ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Family Politics Archives » Dynamic Leader
November 21, 2024
Home Posts tagged Family Politics
ರಾಜಕೀಯ

ಬೆಂಗಳೂರು: ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ ರಾಜಕೀಯ ಪಕ್ಷಗಳು ತತ್ವ ಸಿದ್ದಾಂತವನ್ನು ಸಂಪೂರ್ಣವಾಗಿ ಮರೆತು ಬಿಟ್ಟಿವೆ. ರಾಜಕೀಯದಲ್ಲಿ ನೈತಿಕತೆ ಮಾಯವಾಗುತ್ತಿದೆ. ಇದು ದೇಶದ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಕಳವಳ ವ್ಯಕ್ತ ಪಡಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪ್ರಕ್ರಿಯೆ ಅತಿಯಾಗುತ್ತದೆ ಎಂಬುದು ವಾಸ್ತವ ಸತ್ಯ. ಪ್ರಜೆಗಳು ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಪ್ರಜ್ಞೆ ರಾಜಕೀಯ ಪಕ್ಷಗಳು ಮರೆತಿದ್ದಾರೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸಿದ್ದಾಂತಗಳಿಗೆ ಯಾವುದೇ ಬೆಲೆ ಇಲ್ಲ ಎನ್ನಿಸುತ್ತಿದೆ. ಟಿಕೆಟ್ ಸಿಕ್ಕರೆ ಒಂದು ಪಕ್ಷ; ಇಲ್ಲದಿದ್ದರೆ ಇನ್ನೊಂದು ಪಕ್ಷ. ಬೆಳಿಗ್ಗೆ ಒಂದು ಪಕ್ಷ, ಸಂಜೆ ಒಂದು ಪಕ್ಷ ಎಂದು ಅಭ್ಯರ್ಥಿಗಳು ಹೀಗೆ ಜಿಗಿಯುತ್ತಾ ಹೋಗುತ್ತಾರೆ. ತತ್ವ ಸಿದ್ಧಾಂತದ ಬಗ್ಗೆ ಮಾತನಾಡುವ ಪಕ್ಷಗಳು, ಅಂತಹ ಅಭ್ಯರ್ಥಿಗಳಿಗೆ ಟಿಕೀಟ್ ನೀಡಿ ಪ್ರೋತ್ಸಾಹಿಸಿ ಇಂಥ ಅನೈತಿಕತೆಗೆ ಕುಮ್ಮಕ್ಕು ನೀಡುತ್ತಿವೆ.

ಎಲ್ಲಿದ್ದರೂ ಹೇಗಿದ್ದರೂ ಜನ ಓಟು ಹಾಕುತ್ತಾರೆ ಎಂಬ ಭಾವನೆ ಅವರಲ್ಲಿ ಅಡಕವಾಗಿವೆ. ಅಧಿಕಾರಕ್ಕಾಗಿ ಪಕ್ಷಾಂತರ ಪ್ರಕ್ರಿಯೆಯಲ್ಲಿ ಯಾವ ಪಕ್ಷವೂ ಕಡಿಮೆಯಿಲ್ಲ. ಆಪರೇಷನ್ ಕಮಲ/ಹಸ್ತ ಎಂಬ ಹೆಸರಲ್ಲಿ ನಡೆಯುವ ರಾಜಕೀಯ ಅನೈತಿಕತೆಗೂ ಇಲ್ಲಿ ಕೊರತೆಯಿಲ್ಲ. ಕುಟುಂಬ ರಾಜಕಾರಣದಲ್ಲೂ ಯಾರೂ ಕಮ್ಮಿಯಿಲ್ಲ.

ಪ್ರಿಯಾಂಕಾ ಗಾಂಧಿ ವಯನಾಡ್ ನಲ್ಲಿ ಚುನಾವಣಾ ಅಖಾಡಕ್ಕಿಳಿದಿರುವಾಗ ಅದರ ವಿರುದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಂಶಾಡಳಿತದ ಬಗ್ಗೆ ತೀವ್ರ ವಾಗ್ದಾಳಿ ನಡೆಸುತ್ತಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಬಸವರಾಜ್ಬೊ ಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಲ್ಲಿರುವುದು ಅವರ ಕಣ್ಣಿಗೆ ಕಾಣಿಸುದಿಲ್ಲ. ಇತರ ಪಕ್ಷಗಳ ಕಡೆಗೆ ಬಹಿರಂಗವಾಗಿ ಬೆರಳು ತೋರಿಸುವಾಗ ತಮ್ಮೆಡೆಗೆ ಉಳಿದ ಬೆರಳು ತೋರುತ್ತಿರುವ ಬಗ್ಗೆ ಅವರು ಚಿಂತಿಸುವುದಿಲ್ಲ. ಯಡಿಯೂರಪ್ಪ ಪುತ್ರನಿಗೆ ರಾಜ್ಯದ ಬಿಜೆಪಿ ಅಧ್ಯಕ್ಷ ಪಟ್ಟ ಒಲಿದು ಬಂದಾಗ ಇವರು ಕಣ್ಣು ಮುಚ್ಚಿ ಕುಳಿತಿದ್ದರು.

ದೇಶದಲ್ಲಿ ಜಾತ್ಯತೀತ ಪಕ್ಷ ಎಂದು ಗುರುತಿಸಲ್ಪಡುವ ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷತ್ ನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಇದರ ವಿರುದ್ದ ಕಾಂಗ್ರೆಸ್ ನಿಂದಲೂ ಅಪಸ್ವರ ಕೇಳಿ ಬರುತ್ತಿಲ್ಲ. ಶಿಸ್ತು ಕ್ರಮ, ಶೋಕಾಸ್ ನೊಟೀಸ್ ಎಚ್ಚರಿಕೆ ಯಾವುದೂ ಕಂಡು ಬರುತ್ತಿಲ್ಲ. ಪ್ರತಿಯೊಂದು ಪಕ್ಷಗಳಿಗೂ ಒಂದು ತತ್ವ ಸಿದ್ಧಾಂತ ಅನ್ನೋದು ಇರುತ್ತದೆ. ಆದರೆ, ಅದನ್ನು ಗಾಳಿಗೆ ತೂರಲಾಗುತ್ತದೆ.  ಅಧಿಕಾರ, ಹಣದ ಮುಂದೆ ಯಾವ ತತ್ವ ಸಿದ್ದಾಂತವೂ ಗಣನೆಗೆ ಬರುವುದಿಲ್ಲ.

ರಾಜಕೀಯ ಪಕ್ಷಗಳು ನೈತಿಕ ರಾಜಕಾರಣದಿಂದ ದೂರ ಸರಿಯುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದನ್ನು ತಡೆಗಟ್ಟಲು ಪ್ರಜ್ಞಾವಂತ ನಾಗರಿಕರು ಮುಂದೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ.

ದೇಶ

‘ಭಾರತೀಯರೆಲ್ಲರೂ ನನ್ನ ಕುಟುಂಬ’ ಎಂದು ಭಾ‍ಷಣ ಮಾಡಿದ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ನಟ ಪ್ರಕಾಶ್ ರಾಜ್, ‘ಮಣಿಪುರದ ಜನರು ಕೂಡ ನಿಮ್ಮ ಕುಟುಂಬವೇ’ ಎಂದು ಕೇಳಿದ್ದಾರೆ.

ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ಮಾರ್ಚ್ 3 ರಂದು ನಡೆದ “ಜನ್ ವಿಶ್ವಾಸ್” ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, “ಪ್ರಧಾನಿ ಮೋದಿಯವರು ರಾಷ್ಟ್ರೀಯ ಜನತಾ ದಳ ಸೇರಿದಂತೆ ವಿವಿಧ ಪಕ್ಷಗಳ ವಿರುದ್ಧ ಕುಟುಂಬ ರಾಜಕಾರಣದ ಆರೋಪಗಳನ್ನು ಎತ್ತುತ್ತಿದ್ದಾರೆ. ನರೇಂದ್ರ ಮೋದಿ ಕುಟುಂಬ ಆಡಳಿತದ ಮೇಲೆ ದಾಳಿ ನಡೆಸುತ್ತಿದ್ದಾರೆ.

ನಿಮಗೆ ಏಕೆ ಮಕ್ಕಳು ಅಥವಾ ಕುಟುಂಬವಿಲ್ಲ ಎಂಬುದನ್ನು ನೀವು (ಮೋದಿ) ಹೇಳಬೇಕು? ಹಲವು ಕುಟುಂಬಗಳು ರಾಜಕೀಯದಲ್ಲಿದ್ದರೆ ಅದು ಕುಟುಂಬ ಆಡಳಿತವೇ? ಇದು ಉತ್ತರಾಧಿಕಾರ ರಾಜಕಾರಣವೇ? ನಿಮಗೆ (ಮೋದಿ) ಕುಟುಂಬವಿಲ್ಲದಿದ್ದರೆ, ಯಾರು ಏನು ಮಾಡಲು ಸಾಧ್ಯ?” ಎಂದು ಕಟುವಾಗಿ ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ, ನಿನ್ನೆ ತಮಿಳುನಾಡಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಚೆನ್ನೈನ ನಂದನಂನಲ್ಲಿ ಬಿಜೆಪಿ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. “ನಾನು ಕುಟುಂಬ ಆಡಳಿತ ಎಂದು ಮಾತನಾಡುವುದರಿಂದ ಮೋದಿಗೆ ಕುಟುಂಬವೇ ಇಲ್ಲ ಎಂದು “ಇಂಡಿಯಾ” ಮೈತ್ರಿಕೂಟದ ನಾಯಕರು ಮಾತನಾಡುತ್ತಿದ್ದಾರೆ.

ನನ್ನ ಜೀವನ ಒಂದು ತೆರೆದ ಪುಸ್ತಕ. ದೇಶದ 140 ಕೋಟಿ ಜನರು ನನ್ನ ಕುಟುಂಬದವರೇ ಆಗಿದ್ದಾರೆ. ಕೋಟ್ಯಾಂತರ ಹೆಣ್ಣುಮಕ್ಕಳು, ತಾಯಂದಿರು ಮತ್ತು ಸಹೋದರಿಯರೆಲ್ಲರೂ ಮೋದಿಯ ಕುಟುಂಬಕ್ಕೆ ಸೇರಿದವರೇ” ಎಂದು ಹೇಳುವ ಮೂಲಕ ಲಾಲು ಪ್ರಸಾದ್ ಯಾದವ್ ಅವರ ಪ್ರಶ್ನೆಗೆ ತಕ್ಕ ಉತ್ತರ ನೀಡಿದರು.

ಈ ಹಿನ್ನೆಲೆಯಲ್ಲಿ, ದೇಶದ ಜನರೆಲ್ಲ ನನ್ನ ಕುಟುಂಬ ಎಂಬ ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ನಟ ಪ್ರಕಾಶ್ ರಾಜ್ ಪ್ರಶ್ನೆ ಎತ್ತಿದ್ದಾರೆ. ಈ ಸಂಬಂಧ ಅವರು ತಮ್ಮ ‘ಎಕ್ಸ್’ ಸೈಟ್‌ನಲ್ಲಿ, “ಮಣಿಪುರದ ಜನರು, ದೇಶದ ರೈತರು, ನಿರುದ್ಯೋಗಿ ಯುವಕರು ನಿಮ್ಮ ಕುಟುಂಬವೇ?” ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಮಣಿಪುರದಲ್ಲಿ ಭುಗಿಲೆದ್ದ ಕೋಮುಗಲಭೆ ಇಂದಿಗೂ ಮುಂದುವರೆದಿದೆ. ಈ ವಿಚಾರದಲ್ಲಿ ಮೋದಿ ಇನ್ನೂ ಆ ರಾಜ್ಯಕ್ಕೆ ಭೇಟಿ ನೀಡಿ ಜನರನ್ನು ಭೇಟಿ ಮಾಡಿಲ್ಲ. ಇನ್ನೂ ಮಣಿಪುರದಲ್ಲಿ ಉದ್ವಿಗ್ನತೆ ಕಡಿಮೆಯಾಗಿಲ್ಲ. ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಈ ಪ್ರಶ್ನೆ ಎತ್ತಿರುವುದು ಗಮ್ನಾರ್ಹ.

ರಾಜಕೀಯ

ನಿಮ್ಮ ಕುಟುಂಬಕ್ಕೂ ನೀವು ನಿಯತ್ತಾಗಿಲ್ಲ. ನಿಮ್ಮ ಪಕ್ಷದ ಸಿದ್ಧಾಂತಕ್ಕೂ ನೀವು ನಿಯತ್ತಾಗಿಲ್ಲ. ನಿಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೂ ನಿಯತ್ತಾಗಿಲ್ಲ. ನಿಮ್ಮನ್ನುಕೈ ಹಿಡಿದಜನರಿಗೂ ನಿಯತ್ತಾಗಿಲ್ಲ. ನಿಮ್ಮನ್ನು ನಂಬಿದ ಸಮುದಾಯಕ್ಕೂ ನಿಯತ್ತಾಗಿಲ್ಲ. ಕುಲದ ಮಠಕ್ಕೂ ಕೊಡಲಿ ಕಾವಾದಿರಿ. ಕೊನೇ ಪಕ್ಷ ನಿಮ್ಮ ಆತ್ಮಸಾಕ್ಷಿಗಾದರೂ ನಿಯತ್ತಾಗಿದ್ದೀರಾ?

ಕೈ ಹಿಡಿದವರ ತಲೆ ಕಡಿಯುವ, ಹೆಗಲು ಕೊಟ್ಟವರ ಬೆನ್ನಿಗೆ ಚೂರಿ ಹಾಕುವ, ನಂಬಿದವರಿಗೆ ನಾಮ ಬಳಿಯುವ ಕುಮಾರಸ್ವಾಮಿ ರಾಮಾಯಣದ ಮಂಥರೆ, ಮಹಾಭಾರತದ ಶಕುನಿಯೇ ಸರಿ! ಕ್ಷಣಕ್ಕೊಂದು ಬಣ್ಣ, ದಿನಕ್ಕೊಂದು ವೇಷ ತೊಡುವ ನಿಮ್ಮ ಬಣ್ಣದೋಕುಳಿಯಾಟಕ್ಕೆ ಗೋಸುಂಬೆಯೇ ಲಾಗ ಹೊಡೆದಿದೆ! ಎಂದು ಕಾಂಗ್ರೆಸ್ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಿಡಿಕಾರಿದೆ.

ಹಿಂದಿನ ನಿಮ್ಮ ಎಲ್ಲ ಅಕ್ರಮ, ಅನಾಚಾರ, ಅವ್ಯವಹಾರಗಳು ಹೊರಬರುತ್ತವೆ ಎಂದು ಹೆದರಿ ಬಿಜೆಪಿ ಸೆರಗಿನೊಳಗೆ ಸೇರಿಕೊಂಡಿರುವ ನಿಮ್ಮ ಜಾತ್ಯತೀತತೆ ನಾಟ್ಯಕ್ಕೆ ಬೆರಗಾಗಿ ತೆನೆ ಹೊತ್ತ ಮಹಿಳೆಯೇ “ಕೋಮು-ಕುಂಡ”ದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕುಮಾರಸ್ವಾಮಿಯವರೇ, ಮೊದಲ ಬಾರಿ ನಿಮ್ಮನ್ನು ಸಿಎಂ ಮಾಡಿದ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸದೆ ವಚನ ಭ್ರಷ್ಟರಾದಿರಿ, ದ್ರೋಹ ಮಾಡಿದಿರಿ. ಕಾಂಗ್ರೆಸ್ ನಿಮ್ಮನ್ನು ಸಿಎಂ ಮಾಡಿದಾಗ ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಹೇಳಿದ್ದರು. “ಶಿವಕುಮಾರ್, ಈ ಅಪ್ಪ ಮಕ್ಕಳನ್ನು ನಂಬಬೇಡಿ, ಬಳಸಿ ಬಿಸಾಡುತ್ತಾರೆ. ಹಾವು ಇವರ ಲಾಂಚನ” ಎಂದು. ಆದರೆ ಸಿದ್ದಾಂತಕ್ಕಾಗಿ ಕಾಂಗ್ರೆಸ್ ನಿಮ್ಮ ಜತೆ ನಿಂತಿತ್ತು.

ಕಾಂಗ್ರೆಸ್ ದಯಾಭಿಕ್ಷೆಯಿಂದ ಎರಡನೇ ಬಾರಿಗೆ ಸಿಎಂ ಆದ ನಿಮಗೆ ಕಿಂಚಿತ್ತಾದರೂ ನಿಯತ್ತು ಬೇಡವೇ? ಓಹ್.. ಕ್ಷಮಿಸಿ, ಆತ್ಮಸಾಕ್ಷಿ ಮಾರಿಕೊಂಡೇ ರಾಜಕೀಯ ಬಯಲಾಟ ಆಡುವ ನಿಮ್ಮಂತವರಿಂದ ನೀತಿ, ನಿಯತ್ತು, ನೈತಿಕತೆ ನಿರೀಕ್ಷೆ ಮಾಡುವುದೇ ಮಹಾಪಾಪ! ಎಂದು ಹೇಳಿದೆ.

ಕುಮಾರಸ್ವಾಮಿಯವರೇ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಅನ್ಯ ರಾಜ್ಯದ ಪೇಶ್ವೆ ಎಂದು ನಿಂದಿಸಿದಿರಿ. 2.50 ಕೋಟಿಯಂತೆ ಸರಕಾರಿ ಹುದ್ದೆ ಮಾರಿಕೊಂಡ ಭ್ರಷ್ಟ ಎಂದಿರಿ. ಸಿ ಟಿ ರವಿಯನ್ನು ಲೂಟಿ ರವಿ ಎಂದು ನಾಮಕರಣ ಮಾಡಿದವರೂ ನೀವೇ. ಇವತ್ತು ಅವರದ್ದೇ ಅಂಗಿ ಚುಂಗು ಹಿಡಿದು ನಿಂತಿದ್ದೀರಲ್ಲಾ… ನಿಮಗೇನಾದರೂ ಆತ್ಮಗೌರವ ಇದೆಯೇ?

ಇಡೀ ರಾಜ್ಯದ ಜನಕ್ಕೆ ಅರ್ಥವಾಗಿದೆ. ಅಧಿಕಾರದ ಕನಸು ನುಚ್ಚುನೂರಾದ ನಂತರ ನೀವೆಷ್ಟು ಹತಾಶರಾಗಿದ್ದೀರಿ, ಮತಿಭ್ರಂಶರಾಗಿದ್ದೀರಿ ಎಂದು ನೀವಾಡುವ ಒಂದೊಂದು ನುಡಿಯಲ್ಲೂ ಅದರದೇ ಪ್ರತಿಫಲನ. ಪಾಪ, ನಿಮ್ಮ ಸ್ಥಿತಿ ಕಂಡು ಅಯ್ಯೋ ಅನ್ನಿಸುತ್ತದೆ. ಇದೇ ಸ್ಥಿತಿ ಮುಂದುವರೆದರೆ ಬೀದಿಯಲ್ಲಿ ಅಂಗಿ ಹರಿದುಕೊಂಡು ಓಡಾಡುವ ದಿನ ದೂರವಿಲ್ಲ ಎಂಬುದನ್ನು ನೆನೆದು ಭಯವೂ ಆಗುತ್ತದೆ.

ಅದು ಒತ್ತಟ್ಟಿಗಿರಲಿ, ನಿಮ್ಮನ್ನು, ನಿಮ್ಮ ಕುಟುಂಬದವರನ್ನು ದಶಕಗಳ ಕಾಲ ಪೊರೆದ ಒಕ್ಕಲಿಗರು ನನಗೆ ಮತ ಹಾಕಿಲ್ಲ ಎನ್ನುವ ಮೂಲಕ ಅವರಿಗೆ ದ್ರೋಹ, ಅವಮಾನ ಮಾಡಿರುವ ನಿಮ್ಮನ್ನು ಆ ಭೈರವೇಶ್ವರನೂ ಕ್ಷಮಿಸುವುದಿಲ್ಲ. ಒಕ್ಕಲಿಗರಿಂದ ನೀವು ಬೆಳೆದಿರೇ ಹೊರತು ನಿಮ್ಮಿಂದ ಸಮುದಾಯವೇನೂ ಉದ್ಧಾರ ಆಗಿಲ್ಲ. ಎಷ್ಟೇ ಆಗಲಿ, ಒಕ್ಕಲಿಗರ ಆತ್ಮಗೌರವದ ಸಂಕೇತವಾದ ಆದಿ ಚುಂಚನಗಿರಿ ಮಠದ ಶ್ರೀ.ಬಾಲಗಂಗಾಧರನಾಥ ಸ್ವಾಮೀಜಿಗಳಿಗೇ ಸೆಡ್ಡು ಹೊಡೆದು ಮತ್ತೊಂದು ಮಠ ಕಟ್ಟಿದ ಮಹಾನುಭಾವರಲ್ಲವೇ ನೀವು..?!

ಇನ್ನೊಂದೆಡೆ ಅಲ್ಪಸಂಖ್ಯಾತರ ಅಗತ್ಯವಿಲ್ಲ, ಅವರನ್ನು ನಂಬಿಕೊಂಡು ರಾಜಕಾರಣ ಮಾಡಿಲ್ಲ ಅನ್ನುತ್ತೀರಿ. ಹಾಗಾದರೆ ನಿಮಗೆ ನೀವೇ ಮತ ಹಾಕಿಕೊಂಡು ಗೆದ್ದಿರಾ ಕುಮಾರಣ್ಣ..?! ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕುಮಾರಸ್ವಾಮಿಯವರೇ, ಹಿಂದೆ ನೀವು ಮಕ್ಮಲ್ ಟೋಪಿ ಹಾಕಿದ್ದೇನು? ಬಿರಿಯಾನಿ ತಿಂದಿದ್ದೇನು? ಮಸೀದಿ ಹೊಕ್ಕಿದ್ದೇನು? ಆಹಾ..! ಅದೇನು ನಾಟಕ, ಅದೇನು ಪಂಚರಂಗಿ ಆಟ? ಈಗ, ಅಲ್ಪಸಂಖ್ಯಾತರನ್ನು ನಂಬಿಕೊಂಡು ರಾಜಕಾರಣ ಮಾಡಿಲ್ಲ ಎನ್ನುವ ನಿಮ್ಮ ಬಾಯಲ್ಲಿರುವುದು ನಾಲಿಗೆಯೋ ಅಥವಾ ಕೊಳಕುಮಂಡಲ ಹಾವೋ?!

ಐಟಿ, ಇಡಿ ಕಿಂದರ ಜೋಗಿ ಅಮಿತ್ ಶಾ ಕಾಲಿಗೆ ಬಿದ್ದು ರಾಜಕೀಯ ವಿರೋಧಿಗಳಿಗೆ ಗುಂಡಿ ತೋಡುವುದರಲ್ಲಿ ಮಗ್ನರಾಗಿರುವ ಕುಮಾರಣ್ಣ ಒಂದು ವಿಷಯ ತಿಳಿದುಕೊಳ್ಳಿ. ನೀವೇ ನಿಮ್ಮ ಪಾಲಿನ ಭಸ್ಮಾಸುರ! ಸ್ವಲ್ಪ ಕಾಲ ತಡೆದು ನೋಡಿ, ನಿಮ್ಮ ಗುಂಡಿಯಲ್ಲಿ ಬಿದ್ದು ನೀವೇ ಹೆಂಗೆ ಒದ್ದಾಡುತ್ತೀರಿ ಅಂತಾ!

ಕೈಲಾಗದವರು ಮೈ ಪರಚಿಕೊಂಡರೆ ಆಗೋದು ಗಾಯ, ರಣ ಗಾಯ! ಕೈ ನಾಯಕರ ಮೇಲೆ ಬಿದ್ದರೇ ಕೈಲಾಸ ಪ್ರಾಪ್ತಿ ಆಗದು ಕುಮಾರಣ್ಣ. ನಿಮ್ಮ ಮಾತೇ ನಿಮ್ಮ ಪಾಲಿನ ಶತ್ರು! ಮಾತಾಡಿ, ಮಾತಾಡಿ ಮಂಡ್ಯ ಚುನಾವಣೆಯಲ್ಲಿ ನಿಮ್ಮ ಮಗನನ್ನು ಬಲಿ ಕೊಟ್ಟಿರಿ. ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷವನ್ನೇ ಅಡ್ಡಡ್ಡ ಉದ್ದುದ್ದ ಮಲಗಿಸಿದಿರಿ. ಈಗ ನಿಮ್ಮನ್ನು ನೀವೇ ಹಾಳು ಮಾಡಿಕೊಳ್ಳುತಿದ್ದೀರಿ..!

ನಿಯತ್ತು ಮತ್ತು ಕುಮಾರಸ್ವಾಮಿ ಎರಡೂ ವಿರುದ್ಧ ಪದಗಳು ಎಂಬುದು ಜಗಜ್ಜಾಹಿರು! ನಿಮ್ಮ ಕುಟುಂಬಕ್ಕೂ ನೀವು ನಿಯತ್ತಾಗಿಲ್ಲ. ನಿಮ್ಮ ಪಕ್ಷದ ಸಿದ್ಧಾಂತಕ್ಕೂ ನೀವು ನಿಯತ್ತಾಗಿಲ್ಲ. ನಿಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೂ ನಿಯತ್ತಾಗಿಲ್ಲ. ನಿಮ್ಮನ್ನು “ಕೈ ಹಿಡಿದ” ಜನರಿಗೂ ನಿಯತ್ತಾಗಿಲ್ಲ. ನಿಮ್ಮನ್ನು ನಂಬಿದ ಸಮುದಾಯಕ್ಕೂ ನಿಯತ್ತಾಗಿಲ್ಲ. ಕುಲದ ಮಠಕ್ಕೂ ಕೊಡಲಿ ಕಾವಾದಿರಿ. ಕೊನೇ ಪಕ್ಷ ನಿಮ್ಮ ಆತ್ಮಸಾಕ್ಷಿಗಾದರೂ ನಿಯತ್ತಾಗಿದ್ದೀರಾ? ಅದೂ ಇಲ್ಲ. ಹತಾಶೆ ಆತ್ಮಸಾಕ್ಷಿಯನ್ನೇ ಕೊಂದಿದೆ!

ಹೀಗಾಗಿ ನಿಮ್ಮಂತವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುವ ಅಗತ್ಯವಿಲ್ಲ. ನೀವೀಗ ನಿರುದ್ಯೋಗಿ, ಪರರ ನಿಂದನೆಗೆ ಸಾಕಷ್ಟು ಸಮಯವಿದೆ. ಮಾತಾಡುತ್ತಾ ಹೋಗಿ. ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮಗೆ ಕೆಲಸವಿದೆ, ಜನ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಮರೆತು ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲ ಉತ್ತರ ಕೊಡುತ್ತಾ ಹೋದರೆ ನಿಮಗೂ ನಮಗೂ ವ್ಯತ್ಯಾಸ ಇರುವುದಿಲ್ಲ. ನೀವು ಮಾತಾಡಿ, ಮಾತಾಡುತ್ತಾ ಹೋಗಿ… ಅಲ್ ದ ಬೆಸ್ಟ್! ಎಂದು ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ.