ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Dynamic Leader Magazine Archives » Page 2 of 5 » Dynamic Leader
December 30, 2024
Home Posts tagged Dynamic Leader Magazine (Page 2)
ಬೆಂಗಳೂರು ರಾಜಕೀಯ

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಾಗೂ ಬೆಂಗಳೂರು ಜಿಲ್ಲೆಗೆ ಸೇರಿರುವ ಒಟ್ಟು 32 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಗರದ 5 ಸ್ಥಳಗಳಲ್ಲಿ ಏರ್ಪಡಿಸಲಾಗಿದ್ದು, ಮತ ಎಣಿಕೆ ಸ್ಥಳಗಳಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ದೃಷ್ಠಿಯಿಂದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

1. ಮತ ಎಣಿಕೆ ಕೇಂದ್ರ: ಮೌಂಟ್ ಕಾರ್ಮಲ್ ಕಾಲೇಜು, ವಸಂತ ನಗರ. ವಿಧಾನಭಾ ಕ್ಷೇತ್ರಗಳು: ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞನಗರ ಹಾಗೂ ಸಿ.ವಿ.ರಾಮನ್ ನಗರ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಪೂರ್ವ ಮತ್ತು ಡಿಸಿಪಿ ಕೇಂದ್ರ ವಿಭಾಗ.

2. ಮತ ಎಣಿಕೆ ಕೇಂದ್ರ: ಸೆಂಟ್ ಜೋಷಫ್ ಇಂಡಿಯನ್ ಹೈಸ್ಕೂಲ್. ವಿಧಾನಭಾ ಕ್ಷೇತ್ರಗಳು: ಆನೇಕಲ್, ಬೆಂಗಳೂರು ದಕ್ಷಿಣ, ಮಹದೇವಪುರ, ಬ್ಯಾಟರಾಯನಪುರ, ಯಲಹಂಕ ಹಾಗೂ ದಾಸರಹಳ್ಳಿ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಅಪರಾಧ ಮತ್ತು ಡಿಸಿಪಿ ವೈಟ್ ಫೀಲ್ಡ್ ವಿಭಾಗ.

3. ಮತ ಎಣಿಕೆ ಕೇಂದ್ರ: ಬಿಎಂಎಸ್ ಮಹಿಳಾ ಕಾಲೇಜು, ಬಸವನಗುಡಿ. ವಿಧಾನಭಾ ಕ್ಷೇತ್ರಗಳು: ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಆರ್.ಆರ್.ನಗರ ಹಾಗೂ ಶಿವಾಜಿನಗರ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ದಕ್ಷಿಣ ವಿಭಾಗ ಮತ್ತು ಡಿಸಿಪಿ ಕಮಾಂಡ್ ಸೆಂಟರ್.

4. ಮತ ಎಣಿಕೆ ಕೇಂದ್ರ: ಎಸ್.ಎಸ್.ಎಂ.ಆರ್.ವಿ ಕಾಲೇಜು, ತಿಲಕನಗರ. ವಿಧಾನಭಾ ಕ್ಷೇತ್ರಗಳು: ಪದ್ಮನಾಭ ನಗರ, ಗೋವಿಂದರಾಜನಗರ, ವಿಜಯನಗರ, ಜಯನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಹಾಗೂ ಬಸವನಗುಡಿ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಆಗ್ನೇಯ ವಿಭಾಗ ಮತ್ತು ಡಿಸಿಪಿ ಸಿಎಆರ್ ದಕ್ಷಿಣ.

5. ಮತ ಎಣಿಕೆ ಕೇಂದ್ರ: ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್, ದೇವನಹಳ್ಳಿ. ವಿಧಾನಭಾ ಕ್ಷೇತ್ರಗಳು: ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಈಶಾನ್ಯ ವಿಭಾಗ ಮತ್ತು ಡಿಸಿಪಿ ವಿವಿಐಪಿ ಭದ್ರತೆ.

ಮತ ಎಣಿಕೆ ದಿನದಂದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ಭಾರತೀಯ ದಂಡ ಪ್ರಕ್ರಿಯ ಸಂಹಿತೆ 1973ರ ಕಲಂ 144 ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1951ರ ಉಪಬಂಧಗಳು ಅನ್ವಯವಾಗುವಂತೆ ದಿನಾಂಕ: 13-05-2023ರ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆಯನ್ನು ವಿಧಿಸಿರುವುದರ ಜೊತೆಗೆ ಮೇಲ್ಕಂಡ ಅವಧಿಯಲ್ಲಿ ನಗರದಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿರುತ್ತದೆ.

ಮೇಲ್ಕಂಡ ಮುಂಜಾಗರೂಕತಾ ಕ್ರಮಗಳ ಜೊತೆಗೆ ಚುನಾವಣಾ ಫಲಿತಾಂಶವು ಪ್ರಕಟವಾದ ನಂತರ ದಿನಾಂಕ: 13-05-2023ರ ಮುಂಜಾಣೆಯಿಂದ ದಿನಾಂಕ: 14-05-2023ರ ಬೆಳಗ್ಗೆವರೆಗೆ ಸಶಸ್ತ್ರ ದಳವನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಕ್ರಮ ವಹಿಸಲಾಗಿರುತ್ತದೆ. ಈ ಬಂದೋಬಸ್ತ್ ಕರ್ತವ್ಯಕ್ಕೆ ಅಪರ ಪೊಲೀಸ್ ಅಯ್ಯುಕ್ತರು, ಪೂರ್ವ ಮತ್ತು ಪಶ್ಚಿಮ ರವರ ನೇರ ಉಸ್ತುವಾರಿಯಲ್ಲಿ 10 ಡಿಸಿಪಿ, 15 ಎಸಿಪಿ, 38 ಪೊಲೀಸ್ ಇನ್ಸ್ ಪೆಕ್ಟರ್, 250 ಪಿಎಸ್ಐ 1200 ಸಿಬ್ಬಂಧಿಗಳ ಜೊತೆಗೆ 12 ಕೇಂದ್ರಿಯ ಸಿ.ಎ.ಪಿ.ಎಫ್ ತುಕಡಿ, 36 ಕೆ.ಎಸ್.ಆರ್.ಪಿ / ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಸರಹದ್ದಿನಲ್ಲಿ ವಿಶೇಷ ಗಸ್ತು ನೇಮಕ ಮಾಡಿದ್ದು, ಪ್ರತಿಯೊಂದು ವಿಭಾಗದ ಉಸ್ತುವಾರಿಗೆ ಒಬ್ಬರು ಸಹಾಯಕ ಪೊಲೀಸ್ ಆಯುಕ್ತರನ್ನು ನಿಯೋಜಿಸಲಾಗಿದೆ. 


ದೇಶ

2000 ರೂಪಾಯಿ ನೋಟು ಚಲಾವಣೆಗೆ ಬಂದಂದಿನಿಂದ ಈ ನೋಟಿನ ಸುತ್ತ ಹಲವು ವಿವಾದಗಳು ಹರಡುತ್ತಲೇ ಇವೆ. ಇತ್ತೀಚೆಗೆ ಯಾವುದೇ ಎಟಿಎಂನಿಂದ 2000 ರೂಪಾಯಿ ಸಿಗುತ್ತಿಲ್ಲ. ಒಂದುವೇಳೆ 2000 ರೂಪಾಯಿ ನಮಗೆ ಸಿಕ್ಕಿ ಅದನ್ನು ಅಂಗಡಿಗಳಿಗೆ ಕೊಟ್ಟರೆ, ನಮ್ಮನ್ನು ಆಶ್ಚರ್ಯದಿಂದ ಮತ್ತು ಅನುಮಾನದಿಂದ ಕಾಣುತ್ತಾರೆ.

ಈ ಹಿನ್ನಲೆಯಲ್ಲಿ ಸಂಸತ್ತಿನಲ್ಲಿ ರಾಜ್ಯಸಭಾ ಸದಸ್ಯೆ ರಜನಿ ಪಾಟೀಲ್ ಅವರು 2000 ರೂಪಾಯಿ ನೋಟಿನ ಬಗ್ಗೆ ಸರ್ಕಾರ ಮತ್ತು ಹಣಕಾಸು ಸಚಿವಾಲಯಕ್ಕೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಆರ್‌ಬಿಐ ಹೊಸ 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲು ಹೊರಟಿದೆಯೇ ಮತ್ತು 2000 ರೂಪಾಯಿ ನೋಟುಗಳನ್ನು ವಿತರಿಸದಂತೆ ಸರ್ಕಾರ ಬ್ಯಾಂಕ್‌ಗಳಿಗೆ ಆದೇಶಿಸಿದೆಯೇ ಎಂದು ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಇದಕ್ಕೆ ಹಣಕಾಸು ಸಚಿವಾಲಯವು ಉತ್ತರ ನೀಡಿದೆ.

ರಜನಿ ಪಾಟೀಲ್

ಇದಕ್ಕೆ ಉತ್ತರ ನೀಡಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ‘ಭಾರತೀಯ ರಿಸರ್ವ್ ಬ್ಯಾಂಕ್ 2016ರಲ್ಲಿ ಹೊಸ 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿತು. ಅಲ್ಲದೆ, 2000 ರೂಪಾಯಿ ನೋಟುಗಳನ್ನು ವಿತರಿಸದಂತೆ ಬ್ಯಾಂಕ್‌ಗಳಿಗೆ ಸರ್ಕಾರದಿಂದ ಯಾವುದೇ ಸೂಚನೆ ನೀಡಲಾಗಿಲ್ಲ’ ಎಂದು ಅವರು ಹೇಳಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ‘ಬ್ಯಾಂಕ್ ಎಟಿಎಂಗಳ ಮೂಲಕ 2000 ರೂಪಾಯಿ ನೋಟುಗಳನ್ನು ವಿತರಿಸುವುದಕ್ಕೆ ಆರ್‌ಬಿಐ ಯಾವುದೇ ನಿಷೇಧ ಹೇರಿಲ್ಲ. ಅಂತಹ ಯಾವುದೇ ನಿರ್ದೇಶನವನ್ನು ಬ್ಯಾಂಕ್‌ಗಳಿಗೆ ನೀಡಲಾಗಿಲ್ಲ. ಆರ್‌ಬಿಐ ವಾರ್ಷಿಕ ವರದಿಯ ಪ್ರಕಾರ, 2019-20ರ ಆರ್ಥಿಕ ವರ್ಷದಿಂದ 2000 ರೂಪಾಯಿ ನೋಟುಗಳಿಗೆ ಯಾವುದೇ ಬೇಡಿಕೆ ಇಲ್ಲದ ಕಾರಣದಿಂದ, 2000 ರೂಪಾಯಿ ನೋಟುಗಳನ್ನು ಮುದ್ರಿಸಿಲ್ಲ’ ಎಂದರು.

2000 ರೂಪಾಯಿ ನೋಟಿನ ಬಗ್ಗೆ ನಾನಾ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗ, ‘ಆ ಅಧಿಕ ಮೌಲ್ಯದ ನೋಟುಗಳನ್ನು ನಮ್ಮ ಕೈಯಲ್ಲಿ ಹೆಚ್ಚಾಗಿ ಇಟ್ಟುಕೊಳ್ಳುವ ಅಗತ್ಯವಿಲ್ಲ’ ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ.

ದೇಶ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014 ರಿಂದ ಪ್ರತಿ ತಿಂಗಳು ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಇದರಲ್ಲಿ ಅವರು ಸರ್ಕಾರದ ಯೋಜನೆಗಳು ಮತ್ತು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು 34 ದೂರದರ್ಶನ ಚಾನೆಲ್‌ಗಳು ಮತ್ತು 91 ಖಾಸಗಿ ಟಿವಿ ಚಾನೆಲ್‌ಗಳು ದೇಶದಾದ್ಯಂತ ಪ್ರಸಾರ ಮಾಡುತ್ತಿದೆ.

‘ದೇಶದಲ್ಲಿನ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡದೆ, ವಿರೋಧ ಪಕ್ಷದ ನಾಯಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸದೆ, ಪ್ರಧಾನಿ ಮೋದಿಯವರು ಸಾರ್ವಜನಿಕ ಸಭೆಯಲ್ಲಿ ಮಾತನಾಡುವಂತೆ ಏಕಾಂಗಿಯಾಗಿ ಮಾತನಾಡುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಆರೋಪಿಸಿದ್ದಾರೆ.

ಈ ಹಿನ್ನಲೆಯಲ್ಲಿ ಏಪ್ರಿಲ್ 30 ರಂದು ಪ್ರಧಾನಿ ಮೋದಿಯವರು ತಮ್ಮ 100ನೇ ಮನ್ ಕಿ ಬಾತ್ ರೇಡಿಯೋ ಭಾಷಣವನ್ನು ಮಾಡಿದರು. ಇದಕ್ಕಾಗಿ ದೇಶಾದ್ಯಂತ ಬಿಜೆಪಿ ವತಿಯಿಂದ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆಗ ಡೆಹ್ರಾಡೂನ್‌ನ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳು ಪ್ರಧಾನಿ ಭಾಷಣಕ್ಕೆ ಹಾಜರಾಗದ ಕಾರಣಕ್ಕೆ 100 ರೂಪಾಯಿ ದಂಡ ವಿಧಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.

ಈ ಹಿನ್ನಲೆಯಲ್ಲಿ ಚಂಡೀಗಢದಲ್ಲಿ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ರೇಡಿಯೋ ಭಾಷಣದ 100ನೇ ಸಂಚಿಕೆಯನ್ನು ವೀಕ್ಷಿಸಲು ವಿಫಲರಾದ 36 ವಿದ್ಯಾರ್ಥಿಗಳಿಗೆ ಒಂದು ವಾರಕಾಲ ಹಾಸ್ಟೆಲ್ ನಿಂದ ಹೊರಬರದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಯಾಗಿದೆ. ಇದಕ್ಕೆ ದೇಶಾದ್ಯಂತ ತೀವ್ರ ರೀತಿಯ ವಿರೋಧ ವ್ಯಕ್ತವಾಗಿದೆ ಮತ್ತು  ಈ ಘಟನೆಯನ್ನು ವಿವಿಧ ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿದೆ.

ದೇಶ

ಶ್ರೀನಗರ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿರುವ ಹಿನ್ನಲೆಯಲ್ಲಿ, ದೇಶದಲ್ಲಿ ಅವರ ಬೆಂಬಲಿಗರು ತೀವ್ರ ರೀತಿಯ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಕಲ್ಲು ತೂರಾಟದಂತಹ ಘಟನೆಗಳಿಂದ ಹಲವೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ‘ಅಸ್ಥಿರ ಪಾಕಿಸ್ತಾನ ನಮಗೆ ಅಪಾಯಕಾರಿ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ರೇಂಜರ್ಸ್’ ಎಂದು ಕರೆಯಲ್ಪಡುವ ಗಡಿ ಭದ್ರತಾ ಪಡೆಗಳು ನ್ಯಾಯಾಲಯದ ಕಿಟಕಿಯನ್ನು ಒಡೆದು ಒಳಗೆ ಪ್ರವೇಶಿಸಿ ಕ್ಷಿಪ್ರವಾಗಿ ಬಂಧಿಸಿತು. ಇದರಿಂದ ಕೆರಳಿದ ಇಮ್ರಾನ್ ಬೆಂಬಲಿಗರು, ದೇಶದ ಸೇನೆ ಹಾಗೂ ಐಎಸ್‌ಐ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಏಕಾಏಕಿ ಸೇನಾ ಪ್ರಧಾನ ಕಚೇರಿಯ ಮುಖ್ಯ ದ್ವಾರವನ್ನು ಮುರಿದು ಒಳ ಪ್ರವೇಶಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನು ನಿಯಂತ್ರಿಸಲು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಲಾಗಿದೆ. ಇದರಿಂದ ಅಲ್ಲಿ ಕೋಲಾಹಲ ಉಂಟಾಗಿತ್ತು.

ಈ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು, “ಅಸ್ಥಿರ ಪಾಕಿಸ್ತಾನ ನಮಗೆ ಅಪಾಯಕಾರಿಯಾಗಿದೆ, ನಮ್ಮ ಉಪಖಂಡದಲ್ಲಿರುವ ದೇಶವು ಶಾಂತಿಯುತ ಮತ್ತು ಸ್ಥಿರವಾಗಿರಬೇಕು. ಆ ದೇಶವು ಚೆನ್ನಾಗಿರಬೇಕೆಂದು ನಾನು ಬಯಸುತ್ತೇನೆ. ನಮ್ಮ ನೆರೆಯ ದೇಶದವರು ಉತ್ತಮ ಮತ್ತು ಶಾಂತಿಯುತ ಜೀವನವನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದರು.

ರಾಜಕೀಯ

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್‌ಪವಾರ್ ಅವರು ಮುಂಬೈ ಮರಾಠಾ ಮೂಲದ ಸಾಮಾಜಿಕ ಕಾರ್ಯಕರ್ತ ಭೌರಾವ್ ಪಾಟೀಲ್ ಅವರ 64ನೇ ಪುಣ್ಯತಿಥಿಯ ಅಂಗವಾಗಿ ಚತ್ತಾರದಲ್ಲಿರುವ ಅವರ ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಶರದ್‌ಪವಾರ್, “ಸಹಿಷ್ಣುತೆ ಮತ್ತು ಜಾತ್ಯತೀತತೆ ನಮ್ಮ ದೇಶದ ಆತ್ಮ. ಆದರೆ ಬಿಜೆಪಿ ಆಪರೇಷನ್ ಕಮಲದ ಹೆಸರಿನಲ್ಲಿ ನಾಶ ಮಾಡುವ ನಿಲುವನ್ನು ತಳೆದಿದೆ. ಆಪರೇಷನ್ ಕಮಲ ದೇಶದ ಆತ್ಮವನ್ನು ನಾಶಮಾಡುತ್ತಿದೆ. ಬಿಜೆಪಿ ಧಾರ್ಮಿಕ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ.

ಡಾ.ಬಿ.ಅರ್.ಅಂಬೇಡ್ಕರ್ ಅವರೊಂದಿಗೆ ಭೌರಾವ್ ಪಾಟೀಲ್ ರವರು

ಆಡಳಿತ ಅಧಿಕಾರ ಸಿಗದಿದ್ದರೆ ಏನು ಬೇಕಾದರೂ ಮಾಡುವ ಬಿಜೆಪಿಯ ನೀತಿ ಅಪಾಯಕಾರಿ. ಇದು ಅಧಿಕಾರದ ಸಂಘರ್ಷವನ್ನು ಹೆಚ್ಚಿಸುತ್ತದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಇತರೆ ಪಕ್ಷಗಳ ಶಾಸಕರನ್ನು ಒಡೆದು ಸರ್ಕಾರ ರಚಿಸಿದೆ.

ಕರ್ನಾಟಕದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಕಡಿಮೆ ಸಂಖ್ಯೆಯ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಕಾಂಗ್ರೆಸ್‌ಗೆ ಧಕ್ಕೆಯಾಗದ ರೀತಿಯಲ್ಲಿ ಸ್ಪರ್ಧಿಸುತ್ತಿದ್ದೇವೆ”. ಎಂದರು. 

ಬೆಂಗಳೂರು

ಮದ್ಯೆ ರಹಿತವಾಗಿ ಮಾತ್ರವೇ ಊಟೋಪಚಾರಕ್ಕೆ ನಿಯಮಾನುಸಾರ ಅವಕಾಶವಿರುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಅಯುಕ್ತರಾದ ಪ್ರಥಾಪ್ ರೆಡ್ಡಿಯವರು ತಿದ್ದುಪಡಿ ಆದೇಶವನ್ನು ಹೊರಡಿಸಿದ್ದಾರೆ.

ದಿನಾಂಕ: 08-05-2023ರ ಸಂಜೆ 05-00 ಗಂಟೆಯಿಂದ ದಿನಾಂಕ: 10.05.2023 ರ ಮಧ್ಯ ರಾತ್ರಿ 12-00 ಗಂಟೆಯವರೆಗೆ ಹಾಗೂ ಮತ ಎಣಿಕೆ ದಿನಾಂಕ: 13-05-2023 ರ ಬೆಳಿಗ್ಗೆ 06-00 ಗಂಟೆಯಿಂದ ಮಧ್ಯ ರಾತ್ರಿ 12-00 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಗಟು ಅಥವಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮದ್ಯ, ನಶೆಯುಳ್ಳ ಪದಾರ್ಥಗಳು ಇತರೆ ಯಾವುದೇ ಮಾದಕ ವಸ್ತುಗಳ ಬಳಕೆ, ಮಾರಾಟ ಮತ್ತು ಸಂಗ್ರಹಣೆಯ ನಿಷೇಧದ ಜೊತೆಗೆ Liquor Shops, Wine Shops, Bars, Hotels, Restaurants, Tavern, Shops or any other Public or Private Place ಗಳನ್ನು ಮುಚ್ಚುವಂತೆ ಮದ್ಯ ಮಾರಾಟ ನಿಷೇಧಾಜ್ಞೆಯನ್ನು ಜಾರಿ ಮಾಡಿ ಆದೇಶವನ್ನು ಹೊರಡಿಸಲಾಗಿತ್ತು.

“ಮೇಲ್ಕಂಡ ಸ್ಥಳಗಳಲ್ಲಿ ಮದ್ಯ ಮಾರಾಟ, ಸೇವನೆ ಹೊರೆತುಪಡಿಸಿ Sale, Service of liquor & consumption of liquor is prohibited. But other eatable supply may be continued without liquor and intoxicated items” ಮದ್ಯೆ ರಹಿತವಾಗಿ ಮಾತ್ರವೇ ಊಟೋಪಚಾರಕ್ಕೆ ನಿಯಮಾನುಸಾರ ಅವಕಾಶವಿರುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಅಯುಕ್ತರಾದ ಪ್ರಥಾಪ್ ರೆಡ್ಡಿಯವರು ತಿದ್ದುಪಡಿ ಆದೇಶವನ್ನು ಹೊರಡಿಸಿದ್ದಾರೆ.

ರಾಜಕೀಯ

ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಯನ್ನು ಖಂಡಿಸಿ ಕೋಯಂಬತ್ತೂರಿನ ಉಕ್ಕಡಂ ಪ್ರದೇಶದಲ್ಲಿ ಎಸ್‌ಡಿಪಿಐ ಪಕ್ಷವು ಪ್ರತಿಭಟನೆಯನ್ನು ನಡೆಸಿತು.

ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಯನ್ನು ವಿರೋಧಿಸಿ ಎಸ್‌ಡಿಪಿಐ ಸದಸ್ಯರು ಕೊಯಮತ್ತೂರಿನಲ್ಲಿ ಮೇಣದಬತ್ತಿಯ ಪ್ರದರ್ಶನ ನಡೆಸಿದರು. ಇದರಲ್ಲಿ ಕ್ರೈಸ್ತರು, ಮುಸ್ಲಿಮರು, ವಿವಿಧ ಪಕ್ಷಗಳು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮಣಿಪುರದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಕುಕಿ-ಮೈತೇಯಿ ಎಂಬ ಎರಡು ಪಂಗಡಗಳ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ವಿವಿಧೆಡೆ ಬೆಂಕಿ ಹಚ್ಚಿದ ಘಟನೆಗಳೂ ನಡೆದಿವೆ. ಇದನ್ನು ತಡೆಯಲು ಸರ್ಕಾರ ಸೇನೆಯನ್ನು ನಿಯೋಜಿಸಿ ಹಲವು ಕಟ್ಟುನಿಟ್ಟಿನ ನಿರ್ಬಂಧ ಹಾಗೂ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕುಕಿ ಪಂಥದ ಚರ್ಚುಗಳನ್ನು ಗುರಿಯಾಗಿಸಿ ಮೈತೇಯ್ ಜನರು ನಡೆಸಿದ ಘಟನೆಗಳೂ ಈ ಗಲಭೆಯಲ್ಲಿ ನಡೆದಿವೆ. ವರದಿಗಳ ಪ್ರಕಾರ, ಇಲ್ಲಿಯವರೆಗೆ 25ಕ್ಕೂ ಹೆಚ್ಚು ಚರ್ಚ್‌ಗಳ ಮೇಲೆ ದಾಳಿ ನಡೆಸಲಾಗಿದೆ ಮತ್ತು ಮೂರು ಚರ್ಚ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಈ ಸಂದರ್ಭದಲ್ಲಿ, ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಯನ್ನು ಖಂಡಿಸಿ ಎಸ್‌ಡಿಪಿಐ ಪಕ್ಷವು ಕೊಯಂಬತ್ತೂರಿನ ಉಕ್ಕಡಂ ಪ್ರದೇಶದಲ್ಲಿ ಮೇಣದಬತ್ತಿಯ ಪ್ರದರ್ಶನವನ್ನು ನಡೆಸಿತು. ಇದರಲ್ಲಿ ಎಸ್‌ಡಿಪಿಐ, ಮುಸ್ಲಿಮರು, ಕ್ರಿಶ್ಚಿಯನ್ನರು, ವಿಡುದಲೈ ಚಿರುತ್ತೈಗಳ್ ಸೇರಿದಂತೆ ಪಕ್ಷಗಳು ಭಾಗವಹಿಸಿ ಮಣಿಪುರದ ಘಟನೆಯನ್ನು ಖಂಡಿಸಿ ಮತ್ತು ಅಲ್ಲಿ ನಡೆಯುತ್ತಿರುವ ಧಾರ್ಮಿಕ ಸಂಘರ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಡಿ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎ.ಮುಸ್ತಫಾ ವಹಿಸಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಎಂ.ಅಬು ತಾಹಿರ್, ರಾಜ್ಯ ಕಾರ್ಯದರ್ಶಿ ಹಾಗೂ ವ್ಯಾಪಾರಿಗಳ ಸಂಘದ ಮುಖಂಡ ಎ.ಅಬ್ದುಲ್ ಕರೀಂ, ಎನ್.ರಘುಪು ನಿಸ್ತಾರ್-ರಾಜ್ಯ ಪ್ರಧಾನ ಕಾರ್ಯದರ್ಶಿ (ಎಸ್‌ಡಿಪಿಐ ಟ್ರೇಡ್ ಯೂನಿಯನ್), ಕು.ರಾಮಕೃಷ್ಣನ್- ಪ್ರಧಾನ ಕಾರ್ಯದರ್ಶಿ, ತಂದೈ ಪೆರಿಯಾರ್ ದ್ರಾವಿಡರ್ ಕಳಗಂ, ಸುಸಿ ಕಲೈಯರಸನ್-ಅಧ್ಯಕ್ಷರು, ಕೊಯಮತ್ತೂರು ವಿಡುದಲೈ ಚಿರುತ್ತೈಗಳ್,  ಕಾಮ್ರೇಡ್ ಮು.ಇಲವೇನಿಲ್-ರಾಜ್ಯ ಕಾರ್ಯದರ್ಶಿ, ತಮಿಳು ಟೈಗರ್ಸ್ ಪಾರ್ಟಿ, ಮುಂತಾದವರು ಉಪಸ್ಥಿತರಿದ್ದರು.

ರಾಜಕೀಯ

ಬೆಂಗಳೂರು: ರಾಜ್ಯ ಚುನಾವಣೆ ಮತದಾನ ದಿನಕ್ಕೆ ಬೆರಳೆಣಿಕೆ ದಿನಗಳು ಬಾಕಿ ಇರುವಂತೆ ಮತ್ತೊಂದು ಚುನಾವಣೆ ಪೂರ್ವ ಸಮೀಕ್ಷೆ ವರದಿ ಪ್ರಕಟಗೊಂಡಿದೆ. ಲೋಕ್‌ಪೋಲ್‌ ಎಂಬ ಸಂಸ್ಥೆ ನಡೆಸಿದ ಈ ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ ಭರ್ಜರಿ ಮುನ್ನಡೆ ಪಡೆದುಕೊಂಡು ಅಧಿಕಾರಕ್ಕೇರಲಿದೆ.

ರಾಜ್ಯ ಚುನಾವಣೆ ಮತದಾನ ಮೇ 10ಕ್ಕೆ ನಿಗದಿಯಾಗಿದ್ದು, ಮೇ 13ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಮತದಾನಕ್ಕೆ ನಾಲ್ಕು ದಿನ ಬಾಕಿ ಇರುವಂತೆ ರಾಷ್ಟ್ರೀಯ ಸಮೀಕ್ಷಾ ಸಂಸ್ಥೆಯಾದ ಲೋಕ್‌ಪೋಲ್‌ ತನ್ನ ಸಮೀಕ್ಷೆಯನ್ನು ನೀಡಿದೆ. ಮೊದಲ ಸ್ಥಾನದಲ್ಲಿ ಕಾಂಗ್ರೆಸ್‌ ಬಹುಮತಗಳೊಂದಿಗೆ ಮೊದಲ ಸ್ಥಾನನದಲ್ಲಿದ್ದು, ಉಳಿದಂತೆ ಬಿಜೆಪಿ ಎರಡನೇ ಸ್ಥಾನ ಪಡೆದುಕೊಳ್ಳಲಿದ್ದು, ಮೂರನೇ ಸ್ಥಾನದಲ್ಲಿ ಜೆಡಿಎಸ್‌ ಇರಲಿದೆ.

ಕಾಂಗ್ರೆಸ್‌ 129 -134 ಸ್ಥಾನಗಳು, ಬಿಜೆಪಿ 59-65 ಸ್ಥಾನಗಳು ಹಾಗೂ ಜೆಡಿಎಸ್‌ 23 – 28 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ಇನ್ನು ಪಕ್ಷೇತರ/ಸ್ವತಂತ್ರ ಅಭ್ಯರ್ಥಿಗಳು 0-2 ಸ್ಥಾನಗಳಿಸಬಹುದು ಎಂದು ಲೋಕ್‌ಪೋಲ್‌ ತನ್ನ ಸಮೀಕ್ಷೆ ವರದಿಯಲ್ಲಿ ತಿಳಿಸಿದೆ. ಸದ್ಯ ಅಧಿಕಾರಕ್ಕೇರಲು ಮ್ಯಾಜಿಕ್‌ ನಂಬರ್‌ 113 ಇದ್ದು, ಕಾಂಗ್ರೆಸ್‌ ಬಹುಮತ ಪಡೆಯುವುದು ಮಾತ್ರವಲ್ಲ ಸುಮಾರು 20 ಸ್ಥಾನಗಳು ಹೆಚ್ಚು ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ಮತ ಹಂಚಿಕೆ ಪ್ರಮಾಣದಲ್ಲಿಯೂ ಕಾಂಗ್ರೆಸ್‌ ಮುಂದಿದೆ. ಒಟ್ಟಾರೆ ಚಲಾವಣೆಯಾಗುವ ಮತಗಳಲ್ಲಿ ಶೇ. 42 ರಿಂದ 25 ರಷ್ಟು ಕಾಂಗ್ರೆಸ್‌ ಪಡೆದುಕೊಳ್ಳಲಿದೆ. ಬಿಜೆಪಿ ಶೇ 31 ರಿಂದ 32 ರಷ್ಟು ಹಾಗೂ ಜೆಡಿಎಸ್‌ ಶೇ 14 ರಿಂದ 18 ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. ಉಳಿದಂತೆ ಶೇ.5 ರಿಂದ 9 ರಷ್ಟು ಮತಗಳು ಇತರೆ ಪಕ್ಷಗಳ/ ಸ್ವತಂತ್ರ ಅಭ್ಯರ್ಥಿಗಳ ಪಾಲಾಗಲಿವೆ ಎಂದು ಲೋಕ್‌ಪೋಲ್‌ ತಿಳಿಸಿದೆ.

ಲೋಕ್‌ಪೋಲ್‌ 150 ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹ ಮಾಡಿದೆ. ಇದಕ್ಕಾಗಿ 15,000 ಕರೆಗಳನ್ನು ಮಾಡಿ ಆ ಮೂಲಕ ಮಾಹಿತಿ ಪಡೆಯಲಾಗಿದೆ. ಕಳೆದ ಎರಡು ತಿಂಗಳಿಂದಲ್ಲಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ತಳಮಟ್ಟದಿಂದ 65 ಸಾವಿರ ಮಾದರಿ ಸಂಗ್ರಹ ಮಾಡಲಾಗಿದೆ. ಒಟ್ಟಾರೆ ಈ ಹಿಂದನ ಎಲ್ಲಾ ಮಾಹಿತಿ ಸಂಗ್ರಹ ಮಾಡಿ ಅಂತಿಮ ವರದಿ ಪ್ರಕಟಿಸಲಾಗಿದೆ ಎಂದು ಸಮೀಕ್ಷಾ ಸಂಸ್ಥೆಯೇ ತಿಳಿಸಿದೆ.

ಇನ್ನು ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿಯೂ ಈ ಲೋಕ್‌ಪೋಲ್‌ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿತ್ತು. ಆ ಸಂದರ್ಭದಲ್ಲಿಯೂ ಕಾಂಗ್ರೆಸ್‌ ಬಹುಮತ ಪಡೆಯಲಿದೆ ಎಂದು ತಿಳಿಸಿತ್ತು. ಕಳೆದ ಎರಡೂ ಸಮೀಕ್ಷೆ ವರದಿಗಿಂತಲೂ ಮೇ 6 ರಂದು ಬಂದ ಅಂತಿಮ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳಿಸಲಿದೆ ಎಂದು ತಿಳಿಸಲಾಗಿದೆ. ಇನ್ನು ಮೇ 10 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಲಿದೆ.

ದೇಶ

ಚೆನ್ನೈ: “ಹಲವು ಭಿನ್ನಾಭಿಪ್ರಾಯಗಳ ನಡುವೆಯೂ ಭಾರತವು ಒಂದೇ ದೇಶವಾಗಿದೆ” ಎಂದು ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದರು.

ಚೆಂಗಲ್ಪಟ್ಟು ಜಿಲ್ಲೆಯ ಪೌಂಜೂರ್ ಸಮೀಪದ ನೀಲಮಂಗಲಂ ಗ್ರಾಮದಲ್ಲಿ, ಶಾಸ್ತ್ರಾಲಯ ಆಶ್ರಮದಲ್ಲಿ, ಭಾರತ ಮಾತಾ ದೇವಾಲಯವನ್ನು ನಿರ್ಮಿಸಲಾಗಿದೆ. 300 ಟನ್ ತೂಕದ ಒಂದೇ ಕಲ್ಲಿನಿಂದ ಮಾಡಲ್ಪಟ್ಟ, ಭಾರತ ಮಾತೆಯ 9 ಅಡಿ ಎತ್ತರದ ಪ್ರತಿಮೆಯನ್ನು ಅಖಂಡ ಭಾರತ ನಕ್ಷೆಯೊಂದಿಗೆ ಕೆತ್ತಲಾಗಿದೆ.

ಈ ದೇವಾಲಯದ ಕುಂಭಾಭಿಷೇಕ ಸಮಾರಂಭವು ನೆನ್ನೆ ನಡೆದಿತ್ತು. ಈ ಸಮಾರಂಭದಲ್ಲಿ ಆರ್‌ಎಸ್‌ಎಸ್ ರಾಷ್ಟ್ರೀಯ ಅಧ್ಯಕ್ಷ ಮೋಹನ್ ಭಾಗವತ್, ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಶಾಸ್ತ್ರಾಲಯ ಆಶ್ರಮದ ಸಂಸ್ಥಾಪಕ ಸ್ವಾಮಿ ಬ್ರಹ್ಮ ಯೋಗಾನಂದ ಮುಂತಾದವರು ಪಾಲ್ಗೊಂಡಿದ್ದರು. 100ಕ್ಕೂ ಹೆಚ್ಚು ಬಾಲಕಿಯರು ಭಾರತ ಮಾತೆಯ ವೇಷವನ್ನು ಧರಿಸಿ, ಭಾರತ ಮಾತೆಯ ಪ್ರತಿಮೆಗೆ ದೀಪಾರಾಧನೆ ಸಲ್ಲಿಸಿದರು.

ನಂತರ ಮಾತನಾಡಿದ ಮೋಹನ್ ಭಾಗವತ್, “ಭಾಷೆ, ಆಹಾರ, ಉಡುಗೆ, ಪೂಜೆಯ ವಿಧಾನ ಹೀಗೆ ನಮ್ಮಲ್ಲಿ ಹಲವು ವ್ಯತ್ಯಾಸಗಳಿದ್ದರೂ, ಭಾರತ ಯಾವಾಗಲೂ ಒಂದೇ ದೇಶವಾಗಿದೆ. ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಭಾರತದ ಈ ಭೂ ಪ್ರದೇಶವು ದೇವರಿಂದ ನಿರ್ಧರಿಸಲ್ಪಟ್ಟಿದೆ. ಭೂಪ್ರದೇಶದಿಂದ ಭಾರತವನ್ನು ಹಲವಾರು ದೇಶಗಳಾಗಿ ವಿಂಗಡಿದ್ದರೂ, ಧರ್ಮದಿಂದ ಅಖಂಡ ಭರತವಾಗಿಯೇ ಉಳಿದಿದೆ.

‘ಭಾರತವು ವಿಶ್ವಕ್ಕೆ ಮಾರ್ಗದರ್ಶಿಯಾಗಿರುತ್ತದೆ’ ಎಂದು ಮಹಾನ್ ಅರಬಿಂದೋ ಹೇಳಿದರು. ನಾವು ದೇಶದ ಮೇಲೆ ಭರವಸೆಯನ್ನು ಇಡಬೇಕು. ಆ ಭರವಸೆಯು ನಮ್ಮ ದೇಶವನ್ನು ತೊರೆದವರನ್ನು ಮರಳಿ ಬರುವಂತೆ ಮಾಡುತ್ತದೆ. ಇಲ್ಲಿನ ಮುಸ್ಲಿಮರು ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗದೆ, ಭಾರತ ನಮ್ಮ ದೇಶ ಎಂದು ಇಲ್ಲೇ ಉಳಿದುಕೊಂಡರು. ಭಾರತವು ಸತ್ಯ, ಪ್ರೀತಿ, ಪರಿಶುದ್ಧತೆ ಮತ್ತು ತಪಸ್ಸು ಎಂಬ ನಾಲ್ಕು ಸ್ತಂಭಗಳ ಮೇಲೆ ನಿಂತಿದೆ. ಅಖಂಡ ಭಾರತವು ರಚನೆಯಾಬೇಕೆ ಎಂಬುದರ ಸಂಕೇತವಾಗಿ, ಇಲ್ಲಿ ಭಾರತ ಮಾತೆಯ ಪ್ರತಿಮೆಯನ್ನು ಇರಿಸಲಾಗಿದೆ” ಎಂದು ಹೇಳಿದರು. RSS chief takes part in consecration of Bharata Mata temple in Tamilnadu.

ಸಿನಿಮಾ

ವರದಿ: ಅರುಣ್ ಜಿ.,

ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ ನಿರ್ದೇಶಕ – ನಿರ್ಮಾಪಕ ಆರ್.ಚಂದ್ರು

ನಟ ಆದಿತ್ಯ ಅಭಿನಯದ ‘ಟೆರರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಾಯಕ ಆದಿತ್ಯ ಅವರ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ವಿಶೇಷ ಟೀಸರ್ ಬಿಡುಗಡೆ ಮಾಡಿದೆ‌. ನಿರ್ದೇಶಕ – ನಿರ್ಮಾಪಕ ಆರ್.ಚಂದ್ರು ‘ಟೆರರ್’ ಚಿತ್ರದ ಟೀಸರ್ ಬಿಡುಗಡೆಗೊಳಿಸಿದರು. 

“ಟೆರರ್’ ಸಿನಿಮಾದ ಹೆಸರಿನಲ್ಲೆ ಒಂದು ಫೈಯರ್ ಇದೆ. ಟೀಸರಿನಲ್ಲಿ ಕಾಣುವ ಪ್ರತಿಯೊಂದು ಸನ್ನಿವೇಶಗಳು ಗಮನ ಸೆಳೆಯುತ್ತದೆ. ಟೀಸರ್‌ನಲ್ಲಿಯೇ ‘ಟೆರರ್’ ದೊಡ್ಡ ಹಿಟ್ ಆಗುವ ಲಕ್ಷಣಗಳು ಕಾಣುತ್ತಿದೆ” ಎಂದು ಆರ್.ಚಂದ್ರು ಹಾರೈಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ಮಾಪಕರಾದ ದೇವೇಂದ್ರ ರೆಡ್ಡಿ,  ರಮೇಶ್ ರೆಡ್ಡಿ, ಪ್ರಕಾಶ್, ಶ್ರೀನಗರ ಕಿಟ್ಟಿ ಮುಂತಾದವರು ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಆದಿತ್ಯ ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದರು.

“ಈ ಕಥೆ ಕೇಳಿದ ಕೂಡಲೇ ನಿರ್ಮಾಪಕ ಸಿಲ್ಕ್ ಮಂಜು, ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಅವರ ಸಹಕಾರದಿಂದಲೇ ಈ ಸಿನಿಮಾ ಮಾಡಲು ಸಾಧ್ಯವಾಯಿತು.  ಸಿನಿಮಾದಲ್ಲಿ ಆದಿತ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ಕೂಡ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕೋಟೆ ಪ್ರಭಾಕರ್, ಧರ್ಮ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ 30% ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ” ಎಂದು ನಿರ್ದೇಶಕ ರಂಜನ್ ಶಿವರಾಮ್ ಗೌಡ ಹೇಳಿದರು.

“ಕನ್ನಡ ಚಿತ್ರರಂಗಕ್ಕೆ “A” ಎಂಬ ಉತ್ತಮ ಚಿತ್ರಕೊಟ್ಟ ನಿರ್ಮಾಪಕ ಸಿಲ್ಕ್ ಮಂಜು ಅವರ ನಿರ್ಮಾಣದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರಂಜನ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಹುಟ್ಟುಹಬ್ಬಕ್ಕಾಗಿ ವಿಶೇಷ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಇಲ್ಲಿ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ” ಎಂದರು ನಾಯಕ ಆದಿತ್ಯ. 

“ಎ ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಮೇಲೆ ಮತ್ತೊಂದು ನಿರೀಕ್ಷಿತ ಸಿನಿಮಾ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎಂದರು ನಿರ್ಮಾಪಕ ಸಿಲ್ಕ್ ಮಂಜು.