ಕಾನೂನು ಕೈಗೆತ್ತಿಕೊಳ್ಳುವವರ, ಸಂವಿಧಾನ ಬಾಹಿರ ಕೃತ್ಯ ನಡೆಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಮ್ಮ ಪ್ರಕಾರ ತುರ್ತುಪರಿಸ್ಥಿತಿಯಾದರೆ ನಿಮ್ಮ ವಿವೇಚನಾ ಶಕ್ತಿಯ ಬಗ್ಗೆ ಅನುಕಂಪವಿದೆ.
ಬೆಂಗಳೂರು: ಬೆಳಗಾವಿಯಲ್ಲಿ ಸೋಮವಾರ ಬಿಜೆಪಿ ಮುಖಂಡರ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಕಾಂಗ್ರೆಸ್ಸಿಗೆ ಎರಡೇ ದಿನದಲ್ಲಿ ಅಧಿಕಾರದ ಅಮಲು ಹೆಚ್ಚಾಗಿದೆ. ಜನರ ವಾಕ್ ಸ್ವಾತಂತ್ರ್ಯ ಕಿತ್ತುಕೊಂಡ ರೀತಿಯಲ್ಲಿ ಮಂತ್ರಿಗಳು ಮಾತನಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ತಲೆದೋರಬಹುದು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ‘ಬೊಮ್ಮಾಯಿಯವರೇ, ಯಾವ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದೀರಿ? ತನ್ನ ರಾಜಕೀಯ ವಿರೋಧಿಗಳನ್ನ ಮಟ್ಟ ಹಾಕಲು ತನಿಖಾ ಏಜೇನ್ಸಿಗಳನ್ನು, ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಾಕ್ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವ ನಿಮ್ಮ ಮೋದಿ ಸರ್ಕಾರದ ನಡೆ ನಿಮಗೆ ತುರ್ತುಪರಿಸ್ಥಿತಿ ಎಂದು ಅನ್ನಿಸುತ್ತಿಲ್ಲವೇ?
ಅಧಿಕಾರ ಕಳೆದುಕೊಂಡಿರುವ BJPಯವರು ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದಾರೆ. ಬೊಮ್ಮಾಯಿಯವರೇ ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ತುರ್ತು ಪರಿಸ್ಥಿತಿಯ ಲಕ್ಷಣವಲ್ಲ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಜವಬ್ಧಾರಿಯುತ ಸರ್ಕಾರದ ಕರ್ತವ್ಯ. ನಮ್ಮ ಸರ್ಕಾರ ಮಾಡುತ್ತಿರುವುದು ಅದನ್ನೆ.
ಬೊಮ್ಮಾಯಿಯವರೇ ಒಂದು ಜವಾಬ್ಧಾರಿಯುತ ಸರ್ಕಾರವಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮ ಕರ್ತವ್ಯ. ಕಾನೂನು ಕೈಗೆತ್ತಿಕೊಳ್ಳುವವರ, ಸಂವಿಧಾನ ಬಾಹಿರ ಕೃತ್ಯ ನಡೆಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಮ್ಮ ಪ್ರಕಾರ ತುರ್ತುಪರಿಸ್ಥಿತಿಯಾದರೆ ನಿಮ್ಮ ವಿವೇಚನಾ ಶಕ್ತಿಯ ಬಗ್ಗೆ ಅನುಕಂಪವಿದೆ. ನೀವು ಕಾನೂನು ಉಲ್ಲಂಘಿಸುವವರ ಪರವೇ? ಎಂದು ವಾಗ್ದಾಳಿ ನಡೆಸಿದ್ದಾರೆ.