ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Parliament Election 2024 Archives » Page 5 of 6 » Dynamic Leader
November 23, 2024
Home Posts tagged Parliament Election 2024 (Page 5)
ರಾಜಕೀಯ

ಬೆಂಗಳೂರು: ಬೆಂಗಳೂರಿನ ಯಲಹಂಕಾದಲ್ಲಿ ಇಂದು ರಾಜ್ಯ ಬಿಜೆಪಿ ಆಯೋಜಿಸಿರುವ ಲೋಕಸಭಾ ಚುನಾವಣೆಯ ಯೋಜನಾ ಸಭೆಯನ್ನು ಉದ್ಘಾಟಿಸಲಾಯಿತು. ಮುಂಬರುವ ಲೋಕಸಭಾ ಚುನಾವಣೆ-2024ರ ಕುರಿತು ಅನುಸರಿಸಬೇಕಾದ ಕಾರ್ಯತಂತ್ರಗಳು ಹಾಗೂ ಸಂಘಟನಾತ್ಮಕ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ತಮ್ಮ ‘ಎಕ್ಸ್’ ಸೈಟ್ ನಲ್ಲಿ ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಅರುಣ್ ಸಿಂಗ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯ್, ಸದಾನಂದ ಗೌಡ, ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.

ರಾಜಕೀಯ

ಲಕ್ಷದ್ವೀಪಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ.

ನವದೆಹಲಿ: ಮಣಿಪುರದಲ್ಲಿ ಜನವರಿ 14 ರಿಂದ ಆರಂಭವಾಗಲಿರುವ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೆಹಲಿಯಲ್ಲಿ ಮಾಧ್ಯಮದವರನ್ನು ಭೇಟಿ ಮಾಡಿದರು.

ಆಗ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಭಾರತ್ ಜೋಡೋ ನ್ಯಾಯ ಯಾತ್ರೆ ಜನವರಿ 14 ರಂದು ಮಣಿಪುರದ ಇಂಫಾಲ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಾರಂಭವಾಗಲಿದೆ. ಪಾದಯಾತ್ರೆಯು 15 ರಾಜ್ಯಗಳು, 110 ಜಿಲ್ಲೆಗಳು, 100 ಲೋಕಸಭೆ ಕ್ಷೇತ್ರಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳ ಮೂಲಕ ಮುಂಬೈ ತಲುಪಲಿದೆ. ಈ ಯಾತ್ರೆಯಲ್ಲಿ ಮೋದಿ ಸರ್ಕಾರದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.

ಸಂಸತ್ತಿನಲ್ಲಿ 28 ಪಕ್ಷಗಳ ಸದಸ್ಯರು ವಿವಿಧ ವಿಷಯಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಉತ್ತರ ನೀಡದೆ 146 ಸಂಸದರನ್ನು ಅಮಾನತು ಮಾಡಿತು. ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ ದೇಶದ ಪ್ರಧಾನಿಯಾಗಿರುವ ಮೋದಿ ಇನ್ನೂ ಅಲ್ಲಿಗೆ ಹೋಗಲಿಲ್ಲ. ಆದರೆ ಅವರು ಬೇರೆಡೆಗೆ ಹೋಗುತ್ತಿದ್ದಾರೆ.

ಲಕ್ಷದ್ವೀಪಕ್ಕೆ ಭೇಟಿ ನೀಡಲು ಮತ್ತು ಛಾಯಾಚಿತ್ರ ತೆಗೆಯಲು ಪ್ರಧಾನಿ ಮೋದಿ ಅವರಿಗೆ ತುಂಬಾ ಸಮಯವಿದೆ. ಮಣಿಪುರಕ್ಕೆ ಹೋಗಿ ಸಂತ್ರಸ್ತರನ್ನು ಭೇಟಿಯಾಗಲು ಮಾತ್ರ ಅವರಿಗೆ ಸಮಯವಿಲ್ಲ. ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುವುದಕ್ಕಾಗಿಯೇ ಕೇಂದ್ರ ಸರ್ಕಾರ ಕ್ರಿಮಿನಲ್ ಮತ್ತು ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಿದೆ. ಬಿಜೆಪಿ ಸರ್ಕಾರ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬೆದರಿಸುತ್ತಿದೆ” ಎಂದು ಹೇಳಿದರು.

ದೇಶ

“ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ಮೋದಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು, ಆರೆಸ್ಸೆಸ್ ಪದಾಧಿಕಾರಿಗಳು ಮತ್ತು ಕೇಂದ್ರ ಸಚಿವರನ್ನು ಆಹ್ವಾನಿಸಲಾಗಿದೆ. ಅದರೆ ರಾಷ್ಟ್ರಪತಿಯವರಿಗೆ ಆಹ್ವಾನವಿಲ್ಲ”

ಭಾರತೀಯ ಇತಿಹಾಸದ ಹೆಗ್ಗುರುತುಗಳಲ್ಲಿ ಒಂದು ಹಳೆಯ ಸಂಸತ್ತಿನ ಕಟ್ಟಡ. ಇಲ್ಲಿಯೇ ಭಾರತದ ಅನೇಕ ಪ್ರಸಿದ್ಧ ಮಸೂದೆಗಳನ್ನು ಅಂಗೀಕರಿಸಲಾಯಿತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಗಿರುವ ಸಂಸತ್ತಿನ ಬದಲಿಗೆ ಹೊಸ ಸಂಸತ್ತನ್ನು ನಿರ್ಮಿಸಿತು.

ಅದೂ ಕೂಡ ಕೊರೊನಾ ಅವಧಿಯಲ್ಲಿ ಜನರು ಸಂಕಷ್ಟದಲ್ಲಿದ್ದಾಗ 1200 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸಂಸತ್ ಭವನದ ಕಾಮಗಾರಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲಾಗಿತ್ತು. ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರು ಕೇಂದ್ರ ಸರ್ಕಾರ ಸೊಪ್ಪು ಹಾಕಲಿಲ್ಲ.

ತರುವಾಯ, ಹೊಸ ಸಂಸತ್ ಕಟ್ಟಡವನ್ನು ಕಳೆದ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಆದರೆ, ಭಾರತ ಸರ್ಕಾರದ ಮುಖ್ಯಸ್ಥರಾಗಿರುವ ರಾಷ್ಟ್ರಪತಿಯನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ. ಇದಕ್ಕೆ ಎಲ್ಲ ವಿರೋಧ ಪಕ್ಷಗಳು ಖಂಡನೆ ವ್ಯಕ್ತಪಡಿಸಿದವು. ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ರಾಷ್ಟ್ರಪತಿಗಳಿಗೆ ಆಹ್ವಾನ ನೀಡಿಲ್ಲ ಎಂದು ಟೀಕಿಸಲಾಯಿತು.

ಈ ಹಿನ್ನಲೆಯಲ್ಲಿ, ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಪ್ರಮುಖ ರಾಜಕೀಯ ನಾಯಕರಿಗೆ ಆಹ್ವಾನ ನೀಡಲಾಗಿದ್ದು, ರಾಷ್ಟ್ರಪತಿಯವರಿಗೆ ಆಹ್ವಾನ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿ ಆ ಜಾಗದಲ್ಲಿ ರಾಮಮಂದಿರವನ್ನು ನಿರ್ಮಿಸಲಾಗಿದೆ.

ಇದೇ ತಿಂಗಳು 22 ರಂದು ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ಮೋದಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು, ಆರೆಸ್ಸೆಸ್ ಪದಾಧಿಕಾರಿಗಳು ಮತ್ತು ಕೇಂದ್ರ ಸಚಿವರನ್ನು ಆಹ್ವಾನಿಸಲಾಗಿದೆ. ಅದರೆ ರಾಷ್ಟ್ರಪತಿಯವರಿಗೆ ಆಹ್ವಾನ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ.

ರಾಜಕೀಯ

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂದಿನ ಮೂರು ತಿಂಗಳ ಕಾಲ ಪಕ್ಷದ ಗೆಲುವಿಗೆ ಮುಡಿಪಾಗಿಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಹಗಲಿರುಳು ಶ್ರಮಿಸಿದರೆ ಲೋಕಸಭೆ ಚುನಾವಣೆಯ ನಂತರ ಪರ್ಯಾಯ ಸರ್ಕಾರವನ್ನು ನೀಡಬಹುದು ಎಂದು ದೇಶಾದ್ಯಂತದ ಪಕ್ಷದ ನಾಯಕರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಖಂಡರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಆಂತರಿಕ ವಿಚಾರಗಳನ್ನು ಮಾಧ್ಯಮಗಳಿಗೆ ಬಿತ್ತರಿಸದೇ ತಂಡೋಪತಂಡವಾಗಿ ಪಕ್ಷದ ಯಶಸ್ಸಿಗೆ ಶ್ರಮಿಸುವಂತೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.

“ಕಳೆದ 10 ವರ್ಷಗಳ ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ಸೂಕ್ಷ್ಮ ವಿಷಯಗಳನ್ನು ಎತ್ತುತ್ತಿದೆ. ಪ್ರತಿಯೊಂದು ಸಂದರ್ಭದಲ್ಲೂ ಅವರು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಅನ್ನು ಎಳೆಯುತ್ತಿದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನರೇಂದ್ರ ಮೋದಿ ಸರ್ಕಾರ “ಆಧುನಿಕ ಭಾರತ ನಿರ್ಮಾಣದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ನಿರ್ಲಕ್ಷಿಸುತ್ತಲೇ ಇದೆ” ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಹಾಗಾಗಿ “ಅವರಿಗೆ ತಕ್ಕ ಉತ್ತರ ನೀಡಬೇಕು” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ದೇಶ

ನವದೆಹಲಿ: ಯಾರಿಗಾದರೂ ಡಿಕ್ಕಿ ಹೊಡೆದು ಅಪಘಾತ ಮಾಡಿ ಓಡಿ ಹೋಗುವ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ ಅಥವಾ 7 ಲಕ್ಷ ರೂಪಾಯಿ ದಂಡ ವಿಧಿಸುವ ಕಾನೂನನ್ನು ವಿರೋಧಿಸಿ ಉತ್ತರ ರಾಜ್ಯಗಳಲ್ಲಿ ಲಾರಿ, ಟಿಪ್ಪರ್, ಕಾರು, ಬಸ್ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಅಖಿಲ ಭಾರತ ಮೋಟಾರು ಸಾರಿಗೆ ಸಂಸ್ಥೆಯ ಸಂಘಟನೆಯೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ್ದ ಕ್ರಿಮಿನಲ್ ಕಾಯ್ದೆಯಲ್ಲಿ, ಲಾರಿ ಮತ್ತು ಟಿಪ್ಪರ್ ಲಾರಿ ಸೇರಿದಂತೆ ವಾಹನ ಚಾಲಕ, ಯಾರಿಗಾದರೂ ಡಿಕ್ಕಿ ಹೊಡೆದು ಅಪಘಾತ ಮಾಡಿ ಓಡಿ ಹೋದರೆ, ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 7 ಲಕ್ಷ ರೂಪಾಯಿ ದಂಡ ವಿಧಿಸಿ ಶಿಕ್ಷೆಯನ್ನು ಕಠಿಣ ಗೊಳಿಸಿತು. ಹಿಂದಿನ ಕಾನೂನು ಗರಿಷ್ಠ 2 ಅಥವಾ 3 ವರ್ಷಗಳ ಜೈಲು ಶಿಕ್ಷೆಯನ್ನು ಹೊಂದಿತ್ತು. ಕೆಲವೇ ದಿನಗಳಲ್ಲಿ ಜಾಮೀನು ಪಡೆಯಬಹುದು. ಸದ್ಯ ಕೇಂದ್ರ ಸರ್ಕಾರ ಈ ಕಾನೂನನ್ನು ಬಿಗಿಗೊಳಿಸುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಬಿಹಾರ, ಪಂಜಾಬ್, ಮಹಾರಾಷ್ಟ್ರ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಇಷ್ಟು ದೊಡ್ಡ ಮೊತ್ತದ ದಂಡ ಕಟ್ಟಲು ಹೇಗೆ ಸಾಧ್ಯ ಎಂದು ಲಾರಿ ಮತ್ತು ವಾಣಿಜ್ಯ ವಾಹನ ಚಾಲಕರು ಪ್ರಶ್ನಿಸುತ್ತಿದ್ದಾರೆ. ಹಲವೆಡೆ ರ‍್ಯಾಲಿ ನಡೆಸಿದ್ದಾರೆ. ಅನೇಕ ನಗರಗಳಲ್ಲಿ ಇಂಧನ ಟ್ರಕ್ ಚಾಲಕರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇದರಿಂದ ಪೆಟ್ರೋಲ್, ಡೀಸೆಲ್ ಕೊರತೆ ಎದುರಾಗಲಿದೆ ಎಂಬ ಆತಂಕದಲ್ಲಿ ಜನರು ತಮ್ಮ ವಾಹನಗಳೊಂದಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಕಾಯುತ್ತಿದ್ದಾರೆ.

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಶೀಘ್ರದಲ್ಲೇ ಇಂಧನ ಖಾಲಿಯಾಗಲಿದೆ ಎಂದು ಪೆಟ್ರೋಲ್ ಪಂಪ್ ಡೀಲರ್‌ಗಳು ಎಚ್ಚರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಾಲಾ ಬಸ್ ಚಾಲಕರ ಸಂಘದ ಹೇಳಿಕೆಯಲ್ಲಿ, ‘ಡೀಸೆಲ್ ಲಭ್ಯವಾಗುವವರೆಗೆ ನಾವು ಬಸ್‌ಗಳನ್ನು ಓಡಿಸುತ್ತೇವೆ; ನಂತರ ಶಾಲಾ ಬಸ್‌ಗಳು ಸಂಚರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರು ಲಾಠಿ ಜಾರ್ಜ್ ಮಾಡಿಸಿ ಎಲ್ಲರನ್ನು ಚದುರಿಸಿದ್ದಾರೆ. ಥಾಣೆ ಜಿಲ್ಲೆಯಲ್ಲಿ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ಪೊಲೀಸ್ ವಾಹನಕ್ಕೆ ಹಾನಿಯಾಗಿದೆ. ಓರ್ವ ಪೊಲೀಸ್ ಗಾಯಗೊಂಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಾರು ಚಾಲಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಪ್ರವಾಸೋದ್ಯಮಕ್ಕೂ ತೊಂದರೆಯಾಗಿದೆ. ಅನೇಕ ಪ್ರವಾಸಿಗರು ವಾಹನಗಳು ಸಿಗದೇ ಪರದಾಡುತ್ತಿದ್ದಾರೆ. ಹೊಸ ಕಾನೂನಿನ ವಿರುದ್ಧ ಪಾಟ್ನಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಟೈರ್‌ಗಳನ್ನು ಸುಟ್ಟುಹಾಕಲಾಗಿದೆ. ರಸ್ತೆ ತಡೆ ಕೂಡ ನಡೆಸಲಾಯಿತು. ಕಾನೂನಿನ ವಿರುದ್ಧ ಘೋಷಣೆ ಕೂಗಿದವರು 10 ವರ್ಷ ಜೈಲಿನಲ್ಲಿದ್ದರೆ ಕುಟುಂಬವನ್ನು ಕಾಪಾಡುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್, ಛತ್ತೀಸ್‌ಗಢದ ರಾಯ್‌ಪುರ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.

ಈ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೊರಡಿಸಿರುವ ಹೇಳಿಕೆಯಲ್ಲಿ, “ಯಾರೊಂದಿಗೂ ಸಮಾಲೋಚನೆ ಮಾಡದೆ, ಚರ್ಚೆಯಿಲ್ಲದ ಶಾಸನಗಳನ್ನು ಮಾಡುವುದು ಪ್ರಜಾಪ್ರಭುತ್ವದ ಆತ್ಮದ ಮೇಲೆ ದಾಳಿ ಮಾಡಿದಂತೆ. ಸಂಸತ್ತಿನಲ್ಲಿ 150 ಸಂಸದರನ್ನು ಅಮಾನತುಗೊಳಿಸಿ, ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಚಾಲಕರ ವಿರುದ್ಧ ತಂದಿರುವ ಕಾನೂನು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ.

ಕಡಿಮೆ ಆದಾಯದೊಂದಿಗೆ ದುಡಿಯುವ ಜನರನ್ನು ಕಠಿಣ ಕಾನೂನುಗಳ ಮೂಲಕ ಕಿರುಕುಳ ನೀಡುವುದು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ದುರ್ಬಳಕೆ ಮಾಡಿಕೊಂಡರೆ ಭ್ರಷ್ಟಾಚಾರ ಹೆಚ್ಚಾಗುವ ಸಾಧ್ಯತೆ ಇದೆ”  ಎಂದು ರಾಹುಲ್ ಗಾಂಧಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶ

“ಈ ನಾಚಿಕೆಗೇಡಿನ ಭದ್ರತಾ ಲೋಪಕ್ಕಾಗಿ ಉನ್ನತ ಅಧಿಕಾರಿಗಳನ್ನು ಶಿಕ್ಷಿಸದೆ, ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದು, ಆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ”

“ಪ್ರಧಾನಿ ಮತ್ತು ಅವರ ಪಕ್ಷವು ದೇಶದಲ್ಲಿ ಏಕಪಕ್ಷೀಯ ಆಡಳಿತವನ್ನು ಸ್ಥಾಪಿಸಲು ಬಯಸುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ‘ಎಕ್ಸ್’ ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಭದ್ರತೆ ಕೊರತೆ ಕುರಿತು ಗೃಹ ಸಚಿವರಿಂದ ವರದಿ ಕೇಳಿದ ಕಾರಣಕ್ಕಾಗಿ 141 ಸಂಸದರನ್ನು ಅಮಾನತು ಮಾಡಲಾಗಿದೆ. 6 ಅತಿಕ್ರಮಣ ಪ್ರವೇಶ ಮಾಡಿದವ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತಿಕ್ರಮಣ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದರು ಮುಕ್ತರಾಗಿದ್ದಾರೆ. ಅವರನ್ನು ಇನ್ನೂ ವಿಚಾರಣೆ ಮಾಡಿಲ್ಲ.

ಇದು ಯಾವ ರೀತಿಯ ವಿಚಾರಣೆ? ಸಂಸತ್ತಿನ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಹಿರಿಯ ಅಧಿಕಾರಿಗಳು ಏಕೆ ಇದರ ಹೊಣೆಯನ್ನು ವಹಿಸಿಕೊಂಡಿಲ್ಲ? ನಿಸ್ಸಂಶಯವಾಗಿ ಅತಿಕ್ರಮಣಕಾರರು ತಿಂಗಳಿನಿಂದ ಈ ಯೋಜನೆ ರೂಪಿಸಿರುತ್ತಾರೆ. ಈ ಗುಪ್ತಚರ ವೈಫಲ್ಯಕ್ಕೆ ಯಾರು ಹೊಣೆ? ಸಂಸತ್ತಿನ ಬಹು-ಪದರದ ಭದ್ರತೆಯನ್ನು ಗಮನಿಸಿ, ಇಬ್ಬರು ಅತಿಕ್ರಮಣ ಪ್ರವೇಶ ಮಾಡಿದವರು ತಮ್ಮ ಶೂಗಳಲ್ಲಿ ಹಳದಿ ಅನಿಲ ಡಬ್ಬಿಗಳನ್ನು ಮರೆಮಾಡಿ ಕಟ್ಟಡದೊಳಗೆ ನುಸುಳಿ, ಭಾರತೀಯ ಪ್ರಜಾಪ್ರಭುತ್ವದ ತೊಟ್ಟಿಲನ್ನು ಹೇಗೆ ತಲುಪಿದರು?

ಪ್ರಧಾನಿ ಮತ್ತು ಅವರ ಪಕ್ಷವು ದೇಶದಲ್ಲಿ “ಏಕಪಕ್ಷೀಯ ಆಡಳಿತ” ಸ್ಥಾಪಿಸಲು ಬಯಸುತ್ತಿದ್ದಾರೆ. ಅವರು “ಏಕ್ ಅಕೇಲಾ” ಎಂದು ಹೇಳುತ್ತಾರೆ. ಇದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವುದಕ್ಕೆ ಸಮ. ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ಮೂಲಕ ಅವರು ನಿಖರವಾಗಿ ಇದನ್ನೇ ಮಾಡಿದ್ದಾರೆ. ಈ ನಾಚಿಕೆಗೇಡಿನ ಭದ್ರತಾ ಲೋಪಕ್ಕಾಗಿ ಉನ್ನತ ಅಧಿಕಾರಿಗಳನ್ನು ಶಿಕ್ಷಿಸದೆ, ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದು, ಆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

ರಾಜಕೀಯ

‘ಇಂಡಿಯಾ’ ಮೈತ್ರಿಕೂಟದ ಮೊದಲ ಮೂರು ಸಮಾಲೋಚನಾ ಸಭೆಗಳು ಕ್ರಮವಾಗಿ ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದವು.

ನವದೆಹಲಿ,
2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಜಂಟಿಯಾಗಿ ‘ಇಂಡಿಯಾ’ ಮೈತ್ರಿಕೂಟ ರಚಿಸಿದ್ದವು. ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಯುನೈಟೆಡ್ ಜನತಾ ದಳ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳನ್ನು ಒಳಗೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ಮೊದಲ ಮೂರು ಸಮಾಲೋಚನಾ ಸಭೆಗಳು ಕ್ರಮವಾಗಿ ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದವು.

ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಿಜೋರಾಂ ಎಂಬ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಲ್ಕನೇ ಸಭೆ ನಡೆಯಲಿದೆ ಎಂದು ಘೋಷಿಸಲಾಯಿತು. ಆದರೆ ಮೈತ್ರಿ ಪಕ್ಷಗಳ ಪ್ರಮುಖ ನಾಯಕರಾದ ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್, ನಿತೀಶ್ ಕುಮಾರ್ ಮತ್ತು ಅಖಿಲೇಶ್ ಯಾದವ್ ಸಭೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಸಭೆಯನ್ನು ರದ್ದುಗೊಳಿಸಲಾಯಿತು.

ಇದರ ಬೆನ್ನಲ್ಲೇ ಡಿಸೆಂಬರ್ 19 ರಂದು ಮಧ್ಯಾಹ್ನ 3 ಗಂಟೆಗೆ ‘ಇಂಡಿಯಾ’ ಮೈತ್ರಿಕೂಟದ 4ನೇ ಸಭೆ ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದರು.

ಈ ಹಿನ್ನಲೆಯಲ್ಲಿ, ‘ಇಂಡಿಯಾ’ ಮೈತ್ರಿಕೂಟದ 4ನೇ ಸಭೆ ದೆಹಲಿಯಲ್ಲಿ ಆರಂಭವಾಗಿದೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ, ಎಂ.ಕೆ.ಸ್ಟಾಲಿನ್, ರಾಹುಲ್ ಗಾಂಧಿ, ಟಿ.ಆರ್.ಬಾಲು. ಸೀತಾರಾಮ್ ಯೆಚೂರಿ, ಶರದ್ ಪವಾರ್, ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್. ಮೆಹಬೂಬ ಮುಫ್ತಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ ಮುಂತಾದ ನಾಯಕರು ಭಾಗವಹಿಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಸಂಸತ್ತಿನ ಚುನಾವಣಾ ಕಾರ್ಯತಂತ್ರ ಮತ್ತು ಕ್ಷೇತ್ರಗಳ ಹಂಚಿಕೆ ಕುರಿತು ಚರ್ಚೆ ನಡೆಯಲಿದೆ ಎಂದು ದೆಹಲಿಯ ಮೂಲಗಳು ತಿಳಿಸಿವೆ.

ರಾಜಕೀಯ

ಡಿ.ಸಿ.ಪ್ರಕಾಶ್

‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಂಸತ್ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಖಚಿತವಾಗಿ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮೋದಿ ನಾಯಕತ್ವದಲ್ಲಿ ಮೂರನೇ ಬಾರಿಗೆ ಗೆದ್ದು ಅಧಿಕಾರವನ್ನು ಉಳಿಸಿಕೊಳ್ಳಲು, ಕೇಂದ್ರ ಬಿಜೆಪಿ ಸರ್ಕಾರವು ಹಿಂದೂ ಮತಗಳನ್ನು ಗುರಿಯಾಗಿಟ್ಟುಕೊಂಡು, ಸಿಎಎ ವಿಷಯವನ್ನು ಮತ್ತೆ ಕೈಗೆತ್ತಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯನ್ನು ಪ್ರತಿಪಕ್ಷಗಳು ಎತ್ತುತ್ತಿವೆ.

ಡಿಸೆಂಬರ್ 31, 2014 ಕ್ಕಿಂತ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಬಂದ ಹಿಂದೂಗಳು, ಪಾರ್ಸಿಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಜೈನರಿಗೆ ಭಾರತೀಯ ಪೌರತ್ವ ನೀಡುವ ಮಸೂದೆಯನ್ನು 2019ರಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲಾಯಿತು.

ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ತಕ್ಷಣವೇ ಈ ಮಸೂದಗೆ ಅನುಮೋದನೆ ನೀಡಿದರು. ನಂತರ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿತು. ಇದಕ್ಕೆ ಸಂಬಂಧಿಸಿದ ಸಮೀಕ್ಷೆ ಮುಂದಿನ ಒಂದು ವರ್ಷ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತು.

ಅದೇ ಸಮಯದಲ್ಲಿ, ಕೇಂದ್ರ ಬಿಜೆಪಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಲು ಎಷ್ಟು ಗಂಭೀರವಾದ ಕ್ರಮಗಳನ್ನು ಕೈಗೊಂಡಿತೋ, ಅದಕ್ಕಿಂತ ಎರಡು ಪಟ್ಟು ಅಧಿಕವಾಗಿ ಸದರಿ ಕಾಯ್ದೆಗೆ ದೇಶಾದ್ಯಂತ ವಿರೋಧವೂ ಹುಟ್ಟಿಕೊಂಡಿತು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತದಲ್ಲಿ ನೆಲೆಸಿರುವ ಹಿಂದೂಗಳು, ಸಿಖ್ಖರು ಮತ್ತು ಇತರ ಧರ್ಮಗಳಿಗೆ ಭಾರತೀಯ ಪೌರತ್ವವನ್ನು ನೀಡುವ ಪೌರತ್ವ ತಿದ್ದುಪಡಿ ಕಾಯ್ದೆ (CAA), ಆ ದೇಶಗಳಿಂದ ಬಂದು ಭಾರತದಲ್ಲಿ ನೆಲೆಸಿರುವ ಮುಸ್ಲಿಮರಿಗೆ ಮಾತ್ರ ಪೌರತ್ವವನ್ನು ನೀಡಲಾಗುವುದಿಲ್ಲ ಎಂದು ಹೇಳುತ್ತದೆ.

ಈ ಕಾರಣಕ್ಕಾಗಿಯೇ ಆ ಕಾನೂನಿನ ವಿರುದ್ಧ ಭಾರತದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಂತಹ ರಾಜಧಾನಿಗಳಲ್ಲಿ ಪ್ರಮುಖ ಪ್ರತಿಭಟನೆಗಳು ನಡೆಯುತ್ತಿದ್ದರೆ, ಪ್ರತಿಭಟನೆಗಳು ಸಣ್ಣ ಪಟ್ಟಣಗಳಲ್ಲಿಯೂ ಹರಡಿತು. ಈ ಪ್ರತಿಭಟನೆ ಕೇಂದ್ರ ಬಿಜೆಪಿ ಸರ್ಕಾರಕ್ಕೂ ಬೆದರಿಕೆಯೊಡ್ಡಿತು. ಪ್ರತಿಭಟನೆಯನ್ನು ಎದುರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ, ಹಠಾತ್ ಕೊರೋನ ವೈರಸ್‌ನ ಉಲ್ಬಣದಿಂದಾಗಿ, ಸಿಎಎ ವಿರುದ್ಧದ ಪ್ರತಿಭಟನೆ ಆ ಸಂದರ್ಭದಲ್ಲಿ ಅಂತ್ಯಗೊಂಡಿತು.

ಆ ಬಳಿಕ ಸಿಎಎ ವಿಚಾರದಲ್ಲಿ ಶಾಂತಿ ಕಾಪಾಡಿಕೊಂಡು ಬಂದಿದ್ದ ಕೇಂದ್ರ ಬಿಜೆಪಿ ಸರ್ಕಾರ, ಸಿಎಎ ಕಾಯ್ದೆಗೆ ನಿಯಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಕೇಂದ್ರ ಗೃಹ ಸಚಿವಾಲಯವು ಈ ನಿಯಮಗಳನ್ನು ರೂಪಿಸಲು ಹಲವು ಬಾರಿ ಕಾಲಾವಕಾಶ ಕೋರಿದೆ. ಈ ಹಿನ್ನಲೆಯಲ್ಲಿ, ಕೋಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಖಂಡಿತವಾಗಿಯೂ ಸಿಎಎ ಕಾನೂನನ್ನು ತರಲಾಗುವುದು’ ಎಂದು ಹೇಳಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯವನ್ನು ಹಾಳು ಮಾಡಿದ್ದಾರೆ. ಇಲ್ಲಿ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಅದಕ್ಕೂ ಮುನ್ನ 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು.

ಪೌರತ್ವ ತಿದ್ದುಪಡಿ ಕಾಯ್ದೆ ಈ ದೇಶದ ಕಾನೂನು; ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.

ಇತ್ತೀಚೆಗೆ, ಪಶ್ಚಿಮ ಬಂಗಾಳದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಸಂಸದ ಅಜಯ್ ಮಿಶ್ರಾ, ‘ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳನ್ನು ಮಾರ್ಚ್ 30, 2024 ರೊಳಗೆ ಕೇಂದ್ರ ಸರ್ಕಾರವು ರೂಪಿಸಲಿದೆ’ ಎಂದು ಹೇಳಿದ್ದರು.

ಮೇ ತಿಂಗಳಿನಲ್ಲಿ ಸಂಸತ್ ಚುನಾವಣೆ ನಡೆಯಲಿರುವುದರಿಂದ ಅದಕ್ಕೂ ಮುನ್ನ ಸಿಎಎ ಕಾನೂನಿಗೆ ನಿಯಮ ರೂಪಿಸಿದರೆ ಹಿಂದೂಗಳನ್ನು ಒಗ್ಗೂಡಿಸಿ, ಗಣನೀಯ ಪ್ರಮಾಣದಲ್ಲಿ ಹಿಂದೂ ಮತಗಳನ್ನು ಗಿಟ್ಟಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ರಾಜಕೀಯ ವಿಮರ್ಶಕರು ಹೇಳುತ್ತಿದ್ದಾರೆ. ಇದು ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ದೇಶ

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯನ್ನು ವಿರೋಧಿಸಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ವಿದ್ಯಾರ್ಥಿ ಸಂಘಟನೆಗಳು ಜನವರಿ 12 ರಂದು ಸಂಸತ್ತಿಗೆ ಮುತ್ತಿಗೆ ಹಾಕಲು ನಿರ್ಧರಿಸಿದೆ.

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಸೋಲಿಸಲು ‘ಇಂಡಿಯಾ’ ಎಂಬ ಮೈತ್ರಿಕೂಟವನ್ನು ವಿರೋಧಪಕ್ಷಗಳ ನಾಯಕರು ರಚಿಸಿದ್ದಾರೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ 28 ಪಕ್ಷಗಳು ಸೇರಿವೆ. ಈ ಮೈತ್ರಿಕೂಟದ ವಿದ್ಯಾರ್ಥಿ ಸಂಘಟನೆಗಳ ಸಮಾಲೋಚನಾ ಸಭೆ ನಿನ್ನೆ ನವದೆಹಲಿಯಲ್ಲಿ ನಡೆಯಿತು.

ಈ ಸಭೆಯಲ್ಲಿ, ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ವಿರೋಧಿಸಿ ಜನವರಿ 12 ರಂದು ಸಂಸತ್ತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಖಿಲ ಭಾರತ ವಿದ್ಯಾರ್ಥಿ ಸಂಘ ಮತ್ತು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಸೇರಿದಂತೆ 16 ವಿದ್ಯಾರ್ಥಿ ಸಂಘಟನೆಗಳ ಪರವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಈ ಕುರಿತು ವಿದ್ಯಾರ್ಥಿ ಸಂಘಟನೆಯ ಮುಖಂಡರೊಬ್ಬರು ಮಾತನಾಡುತ್ತಾ, ‘ಕೇಂದ್ರ ಸರ್ಕಾರ, ಶಾಲಾ ಶಿಕ್ಷಣದಿಂದ ಪದವಿವರೆಗೆ ಉಚಿತ ಶಿಕ್ಷಣವನ್ನು ಖಾತರಿಪಡಿಸಬೇಕು. ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಜನವರಿ 12 ರಂದು ನವದೆಹಲಿಯಲ್ಲಿ. ಮತ್ತು ಫೆಬ್ರವರಿ 1 ರಂದು ಚೆನ್ನೈನಲ್ಲಿ ಮೆರವಣಿಗೆ ಮತ್ತು ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ದೇಶ ರಾಜಕೀಯ

ಬೆಂಗಳೂರು: ಬಿಜೆಪಿಯನ್ನು ಸೋಲಿಸುವವರೆಗೂ ವಿರೋಧ ಪಕ್ಷಗಳ ಮೈತ್ರಿ ವಿರಮಿಸುವುದಿಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯ ನಂತರ ಪ್ರತಿಪಕ್ಷ ನಾಯಕರು ಸುದ್ದಿಗಾರರನ್ನು ಭೇಟಿಯಾಗಿ ಮಾತನಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ: ಮೋದಿ ವಿರುದ್ಧ ಭಾರತವಿದೆ ಎಂಬುದನ್ನು ತೋರಿಸಲು ಮೈತ್ರಿಕೂಟಕ್ಕೆ “ಇಂಡಿಯಾ” ಎಂದು ಹೆಸರಿಡಲಾಗಿದೆ. ವಿರೋಧ ಪಕ್ಷಗಳ ಮುಂದಿನ ಸಭೆ ಮುಂಬೈನಲ್ಲಿ ನಡೆಯಲಿದೆ. ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಒಕ್ಕೂಟಕ್ಕೆ 11 ಸಂಯೋಜಕರನ್ನು ನೇಮಿಸಲಾಗುವುದು.

ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ನಾವು ದೇಶವನ್ನು ರಕ್ಷಿಸಲು ಒಗ್ಗಟ್ಟಾಗಿದ್ದೇವೆ. ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ಬಿಜೆಪಿಗೆ ನಡುಕ ಶುರುವಾಗಿದೆ. ವಿರೋಧ ಪಕ್ಷಗಳ ವಿರುದ್ಧ ಬಿಜೆಪಿಯು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅನ್ನು ಅಸ್ತ್ರವಾಗಿ ಬಳಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ನಿಶ್ಚಿತ. ಪ್ರತಿಪಕ್ಷಗಳು ಒಂದಾಗುತ್ತಿರುವುದನ್ನು ಕಂಡು ಸಣ್ಣ ಪಕ್ಷಗಳು ಒಂದಾಗುತ್ತಿವೆ. ಬಿಜೆಪಿ ಮೈತ್ರಿಕೂಟದಲ್ಲಿದೆ ಎನ್ನಲಾದ 38 ಪಕ್ಷಗಳ ಪೈಕಿ ಹಲವು ಪಕ್ಷಗಳ ಹೆಸರನ್ನು ಕೇಳಿಯೇ ಇಲ್ಲ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ: ಪ್ರತಿಪಕ್ಷಗಳ ಸಭೆ ಪ್ರಯೋಜನಕಾರಿ ಮತ್ತು ರಚನಾತ್ಮಕವಾಗಿತ್ತು. ನಮಗೆ ಸವಾಲು ಹಾಕಿದರೆ ಎನ್‌ಡಿಎ ಮೈತ್ರಿಕೂಟ ಸೋಲುತ್ತದೆ. ನಾವು ಜನಾಂಗ, ಭಾಷೆ ಮತ್ತು ಧರ್ಮವನ್ನು ಮೀರಿ ಒಗ್ಗಟ್ಟಾಗಿದ್ದೇವೆ. ಬಿಜೆಪಿಯನ್ನು ತೊಲಗಿಸಿ ದೇಶವನ್ನು ರಕ್ಷಿಸಬೇಕು. ಪ್ರತಿಪಕ್ಷಗಳ ಮೈತ್ರಿ ಗೆಲ್ಲಲಿದೆ. ಬಿಜೆಪಿಗೆ ಸೋಲು ಎದುರಾಗಲಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್: ಮೋದಿಯವರ ಭಾರತದಲ್ಲಿ ಯಾರೂ ನೆಮ್ಮದಿಯಾಗಿಲ್ಲ. ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ನಾಶ ಮಾಡಿದೆ. ನಮ್ಮೊಂದಿಗೆ ಇನ್ನಷ್ಟು ಪಕ್ಷಗಳು ಸೇರಲಿವೆ. ಬಿಜೆಪಿ ಆಡಳಿತದಲ್ಲಿ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಕಳೆದ 9 ವರ್ಷಗಳಲ್ಲಿ ಮೋದಿಯವರಿಗೆ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಅವಕಾಶ ಸಿಕ್ಕಿತ್ತು. ಆದರೆ ಏನೂ ಆಗಲಿಲ್ಲ. ಬಿಜೆಪಿ ಮಣ್ಣಿನಿಂದ ಹಿಡಿದು ಆಕಾಶದವರೆಗೆ ಎಲ್ಲವನ್ನೂ ಮಾರಿದೆ.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ: ಸರ್ವಾಧಿಕಾರದ ವಿರುದ್ಧ ನಾವು ಒಂದಾಗಿದ್ದೇವೆ. ದೇಶವೇ ನಮ್ಮ ಕುಟುಂಬ. ಅದನ್ನು ರಕ್ಷಿಸಲು ನಾವು ಹೋರಾಟ ನಡೆಸುತ್ತಿದ್ದೇವೆ. ದೇಶವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುತ್ತೇವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ: ಬಿಜೆಪಿಯ ನೀತಿಗಳ ವಿರುದ್ಧ ನಮ್ಮ ಹೋರಾಟ ಇರಲಿದೆ. ದೇಶದ ಧ್ವನಿಗಾಗಿ ಈ ಹೋರಾಟ ನಡೆಯುತ್ತಿದೆ. ಬಿಜೆಪಿಯ ದುಷ್ಟ ಚಿಂತನೆ ಮತ್ತು ಸಿದ್ಧಾಂತದ ವಿರುದ್ಧ ನಾವು ಒಂದಾಗಿದ್ದೇವೆ. ಬಿಜೆಪಿಯಿಂದ ದೇಶವನ್ನು ರಕ್ಷಿಸಲು ಕ್ರಿಯಾ ಯೋಜನೆ ರೂಪಿಸಬೇಕಾಗಿದೆ. ದೇಶದಲ್ಲಿ ಒಂದೆಡೆ ಬೆಲೆ ಏರಿಕೆಯಾದರೆ ಮತ್ತೊಂದೆಡೆ ನಿರುದ್ಯೋಗ ಹೆಚ್ಚುತ್ತಿದೆ. ಈ ಹೋರಾಟ ಎರಡು ಪಕ್ಷಗಳ ನಡುವೆ ಅಲ್ಲ.

ಭಾರತದ ನೀತಿಯನ್ನು ರಕ್ಷಿಸಲು ಹೋರಾಟ. ಇತಿಹಾಸವನ್ನು ನೋಡಿದರೆ ಭಾರತದ ಇತಿಹಾಸದ ವಿರುದ್ಧ ಯಾರೂ ಹೋರಾಡಿಲ್ಲ. ಪ್ರಸ್ತುತ ಭಾರತದ ನೀತಿಗಳಿಗೂ ಮೋದಿಯವರಿಗೂ ನಡುವಿನ ಹೋರಾಟವಾಗಿದೆ. ಬಿಜೆಪಿಯನ್ನು ಸೋಲಿಸುವವರೆಗೂ ನಾವು ವಿರಮಿಸುವುದಿಲ್ಲ. ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧದ ವಿರೋಧ ಪಕ್ಷಗಳ ಮೈತ್ರಿ ಕೂಟಕ್ಕೆ ‘ಇಂಡಿಯಾ’ (Indian National Developmental Inclusive Alliance – INDIA) ಎಂದು ಹೆಸರಿಸಲಾಗಿದೆ. ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆದಿದ್ದು, 26 ಪಕ್ಷಗಳು ಭಾಗವಹಿಸಿದ್ದವು. 6 ಮುಖ್ಯಮಂತ್ರಿಗಳು ಭಾಗವಹಿಸಿದ್ದರು.