ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
78ನೇ ಸ್ವಾತಂತ್ರ್ಯ ದಿನಾಚರಣೆ Archives » Dynamic Leader
November 24, 2024
Home Posts tagged 78ನೇ ಸ್ವಾತಂತ್ರ್ಯ ದಿನಾಚರಣೆ
ದೇಶ

ಡಿ.ಸಿ.ಪ್ರಕಾಶ್

ಏಕರೂಪ ನಾಗರಿಕ ಸಂಹಿತೆ ಸೇರಿದಂತೆ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿಯವರ ಮಾತುಗಳು ಪ್ರತ್ಯೇಕತಾವಾದಿ ಉದ್ದೇಶವನ್ನು ಹೊಂದಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಕೆಂಪು ಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದರು. ಆಗ, ಏಕರೂಪ ನಾಗರಿಕ ಸಂಹಿತೆ, ಒಂದು ದೇಶ, ಒಂದು ಚುನಾವಣೆಯಂತಹ ವಿಷಯಗಳ ಕುರಿತು ಅವರ ಅಭಿಪ್ರಾಯಗಳು ವಿವಾದಕ್ಕೆ ಒಳಗಾಗಿದೆ.

‘ಒಂದು ದೇಶ, ಒಂದು ಚುನಾವಣೆ’ ಕುರಿತು ಮಾತನಾಡಿದ ಪ್ರಧಾನಿ ಮೋದಿ, ‘ದೇಶದಲ್ಲಿ ಹಲವು ಚುನಾವಣೆಗಳು ಅಭಿವೃದ್ಧಿಗೆ ಅಡ್ಡಿಯಾಗಿವೆ. ಆದ್ದರಿಂದ, ಒಂದು ದೇಶ, ಒಂದು ಚುನಾವಣೆ ಎಂಬ ಕಲ್ಪನೆಯನ್ನು ರಾಷ್ಟ್ರವು ಅಳವಡಿಸಿಕೊಳ್ಳುವುದು ಅವಶ್ಯಕ. ದೇಶದ ಅಭಿವೃದ್ಧಿಗಾಗಿ ಈ ವಿಚಾರವನ್ನು ಒಪ್ಪಿಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.

ಇದಲ್ಲದೆ, ನಮ್ಮ ದೇಶದ ಸಾಮಾನ್ಯ ನಾಗರಿಕ ಕಾನೂನಿನ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಬಾರಿ ಮಾತನಾಡಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ನಾಗರಿಕ ಕಾನೂನುಗಳು ಧಾರ್ಮಿಕವಾಗಿವೆ ಎಂದು ಬಹುಪಾಲು ಜನರು ನಂಬುತ್ತಾರೆ. ನಮ್ಮ ದೇಶವು 75 ವರ್ಷಗಳಿಂದ ಧಾರ್ಮಿಕ ನಾಗರಿಕ ಕಾನೂನುಗಳೊಂದಿಗೆ ಪ್ರಯಾಣಿಸುತ್ತಿದೆ. ಈ ಕಾನೂನುಗಳು ದೇಶವನ್ನು ಧಾರ್ಮಿಕ ರೀತಿಯಲ್ಲಿ ವಿಭಜಿಸುತ್ತವೆ. ಅಲ್ಲದೆ, ಇದು ಜನರಲ್ಲಿ ತಾರತಮ್ಯವನ್ನು ಉತ್ತೇಜಿಸುತ್ತದೆ.

ಆದ್ದರಿಂದ, ನಾವು ಸಿವಿಲ್ ಕಾನೂನನ್ನು ಬಿಟ್ಟು ‘ಸೆಕ್ಯುಲರ್’ ಸಿವಿಲ್ ಕಾನೂನಿನ ಕಡೆಗೆ ಹೋಗಬೇಕಾಗಿದೆ. ಜಾತ್ಯತೀತ ನಾಗರಿಕ ಕಾನೂನು ಇಂದಿನ ಅಗತ್ಯವಾಗಿದೆ. ಸಂವಿಧಾನ ರಚನೆಕಾರರ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ’ ಎಂದು ಪ್ರಧಾನಿ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದರು.

ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣವನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ‘ಜಾತ್ಯತೀತ ನಾಗರಿಕ ಕಾನೂನು ಇರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸುವ ವಿರೋಧ ಪಕ್ಷಗಳು ಇಂದು ‘ಜಾತ್ಯತೀತ ನಾಗರಿಕ ಕಾನೂನು’ ಕುರಿತು ಪ್ರಧಾನಿಯವರು ಮಾತನಾಡಿದ ಮೇಲೆ ಬಾಯಿ ಮುಚ್ಚಿಕೊಂಡಿದೆ. ಜಾತ್ಯತೀತ ನಾಗರಿಕ ಕಾನೂನು ಬೇಡ ಎಂದು ವಿರೋಧ ಪಕ್ಷಗಳು ಹೇಳಬಹುದೇ?’ ಎಂದು ಬಿಜೆಪಿಗರು ಪ್ರಶ್ನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ‘ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದು, ಮೂರನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಿರುವ ನರೇಂದ್ರ ಮೋದಿ ಅವರು ಹತ್ತು ವರ್ಷಗಳ ಆಡಳಿತದ ಸಾಧನೆಗಳ ಬಗ್ಗೆ ಮಾತನಾಡದೆ, ದೇಶದಲ್ಲಿ ವಿಭಜನೆ ಉಂಟು ಮಾಡುವಂತಹ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ’ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.

ಅಲ್ಲದೆ, ‘ಸಂಸತ್ ಚುನಾವಣೆಗಳು ಮುಗಿದಿದ್ದರೂ, ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರದ ಮೂಡ್‌ನಿಂದ ಇನ್ನೂ ಹೊರಬಂದಿಲ್ಲ ಎಂಬುದನ್ನು ಅವರ ಸ್ವಾತಂತ್ರ್ಯ ದಿನದ ಭಾಷಣ ತೋರಿಸುತ್ತದೆ. ಬಿಜೆಪಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದಂತೆ ಪ್ರಧಾನಿ ಮಾತನಾಡಿದ್ದಾರೆ’ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ‘ತಾನು ಮಾನವನಲ್ಲ ಎಂದು ಹೇಳಿಕೊಳ್ಳುವ ಪ್ರಧಾನಿಯ ದುಷ್ಟ ಭಾವನೆಗಳಿಗೆ ಮತ್ತು ಮಾನಹಾನಿಯ ಅಭಿಪ್ರಾಯಗಳಿಗೆ ಮಿತಿಯೇ ಇಲ್ಲವಾಗಿದೆ. ಇದು ಕೆಂಪುಕೋಟೆಯಲ್ಲಿ ಮಾಡಿದ ಭಾಷಣದ ಮೂಲಕ ಬಹಿರಂಗವಾಗಿದೆ’ ಎಂದು ಕಿಡಿಕಾರಿದ್ದಾರೆ.

ಅಲ್ಲದೆ, ‘ದೇಶದಲ್ಲಿ ಮತೀಯ ನಾಗರಿಕ ಕಾನೂನುಗಳು ಜಾರಿಯಲ್ಲಿವೆ ಎಂದು ಪ್ರಧಾನಿ ಮೋದಿ ಹೇಳಿರುವ ಅಭಿಪ್ರಾಯವು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿದ ಘೋರ ಅವಮಾನವಾಗಿದೆ. ಹೆಚ್ಚಿನ ದೇಶಗಳು ವೈವಿಧ್ಯತೆಯನ್ನು ಗುರುತಿಸುವತ್ತ ಸಾಗುತ್ತಿವೆ. ಬಹುಮುಖಿ ವ್ಯತ್ಯಾಸಗಳು ತಾರತಮ್ಯವನ್ನು ಸೂಚಿಸುವುದಿಲ್ಲ. ಬದಲಿಗೆ ಬಲಿಷ್ಠ ಪ್ರಜಾಪ್ರಭುತ್ವದ ಸಂಕೇತವಾಗಿರುತ್ತದೆ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಮನೋಜ್ ಝಾ ಅವರು, ‘ಭಾರತಕ್ಕೆ ಒಬ್ಬರೇ ಪ್ರಧಾನಿ ಇದ್ದಾರೆ… ವಿರೋಧ ಪಕ್ಷಗಳಿಗೆ ಮತ ಹಾಕಿದವರಿಗೆ ಪ್ರತ್ಯೇಕ ಪ್ರಧಾನಿ ಇಲ್ಲ ಎಂಬುದನ್ನು ಮೋದಿ ಅರಿತುಕೊಳ್ಳಬೇಕು. ಪ್ರತಿ ಬಾರಿಯೂ ನಾವು ಮೋದಿಯವರಿಂದ ವಿಶಾಲ ಮನೋಭಾವವನ್ನು ನಿರೀಕ್ಷಿಸುತ್ತೇವೆ. ಆದರೆ, ನಮಗೆ ಸಿಗುವುದು ನಿರಾಶೆ ಮಾತ್ರ. ಅವರು ಮಾಡಿದ್ದು ರಾಜಕೀಯ ಭಾಷಣ ಅಷ್ಟೆ’ ಎಂದು ಟೀಕಿಸಿದ್ದಾರೆ.

ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು, ‘ಆರ್ ಎಸ್ ಎಸ್ ನ ಪ್ರತ್ಯೇಕತಾವಾದಿ ಅಜೆಂಡಾ ಆಧರಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ’ ಎಂದು ಟೀಕಿಸಿದ್ದಾರೆ. ‘ಪ್ರಧಾನಿಯವರು ಒಂದು ದೇಶ ಒಂದು ಚುನಾವಣೆಯ ಬಗ್ಗೆ ಮಾತನಾಡುತ್ತಾರೆ. ಮೊದಲು, ಅವರು ನ್ಯಾಯಯುತ ಮತ್ತು ಮುಕ್ತ ಚುನಾವಣೆಗಳು ನಡೆಯುವುದನ್ನು ಖಚಿತಪಡಿಸಬೇಕು’ ಎಂದು ವಿರೋಧ ಪಕ್ಷಗಳಿಂದ ಧ್ವನಿ ಎತ್ತಲಾಗಿದೆ.

ದೇಶ

ಪ್ರಧಾನಿ ಮೋದಿಯವರಂತೆ ಒಡೆದು ಆಳುವ ವ್ಯಕ್ತಿ ಹಿಂದೆಂದೂ ಕಾಣಲಿಲ್ಲ ಎಂದು ರಾಜ್ಯಸಭಾ ಸದಸ್ಯ ಹಾಗೂ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಅಧ್ಯಕ್ಷ ಕಪಿಲ್ ಸಿಬಲ್ ಹೇಳಿದ್ದಾರೆ.

ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈಗಿರುವ ಕಾನೂನುಗಳಲ್ಲಿ ಜಾತೀಯತೆ ಇದ್ದು, ಅದಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಾಗುವುದು ಎಂದರು.

ಅಲ್ಲದೆ, ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಜನರನ್ನು ಕೆರಳಿಸಿದೆ ಎಂದೂ ಅವರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಅನೇಕ ವಿರೋಧ ಪಕ್ಷದ ನಾಯಕರು, ಮೋದಿಯವರು ತಮ್ಮ ಬಗ್ಗೆ ಮಾತನಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸುವ ಮೂಲಕ, ಮೋದಿ ಆಡಳಿತದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಪಟ್ಟಿ ಮಾಡಿ ಹೇಳಿದ್ದಾರೆ.

ಆ ರೀತಿಯಲ್ಲಿ, ಮೋದಿಯವರ ವಿವಾದಾತ್ಮಕ ಭಾಷಣದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಹಾಗೂ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಅಧ್ಯಕ್ಷ ಕಪಿಲ್ ಸಿಬಲ್, “ಭಾರತದ ಇತಿಹಾಸವನ್ನು ಅವಲೋಕಿಸಿದರೆ ಈಗಿನ ಪ್ರಧಾನಿಯವರಂತೆ ಒಡೆದು ಆಳುವ ವ್ಯಕ್ತಿ ಹಿಂದೆಂದೂ ಇರಲಿಲ್ಲ.

ಉತ್ತರ ಪ್ರದೇಶದಲ್ಲಿ, ಅಂಗಡಿ ಮಾಲೀಕರ ಹೆಸರನ್ನು ನಾಮಫಲಕದಲ್ಲಿ ಬರೆಯುವಂತೆ ಹೇಳುವುದು, ಬಾಂಗ್ಲಾದೇಶದಿಂದ ಭಾರತಕ್ಕೆ ಬರಲು ಬಯಸುವ ಹಿಂದೂ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಮಾಡುವುದು, ಜೊತೆಗೆ ಏಕರೂಪ ನಾಗರಿಕ ಸಂವಿತೆಯ ಬಗ್ಗೆ ಪ್ರಸ್ತಾಪ ಎಲ್ಲವೂ ಪ್ರತ್ಯೇಕತಾವಾದಿ ರಾಜಕೀಯವಲ್ಲದೆ ಮತ್ತೇನು.

ಕೇಂದ್ರ ಬಿಜೆಪಿ ಒಳನುಸುಳುವಿಕೆಯ ಬಗ್ಗೆ ಮಾತನಾಡುತ್ತದೆ. ಆದರೆ ನಿಜವಾಗಿ ನುಸುಳುತ್ತಿರುವವರು ಯಾರು? ಇವರೆ, ರಾಜಕೀಯ ವ್ಯವಸ್ಥೆಯೊಳಗೆ ನುಸುಳಿ ಪ್ರಜಾಪ್ರಭುತ್ವದ ತಳಹದಿಯನ್ನು ಹತ್ತಿಕ್ಕುತ್ತಿದ್ದಾರೆ” ಎಂದು ಹೇಳಿದ್ದಾರೆ.

ರಾಜ್ಯ

78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾಡಿನ ಜನತೆಗೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದೇಶ!

ಆತ್ಮೀಯ ಬಂಧುಗಳೆ, ನಾಡಿನ ಸಮಸ್ತ ಜನತೆಗೆ 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ಸ್ವಾತಂತ್ರ್ಯದ ಅರಿವು ಮತ್ತು ದೇಶದ ಮೇಲಿನ ಅಭಿಮಾನದ ಕಿಚ್ಚನ್ನು ಹೊತ್ತಿಸಿದ್ದು ರಾಷ್ಟ್ರೀಯ ಚಳುವಳಿ. ಅದರ ನೇತೃತ್ವವನ್ನು ಹೊತ್ತಿದ್ದು ಮಹಾತ್ಮ ಗಾಂಧೀಜಿಯವರ ಮುಂದಾಳತ್ವದ ರಾಷ್ಟ್ರೀಯ ಕಾಂಗ್ರೆಸ್. ಈ ರಾಷ್ಟ್ರೀಯ ಚಳುವಳಿಯ ಭದ್ರ ಬುನಾದಿ ಮೇಲೆ ರೂಪುಗೊಂಡಿದ್ದೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ್ದ ಭಾರತದ ಸಂವಿಧಾನ ಮತ್ತು ಅದನ್ನು ಆಧರಿಸಿದ ಪ್ರಜಾಪ್ರಭುತ್ವ.

ಸ್ವಾತಂತ್ರ್ಯೋತ್ಸವ ಎನ್ನುವುದು ಕೇವಲ ಸಂಭ್ರಮಾಚರಣೆಯ ದಿನ ಆಗಬಾರದು, ಇದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನವೂ ಆಗಬೇಕು.

ಪ್ರಜೆಗಳಾಗಿ ನಾವು ಪ್ರತಿಕ್ಷಣವೂ ಜಾಗೃತರಾಗಿದ್ದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದಮನ ಮಾಡುವ ದುಷ್ಟಶಕ್ತಿಗಳ ಕುಟಿಲ ಪ್ರಯತ್ನವನ್ನು ವಿಫಲಗೊಳಿಸಿ ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.

ಈ ಕರ್ತವ್ಯದ ಪಾಲನೆಯೇ ನಿಜವಾದ ದೇಶಭಕ್ತಿ, ಇದು ತ್ಯಾಗ-ಬಲಿದಾನದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಹಿರಿಯರಿಗೆ ಸಲ್ಲಿಸುವ ಗೌರವವೂ ಹೌದು.

ದೇಶಭಕ್ತಿ ಎನ್ನುವುದು ನನ್ನ ಪಾಲಿಗೆ ಕೇವಲ ರಾಜಕೀಯ ಬೂಟಾಟಿಕೆಯ ಘೋಷಣೆ ಅಲ್ಲ. ಅದು ನಾಡಿನ ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ದಿ ಹಾಗೂ ಸಾಮಾಜಿಕ ಸಾಮರಸ್ಯದ ರಕ್ಷಣೆಯ ಹೊಣೆಗಾರಿಕೆಯ ಸಂಕಲ್ಪ.

ಈ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನೆರವೇರಿಸಿ ರಾಜ್ಯದ ಜನರ ಶ್ರೇಯೋಭಿವೃದ್ಧಿ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕೆ ಎದುರಾಗುವ ಸವಾಲುಗಳಿಂದ ಕುಗ್ಗುವ, ಜಗ್ಗುವ ಇಲ್ಲವೇ ಹಿಮ್ಮೆಟ್ಟುವ ಪ್ರಶ್ನೆಯೇ ಇಲ್ಲ. ಈ ಹೋರಾಟದ ಕೆಚ್ಚಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬದುಕೇ ದೊಡ್ಡ ಸ್ಪೂರ್ತಿ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಾವು ಎದುರಿಸಿದ್ದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂದು ಸಾಧ್ಯವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬನೆಯನ್ನು ಸಾಧಿಸಿದ್ದೇವೆ.

ಆದರೆ ಜಾತಿ ಮತ್ತು ಧರ್ಮದ ಸೋಗಿನಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯವನ್ನು ಕೆಡಿಸುವ ಪ್ರಯತ್ನ ನಮ್ಮ ಅಭಿವೃದ್ಧಿಯ ಓಟಕ್ಕೆ ತೊಡರುಗಾಲಾಗಿದೆ. ಇಂತಹ ಪ್ರಯತ್ನಗಳನ್ನು ಭಂಗಗೊಳಿಸಿ ಶರಣರು, ಸಂತರು, ಸೂಫಿಗಳು, ದಾರ್ಶನಿಕರು ಜನ್ಮ ತಳೆದ ನಮ್ಮ ಕನ್ನಡನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ.

ನಮ್ಮ ರಾಜ್ಯದ ಸರ್ವರನ್ನೂ ಒಳಗೊಂಡ ಸುಸ್ಥಿರ ಅಭಿವೃದ್ಧಿ ಮಾದರಿ ಇಂದು “ಕರ್ನಾಟಕ ಮಾದರಿ’ ಎಂದು ದೇಶಪ್ರಸಿದ್ಧವಾಗಿದೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತಿದೆ. ನಮ್ಮ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿದ್ದು, ಹಲವು ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿದೆ. ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ.

ಮೂಲಸೌಕರ್ಯಗಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ, ಕೌಶಾಲ್ಯಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಉದ್ಯೋಗ ಸೃಷ್ಟಿ, ಜನಸ್ನೇಹಿ ಆಡಳಿತ ನಮ್ಮ ಕನಸು ಮಾತ್ರವಲ್ಲ; ಇದೇ ಗುರಿಯಾಗಿದೆ. ಈ ಗುರಿ ಸಾಧನೆಯತ್ತ ಮುನ್ನಡೆಯುವುದೇ ನಮ್ಮ ಧ್ಯೇಯವಾಗಿದೆ.

ಸಾರ್ವತ್ರಿಕ ಕನಿಷ್ಠ ಆದಾಯ (Universal Basic Income) ಪರಿಕಲ್ಪನೆಯಲ್ಲಿ, ಎಲ್ಲರಿಗೂ ಬದುಕಲು ಬೇಕಾದಷ್ಟು ಆದಾಯ ಸಿಗಬೇಕು ಎಂಬ ಕಾರಣದಿಂದಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬೆಲೆ ಏರಿಕೆ, ನಿರುದ್ಯೋಗದಿಂದ ತತ್ತರಿಸಿರುವ ಜನತೆಗೆ ಇವು ಆರ್ಥಿಕ ಶಕ್ತಿಯನ್ನು ನೀಡುತ್ತಿವೆ. ಅದರಲ್ಲೂ ನೇರವಾಗಿ ಹಣಕಾಸಿನ ನೆರವು ಒದಗಿಸುವ ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳು ಸಾರ್ವತ್ರಿಕ ಕನಿಷ್ಠ ಆದಾಯ ಮಾದರಿಯ ಕಲ್ಯಾಣ ಯೋಜನೆಗಳಾಗಿವೆ.

ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ಲಿಂಗ ಸಮಾನತೆಯತ್ತ ದೃಢ ಹೆಜ್ಜೆಯನ್ನು ಇರಿಸಿದೆ. ದುಡಿಮೆ ಮಾಡುತ್ತಿರುವ ಮಹಿಳೆಯರಿಗೂ ಅವರ ಖರ್ಚಿನ ದೊಡ್ಡ ಮೊತ್ತವನ್ನು ಉಳಿಸಿ, ಅವರ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸಿದೆ.

ಗ್ಯಾರಂಟಿ ಯೋಜನೆಗಳಿಗೆ ಕಳೆದ ವರ್ಷ ನಾವು 36 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಈ ವರ್ಷ ಈ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಿದ್ದೇವೆ. ಕರ್ನಾಟಕದ ಈ ಯೋಜನೆ ದೇಶಕ್ಕೆ ಮಾದರಿ ಎಂದರೆ ಖಂಡಿತಾ ಅತಿಶಯೋಕ್ತಿಯಾಗಲಾರದು.

ಕಳೆದ ವರ್ಷ ಅನಾವೃಷ್ಟಿಯಿಂದಾಗಿ ನಮ್ಮ ರೈತರು ಸಂಕಷ್ಟ ಎದುರಿಸಬೇಕಾಯಿತು. ಕೇಂದ್ರ ಸರ್ಕಾರ ನೆರವು ನೀಡದಿದ್ದರೂ, ರೈತರ ನೆರವಿಗೆ ನಾವು ಕೈಜೋಡಿಸಿದ್ದೇವೆ. ಬೆಳೆ ನಷ್ಟ ಅನುಭವಿಸಿದ 38,58,737 ರೈತರಿಗೆ ಒಟ್ಟಾರೆಯಾಗಿ 3454.22 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ವಿತರಿಸಲಾಗಿದೆ.

ಪ್ರಸ್ತುತ ಅತಿ ಮಳೆಯಿಂದಾಗಿ ತೊಂದರೆಗೊಳಗಾದ ಜನತೆಯ ನೆರವಿಗೆ ಸರ್ಕಾರ ಧಾವಿಸಿದೆ. ಅತಿವೃಷ್ಟಿಯಿಂದ ಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 1 ಲಕ್ಷ 20 ಸಾವಿರ ರೂಪಾಯಿ ಪರಿಹಾರ ಒದಗಿಸುವುದರೊಂದಿಗೆ ಮನೆಯನ್ನು ನಿರ್ಮಿಸಿ ಕೊಡಲು ನಾವು ನಿರ್ಧರಿಸಿದ್ದೇವೆ.

ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಚೇತೋಹಾರಿಯಾಗಿದ್ದರೆ, ಆರ್ಥಿಕ ಅಭಿವೃದ್ಧಿಯೆಡೆಗಿನ ನಮ್ಮ ಕಾರ್ಯಕ್ರಮಗಳು, ಪ್ರಯತ್ನಗಳು ಸ್ಥಿರತೆ ತರುವ ಸಾಧನಗಳಾಗಿವೆ. ನಮ್ಮ ರಾಜ್ಯ ಹೂಡಿಕೆದಾರರ ನೆಚ್ಚಿನ ತಾಣವಾಗಿದ್ದು, 2023-24ನೇ ಸಾಲಿನಲ್ಲಿ 54,427  ಕೋಟಿ ರೂಪಾಯಿ ವಿದೇಶಿ ಬಂಡವಾಳ ಹೂಡಿಕೆ ಆರ್ಕಷಿಸುವುದರೊಂದಿಗೆ ದೇಶದಲ್ಲಿ 3ನೇ ಸ್ಥಾನದಲ್ಲಿದೆ.

ಪ್ರಸ್ತುತ ಸಾಲಿನಲ್ಲಿ ರಾಜ್ಯದಲ್ಲಿ ವಿವಿಧ ಸಂಸ್ಥೆಗಳೊಂದಿಗೆ 42,915 ಕೋಟಿ ರೂಪಾಯಿ ಹೂಡಿಕೆಗೆ 13 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿ 22,600 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ರಾಜ್ಯದ ವಾಣಿಜ್ಯ ವಹಿವಾಟು ಕ್ಷೇತ್ರ ಅತ್ಯಂತ ಬಲಿಷ್ಠವಾಗಿದೆ. 2023-24ನೇ ಸಾಲಿನಲ್ಲಿ ರಾಜ್ಯವು 1,66,545 ಮಿಲಿಯನ್ ಯುಎಸ್ ಡಾಲರ್ ಮೊತ್ತದ ರಫ್ತು ಮಾಡಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ.

ರಾಜ್ಯದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಬಾರಿ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಎತ್ತಿನ ಹೊಳೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಈವರೆಗೆ 855.02 ಕೋಟಿ ರೂಪಾಯಿ,  ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರಡಿ 151.16 ಕೋಟಿ ರೂಪಾಯಿ ವೆಚ್ಚ ಭರಿಸಲಾಗಿದೆ.

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಪಿ.ಎಂ.ಜಿ.ಎಸ್.ವೈ, ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ವಿಶೇಷ ಅಭಿವೃದ್ಧಿ ಯೋಜನೆಗಳಡಿ ಒಟ್ಟು 803 ಕಿಮೀ ಉದ್ದದ ರಸ್ತೆಯನ್ನು 463.11 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಶೋಷಿತರ ಅಭಿವೃದ್ಧಿ ನಮ್ಮ ಬದ್ಧತೆ. ಸ್ವಾತಂತ್ರ್ಯದ ಫಲವನ್ನು ಸಮಾಜದ ಕಟ್ಟಕಡೆಯ ಪ್ರಜೆಗೂ ತಲುಪಿಸುವುದು ನಮ್ಮ ಕನಸು. ಈ ನಿಟ್ಟಿನಲ್ಲಿ ಸರ್ಕಾರ ಯೋಜನಾಬದ್ಧವಾಗಿ ಹೆಜ್ಜೆ ಇರಿಸುತ್ತಿದೆ.

ದುರ್ಬಲ ಹಾಗೂ ಶೋಷಿತ ಸಮುದಾಯಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಸತಿ ಶಾಲೆಗಳು, ಹಾಸ್ಟೆಲುಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ನಮ್ಮ ಗುರಿ ಸ್ಪಷ್ಟವಾಗಿದೆ. ಬುದ್ಧ, ಬಸವಾದಿ ಶರಣರು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ನಾರಾಯಣ ಗುರು, ಸಾವಿತ್ರಿ ಬಾಯಿ ಪುಲೆಯಂತಹ ಮಹಾನರು, ದಾರ್ಶನಿಕರು ತೋರಿಸಿ ಕೊಟ್ಟ ಮಾನವೀಯತೆಯ ಹಾದಿಯಲ್ಲಿ ಮುನ್ನಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ.

ಪ್ರಜಾಪ್ರಭುತ್ವವನ್ನು ಉಳ್ಳವರ ಆಡುಂಬೊಲವನ್ನಾಗಿಸಲು ನಾವು ಎಂದಿಗೂ ಅವಕಾಶ ಕೊಡುವುದಿಲ್ಲ. ಸಂವಿಧಾನವೇ ನಮಗೆ ಮಾರ್ಗದರ್ಶಕ. ಇಲ್ಲಿ ಎಲ್ಲರೂ ಸಮಾನರು. ಸರ್ವಜನ ಕಲ್ಯಾಣವೇ ಪ್ರಜಾಪ್ರಭುತ್ವದ ಅಂತಿಮ ಗುರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಕಲ್ಯಾಣ ಕಾರ್ಯಕ್ರಮಗಳ ಲಾಭ ದೊರೆಯಬೇಕೆಂಬ ತುಡಿತ ನಮ್ಮ ಸರ್ಕಾರದ ಪ್ರತಿಯೊಂದು ನಡೆಯಲ್ಲೂ ಸ್ಪಷ್ಟವಾಗಿ ಗುರುತಿಸಬಹುದು.

ಸಾಮಾಜಿಕ ಸಮಾನತೆ, ಆರ್ಥಿಕ ಸ್ವಾತಂತ್ರ್ಯ, ಪ್ರತಿಯೊಬ್ಬರಿಗೂ ನೆಮ್ಮದಿಯಿಂದ, ಗೌರವದಿಂದ ಬದುಕುವ ವಾತಾವರಣ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ಜನಕಲ್ಯಾಣದ ಬಗ್ಗೆ ನಮ್ಮ ನಿಲುವು, ದಾರಿ ಅತ್ಯಂತ ಸ್ಪಷ್ಟವಾಗಿದೆ.

ಸಾವಿರಾರು ಭಾಷೆಗಳು, ನೂರಾರು ಧರ್ಮಗಳು, ವೈವಿಧ್ಯಮಯ ಆಚಾರ ವಿಚಾರಗಳು, ಸಂಸ್ಕೃತಿ ಮೇಳೈಸಿರುವ ನಮ್ಮ ದೇಶ ಸಮೃದ್ಧ ನಾಗರಿಕತೆಯ ತೊಟ್ಟಿಲು. ಪರಸ್ಪರ ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆಯನ್ನು ನಮಗೆ ಯಾರೂ ಕಲಿಸಿಕೊಡಬೇಕಾದ ಅಗತ್ಯವಿಲ್ಲ. ಇವು ಕೇವಲ ಬಾಯಿಮಾತಿನ ಸವಕಲು ಪದಗಳಲ್ಲ. ಸಾವಿರಾರು ವರ್ಷಗಳಿಂದ ನಾವು ಇದನ್ನು ಪಾಲಿಸಿಕೊಂಡು ಬಂದಿದ್ದೇವೆ.

ಈ ಸಾಮಾಜಿಕ ಮೌಲ್ಯಗಳಿಗೆ ಕುಂದುಂಟು ಮಾಡುವ ಶಕ್ತಿಗಳ ವಿರುದ್ಧ ಸದಾ ಜಾಗೃತರಾಗಿರಬೇಕಾಗಿದೆ. ಸ್ವಾತಂತ್ರ್ಯದ ಈ ಸಂಭ್ರಮದ ಸಂದರ್ಭದಲ್ಲಿ ಪರಸ್ಪರ ಸಾಮರಸ್ಯ, ಸೌಹಾರ್ದವನ್ನು ಇನ್ನಷ್ಟು ಬಲಪಡಿಸುವ, ಆ ಮೂಲಕ ದಾರ್ಶನಿಕರು ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಸಂಕಲ್ಪ ಮಾಡಬೇಕಾಗಿದೆ.

ಸಾವಿರಾರು ಮಹನೀಯರ ಹೋರಾಟ, ತ್ಯಾಗ, ಪರಿಶ್ರಮಗಳ ಫಲವನ್ನು ನಾವು ಇಂದು ಉಣ್ಣುತ್ತಿದ್ದೇವೆ. ಇಂದು ನಮ್ಮ ಕೈಯಲ್ಲಿರುವ ಸ್ವಾತಂತ್ರ್ಯದ ದೀವಿಗೆಯನ್ನು ಮುಂದಿನ ತಲೆಮಾರಿಗೆ ಜತನದಿಂದ ತಲುಪಿಸುವ ಅತ್ಯಂತ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಈ ಹೊಣೆಗಾರಿಕೆಯನ್ನು ಅರಿತುಕೊಂಡು ನಾವು ಮುನ್ನಡೆಯಬೇಕಿದೆ. ನಾಡಿನ ಸಮಸ್ತರಿಗೂ ಮತ್ತೊಮ್ಮೆ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಕೋರುತ್ತೇನೆ. ಜೈ ಹಿಂದ್, ಜೈ ಕರ್ನಾಟಕ” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: “ಭಾರತ 2047ರಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ದೇಶದ ಜನತೆ ಅಖಂಡ ಭಾರತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು” ಎಂದು ಪ್ರಧಾನಿ ಮೋದಿ ಅವರು ತಮ್ಮ ಸ್ವಾತಂತ್ರ್ಯ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ‘ಭಾರತ್ ಮಾತಾ ಕೀ ಜೈ’ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು.

ಪ್ರಧಾನಿ ಮೋದಿಯ ಭಾಷಣ: “ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ದೇಶಕ್ಕಾಗಿ ಪ್ರಾಣ ನೀಡಿದವರನ್ನು ನಾನು ಮೆಚ್ಚುತ್ತೇನೆ. ಅವರಿಗೆ ನಮಸ್ಕರಿಸೋಣ. ಅವರೇ ನಮ್ಮೆಲ್ಲರಿಗೂ ಸ್ವಾತಂತ್ರ್ಯದ ಗಾಳಿಯನ್ನು… ಉಸಿರಾಡುವ ಹಕ್ಕನ್ನು ತಂದುಕೊಟ್ಟವರು. ತ್ಯಾಗ ಮಾಡಿದವರಿಗೆ ನಾವು ಋಣಿಯಾಗಿದ್ದೇವೆ. ದೇಶವನ್ನು ರಕ್ಷಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಹಲವರು ಶ್ರಮಿಸುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನಾವು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದೇವೆ. ನಮ್ಮ ದೇಶ ವಿಪತ್ತುಗಳಿಂದ ಸಂತ್ರಸ್ತರಾದವರ ಬೆಂಬಲಕ್ಕೆ ನಿಂತಿದೆ. ದೇಶದ ಅಭಿವೃದ್ಧಿಗೆ ರೈತರು, ಸೈನಿಕರು ಶ್ರಮಿಸಿದ್ದಾರೆ. ವಯನಾಡು ಭೂಕುಸಿತ ಸಂತ್ರಸ್ತರ ಜೊತೆಗಿರೋಣ. 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ದೇಶದ ಜನರು ಅಖಂಡ ಭಾರತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು.

ಭಾರತ ಹಲವು ವರ್ಷಗಳ ಕಾಲ ವಸಾಹತುಶಾಹಿ ಆಳ್ವಿಕೆಯಲ್ಲಿ ಸಿಲುಕಿಕೊಂಡಿತ್ತು. ದಾಸ್ಯ ಮನೋಭಾವವನ್ನು ತೊರೆಯುವ ಸಮಯವಿದು. 40 ಕೋಟಿ ಭಾರತೀಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಅವರು ಸ್ವಾತಂತ್ರ್ಯವನ್ನು ನಿಜಗೊಳಿಸಿದ್ದಾರೆ.

140 ಕೋಟಿ ಜನರೊಂದಿಗೆ ಸೇರಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸೋಣ. ‘ಜಲ ಜೀವನ್’ ಯೋಜನೆಯಿಂದ 15 ಕೋಟಿ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. ‘ಸ್ವಚ್ಛ’ ಯೋಜನೆ ಮೂಲಕ ಎರಡೂವರೆ ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಜನರಿಂದ ಬರುವ ಸಲಹೆಗಳು ಮತ್ತು ಕಾಮೆಂಟ್‌ಗಳು ನನಗೆ ಸ್ಫೂರ್ತಿ ನೀಡುತ್ತವೆ.

ನಮ್ಮ ನ್ಯಾಯಾಂಗದಲ್ಲಿ ಬದಲಾವಣೆ ತರಬೇಕಾಗಿದೆ. 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತ ಎಂಬುದು ಬರೀ ಪದಗಳಲ್ಲ, 140 ಕೋಟಿ ಭಾರತೀಯರ ಸಂಕಲ್ಪ ಮತ್ತು ಕನಸುಗಳ ಪ್ರತಿಬಿಂಬ. ಹವಾಮಾನ ಬದಲಾವಣೆಯ ಪರಿಹಾರಕ್ಕಾಗಿ ವಿಶ್ವದ ರಾಷ್ಟ್ರಗಳು ನಮ್ಮತ್ತ ನೋಡುತ್ತಿವೆ. ಆಡಳಿತಾತ್ಮಕ ಸುಧಾರಣೆಗಳು, ತ್ವರಿತ ನ್ಯಾಯ, ಸಾಂಪ್ರದಾಯಿಕ ಔಷಧದ ಅಭಿವೃದ್ಧಿ ಅತ್ಯಗತ್ಯವಾಗಿದೆ.

ನಾವು ಭಯೋತ್ಪಾದಕರ ವಿರುದ್ಧ ನಿಖರ ದಾಳಿ ನಡೆಸಿದ್ದೇವೆ. ದೇಶವನ್ನು ಬಲಪಡಿಸಲು ನಾವು ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತರುತ್ತಿದ್ದೇವೆ. ಭಯೋತ್ಪಾದನೆ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದ್ದೇವೆ. ಭಾರತವನ್ನು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವನ್ನಾಗಿ ಮಾಡಬೇಕು.

ನಮ್ಮ ಬಲವಾದ ಬ್ಯಾಂಕಿಂಗ್ ಸುಧಾರಣೆಗಳನ್ನು ಜಗತ್ತು ಗುರುತಿಸಿದೆ. ಸುಧಾರಣೆಗಳು ದೇಶವನ್ನು ಬಲಪಡಿಸುವುದಕ್ಕಾಗಿಯೇ ಹೊರತು, ಪ್ರಚಾರಕ್ಕಾಗಿ ಅಲ್ಲ. ಇಂದಿನ ಯುವಕರು ನಿಧಾನಗತಿಯ ಬೆಳವಣಿಗೆಯನ್ನು ಬಯಸುವುದಿಲ್ಲ. ಅವರು ದೈತ್ಯ ಬೆಳವಣಿಗೆಯನ್ನು ಬಯಸುತ್ತಾರೆ. ಹಿಂದಿನ ಸಂಸ್ಕೃತಿಯಿಂದ ಆಡಳಿತವನ್ನು ಬದಲಾಯಿಸಿದ್ದೇವೆ. ಜನರು ಸರ್ಕಾರದತ್ತ ನೋಡುವ ಸ್ಥಿತಿ ಬದಲಾಗಿದ್ದು, ಸರ್ಕಾರ ಜನರಿಗೆ ಕಲ್ಯಾಣ ಯೋಜನೆಗಳನ್ನು ನೀಡಲು ಮುಂದಾಗಿದೆ.

ಎಲ್ಲಾ ಕ್ಷೇತ್ರಗಳಲ್ಲಿನ ಬೆಳವಣಿಗೆಗೆ ಇರುವ ಎಲ್ಲಾ ಅಡೆತಡೆಗಳನ್ನು ಕೆಡವಲಾಗುವುದು. ಬೆಳವಣಿಗೆ ಮತ್ತು ಪ್ರಗತಿ ಸಾಧಿಸಲು ನ್ಯಾಯ ಮತ್ತು ಪ್ರಾಮಾಣಿಕತೆ ಕೀಲಿಗಳಾಗಿವೆ. ರಸ್ತೆಗಳು, ರೈಲುಗಳು ಮತ್ತು ವಿಮಾನ ಸೇವೆಗಳು ಸುಧಾರಿಸಿವೆ. ಹೊಸ ಕ್ರಿಮಿನಲ್ ಕಾನೂನುಗಳು ನ್ಯಾಯಾಂಗದಲ್ಲಿ ಬದಲಾವಣೆ ತಂದಿದೆ. ಹೊಸ ಕ್ರಿಮಿನಲ್ ಕಾನೂನುಗಳು ತ್ವರಿತ ನ್ಯಾಯದ ವಿತರಣೆಯನ್ನು ಖಚಿತಪಡಿಸುತ್ತದೆ. ಆಡಳಿತದಲ್ಲಿ ಬದಲಾವಣೆ ತರಲು ನಾವು ಬದ್ಧರಾಗಿದ್ದೇವೆ.

ಜನರ ಜೀವನವನ್ನು ಸುಲಭಗೊಳಿಸಲು ನಾವು ಸುಧಾರಣೆಯ ಮಾರ್ಗವನ್ನು ಆರಿಸಿಕೊಂಡಿದ್ದೇವೆ. ಒಟ್ಟಾಗಿ ಕೆಲಸ ಮಾಡುವುದರಿಂದ ಮಾತ್ರ ಸುಧಾರಣೆಗಳನ್ನು ಜಾರಿಗೆ ತರಲು ಸಾಧ್ಯ. ನಾಗರಿಕರ ಅಗತ್ಯತೆಗಳಿಗೆ ಆದ್ಯತೆ ನೀಡಲಾಗುವುದು. ಜನರ ಸೇವೆ ಮಾಡುವುದೇ ನನ್ನ ಗುರಿ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಮೌಲ್ಯ ಏರಿದೆ. ಜನ ನಮ್ಮನ್ನು 3ನೇ ಬಾರಿ ಆಯ್ಕೆ ಮಾಡಿದ್ದಾರೆ. ನಾನು ಅವರಿಗೆ ವಂದಿಸುತ್ತೇನೆ. ಕೊರೊನಾ ವೈರಸ್ ನಂತರ ದೇಶದ ಆರ್ಥಿಕತೆಯನ್ನು ಸುಧಾರಿಸಿದ ದೇಶ ಭಾರತ.

75 ಸಾವಿರ ಹೊಸ ವೈದ್ಯಕೀಯ ಸೀಟ್ ಗಳನ್ನು ಸೃಷ್ಟಿಸಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ನಾವು ಬಯಸುತ್ತೇವೆ. ಕೃಷಿ ಸುಧಾರಣೆಗಳು ಪ್ರಸ್ತುತ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ದೇಶವನ್ನು ನೈಸರ್ಗಿಕ ಆಹಾರ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ವಿಶ್ವ ದರ್ಜೆಯ ಸೆಲ್ ಫೋನ್ ಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬದಲಾಗಿ, ಸ್ಥಳೀಯವಾಗಿ ಉತ್ಪಾದಿಸಲಾಗುತ್ತದೆ. ರಾಜ್ಯ ಸರ್ಕಾರಗಳು ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸಬೇಕು. ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಅಪರಾಧಿಗಳಿಗೆ ಶೀಘ್ರ ಶಿಕ್ಷೆಯಾಗಬೇಕು.

ಭಾರತವು ಪರ್ಯಾಯ ಶಕ್ತಿಯನ್ನು (Alternative energy) ಬಳಸುವ ತಂತ್ರಜ್ಞಾನಗಳನ್ನು ಉತ್ತೇಜಿಸುತ್ತದೆ. 2040ರ ಹೊತ್ತಿಗೆ ಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬೇಕು. 140 ಕೋಟಿ ಜನರ ಪರವಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಅಭಿನಂದನೆಗಳು. 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಸಿದ್ಧತೆ ನಡೆಸಿದ್ದೇವೆ. ಭ್ರಷ್ಟರ ವಿರುದ್ಧ ಕ್ರಮ ಮುಂದುವರಿಯಲಿದೆ. ಭ್ರಷ್ಟಾಚಾರದ ಮೂಲಕ ಸಾಮಾನ್ಯ ಜನರನ್ನು ಲೂಟಿ ಮಾಡುವ ಸಂಪ್ರದಾಯವನ್ನು ನಿಲ್ಲಿಸಬೇಕು. ಭಾರತ ಬುದ್ಧನ ಕಡೆಗಿದೆ; ಯುದ್ಧದ ಕಡೆಯಲ್ಲ. ಬಾಂಗ್ಲಾದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ಭದ್ರತೆಯನ್ನು ಖಾತ್ರಿಪಡಿಸಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.

ದೇಶ

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ‘ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ?’ ಎಂಬ ಗೊಂದಲ ಎಲ್ಲರಲ್ಲಿಯೂ ಇದೆ. ಈ ಗೊಂದಲಕ್ಕೆ ಕಾರಣ ಮತ್ತು ಉತ್ತರವನ್ನು ವಿವರವಾಗಿ ನೋಡೋಣ!

1947ರ ಆಗಸ್ಟ್ 15 ರಂದು ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು. ಇದಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಮತ್ತು ಸ್ವಾತಂತ್ರ್ಯದ ಸಾಧನೆಯನ್ನು ಆಚರಿಸಲು ನಾವು ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತೇವೆ. ಆ ದಿನದಲ್ಲಿ ನಾವು ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆಯನ್ನು ಹಾಡುತ್ತೇವೆ.

ಆದರೆ ಈಗ ಪ್ರಶ್ನೆ ಅದಲ್ಲ. ಪ್ರತಿ ವರ್ಷ ಈ ದಿನ ಬಂದರೆ ‘ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ? ಎಂಬ ಗೊಂದಲ ಹೆಚ್ಚಿನ ಜನರಿಗೆ ಏಳುವುದು ಸಾಮಾನ್ಯ. ಅಂದರೆ 1947ಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗಿರುವುದರಿಂದ ನಾಳೆಯ ದಿನವನ್ನು 77ನೇ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಬಹುದೇ ಎಂದು ಉಲ್ಲೇಖಿಸುವವರಿಗೆ ಇಲ್ಲಿದೆ ಸರಿಯಾದ ಉತ್ತರ.

1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಾಗ ಆಗಸ್ಟ್ 15ನ್ನು ಮೊದಲ ಸ್ವಾತಂತ್ರ್ಯ ದಿನವೆಂದು ದಾಖಲಿಸಲಾಗಿತ್ತು. ಆದ್ದರಿಂದ, ಮುಂದಿನ ವರ್ಷ (1948ರಲ್ಲಿ) ನಾವು 2ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದೇವೆ. ಆ ದೃಷ್ಟಿಯಿಂದ, ನಾಳೆಯ ದಿನವನ್ನು 78ನೇ ಸ್ವಾತಂತ್ರ್ಯ ದಿನಾಚರಣೆ ಎಂದು ಲೆಕ್ಕಿಸಲಾಗಿದೆ. ಈ ವರ್ಷ ಸರ್ಕಾರ ಹೊರಡಿಸಿರುವ ಎಲ್ಲ ಪ್ರಕಟಣೆಗಳಲ್ಲಿಯೂ 78ನೇ ಸ್ವಾತಂತ್ರ್ಯ ದಿನಾಚರಣೆ ಎಂದೇ ನಮೂದಿಸಲಾಗಿದೆ.