ಜುನಾಗಢ: ಜೂನ್ 14ರಂದು ಜುನಾಗಢ ಮುನ್ಸಿಪಲ್ ಕಾರ್ಪೊರೇಷನ್ ಮಜೆವಾಡಿ ದರ್ವಾಜಾ ಬಳಿಯ ಮಸೀದಿಯೊಂದಕ್ಕೆ ಜಮೀನಿನ ಮಾಲೀಕತ್ವದ ಬಗ್ಗೆ ದಾಖಲೆಗಳನ್ನು ನೀಡುವಂತೆ ನೋಟಿಸ್ ನೀಡಿತ್ತು. ನೋಟಿಸ್‌ನಿಂದ ಕ್ಷೋಭೆಗೊಳಗಾದ ಸುಮಾರು 500-600 ಜನರು ಶುಕ್ರವಾರ ರಾತ್ರಿ ಧಾರ್ಮಿಕ ಕಟ್ಟಡದ ಬಳಿ ಜಮಾಯಿಸಿ ರಸ್ತೆಗಳನ್ನು ತಡೆದರು ಎಂದು ಪೊಲೀಸ್ ವರಿಷ್ಠಾಧಿಕಾರಿ ರವಿತೇಜ ವಾಸಮಶೆಟ್ಟಿ ತಿಳಿಸಿದ್ದಾರೆ.
ಅತಿಕ್ರಮಣ ಮಾಡಿ ನಿರ್ಮಿಸಿದ್ದ ದರ್ಗಾವನ್ನು ತೆರವುಗೊಳಿಸುವ ಸಲುವಾಗಿ, ಜುನಾಗಢ ಮುನ್ಸಿಪಲ್ ಕಾರ್ಪೊರೇಷನ್ ನ ಕಾರ್ಯಚರಣೆಯನ್ನು ವಿರೋಧಿಸಿ, ಸ್ಥಳೀಯರ ಗುಂಪೊಂದು ಕಲ್ಲು ತೂರಾಟ ಮತ್ತು ವಾಹನಕ್ಕೆ ಬೆಂಕಿ ಹಚ್ಚಿದ ಕಾರಣ, ಉಂಟಾದ ಗಲಭೆಯಲ್ಲಿ ಗುಜರಾತಿನ ಜುನಾಗಢ ನಗರದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮತ್ತು ಕನಿಷ್ಠ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಗರದ ಮಜೆವಾಡಿ ದರ್ವಾಜಾ ಬಳಿ ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ. ಮತ್ತು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ನಂತರ ಅಲ್ಲಿದ್ದ 174 ಜನರನ್ನು ಸುತ್ತುವರೆದು ಗಲಭೆ ನಡೆಯದಂತೆ ಎಚ್ಚರಿಕೆಯ ಕ್ರಮವನ್ನು ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ನಾಗರಿಕನ ಸಾವಿನ ಹಿಂದಿನ ನಿಖರವಾದ ಕಾರಣ ತಿಳಿದುಬರುತ್ತದೆ. ಆದರೆ, ಗುಂಪು ಎಸೆದ ಕಲ್ಲಿನಿಂದಲೇ ಆತ ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಸ್ಥಳದಲ್ಲಿದ್ದ ಜುನಾಗಢದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರ ಸಿಬ್ಬಂದಿಗಳು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಸುಮಾರು ಒಂದು ಗಂಟೆ ಕಾಲ ನಡೆದ ಚರ್ಚೆಯ ಬಳಿಕ, ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪ್ರತಿಭಟನಾಕಾರರ ರಸ್ತೆ ತಡೆಯನ್ನು ತೆರವುಗೊಳಿಸಲಾಯಿತು. ಆದರೆ, ರಾತ್ರಿ 10.15ರ ಸುಮಾರಿಗೆ ಏಕಾ ಏಕಿ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಎಂದು ಪೊಲೀಸರು ಹೇಳುತ್ತಾರೆ.
ಘೋಷಣೆಗಳನ್ನು ಕೂಗುತ್ತಾ, ದರ್ಗಾಗೆ ನೋಟಿಸ್ ನೀಡಿದ್ದಕ್ಕೆ ಆಕ್ರೋಶಗೊಂಡ ಕೆಲವರು, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿದರು. ಅಶಿಸ್ತಿನ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಮತ್ತು ಲಾಠಿ ಚಾರ್ಜ್ ಮಾಡಿದರು. ಘಟನೆಯಲ್ಲಿ ಜುನಾಗಢ ಡಿವೈಎಸ್ಪಿ, ಮೂವರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
“ಗಲಭೆಯಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಸಾವಿನ ಬಗ್ಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಪೊಲೀಸ್ ತಂಡಗಳ ಕೂಂಬಿಂಗ್ ಕಾರ್ಯಾಚರಣೆಯಲ್ಲಿ 174 ಜನರನ್ನು ಸುತ್ತುವರೆದು ಬಂಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಘರ್ಷಣೆಯಲ್ಲಿ ಭಾಗಿಯಾಗಿರುವ ಎಲ್ಲರನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ರವಿತೇಜ ವಾಸಮಶೆಟ್ಟಿ ಹೇಳಿದ್ದಾರೆ.