ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Caste Census Report Archives » Dynamic Leader
October 23, 2024
Home Posts tagged Caste Census Report
ರಾಜಕೀಯ

ಬೆಂಗಳೂರು: ಕರ್ನಾಟಕದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮಿತಿಯ ಬಹುನಿರೀಕ್ಷಿತ ಜಾತಿಗಣತಿ ವರದಿ ಅತಿ ಶೀಘ್ರದಲ್ಲಿ ಜಾರಿಗೆ ಬರಲಿ ಎಂದು ವಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಅವರು, “ರಾಜ್ಯದಲ್ಲಿ ಕನಿಷ್ಟ ಪಕ್ಷ ಗ್ರಾಮ ಪಂಚಾಯತಿ ಸದಸ್ಯರೂ ಆಗದ ಸಮುದಾಯವಿದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಬದ್ದವಾಗಿ ಆಡಳಿತ, ಶೈಕ್ಷಣಿಕ, ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಸಮಾನ ಪ್ರಾತಿನಿಧ್ಯತೆ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹದ್ದೊಂದು ವರದಿ ಸಿದ್ದಪಡಿಸಿರುವುದು ಸ್ವಾಗತಾರ್ಹ. ಆದರೆ ಆ ವರದಿಗಳನ್ನು ಪೆಟ್ಟಿಗೆಯಲ್ಲಿಟ್ಟು ಕಾಲಹರಣ ಮಾಡುತ್ತಿರುವುದು ಆಕ್ಷೇಪಾರ್ಹ” ಎಂದು ಹೇಳಿದ್ದಾರೆ.

“ಈ ವರದಿಯ ಬಿಡುಗಡೆ ಕುರಿತು ಆತಂಕ ವ್ಯಕ್ತಪಡಿಸುವವರ ಸ್ವಾರ್ಥತೆ ಗಮನಿಸಬಹುದು. ಇದನ್ನು ಜನಹಿತಕ್ಕಿಂತ ರಾಜಕೀಯ ಲಾಭಕ್ಕಾಗಿ ಬಳಸಲು ಕೆಲವರು ಪ್ರಯತ್ನಿಸುತ್ತಿರುವುದು ಅಕ್ಷಮ್ಯ. ರಾಜ್ಯದ ಜನರ ಸಮಸ್ಯೆಗಳನ್ನು ನ್ಯಾಯಬದ್ದ ರೀತಿಯಲ್ಲಿ ನಿಭಾಯಿಸುವ ಮೂಲಕ ಜನಪ್ರತಿನಿಧಿಗಳು ತಮ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು” ಎಂದಿದ್ದಾರೆ.

“ಕಳೆದ ಬಾರಿಯ ಸಿದ್ದರಾಮಯ್ಯರ ಸರ್ಕಾರ ಈ ವರದಿ ತಯಾರಿಸಲು ಆಗಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜುರವರನ್ನು ನೇಮಿಸಿತ್ತು. ನಂತರ ಅದರ ಹೊಣೆಗಾರಿಕೆ ಜಯಪ್ರಕಾಶ್ ಹೆಗ್ಡೆಯವರ ಪಾಲಿಗೆ ದೊರೆತಿತ್ತು. ಅವರು ಈಗಾಗಲೇ ಸರ್ಕಾರಕ್ಕೆ ವರದಿ ಸಮರ್ಪಸಿದ್ದಾರೆ. ಅದು 48 ಸಂಪುಟ ಹೊಂದಿದ್ದು 200 ಪುಟಗಳಷ್ಟು ವರದಿಯಿದೆ. 1351 ವಿವಿಧ ಜಾತಿಗಳ ಸಮೀಕ್ಷೆ ನಡೆಸಲಾಗಿದೆ” ಎಂದು ವಿವರಿದಿದ್ದಾರೆ.

“5.98 ಕೋಟಿ ಜನರನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. 3.98 ಕೋಟಿಗೂ ಹೆಚ್ಚು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳಿದ್ದು 1.87 ಕೋಟಿ ಲಿಂಗಾಯುತರು, ಒಕ್ಕಲಿಗರು, ಬ್ರಾಹ್ಮಣ ಮತ್ತಿತರ ಜಾತಿಗಳಿವೆ. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಕೋಟಾ ಶಿಫಾರಸು ಮಾಡಿದೆ. ವೀರೇಶೈವ ಮತ್ತು ಲಿಂಗಾಯತರು ಒಂದೇ ಎಂದು ಸಮಿತಿ ಒತ್ತುಕೊಟ್ಟು ಹೇಳಿದೆ.

ಆರು ಕೋಟಿ ಜನರಲ್ಲಿ ಯಾವ ಯಾವ ಜಾತಿಯ ಜನರು ಎಷ್ಟೆಷ್ಟು ಮಂದಿಯಿದ್ದಾರೆಂದು ವರದಿಯಲ್ಲಿ ಹೇಳಲಾಗಿದ್ದು, ಈ ಎಲ್ಲಾ ಜಾತಿಯ ಜನರಿಗೆ ಅವರವರ ಅನುಪಾತಕ್ಕೆ ಅನುವಾಗಿ ಪ್ರಾತಿನಿಧ್ಯ ದೊರೆಯಬೇಕಾಗಿದೆ” ಎಂದು ಹೇಳಿರುವ ಅಡ್ವಕೇಟ್ ತಾಹೇರ್ ಹುಸೇನ್ ಅವರು, “ಕಾಂಗ್ರೆಸ್ ಪಕ್ಷ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿಗಣತಿ ವರದಿ ಜಾರಿ ಮಾಡುತ್ತೇವೆಂದಾಗ ಸುಮ್ಮನಿದ್ದವರು ಇದೀಗ ತಗಾದೆ ತೆಗೆಯುತ್ತಿರುವುದು ಸರಿಯಲ್ಲ” ಎಂದು ವಿರೋಧಪಕ್ಷಗಳನ್ನು ಟೀಕಿಸಿದ್ದಾರೆ.