10 ವರ್ಷ ಜೈಲು ಶಿಕ್ಷೆ, ರೂ.7 ಲಕ್ಷ ದಂಡ: ಉತ್ತರ ರಾಜ್ಯಗಳಲ್ಲಿ ಪ್ರತಿಭಟನೆ: ಸಂಧಾನಕ್ಕೆ ಕೇಂದ್ರ ಸರ್ಕಾರ ನಿರ್ಧಾರ! » Dynamic Leader
November 23, 2024
ದೇಶ

10 ವರ್ಷ ಜೈಲು ಶಿಕ್ಷೆ, ರೂ.7 ಲಕ್ಷ ದಂಡ: ಉತ್ತರ ರಾಜ್ಯಗಳಲ್ಲಿ ಪ್ರತಿಭಟನೆ: ಸಂಧಾನಕ್ಕೆ ಕೇಂದ್ರ ಸರ್ಕಾರ ನಿರ್ಧಾರ!

ನವದೆಹಲಿ: ಯಾರಿಗಾದರೂ ಡಿಕ್ಕಿ ಹೊಡೆದು ಅಪಘಾತ ಮಾಡಿ ಓಡಿ ಹೋಗುವ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ ಅಥವಾ 7 ಲಕ್ಷ ರೂಪಾಯಿ ದಂಡ ವಿಧಿಸುವ ಕಾನೂನನ್ನು ವಿರೋಧಿಸಿ ಉತ್ತರ ರಾಜ್ಯಗಳಲ್ಲಿ ಲಾರಿ, ಟಿಪ್ಪರ್, ಕಾರು, ಬಸ್ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಅಖಿಲ ಭಾರತ ಮೋಟಾರು ಸಾರಿಗೆ ಸಂಸ್ಥೆಯ ಸಂಘಟನೆಯೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ್ದ ಕ್ರಿಮಿನಲ್ ಕಾಯ್ದೆಯಲ್ಲಿ, ಲಾರಿ ಮತ್ತು ಟಿಪ್ಪರ್ ಲಾರಿ ಸೇರಿದಂತೆ ವಾಹನ ಚಾಲಕ, ಯಾರಿಗಾದರೂ ಡಿಕ್ಕಿ ಹೊಡೆದು ಅಪಘಾತ ಮಾಡಿ ಓಡಿ ಹೋದರೆ, ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 7 ಲಕ್ಷ ರೂಪಾಯಿ ದಂಡ ವಿಧಿಸಿ ಶಿಕ್ಷೆಯನ್ನು ಕಠಿಣ ಗೊಳಿಸಿತು. ಹಿಂದಿನ ಕಾನೂನು ಗರಿಷ್ಠ 2 ಅಥವಾ 3 ವರ್ಷಗಳ ಜೈಲು ಶಿಕ್ಷೆಯನ್ನು ಹೊಂದಿತ್ತು. ಕೆಲವೇ ದಿನಗಳಲ್ಲಿ ಜಾಮೀನು ಪಡೆಯಬಹುದು. ಸದ್ಯ ಕೇಂದ್ರ ಸರ್ಕಾರ ಈ ಕಾನೂನನ್ನು ಬಿಗಿಗೊಳಿಸುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಬಿಹಾರ, ಪಂಜಾಬ್, ಮಹಾರಾಷ್ಟ್ರ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಇಷ್ಟು ದೊಡ್ಡ ಮೊತ್ತದ ದಂಡ ಕಟ್ಟಲು ಹೇಗೆ ಸಾಧ್ಯ ಎಂದು ಲಾರಿ ಮತ್ತು ವಾಣಿಜ್ಯ ವಾಹನ ಚಾಲಕರು ಪ್ರಶ್ನಿಸುತ್ತಿದ್ದಾರೆ. ಹಲವೆಡೆ ರ‍್ಯಾಲಿ ನಡೆಸಿದ್ದಾರೆ. ಅನೇಕ ನಗರಗಳಲ್ಲಿ ಇಂಧನ ಟ್ರಕ್ ಚಾಲಕರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇದರಿಂದ ಪೆಟ್ರೋಲ್, ಡೀಸೆಲ್ ಕೊರತೆ ಎದುರಾಗಲಿದೆ ಎಂಬ ಆತಂಕದಲ್ಲಿ ಜನರು ತಮ್ಮ ವಾಹನಗಳೊಂದಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಕಾಯುತ್ತಿದ್ದಾರೆ.

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಶೀಘ್ರದಲ್ಲೇ ಇಂಧನ ಖಾಲಿಯಾಗಲಿದೆ ಎಂದು ಪೆಟ್ರೋಲ್ ಪಂಪ್ ಡೀಲರ್‌ಗಳು ಎಚ್ಚರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಾಲಾ ಬಸ್ ಚಾಲಕರ ಸಂಘದ ಹೇಳಿಕೆಯಲ್ಲಿ, ‘ಡೀಸೆಲ್ ಲಭ್ಯವಾಗುವವರೆಗೆ ನಾವು ಬಸ್‌ಗಳನ್ನು ಓಡಿಸುತ್ತೇವೆ; ನಂತರ ಶಾಲಾ ಬಸ್‌ಗಳು ಸಂಚರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರು ಲಾಠಿ ಜಾರ್ಜ್ ಮಾಡಿಸಿ ಎಲ್ಲರನ್ನು ಚದುರಿಸಿದ್ದಾರೆ. ಥಾಣೆ ಜಿಲ್ಲೆಯಲ್ಲಿ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ಪೊಲೀಸ್ ವಾಹನಕ್ಕೆ ಹಾನಿಯಾಗಿದೆ. ಓರ್ವ ಪೊಲೀಸ್ ಗಾಯಗೊಂಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಾರು ಚಾಲಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಪ್ರವಾಸೋದ್ಯಮಕ್ಕೂ ತೊಂದರೆಯಾಗಿದೆ. ಅನೇಕ ಪ್ರವಾಸಿಗರು ವಾಹನಗಳು ಸಿಗದೇ ಪರದಾಡುತ್ತಿದ್ದಾರೆ. ಹೊಸ ಕಾನೂನಿನ ವಿರುದ್ಧ ಪಾಟ್ನಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಟೈರ್‌ಗಳನ್ನು ಸುಟ್ಟುಹಾಕಲಾಗಿದೆ. ರಸ್ತೆ ತಡೆ ಕೂಡ ನಡೆಸಲಾಯಿತು. ಕಾನೂನಿನ ವಿರುದ್ಧ ಘೋಷಣೆ ಕೂಗಿದವರು 10 ವರ್ಷ ಜೈಲಿನಲ್ಲಿದ್ದರೆ ಕುಟುಂಬವನ್ನು ಕಾಪಾಡುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್, ಛತ್ತೀಸ್‌ಗಢದ ರಾಯ್‌ಪುರ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.

ಈ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೊರಡಿಸಿರುವ ಹೇಳಿಕೆಯಲ್ಲಿ, “ಯಾರೊಂದಿಗೂ ಸಮಾಲೋಚನೆ ಮಾಡದೆ, ಚರ್ಚೆಯಿಲ್ಲದ ಶಾಸನಗಳನ್ನು ಮಾಡುವುದು ಪ್ರಜಾಪ್ರಭುತ್ವದ ಆತ್ಮದ ಮೇಲೆ ದಾಳಿ ಮಾಡಿದಂತೆ. ಸಂಸತ್ತಿನಲ್ಲಿ 150 ಸಂಸದರನ್ನು ಅಮಾನತುಗೊಳಿಸಿ, ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಚಾಲಕರ ವಿರುದ್ಧ ತಂದಿರುವ ಕಾನೂನು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ.

ಕಡಿಮೆ ಆದಾಯದೊಂದಿಗೆ ದುಡಿಯುವ ಜನರನ್ನು ಕಠಿಣ ಕಾನೂನುಗಳ ಮೂಲಕ ಕಿರುಕುಳ ನೀಡುವುದು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ದುರ್ಬಳಕೆ ಮಾಡಿಕೊಂಡರೆ ಭ್ರಷ್ಟಾಚಾರ ಹೆಚ್ಚಾಗುವ ಸಾಧ್ಯತೆ ಇದೆ”  ಎಂದು ರಾಹುಲ್ ಗಾಂಧಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Posts