ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Ajit Pawar Archives » Dynamic Leader
October 17, 2024
Home Posts tagged Ajit Pawar
ರಾಜಕೀಯ

ಮುಂಬೈ: ಲೋಕಸಭೆ ಚುನಾವಣೆಯ ಸೋಲಿನಿಂದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಸೃಷ್ಟಿಸಿದೆ. ಅವರನ್ನು ಬೆಂಬಲಿಸುವ 15 ಶಾಸಕರು ಶರದ್ ಪವಾರ್ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್‌ನಿಂದ ಬೇರ್ಪಟ್ಟಿದ್ದ ಅಜಿತ್ ಪವಾರ್ ಕೆಲವು ಶಾಸಕರೊಂದಿಗೆ ಬಿಜೆಪಿ ಸೇರಿದರು. ಅದರಲ್ಲಿ ಅಜಿತ್ ಪವಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಎನ್ ಡಿಎ ಮೈತ್ರಿಕೂಟ ಸೋತಿದೆ.

ಅಜಿತ್ ಪವಾರ್ ಕಡೆಯವರು 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದು ಸ್ಥಾನವನ್ನು ಮಾತ್ರ ಗೆದ್ದಿದ್ದಾರೆ. ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿದ್ದ ಅಜಿತ್ ಪವಾರ್ ಪತ್ನಿ ಹೀನಾಯ ಸೋಲು ಕಂಡಿದ್ದಾರೆ. ಶರದ್ ಪವಾರ್ ಅವರ ಕಡೆಯಿಂದ 8 ಸಂಸದರು ಆಯ್ಕೆಯಾಗಿರುವುದು ಗಮನಾರ್ಹ.

ಚುನಾವಣಾ ಸೋಲಿನಿಂದಾಗಿ ಅಜಿತ್ ಪವಾರ್ ನೇತೃತ್ವದ ಪಕ್ಷದಲ್ಲಿ ಗೊಂದಲ ಉಂಟಾಗಿದೆ ಎಂದು ಅಲ್ಲಿನ ವರದಿಗಳು ತಿಳಿಸಿವೆ. 15 ಶಾಸಕರು ಶರದ್ ಪವಾರ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಅವರ ತಂಡವನ್ನು ಸೇರಲು ಬಯಸಿದ್ದಾರೆ ಎನ್ನಲಾಗಿದೆ.

ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವುದರ ಬಗ್ಗೆ ಶರದ್ ಪವಾರ್ ಅವರೇ ನಿರ್ಧರಿಸಬೇಕೆಂದು ಶರದ್ ಪವಾರ್ ಬೆಂಬಲಿಗ ಜಯಂತ್ ಪಾಟೀಲ್ ಹೇಳಿದ್ದಾರೆ. ಗೊಂದಲದ ನಡುವೆಯೇ ಅಜಿತ್ ಪವಾರ್ ಪಕ್ಷದ ಪ್ರಮುಖ ನಾಯಕರುಗಳು ಹಾಗೂ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ರಾಜಕೀಯ

ಅಜಿತ್ ಪವಾರ್ ಅವರು ತಮ್ಮ ತಂಡಕ್ಕೆ ಬಹುಪಾಲು ಶಾಸಕರ ಬೆಂಬಲ ಇರುವುದರಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಬೇಕು ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.

ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಪವಾರ್ ಸೇರಿದಂತೆ 40 ಶಾಸಕರನ್ನು ಅನರ್ಹ ಗೊಳಿಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವ ಮೂಲಕ ಶರದ್ ಪವಾರ್ ಕೇವಲ 13 ಶಾಸಕರನ್ನು ಮಾತ್ರ ಹೊಂದಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ.

ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕಳೆದ ಜುಲೈ ಆರಂಭದಲ್ಲಿ ಇಂದಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದಲ್ಲಿ ಇಬ್ಬಾಗವಾಯಿತು. ಜುಲೈ 2 ರಂದು ಸಂಜೆ ಅಜಿತ್ ಪವಾರ್ ಮತ್ತು ಅವರ 8 ಬೆಂಬಲಿಗರು ಇದ್ದಕ್ಕಿದ್ದಂತೆ ಏಕ್ ನಾಥ್ ಸಿಂಧೆ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಜಿತ್ ಪವಾರ್ ತಮ್ಮ ತಂಡಕ್ಕೆ ಬಹುಪಾಲು ಶಾಸಕರ ಬೆಂಬಲ ಇರುವುದರಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಬೇಕು ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಅಜಿತ್ ಪವಾರ್ ಮತ್ತು ಶರದ್ ಪವಾರ್ ಇಬ್ಬರಿಗೂ ನೋಟಿಸ್ ಕಳುಹಿಸಿದೆ.

ತಮ್ಮ ತಂಡಕ್ಕೆ 40 ಶಾಸಕರ ಬೆಂಬಲವಿದೆ ಎಂದು ಅಜಿತ್ ಪವಾರ್ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಆದರೆ ಶರದ್ ಪವಾರ್ ತಮ್ಮ ತಂಡದಲ್ಲಿ ಎಷ್ಟು ಶಾಸಕರಿದ್ದಾರೆ ಎಂಬ ವಿವರವನ್ನು ಸ್ಪಷ್ಟವಾಗಿ ಹೇಳಲು ನಿರಾಕರಿಸುತ್ತಿದ್ದರು. ಇದೀಗ ಶರದ್ ಪವಾರ್ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ, ಅಜಿತ್ ಪವಾರ್ ಸೇರಿದಂತೆ 9 ಸಚಿವರು ಮತ್ತು 31 ಶಾಸಕರ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಅವರು ಪ್ರಸ್ತಾಪಿಸಿದ್ದಾರೆ.

ಶರದ್ ಪವಾರ್ ತಂಡವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕಾರಣ 10ನೇ ವಿಧಿಯ ಅಡಿಯಲ್ಲಿ ಎಲ್ಲಾ 40 ಜನ ಶಾಸಕರನ್ನು ಅವರ ಹುದ್ದೆಯಿಂದ ಅನರ್ಹಗೊಳಿಸಬೇಕು ಎಂದು ಉಲ್ಲೇಖಿಸಲಾಗಿದೆ.

ಕಳೆದ ಜೂನ್ 30 ರಂದು ಅಜಿತ್ ಪವಾರ್ ಚುನಾವಣಾ ಆಯೋಗಕ್ಕೆ ಕಳುಹಿಸಿರುವ ಪತ್ರದಲ್ಲಿ, ಪಕ್ಷದ ಸಭೆಯಲ್ಲಿ ಶರದ್ ಪವಾರ್ ಬದಲಿಗೆ ಅಜಿತ್ ಪವಾರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಆದ್ದರಿಂದ ಅವರನ್ನು ಪಕ್ಷದ ಅಧ್ಯಕ್ಷರು ಎಂದು ಘೋಷಿಸಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನಿಗದಿಪಡಿಸಬೇಕು ಎಂದು ಸೂಚಿಸಿದ್ದಾರೆ.

ಶರದ್ ಪವಾರ್ ಅವರ ತಂಡ ಇದೀಗ 500 ಪುಟಗಳ ಉತ್ತರವನ್ನು ಚುನಾವಣೆ ಆಯೋಗಕ್ಕೆ ಕಳುಹಿಸಿದೆ. ಅದರಲ್ಲಿ, 40 ಶಾಸಕರ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಶರದ್ ಪವಾರ್ ಹೇಳಿದ್ದಾರೆ. ಅಜಿತ್ ಪವಾರ್ ಚಿಹ್ನೆಯ ಬಗ್ಗೆ ಮೊದಲೇ ಸಮಸ್ಯೆ ಇತ್ತು ಎಂಬುದನ್ನು ಸಾಬೀತುಪಡಿಸಿಲ್ಲ, ಅದೇ ವೇಳೆಯಲ್ಲಿ ಚುನಾವಣಾ ಆಯೋಗ ಯಾವುದೇ ರೀತಿಯ ಸಮಸ್ಯೆ ಇದೆ ಎಂದೂ ತೀರ್ಮಾನ ಮಾಡಿಲ್ಲ. ಹಾಗಾಗಿ ಅಜಿತ್ ಪವಾರ್ ತಂಡ ಸಲ್ಲಿಸಿರುವ ದಾಖಲೆಗಳನ್ನು ತಿರಸ್ಕರಿಸಬೇಕು ಎಂದು ಶರದ್ ಪವಾರ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಪುಣೆಯಲ್ಲಿ ರಾಜ್ಯ ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಜಯಂತ್ ಪಾಟೀಲ್ ನೀಡಿದ ಸಂದರ್ಶನದಲ್ಲಿ, “ಪಕ್ಷದ ಹೆಸರು ಮತ್ತು ಚಿಹ್ನೆ ಅಜಿತ್ ಪವಾರ್ ಗೆ ಹೋಗಬಹುದು. ನಮ್ಮಿಂದ ತಂಡ ಬೇರ್ಪಟ್ಟರೆ ಪಕ್ಷದ ಚಿಹ್ನೆ ಮತ್ತು ಹೆಸರು ಸಿಗುತ್ತದೆ ಎಂಬ ಖಾತರಿ ಅವರಿಗೆ ಸಿಕ್ಕಿರಬಹುದು ಎಂದು ಭಾವಿಸಲಾಗಿದೆ. ಈ ವಿಚಾರದಲ್ಲಿ ಚುನಾವಣಾ ಆಯೋಗ ಈಗಾಗಲೇ ನಿರ್ಧರಿಸಿದ್ದರೆ, ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ.

ಶಿವಸೇನೆಗೆ ಏನಾಗಿದೆಯೋ ಅದೇ ನಮಗೂ ಆಗಿದೆ. ಹಾಗಾಗಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಅವರು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 30 ರಂದು ನಮ್ಮ ತಂಡಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಚಿಹ್ನೆ ಮತ್ತು ಹೆಸರು ಸಿಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಪ್ರಬುಲ್ ಪಟೇಲ್ ಈಗಾಗಲೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ,” ಎಂದರು.

ದೇಶ

ಮುಂಬೈ: ಅಜಿತ್ ಪವಾರ್ ಇತ್ತೀಚೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್‌ನಿಂದ ಬೇರ್ಪಟ್ಟು, ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಶರದ್ ಪವಾರ್‌ ಬೆಂಬಲಿಗರು ಅವರನ್ನು ಟೀಕಿಸಿ ಪೋಸ್ಟರ್‌ ಹಾಕಿದ್ದಾರೆ.

ಶರದ್ ಪವಾರ್ ಅವರ ಮನೆ ಮತ್ತು ಪ್ರಮುಖ ಸ್ಥಳಗಳನ್ನು ಆಕ್ರಮಿಸಿರುವ ಪೋಸ್ಟರ್‌ನಲ್ಲಿ ಬಾಹುಬಲಿಯಂತಹ ವ್ಯಂಗ್ಯ ಚಿತ್ರಗಳೂ ಕಾಣಿಸಿಕೊಂಡಿದೆ. ‘ದ್ರೋಹಿಯನ್ನು (ಹಿಂದಿಯಲ್ಲಿ-ಗದಾರ್) ಜನರು ಕ್ಷಮಿಸುವುದಿಲ್ಲ ಕಟ್ಟಪ್ಪ’ ಎಂಬ ಸಾಲುಗಳು ಆ ಪೊಸ್ಟರ್ ನಲ್ಲಿ ಕಾಣುತ್ತಿವೆ. ಬೆನ್ನಿಗೆ ಕತ್ತಿಯಿಂದ ಇರಿಯುವ ದೃಶ್ಯವೂ ಅದರಲ್ಲಿದೆ.

ಅಜಿತ್ ಪವಾರ್ ಇತ್ತೀಚೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್‌ನಿಂದ ಕೆಲವು ಶಾಸಕರೊಂದಿಗೆ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸೇರಿಕೊಂಡು, ಉಪ ಮುಖ್ಯಮಂತ್ರಿ ಆಗಿರುವುದನ್ನು ತೀವ್ರವಾಗಿ ಖಂಡಿಸಿರುವ ಶರದ್ ಪವಾರ್ ಬೆಂಬಲಿಗರು, ಈ ರೀತಿಯ ಪೋಸ್ಟರ್ ಅಭಿಯಾನವನ್ನು ಮಾಡುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಅವರನ್ನು ರಾಜಕೀಯ ಚಾಣಕ್ಯ ಎಂದು ಅವರ ಬೆಂಬಲಿಗರು ಬಣ್ಣಿಸುತ್ತಿರುವುದು ಗಮನಾರ್ಹ.  

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಭಾರತದ ಉದ್ಯಮಿ ಅದಾನಿಯು ವಂಚನೆ ಮತ್ತು ಅವ್ಯವಹಾರದ ಆರೋಪಕ್ಕೆ ಒಳಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಏಕೆ ಭೇಟಿಯಾದರು?

‘ಇನ್ನು 15 ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಎರಡು ಬಾಂಬ್‌ಗಳು ಸ್ಫೋಟಗೊಳ್ಳಲಿದೆ’ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಉದ್ಯಮಿ ಅಧಾನಿ, ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಗೌತಮ್ ಅದಾನಿಯು ಮುಂಬೈನಲ್ಲಿರುವ ಶರದ್ ಪವಾರ್ ಅವರ ‘ಸಿಲ್ವರ್ ಓಕ್’ ನಿವಾಸಕ್ಕೆ ಏಪ್ರಿಲ್ 20 ರಂದು ಭೇಟಿ ನೀಡಿದರು. ಅಲ್ಲಿ ಶರದ್ ಪವಾರ್ ಮತ್ತು ಅದಾನಿ ಭೇಟಿ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಎಂದು ವರದಿಗಳು ಹೇಳುತ್ತವೆ.

ಸುಪ್ರಿಯಾ ಸುಳೆ

ಶರದ್ ಪವಾರ್ ಅವರ ಸಂಬಂಧಿ ಅಜಿತ್ ಪವಾರ್, ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆ ಎಂಬ ಊಹಾಪೋಹದ ಸುದ್ಧಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಈ ವೇಳೆಯಲ್ಲಿ, ಇಂತಹ ಭೇಟಿ ನಡೆದಿರುವುದು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ, ಈ ಭೇಟಿ ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.

ಶರದ್ ಪವಾರ್ ಮತ್ತು ಅದಾನಿ

ಅದಾನಿ ಸಮೂಹವು ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿದೆ ಎಂದು ಹಿಂಡೆನ್‌ಬರ್ಗ್ ವರದಿಯು ಪುರಾವೆಗಳೊಂದಿಗೆ ಆರೋಪಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಅದಾನಿಯನ್ನು ಕಟುವಾಗಿ ಟೀಕಿಸಿದವು. ಉದ್ಯಮಿ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸಂಪರ್ಕದ ಬಗ್ಗೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದರು. ಮೋದಿ ಮತ್ತು ಅದಾನಿ ಒಟ್ಟಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನೂ ರಾಹುಲ್ ಗಾಂಧಿ ಸಂಸತ್ತಿನಲ್ಲಿ ತೋರಿಸಿದರು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅದಾನಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರೂ ಶರದ್ ಪವಾರ್ ಅದಾನಿಯನ್ನು ಬೆಂಬಲಿಸಿಕೊಂಡು ಬಂದರು.

ರಾಹುಲ್ ಗಾಂಧಿ

ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂಬುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಆದರೆ ‘ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಸಂಸದೀಯ ಜಂಟಿ ಸಮಿತಿಯ ತನಿಖೆ ಅಗತ್ಯವಿಲ್ಲ’ ಎಂದು ಶರದ್ ಪವಾರ್ ಹೇಳಿದರು. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಹಾಗೂ ಗೌತಮ್ ಅದಾನಿ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಮಹುವಾ ಮೊಯಿತ್ರಾ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಅದಾನಿ ವಿಚಾರವನ್ನು ತೀವ್ರವಾಗಿ ಟೀಕಿಸಿಕೊಂಡು ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ನೀಡಿದ ಮಾಹಿತಿಯೊಂದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತು. ಅದೇನೆಂದರೆ, ‘ಗೌತಮ್ ಅಧಾನಿ ನನ್ನನ್ನು ಮತ್ತು ಇತರ ಕೆಲವರನ್ನು ಸ್ನೇಹಿತರ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ಮಹುವಾ ಮೊಯಿತ್ರಾ ಹೇಳಿದರು.

ಆ ಕೆಲವರಲ್ಲಿ ಶರದ್ ಪವಾರ್ ಕೂಡ ಒಬ್ಬರು ಎಂಬುದು ಈ ಭೇಟಿಯ ಮೂಲಕ ಬಹಿರಂಗವಾಗಿದೆ. ಅವರ ಭೇಟಿಯ ನಂತರ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ, ‘ಯಾವುದೇ ರಾಜಕಾರಣಿ ಉದ್ಯಮಿ ಅದಾನಿಯನ್ನು ಭೇಟಿ ಮಾಡಬಾರದು’ ಎಂದು ಹೇಳಿದರು. ‘ಅದಾನಿ ಜತೆ ಮುಖಾಮುಖಿಯಾಗಿ ಚರ್ಚಿಸಲು ಏನೂ ಇಲ್ಲ. ಹಿಂಡೆನ್‌ಬರ್ಗ್ ವರದಿಯ ಆರೋಪಗಳ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳೂವ ತನಕ ಯಾವುದೇ ರಾಜಕಾರಣಿ ಅದಾನಿಯನ್ನು ಭೇಟಿ ಮಾಡಬಾರದು’ ಎಂದು ಮಹುವಾ ಮೊಯಿತ್ರಾ ಹೇಳುತ್ತಾರೆ. ಮತ್ತು ಶರದ್ ಪವಾರ್ ಅವರು ಅದಾನಿಯನ್ನು ಭೇಟಿಯಾಗಿರುವುದನ್ನೂ ಟೀಕಿಸಿದ್ದಾರೆ.

ಉದ್ಧವ್ ಠಾಕ್ರೆ

ನವೆಂಬರ್ 2019ರಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಸೇರಿದಂತೆ ಪಕ್ಷಗಳನ್ನು ಒಳಗೊಂಡ ಮಹಾ ವಿಕಾಸ್ ಅಗಾಡಿ ಸಮ್ಮಿಶ್ರ ಸರ್ಕಾರ ಅಲ್ಲಿ ನಡೆಯಿತು. ಇದ್ದಕ್ಕಿದ್ದಂತೆ ಶಿವಸೇನೆಯಿಂದ ಬೇರ್ಪಟ್ಟ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿಯಾದರು. ಆಡಳಿತ ಬದಲಾವಣೆಗೂ ಮುನ್ನ ಅದಾನಿ ಮತ್ತು ಶರದ್ ಪವಾರ್ ಭೇಟಿ ನಡೆಯಿತು ಎಂಬುದು ಗಮನಾರ್ಹ.

ಅಜಿತ್ ಪವಾರ್

ಪ್ರಸ್ತುತ ಉದ್ಧವ್ ಠಾಕ್ರೆ ಹೂಡಿರುವ ಪ್ರಕರಣದಲ್ಲಿ ಏಕನಾಥ್ ಶಿಂಧೆ ಬೆಂಬಲಿಗ ಶಾಸಕರು ಅನರ್ಹಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದೆ ಯಾರು ಸರ್ಕಾರ ರಚಿಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈ ಹಿನ್ನಲೆಯಲ್ಲೇ ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಅದಾನಿ ಹಾಗೂ ಶರದ್ ಪವಾರ್ ಭೇಟಿ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

ಏಕನಾಥ್ ಶಿಂಧೆ

ಶರದ್ ಪವಾರ್ ಮತ್ತು ಅದಾನಿ ಭೇಟಿಗೂ ಮಹಾರಾಷ್ಟ್ರ ರಾಜಕಾರಣದ ಮುಂದಿನ ನಡೆಗಳಿಗೂ ಸಂಬಂಧ ಇರುವ ಸಾಧ್ಯತೆಗಳು ಇದೆ ಎಂದೂ ಹೇಳಲಾಗುತ್ತಿದೆ. ಮತ್ತು ಈ ಸಭೆಯಲ್ಲಿ ಹಿಂಡೆನ್‌ಬರ್ಗ್ ವರದಿಯಿಂದ ಉಂಟಾದ ಬಿಕ್ಕಟ್ಟು ಮತ್ತು ವಿರೋಧ ಪಕ್ಷಗಳ ಹೋರಾಟದಿಂದ ಅದಾನಿ ಸಮೂಹಕ್ಕೆ ಉದ್ಭವಿಸಿರುವ ಒತ್ತಡದ ಬಗ್ಗೆಯೂ ಅವರು ಖಂಡಿತವಾಗಿ ಚರ್ಚಿಸಿರುತ್ತಾರೆ ಎಂದು ಹೇಳಲಾಗುತ್ತಿದೆ.