• ಡಿ.ಸಿ.ಪ್ರಕಾಶ್
ಜರ್ಮನಿಯಲ್ಲಿ ತೀವ್ರ ಬಲಪಂಥೀಯ ನೀತಿಗಳನ್ನು ಹರಡುತ್ತಿದ್ದ ಪ್ರಸಿದ್ಧ ‘ಕಾಂಪ್ಯಾಕ್ಟ್’ (Compact) ಪತ್ರಿಕೆಯನ್ನು ಆ ದೇಶದ ಸರ್ಕಾರ ನಿಷೇಧಿಸಿದೆ. 2010ರಲ್ಲಿ ಪ್ರಾರಂಭವಾದ ಈ ನಿಯತಕಾಲಿಕವು ಪ್ರತಿ ತಿಂಗಳು 40,000 ಪ್ರತಿಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಲಾಗುತ್ತದೆ.
ಈ ಹಿನ್ನೆಲೆಯಲ್ಲಿ, ದೇಶದ ಆಂತರಿಕ ಸಚಿವಾಲಯವು ಕಾಂಪ್ಯಾಕ್ಟ್ ನಿಯತಕಾಲಿಕವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, “ಸಾರ್ವಜನಿಕರಲ್ಲಿ ಜನಾಂಗೀಯ ದ್ವೇಷವನ್ನು ಹುಟ್ಟುಹಾಕಲು ನಿಯತಕಾಲಿಕವು ಜರ್ಮನ್ ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಿದೆ” ಎಂದು ಹೇಳಿದೆ.
ಕಳೆದ ಮೇ ತಿಂಗಳಿನಲ್ಲಿ ಪ್ರಕಟವಾದ ನಿಯತಕಾಲಿಕೆಯಲ್ಲಿ ಜರ್ಮನ್ ಆಡಳಿತವನ್ನು ಕಿತ್ತೊಗೆಯುವ ಲೇಖನವನ್ನು ಬರೆಯಲಾಗಿತ್ತು ಎಂದು ವರದಿಯಾಗಿದೆ. ಅದರ ಆಧಾರದ ಮೇಲೆ ದೇಶದಲ್ಲಿರುವ ಕಂಪನಿಯ ಶಾಖೆಗಳ ಮೇಲೆ ದಾಳಿ ನಡೆಸಲಾಗಿದೆ. ಅದರಂತೆಯೇ ಅಂತಹ ನಿಷೇಧವನ್ನು ಸರ್ಕಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಈ ಕುರಿತು ಮಾತಣಾಡಿರುವ ಜರ್ಮನಿಯ ಆಂತರಿಕ ಸಚಿವೆ ನ್ಯಾನ್ಸಿ ಫೇಸರ್ (Nancy Faeser), “ಇದು ಬಲಪಂಥೀಯ ಉಗ್ರಗಾಮಿ ಪಕ್ಷದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಪತ್ರಿಕೆಯು ಯಹೂದಿಗಳು, ವಲಸೆಯ ಇತಿಹಾಸ ಹೊಂದಿರುವ ಜನರು ಮತ್ತು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ವಿರುದ್ಧ ದ್ವೇಷವನ್ನು ಪ್ರಚೋದಿಸುತ್ತದೆ.
ನಿರಾಶ್ರಿತರು ಮತ್ತು ವಲಸಿಗರ ವಿರುದ್ಧ ದ್ವೇಷ ಮತ್ತು ಹಿಂಸೆಯ ವಾತಾವರಣವನ್ನು ಉತ್ತೇಜಿಸುತ್ತದೆ. ನಮ್ಮ ಪ್ರಜಾಪ್ರಭುತ್ವ ಸರ್ಕಾರವನ್ನು ಸೋಲಿಸಲು ಬಯಸುವ ಬುದ್ಧಿಜೀವಿಗಳ ವಿರುದ್ಧವೂ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂಬುದನ್ನು ಈ ನಿಷೇಧವು ತೋರಿಸುತ್ತದೆ” ಎಂದು ಹೇಳಿದ್ದಾರೆ.
ಈಗಾಗಲೇ, ಕಂಪನಿಯ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪುಟಗಳನ್ನು ದ್ವೇಷಪೂರಿತ ಕಾಮೆಂಟ್‌ಗಳಿಗಾಗಿ 2020ರಲ್ಲಿ ನಿಷೇಧಿಸಲಾಗಿದ್ದು, ಈಗ ‘ಎಕ್ಸ್’ ಸೈಟ್ ಪುಟವನ್ನು ಸಹ ನಿರ್ಬಂಧಿಸಲಾಗಿದೆ. ಜರ್ಮನಿಯಲ್ಲಿ ದೇಶದ ಸರ್ಕಾರವು ಬಲಪಂಥೀಯ ಮಾಧ್ಯಮವನ್ನು ನಿಷೇಧಿಸಿರುವುದು ಜಗತ್ತನ್ನು ಬೆಚ್ಚಿಬೀಳಿಸಿದೆ.
ಕಳೆದ ತಿಂಗಳು ಯುರೋಪಿಯನ್ ಪಾರ್ಲಿಮೆಂಟ್‌ಗೆ ನಡೆದ ಚುನಾವಣೆಯಲ್ಲಿ ಬಲಪಂಥೀಯ AfD ಪ್ರಬಲವಾದ ಗೆಲುವು ಸಾದಿಸಿತ್ತು. ಅಲ್ಲದೆ, ಕಳೆದ ಸೆಪ್ಟೆಂಬರ್‌ನಲ್ಲಿ ಪೂರ್ವ ಜರ್ಮನಿಯ ಮೂರು ರಾಜ್ಯಗಳ ಚುನಾವಣೆಗಳಲ್ಲಿ ಅದು ಮುನ್ನಡೆ ಸಾಧಿಸಿತ್ತು ಎಂಬುದು ಗಮನಾರ್ಹ.