ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
BJp Archives » Page 8 of 9 » Dynamic Leader
October 16, 2024
Home Posts tagged BJp (Page 8)
ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಪರಿಶಿಷ್ಟ ಜಾತಿ ಸಮುದಾಯದ ಬೆಂಬಲವಿಲ್ಲದಿದ್ದರೆ ಸತತ ಚುನಾವಣೆ ಗೆಲ್ಲುವುದು ಕಷ್ಟ ಎಂದು, ಆರ್‌ಎಸ್‌ಎಸ್-ಬಿಜೆಪಿಗೆ ಈಗ ಮನವರಿಕೆಯಾಗಿದೆ ಎಂದು ತಿಳಿದು ಬಂದಿದೆ.

ಸಂಘ ಪರಿವಾರ ಸಂಘಟನೆಗಳಿಗೆ ಮಾರ್ಗದರ್ಶನ ನೀಡಲು, ಪ್ರತಿ ಸಂಘಟನೆಗೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಪದಾಧಿಕಾರಿಗಳನ್ನು ಆರ್‌ಎಸ್‌ಎಸ್ ನೇಮಕ ಮಾಡಿರುತ್ತದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಮಾಸಿಕ ಸಮಾಲೋಚನೆ ನಡೆಸುವುದು ವಾಡಿಕೆ. ಅದರಂತೆ ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆಯಲ್ಲಿ ಆರ್‌ಎಸ್‌ಎಸ್ ಪದಾಧಿಕಾರಿಗಳು ಸಭೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಆಗ ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸೋಲಿಗೆ ಹಲವು ಕಾರಣಗಳಿದ್ದರೂ ಪರಿಶಿಷ್ಟ ಜಾತಿಯ ಮತಗಳು ಸಿಗದಿರುವುದು ಪ್ರಮುಖ ಕಾರಣವಾಗಿದೆ ಎಂದು ಪದಾಧಿಕಾರಿಗಳು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಜೆಪಿಯ ಹಿರಿಯ ಮುಖಂಡರೊಬ್ಬರು ನಮ್ಮಲ್ಲಿ ಮಾತನಾಡುತ್ತಾ,

‘ರಾಜ್ಯಗಳಲ್ಲಿ ಹಿಂದುಳಿದ ಸಮಾಜದ ನಾಯಕರುಗಳನ್ನು ಸೃಷ್ಟಿಸಿದ ನಂತರವೇ, ಬಿಜೆಪಿ ಚುನಾವಣೆ ಗೆಲ್ಲಲು ಆರಂಭಿಸಿತು. ಕಳೆದ 10 ವರ್ಷಗಳಲ್ಲಿ ಹೆಚ್ಚಿನ ರಾಜ್ಯಗಳಲ್ಲಿ, ಪರಿಶಿಷ್ಟರ ಜನಸಂಖ್ಯೆ ಎರಡರಿಂದ ಐದು ಪರ್ಸೆಂಟ್ ಹೆಚ್ಚಳವಾಗಿದೆ. ಇದನ್ನು ಬಿಜೆಪಿ ನಾಯಕರಿಗೆ ಸೂಚಿಸಿ ಪರಿಶಿಷ್ಟ ಜಾತಿಯ ಬೆಂಬಲವಿದ್ದರೆ ಮಾತ್ರ, ಸತತ ಗೆಲುವು ಸಾಧಿಸಬಹುದು ಎಂದು ಆರ್‌ಎಸ್‌ಎಸ್ ಮನವರಿಕೆ ಮಾಡಿ ಕೊಟ್ಟಿದೆ.

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಮತಗಳು ಸಿಗದೇ ಇರಲು, ಬಿಜೆಪಿಗೆ ಪರಿಶಿಷ್ಟ ಜಾತಿಯ ಪ್ರಭಾವಿ ನಾಯಕರ ಕೊರೆತೆಯೇ ಕಾರಣ. ಇದನ್ನು ಗಮನದಲ್ಲಿಟ್ಟು ಮುಂದಿನ ದಿನಗಳಲ್ಲಿ ದೇಶಾದ್ಯಂತ ಪರಿಶಿಷ್ಟ ಜಾತಿಯ ಬೆಂಬಲವನ್ನು ಪಡೆಯಬೇಕಾಗಿದೆ. ಅದಕ್ಕಾಗಿ ಪ್ರತಿ ರಾಜ್ಯದಲ್ಲಿ, ಪರಿಶಿಷ್ಟ ಜಾತಿಯ ಪ್ರಭಾವಿ ನಾಯಕರುಗಳನ್ನು ಕಟ್ಟಿ ಬೆಳಸಬೇಕಾಗಿದೆ. ಪ್ರಧಾನಿ ಮೋದಿಯ ನಂತರ ಪ್ರಧಾನಿ ಅಭ್ಯರ್ಥಿಯಾಗುವ ಮಟ್ಟಕ್ಕೆ, ಪರಿಶಿಷ್ಟ ಜಾತಿ ನಾಯಕರುಗಳನ್ನು ಬೆಳೆಸುವುದು ಕಾಲದ ಅನಿವಾರ್ಯತೆ ಎಂದು ಆರ್‌ಎಸ್‌ಎಸ್ ಹೇಳಿದೆ’ ಎಂದು ಹೇಳಿದರು.

ಭವಿಷ್ಯದ ರಾಜಕೀಯ ಪರಿಸ್ಥಿತಿಯನ್ನು ಅರಿತೇ ಕೇಂದ್ರ ಸಚಿವ ಸಂಪುಟದಲ್ಲಿ 12 ಜನ ಪರಿಶಿಷ್ಟರು, 8 ಜನ ಪರಿಶಿಷ್ಟ ಪಂಗಡದವರು, 27 ಜನ ಹಿಂದುಳಿದ ವರ್ಗದವರು ಮತ್ತು 11 ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅವಕಾಶವನ್ನು ನೀಡಿದ್ದಾರೆ. ಕೊನೆಯದಾಗಿ, ತಮಿಳುನಾಡಿನ ಪರಿಶಿಷ್ಟ ಜಾತಿಗೆ ಸೇರಿದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರನ್ನು ರಾಜ್ಯಸಭೆ ಸಂಸದರನ್ನಾಗಿ ನೇಮಕ ಮಾಡಿತು. ಐದು ಸ್ಥಳಗಳಲ್ಲಿ ಸ್ಮಾರಕಗಳ ನಿರ್ಮಾಣದಂತಹ ಕ್ರಮಗಳನ್ನೂ ಮೋದಿ ಕೈಗೊಂಡರು.

ಪರಿಶಿಷ್ಟ ಜಾತಿಯ ನಾಯಕರನ್ನು ಬೆಳೆಸಲು ಆರ್‌ಎಸ್‌ಎಸ್ ಸೂಚನೆ ನೀಡಿರುವುದರಿಂದ, ಬಿಜೆಪಿಯ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಆ ದಿಕ್ಕಿನಲ್ಲಿ ಸಾಗುತ್ತವೆ’ ಎಂದು ಪಕ್ಷದವರು ಹೇಳುತ್ತಿದ್ದಾರೆ.

ರಾಜಕೀಯ

ಬೆಂಗಳೂರು: ರಾಜ್ಯ ಚುನಾವಣೆ ಮತದಾನ ದಿನಕ್ಕೆ ಬೆರಳೆಣಿಕೆ ದಿನಗಳು ಬಾಕಿ ಇರುವಂತೆ ಮತ್ತೊಂದು ಚುನಾವಣೆ ಪೂರ್ವ ಸಮೀಕ್ಷೆ ವರದಿ ಪ್ರಕಟಗೊಂಡಿದೆ. ಲೋಕ್‌ಪೋಲ್‌ ಎಂಬ ಸಂಸ್ಥೆ ನಡೆಸಿದ ಈ ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ ಭರ್ಜರಿ ಮುನ್ನಡೆ ಪಡೆದುಕೊಂಡು ಅಧಿಕಾರಕ್ಕೇರಲಿದೆ.

ರಾಜ್ಯ ಚುನಾವಣೆ ಮತದಾನ ಮೇ 10ಕ್ಕೆ ನಿಗದಿಯಾಗಿದ್ದು, ಮೇ 13ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಮತದಾನಕ್ಕೆ ನಾಲ್ಕು ದಿನ ಬಾಕಿ ಇರುವಂತೆ ರಾಷ್ಟ್ರೀಯ ಸಮೀಕ್ಷಾ ಸಂಸ್ಥೆಯಾದ ಲೋಕ್‌ಪೋಲ್‌ ತನ್ನ ಸಮೀಕ್ಷೆಯನ್ನು ನೀಡಿದೆ. ಮೊದಲ ಸ್ಥಾನದಲ್ಲಿ ಕಾಂಗ್ರೆಸ್‌ ಬಹುಮತಗಳೊಂದಿಗೆ ಮೊದಲ ಸ್ಥಾನನದಲ್ಲಿದ್ದು, ಉಳಿದಂತೆ ಬಿಜೆಪಿ ಎರಡನೇ ಸ್ಥಾನ ಪಡೆದುಕೊಳ್ಳಲಿದ್ದು, ಮೂರನೇ ಸ್ಥಾನದಲ್ಲಿ ಜೆಡಿಎಸ್‌ ಇರಲಿದೆ.

ಕಾಂಗ್ರೆಸ್‌ 129 -134 ಸ್ಥಾನಗಳು, ಬಿಜೆಪಿ 59-65 ಸ್ಥಾನಗಳು ಹಾಗೂ ಜೆಡಿಎಸ್‌ 23 – 28 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ಇನ್ನು ಪಕ್ಷೇತರ/ಸ್ವತಂತ್ರ ಅಭ್ಯರ್ಥಿಗಳು 0-2 ಸ್ಥಾನಗಳಿಸಬಹುದು ಎಂದು ಲೋಕ್‌ಪೋಲ್‌ ತನ್ನ ಸಮೀಕ್ಷೆ ವರದಿಯಲ್ಲಿ ತಿಳಿಸಿದೆ. ಸದ್ಯ ಅಧಿಕಾರಕ್ಕೇರಲು ಮ್ಯಾಜಿಕ್‌ ನಂಬರ್‌ 113 ಇದ್ದು, ಕಾಂಗ್ರೆಸ್‌ ಬಹುಮತ ಪಡೆಯುವುದು ಮಾತ್ರವಲ್ಲ ಸುಮಾರು 20 ಸ್ಥಾನಗಳು ಹೆಚ್ಚು ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ಮತ ಹಂಚಿಕೆ ಪ್ರಮಾಣದಲ್ಲಿಯೂ ಕಾಂಗ್ರೆಸ್‌ ಮುಂದಿದೆ. ಒಟ್ಟಾರೆ ಚಲಾವಣೆಯಾಗುವ ಮತಗಳಲ್ಲಿ ಶೇ. 42 ರಿಂದ 25 ರಷ್ಟು ಕಾಂಗ್ರೆಸ್‌ ಪಡೆದುಕೊಳ್ಳಲಿದೆ. ಬಿಜೆಪಿ ಶೇ 31 ರಿಂದ 32 ರಷ್ಟು ಹಾಗೂ ಜೆಡಿಎಸ್‌ ಶೇ 14 ರಿಂದ 18 ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. ಉಳಿದಂತೆ ಶೇ.5 ರಿಂದ 9 ರಷ್ಟು ಮತಗಳು ಇತರೆ ಪಕ್ಷಗಳ/ ಸ್ವತಂತ್ರ ಅಭ್ಯರ್ಥಿಗಳ ಪಾಲಾಗಲಿವೆ ಎಂದು ಲೋಕ್‌ಪೋಲ್‌ ತಿಳಿಸಿದೆ.

ಲೋಕ್‌ಪೋಲ್‌ 150 ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹ ಮಾಡಿದೆ. ಇದಕ್ಕಾಗಿ 15,000 ಕರೆಗಳನ್ನು ಮಾಡಿ ಆ ಮೂಲಕ ಮಾಹಿತಿ ಪಡೆಯಲಾಗಿದೆ. ಕಳೆದ ಎರಡು ತಿಂಗಳಿಂದಲ್ಲಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ತಳಮಟ್ಟದಿಂದ 65 ಸಾವಿರ ಮಾದರಿ ಸಂಗ್ರಹ ಮಾಡಲಾಗಿದೆ. ಒಟ್ಟಾರೆ ಈ ಹಿಂದನ ಎಲ್ಲಾ ಮಾಹಿತಿ ಸಂಗ್ರಹ ಮಾಡಿ ಅಂತಿಮ ವರದಿ ಪ್ರಕಟಿಸಲಾಗಿದೆ ಎಂದು ಸಮೀಕ್ಷಾ ಸಂಸ್ಥೆಯೇ ತಿಳಿಸಿದೆ.

ಇನ್ನು ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿಯೂ ಈ ಲೋಕ್‌ಪೋಲ್‌ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿತ್ತು. ಆ ಸಂದರ್ಭದಲ್ಲಿಯೂ ಕಾಂಗ್ರೆಸ್‌ ಬಹುಮತ ಪಡೆಯಲಿದೆ ಎಂದು ತಿಳಿಸಿತ್ತು. ಕಳೆದ ಎರಡೂ ಸಮೀಕ್ಷೆ ವರದಿಗಿಂತಲೂ ಮೇ 6 ರಂದು ಬಂದ ಅಂತಿಮ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳಿಸಲಿದೆ ಎಂದು ತಿಳಿಸಲಾಗಿದೆ. ಇನ್ನು ಮೇ 10 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಲಿದೆ.

ರಾಜಕೀಯ

ವರದಿ: ರಾಮು ನೀರಮಾನ್ವಿ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಂಪಯ್ಯ ನಾಯಕ, ಜೆಡಿಎಸ್‌ನಿಂದ ರಾಜಾ ವೆಂಕಟಪ್ಪ ನಾಯಕ, ಬಿಜೆಪಿಯಿಂದ ಬಿ.ವಿ.ನಾಯಕ ಅಭ್ಯರ್ಥಿಗಳಾಗಿದ್ದಾರೆ. ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿಯ ಮತಯಾಚನೆ ನೆಡೆದಿದೆ. ಮತ ಬೇಟೆಯಲ್ಲಿ ಮೂರು ಪಕ್ಷಗಳು ಬಿಸಿಲಿನಲ್ಲಿ ಬೆವರು ಹರಿಸುತ್ತಿದ್ದಾರೆ. ಮಾನ್ವಿ ನಗರದಲ್ಲಿ ಜೆಡಿಎಸ್ ಪ್ರಚಾರದಲ್ಲಿ ಮುಂದೆ ಇರುವುದು ಕಂಡು ಬಂದಿದೆ. ಕಾಂಗ್ರೆಸ್ ಬಿಜೆಪಿಗಿಂತ ಮೊದಲಿಗೆ ಜೆಡಿಎಸ್ ಚುನಾವಣೆ ಪ್ರಚಾರವನ್ನು ಕೈಗೊಂಡ ಕಾರಣ ಮತದಾರರನ್ನು ತನ್ನತ್ತ ಸೆಳೆಯಲು ಯಾಶಸ್ವಿಯಾಗಿದೆ. ಕ್ಷೇತ್ರದ ಹಳ್ಳಿಗಳಲ್ಲಿ ಜೆಡಿಎಸ್ ಪಕ್ಷದ ಅಬ್ಬರದ ಪ್ರಚಾರ ಮತ್ತು ಪಕ್ಷದ ಸೇರ್ಪಡೆ ಕಾರ್ಯಕ್ರಮಗಳು ಬರದಿಂದ ಸಾಗಿದ್ದು ಪಕ್ಷಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.

ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಅದೂ ತನ್ನ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಬೇರೆ ತಾಲ್ಲೂಕಿನಿಂದ ವಲಸೆ ಬಂದ ಕಾರಣ ಮತದಾರರನ್ನು ಸೆಳೆಯುವಲ್ಲಿ ಸಪಲವಾಗಿಲ್ಲ. ಕೆಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿದ್ದು ಆ ಪಕ್ಷಕ್ಕೆ ಸ್ವಪ್ಲ ಬಲ ಹೆಚ್ಚಾಗಿದೆ. ಪಕ್ಷ ಸೇರ್ಪಡೆ ಬರದಿಂದ ಮುಂದುವರಿಯುತ್ತಿದೆ. ಇನ್ನೂ ಕಾಂಗ್ರೆಸ್ ಪಕ್ಷದ ನೆಡೆಯು ಮೋಡಮುಸುಕಿದ ವಾತಾವರಣ ಇದೆ. ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್‌ಗೆ ಸೇರಿರುವುದರಿಂದ ಆ ಪಕ್ಷಕ್ಕೆ ಹಿನ್ನಡೆಯಾಗಿದ್ದರೂ ಎಂ.ಈರಣ್ಣ ಅವರ ಸೇರ್ಪಡೆಯಿಂದ ನಿಟ್ಟುಸಿರು ಬಿಡುವಂತೆ ಅಗಿದೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿದೆ. ತಾಲ್ಲೂಕಿನ ದೊಡ್ಡ ದೊಡ್ಡ ಹಳ್ಳಿಗಳಲ್ಲಿ ಕೂಡಾ ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ. ಕೆಲವು ಕಾರ್ಯಕರ್ತರು ಕಾಂಗ್ರೆಸ್ ನಾಯಕರ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಇದು ಹಗಲಿನಷ್ಟೆ ಸತ್ಯ.

ಜೆಡಿಎಸ್, ಬಿಜೆಪಿಯಲ್ಲಿ ಕಾರ್ಯಕರ್ತರು ಹೊಸ ಹುರುಪಿನಿಂದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಆದರೇ ಈ ರೀತಿಯ ವಾತಾವರಣ ಕಾಂಗ್ರೆಸ್‌ನಲ್ಲಿ ಕಂಡು ಬರುತ್ತಿಲ್ಲ. ಇದು ಆ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ. ಚುನಾವಣೆಗೆ ಇನ್ನೂ ಕೇವಲ ಐದು ದಿನ ಬಾಕಿಯಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಮುಖ ಜೋತಾಕಿಕೊಂಡು ತಿರುಗಾಡುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ಗೆ ಇದೊಂದು ದೊಡ್ಡ ಹೊಡೆತ ಅಂದರೆ ಅತಿಶಯೋಕ್ತಿಯಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಪುಟಿದೇಳಬೇಕಾದ ಪರಸ್ಥಿತಿ ಎದುರಾಗಿದೆ. ಅದರ ನಾಯಕರು ಇತ್ತ ಕಡೆ ಗಮನ ಹರಿಸುವರೇ ಎಂಬುದನ್ನು ಕಾದು ನೋಡಬೇಕು. ಅಂತು ಮಾನ್ವಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಚಾರದಲ್ಲಿ ಜೆಡಿಎಸ್ ಎಲ್ಲರಿಗಿಂತಲು ಒಂದು ಹೆಜ್ಜೆ ಮುಂದಿದೆ. ನಂತರ ಬಿಜೆಪಿ, ಅನಂತರ ಕಾಂಗ್ರೆಸ್ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೇ ರೀತಿಯಲ್ಲಿ ಜೆಡಿಎಸ್ ಮುನ್ನೆಡೆದರೆ ಅದು ಗೆಲುವಿನ ದಡ ಸೇರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನೂ ಐದು ದಿನಗಳು ಚುನಾವಣೆಗೆ ಬಾಕಿ ಉಳಿದಿರುವುದರಿಂದ ಪಕ್ಷಗಳು ಯಾವ ತಂತ್ರಗಳನ್ನು ಅನುಸರಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ರಾಜಕೀಯ

“ಮಣಿಪುರ ಹೊತ್ತಿ ಉರಿಯುತ್ತಿದೆ! ಮಣಿಪುರದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ! ಪ್ರಧಾನಿ ಮತ್ತು ಗೃಹ ಸಚಿವರು ಕರ್ನಾಟಕದಲ್ಲಿ ರೋಡ್ ಷೋ ಮಾಡುತ್ತ ಬ್ಯುಸಿಯಾಗಿದ್ದಾರೆ”! ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.

“ಎಲ್ಲಾ ಗಲಭೆಗಳು ನಡೆಯೋದು ಬಿಜೆಪಿ ಆಡಳಿತದಲ್ಲೇ ಏಕೆ? ಗುಜರಾತ್ ಗಲಭೆ: ಬಿಜೆಪಿ ಸರ್ಕಾರ, ತ್ರಿಪುರ ಗಲಭೆ: ಬಿಜೆಪಿ ಸರ್ಕಾರ, ಬೆಂಗಳೂರು ಗಲಭೆ: ಬಿಜೆಪಿ ಸರ್ಕಾರ, ದೆಹಲಿ ಗಲಭೆ: ಬಿಜೆಪಿ ಸರ್ಕಾರ, ಈಗ ಮಣಿಪುರ ಗಲಭೆ: ಬಿಜೆಪಿ ಸರ್ಕಾರ. ಬಿಜೆಪಿ ಆಡಳಿತದಲ್ಲಿ ಜನರಿಗೆ ತಮ್ಮ ಸ್ವಂತ ಮನೆಯೊಳಗೇ ರಕ್ಷಣೆ ಇಲ್ಲವಾದಾಗ ದೇಶದ ರಕ್ಷಣೆ ಸಾಧ್ಯವೇ?

ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ. ಅಲ್ಲೂ “ಬಜರಂಗಿ ಪುನಿಯಾ” ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ?

ಬಜರಂಗದಳ ಬಿಜೆಪಿಯ ಮುದ್ದಿನ ಕೂಸು ಎಂದಾದರೆ, ದಿನೇಶ್ ನಾಯ್ಕ ಎಂಬ ದಲಿತನ ಕೊಲೆಯ ಹೊಣೆಯನ್ನು ಬಿಜೆಪಿ ಹೊರಲಿ; ಮಂಗಳೂರಿನ ಪಬ್ ದಾಳಿಯ ಹೊಣೆಯನ್ನು ಬಿಜೆಪಿ ಹೊರಲಿ; ಸಮಾಜಘಾತುಕ ಕೃತ್ಯಗಳೆಲ್ಲದರ ಹೊಣೆಯನ್ನು ಬಿಜೆಪಿಯೇ ಹೊರಲಿ; ನಂತರ ಬಜರಂಗದಳವನ್ನು ಸಮರ್ಥಿಸಿಕೊಳ್ಳಲಿ.

ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವ ಬಜರಂಗದಳ, PFI ಸೇರಿದಂತೆ ಯಾವುದೇ ಸಂಘಟನೆಯ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರೆ ಉರಿದು ಬೀಳುವ ಬಿಜೆಪಿ ಸಂವಿಧಾನ ಬದಲಿಸುತ್ತೇವೆ ಎಂದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ನರೇಂದ್ರ ಮೋದಿ ಅವರೇ ಹಾಗೂ ಬಿಜೆಪಿಗೆ ಸಂವಿಧಾನ ಮುಖ್ಯವೇ, ಸಂವಿಧಾನ ವಿರೋಧಿ ಸಂಘಟನೆಗಳು ಮುಖ್ಯವೇ? ಸ್ಪಷ್ಟಪಡಿಸಿ ನಂತರ ಮಾತಾಡಲಿ.

ಬಜರಂಗದಳ ಬಿಜೆಪಿಯ ಅಂಗಸಂಘಟನೆಯೇ? ಇಷ್ಟೊಂದು ಮಮಕಾರ ತೋರುವ ಕರ್ನಾಟಕ ಬಿಜೆಪಿ, ಬಜರಂಗದಳದವರಿಗೆ ಎಷ್ಟು ಟಿಕೆಟ್ ನೀಡಿದೆ? ಹಿರಿಯರ ನಾಯಕತ್ವವನ್ನು ಮುಗಿಸಲು ಅವರ ಮಕ್ಕಳು, ಸೊಸೆಯಂದಿರು, ಪತ್ನಿಯರಿಗೆ ಟಿಕೆಟ್ ನೀಡುವ ಬದಲು ಬಜರಂಗದಳದವರಿಗೆ ಟಿಕೆಟ್ ನೀಡಿಲ್ಲವೇಕೆ? ಅಮಾಯಕ ಹುಡುಗರನ್ನು ಕಾನೂನು ವಿರೋಧಿ ಕೃತ್ಯಗಳಿಗೆ ಬಳಸಿ ಲಾಭ ಪಡೆಯುವುದು ಮಾತ್ರ ಬಿಜೆಪಿಯ ಕೆಲಸವೇ?

ಬಜರಂಗದಳ ಅತ್ಯತ್ತಮ ಸಂಘಟನೆಯಾಗಿದ್ದರೆ ಅಮಿತ್ ಶಾ ಅವರು ತಮ್ಮ ಮಗನನ್ನು BCCI ಹುದ್ದೆಯಿಂದ ಕಿತ್ತು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ನೇಮಿಸಲಿ. ಬೊಮ್ಮಾಯ್ ತಮ್ಮ ಮಗನ ಉದ್ಯಮವನ್ನು ಮುಚ್ಚಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಿ. ಬಿಜೆಪಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರ, ದಲಿತ, ಹಿಂದುಳಿದವರ ಮಕ್ಕಳನ್ನು ಬಳಸಿ ಕೋರ್ಟು, ಕೇಸಿಗೆ ಅಲೆಯುವಂತೆ ಮಾಡುವುದನ್ನು ಬಿಡಲಿ.

ಬಜರಂಗದಳ ಬಗ್ಗೆ ಭಯಂಕರವಾಗಿ ಮಾತನಾಡುವ ಕರ್ನಾಟಕ ಬಿಜೆಪಿ ನಾಯಕರು ಉತ್ತರಿಸಲಿ. ಸಿ.ಟಿ.ರವಿ ಮಕ್ಕಳು, ಬಜರಂಗದಳದ ಯಾವ ಹುದ್ದೆಯಲ್ಲಿದ್ದಾರೆ? ಆರ್.ಅಶೋಕ್ ಮಗ ಬಜರಂಗದಳಲ್ಲಿ ಏನು ಕೆಲಸ ಮಾಡುತ್ತಿದ್ದಾರೆ? ತೇಜಶ್ವಿ ಸೂರ್ಯ ಏಕೆ ಬಜರಂಗದಳ ಸೇರಿಲ್ಲ? ಬೊಮ್ಮಾಯ್ ಮಗ ಬಜರಂಗದಳ ಸೇರಿ ಬೆಂಕಿ ಹಚ್ಚುವುದನ್ನು ಬಿಟ್ಟು ಉದ್ಯಮಿಯಾಗಿದ್ದೇಕೆ”? ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ಬಿಜೆಪಿಯ ವಿರುದ್ಧ ಕೆಂಡ ಕಾರಿದೆ.

ರಾಜಕೀಯ

ತುಮಕೂರು: “ಕಳೆದ 3 ವರ್ಷಗಳಿಂದ ಬಿಜೆಪಿ ಮಾಡುತ್ತಿರುವ ಏಕೈಕ ಕೆಲಸವೆಂದರೆ ಅದು ಭ್ರಷ್ಟಾಚಾರ ಮಾತ್ರ. ಇದರಿಂದಾಗಿ ಕರ್ನಾಟಕದ ಜನತೆ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯುತ್ತಾರೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ  .

ತುಮಕೂರುನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಾರೆ, ಬಂದು ತಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತಾರೆ. ಕರ್ನಾಟಕ ಚುನಾವಣೆ ತನ್ನ ಬಗ್ಗೆ ಅಲ್ಲ ಎಂಬುದನ್ನು ನರೇಂದ್ರ ಮೋದಿ ಅರ್ಥಮಾಡಿಕೊಳ್ಳಬೇಕು ಎಂದು ಲೇವಡಿ ಮಾಡಿದರು. ತಮ್ಮ ಬಗ್ಗೆ ಮಾತನಾಡುವ ಬದಲು ಬಿಜೆಪಿ ಸರ್ಕಾರದ ಕಾರ್ಯಗಳು ಮತ್ತು ಕರ್ನಾಟಕದ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಮಾತನಾಡುವಂತೆ ಪ್ರಧಾನಿಯನ್ನು ಕೋರಿದ ಅವರು, ನೀವು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೀರಿ, ಆದರೆ ಕರ್ನಾಟಕದ ಬಗ್ಗೆ ಮಾತನಾಡದೇ ನೀವು ನಿಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತೀರಿ.

ಮುಂದಿನ ಐದು ವರ್ಷಗಳಲ್ಲಿ ನೀವು ಏನು ಮಾಡುತ್ತೀರಿ, ಯುವಕರು, ಶಿಕ್ಷಣ, ಆರೋಗ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಏನು ಮಾಡುತ್ತೀರಿ ಎಂಬುದರ ಕುರಿತು ನಿಮ್ಮ ಭಾಷಣಗಳಲ್ಲಿ ನೀವು ಮಾತನಾಡಬೇಕು. ಈ ಚುನಾವಣೆ ನಿಮ್ಮದಲ್ಲ, ಕರ್ನಾಟಕದ ಜನರು ಮತ್ತು ಭವಿಷ್ಯದ ಬಗ್ಗೆ ಆಗಿದೆ. ಕಳೆದ ಮೂರು ವರ್ಷಗಳಿಂದ ಬಿಜೆಪಿಯವರು ಭ್ರಷ್ಟಾಚಾರ ಮಾತ್ರ ಮಾಡುತ್ತಿದ್ದಾರೆ. ಇದರ ಫಲವಾಗಿ ಕರ್ನಾಟಕದ ಜನ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯುತ್ತಾರೆ. ಅಂದರೆ ಬಿಜೆಪಿಯವರು ಸಾರ್ವಜನಿಕರಿಗೆ ಮಾಡುವ ಎಲ್ಲಾ ಕೆಲಸಗಳಿಗೆ ಜನರಿಂದ ಶೇಕಡಾ 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂಬುದಕ್ಕಾಗಿ. ಇದು ಪ್ರಧಾನಿಗೂ ಗೊತ್ತಿದೆ. ಆದರೆ ಅವರು ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ?

ಕಾಂಗ್ರೆಸ್ 91 ಬಾರಿ ನಿಮ್ಮನ್ನು ನಿಂದಿಸಿದೆ ಎಂದು ನೀವು ಹೇಳುತ್ತೀರಿ, ಆದರೆ ನೀವು ಕರ್ನಾಟಕಕ್ಕಾಗಿ ಏನು ಮಾಡಿದ್ದೀರಿ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಮುಂದಿನ ಭಾಷಣದಲ್ಲಿ ನೀವು ಏನು ಮಾಡಿದ್ದೀರಿ ಮತ್ತು ಮುಂದಿನ ಐದು ವರ್ಷಗಳಲ್ಲಿ ನೀವು ಏನು ಮಾಡುತ್ತೀರಿ ಎಂಬುದರ ಕುರಿತು ಮಾತನಾಡಿ” ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಕಿಡಿ ಕಾರಿದರು.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪದಕರು

ಕರ್ನಾಟಕದಲ್ಲಿ ತಮಿಳು ಭಾಷಿಕರು ಸುಮಾರು 1 ಕೋಟಿಗೂ ಮಿಗಿಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಆನೇಕಲ್, ಮಹದೇವಪುರ, ಕೆ.ಆರ್.ಪುರಂ, ಸಿ.ವಿ.ರಾಮನ್ ನಗರ, ಸರ್ವಜ್ಞ ನಗರ, ಪುಲಿಕೇಶಿನಗರ, ಶಿವಾಜಿನಗರ, ಶಾಂತಿನಗರ, ಬಿಟಿಎಂ ಲೇಔಟ್, ಜಯನಗರ, ಚಿಕ್ಕಪೇಟೆ, ಚಾಮರಾಜ ಪೇಟೆ, ಗಾಂಧಿನಗರ, ರಾಜಾಜಿನಗರ, ಯಶವಂತಪುರ ಹಾಗೂ ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು, ಮೈಸೂರು, ಹನೂರು, ಚಾಮರಾಜನಗರ, ಕೊಳ್ಳೇಗಾಲ, ಹಾಗೂ ಕೆಜಿಎಫ್ ಮುಂತಾದ 23 ಕ್ಷೇತ್ರಗಳಲ್ಲಿ ತಮಿಳರ ಮತಗಳೇ ನಿರ್ಣಾಯಕ.

ದಶಕಗಳ ಹಿಂದೆ ಈ ಕ್ಷೇತ್ರಗಳಲ್ಲಿ ತಮಿಳುನಾಡು ಮೂಲದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷದ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಸ್ಪರ್ದಿಸುತ್ತಿದ್ದರು. ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ರಾಜಕೀಯ ಬದಲಾವಣೆಗಳು ಮತ್ತು ಎನ್‌ಡಿಎ ಹಾಗೂ ಯೂಪಿಎ ಮೈತ್ರಿ ಪಕ್ಷಗಳ ಕೋರಿಕೆಯ ಮೇರೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಇಲ್ಲಿನ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ ಚುನಾವಣೆಯಿಂದ ಹಿಂದೆ ಸರಿದವು.

ಯೂಪಿಎ ಮೈತ್ರಿ ಕೂಟದಲ್ಲಿರುವ ಡಿಎಂಕೆ ಮತ್ತು ಸಿದಂಬರಂ ಲೋಕಸಭಾ ಸದಸ್ಯ ತೋಲ್ ತಿರುಮಾವಳವನ್ ನೇತೃವದ “ವಿಡುದಲೈ ಚಿರುತ್ತೈಗಳ್” ಪಕ್ಷಕ್ಕೆ ಕರ್ನಾಟಕದಲ್ಲಿ ಶಾಖೆಗಳಿವೆ. ಮತ್ತು ಅಪಾರವಾದ ಕಾರ್ಯಕರ್ತರಿದ್ದಾರೆ. ವಿಚಾರವಾದಿ ಪೆರಿಯಾರ್ ರವರ ಅನುಯಾಯಿಗಳು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ.

ಆದರೆ, ಎನ್‌ಡಿಎ ಮೈತ್ರಿ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ ಪಕ್ಷವು, ಮಾಜಿ ಮುಖ್ಯಮಂತ್ರಿಗಳಾದ ಎಡಪ್ಪಾಡಿ ಪಳನಿಸ್ವಾಮಿ, ಒ.ಪನ್ನೀರ್ ಸೆಲ್ವಂ, ಶಶಿಕಲಾ ಮತ್ತು ಟಿಟಿವಿ ದಿನಕರನ್ ಮುಂತಾದವರ ನಾಯಕತ್ವದ ಕಚ್ಚಾಟದಿಂದ ನಾಲ್ಕು ಭಾಗಗಳಾಗಿ ಹೊಡೆದೋಗಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಮೈತ್ರಿಕೂಟದಲ್ಲಿರುವ ಬಿಜೆಪಿ ಈಗ ಹೊರಗೆ ನಿಂತು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷವನ್ನು ಬಾಯಿಗೆ ಬಂದಂತೆ ವಿಮರ್ಶೆ ಮಾಡಿಕೊಂಡು ತಿರುಗಾಡುತ್ತಿದೆ. ಈರೋಡು ಉಪ ಚುನಾವಣೆಯಿಂದ ಎಐಎಡಿಎಂಕೆ ಮತ್ತು ತಮಿಳುನಾಡು ಬಿಜೆಪಿಯ ಸಂಬಂಧ ಅಷ್ಟೇನು ಸರಿಯಾಗಿಲ್ಲ.

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ಆಡಳಿತ ರೂಡ ಡಿಎಂಕೆ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಜೊತೆಯಲ್ಲೇ ಮಿತ್ರ ಪಕ್ಷವಾದ ಎಐಎಡಿಎಂಕೆ ಪಕ್ಷದ ನಾಯಕರುಗಳನ್ನೂ ವಿಮರ್ಶೆ ಮಾಡುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ‘ದಿನನಿತ್ಯ ಪತ್ರಿಕೆಗಳಲ್ಲಿ, ಟಿ.ವಿ.ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಮಾದ್ಯಮಗಳಲ್ಲಿ ಸುದ್ದಿಯಾಗಬೇಕು ಎಂಬುದಕ್ಕಾಗಿ ಸಾಕ್ಷ್ಯದಾರ ವಿಲ್ಲದ ವಿಷಯಗಳನ್ನು ಮುನ್ನಲೆಗೆ ತಂದು ಅಣ್ಣಾಮಲೈ ಮಾತನಾಡುತ್ತಿದ್ದಾರೆ’ ಎಂದು ಅಲ್ಲಿನ ದಿಎಂಕೆ ನಾಯಕರು ಹೇಳುತ್ತಿದ್ದಾರೆ. 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಬಿಜೆಪಿ ಪಕ್ಷವು ಸುಮಾರು 2.62% ಮತಗಳನ್ನು ಮಾತ್ರವೇ ಪಡೆದಿತ್ತು. ಆದರೆ, ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಮಿಳುನಾಡಿನಲ್ಲಿ ಪ್ರಬಲವಾದ ವಿರೋಧ ಪಕ್ಷ ನಾವೇ ಎಂದು ಎಲ್ಲಡೆಯೂ ಹೇಳಿಕೊಂಡು ಬರುತ್ತಿದ್ದಾರೆ. ತನ್ನನ್ನು ಎಂಜಿಆರ್, ಜಯಲಲಿತಾ ಹಾಗೂ ಕರುಣಾನಿಧಿ ಅವರೊಂದಿಗೆ ಹೋಲಿಕೆ ಮಾಡಿ ಮಾತನಾಡಿ ಎಲ್ಲರ ನಗೆಪಾಟಿಗೆ ಕಾರಣರಾಗಿದ್ದಾರೆ.

‘ರಫೇಲ್ ಕೈಗಡಿಯಾರದ ಬಿಲ್ಲಿನ ವಿಚಾರದಲ್ಲಿ ನಕಲಿ ರಶೀದಿಯನ್ನು ತೋರಿಸಿ, ದಿನಕ್ಕೊಂದು ಮಾತನಾಡುತ್ತಿದ್ದಾರೆ’ ಎಂದು ಅಲ್ಲಿನ ಜನ ಆಕ್ರೋಶವನ್ನು ವ್ಯಕ್ತಪಡಿಸಿ, ಶೋಷಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದಂತೆ ಮೀಮ್ಸ್ ಗಳನ್ನು ಹಾಕಿ ಕೀಟಲೆ ಮಾಡುತ್ತಿರುವುದು ದಿನನಿತ್ಯದ ಟ್ರೆಂಡಿಂಗ್ ಆಗಿದೆ. ‘ರಫೇಲ್ ವಾಚ್‌ಗೆ ಬಿಲ್ಲನ್ನು ಕೇಳಿದರೆ, ಅದಕ್ಕೆ ಪ್ರತಿಯುತ್ತರವಾಗಿ ಡಿಎಂಕೆ ಸರ್ಕಾರದ ಭ್ರಷ್ಟಾಚಾರಗಳನ್ನು ಏಪ್ರಿಲ್ ಒಂದರಂದು ಬಯಲುಗೊಳಿಸುತ್ತೇನೆ ಎಂದು ಹೇಳಿ, ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕೆಲವರ ಆಸ್ತಿ ಪಟ್ಟಿಯನ್ನು ತೋರಿಸಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅವರ ಮಂತ್ರಿಮಂಡಲದ ಸಹದ್ಯೋಗಿಗಳು ರೂ.1,343,170,000,000 ಕೋಟಿಯಷ್ಟು ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಹೇಳುತ್ತಿದ್ದಾರೆ’ ಎಂದು ಅಲ್ಲಿಂದ ವರದಿಗಳು ಹೇಳುತ್ತಿದೆ. ಇದನ್ನೇ ಕಾಯುತ್ತಿದ್ದ ಡಿಎಂಕೆ ಪಕ್ಷವು ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿಯ ಮೂಲಕ ತಕ್ಷಣ ಅಣ್ಣಮಲೈಗೆ ಲೀಗಲ್ ನೋಟೀಸ್ ಕಳುಹಿಸಿ, ‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಅವರ ಕುಟುಂಬ ಸದಸ್ಯರು ಮತ್ತು ಡಿಎಂಕೆ ನಾಯಕರ ವಿರುದ್ಧ ಇತ್ತೀಚಿಗೆ ಮಾಡಿದ ಭಾಷಣ ಮತ್ತು ಭ್ರಷ್ಟಾಚಾರ ಆರೋಪಗಳಿಗಾಗಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು ಮತ್ತು 48 ಗಂಟೆಗಳ ಒಳಗೆ 500 ಕೋಟಿ ರೂಪಾಯಿಗಳ ನಷ್ಟವನ್ನು ಪಾವತಿಸಬೇಕು. ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು’ ಎಂದು ಲೀಗಲ್ ನೋಟಿಸ್ ಕಳುಹಿಸಿತು.

ಕೆಲವು ದಿನಗಳ ಹಿಂದೆ ಮಾತನಾಡಿದ ಅಣ್ಣಾಮಲೈ ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿಯನ್ನು ಮುಂದುವರಿಸಿದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಗರ್ವದಿಂದ ಕೇಂದ್ರದ ಬಿಜೆಪಿ ವರಿಷ್ಠರಿಗೆ ಬೆದರಿಕೆಯ ಸಂದೇಶವನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಮುಂದಿನ ಚುನಾವಣೆ ಎಐಎಡಿಎಂಕೆ ಜೊತೆಯಲ್ಲೇ’ ಎಂದು ಪ್ರತಿಕ್ರಿಯೆ ನೀಡಿದರು. ಇಷ್ಟಕ್ಕೆ ತನ್ನಗಾಗದ ಅಣ್ಣಾಮಲೈ ‘ಡಿಎಂಕೆ ಮಾತ್ರವಲ್ಲ ತಮಿಳುನಾಡಿನಲ್ಲಿ ಅಧಿಕಾರ ಚಲಾಯಿಸಿದ ಹಿಂದಿನ ಪಕ್ಷಗಳ ಭ್ರಷ್ಟಾಚಾರವನ್ನೂ ಬಯಲಿಗೆಳೆಯುತ್ತೇನೆ’ ಎಂದು ಎಐಎಡಿಎಂಕೆ ಪಕ್ಷಕ್ಕೆ ದಮಕಿ ಹಾಕಿದರು. ಇದರಿಂದ ಎಐಎಡಿಎಂಕೆ ಮತ್ತು ಬಿಜೆಪಿಯ ಸಂಬಂಧ ಅಳಸಿಹೋಗಿರುವುದು ಸುಳ್ಳೇನಲ್ಲ. ಇವರ ನಡವಳಿಕೆಯಿಂದ ಬೇಸತ್ತ ತಮಿಳುನಾಡು ಬಿಜೆಪಿಯ ರಾಜ್ಯಮಟ್ಟದ ಪದಾಧಿಕಾರಿಗಳು ಸುಮಾರು ಜನ ಪಕ್ಷವನ್ನು ತೊರೆದು ಬೇರೆ ಬೇರೆ ಪಕ್ಷಗಳಲ್ಲಿ ಸೇರಿಕೊಳುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಎನ್‌ಡಿಎ ಮಿತ್ರ ಪಕ್ಷವಾದ ಎಐಎಡಿಎಂಕೆ, ಕರ್ನಾಟಕದಲ್ಲಿ ತಮಿಳರ ಪ್ರಾಬಲ್ಯವಿರುವ ಕಡೆಗಳಲ್ಲಿ ಸ್ಪರ್ದಿಸಲು 4 ರಿಂದ 6 ಕ್ಷೇತ್ರಗಳನ್ನು ಒದಗಿಸಿಕೊಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಕೇಳಿತ್ತು. ಆದರೆ ಇದಕ್ಕೆ ಅಮಿತ್ ಶಾ ಒಪ್ಪಿಗೆ ನೀಡಲಿಲ್ಲವೆಂದು ಹೇಳಲಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ಎಐಎಡಿಎಂಕೆ ಕೊನೆಯ ಕ್ಷಣದಲ್ಲಿ ಪುಲಿಕೇಶಿನಗರದಲ್ಲಿ ತಮ್ಮ ಅಭ್ಯರ್ಥಿ ಟಿ.ಅನ್ಬರಸನ್ ಅವರನ್ನು ಕಣಕ್ಕಿಳಿಸಿ ತಮ್ಮ ಪ್ರತಿರೋಧವನ್ನು ವ್ಯಕ್ತ ಪಡಿಸಿತು. ಈಗ ಬಿಜೆಪಿ ವರಿಷ್ಠರ ಕೋರಿಕೆಯ ಮೇರೆಗೆ ಅಲ್ಲಿ ತಮ್ಮ ಅಭ್ಯರ್ಥಿಯನ್ನು ವಾಪಸ್ಸು ಪಡೆದುಕೊಂಡಿದೆ.

ಬೆಂಗಳೂರು ನಗರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂದು ಕಾರ್ಯತಂತ್ರ ರೂಪಿಸಿರುವ  ಬಿಜೆಪಿಗೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಕರ್ನಾಟಕ ಚುನಾವಣೆ ಸಹ ಉಸ್ತುವಾರಿಯಾದ ಅಣ್ಣಾಮಲೈ ಅವರಿಂದ ತಮಿಳರ ಪ್ರಾಬಲ್ಯವಿರುವ 23 ಕ್ಷೇತ್ರಗಳಲ್ಲಿ ತಮಿಳರ ಮತಗಳು ಕೈತಪ್ಪಿ ಹೋಗುವುದು ಬಹುತೇಕ ಖಚಿತವಾಗಿದೆ. ಕಾರಣ ಇಲ್ಲಿನ ಬಹುಪಾಲು ತಮಿಳರು ಇನ್ನು ಡಿಎಂಕೆ, ಎಐಎಡಿಎಂಕೆ, ವಿಡುದಲೈ ಚಿರುತ್ತೈಗಳ್, ದ್ರಾವಿಡರ್ ಕಳಗಂ ಹಾಗೂ ದ್ರಾವಿಡರ್ ವಿಡುದಲೈ ಕಳಗಂ ಮೂಂತಾದ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದವರಲ್ಲಿ ಹೆಚ್ಚಿನವರು ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಬೆರಳೆನಿಕೆಯ ತಮಿಳರೆ ಇದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಡಿಎಂಕೆ ವರಿಷ್ಠ ದಿವಂಗತ ಎಂ.ಕರುಣಾನಿಧಿ ಅವರ ಆಡಳಿತಾವದಿಯಲ್ಲಿ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಹಾಗೂ ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಇದರಿಂದ ಕರ್ನಾಟಕದಲ್ಲಿ ಯಡಿಯೂರಪ್ಪನವರ ಮೇಲೆ ಇಲ್ಲಿನ ತಮಿಳರು ಅಪಾರವಾದ ಗೌರವವನ್ನು ಇಟ್ಟಿದ್ದರು. ಈಗ ಅಣ್ಣಾಮಲೈಯಿಂದ ಅದೂ ಇಲ್ಲದಂತೆ ಆಗಿದೆ. ತಮಿಳುನಾಡಿನಲ್ಲಿರುವ ಆಡಳಿತ ಪಕ್ಷವಾದ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳನ್ನು ಹಾಗೂ ವಿರೋಧ ಪಕ್ಷವಾದ ಎಐಎಡಿಎಂಕೆಯನ್ನು ಕಟುವಾಗಿ ಟೀಕಿಸಿಕೊಂಡು ಇಲ್ಲಿಗೆ ಬಂದು ತಮಿಳರಲ್ಲಿ ಮತ ಕೇಳಿದರೆ ಯಾರುತಾನೇ ಓಟು ನೀಡುತ್ತಾರೆ.        

ರಾಜಕೀಯ

ಚಿಕ್ಕೋಡಿ: ಲಕ್ಷ್ಮಣ ಸವದಿ ಖರ್ಚು ಮಾಡುತ್ತಿರುವ ಹಣ ಬಿಜೆಪಿಯಲ್ಲಿ ಸಂಪಾದನೆ ಮಾಡಿದ್ದು; ಆ ಹಣವನ್ನು ಪಡೆದು ಬಿಜೆಪಿಗೆ ವೋಟ್‌ ಹಾಕಿ ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅಥಣಿ ಕ್ಷೇತ್ರದ ಮತದಾರರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ.

ಪ್ರಚಾರದ ವೇಳೆ ಮಾತನಾಡಿದ ಅವರು, ಸವದಿ ಕಣ್ಣೀರು ಹಾಕಿ ನಾಟಕ ಮಾಡುತ್ತಿದ್ದಾರೆ. ಪಕ್ಷದಿಂದ ಅವರಿಗೆ ಎಲ್ಲವನ್ನೂ ನೀಡಲಾಗಿದೆ. ಆದರೆ ಅವರು ಅಧಿಕಾರ ನೀಡಿದ ಎಲ್ಲರಿಗೂ ಮೋಸ ಮಾಡಿ ಇಲ್ಲಿಂದ ಹೋಗಿದ್ದಾರೆ. ಬಿ.ಎಲ್.ಸಂತೋಷ್‌ ಮತ್ತು ಉಮೇಶ್ ಕತ್ತಿಗೂ ಮೋಸ ಮಾಡಿದ್ದಾರೆ. ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಬೇಕು ಎಂದು ಸವದಿಯ ವಿರುದ್ಧ ಮತದಾರರನ್ನು ಎತ್ತಿಕಟ್ಟಿದ್ದಾರೆ.

ಲಕ್ಷ್ಮಣ ಸವದಿ ಖರ್ಚು ಮಾಡುತ್ತಿರುವ ಹಣ, ಬಿಜೆಪಿಯಲ್ಲಿ ಸಂಪಾದನೆ ಮಾಡಿದ್ದು ಎಂದು ಹೇಳುವ ರಮೇಶ್ ಜಾರಕಿಹೋಳಿ, ಬಿಜೆಪಿಯನ್ನು ಭ್ರಷ್ಟ ಪಕ್ಷವೆಂದು ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರ ಮಾಡದೇ ಹಣ ಬರುತ್ತದೆಯೇ? ಕಾಂಗ್ರೆಸ್ ಪಕ್ಷದ ಲಕ್ಷ್ಮಣ ಸವದಿಯಿಂದ ಹಣವನ್ನು ಪಡೆದುಕೋಂಡು ಬಿಜೆಪಿಗೆ ವೋಟ್‌ ಹಾಕಿ ಎಂದು ಮತದಾರರಿಗೆ ಆಮಿಷ ಮತ್ತು ಪ್ರಚೋದನೆ ನೀಡುವುದು ಅಪರಾಧವಲ್ಲವೇ? 

“ಅವರಿಂದ ಹಣ ಪಡೆದುಕೊಂಡು ನಮಗೆ ವೋಟ್ ಹಾಕಿ” ಎಂದು ಅಭ್ಯರ್ಥಿಗಳು ಹೇಳುವುದು ಸರ್ವ ಸಾಮಾನ್ಯವಾಗಿದೆ. ಈ ರೀತಿ ಹೇಳುವುದು ಚುನಾವಣೆ ನೀತಿಗಳಿಗೆ ವಿರುದ್ಧವಲ್ಲವೇ? ಇದು ಅಪರಾದ ಕ್ರಮವಲ್ಲವೇ? ಇದರ ಬಗ್ಗೆ ಚುನಾವಣಾ ಅಯೋಗವು ಏನು ಕ್ರಮ ತೆಗೆದುಕೊಂಡಿದೆ. ಈ ರೀತಿ ಹೇಳುವುದು ಅಪರಾಧ ಎನ್ನುವುದಾದರೆ, ಮೊದಲು ಮಾಜಿ ಸಚಿವ ಹಾಗೂ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿ ಹೊಳಿಯ ವಿರುದ್ಧ, ಕ್ರಮ ಜರುಗಿಸುವ ಮೂಲಕ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಬೇಕೆಂದು ಮತದಾರರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. 

ರಾಜಕೀಯ

ಬೆಂಗಳೂರು: ಪುದುಚೇರಿ ಒಳಗೊಂಡಂತೆ 6 ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಯಿರುವ ಏಕೈಕ ರಾಜ್ಯವೆಂದರೆ ಅದು ಕರ್ನಾಟಕ. ಬಹುಶಃ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋತರೆ ಆ ಪಕ್ಷಕ್ಕೆ ದಕ್ಷಿಣ ಭಾರತದ ಬಾಗಿಲು ಸಂಪೂರ್ಣವಾಗಿ ಮುಚ್ಚಲಿದೆ. ಒಂದು ದೇಶವನ್ನು ಆಳುವ ಪಕ್ಷ; ವಿಶ್ವದ ಅತಿ ದೊಡ್ಡ ಸದಸ್ಯತ್ವ ಹೊಂದಿರುವ ಪಕ್ಷ; ದೇಶದ ಒಂದು ದೊಡ್ಡ ಭೂಪ್ರದೇಶದಲ್ಲಿ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವುದು ಆ ಪಕ್ಷಕ್ಕೆ ಕಹಿ ದುಃಸ್ವಪ್ನವಾಗಿ ಇರುತ್ತದೆ.

ಲಿಂಗಾಯತ ಸೇರಿದಂತೆ ಪ್ರಮುಖ ವೋಟ್ ಬ್ಯಾಂಕ್ ಸಮುದಾಯಗಳು ಬಿಜೆಪಿಯಿಂದ ದೂರ ಸರಿಯುತ್ತಿರುವುದು, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಪ್ರಮುಖ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಿರುವುದು, ನಂದಿನಿ ಹಾಲಿನ ವಿಚಾರ, ಮುಸ್ಲಿಮರಿಗೆ ಶೇಕಡಾ 4% ಮೀಸಲಾತಿ ರದ್ದು ಮುಂತಾದ ವಿಷಯಗಳು ಬಿಜೆಪಿಗೆ ಚುನಾವಣೆಯ ಸಂದರ್ಭದಲ್ಲಿ ಬಾರಿ ಬಿಕ್ಕಟ್ಟನ್ನು ನೀಡುತ್ತವೆ ಎಂದು ನಿರೀಕ್ಷೆ ಮಾಡುತ್ತಿರುವ ಸಂದರ್ಭದಲ್ಲಿ, ಇವುಗಳನ್ನು ಹತ್ತಿಕ್ಕಲು ಬಿಜೆಪಿಯೂ ಪರ್ಯಾಯ ಚಿಂತನೆಗಳನ್ನು ಮುಂದಿಟ್ಟಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಸರಿ ಒಂದುವೇಳೆ ಚುನಾವಣೆಯಲ್ಲಿ ಸೋತರೆ ಕೆಲವು ಕ್ರಿಯಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ದೆಹಲಿ ಬಿಜೆಪಿ ಮೂಲಗಳು ಹೇಳುತ್ತವೆ. ಒಟ್ಟಾರೆಯಾಗಿ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಜೀವನ್ಮರಣ ಪರಿಸ್ಥಿತಿಯೇ?

ರಾಜಕೀಯ

ವರದಿ: ರಾಮು ನೀರಮಾನ್ವಿ

ರಾಯಚೂರು: ರಾಯಚೂರು ಜಿಲ್ಲೆ, ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಚಿತ್ರಣ ಬದಲಾಗುತ್ತಲೇ ಇದೆ. ಕೊನೆಗೆ ಪಕ್ಷೇತರ ಅಭ್ಯರ್ಥಿ ಡಾ.ತನುಶ್ರಿ ಕೂಡಾ ತಮ್ಮ ನಾಮ ಪತ್ರವನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ತನ್ನ ಪಕ್ಷದಿಂದ ಚುನಾವಣೆಗೆ ನಿಲ್ಲಿಸಲು ಅಭ್ಯರ್ಥಿಗಳನ್ನು ಅಯ್ಕೆ ಮಾಡಿಕೊಂಡ ರೀತಿಯ ಬಗ್ಗೆ ಅನುಮಾನಗಳಿವೆ. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಯ್ಕೆ ಮಾಡುವಲ್ಲಿ ಗಜ ಪ್ರಸವದಂತಾಗಿದೆ. ಆದರೆ ಕೊನೆ ಗಳಿಗೆಯಲ್ಲಿ ಹಿರಿಯ ಮುಖಂಡ ಮಾಜಿ ಶಾಸಕ ಹಂಪಯ್ಯ ನಾಯಕ ಅವರಿಗೆ ಕಾಂಗ್ರೆಸ್‌ ಟಿಕೆಟ್ ಕೊಟ್ಟಿದೆ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಕಾರಣ, ಶರಣಯ್ಯ ನಾಯಕರಿಗೆ ಟಿಕೆಟ್ ಕೊಡ್ತಿವಿ ಅಂತ ಹೇಳಿ, ಅವರನ್ನು ಬಿಜೆಪಿಗೆ ರಾಜಿನಾಮೆ ಕೊಡಿಸಿ, ಬಿಜೆಪಿಯಿಂದ ಕಾಂಗ್ರೆಸ್ ಗೆ ಕರೆತಂದರು. ನಂತರ ಹಂಪಯ್ಯ ನಾಯಕ ಅವರಿಗೆ ಟಿಕೆಟ್ ನೀಡಿ, ಶರಣಯ್ಯ ನಾಯಕ ಅವರನ್ನು ಅತಂತ್ರದಲ್ಲಿ ಬಿಟ್ಟಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಹಂಪಯ್ಯ ನಾಯಕ

 ಇದು ಕಾಂಗ್ರೆಸ್‌ನ ಕಥೆಯಾದರೆ, ಬಿಜೆಪಿಯಲ್ಲಿ ಬೇರೆಯದೆ ಆಟ ಇದೆ. ಮೊದಲಿಗೆ ಮಾನಪ್ಪ ನಾಯಕ, ಗಂಗಾಧರ ನಾಯಕ, ಇನ್ನಿತರ ಅಭ್ಯರ್ಥಿಗಳೆಲ್ಲ ಟಿಕೆಟ್‌ಗಾಗಿ ಹರಸಾಹಸ ಮಾಡಿದರೂ ಇವರೆಲ್ಲರನ್ನು ಕಡೆಗಣಿಸಿ ಪಕ್ಕದ ದೇವದುರ್ಗ ತಾಲ್ಲೂಕಿನ ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕರಿಗೆ ಟಿಕೆಟ್ ನೀಡಿದ್ದಾರೆ. ಇದರಿಂದ ಸ್ಥಳೀಯ ಬಿಜೆಪಿ ಮುಖಂಡರಿಗೆ ಇರುಸುಮುರುಸಾಗಿದೆ. ಪ್ರಬಲವಾದ ಗಂಗಾಧರ ನಾಯಕರಿಗೆ ಟಿಕೆಟ್ ಕೈ ತಪ್ಪಿರುವುದು ಅವರ ಅಭಿಮಾನಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ‘ಸ್ಥಳೀಯರನ್ನು ಬಿಟ್ಟು ವಲಸೆ ಬಂದವರಿಗೆ ಟಿಕೆಟ್ ಕೊಟ್ಟರೆ ನಾವೇನು ಕತ್ತೆ ಕಾಯುವುದೇ? ಬಿಜೆಪಿ ಪಕ್ಷ ಬೆಳೆಸಲು ನಾವು ಬೇಕು; ಟಿಕೆಟ್ ಇನ್ನೊಬ್ಬರಿಗೆ ಕೊಟ್ಟರೆ ನಾವೇನು ಮಾಡಬೇಕು; ಅಂತಿದ್ದಾರೆ ಬಿಜೆಪಿಯ ಕಾರ್ಯಕರ್ತರು.

ಪಕ್ಷೇತರ ಅಭ್ಯರ್ಥಿ ಡಾ.ತನುಶ್ರಿ

ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ ಟಿಕೆಟ್ ಕೊಟ್ಟರೆ ನಾವೇನು ಮಾಡಬೇಕು. ನಮಗೂ ಶಕ್ತಿ ಇದೆ. ಚುನಾವಣೆ ಎದುರಿಸಲು ನಮಗೆ ತಾಕತ್ತು ಇಲ್ಲವಾದಲ್ಲಿ ಬೇರೆಯವರಿಗೆ ಟಿಕೆಟ್ ಕೊಡಬೇಕಾಗಿತ್ತು. ಮಾತೆತ್ತಿದರೆ ‘ಬಿಜೆಪಿ ಪಕ್ಷವು ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತದೆ’ ಎಂದು ಹೇಳುವ ಇವರು, ಗಂಗಾಧರ ನಾಯಕರಿಗೆ ಏಕೆ ಟಿಕೆಟ್ ಕೊಡಲಿಲ್ಲ ಅಂತ ಬಿಜೆಪಿ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿ.ವಿ.ನಾಯಕರ ತಂದೆ ನಾಲ್ಕು ಬಾರಿ ರಾಯಚೂರು ಲೋಕಸಭಾ ಸದಸ್ಯರಾಗಿದ್ದವರು. ಒಂದು ಬಾರಿ ಶಾಸಕರಾಗಿದ್ದರು. ಬಿ.ವಿ.ನಾಯಕರು ಒಂದು ಬಾರಿ ಸಂಸದರಾಗಿ ಅಯ್ಕೆ ಆದವರು, ಇನ್ನೊಬ್ಬ ಮಗ RDCC Bank Member. ಇಷ್ಟೆಲ್ಲ ಸ್ಥಳೀಯ ಮಟ್ಟದಲ್ಲಿ ಅಧಿಕಾರ ಅನುಭವಿಸಿದವರು ಈಗ ತನಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ರಾತ್ರೋರಾತ್ರಿ ಬಿಜೆಪಿಗೆ ವಲಸೆ ಹೋಗುವುದು ಸಮಂಜಸವಲ್ಲ.

ಮೇಲಾಗಿ ರಾಯಚೂರು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕರೇ ಅವರ ಪಕ್ಷದ ಅಭ್ಯರ್ಥಿಯಾದವರಿಗೆ ಟಿಕೆಟ್ (ಬಿ ಪಾರ್ಮ) ಕೊಡಬೇಕು ಅಂತದರಲ್ಲಿ, ‘ನನಗೆ ಟಿಕೆಟ್ ಸಿಗಲಿಲ್ಲ’ ಅಂತ ಬಿಜೆಪಿಗೆ ಹೋಗುವುದು ಯಾವ ನ್ಯಾಯ ಎಂದು ಅವರ ಕಾರ್ಯಕರ್ತರೆ ಕೇಳುತ್ತಿದ್ದಾರೆ. ಒಂದುಕಡೆ ದೇವದುರ್ಗದ ಶಿವನಗೌಡನ ರಾಜಕೀಯಕ್ಕೆ ಬಿ.ವಿ.ನಾಯಕ ತಲೆಬಾಗಿರುವ ಸುದ್ದಿಗಳು ಹೊರ ಬರುತ್ತಿದೆ. ಅಂದರೆ ಅಧಿಕಾರಕ್ಕಾಗಿ ನಾವು ಒಂದೇ ಪಕ್ಷದಲ್ಲಿ ಇದ್ದರೆ, ನಮಗೆ ಎದುರಾಳಿಗಳು ಯಾರು ಇರುವುದಿಲ್ಲ; ಎಲ್ಲರೂ ನಾವೆ, ನಮ್ಮ ಕುಟುಂಬದವರೇ ಅಧಿಕಾರದಲ್ಲಿ ಇರುತ್ತೇವೆ ಅನ್ನುವ ಮನೋಭಾವ ಹೊರಬಿದ್ದಿದೆ.

ಜೆಡಿಎಸ್ ಅಭ್ಯರ್ಥಿ ರಾಜ ವೆಂಕಟಪ್ಪ ನಾಯಕ

ಕಾಂಗ್ರೆಸ್‌ನಿಂದ ಕೆಲವು ಮರಿ ಪುಡಾರಿಗಳು, ಹತ್ತು ಓಟು ಹಾಕಿಸದವರು, ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದಾರೆ ಎಂಬ ಸುದ್ದಿಕೂಡ ಹೊರಬಂದಿದೆ. ಇದರಿಂದ ಕಾಂಗ್ರೆಸ್‌ಗೆ ಏನು ದಕ್ಕೆಯಾಗುವುದಿಲ್ಲ ಅಂತಿದ್ದಾರೆ ಅವರ ಪಕ್ಷದ ಮುಖಂಡರುಗಳು. ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ರಾಜ ವೆಂಕಟಪ್ಪ ನಾಯಕ ತಾಲೂಕಿನ ತುಂಬಾ ಬಿರುಸಿನಿಂದ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಪ್ರತಿಯೊಂದು ಹಳ್ಳಿಗೂ ಬೇಟಿ ನೀಡಿ ಮತ ಬೇಟೆಯಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್ ಚುನಾವಣಾ ಆರ್ಭಟ ಮುಗಿಲು ಮುಟ್ಟಿದೆ. ಆದರೆ ಮುಂದಿನ ದಿನಗಳಲ್ಲಿ ಯಾರ ಅರ್ಭಟ ಹೆಚ್ಚಾಗುತ್ತದೆ ಎಂಬುದನ್ನು ಕಾದು ನೋಡಿ.! ನಮ್ಮ ನಿಖರವಾದ ವರದಿಯನ್ನೂ ನೋಡಿ.!!

ರಾಜಕೀಯ

ವಿಜಯಪುರ: (ಹಗರಬೊಮ್ಮನಳ್ಳಿ) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ರಣಕಹಳೆ ಊದಿದೆ. ಪ್ರಚಾರ ಜೋರಾಗಿಯೇ ನಡೆಯುತ್ತಿದ್ದು, ಕಾಂಗ್ರೆಸ್, ಜೆಡಿಎಸ್, ಎಎಪಿ ಹಾಗೂ ಗಾಲಿ ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸರ್ಕಾರಿ ನೌಕರರು ಅನೇಕರು ರಾಜಕಾರಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯಾದ ಲಕ್ಷ್ಮಿ ನಾರಾಯಣ ಬಿಜೆಪಿ ಸೇರಿದ್ದು, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಲಕ್ಷ್ಮೀ ನಾರಾಯಣ ವಿಜಯನಗರದ ಬಿಜೆಪಿ ಕಚೇರಿಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. 2023ರ ಚುನಾವಣೆಯಲ್ಲಿ ಅವರು ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಲಕ್ಷ್ಮೀ ನಾರಾಯಣ ಹಲವು ದಿನಗಳಿಂದ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಸಂಘಟನೆ, ಕಾರ್ಯಕರ್ತರ ಭೇಟಿಯಲ್ಲಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೂಡಾ ಆರಂಭಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಿವೃತ್ತರಾದ ಬಳಿಕ ಅವರನ್ನು ವಿಶೇಷ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ಬಿಬಿಎಂಪಿ ಆಯುಕ್ತರಾಗಿ, ಕರ್ನಾಟಕ ಗೃಹ ಮಂಡಳಿ, ಸಮಾಜ ಕಲ್ಯಾಣ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ.

ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಟಿಕೆಟ್ ಬಯಸಿರುವ ಇವರಿಗೆ, ಈ ಕ್ಷೇತ್ರದಲ್ಲಿ ಜಾತಿ ಕಾರ್ಡ್ ಪ್ಲೆಯಾಗದಿರುವುದು ವರದಾನವಾಗಿದ್ದು, ಹಲವು ಇಲಾಖೆಯಲ್ಲಿ ಕೆಸಲ ಮಾಡಿದ ಇವರು ಗೆದ್ದು ಬಂದರೆ ಕ್ಷೇತ್ರದ ಅಭಿವೃದ್ಧಿ ನಾಗಲೋಟಕ್ಕೆ ಸಾಗುವುದು ಎಂಬ ಅಭಿಪ್ರಾಯ ಕ್ಷೇತ್ರದ ಜನತೆಯದಾಗಿದೆ. ಹಾಗಾಂತ ಇಲ್ಲಿ ಟಿಕೆಟಿಗಾಗಿ ಬಿಜೆಪಿಯಲ್ಲಿ ಪೈಪೋಟಿ ಏರ್ಪಡದಿರುವುದು ಕೂಡ ಪಕ್ಷಕ್ಕೆ ವರದಾನವಾಗಲಿದೆ.

2018ರ ಚುನಾವಣೆಯಲ್ಲಿ ಕ್ಷೇತ್ರದ ಶಾಸಕರಾದ ಭೀಮಾ ನಾಯ್ಕ್ ವಿರುದ್ಧ ಕೆ.ನೇಮಿರಾಜ್ ನಾಯಕ್ ಬಿಜೆಪಿ ಅಭ್ಯರ್ಥಿಯಾಗಿ 71105 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಳೆದೆರಡು ಬಾರಿ ಶಾಸಕರಾದ ಭೀಮಾ ನಾಯ್ಕ್ ರವರಿಗೆ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಹಾಲಿ ನಗರ ಸಭೆ ಸದಸ್ಯರ ವಿರೋಧವಿದೆ ಎಂದು ಹೇಳಲಾಗುತ್ತಿದ್ದು, ತಾವು ಖರೀದಿ ಮಾಡಿರುವ ಜಾಗದಲ್ಲಿ ಕುರುಬರಿಗೆ ಅನ್ಯಾಯವಾಗಿದೆ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಇಲ್ಲಿ ಜೆಡಿಎಸ್ ಕೂಡ ಪ್ರಬಲವಾಗಿ ಸ್ಪರ್ಧೆಯೊಡ್ಡಲಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇಲ್ಲಿ ಮೂರನೇ ಬಾರಿಗೆ ಆಯ್ಕೆಯಾಗುವ ಭೀಮಾ ನಾಯ್ಕ್ ರವರಿಗೆ ಬಿಜೆಪಿ ಕಬ್ಬಿಣದ ಕಡಲೆಕಾಯಿಯಾಗುವುದಂತೂ ಅಲ್ಲಗಳೆಯುವಂತಿಲ್ಲ.