ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Heeraben Archives » Dynamic Leader
December 3, 2024
Home Posts tagged Heeraben
ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬೆಂಗಳೂರು: ‘ಅದಾನಿ ಗ್ರೂಪ್ ಕಂಪೆನಿಗಳು ಅಕ್ರಮಗಳಲ್ಲಿ ತೊಡಗಿವೆ’ ಎಂದು ಹಿಂಡೆನ್‌ಬರ್ಗ್ ವರದಿ ಮಾಡಿದ ನಂತರ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ತೀವ್ರ ಕುಸಿತವನ್ನು ಅನುಭವಿಸಿದವು. ಇದು ಭಾರತದ ಆರ್ಥಿಕತೆಯ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ ಎಂದು ವಿರೋಧ ಪಕ್ಷಗಳು ಹಾಗೂ ಆರ್ಥಿಕ ತಜ್ಞ್ಯರೆಲ್ಲ ಕಳವಳ ವ್ಯಕ್ತ ಪಡಿಸುತ್ತಿದ್ದಾರೆ. ವಿರೋಧಪಕ್ಷಗಳ ಒಕ್ಕೊರಳಿನ ಒತ್ತಾಯದಿಂದ ಸಂಸತ್ ನಲ್ಲಿ ಕಲಾಪಗಳು ನಡೆಯದೆ ಹಲವಾರು ಬಾರಿ ಮುಂದೂಡಲ್ಪಟ್ಟವು.

ಈ ಹಿನ್ನಲೆಯಲ್ಲಿ ಫೆಬ್ರವರಿ 8 ರಂದು ಸುಮಾರು 9 ಗಂಟೆಗಳ ಕಾಲ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅದಾನಿಯ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ, ನೆಹರು ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು. ‘ನೆಹರೂ ವಂಶಸ್ಥರೇಕೆ ಅವರ ಉಪನಾಮ ಬಳಸಲ್ಲ’ ಎಂಬುದನ್ನು ಒಂದು ವಿಷಯವಾಗಿ ಮುನ್ನಲೆಗೆ ತಂದು, ಬಿಜೆಪಿ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಲು ಲೇವಡಿ, ಹಾಸ್ಯ ಚಟಾಕಿ ಹಾರಿಸುತ್ತಾ ಕಾಲ ಕಳೆದರು. ದೇಶವಿರುವ ಪರಿಸ್ಥಿತಿಯಲ್ಲಿ ಮೋದಿಗೆ ಹಾಷ್ಯತನ ಬೇಕೆ? ಎಂಬುದನ್ನು ಜನ  ಕೇಳುತ್ತಿದ್ದಾರೆ. ಭಾರತೀಯ ಪದ್ಧತಿಯಂತೆ – ಪ್ರಪಂಚದ ಪದ್ಧತಿಯಂತೆ ಗಂಡು ಮಕ್ಕಳ ಕುಟುಂಬದ ಹೆಸರೇ ಮುಂದುವರಿಯುತ್ತದೆ. ನೆಹರೂಗೆ ಮಗನಿರಲಿಲ್ಲ. ಇಂದಿರಾ ಒಬ್ಬಳೇ ಮಗಳು. ಆದ್ದರಿಂದ ಅವರ ಪತಿ ಫಿರೋಜ್ ಗಾಂಧಿಯ ಹೆಸರನ್ನು ಉಪನಾಮವಾಗಿ ಬಳಸುತ್ತಿದ್ದಾರೆ. ಇದು ಪ್ರಧಾನಿಗೆ ಗೊತ್ತಿಲ್ಲವೇ?

2014ರಲ್ಲಿ ಅದಾನಿ ಪುತ್ರನ ವಿವಾಹವಾಗಿತ್ತು. ಈ ಮದುವೆಗೆ ಜಗತ್ತಿನಾದ್ಯಂತ ಕ್ಲಾಸ್ ಒನ್ ಶ್ರೀಮಂತರೆಲ್ಲ ಬಂದು ಹೋದರು. ಆದರೆ, ನರೇಂದ್ರ ಮೋದಿಯವರು ಮಾತ್ರ ಮೂರು ದಿನಗಳು ಅಲ್ಲಿಯೇ ಉಳಿದು, ಅದಾನಿ ಪುತ್ರನ ವಿವಾಹದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆದರೆ, ಮೋದಿ ಅವರ ತಾಯಿ ಇತ್ತೀಚೆಗೆ ನಿಧನರಾದಾಗ, ಅವರು ಕೆಲವೇ ಗಂಟೆಗಳಲ್ಲಿ ಅವರ ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿ ಹೊರನಡೆದರು. ಪ್ರದಾನಿ ಮೋದಿಗೆ ತಾಯಿಗಿಂತ ದೇಶ ಸೇವೆಯೇ ದೊಡ್ಡದು ಎಂಬಂತೆ ಅಂದು ಬಿಂಬಿಸಲಾಯಿತು. ಆದರೆ, ಮೋದಿಗೆ ತನ್ನ ತಾಯಿಗಿಂತ, ಈ ದೇಶದ ಸೇವೆಗಿಂತ; ಅದಾನಿ ಪುತ್ರನ ವಿವಾಹವೇ ಅಂದು ಮುಖ್ಯವಾಗಿತ್ತು ಎಂಬುದನ್ನು ಇನ್ನು ಯಾರೂ ಮರೆತಿಲ್ಲ.    

‘ಮೂವತ್ತು ವರ್ಷಗಳಿಂದ ಕುಟುಂಬದೊಂದಿಗೆ ಇರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದರು. ಹಾಗಾದರೆ, ಇಷ್ಟು ವರ್ಷ ಅಮ್ಮನನ್ನು ಸಾಕುತ್ತಿದ್ದ ಅಣ್ಣನೂ ಸೇರಿದಂತೆ ಜೊತೆಯಲ್ಲಿ ಹುಟ್ಟಿದವರು ಬಂದು ಶಾಸ್ತ್ರೋಕ್ತವಾಗಿ ನಡೆದುಕೊಂಡಿರಬೇಕು ಅಲ್ಲವೇ? ಆದರೆ, ಅಂದು ನಾವು ಮೋದಿಯನ್ನು ಮಾತ್ರ ನೋಡುತ್ತಿದ್ದೆವು. ಪ್ರಧಾನಿಯ ತಾಯಿಯ ಸಾವನ್ನು ಹಾಗೂ ಪ್ರಧಾನಿಯನ್ನು ಲೈವ್ ಟೆಲಿಕಾಸ್ಟ್ ಮಾಡಿ, ತಮ್ಮ ಟಿ.ಆರ್.ಪಿ.ಯನ್ನು ಹೆಚ್ಚಿಸಿಕೊಂಡ ಮಾದ್ಯಮಗಳು, ಪ್ರಧಾನಿ ನರೇಂದ್ರ ಮೋದಿಗೆ ತಾಯಿಗಿಂತ ಈ ದೇಶ ಸೇವೆಯೇ ದೊಡ್ಡದು ಎಂಬಂತೆ ಬಿಂಬಿಸಿದವು. 

ಸಂಸತ್ತಿನಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, ನೀವು (ಮೋದಿ) ಇಸ್ರೇಲ್, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಅದಾನಿ ವ್ಯವಹಾರವನ್ನು ಪಡೆಯುತ್ತಾರೆ. ಹಾಗಾದರೆ ನಿಮ್ಮ ಮತ್ತು ಅದಾನಿ ನಡುವೆ ಏನಿದೆ? ಎಂಬುದನ್ನು ಈ ದೇಶಕ್ಕೆ ತಿಳಿಸಿಕೊಡಿ ಎಂದು ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನೆ ಮಾಡುತ್ತಾರೆ. ಸಂಸದ ರಾಹುಲ್ ಗಾಂಧಿಯ ಈ ಗುರುತರವಾದ ಪ್ರಶ್ನೆಗೆ (ಆರೋಪಕ್ಕೆ) ಮೋದಿಯವರು ತಕ್ಕ ಉತ್ತರ ನೀಡುತ್ತಾರೆ ಎಂದು ಈ ದೇಶವೇ ಎದುರು ನೋಡುತ್ತಿರುವಾಗ, ಸಂಸತ್ತಿನಲ್ಲಿ ಸುಮಾರು ಒಂಬತ್ತು ಗಂಟೆಗಳ ಕಾಲ ಭಾಷಣ ಮಾಡಿದ ಮೋದಿ, ವಿರೋಧ ಪಕ್ಷಗಳನ್ನು ಲೇವಡಿಯಿಂದ, ಹಾಸ್ಯ ಹಾಗೂ ಉಡಾಫೆಯ ಮಾತುಗಳಿಂದ ತಿವಿದು, ವಿರೋಧ ಪಕ್ಷಗಳ ಗುರುತರವಾದ ಆರೋಪಗಳನ್ನು ದಿಕ್ಕು ತಪ್ಪಿಸಿ, ಪ್ರಶ್ನೆ ಮಾಡಿದವರನ್ನೇ ಅಪರಾಧಿಯನ್ನಾಗಿಸುವ ಪ್ರಯತ್ನವನ್ನು ಮಾಡಿದರು.

‘ದೇಶಭಕ್ತಿಯೇ ಕಿಡಿಗೇಡಿಗಳ ಕೊನೆಯ ಆಶ್ರಯ ತಾಣ’ ಎಂಬ ಸ್ಯಾಮ್ಯುಯೆಲ್ ಜಾನ್ಸನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು, ಮೋದಿ ಸರ್ಕಾರ ಅಧಿಕಾರ ವರ್ಗದೊಂದಿಗೆ ಕೈಜೋಡಿಸಿ, ತನ್ನ ತಪ್ಪುಗಳನ್ನು ಯಾರೂ ಪ್ರಶ್ನಿಸದಂತೆ ಮುಚ್ಚಿಹಾಕಲು, ತನ್ನ ಅಕ್ರಮಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ. ದೇಶಭಕ್ತಿ, ರಾಷ್ಟ್ರೀಯ ಭದ್ರತೆ ಹಾಗೂ ರಾಷ್ಟ್ರದ ಅಭಿವೃದ್ಧಿಯ ಸುಳ್ಳು ವಿಚಾರಗಳನ್ನು ಮುಂದಿಡುವುದು ಈಗ ಅವರಿಗೆ ವಾಡಿಕೆಯಾಗಿದೆ.

ದೇಶ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ (100) ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಮೋದಿ ಅವರೇ ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ.

‘ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅವರ ಜೀವನವು ತಪಸ್ವಿಯ ಪ್ರಯಾಣವಾಗಿತ್ತು. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹೀರಾಬೆನ್‌ ಅವರನ್ನು ಅಹಮದಾಬಾದ್‌ನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಆ್ಯಂಡ್‌ ರೀಸರ್ಚ್‌ ಸೆಂಟರ್‌ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು.

ಶ್ರೀಮತಿ ಹೀರಾಬೆನ್‌ ಮೋದಿ ಅವರು 2022ರ ಡಿಸೆಂಬರ್‌ 30ರಂದು ಬೆಳಗಿನ ಜಾವ 3.39ಕ್ಕೆ ನಿಧನರಾಗಿದ್ದಾರೆ. ಹೀರಾಬೆನ್ ಅವರು ಜೂನ್ 18, 1923 ರಂದು ಜನಿಸಿದ್ದು ಶತಾಯುಶಿ ಎಂಬ ಹಿರಿಮೆಗೂ ಪಾತ್ರರಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ನಿಧನಕ್ಕೆ ‘ಡೈನಾಮಿಕ್ ಲೀಡರ್’ ಬಳಗವು ಸಂತಾಪ ಸೂಚಿಸುತ್ತದೆ.