬಗಳು ನಯಾಪೈಸೆ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ ಎಂದು ಹೇಳಿದರು.

ಇದೇ ರೀತಿ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಪ್ರತೀ ಕುಟುಂಬಗಳಿಗೆ ಕೊಡುತ್ತಿದ್ದೇವೆ. 1 ಕೋಟಿ 17 ಲಕ್ಷ ಮಹಿಳೆಯರಿಗೆ, ಯುವತಿಯರಿಗೆ ಪ್ರತೀ ತಿಂಗಳು 2,000 ರೂ ತಲುಪಿಸುತ್ತಿದ್ದೇವೆ‌. ಇಂಥ ಸಾಧನೆ ಹಿಂದೆ ಯಾವ ಕಾಲದಲ್ಲೂ ಆಗಿಲ್ಲ. ಇದನ್ನೆಲ್ಲಾ ಮಾಡಿದ್ದು ನಾವು. ನಮ್ಮದು ನುಡಿದಂತೆ ಮಾಡಿ ತೋರಿಸಿದ ಸರ್ಕಾರ ಎಂದು ಹೇಳಿದರು.

ಯುವಕ ಯುವತಿಯರಿಗೆ ಹಣದ ಜತೆಗೆ ಉದ್ಯೋಗ ಪಡೆದುಕೊಳ್ಳಲು ಅಗತ್ಯವಾದ ಕೌಶಲ್ಯ ತರಬೇತಿಯನ್ನೂ ನೀಡಿ ಅವರಿಗೆ ಉದ್ಯೋಗ ಕೊಡಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಮುಂದುವರೆಯಲಿದೆ. ಯುವಕ ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಈ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದರು.

ವಿವೇಕಾನಂದರ ಜನ್ಮ ದಿನದಂದೇ ಯುವನಿಧಿ ಯೋಜನೆಯನ್ನು ನಾವು ಜಾರಿ ಮಾಡಿದ್ದೇವೆ. ಈಗಾಗಲೇ 70 ಸಾವಿರ ಯುವಕ-ಯುವತಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ‌. ರಾಜೀವ್ ಗಾಂಧಿ ಅವರು ದೇಶದ ಯುವಕರ ಭವಿಷ್ಯಕ್ಕಾಗಿ ಸದಾ ತುಡಿಯುತ್ತಿದ್ದರು. ಅವರ ಆಶಯಕ್ಕೆ ಪೂರಕವಾಗಿ ಯುವನಿಧಿ ಯೋಜನೆ ಮತ್ತು ನಮ್ಮ ಸರ್ಕಾರ ಕೆಲಸ ಮಾಡಲಿದೆ. ಪ್ರತಿ ನಿರುದ್ಯೋಗಿ ಯುವಕ ಯುವತಿಯರು ಯೋಜನೆಗೆ ನೋಂದಾಯಿಸಿಕೊಂಡು ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡೀದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ತಿಳಿಸಿದರು. 1985ರಲ್ಲಿ ರಾಜೀವ್ ಗಾಂಧಿ ಅವರು ದೇಶದಲ್ಲಿ ಮೊದಲ ಬಾರಿಗೆ ವಿವೇಕಾನಂದ ಜಯಂತಿಯನ್ನು ಆರಂಭಿಸಿದರು. ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು, ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು; ಜಾರಿಗೆ ತರಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಅದನ್ನೇ. ಹೋರಾಟದ ಹಿನ್ನೆಲೆಯ ಜಿಲ್ಲೆ ಶಿವಮೊಗ್ಗದಿಂದಲೇ “ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ” ಆಗಲಿ. ಇದಕ್ಕಾಗಿ ಜನ ಚಳವಳಿ ನಡೆಯಲಿ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕ್ರೀಡಾ ಸಚಿವ ನಾಗೇಂದ್ರ, ಮೀನುಗಾರಿಕಾ ಸಚಿವ ಮಾಂಕಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಭೀಮಣ್ಣ ನಾಯಕ್, ಸಂಗಮೇಶ್, ತಮ್ಮಯ್ಯ, ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಾರದಾ ಪೂರ್ಯಾನಾಯಕ, ಚನ್ನಬಸಪ್ಪ, ತರೀಕೆರೆ ಶ್ರೀನಿವಾಸ್, ಅರುಣ್ ಕುಮಾರ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜಕೀಯ

ಕೆಲಸ ಮಾಡದೆ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ, ಬಣ್ಣದ ಮಾತುಗಳಿಂದಲೇ ಜನರ ಹೊಟ್ಟೆ ತುಂಬಿಸುವ ಬಿಜೆಪಿಯ ಪೊಳ್ಳು ಆಡಳಿತವನ್ನು ಜನ ಅರಿತಿದ್ದಾರೆ. ಇಂತಹ ಕಣ್ಕಟ್ಟಿನ ತಂತ್ರಗಳನ್ನು ಇನ್ನು ಮುಂದುವರಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ರೂ.200 ಕಡಿಮೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಕ್ರಮವನ್ನು ಟೀಕಿಸಿದ್ದಾರೆ.

“ಕೊನೆಗೂ ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರೇರಣೆ ಪಡೆದು ಎಲ್.ಪಿ.ಜಿ ಸಿಲಿಂಡರ್ ಬೆಲೆಯನ್ನು ರೂ.200 ಕಡಿಮೆ ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳು. ನಮ್ಮ ಜನಪರವಾದ ಯೋಜನೆಗಳಿಂದ ಪ್ರೇರಿತರಾಗಿ ಜಾರಿಗೆ ತರುವ ಎಲ್ಲ ಯೋಜನೆಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಚುನಾವಣಾ ಪೂರ್ವದಲ್ಲಿ ನಾವು ಪ್ರಣಾಳಿಕೆ ಮೂಲಕ ನೀಡಿದ ಭರವಸೆಗಳಲ್ಲಿ ಪ್ರಮುಖವಾದ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನ್ನು ನೂರು ದಿನಗಳೊಳಗೆ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ನುಡಿದಂತೆ ನಡೆಯುವ ನಮ್ಮ ಬದ್ಧತೆ ನಿಮಗೂ ಪ್ರೇರಣೆಯಾಗಲಿ, ಅದರಿಂದ ಜನರಿಗೆ ಒಳ್ಳೆಯದಾಗಲಿ ಎಂದು ಮನ: ಪೂರ್ವಕವಾಗಿ ಹಾರೈಸುತ್ತೇನೆ.

ಪ್ರಧಾನಿ ನರೇಂದ್ರ ಮೋದಿ ಅವರೇ, 2013ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಹಿಂದಿನ ನಮ್ಮ ಸರ್ಕಾರ ಈಡೇರಿಸಿದ್ದು, ಅದರ ಬಗೆಗಿನ ವಿವರವಾದ ಅಧಿಕೃತ ಮಾಹಿತಿಯನ್ನು ರಾಜ್ಯದ ಜನರ ಮುಂದಿಟ್ಟಿದ್ದೇವೆ. ಈ ನಮ್ಮ ಬದ್ಧತೆ ಕೂಡಾ ನಿಮಗೆ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ. 2014 ಮತ್ತು 2018ರ ಲೋಕಸಭಾ ಚುನಾವಣಾ ಪೂರ್ವದಲ್ಲಿ ಭಾರತೀಯ ಜನತಾ ಪಕ್ಷ ಬಿಡುಗಡೆಗೊಳಿಸಿರುವ ಎರಡು ಪ್ರಣಾಳಿಕೆಗಳು ನನ್ನ ಮುಂದಿದೆ. ಮೂರನೇ ಬಾರಿ ಪ್ರಧಾನ ಮಂತ್ರಿಯಾಗಲು ಹೊರಟಿರುವ ನರೇಂದ್ರ ಮೋದಿ ಅವರೇ, ದಯವಿಟ್ಟು ಈ ಎರಡು ಪ್ರಣಾಳಿಕೆಗಳಲ್ಲಿನ ಎಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಎನ್ನುವ ಲೆಕ್ಕವನ್ನು ನಮಗಲ್ಲವಾದರೂ ದೇಶದ ಜನತೆಗೆ ಕೊಡಿ ಎನ್ನುವುದು ನನ್ನ ವಿನಮ್ರ ವಿನಂತಿ.

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ನೇತೃತ್ವದ ಕೆಂದ್ರ ಸರ್ಕಾರವು ಬಹಳಷ್ಟು ಮೀನಮೇಷ ಎಣಿಸಿದ ನಂತರ ಅಂತಿಮವಾಗಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ರೂ.200 ಕಡಿಮೆ ಮಾಡಿ ಘೋಷಣೆ ಮಾಡಿದೆ. ಆದರೆ, ಮೇಲು ನೋಟಕ್ಕೆ ಇದರಲ್ಲಿ ಕೇಂದ್ರದ ಪಾಲು ಏನೂ ಇಲ್ಲ ಎನ್ನುವುದು ನಿಚ್ಚಳಗೊಂಡಿದೆ. ‘ಕಾರ್ಪೊರೆಟ್‌ ಹೊಣೆಗಾರಿಕೆ’ಯ ರೀತಿ ತೈಲ ಕಂಪೆನಿಗಳೇ ಈ ವೆಚ್ಚವನ್ನು ಭರಿಸಲಿವೆ ಎಂದು ನಿಮ್ಮದೇ ಮಂತ್ರಿಮಂಡಲದ ಸಚಿವರು ಹೇಳುವ ಮೂಲಕ ಅದನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮಾದರಿಯಲ್ಲಿ ಉಚಿತ ಭರವಸೆಗಳನ್ನು ನೀಡಿ ಐದು ರಾಜ್ಯಗಳ ಚುನಾವಣೆ ಎದುರಿಸಲು ಬಿಜೆಪಿ ಪ್ಲಾನ್!

ಅಡುಗೆ ಅನಿಲ ದರ ನಿಗದಿಗೆ ಆಧಾರವಾದ ಅಂತಾರಾಷ್ಟ್ರೀಯ ಮಾರುಕಟ್ಟೆಯ ‘ಸೌದಿ ಸಿಪಿ’ ದರ ಪ್ರತಿ ಟನ್‌ಗೆ ಈ ಆರ್ಥಿಕ ವರ್ಷಾರಂಭದಲ್ಲಿ 732 ಡಾಲರ್‌ ಇದ್ದದ್ದು, ಈಗ 385 ಡಾಲರ್‌ಗೆ ಕುಸಿದಿದೆ. ಅಂದರೆ ಶೇ.48ರಷ್ಟು ಇಳಿಕೆಯಾಗಿದೆ. ಸಿಲಿಂಡರ್ ದರವೂ ಹೆಚ್ಚು ಕಡಿಮೆ ಅರ್ಧದಷ್ಟು ಇಳಿಕೆ ಮಾಡಬೇಕಿತ್ತಲ್ಲವೇ? ಆದರೆ, ಕೇಂದ್ರ ಸರ್ಕಾರ ಇಳಿಕೆ ಮಾಡಿರುವುದು ಪ್ರತಿ ಸಿಲಿಂಡರ್‌ಗೆ ರೂ.200 ಮಾತ್ರ, ಯಾಕೆ ನರೇಂದ್ರ ಮೋದಿ ಅವರೇ?

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ಜನರ ಮೇಲಿನ ಬೆಲೆ ಏರಿಕೆಯ ಹೊರೆ ಇಳಿಸುವ ಪ್ರಾಮಾಣಿಕ ಉದ್ದೇಶ ಕೇಂದ್ರ ಸರ್ಕಾರ ಹೊಂದಿದ್ದರೆ ಪ್ರತಿ ಸಿಲಿಂಡರ್‌ನ ಬೆಲೆಯನ್ನು ಕನಿಷ್ಠ ರೂ.500-600ರಷ್ಟು ಇಳಿಸಬೇಕಾಗಿದೆ. ಇದೇ ರೀತಿ ಡೀಸೆಲ್-ಪೆಟ್ರೋಲ್ ಬೆಲೆಯನ್ನು ರೂ.60-70ಕ್ಕೆ ಇಳಿಸಬೇಕಾಗುತ್ತದೆ. ಇದನ್ನು ಮಾಡದೆ ಇದ್ದರೆ ಇದೊಂದು ಕಣ್ಣೊರೆಸುವ ತಂತ್ರ, ಚುನಾವಣಾ ಗಿಮಿಕ್, ಬಾಯಿ ಬಡಾಯಿ ಎಂದು ಹೇಳಬೇಕಾಗುತ್ತದೆ.

ಜಾಗತಿಕವಾಗಿ ಅನಿಲ ಬೆಲೆಯಲ್ಲಿ ಅಪಾರ ಇಳಿಕೆಯಾದಾಗಲೂ ಜನರ ಹಿತಾಸಕ್ತಿಯನ್ನು ರಕ್ಷಿಸದ ಕೇಂದ್ರ ಸರ್ಕಾರ ಬದಲಿಗೆ ತೈಲೋತ್ಪನ್ನ ಕಂಪೆನಿಗಳಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಈಗಲೂ ಸಹ ಅನಿಲ ಬೆಲೆಯನ್ನು ಕೇವಲ ರೂ.200 ಮಾತ್ರವೇ ಇಳಿಕೆ ಮಾಡಿ ತೈಲೋತ್ಪನ್ನ ಕಂಪೆನಿಗಳಿಗೆ ಲಾಭ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದರಲ್ಲಿ, ಜನರ ಹಿತಾಸಕ್ತಿ ಎಲ್ಲಿ ಅಡಗಿದೆ ಪ್ರಧಾನಿ ನರೇಂದ್ರ ಮೋದಿ ಅವರೇ?

ಜನತೆಯನ್ನು ಬೆಲೆ ಏರಿಕೆಯಿಂದ ರಕ್ಷಿಸುವ, ಸ್ವಾವಲಂಬಿಗಳಾಗಿಸಿರುವ ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತು ಅವರ ಪಕ್ಷ ಅವುಗಳಿಂದ ಭಯಭೀತರಾಗಿ ತೋರಿಕೆಗೆ ಮಾತ್ರ ಇಂತಹ ಕ್ರಮಕ್ಕೆ ಮುಂದಾಗಿರುವುದು ಸ್ಪಷ್ಟ. ಆದರೆ, ದೇಶದ ಜನತೆ “ಕೆಲಸ ಮಾಡದೆ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ, ಬಣ್ಣದ ಮಾತುಗಳಿಂದಲೇ ಜನರ ಹೊಟ್ಟೆ ತುಂಬಿಸುವ” ಬಿಜೆಪಿಯ ಪೊಳ್ಳು ಆಡಳಿತವನ್ನು ಅರಿತಿದ್ದಾರೆ. ಇಂತಹ ಕಣ್ಕಟ್ಟಿನ ತಂತ್ರಗಳನ್ನು ಇನ್ನು ಮುಂದುವರಿಸಲಾಗದು.” ಎಂದು ಹೇಳಿದ್ದಾರೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿಯ ಉಚಿತ ಯೋಜನೆಗಳನ್ನು ಘೋಷಿಸುವುದು ಎಂಬುದನ್ನು ಸೂಚಿಸುವಂತೆ ಪಕ್ಷದ ನಾಯಕತ್ವ ಎಲ್ಲಾ ರಾಜ್ಯ ಬಿಜೆಪಿ ನಾಯಕರನ್ನು ಕೇಳಿಕೊಂಡಿವೆ.

ಚುನಾವಣಾ ಆಯೋಗವು ಐದು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ ಮತ್ತು ತೆಲಂಗಾಣಗಳಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮಿನಿ ಸಾರ್ವತ್ರಿಕ ಚುನಾವಣೆ ಎಂದೇ ಬಿಂಬಿಸಲಾಗಿದೆ.

ಹೀಗಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತು ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಇದರಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ, ಮಿಜೋರಾಂನಲ್ಲಿ ಬಿಜೆಪಿ ಮೈತ್ರಿ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ ಅಧಿಕಾರದಲ್ಲಿದೆ.

ಕರ್ನಾಟಕದಲ್ಲಿ ಅಧಿಕಾರ ಹಿಡಿದುಕೊಂಡು ಉತ್ಸಾಹದಲ್ಲಿರುವ ಕಾಂಗ್ರೆಸ್, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಅಧಿಕಾರ ಉಳಿಸಿಕೊಳ್ಳಲು ಮತ್ತು ಮಧ್ಯಪ್ರದೇಶ ಹಾಗೂ ತೆಲಂಗಾಣದಲ್ಲಿ ಅಧಿಕಾರಕಾರಕ್ಕೆ ಬರಲು ತೀವ್ರ ಪೈಪೋಟಿ ನಡೆಸುತ್ತಿವೆ. ಕರ್ನಾಟಕದಲ್ಲಿ ಚುನಾವಣಾ ಕೆಲಸದಲ್ಲಿ ತೊಡಗಿದ್ದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಳ್ ಅವರಿಗೆ ಇದರ ಹೊಣೆಯನ್ನು ರಾಹುಲ್ ವಹಿಸಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್ 16 ರಂದು ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮೋದಿ, ಗೆಲುವಿಗೆ ಶ್ರಮಿಸುವಂತೆ ಸಲಹೆ ನೀಡಿದ್ದರು.

ಇದನ್ನೂ ಓದಿ: ಅಡುಗೆ ಸಿಲಿಂಡರ್ ಬೆಲೆ: ಸಂಕಷ್ಟದಲ್ಲಿರುವ ನಾಡಿನ ಜನರ ಕೋಪವನ್ನು 200 ರೂಪಾಯಿ ಸಬ್ಸಿಡಿಯಿಂದ ಕಡಿಮೆ ಮಾಡಲು ಸಾಧ್ಯವಿಲ್ಲ; ಇದು ಚುನಾವಣೆ ಲಾಲಿಪಾಪ್!

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಹಲವು ಕಾರಣಗಳಿದ್ದರೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕುಟುಂಬದ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ., ನಿರುದ್ಯೋಗಿ ಪದವೀಧರರಿಗೆ 3,000 ರೂ., ಡಿಪ್ಲೊಮಾದಾರರಿಗೆ ತಿಂಗಳಿಗೆ 1,500 ರೂ., 200 ಯೂನಿಟ್ ಉಚಿತ ವಿದ್ಯುತ್ ಮುಖ್ಯ ಕಾರಣಗಳಾಗಿದ್ದವು.

ಇದನ್ನು ಬಿಜೆಪಿ ನಾಯಕತ್ವದ ಗಮನಕ್ಕೆ ತಂದಿರುವ ರಾಜ್ಯ ನಾಯಕರುಗಳು, ಉಚಿತ ಯೋಜನೆಗಳನ್ನು ಘೋಷಿಸದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಬಿಜೆಪಿ ಕೇಂದ್ರ ಸಮಿತಿ ಸಭೆಯಲ್ಲೂ ಚರ್ಚೆ ನಡೆದಿದೆ. ಅದರ ಬೆನ್ನಲ್ಲೇ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂ.ಗಳನ್ನು ಕಡಿಮೆ ಮಾಡಲಾಯಿತು.

ಅದನ್ನು ಅನುಸರಿಸಿ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಯಾವ ಉಚಿತ ಕಾರ್ಯಕ್ರಮಗಳನ್ನು ಘೋಷಿಸಲಿದೆ ಎಂಬುದನ್ನು ತಿಳಿದುಕೊಂಡು, ಅದನ್ನು ಈಗಲೇ ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಬಿಜೆಪಿ ನಾಯಕತ್ವ ಕೇಳಿಕೊಂಡಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿಯ ಉಚಿತ ಕಾರ್ಯಕ್ರಮಗಳನ್ನು ಘೋಷಿಸುವುದು ಎಂಬುದರ ಕುರಿತು ಬಿಜೆಪಿ ರಾಜ್ಯ ಮುಖಂಡರು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಸಲಹೆ ನೀಡುವಂತೆ ಸೂಚಿಸಿದ್ದಾರೆ.

ಈ ಹಿನ್ನಲೆಯಲ್ಲಿ, 300 ಯೂನಿಟ್‌ ಉಚಿತ ವಿದ್ಯುತ್‌, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ದಿನಕ್ಕೆ ಎರಡು ಜಿಬಿ ಮೊಬೈಲ್‌ ಡೇಟಾ, ಉಚಿತ ಸ್ಮಾರ್ಟ್‌ಫೋನ್‌, ಗೃಹಿಣಿಯರಿಗೆ ತಿಂಗಳಿಗೆ 3 ಸಾವಿರ ರೂ. ಸೇರಿದಂತೆ ಹಲವು ಭರವಸೆಗಳನ್ನು ನೀಡಲು ಬಿಜೆಪಿ ಮುಂದಾಗಿದೆ. ಎಂದು ತಿಳಿದು ಬಂದಿದೆ.

ದೇಶ ರಾಜ್ಯ

ನಾನು ಆಯವ್ಯಯ ಸಿದ್ಧತೆಗೆ ಕುಳಿತಾಗ ಬುದ್ಧ, ಬಸವಣ್ಣ, ಅಂಬೇಡ್ಕರ್‌, ಗಾಂಧೀಜಿ, ನೆಹರು, ಮಹಾತ್ಮ ಫುಲೆ, ಕುವೆಂಪು, ನಾರಾಯಣ ಗುರುಗಳು ಇಂತಹ ಮಹಾತ್ಮರು ನೆನಪಾಗುತ್ತಾರೆ. ಇವರೆಲ್ಲರ ಕನಸಿನ ನಾಡನ್ನು ಕಟ್ಟುವ ಆಶಯದ ಬಜೆಟ್ ರೂಪಿಸಬೇಕು ಎನ್ನುವುದು ನನ್ನ ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ಸಾಮಾಜಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯ ಏನು ಪ್ರಯೋಜನ? ಎಂದು ಬಾಬಾ ಸಾಹೇಬರು ಪ್ರಶ್ನಿಸಿದ್ದರು. ಅದಕ್ಕಾಗಿಯೇ ಅವರು, “ರಾಜಕೀಯ ಪ್ರಭುತ್ವದ ತಳಪಾಯ ಸಾಮಾಜಿಕ ಪ್ರಭುತ್ವದಲ್ಲಿರಬೇಕು” ಎಂದಿದ್ದರು. ಬಸವಣ್ಣ ದಾಸೋಹದ ಮಹತ್ವ ಹೇಳಿದ್ದರು. ಹೀಗೆ‌ ಈ ಎಲ್ಲಾ ಮಹಾನುಭಾವರ ಸರ್ವರನ್ನೂ ಒಳಗೊಳ್ಳುವ ಪ್ರಗತಿಯ ಮಾದರಿಯನ್ನು ನಾನು ಪಾಲಿಸಿದ್ದೇನೆ. ಸರ್ವರ ಅಭಿವೃದ್ಧಿಗೆ ಪೂರಕವಾದ ಬಜೆಟ್ ರೂಪಿಸಿದ್ದೇನೆ.

ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಬಜೆಟ್ ನಲ್ಲಿ ಈಡೇರಿಸಿದ್ದೇವೆ. ಬಜೆಟ್ ನಲ್ಲಿ ಅಗತ್ಯ ಅನುದಾನ ಕೊಟ್ಟು ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಈಗಾಗಲೇ ಜಾರಿ ಮಾಡಿದ್ದೇವೆ. ನಾವು ಹೇಳಿದ್ದನ್ನು ಮಾಡಿದ್ದೇವೆ. ಬಿಜೆಪಿಯವರು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ” ಎಂದರು. ಆದರೆ ತಾವು ಹೇಳಿದಂತೆ ನಡೆದುಕೊಳ್ಳಲಿಲ್ಲ. ಹೀಗಾಗಿ ಬಿಜೆಪಿಯ ಟೊಳ್ಳುತನ, ಬೇಜವಾಬ್ದಾರಿತನ, ನಕಲಿತನ ನಾಡಿನ ಜನರೆದುರು ಬೆತ್ತಲಾಗಿದೆ. ಗುಜರಾತ್ ಮಾದರಿ ಎಂದು ಭಾಷಣ ಕೊಚ್ಚುತ್ತಿದ್ದವರು ಕರ್ನಾಟಕದ ಗ್ಯಾರಂಟಿ ಮಾದರಿಗೆ, ಕರ್ನಾಟಕದ ಅಭಿವೃದ್ಧಿ ಮಾದರಿಗೆ ಹೆದರಿದ್ದಾರೆ.

ದುಡಿಯುವ ಜನರ ಜೇಬಿನಲ್ಲಿ ಹಣ ಇರಬೇಕು, ಶ್ರಮಿಕ ಜನರ ಜೇಬಿಗೆ ಹಣ ಹಾಕಬೇಕು ಎನ್ನುವುದು ಕರ್ನಾಟಕ ಮಾದರಿ. ಜನರ ಜೇಬಿಗೆ ಕೈ ಹಾಕಿ ಕಿತ್ತುಕೊಳ್ಳಬೇಕು ಎನ್ನುವುದು ಗುಜರಾತ್ ಮಾದರಿ. ಗುಜರಾತ್ ಮಾದರಿಯಲ್ಲಿ ಪೆನ್ನು, ಪೆನ್ಸಿಲ್, ಬಿಸ್ಕೆಟ್, ಬೆಣ್ಣೆ, ಮಂಡಕ್ಕಿ ಮೇಲೂ ಟ್ಯಾಕ್ಸ್ ಹಾಕಿದರು. ಕರ್ನಾಟಕ ಮಾದರಿಯಲ್ಲಿ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 6 ರಿಂದ 8 ಸಾವಿರ ರೂಪಾಯಿ ಉಳಿತಾಯ, ಉಪಯೋಗ ಆಗುವಂತಹ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಪ್ರತೀ ದಿನ ನಾಡಿನ ಜನತೆ ನಮ್ಮ ಗ್ಯಾರಂಟಿಗಳ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತೀ ದಿನ ಪ್ರತೀ ಕುಟುಂಬಕ್ಕೆ ಸರ್ಕಾರದ ಸ್ಪಂದನೆ ಸಿಗುತ್ತಿದೆ. ಇದು ಬಿಜೆಪಿಯ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ. ಅವರ ಹೊಟ್ಟೆಕಿಚ್ಚು ಅವರನ್ನೇ ಸುಡುತ್ತದೆ.

ಬಿಜೆಪಿಯವರು ವಿಶ್ವಗುರುವಿನ ಬಗ್ಗೆ ಭರ್ಜರಿ ಭಾಷಣ ಮಾಡುತ್ತಾರೆ. ಆ ವಿಶ್ವಗುರುವಿಗೆ ತಮ್ಮ ಪಕ್ಷದಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬರೀ ಭಾಷಣದಿಂದ ನಾಡಿನ, ದೇಶದ ಜನರ ಸಂಕಷ್ಟ ಪರಿಹಾರ ಆಗುವುದಿಲ್ಲ ಎನ್ನುವ ಪಾಠವನ್ನು ವಿಶ್ವಗುರುವಿಗೆ ಜನ ಕಲಿಸಿದ್ದಾರೆ.

ಆರ್ಥಿಕತೆಯ ಚಲನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು “ಕರ್ನಾಟಕ ಮಾದರಿ ಅಭಿವೃದ್ಧಿ”. ಜನರು ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ತತ್ತರಿಸಿದ್ದು, ಅವರ ಬದುಕು ಸುಧಾರಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ದೇಶದಲ್ಲಿಯೇ ದೊಡ್ಡ ಮೊತ್ತ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ, ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವಿಲ್ಲ ಎಂದರು. ಆದರೆ ಈಗಾಗಲೇ 3 ಯೋಜನೆಗಳು ಜಾರಿಯಾಗಿವೆ. ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಾರಂಭವಾಗಿದೆ. ಯುವನಿಧಿ ಯೋಜನೆ ಬಹುತೇಕ ಡಿಸೆಂಬರ್‌ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.

ಎಲ್ಲ ಗ್ಯಾರೆಂಟಿ ಯೋಜನೆಗಳಿಗೆ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ. ಅನುದಾನ ಕ್ರೋಢೀಕರಣವನ್ನೂ ಆಯವ್ಯಯದಲ್ಲಿ ವಿವರಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ವಾರ್ಷಿಕ ಒಟ್ಟು 52,068 ಕೋಟಿ ರೂ.ಗಳು ಅಗತ್ಯವಿದೆ. 1.30 ಕೋಟಿ ಕುಟುಂಬಗಳಿಗೆ ಈ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯಲಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 4-5 ಸಾವಿರ ರೂ. ಅಂದರೆ ವಾರ್ಷಿಕ 48,000- 60,000 ರೂ. ದೊರಕುತ್ತದೆ. ದೇಶದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಜಾತಿ ಧರ್ಮ ನೋಡದೇ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ಈ ವರ್ಷ 35,410 ಕೋಟಿಗಳನ್ನು 5 ಗ್ಯಾರೆಂಟಿಗಳಿಗೆ ಮೀಸಲಿರಿಸಿದ್ದೇವೆ.

ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಸಾಮಾಜಿಕ ಪ್ರಭುತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂಬ ಮಾತಿನಲ್ಲಿ ನಮಗೆ ನಂಬಿಕೆ ಇದೆ. ಹಾಗೂ ಇದಕ್ಕೆ ಬದ್ಧರಾಗಿದ್ದೇವೆ. ಬಜೆಟ್ ಸಿದ್ದಮಾಡುವಾಗ ನಮ್ಮ ಕಣ್ಣಿಗೆ ಅಂಬೇಡ್ಕರ್, ಗಾಂಧಿ, ಬುದ್ಧ, ಕುವೆಂಪು, ನಾರಾಯಣ ಗುರು ಅವರ ಆಶಯಗಳು ಕಾಣುತ್ತವೆ. ಕಟ್ಟಕಡೆಯ ವ್ಯಕ್ತಿ ಸಂತುಷ್ಟವಾಗಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಭಾಗೀದಾರರಾಗಬೇಕು. ಅದರ ಫಲವನ್ನು ಎಲ್ಲರೂ ಸಮಾನರಾಗಿ ಹಂಚಿಕೊಳ್ಳಬೇಕು. ಇದನ್ನೇ ಕುವೆಂಪು ಸಮಬಾಳು, ಸಮಪಾಲು ಎಂದಿದ್ದು.

ನಾವು ಹಿಂದೆಯೂ ನುಡಿದಂತೆ ನಡೆದಿದ್ದೇವೆ. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ 1 ಲಕ್ಷದ 16 ಸಾವಿರ ಕೋಟಿ ರೂ.ಗಳ ಸಾಲವಾಗಿದೆ. 2018 ಮಾರ್ಚ್ ಅಂತ್ಯಕ್ಕೆ 2,45,000 ಕೋಟಿ ಸಾಲ ಇತ್ತು. 2023 ಕ್ಕೆ ಇದು 5,20,೦00 ಕೋಟಿ ರೂ.ಗೆ ಹೆಚ್ಚಾಗಿದೆ.

ನಾವು ಬಡವರ ಪರವಾಗಿದ್ದೇವೆ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿರುವ ಜನರ ಜೇಬಿಗೆ ಹಣ ತುಂಬುವ ಕೆಲಸ ಮಾಡಿದ್ದೇವೆ. ಸಾರ್ವತ್ರಿಕ ಮೂಲ ಆದಾಯವನ್ನು ಎಲ್ಲಾ ಅಭಿವೃದ್ಧಿಯಾಗಿರುವ ರಾಜ್ಯಗಳು ಮಾಡುತ್ತಿವೆ. ಇದು ಕರ್ನಾಟಕ ಮಾದರಿ. ಉದ್ಯೋಗ ಸೃಷ್ಟಿಯಾಗಲು ಆರ್ಥಿಕ ಚಟುವಟಿಕೆಗಳು ಅಗತ್ಯ. ಇಲ್ಲದಿದ್ದರೆ ಹೂಡಿಕೆಗಳು ಆಗುವುದಿಲ್ಲ.

ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. 32 ಸಾವಿರ ಕೋಟಿ ರೂ.ಗಳು ಒಂದು ವರ್ಷಕ್ಕೆ ಖರ್ಚಾಗುತ್ತದೆ. ಒಂದೇ ಯೋಜನೆಗೆ ಇಷ್ಟು ದೊಡ್ಡ ಮೊತ್ತವನ್ನು ವೆಚ್ಚ ಮಾಡುತ್ತಿರುವ ಮೊಲದ ರಾಜ್ಯ ಕರ್ನಾಟಕ. ಇದಕ್ಕಾಗಿ 17,500 ಕೋಟಿ ಈ ವರ್ಷ ಮೀಸಟ್ಟಿದ್ದೇವೆ. ಅನ್ನಭಾಗ್ಯಕ್ಕೆ 10,125 ಕೋಟಿ ರೂ, ಗೃಹಜ್ಯೋತಿಗೆ 13 ಸಾವಿರ ಕೋಟಿ, ಶಕ್ತಿಗೆ 2,800 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.

2022-23ರ ಬಜೆಟ್ ಗಾತ್ರ 2,65,720 ಕೋಟಿ ಇತ್ತು, ನಮ್ಮ ಸರ್ಕಾರದ ಬಜೆಟ್ 3,27,747 ಕೋಟಿ ರೂ.ಇದೆ. ಹಿಂದಿಗಿಂತ 62,027 ಸಾವಿರ ಕೋಟಿ ಜಾಸ್ತಿಯಿದೆ. ಬೆಳವಣಿಗೆಯ ಪ್ರಮಾಣ ಶೇ.22 ಇದೆ. ರೈತರಿಗೆ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ಮುಂಚೆ ನೀಡುತ್ತಿದ್ದೆವು. ಈಗ 5 ಲಕ್ಷದವರೆಗೆ ಮೊತ್ತವನ್ನು ಹೆಚ್ಚಿಸಲಾಗಿದೆ. 10 ಲಕ್ಷದವರೆಗೆ 3% ಬಡ್ಡಿ ಇದ್ದಿದ್ದು , ಈಗ ಅದನ್ನು 15 ಲಕ್ಷಕ್ಕೆ ಏರಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ 9, 10ನೇ ತರಗತಿ ವಿದ್ಯಾರ್ಥಿಗಳಿಗೂ ಸೇರಿ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತಿದೆ.

2013-18ರ ವರೆಗೆ ನಾವು 5 ವರ್ಷದಲ್ಲಿ 14,54,663 ಮನೆಗಳನ್ನು ಕಟ್ಟಿಸಿದ್ದೆವು. ನಾವು ಹಿಂದಿನ ಸರ್ಕಾರಕ್ಕಿಂತ 6 ಲಕ್ಷ ಮನೆಗಳನ್ನು ಹೆಚ್ಚಾಗಿ ನಿರ್ಮಿಸಿದ್ದೆವು. ನಮ್ಮ ಸರ್ಕಾರದ ಅವಧಿಯಲ್ಲಿ 14,169 ಹೆದ್ದಾರಿ ಅಭಿವೃದ್ಧಿಪಡಿಸಿದ್ದೆವು. ಬಿಜೆಪಿ ಸರ್ಕಾರ 8,037 ಕಿ.ಮಿ ಮಾತ್ರ ನಿರ್ಮಿಸಿದ್ದಾರೆ. ಎಸ್ ಸಿಎಸ್ ಪಿ / ಟಿಎಸ್ ಪಿ ಕಾನೂನು ಬಂದ ನಂತರ, ನಮ್ಮ ಸರ್ಕಾರ 5 ವರ್ಷದಲ್ಲಿ 88,530 ಕೋಟಿ ಖರ್ಚು ಮಾಡಿತ್ತು. ನಮ್ಮದು ಬಡವರ ಪರವಾದ ಸರ್ಕಾರ.

ನಮ್ಮ ಬಜೆಟ್‌ ಗಾತ್ರ 2018-19ರಲ್ಲಿ 2,02,297 ಕೊಟಿ ಇತ್ತು. ಆಗ 21,691 ಕೋಟಿ ರೂ. ಎಸ್.ಸಿ/ಎಸ್.ಟಿ ಸಮುದಾಯದ ಯೋಜನೆಗಳಿಗೆ ಮೀಸಲಿಟ್ಟಿದ್ದೆವು. ಈ ಬಾರಿ ಸಹ ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ, ವಿದ್ಯುತ್, ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಸಾಮಾಜಿಕ, ಆರ್ಥಿಕ ವಲಯಕ್ಕೆ ಕಡಿಮೆ ಮಾಡಿಲ್ಲ. ನೀರಾವರಿ, ವಸತಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಮ್ಮ ಸರ್ಕಾರ ಎಲ್ಲರನ್ನು ಒಳಗೊಂಡ ಅಭಿವೃದ್ದಿಯ ಧ್ಯೇಯವನ್ನು ನಂಬಿದೆ.

2023-24ನೇ ಸಾಲಿನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ಆರ್ಥಿಕ ವರ್ಷಕ್ಕೆ ಸರ್ಕಾರದ ಮುಂಗಡ ಪತ್ರವನ್ನು ಮಂಡಿಸಿದ್ದು, ಹೊಸ ಸರ್ಕಾರ ಬಂದ ಮೇಲೆ ಜನರ ಆಶೋತ್ತರಗಳಿಗೆ ಸ್ಪಂದಿಸಲು, ಸರ್ಕಾರದ ನೀತಿ ನಿಲುವುಗಳು, ಪ್ರಣಾಳಿಕೆಯ ಭರವಸೆಗಳನ್ನು ಒಳಗೊಂಡಿರುವ ಆಯವ್ಯಯ ಮಂಡಿಸುವುದು ನಮ್ಮ ಕರ್ತವ್ಯ. ಬಜೆಟ್ ಮೇಲೆ 62 ಜನ ಆಡಳಿತ ಹಾಗೂ ವಿರೋಧ ಪಕ್ಷದವರು ಸೇರಿ ಮಾತನಾಡಿದ್ದಾರೆ. ಸುಮಾರು 12 ಗಂಟೆ 52 ನಿಮಿಷಗಳ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಟೀಕೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಅದೆರಡನ್ನೂ ಸ್ವಾಗತಿಸುತ್ತೇನೆ. ಚರ್ಚೆಯಲ್ಲಿ ಭಾಗವಹಿಸಿ ಅನಿಸಿಕೆಗಳನ್ನು ವ್ಯಕ್ತಮಾಡಿದ ವಿರೋಧ ಪಕ್ಷದವರಿಗೆ ಧನ್ಯವಾದಗಳು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ರಾಜಕೀಯ

ಬೆಂಗಳೂರು: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಯುವ ನಿಧಿ, ಮಹಿಳೆಯರಿಗೆ ಸರ್ಕಾರಿ ಬಸ್ ಸಂಚಾರ ಉಚಿತ ಮುಂತಾದ  5 ಗ್ಯಾರಂಟಿ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಎಲ್ಲಾ ಸಚಿವರುಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದರು.

ನಂತರ ಈ ವಿಚಾರದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, “ನಾವು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ನಮ್ಮ ಎಲ್ಲಾ 5 ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದೇವೆ. ಜೂನ್ 2 ರಂದು ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಅವುಗಳನ್ನು ಜಾರಿಗೆ ಕೊಡುತ್ತೇವೆ” ಎಂದು ಭರವಸೆಯ ಮಾತುಗಳನ್ನು ಆಡಿದರು.

—–

ರಾಗಿ ಬೆಳೆಗಾರರು ಮತ್ತು ರೈತ ಸಮುದಾಯದ ಅಹವಾಲುಗಳನ್ನು ಆಲಿಸಿದ ಮುಖ್ಯಮಂತ್ರಿ: ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ರಾಗಿ ಬೆಳೆಗಾರರು ಮತ್ತು ರೈತ ಸಮುದಾಯದ ಅಹವಾಲುಗಳನ್ನು ಆಲಿಸಿ, ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವ ಮೂಲಕ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಗೆ ಸಮರ್ಪಕವಾಗಿ ಹಣ ಪಾವತಿಯಾಗುವಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.