ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Modi Archives » Page 3 of 5 » Dynamic Leader
November 23, 2024
Home Posts tagged Modi (Page 3)
ರಾಜಕೀಯ

ಡಿ.ಸಿ.ಪ್ರಕಾಶ್

ಇಸ್ಲಾಂ ವಿರೋಧದ ನಂತರ ಬಿಜೆಪಿ ವರ್ಣ ಆಧಾರಿತ ರಾಜಕಾರಣವನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡಿದೆ!

ಮುಸ್ಲಿಮರು ಮತ್ತು ಅಲ್ಪಸಂಖ್ಯಾತರನ್ನು ದಮನ ಮಾಡಿ, ವಿಭಜನೆಯನ್ನು ಸೃಷ್ಟಿಸಿ ಆ ಮೂಲಕ ಬಹುಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯುವುದು ಆರ್.ಎಸ್.ಎಸ್ ಸಿದ್ಧಾಂತದ ಬಿಜೆಪಿಯ ಉದ್ದೇಶವಾಗಿದೆ. ಹೀಗಾಗಿ ಜಾತಿ ತಾರತಮ್ಯ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯದ ಬಗ್ಗೆ ಮಾತನಾಡುವುದು ಬಿಜೆಪಿಯ ಮೂಲ ರಚನೆಯಾಗಿದೆ.

ಆದರೂ ಇಂತಹ ಚಟುವಟಿಕೆಗಳು ಇಲ್ಲಿಯವರೆಗೆ ಗುಟ್ಟಾಗಿ ನಡೆಯುತ್ತಿದ್ದವು. ಆದರೆ ತನ್ನ 10 ವರ್ಷಗಳ ಆಡಳಿತದಲ್ಲಿ ಹಲವು ವೈಫಲ್ಯಗಳನ್ನು ಕಂಡ ಮೋದಿ ಸರಕಾರ, ಈ ಬಾರಿ ಖಂಡಿತವಾಗಿಯೂ ಸೋಲಲಿದೆ ಎಂದು ಅರಿವಾಗಿ, ನಿರಂತರ ದ್ವೇಷ ಅಭಿಯಾನಗಳನ್ನು ಮುನ್ನಡೆಸುತ್ತಿದೆ. ಈ ನಿಟ್ಟಿನಲ್ಲಿ, ಮೋದಿ ಈಗ ಮುಸ್ಲಿಮರನ್ನು ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಹಿರಂಗವಾಗಿ ಟೀಕಿಸುತ್ತಿದ್ದಾರೆ.

ಬಿಜೆಪಿ ನಾಯಕರು, ಮುಸ್ಲಿಮರು ಎಂದರೇ ಶತ್ರುಗಳು ಎಂಬಂತಹ ವರ್ತನೆಯನ್ನು ಬಿತ್ತುತ್ತಿದ್ದಾರೆ. ಇದರಿಂದಾಗಿ ಮುಸ್ಲಿಮರ ಅಸ್ತಿತ್ವವೇ ಪ್ರಶ್ನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು, ಮುಸ್ಲಿಮರ ಮೇಲೆ ದ್ವೇಷ ಸಾಧಿಸಿದರೆ ಸಾಕಾಗದು, ಜನಾಂಗೀಯ ದ್ವೇಷವನ್ನು ಬಿತ್ತಿದರೆ ಮಾತ್ರ ಮತಗಳು ಹೆಚ್ಚಾಗುತ್ತವೆ ಎಂದು ಭಾವಿಸಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಮೋದಿ ಅವರು, ‘ಕಾಂಗ್ರೆಸ್ ಪಕ್ಷವು, ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬಣ್ಣದ ಕಾರಣಕ್ಕಾಗಿಯೇ ಮತ ಹಾಕಲಿಲ್ಲ’ ಎಂಬ ಹೊಸ ಸುಳ್ಳನ್ನು ಉಗುಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ‘ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಸೂಚಿಸಿದಂತೆಯೇ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೂಡ ಮತ್ತೊಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬೆಂಬಲಿಸಿದವು, ಅದಕ್ಕೂ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ, ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಏಕೆ ಆಹ್ವಾನಿಸಲಿಲ್ಲ? ಅವರ ಬಣ್ಣದ ಕಾರಣದಿಂದಲೇ ಎಂಬ ಪ್ರಶ್ನೆಗಳು ಮೋದಿಯತ್ತ ಹರಿದಾಡುತ್ತಿವೆ. ಇಂತಹ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಚುನಾವಣಾ ಆಯೋಗ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ಟೀಕೆಗೆ ಗುರಿಯಾಗಿದೆ.

ಲೇಖನ

ಡಿ.ಸಿ.ಪ್ರಕಾಶ್ ಸಂಪಾದಕರು

ಭಾರತದಾದ್ಯಂತ ಹರಡಿ ಎಲ್ಲೆಡೆ ವ್ಯಾಪಿಸಿರುವ ರೈಲು ಹಳಿಗಳಿಗೆ ಇಲ್ಲಿ ದೊಡ್ಡ ಇತಿಹಾಸವಿದೆ. ಶ್ರೀಮಂತರು, ಮಧ್ಯಮ ವರ್ಗದವರು ಮಾತ್ರವಲ್ಲದೆ ಬಡವರೂ ಸಹ ಕಡಿಮೆ ದರದಲ್ಲಿ ಭಾರತದ ಯಾವುದೇ ಭಾಗಕ್ಕೆ ಪ್ರಯಾಣಿಸಲು ರೈಲುಗಳು ಸಹಾಯ ಮಾಡುತ್ತವೆ.

ಆದರೆ, ಕಳೆದ ಕೆಲವು ವರ್ಷಗಳಿಂದ ರೈಲು ದರವನ್ನು ಹೆಚ್ಚಿಸುವುದು ಮತ್ತು ಬಡವರು ಪ್ರಯಾಣಿಸಬಹುದಾದ ಬೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮುಂತಾದ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಇದರಿಂದ ರೈಲು ಪ್ರಯಾಣವನ್ನೇ ಅವಲಂಬಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನರು ತೀವ್ರ ತೊಂದರೆಗೀಡಾಗಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗಷ್ಟೇ ರಾಹುಲ್ ಗಾಂಧಿ ತಮ್ಮ ಎಕ್ಸ್ ಪೇಜ್ ನಲ್ಲಿ ಸಾಮಾನ್ಯ ಬಡವರ ಪಾಲಿಗೆ ರೈಲು ಪ್ರಯಾಣ ಅಷ್ಟಕ್ಕಷ್ಟೆ ಆಗುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಅದರಲ್ಲಿ, “ಶ್ರೀಮಂತರನ್ನು ಗಮನದಲ್ಲಿಟ್ಟುಕೊಂಡೇ ಭಾರತೀಯ ರೈಲ್ವೇ ತನ್ನ ನೀತಿಗಳನ್ನು ವಿನ್ಯಾಸಗೊಳಿಸುತ್ತದೆ. ಇದರಲ್ಲಿ ಬಡವರನ್ನು ನಿರ್ಲಕ್ಷಿಸಲಾಗುತ್ತಿದೆ. ರೈಲ್ವೇ ಪ್ರಯಾಣ ದರವನ್ನು ಪ್ರತಿ ವರ್ಷ ಶೇ.10ರಷ್ಟು ಹೆಚ್ಚಿಸಲಾಗುತ್ತಿದೆ. ಭಾರತೀಯ ರೈಲ್ವೇ ಡೈನಾಮಿಕ್ ದರದ ಹೆಸರಿನಲ್ಲಿ ಪ್ರಯಾಣಿಕರಿಂದ ಭಾರಿ ಮೊತ್ತವನ್ನು ಪಡೆಯುತ್ತಿದೆ. ಟಿಕೆಟ್ ರದ್ದತಿಯ ದಂಡವನ್ನೂ ಹೆಚ್ಚಿಸಲಾಗಿದೆ. ರೈಲಿನಲ್ಲಿ ಶ್ರೀಮಂತರೇ ಪ್ರಯಾಣಿಸುವ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಕೊರೋನಾ ಅವಧಿಯಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗಿದ್ದ ಪ್ರಯಾಣ ದರದ ರಿಯಾಯಿತಿಯನ್ನೂ ಭಾರತೀಯ ರೈಲ್ವೆ ಇಲಾಖೆ ಹಿಂಪಡೆದಿದೆ. ಇದನ್ನು ತಮ್ಮ ಎಕ್ಸ್ ಪೇಜ್ ನಲ್ಲಿ ಉಲ್ಲೇಖಿಸಿರುವ ರಾಹುಲ್ ಗಾಂಧಿ, “ಕಳೆದ ಮೂರು ವರ್ಷಗಳಲ್ಲಿ ರೈಲ್ವೇ ಇಲಾಖೆಯು ಹಿರಿಯ ನಾಗರಿಕರಿಗೆ ನೀಡಲಾಗಿದ್ದ ಪ್ರಯಾಣ ದರ ರಿಯಾಯಿತಿಯನ್ನು ಕಸಿದುಕೊಳ್ಳುವ ಮೂಲಕ 3,700 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಸುಸ್ಥಿತಿಯಲ್ಲಿರುವವರಿಗೆ ಎಸಿ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಬಡವರ ಸಾಮಾನ್ಯ ಕೋಚ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.

“ರೈಲ್ವೇ ಕೋಚ್‌ಗಳ ಉತ್ಪಾದನೆಯಲ್ಲಿ, ಎಸಿ ಕೋಚ್‌ಗಳನ್ನು ಸಾಮಾನ್ಯ ಕೋಚ್‌ಗಳಿಗಿಂತ ಮೂರು ಪಟ್ಟು ಹೆಚ್ಚು ಉತ್ಪಾದಿಸಲಾಗುತ್ತದೆ. ಹೀಗೆ ಕೇವಲ ರೈಲುಗಳನ್ನೇ ತಮ್ಮ ಪ್ರಯಾಣಕ್ಕೆ ಅವಲಂಬಿಸಿರುವ ಶೇ.80ರಷ್ಟು ಜನರಿಗೆ ಭಾರತೀಯ ರೈಲ್ವೇ ದ್ರೋಹ ಬಗೆಯುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತೀಯ ರೈಲ್ವೇ ಬಗ್ಗೆ ರಾಹುಲ್ ಗಾಂಧಿ ಹೇಳಿರುವ ಮಾತುಗಳು 100% ಸತ್ಯ ಎಂದು ರೈಲಿನಲ್ಲಿ ನಿತ್ಯ ಪ್ರಯಾಣಿಸುವವರು ಹೇಳುತ್ತಾರೆ. ಪ್ರಧಾನಿ ಮೋದಿ ಅವರು ಪ್ರತಿ ರೈಲು ನಿಲ್ದಾಣಕ್ಕೆ ತೆರಳಿ ‘ವಂದೇ ಭಾರತ್’ ರೈಲುಗಳನ್ನು ಉದ್ಘಾಟಿಸಿದ್ದಾರೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬುಲೆಟ್ ಟ್ರೈನ್ ಭರವಸೆ ನೀಡಿದೆ. ಆದರೆ ರೈಲು ಪ್ರಯಾಣವನ್ನೇ ಹೆಚ್ಚು ಅವಲಂಬಿಸಿರುವ ಬಡ ಜನರ ಸೌಲಭ್ಯಗಳ ಬಗ್ಗೆ ಆಡಳಿತಗಾರರಿಗೆ ಯಾವುದೇ ಕಾಳಜಿ ಇಲ್ಲ.

ಪ್ರಮುಖ ನಗರಗಳ ನಡುವೆ ಓಡುವ ‘ವಂದೇ ಭಾರತ್’ ರೈಲುಗಳನ್ನು ಭಾರತೀಯ ರೈಲ್ವೇ ಕ್ಷೇತ್ರದ ಪ್ರಗತಿಯ ಸಂಕೇತವೆಂದು ಆಡಳಿತಗಾರರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಈ ರೈಲಿನ ಬೋಗಿಗಳು ಸಂಪೂರ್ಣ ಹವಾನಿಯಂತ್ರಿತವಾಗಿದ್ದು ವಿಮಾನದಂತೆಯೇ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳು, ವೈ-ಫೈ, ಜಿಪಿಎಸ್, ಆಡಿಯೋ, ವಿಡಿಯೋ, ಆಧುನಿಕ ಶೌಚಾಲಯಗಳು, ಸ್ವಿವೆಲ್ ಆಸನಗಳು, ಟಚ್ ಸ್ಕ್ರೀನ್‌ನಂತಹ ಆಧುನಿಕ ಸೌಲಭ್ಯಗಳಿವೆ. ‘ಎಸಿ ಚೇರ್ ಕಾರ್’ ಮತ್ತು ‘ಎಕ್ಸಿಕ್ಯುಟಿವ್ ಚೇರ್ ಕಾರ್’ ಎಂಬ ಎರಡು ರೀತಿಯ ಕೋಚ್‌ಗಳನ್ನು ಹೊಂದಿರುವ ವಂದೇ ಭಾರತ್ ರೈಲು ಕೇವಲ ಶ್ರೀಮಂತರಿಗೆ ಮಾತ್ರ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಬಸ್ ಪ್ರಯಾಣ ದರ ರೈಲು ದರಕ್ಕಿಂತ ಹಲವು ಪಟ್ಟು ಹೆಚ್ಚಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದ ಬಹುತೇಕರು ರೈಲು ಪ್ರಯಾಣಕ್ಕೆ ಆದ್ಯತೆ ನೀಡುತ್ತಾರೆ. ಆದರೆ ಎಲ್ಲಾ ರೈಲುಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಸಾಮಾನ್ಯ ಬೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. 2020ರಲ್ಲಿ, ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಲಾಕ್ ಡೌನ್ ಘೋಷಿಸಿದ್ದ ಸಂದರ್ಭದಲ್ಲಿ, ರೈಲ್ವೆ ಆಡಳಿತವು ಹಲವಾರು ಕ್ರಮಗಳನ್ನು ತೆಗೆದುಕೊಂಡಿತು. ಭಾರತದ ಎಲ್ಲಾ ರೈಲುಗಳಲ್ಲಿ ಕಾಯ್ದಿರಿಸಿದ ಬೋಗಿಗಳನ್ನು ಮಾತ್ರ ಓಡಿಸುವುದು ಮತ್ತು ಹಿರಿಯ ನಾಗರಿಕರಿಗೆ ಪ್ರಯಾಣ ದರದ ರಿಯಾಯಿತಿಯನ್ನು ರದ್ದುಗೊಳಿಸುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಲಾಯಿತು.

ಆ ಸಮಯದಲ್ಲಿ, ಎಲ್ಲಾ ರೈಲು ನಿಲ್ದಾಣಗಳಲ್ಲಿ ನಿಲ್ಲಬಹುದಾದ ಅನೇಕ ‘ಲೋಕಲ್’ ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತಿಸಲಾಯಿತು. ಎಕ್ಸ್‌ಪ್ರೆಸ್ ರೈಲುಗಳನ್ನು ಸೂಪರ್ ಫಾಸ್ಟ್ (Super Fast) ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತಿಸಲಾಯಿತು. ಅಲ್ಲದೆ, ಕೊರೋನಾ ಹೆಸರನ್ನು ಬಳಸಿಕೊಂಡು, ಭಾರತದ ಎಲ್ಲಾ ರೈಲುಗಳಲ್ಲಿ ಕಾಯ್ದಿರಿಸದ ಸಾಮಾನ್ಯ ಕೋಚ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಯಿತು. ಬದಲಾಗಿ, ಎಸಿ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಭಾರತೀಯ ರೈಲ್ವೇ ಬಡವರಿಗೆ ವಂಚಿಸುತ್ತಿದೆ ಎಂದು ರೈಲಿನಲ್ಲಿ ನಿತ್ಯ ಸಂಚರಿಸುವ ಜನರ ಯಾತನೆಯಾಗಿದೆ. ಇದನ್ನೇ ರಾಹುಲ್ ಗಾಂಧಿ ಎತ್ತಿ ತೋರಿಸಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ.

2014ರಲ್ಲಿ 400 ರೂಪಾಯಿ ಇದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ 1000 ರೂಪಾಯಿ ದಾಟಿದೆ ಎಂದು ವಿರೋಧ ಪಕ್ಷಗಳು ಹೇಳಿದಾಗ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ. ಅದೇ ರೀತಿ ಪ್ರೀಮಿಯಂ ಶುಲ್ಕ, ಡೈನಾಮಿಕ್ ಶುಲ್ಕ ಹೀಗೆ ಹಲವು ಹೆಸರುಗಳಲ್ಲಿ ಹಣ ಸುಲಿಗೆಯಾಗುತ್ತಿರುವಾಗ ಪ್ರಮುಖ ವಿರೋಧ ಪಕ್ಷಗಳು ಅದರ ಬಗ್ಗೆ ಮಾತನಾಡುವುದು ಅನಿವಾರ್ಯವಾಗುತ್ತದೆ. ಅಲ್ಲದೆ, ಮೆಟ್ರೋ, ವಂದೇ ಭಾರತ್ ಮತ್ತು ಬುಲೆಟ್ ರೈಲುಗಳ ಹೆಸರುಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವ ಅದೇ ಸಂದರ್ಭದಲ್ಲಿ ಬಡವರು ಬಳಸುವ ರೈಲುಗಳ ಹೊಸ ಯೋಜನೆಗಳನ್ನೂ ಸೇರಿಸಬೇಕು.

ರಾಹುಲ್ ಗಾಂಧಿ ಅವರ ಭಾಷಣ ಚುನಾವಣಾ ಅಖಾಡದಲ್ಲಿ ಸದ್ದು ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ದೇಶ

ನವದೆಹಲಿ: ದೇವೇಗೌಡರ ಪುತ್ರನ ಅಶ್ಲೀಲ ವಿಡಿಯೋ ವಿಚಾರದಲ್ಲಿ ಪ್ರಧಾನಿ ಮೋದಿ ಮೌನವಾಗಿರುವುದೇಕೆ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಗಾಂಧಿ ಪ್ರಶ್ನೆ ಎತ್ತಿದ್ದಾರೆ.

ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಮಗ ರೇವಣ್ಣ, ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವೀಡಿಯೋ ಪ್ರಕರಣ ರೂಪ ಪಡೆದುಕೊಂಡಿದೆ. ವಿಚಾರಣೆಗೆ ಹೆದರಿ ಅವರು ಜರ್ಮನಿಗೆ ಪಲಾಯನ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ವಿಶೇಷ ತನಿಖಾ ಸಮಿತಿ (SIT) ಯನ್ನು ರಚಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಿಯಾಂಕಾ ಪ್ರಕಟಿಸಿರುವ ಪೋಸ್ಟ್‌ನಲ್ಲಿ, “10 ದಿನಗಳ ಹಿಂದೆ ಪ್ರಧಾನಿ ಕೈಕುಲುಕಿ, ಭುಜ ತಟ್ಟಿ ಕರ್ನಾಟಕ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ವ್ಯಕ್ತಿ ಈಗ ದೇಶ ಬಿಟ್ಟು ತಲೆಮರೆಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಬದುಕನ್ನು ಹಾಳು ಮಾಡಿದ್ದಾರೆ.

ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಮಾಡಿದ ಅಪರಾಧಗಳನ್ನು ಕೇಳಿದರೆ ಹೃದಯ ಕಂಪಿಸುತ್ತದೆ. ಈ ಬಗ್ಗೆ ಪ್ರಧಾನಿ ಮೋದಿ ಬಾಯಿ ತೆರೆಯುತ್ತಾರಾ? ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದು ಏಕೆ? ಎಂದು ಪ್ರಧಾನಿ ಮೋದಿಯನ್ನು ಪ್ರಿಯಾಂಕಾ ವಾದ್ರಾ ಗಾಂಧಿ ಪ್ರಶ್ನಿಸಿದ್ದಾರೆ.

ರಾಜಕೀಯ

“ಮೋದಿಯವರು 16 ಲಕ್ಷ ಕೋಟಿ ರೂಪಾಯಿಗಳಷ್ಟು ಜನರ ಹಣವನ್ನು 5 ಶ್ರೀಮಂತರಿಗೆ ನೀಡಿದ್ದಾರೆ. ಅದರಲ್ಲಿ ಒಂದಿಷ್ಟು ಹಣ ಪಡೆದು ಶೇ.90ರಷ್ಟು ಜನರಿಗೆ ನೀಡುತ್ತೇವೆ.” – ರಾಹುಲ್ ಗಾಂಧಿ 

ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಜನರ ಆಸ್ತಿ ಕಿತ್ತುಕೊಳ್ಳುತ್ತಿದೆ ಎಂದು ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳನ್ನು ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆಯನ್ನು ನೋಡೋಣ.

ಛತ್ತೀಸ್‌ಗಢದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,

“ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಕಡಿತಗೊಳಿಸಿ, ಅದನ್ನು ಕಿತ್ತುಕೊಂಡು ಕಾಂಗ್ರೆಸ್‌ ತನ್ನ ಬೆಂಬಲಿಗರಿಗೆ ನೀಡಲಿದೆ. ಅಂಬೇಡ್ಕರ್ ಅವರು ತಂದಿದ್ದ ಕಾಯಿದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಲಾದ ಅಧಿಕಾರವನ್ನು ತೆಗೆದುಹಾಕುತ್ತದೆ.” ಎಂದು ಹೇಳಿದರು.

ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ,

“ಯಾವುದೇ ಅಧಿಕಾರ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಅಥವಾ ಪಂಗಡವಿಲ್ಲ. ಉನ್ನತ ಹುದ್ದೆಯಲ್ಲೂ ಅವರಿಲ್ಲ. ಮಾಧ್ಯಮಗಳಲ್ಲಿ, ಆಸ್ಪತ್ರೆಗಳಲ್ಲಿ, ದೊಡ್ಡ ಕಂಪನಿಗಳಲ್ಲಿ ಎಲ್ಲಿ ನೋಡಿದರೂ ಅವರು ಕಾಣುವುದಿಲ್ಲ. ಅಂದರೆ ಶೇಕಡ 90ರಷ್ಟು ಮಂದಿ ಇಲ್ಲ.” ಎಂದರು.

ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,

“ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ, ದೇಶದ ಪ್ರತೊಯೊಂದು ಮನೆಯನ್ನು, ಅಲಮಾರಿಯನ್ನು, ಪ್ರತಿಯೊಬ್ಬ ವ್ಯಕ್ತಿಯನ್ನು ಎಕ್ಸ್-ರೇ ಮಾಡಿ ಅವರು ಹೊಂದಿರುವ ಅಲ್ಪ ಸ್ವಲ್ಪ ಆಸ್ತಿಯ ಮೇಲೂ ಕಾಂಗ್ರೆಸ್ ತೆರಿಗೆ ವಿಧಿಸುತ್ತದೆ.”

ರಾಹುಲ್ ಗಾಂಧಿ:
“ನಮ್ಮ ಚುನಾವಣಾ ಪ್ರಣಾಳಿಕೆಯನ್ನು ಒಮ್ಮೆ ಚೆನ್ನಾಗಿ ನೋಡಿ. ಇದು ಒಳ್ಳೆಯದು ಎಂದು ನಿಮಗೆ ಅನಿಸುತ್ತದೆ. ಅದರಲ್ಲಿ ಎಕ್ಸ್-ರೇ ಇದೆ. ಅದು ಏನಂದರೆ, ಮೋದಿಯವರು 16 ಲಕ್ಷ ಕೋಟಿ ರೂಪಾಯಿಗಳಷ್ಟು ಜನರ ಹಣವನ್ನು 5 ಶ್ರೀಮಂತರಿಗೆ ನೀಡಿದ್ದಾರೆ. ಅದರಲ್ಲಿ ಒಂದಿಷ್ಟು ಹಣ ಪಡೆದು ಶೇ.90ರಷ್ಟು ಜನರಿಗೆ ನೀಡುತ್ತೇವೆ.”

ನರೇಂದ್ರ ಮೋದಿ:
“ನೀವು ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ನಿಮ್ಮ ಮಕ್ಕಳು ಅನುಭವಿಸಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಅದನ್ನು ಕಸಿದುಕೊಳ್ಳುತ್ತದೆ. ಭ್ರಷ್ಟಾಚಾರವೂ ಮಾಡುತ್ತದೆ. ಭ್ರಷ್ಟಾಚಾರವೇ ಕಾಂಗ್ರೆಸ್ ಮಂತ್ರ. ಅವರು ಸತ್ತರೂ ಅಥವಾ ಬದುಕಿದ್ದರೂ ಅದನ್ನು ಮಾಡುತ್ತಾರೆ.”

ರಾಹುಲ್ ಗಾಂಧಿ:
“ನಾನು ನಿಮಗೆ ಮೊದಲು ಹೇಳಿದಂತೆ, ಕಾಂಗ್ರೆಸ್ ಪ್ರಣಾಳಿಕೆ ರಾಜಕೀಯಕ್ಕಾಗಿ ಅಲ್ಲ. ಅದೇ ನಮ್ಮ ಜೀವನದ ಗುರಿ. ಇದು ನಮ್ಮ ಗ್ಯಾರಂಟಿ. ನೀವು ಬರೆದಿಟ್ಟುಕೊಳ್ಳಿ. ನಾವು ಇದನ್ನು ಸಾಧಿಸುತ್ತೇವೆ.”

ಹೀಗೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಮಾತಿನ ಸಮರದಲ್ಲಿ ತೊಡಗಿದ್ದಾರೆ.

ರಾಜಕೀಯ

ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯು 45 ಸಂಶಯಾಸ್ಪದ ಕಂಪನಿಗಳಿಂದ 1,068 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ನಿನ್ನೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಜಾಸ್ಮಿನ್ ಶಾ ಅವರು, “ಬಿಜೆಪಿಗೆ 45 ಸಂಶಯಾಸ್ಪದ ಕಂಪನಿಗಳು ರೂ.1,068 ಕೋಟಿಯವರೆಗೆ ದೇಣಿಗೆ ನೀಡಿದೆ. ಅವು ನಷ್ಟದ ಕಂಪನಿಗಳಾಗಿವೆ. ಅಥವಾ ಅವರು ತೆರಿಗೆಗಳನ್ನು ಪಾವತಿಸದವರು ಅಥವಾ ಲಾಭಕ್ಕಿಂತ ಹೆಚ್ಚಾಗಿ ದೇಣಿಗೆ ನೀಡಿದವರಾಗಿದ್ದಾರೆ.

ಏಳು ವರ್ಷಗಳಲ್ಲಿ 33 ಕಂಪನಿಗಳು ಒಟ್ಟು ಒಂದು ಲಕ್ಷ ಕೋಟಿ ರೂಪಾಯಿಯವರೆಗೆ ನಷ್ಟ ಅನುಭವಿಸಿದ ಕಂಪನಿಗಳಾಗಿರುತ್ತವೆ. ಈ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 450 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿರುತ್ತವೆ. ಈ ಪೈಕಿ 17 ಕಂಪನಿಗಳು ಶೂನ್ಯ ತೆರಿಗೆ ಅಥವಾ ಋಣಾತ್ಮಕ ತೆರಿಗೆ ಪಾವತಿಸಿದ ಕಂಪನಿಗಳಾಗಿವೆ.

ಇದಲ್ಲದೆ, ಈ ಕಂಪನಿಗಳು ತೆರಿಗೆ ವಿನಾಯಿತಿಗಳನ್ನು ಸಹ ಪಡೆದಿರುತ್ತವೆ. ಅಲ್ಲದೆ, ಆರು ಕಂಪನಿಗಳು ಬಿಜೆಪಿಗೆ 600 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿವೆ. ಆ ಮೊತ್ತವು ಆ ಕಂಪನಿಗಳ ಲಾಭಕ್ಕಿಂತ ಹೆಚ್ಚಿನ ಮೊತ್ತವಾಗಿರುತ್ತದೆ. ಇನ್ನೊಂದು ಕಂಪನಿ ಅವರ ಲಾಭಕ್ಕಿಂತ 93 ಪಟ್ಟು ಹೆಚ್ಚು ನೀಡಿದೆ. ಮೂರು ಕಂಪನಿಗಳು 28 ಕೋಟಿ ದೇಣಿಗೆ ನೀಡಿ ಶೂನ್ಯ ತೆರಿಗೆ ಪಾವತಿಸಿವೆ. ಉದಾಹರಣೆಗೆ, ನಷ್ಟದ ನಡುವೆಯೂ ಅನೇಕ ಕಂಪನಿಗಳು ಉದಾರವಾಗಿ ಬಿಜೆಪಿಗೆ ದೇಣಿಗೆ ನೀಡಿದವು. ಅದರಲ್ಲಿ ಪ್ರಮುಖವಾದದ್ದು ಭಾರ್ತಿ ಏರ್‌ಟೆಲ್ ಕಂಪೆನಿ.

77,000 ಕೋಟಿ ನಷ್ಟ ಅನುಭವಿಸಿದರೂ ಕಂಪನಿ 200 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇದಕ್ಕೆ ಪ್ರತಿಯಾಗಿ ರೂ.8,200 ಕೋಟಿ ತೆರಿಗೆ ರಿಯಾಯಿತಿ ಪಡೆದುಕೊಂಡಿದೆ. ಇನ್ನೊಂದು ಕಂಪನಿ DLF. 7 ವರ್ಷಗಳಲ್ಲಿ 130 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಆದರೂ 25 ಕೋಟಿ ರೂಪಾಯಿ ದೇಣಿಗೆ ನೀಡಿ, 20 ಕೋಟಿ ರೂಪಾಯಿ ತೆರಿಗೆ ಲಾಭವನ್ನು ಪಡೆದುಕೊಂಡಿದೆ. ಧರಿವಾಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ 115 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿ, ಬಿಜೆಪಿಗೆ ಸುಮಾರು 24.96 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದೆ. ಈ ಕಂಪನಿಯ ನಷ್ಟ ರೂ.299 ಕೋಟಿಯಾಗಿದೆ. ಹೀಗಾಗಿ ಅವರು ಶೂನ್ಯ ತೆರಿಗೆ ಪಾವತಿಸಿದ್ದಾರೆ.

ಅದೇ ರೀತಿ ಪಿಆರ್‌ಎಲ್ ಡೆವಲಪರ್ಸ್ 20 ಕೋಟಿ ರೂಪಾಯಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, 10 ಕೋಟಿ ರೂಪಾಯಿ ದೇಣಿಗೆ ನೀಡಿ 4.7 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ. ಈ ಕಂಪನಿ 1550 ಕೋಟಿ ನಷ್ಟವನ್ನು ಅನುಭವಿಸಿದ ಕಂಪನಿಯಾಗಿದೆ. ಯುಜಿಯಾ ಫಾರ್ಮಾ ಲಿಮಿಟೆಡ್ ಶರತ್ ಚಂದ್ರ ರೆಡ್ಡಿ ಅವರ ಕಂಪನಿಯಾಗಿದೆ. 7 ವರ್ಷದಲ್ಲಿ 28 ಕೋಟಿ ನಷ್ಟ ಅನುಭವಿಸಿದ್ದರೂ ಚುನಾವಣಾ ಬಾಂಡ್ ನಿಧಿಯಾಗಿ 15 ಕೋಟಿ ನೀಡಿ, ರೂ.7.20 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.

7 ವರ್ಷದಲ್ಲಿ ರೂ.86 ಕೋಟಿ ನಷ್ಟವನ್ನು ಉಂಟುಮಾಡಿಕೊಂಡಿದ್ದ ಮೈತ್ರಾ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿ, 19 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿ, 9.99 ಕೋಟಿ ಪಾವತಿಸುವ ಮೂಲಕ ರೂ.126 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.

ಪಿರಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 10 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ಮೂಲಕ 16,376 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದರೂ 10 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಇದಕ್ಕೆ ರೂ.5178.50 ಕೋಟಿ ರೂ. ತೆರಿಗೆ ವಿನಾಯಿತಿ ಸಿಕ್ಕಿದೆ.

ಓರಿಯಂಟಲ್ ಸೌತ್ ದೆಹಲಿ ಹೊಟೇಲ್ ಪ್ರೈವೇಟ್ ಲಿಮಿಟೆಡ್ 5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದು, 5 ಕೋಟಿ ದೇಣಿಗೆಯನ್ನೂ ನೀಡಿದೆ. ಕಂಪನಿ 49 ಕೋಟಿ ನಷ್ಟವನ್ನು ಅನುಭವಿಸಿದ್ದು, ಶೂನ್ಯ ತೆರಿಗೆ ಪಾವತಿಸಿದೆ. ವಿಲೇಜ್ ಡಿ ನಂದಿ ಪ್ರೈವೇಟ್ ಲಿಮಿಟೆಡ್ ಚುನಾವಣಾ ಬಾಂಡ್‌ಗಳನ್ನು ರೂ.5 ಕೋಟಿಗೆ ಖರೀದಿಸಿದೆ. ಮತ್ತು ರೂ.48 ಕೋಟಿ ನಷ್ಟದ ಹೊರತಾಗಿಯೂ, ಸಂಪೂರ್ಣ ಮೊತ್ತವನ್ನು ದೇಣಿಗೆಯಾಗಿ ನೀಡಿದೆ.

ರೂ.167 ಕೋಟಿ ನಷ್ಟವನ್ನು ಅನುಭವಿಸಿದ ಟಕಿಡೋ ಲೀಸಿಂಗ್ ಆಪರೇಟರ್ಸ್ ಪ್ರೈವೇಟ್ ಲಿಮಿಟೆಡ್ 4 ಕೋಟಿ ಮೌಲ್ಯದ ಬಾಂಡ್ ಖರೀದಿಸಿ ಸಂಪೂರ್ಣ ಹಣವನ್ನು ನೀಡಿದೆ. ಇದಲ್ಲದೇ ಇನ್ನೂ ಹಲವು ಕಂಪನಿಗಳು ತಮ್ಮ ಲಾಭದ ಆರು ಪಟ್ಟು ಹಣವನ್ನು ಉದಾರವಾಗಿ ನೀಡಿದೆ. ಇದೆಲ್ಲವೂ ಅತ್ಯಂತ ಅನುಮಾನಾಸ್ಪದವಾಗಿದೆ. ಈ ಕಂಪನಿಗಳು ಮತ್ತು ಸಂಬಂಧಪಟ್ಟ ಬಿಜೆಪಿ ಮುಖಂಡರ ವಿರುದ್ಧ ಕೂಡಲೇ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ಬರಪರಿಹಾರ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯದ ವಿರುದ್ಧದ ನಮ್ಮ ಹೋರಾಟ ಬೀದಿಗಳಲ್ಲಿ ಮಾತ್ರವಲ್ಲ ನ್ಯಾಯಾಲಯದಲ್ಲಿಯೂ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಬರಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಬಿಜೆಪಿ  ಸರ್ಕಾರವು ಸುಪ್ರೀಂ ಕೋರ್ಟ್ ಗೆ ಕೂಡಾ ತಪ್ಪು ಮಾಹಿತಿ ನೀಡಿ ನ್ಯಾಯಾಲಯದ ಹಾದಿ ತಪ್ಪಿಸುವ ಪ್ರಯತ್ನ ಮಾಡಿರುವುದು ವಿಷಾದನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯಾಯಬದ್ಧವಾಗಿ ಕರ್ನಾಟಕಕ್ಕೆ ನೀಡಬೇಕಾಗಿರುವ ಬರಪರಿಹಾರವನ್ನು ನೀಡದೆ ಕೇಂದ್ರ ಸರ್ಕಾರ ಕಳೆದ ಐದಾರು ತಿಂಗಳುಗಳಿಂದ ಸತಾಯಿಸುತ್ತಿರುವುದನ್ನು ಕಂಡು ಬೇರೆ ದಾರಿ ಕಾಣದೆ ನ್ಯಾಯ ಕೋರಿ ನಮ್ಮ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿತ್ತು. ಇಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಅಡ್ವೋಕೇಟ್ ಜನರಲ್ ತುಷಾರ್ ಮೆಹ್ತಾ ಅವರು ಬರಪರಿಹಾರ ವಿಳಂಬಕ್ಕೆ ಕರ್ನಾಟಕ ಸರ್ಕಾರವೇ ಕಾರಣ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂಬ ಅಭಿಪ್ರಾಯ ಮೂಡುವಂತೆ ವಾದ ಮಾಡಿದ್ದಾರೆ. ಇದು ಖಂಡನೀಯ ಎಂದು ಹೇಳಿದ್ದಾರೆ.

“ಬರ ಪರಿಹಾರಕ್ಕಾಗಿ ಅವರು (ಕರ್ನಾಟಕ) ನಮ್ಮನ್ನು (ಕೇಂದ್ರ ಸರ್ಕಾರ)ವನ್ನು ಸಂಪರ್ಕಿಸಬಹುದಿತ್ತು. ಈ ಅರ್ಜಿ ಸಲ್ಲಿಸಿರುವ ಸಮಯದ ಮಹತ್ವ ನಮಗೆ ಅರ್ಥವಾಗುತ್ತದೆ. ಈ ಅರ್ಜಿಗೆ ಪ್ರತಿಕ್ರಿಯೆ ಕೋರಿ ನಮಗೆ ನೋಟೀಸ್ ನೀಡಬಾರದು. ಹಾಗೆ ಮಾಡಿದರೆ ಅದು ಸುದ್ದಿಯಾಗುತ್ತದೆ” ಎಂದು ಅಡ್ವೋಕೇಟ್ ಜನರಲ್ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕರ್ನಾಟಕ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.

ಕಳೆದ ಎರಡು ಮೂರು ತಿಂಗಳ ಅವಧಿಯಲ್ಲಿ ನಾನು ಮತ್ತೆ ಮತ್ತೆ ಹೇಳಿರುವಂತೆ ಬರಗಾಲಕ್ಕೆ ಪರಿಹಾರ ಕೋರಿ ನಮ್ಮ ಸರ್ಕಾರ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ನಷ್ಟದ ವಿವರ ಮತ್ತು ನಿರೀಕ್ಷಿತ ಪರಿಹಾರದ ಮೊತ್ತವನ್ನು ಒಳಗೊಂಡ ಮನವಿ ಪತ್ರವನ್ನು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಲ್ಲಿಸಿದ್ದೆವು. ಅದರ ನಂತರ ನಾನು ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದೆವು. ನಮ್ಮ ಉಪಮುಖ್ಯಮಂತ್ರಿಗಳು ಪ್ರತ್ಯೇಕವಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದರು ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಹೀಗಿದ್ದರೂ ಕರ್ನಾಟಕ ಸರ್ಕಾರ ವಿಳಂಬವಾಗಿ ಮನವಿ ಸಲ್ಲಿಸಿದೆ ಎಂದು ಕೇಂದ್ರ ಹಣಕಾಸು ಸಚಿವರು ಮತ್ತು ಗೃಹಸಚಿವರು ಯಾವ ಮುಜುಗರ ಇಲ್ಲದೆ ಸುಳ್ಳು ಹೇಳುತ್ತಾ ಬಂದಿದ್ದಾರೆ. ಇಂದು ಇದೇ ಸುಳ್ಳನ್ನು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆಯೂ ಹೇಳಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಅಡ್ವೋಕೇಟ್ ಜನರಲ್ ಅವರ ಹೇಳಿಕೆಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಸದ್ಯಕ್ಕೆ ಪ್ರಕರಣವನ್ನು ಎರಡು ವಾರಗಳ ಕಾಲ ಮುಂದೂಡಿದೆ. ಮುಂದಿನ ವಿಚಾರಣೆಯೊಳಗೆ ಕೇಂದ್ರ ಬಿಜೆಪಿ ಸರ್ಕಾರ ತನ್ನ ಉತ್ತರವನ್ನು ಸಿದ್ಧಗೊಳಿಸಬೇಕಾಗಿದೆ.

ಬರಪರಿಹಾರ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯದ ವಿರುದ್ಧದ ನಮ್ಮ ಹೋರಾಟ ಬೀದಿಗಳಲ್ಲಿ ಮಾತ್ರವಲ್ಲ ನ್ಯಾಯಾಲಯದಲ್ಲಿಯೂ ಮುಂದುವರಿಯಲಿದೆ. ಕೇಂದ್ರ ಸರ್ಕಾರದ ಸುಳ್ಳುಗಳನ್ನು ಒಂದೊಂದಾಗಿ ಬಯಲುಗೊಳಿಸುತ್ತಾ ಅದರ ನಿಜಸ್ವರೂಪವನ್ನು ರಾಜ್ಯದ ಜನತೆಯ ಮುಂದಿಡುವ ಪ್ರಯತ್ನವನ್ನು ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಕೀಯ

ಬೆಂಗಳೂರು: ಜನರ ಬದುಕಿಗೆ ಸಂಬಂಧಿಸಿದ ನಿರುದ್ಯೋಗ, ಬಡತನ, ಬೆಲೆಯೇರಿಕೆ, ಬರಪೀಡಿತರಿಗೆ ನೆರವು ಈ ಯಾವ ಪ್ರಶ್ನೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಉತ್ತರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ

ಒಂದಷ್ಟು ಹೊಸ ಸುಳ್ಳುಗಳು ಮತ್ತು ಭಾವನಾತ್ಮಕ ವಿಚಾರಗಳು ಬಿಟ್ಟರೆ ಮೋದಿಯವರ ಬತ್ತಳಿಕೆಯಲ್ಲಿ ಯಾವ ಬಾಣಗಳೂ ಉಳಿದಿಲ್ಲ, ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿ ಎಂಬುದು ಮೋದಿಯವರ ಆಡಳಿತದ ಹತ್ತಿರವೂ ಸುಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಕಾಲದ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಿದ್ದು, ಭಾರತದ ಭೂಭಾಗವನ್ನು ಚೀನಾಗೆ ಬಿಟ್ಟುಕೊಟ್ಟು ತಣ್ಣಗೆ ಕೂತಿದ್ದು, ಐಟಿ, ಇಡಿ ಮೂಲಕ ಬೆದರಿಸಿ ಉದ್ಯಮಿಗಳು, ಭ್ರಷ್ಟರಿಂದ ಸುಲಿಗೆ ಮಾಡಿದ್ದು, ನಾಲ್ಕಾರು ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ಬೀಳಿಸಿದ್ದು ಹೀಗೆ ಮೋದಿಯವರ ದುರಾಡಳಿತದ ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯ

ಬೆಂಗಳೂರು: ಶತಮಾನದ ಶ್ರೇಷ್ಠ ಸುಳ್ಳುಗಾರ ಪ್ರಧಾನಿ ಮೋದಿಯವರ ಬಾಯಲಿ ಬರುವ ಸುಳ್ಳುಗಳು‌ ಒಂದೇ ಎರಡೇ.? ಸುಳ್ಳನ್ನೇ ಹಾಸು ಹೊದ್ದು‌ ಮಲಗಿರುವ ಮೋದಿಯವರು ‘ಕಚ್ಚತೀವು’ ದ್ವೀಪವನ್ನು ಕಾಂಗ್ರೆಸ್ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದೆ ಎಂಬ ಹಸಿ ಸುಳ್ಳು ಹೇಳಿ ನಗೆಪಾಟಲಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವಿಪರ್ಯಾಸವೆಂದರೆ ಪ್ರಧಾನಿಯವರು ಕಚ್ಚತೀವು ದ್ವೀಪದ ಬಗ್ಗೆ ಸುಳ್ಳು ಹೇಳಿಕೊಂಡು ಅಲೆದಾಡುತ್ತಿದ್ದರೆ, ಅತ್ತ ಚೀನಾ ಅರುಣಾಚಲ ಪ್ರದೇಶದ 30 ಊರುಗಳಿಗೆ ತನ್ನ ಹೆಸರು ನಾಮಕರಣ ಮಾಡಿಕೊಂಡಿದೆ. ಈ ಮೂಲಕ ಭಾರತದ ಸಾರ್ವಭೌಮತ್ವವನ್ನೇ ಪ್ರಶ್ನಿಸುತ್ತಿದೆ. ಸುಳ್ಳಿನ ಸರದಾರರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಚುನಾವಣೆಯ ಹೊತ್ತಿನಲ್ಲಿ ‘ಕಚ್ಚತೀವು’ ದ್ವೀಪದ ಪ್ರಸ್ತಾಪ ಮಾಡುತ್ತಿರುವ ಮೋದಿಯವರು, ಚೀನಾ ನಮ್ಮ ದೇಶದ ಭೂ ಭಾಗವನ್ನು ಅಕ್ರಮಿಸುತ್ತಿರುವ ಬಗ್ಗೆ ಎಂದಾದರೂ ಬಾಯಿ ಬಿಟ್ಟಿದಾರೆಯೇ.? ಕಳೆದ ಹತ್ತು‌ ವರ್ಷಗಳಿಂದ ಗಡಿ ವಿಚಾರದಲ್ಲಿ‌ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದೆ ಎಂದು ಹೇಳಿದ್ದಾರೆ.

ಆದರೆ ಚೀನಾದ ತಗಾದೆ ವಿರುದ್ಧ ಅಂಧಭಕ್ತರ ಪಾಲಿನ 56 ಇಂಚಿನ ಎದೆಯ ಶೂರ ಒಮ್ಮೆಯಾದರೂ ಮಾತನಾಡುವ ಧೈರ್ಯ ತೋರಿಸಿದ್ದಾರೆಯೇ? ಉತ್ತರ ಕುಮಾರನಂತೆ ವಿಪಕ್ಷಗಳ ಎದುರು ಪೌರುಷ ತೋರಿಸುವ ಮೋದಿಯವರು ಚೀನಾದ ವಿಚಾರದಲ್ಲಿ ‘ಡರ್‌ಪೋಕ್‌’ ಆಗುವುದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಚೀನಾದ ವಿರುದ್ಧ ಪೌರುಷ ತೋರಿಸಲು‌ ಮೋದಿಯವರ 56 ಇಂಚಿನ ಎದೆಯಲ್ಲಿ ಧಮ್ ಇಲ್ಲವೆ? ಕೇಳಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್

ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಸಂಸತ್ ಚುನಾವಣೆ ನಡೆಯಲಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಜನರಿಗೆ ಯಾವುದೇ ಒಳ್ಳೆಯ ಕಾರ್ಯಕ್ರಮಗಳನ್ನು ತಂದಿಲ್ಲವಾದ್ದರಿಂದ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ರಾಮಮಂದಿರವನ್ನು ಕೈಗೆತ್ತುಕೊಂಡಿತು.

ಆರಂಭದಲ್ಲಿ ಉತ್ತರದ ರಾಜ್ಯಗಳಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈ ಬಾರಿಯ ಚುನಾವಣೆಯಲ್ಲಿ 400 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಮೋದಿ ಸೇರಿದಂತೆ ಬಿಜೆಪಿ ನಾಯಕರು ಅಬ್ಬರಿಸಿದ್ದರು. ಆದರೆ ಇತ್ತೀಚಿನ ಚುನಾವಣಾ ಬಾಂಡ್ ಹಗರಣ ಬಿಜೆಪಿಯ ನಿಜ ಮುಖವನ್ನು ಬಯಲು ಮಾಡಿದೆ.

ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಗ್ಗೂಡದಂತೆ ಬಿಜೆಪಿ ವಿಪಕ್ಷ ನಾಯಕರನ್ನು ಜಾರಿ ಇಲಾಖೆ ಹಾಗೂ ಐಟಿ ಇಲಾಖೆಯ ಮೂಲಕ ಬಂಧಿಸಿದೆ. ಆದರೂ ವಿರೋಧ ಪಕ್ಷಗಳು “ಇಂಡಿಯಾ” ಮೈತ್ರಿಕೂಟವನ್ನು ರಚಿಸಿಕೊಂಡು ದೇಶಾದ್ಯಂತ ಬಲಗೊಳ್ಳುತ್ತಿವೆ.

ಇದರಿಂದಾಗಿ ಆರಂಭದಲ್ಲಿ ತಮಿಳುನಾಡು, ಕೇರಳದಂತಹ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಪ್ರಧಾನಿ ಮೋದಿ, ಕಳೆದ 6 ದಿನಗಳಿಂದ ಪ್ರಚಾರದಲ್ಲಿ ಹೆಚ್ಚು ಆಸಕ್ತಿ ತೋರಿಸದೆ ಬೇರೆಯ ಚಿಂತೆಯಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಸೋಲು ಖಚಿತ ಎಂಬ ಕಾರಣದಿಂದ ಬಿಜೆಪಿಯ ಪ್ರಮುಖ ನಾಯಕರು ಕೂಡ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದೂ ಹೇಳಲಾಗುತ್ತಿದೆ.

ಗುಪ್ತಚರ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ ದೇಶಾದ್ಯಂತ ಬಿಜೆಪಿ ವಿರೋಧಿ ಅಲೆ ಎದ್ದಿದ್ದು, ದಕ್ಷಿಣ ರಾಜ್ಯಗಳಲ್ಲದೇ ಉತ್ತರದ ರಾಜ್ಯಗಳಲ್ಲೂ ಬಿಜೆಪಿಗೆ ಸೋಲು ಎದುರಾಗಲಿದೆ ಎಂದು ವರದಿಗಳಾಗಿವೆ. ಇದರಿಂದಲೇ ಚುನಾವಣಾ ಪ್ರಚಾರದಲ್ಲಿ ಹೆಚ್ಚು ಆಸಕ್ತಿ ತೋರಿಸದೆ ಪ್ರಧಾನಿ ನರೇಂದ್ರ ಮೋದಿ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಎಲ್‌.ಕೆ.ಅಡ್ವಾಣಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರನ್ನು 75 ವಯಸ್ಸಿನ ನಂತರ ” ಮಾರ್ಗದರ್ಶಕ್ ಮಂಡಲ್ ” ಎಂದು ಕರೆಯಲ್ಪಡುವ ಸ್ಟೀರಿಂಗ್ ಸಮಿತಿಗೆ ನೇಮಿಸಲಾಗಿತ್ತು. ಈ ನಿಯಮದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿನಾಯಿತಿ ಸಿಗುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಈಗ 73 ವರ್ಷ ವಯಸ್ಸಾಗಿದೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಧಾನಿಯಾದಾಗ, ಮೋದಿ ಅವರು 78 ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿ ಉಳಿಯಬೇಕಾಗುತ್ತಾದೆ. ಹಾಗಾಗಿ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರಂತೆ 75 ವರ್ಷ ವಯಸ್ಸಿನ ನಂತರ ನಿವೃತ್ತಿಯಾಗಬೇಕು ಎಂದು ಬಲವಂತಮಾಡದೇ ಮೋದಿಯೇ ಪೂರ್ಣಾವಧಿಯವರೆಗೆ ಪ್ರಧಾನಿಯಾಗಿ ಮುಂದುವರಿಯಲು ಬಿಜೆಪಿ ತನ್ನ ನಿಲುವನ್ನು ಬದಲಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ಮೋದಿಯವರ ಹೆಸರಿನಲ್ಲಿ ಬಿಜೆಪಿ ದೇಶಾದ್ಯಂತ ಮತಗಳನ್ನು ಸಂಗ್ರಹಿಸುತ್ತಿದ್ದು, ಅವರು ನೇತೃತ್ವ ವಹಿಸಿಕೊಂಡ ನಂತರವೇ ವಿವಿಧ ಚುನಾವಣೆಗಳಲ್ಲಿ ಪಕ್ಷವು ಗೆಲುವು ಸಾಧಿಸುತ್ತಿದೆ ಎಂದು ಬಿಜೆಪಿ ನಾಯಕರು ಗಮನಸೆಳೆದಿದ್ದಾರೆ. ಆದ್ದರಿಂದ ಅವರಿಗೆ 75 ವಯಸ್ಸಿನ ನಿಯಮದಿಂದ ವಿನಾಯಿತಿ ಕಡ್ಡಾಯವೆಂದು ಪರಿಗಣಿಸಲಾಗಿದೆ.

ಇದೇ ವೇಳೆ, ಮೋದಿ ಅವರು ಸ್ಟೀರಿಂಗ್ ಕಮಿಟಿಗೆ ಹೋಗಬೇಕು ಎಂದು ಹಿರಿಯ ನಾಯಕರು ಒಮ್ಮತದ ಅಭಿಪ್ರಾಯ ಮಂಡಿಸಿದರೆ ಅರ್ಧದಷ್ಟು ಅವಧಿಗೆ ಮತ್ತೊಂದು ಪ್ರಧಾನಿಯನ್ನು ನೇಮಿಸಬಹುದು ಎಂದೂ ಹೇಳಲಾಗುತ್ತಿದೆ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆಗೆ ಅವಕಾಶವಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.

ನರೇಂದ್ರ ಮೋದಿಯಷ್ಟೇ ಅಲ್ಲ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಯಸ್ಸು ಏರಿದ್ದರೂ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ. 72 ವರ್ಷದ ರಾಜನಾಥ್ ಸಿಂಗ್ ಅವರು ಲಕ್ನೋದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಘೋಷಿಸಿದೆ.

ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಸಚಿವರಾದರೆ 77ರ ತನಕ ಅಧಿಕಾರದಲ್ಲಿ ಮುಂದುವರಿಯಬಹುದು. ಇದನ್ನು ಇತರ ಭಾರತೀಯ ಜನತಾ ಪಕ್ಷದ ನಾಯಕರು ಒಪ್ಪಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಯೂ ಮೋದಿ ಮತ್ತು ರಾಜನಾಥ್ ಸಿಂಗ್ ಅವರ ಆಯ್ಕೆಯಿಂದಾಗಿ ಉದ್ಭವಿಸಿದೆ.

ಈ ಹಿಂದೆ ಕಲ್‍ರಾಜ್ ಮಿಶ್ರಾ ಅವರಂತಹ ಕೇಂದ್ರ ಸಚಿವರು ತಮ್ಮ 75ನೇ ವಯಸ್ಸಿನಲ್ಲಿ ರಾಜೀನಾಮೆ ನೀಡಿದ್ದರು ಎಂದು ಬಿಜೆಪಿಗರು ಗಮನಸೆಳೆದಿದ್ದಾರೆ. ಅದೇ ರೀತಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ವಯಸ್ಸು 75 ದಾಟುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಪಟೇಲ್ ಕೂಡ ಇದೇ ರೀತಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನಂತರ ರಾಜ್ಯಪಾಲರಾಗಿ ನೇಮಕವಾದರು.

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಮಾತ್ರ ಹೊರಬಿದ್ದಿದ್ದು, ಮುಂದಿನ ಪಟ್ಟಿಗಳಲ್ಲಿ 70 ದಾಟಿದ ಹಿರಿಯ ನಾಯಕರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ದಿಸಲು ಬಿಜೆಪಿ ಅವಕಾಶ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕು. ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಧಿಕಾರಕ್ಕೆ ಬಂದು, ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ, ಪೂರ್ಣಾವಧಿಯವರೆಗೂ ಅಧಿಕಾರದಲ್ಲಿ ಮುಂದುವರಿಯುತ್ತಾರೆಯೇ ಎಂಬುದು ಅನುಮಾನವೇ ಎಂದು ಬಿಜೆಪಿಯಲ್ಲೇ ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ.