ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂದಿನ ಮೂರು ತಿಂಗಳ ಕಾಲ ಪಕ್ಷದ ಗೆಲುವಿಗೆ ಮುಡಿಪಾಗಿಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಹಗಲಿರುಳು ಶ್ರಮಿಸಿದರೆ ಲೋಕಸಭೆ ಚುನಾವಣೆಯ ನಂತರ ಪರ್ಯಾಯ ಸರ್ಕಾರವನ್ನು ನೀಡಬಹುದು ಎಂದು ದೇಶಾದ್ಯಂತದ ಪಕ್ಷದ ನಾಯಕರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಖಂಡರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಆಂತರಿಕ ವಿಚಾರಗಳನ್ನು ಮಾಧ್ಯಮಗಳಿಗೆ ಬಿತ್ತರಿಸದೇ ತಂಡೋಪತಂಡವಾಗಿ ಪಕ್ಷದ ಯಶಸ್ಸಿಗೆ ಶ್ರಮಿಸುವಂತೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.
“ಕಳೆದ 10 ವರ್ಷಗಳ ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ಸೂಕ್ಷ್ಮ ವಿಷಯಗಳನ್ನು ಎತ್ತುತ್ತಿದೆ. ಪ್ರತಿಯೊಂದು ಸಂದರ್ಭದಲ್ಲೂ ಅವರು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಅನ್ನು ಎಳೆಯುತ್ತಿದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನರೇಂದ್ರ ಮೋದಿ ಸರ್ಕಾರ “ಆಧುನಿಕ ಭಾರತ ನಿರ್ಮಾಣದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ನಿರ್ಲಕ್ಷಿಸುತ್ತಲೇ ಇದೆ” ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಹಾಗಾಗಿ “ಅವರಿಗೆ ತಕ್ಕ ಉತ್ತರ ನೀಡಬೇಕು” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.