ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Political News Archives » Page 4 of 5 » Dynamic Leader
November 22, 2024
Home Posts tagged Political News (Page 4)
ದೇಶ

ಭಾರತದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಗುತ್ತದೆ. ಕೊನೆಯ ಜನಗಣತಿ 2011ರಲ್ಲಿ ಆಗಿತ್ತು. ಇದರಲ್ಲಿ ಹೆಸರು, ಲಿಂಗ, ಧರ್ಮ, ಮಾತೃಭಾಷೆ ಹಾಗೂ ತಿಳಿದಿರುವ ಭಾಷೆಗಳು ಸೇರಿದಂತೆ ಹಲವು ಅಂಶಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈಗ 2023ರ ಜನಗಣತಿ ನಡೆಯಲಿದೆ. ಈ ಜನಗಣತಿಯ ಬಗ್ಗೆ ಸಂಸ್ಕೃತ ವಿದ್ವಾಂಸೆ, 17 ಪುಸ್ತಕಗಳ ಲೇಖಕಿಯೂ ಆದ ಮೃದುಲ್ ಕೀರ್ತಿ ಕೆಲವು ವಿಚಾರಗಳನ್ನು ಮುಂದಿಟ್ಟಿದ್ದಾರೆ.

“2023ರ ಜನಗಣತಿಯ ತಯಾರಿ ಅಂತಿಮ ಹಂತದಲ್ಲಿದೆ. ಅಧಿಕಾರಿಗಳು ಶೀಘ್ರದಲ್ಲೇ ನಿಮ್ಮ ಮನೆಗೆ ಬಂದು ಮಾಹಿತಿಯನ್ನು ಪಡೆಯಲಿದ್ದಾರೆ. ಅದರಲ್ಲಿ, ನಿಮ್ಮ ಮಾತೃ ಭಾಷೆಯನ್ನು ಕುರಿತು ಹಾಗೂ ನಿಮಗೆ ತಿಳಿದಿರುವ ಬೇರೆ ಭಾಷೆಗಳನ್ನು ಕುರಿತು ಪ್ರಶ್ನೆ ಕೇಳುತ್ತಾರೆ. ಆಗ ನಿಮ್ಮ ಮಾತೃ ಭಾಷೆಯನ್ನು ಹೊರತುಪಡಿಸಿ, ನೀವು ಮಾತನಾಡುವ ಅಥವಾ ತಿಳಿದಿರುವ ಇತರೆ ಭಾಷೆಯೆಂದು ಸಂಸ್ಕೃತವನ್ನು ಉಲ್ಲೇಖಿಸಿ. ಏಕೆಂದರೆ, ಸಂಸ್ಕೃತವನ್ನು ನೀವು ಪೂರ್ತಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರೂ ಪ್ರತಿ ದಿನವೂ ಅದನ್ನು ಮಾತನಾಡುತ್ತಿದ್ದೀರಿ ಎಂಬುದು ಸತ್ಯ. ಹೌದು, ಹಾಡುವುದರ ಮೂಲಕ, ಮಂತ್ರಗಳನ್ನು ಉಚ್ಚರಿಸುವ ಮೂಲಕ, ಪ್ರಾರ್ಥಿಸುವುದರ ಮೂಲಕ ನಾವು ಪ್ರತಿದಿನ ಸಂಸ್ಕೃತ ಭಾಷೆಯನ್ನು ಬಳಸುತ್ತಾ ಇರುತ್ತೇವೆ. ಅನೇಕರು ತಮ್ಮ ಶಾಲೆಗಳಲ್ಲಿ ಈ ಭಾಷೆಯನ್ನು ಕಲಿಯುತ್ತಿದ್ದಾರೆ.

ಹೀಗಿರುವಾಗ ಸಂಸ್ಕೃತ ಭಾಷೆಯ ಬಗ್ಗೆ ಹೇಳುವುದು ಮುಖ್ಯವಾಗಿದೆ. ಜನಗಣತಿಯಲ್ಲಿ ಇಡೀ ದೇಶದಲ್ಲಿ ಕೇವಲ 2000 ಜನರು ಮಾತ್ರ ಸಂಸ್ಕೃತ ಮಾತನಾಡುವುದಾಗಿ ಹೇಳಿದ್ದಾರೆ. ಅದೇ ಸಮಯದಲ್ಲಿ, ಅರೇಬಿಕ್ ಭಾಷೆಯನ್ನು 50 ಸಾವಿರ ಜನರು, ಪರ್ಷಿಯನ್ ಭಾಷೆಯನ್ನು ಸುಮಾರು 12 ಸಾವಿರ ಜನರು ಮಾತನಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಈ ಭಾಷೆಗಳು ತಮ್ಮ ಅಭಿವೃದ್ಧಿಗೆ ಹಣವನ್ನು ಪಡೆಯುತ್ತವೆ. ಆದರೆ ನಮ್ಮದೇ ಸಂಸ್ಕೃತಿಯ ತಳಹದಿಯಾದ ಸಂಸ್ಕೃತ ನಿಧಾನವಾಗಿ ಮರೆಯಾಗುತ್ತಿದೆ. ಈ ಸಂಖ್ಯೆ ಇನ್ನೂ ಕಡಿಮೆಯಾದರೆ, ಸಂಸ್ಕೃತ ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಗುವುದು. ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸಂಸ್ಕೃತ ಪದವನ್ನು ಉಲ್ಲೇಖಿಸಿದರೆ ಸಾಕು” ಎಂದು ಹೇಳಿದ್ದಾರೆ.

ರಾಜಕೀಯ

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿರುವುದನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಲು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

“ಬಿಜೆಪಿ ಸರ್ಕಾರವು ತರಾತುರಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿರುವುದು ಚುನಾವಣಾ ಗಿಮಿಕ್‌ ಆಗಿತ್ತು. ಮೀಸಲಾತಿ ಹೆಚ್ಚಳ ಕುರಿತ ಕಾಯ್ದೆ ಜಾರಿಗೊಳಿಸಿದರೂ ಅದನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರ್ಪಡೆಗೊಳಿಸಲು ಚುನಾವಣೆ ಘೋಷಣೆಯ ಎರಡು ದಿನ ಮೊದಲಷ್ಟೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಹಾಗೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಲ್ಪಿಸುವ ನೆಪದಲ್ಲಿ ಹಿಂದಿನ ಸರ್ಕಾರ ಗೊಂದಲ ಸೃಷ್ಟಿಸಿದೆ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ ಮೀಸಲಾತಿ ಕಲ್ಪಿಸುವಂತೆ ತಾವು ನೀಡಿದ್ದ ಸಲಹೆಯನ್ನು ನಿರ್ಲಕ್ಷಿಸಿದ ಪರಿಣಾಮ ವಿವಿಧ ಸಮುದಾಯಗಳ ವಿರೋಧ ಎದುರಿಸುವಂತಾಯಿತು. ಸಾಮಾಜಿಕ ನ್ಯಾಯದ ಕುರಿತು ಬದ್ಧತೆ ಇಲ್ಲದೆ ಹೋದರೆ ಇಂತಹ ಗೊಂದಲಗಳಾಗುತ್ತವೆ.

ಜನಸಂಘ ಹಾಗೂ ಬಿಜೆಪಿ ಹಿಂದಿನಿಂದಲೂ ಮೀಸಲಾತಿ ವಿರೋಧಿ ನಿಲುವನ್ನೇ ಹೊಂದಿದ್ದವು. ಈಗ ಮೀಸಲಾತಿ ಹೆಚ್ಚಿಸಿರುವುದು ರಾಜಕೀಯ ಗಿಮಿಕ್. ಇಂಥವರ ಕುರಿತು ನಾವು ಎಚ್ಚರದಿಂದಿರಬೇಕು. ಕರ್ನಾಟಕದಲ್ಲಿ ಜನ ಬದಲಾವಣೆ ಬಯಸಿ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಅವಕಾಶ ನೀಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಯಾವತ್ತೂ ಜಾತ್ಯತೀತ ಪಕ್ಷವಾಗಿದ್ದು, ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ಸಾಮಾಜಿಕ ನ್ಯಾಯದ ನಿಲುವಿನಲ್ಲಿ ರಾಜಿ ಇಲ್ಲ. ನಮ್ಮ ಸರ್ಕಾರವು ಮೀಸಲಾತಿಯಲ್ಲಿನ ಎಲ್ಲ ಗೊಂದಲಗಳನ್ನು ಸರಿಪಡಿಸಲಿದೆ.

ಹಲವು ಶತಮಾನಗಳಿಂದ ಅವಕಾಶ ವಂಚಿತರಾದವರಿಗೆ ಈಗ ಅವಕಾಶ ಒದಗಿಸುವ ಮೂಲಕ ಅಸಮಾನತೆಯನ್ನು ನಿವಾರಿಸಿ ಸಮಾನತೆಯನ್ನು ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಿಂದೆ ನಮ್ಮ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು 162 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಂಡಿತ್ತು. ಸಮೀಕ್ಷೆಯ ವರದಿಯನ್ನು ಸ್ವೀಕರಿಸಲು ಹಿಂದಿನ ಸರ್ಕಾರಗಳು ಹಿಂದೇಟು ಹಾಕಿದವು. ಇದೀಗ ನಮ್ಮ ಸರ್ಕಾರ ಈ ವರದಿಯನ್ನು ಸ್ವೀಕರಿಸಲಿದೆ. ವಸ್ತು ಸ್ಥಿತಿಯನ್ನು ಆಧರಿಸಿ, ಜನರಿಗೆ ಶಿಕ್ಷಣ, ಉದ್ಯೋಗ, ಉದ್ಯಮ ಹೀಗೆ ವಿವಿಧ ವಲಯಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಿದೆ.

ಹಿಂದೆ ನಾವು ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‌ ಮೊದಲಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೆವು. ಇದೀಗ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಇದಕ್ಕೆ ಸುಮಾರು 59,000 ಕೋಟಿ ರೂ. ವಾರ್ಷಿಕ ವೆಚ್ಚವಾಗಲಿದೆ. ನಾಡಿನ ಎಲ್ಲಾ ವರ್ಗಗಳ ಜನರ ಕಲ್ಯಾಣ ನಮಗೆ ಮುಖ್ಯ” ಎಂದರು.

ರಾಜಕೀಯ

ಮಂಗಳೂರು: ಮಂಗಳೂರು ಐಜಿಪಿ ಕಛೇರಿ ವ್ಯಾಪ್ತಿಯ ಹಾಗೂ ಇಲ್ಲಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲಾಗುವುದು ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ.

ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಪರಮೇಶ್ವರ್ ಅವರು ಪಶ್ಚಿಮ ವಲಯ ಐಜಿಪಿ ಕಛೇರಿ ವ್ಯಾಪ್ತಿಯ ಹಾಗೂ ಇಲ್ಲಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಗೃಹ ಸಚಿವರು, ‘ಮಂಗಳೂರಿನಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಇದು ನನಗೆ ಹೊಸ ಹುದ್ದೆ ಅಲ್ಲ. ಹೊಸ ಸವಾಲುಗಳು ಹುಟ್ಟಿಕೊಂಡಿವೆ ಮತ್ತು ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪೊಲೀಸ್ ಇಲಾಖೆಗೂ ಹೊಸ ಸವಾಲುಗಳು ಎದುರಾಗಿವೆ’ ಎಂದರು.

‘ನೈತಿಕ ಪೊಲೀಸ್​ಗಿರಿ ತಡೆಯಲು ಮಂಗಳೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಎಂಬ ಹೊಸ ಘಟಕ ಸ್ಥಾಪಿಸುತ್ತೇವೆ. ಆ್ಯಂಟಿ ಕಮ್ಯುನಲ್ ವಿಂಗ್​ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ ಎಂದರು. ಕರಾವಳಿ ಭಾಗದಲ್ಲಿ ಒಳ್ಳೆಯ ಜನರು ಇದ್ದಾರೆ ಅಂತಾ ನಂಬಿದ್ದೇವೆ. ಈ ಭಾಗದಲ್ಲಿ ಭಯದ ವಾತಾವರಣವಿದೆ ಅಂತಾ ಜನ ಮಾತಾಡ್ತಿದ್ದಾರೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್​ಗಿರಿ ತುಂಬಾ ನಡೆಯುತ್ತಿದೆ. ಇದನ್ನು ತಡೆಯದಿದ್ದರೆ ಇಲಾಖೆ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು. ಹಾಗಾಗಿ ನೈತಿಕ ಪೊಲೀಸ್​ಗಿರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆಗಸ್ಟ್ 15ರೊಳಗೆ ಕರಾವಳಿ ಭಾಗ ಡ್ರಗ್ಸ್ ಮುಕ್ತ ಪ್ರದೇಶವಾಗಬೇಕು’ ಎಂದು ಪೊಲೀಸರಿಗೆ ಸೂಚನೆ ನೀಡಿದರು.

ರಾಜಕೀಯ

ಪ್ರೀತಿಯ ಅಂಗಡಿ ತೆರೆಯುತ್ತೇನೆಂದು ಘೋಷಿಸಿ ದ್ವೇಷದ ದುಖಾನು ಸ್ಥಾಪಿಸಬೇಡಿ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವ ವಿ.ಸುನಿಲ್ ಕುಮಾರ್ ಸಚಿವರುಗಳ ವಿರುದ್ದ ಹರಿಹಾಯ್ದಿದ್ದಾರೆ.

“ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಂಘ ಪರಿವಾರ ನಿಷೇಧಿಸುವ ತವಕ, ಎಂ.ಬಿ.ಪಾಟೀಲ್ ರಿಗೆ ಚಕ್ರವರ್ತಿ ಸೂಲಿಬೆಲೆಯವರಿಂದ ಕಂಬಿ ಎಣಿಸುವ ಉಮೇದು, ಇನ್ನು ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರಿಗಂತೂ ಗೋವಧೆ ಮಾಡುವ ಬಗ್ಗೆ ಅತ್ಯುತ್ಸಾಹ. ಕಾಂಗ್ರೆಸ್ ಆಡಳಿತದ ವೈಖರಿ ನೋಡಿ. ಯಾರಿಗೆ ಯಾವುದು ಸಂಬಂಧವಿಲ್ಲವೋ ಅದನ್ನು ಮಾಡಲು ಅತ್ಯುತ್ಸಾಹ.

ಮುಂಗಾರು ದುರ್ಬಲವಾಗಿದೆ, ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಮೊದಲು ಈ ಬಗ್ಗೆ ಗಮನ ಹರಿಸಿ. ಪ್ರೀತಿಯ ಅಂಗಡಿ ತೆರೆಯುತ್ತೇನೆಂದು ಘೋಷಿಸಿ ದ್ವೇಷದ ದುಖಾನು ಸ್ಥಾಪಿಸಬೇಡಿ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

ಸಿನಿಮಾ

ವರದಿ: ಅರುಣ್ ಜಿ.,

200 ರಿಂದ 300 ಕೋಟಿ ಬಜೆಟ್‌ನಲ್ಲಿ “ಶಕ್ತಿಮಾನ್” ಸರಣಿಯನ್ನು ಸಿನಿಮಾ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸರಣಿಯಲ್ಲಿ ನಟಿಸಿದ ನಟ ಮುಖೇಶ್ ಖನ್ನಾ ಮಾಹಿತಿ ನೀಡಿದ್ದಾರೆ.

90ರ ದಶಕದ ಮಕ್ಕಳ ನೆಚ್ಚಿನ ಟಿವಿ ಸರಣಿಗಳಲ್ಲಿ ಒಂದಾಗಿದ್ದ ‘ಶಕ್ತಿಮಾನ್’: 1997 ರಿಂದ 2005 ರವರೆಗೆ ಈ ಸರಣಿಯು ದೂರದರ್ಶನದಲ್ಲಿ ಪ್ರಸಾರವಾಯಿತು. ಇದನ್ನು ಬಾಲಿವುಡ್ ನಟ ಮುಖೇಶ್ ಖನ್ನಾ ನಿರ್ಮಿಸಿ, ಸ್ವತಃ ಶಕ್ತಿಮಾನ್ ಆಗಿಯೂ ನಟಿಸಿದ್ದರು. ಹಿಂದಿಯಲ್ಲಿ ಚಿತ್ರೀಕರಣಗೊಂಡು ಬೇರೆ ಭಾಷೆಗಳಿಗೆ ಡಬ್ ಆಗಿರುವ ಈ ಸರಣಿಯನ್ನು ಸಿನಿಮಾ ಮಾಡುವುದಾಗಿ ಮುಕೇಶ್ ಖನ್ನಾ ಈಗಾಗಲೇ ಘೋಷಿಸಿದ್ದರು. ಈಗಾಗಲೇ ‘Announcement’ ವಿಡಿಯೋ ಕೂಡ ಬಿಡುಗಡೆಯಾಗಿದೆ. ಆದರೆ ಕೊರೊನಾ ಕಾರಣದಿಂದ ಚಿತ್ರದ ಕೆಲಸ ತಡವಾಗಿತ್ತು.

ಈ ಹಿನ್ನಲೆಯಲ್ಲಿ ಮುಖೇಶ್ ಖನ್ನಾ ಅವರು ‘ಶಕ್ತಿಮಾನ್’ ಸರಣಿಯನ್ನು 200 ರಿಂದ 300 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಚಿತ್ರ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಶಕ್ತಿಮಾನ್ ಧಾರಾವಾಹಿಯನ್ನು ಸಿನಿಮಾ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಸೋನಿ ಪಿಕ್ಚರ್ಸ್ 200 ರಿಂದ 300 ಕೋಟಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಿದೆ. ಕೊರೊನಾ ವೈರಸ್‌ನಿಂದಾಗಿ ಚಿತ್ರದ ಆರಂಭ ತಡವಾಗಿತ್ತು.

ನಿರ್ದಿಷ್ಟವಾಗಿ ನಾನು ಇದನ್ನು ಹೇಳಲೇಬೇಕು. ಚಿತ್ರದಲ್ಲಿ ನಾನು ಶಕ್ತಿಮಾನ್ ಪಾತ್ರ ಮಾಡಿಲ್ಲ; ವಿಶೇಷ ಪಾತ್ರದಲ್ಲೂ ನಟಿಸುತ್ತಿಲ್ಲ. ಸದ್ಯದಲ್ಲೇ ಚಿತ್ರದ ಅಧಿಕೃತ ಘೋಷಣೆ ಹೊರಬೀಳಲಿದೆ. ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬುದನ್ನು ನಂತರ ಪ್ರಕಟಿಸಲಾಗುವುದು. ಈ ಚಿತ್ರ ಇನ್ನೊಂದು ಹಂತದಲ್ಲಿ ವಿಭಿನ್ನವಾಗಿರಲಿದೆ” ಎಂದರು.

ರಾಜಕೀಯ

ಕಾನೂನು ಕೈಗೆತ್ತಿಕೊಳ್ಳುವವರ, ಸಂವಿಧಾನ ಬಾಹಿರ ಕೃತ್ಯ ನಡೆಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಮ್ಮ ಪ್ರಕಾರ ತುರ್ತುಪರಿಸ್ಥಿತಿಯಾದರೆ ನಿಮ್ಮ ವಿವೇಚನಾ ಶಕ್ತಿಯ ಬಗ್ಗೆ ಅನುಕಂಪವಿದೆ.

ಬೆಂಗಳೂರು: ಬೆಳಗಾವಿಯಲ್ಲಿ ಸೋಮವಾರ ಬಿಜೆಪಿ ಮುಖಂಡರ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಕಾಂಗ್ರೆಸ್ಸಿಗೆ ಎರಡೇ ದಿನದಲ್ಲಿ ಅಧಿಕಾರದ ಅಮಲು ಹೆಚ್ಚಾಗಿದೆ. ಜನರ ವಾಕ್ ಸ್ವಾತಂತ್ರ್ಯ ಕಿತ್ತುಕೊಂಡ ರೀತಿಯಲ್ಲಿ ಮಂತ್ರಿಗಳು ಮಾತನಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ತಲೆದೋರಬಹುದು’ ಎಂದರು.  

ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ‘ಬೊಮ್ಮಾಯಿಯವರೇ, ಯಾವ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದೀರಿ? ತನ್ನ ರಾಜಕೀಯ ವಿರೋಧಿಗಳನ್ನ ಮಟ್ಟ ಹಾಕಲು ತನಿಖಾ ಏಜೇನ್ಸಿಗಳನ್ನು, ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಾಕ್ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವ ನಿಮ್ಮ ಮೋದಿ ಸರ್ಕಾರದ ನಡೆ ನಿಮಗೆ ತುರ್ತುಪರಿಸ್ಥಿತಿ ಎಂದು ಅನ್ನಿಸುತ್ತಿಲ್ಲವೇ?

ಅಧಿಕಾರ ಕಳೆದುಕೊಂಡಿರುವ BJPಯವರು ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದಾರೆ‌. ಬೊಮ್ಮಾಯಿಯವರೇ ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ತುರ್ತು ಪರಿಸ್ಥಿತಿಯ ಲಕ್ಷಣವಲ್ಲ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಜವಬ್ಧಾರಿಯುತ ಸರ್ಕಾರದ ಕರ್ತವ್ಯ. ನಮ್ಮ ಸರ್ಕಾರ ಮಾಡುತ್ತಿರುವುದು ಅದನ್ನೆ.

ಬೊಮ್ಮಾಯಿಯವರೇ ಒಂದು ಜವಾಬ್ಧಾರಿಯುತ ಸರ್ಕಾರವಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮ ಕರ್ತವ್ಯ. ಕಾನೂನು ಕೈಗೆತ್ತಿಕೊಳ್ಳುವವರ, ಸಂವಿಧಾನ ಬಾಹಿರ ಕೃತ್ಯ ನಡೆಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಮ್ಮ ಪ್ರಕಾರ ತುರ್ತುಪರಿಸ್ಥಿತಿಯಾದರೆ ನಿಮ್ಮ ವಿವೇಚನಾ ಶಕ್ತಿಯ ಬಗ್ಗೆ ಅನುಕಂಪವಿದೆ. ನೀವು ಕಾನೂನು ಉಲ್ಲಂಘಿಸುವವರ ಪರವೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶ

ಕಳೆದ ಮೇ 2 ರಂದು ರಾತ್ರಿ 7 ಗಂಟೆ ಸುಮಾರಿಗೆ, ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ರಾಂಗ್ ಟ್ರ್ಯಾಕ್ ನಲ್ಲಿ ಸಾಗುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್, ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆಯಿತು. ಕೋರಮಂಡಲ್ ಎಕ್ಸ್‌ಪ್ರೆಸ್‌ನ ಬೋಗಿಗಳು ಪಲ್ಟಿಯಾಗಿ ಸಮೀಪದ ಹಳಿಗಳ ಮೇಲೆ ಬಿದ್ದವು. ಆಗ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್‌ನ ಬೋಗಿಗಳಿಗೆ ಡಿಕ್ಕಿ ಹೊಡೆದು ಹಳಿತಪ್ಪಿತು. ಈ ಭೀಕರ ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದಾರೆ. ಸುಮಾರು 800 ಮಂದಿ ಗಾಯಗೊಂಡಿದ್ದಾರೆ.

ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ ಇದಾಗಿದೆ. ಅಪಘಾತದಲ್ಲಿ ಸಿಲುಕಿದ ಎಲ್ಲರನ್ನೂ ಈಗ ರಕ್ಷಿಸಲಾಗಿದೆ. ಇದಲ್ಲದೆ, ಅಪಘಾತದ ಸ್ಥಳದಲ್ಲಿ ದುರಸ್ತಿ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಅದು ಕೂಡ ಪೂರ್ಣಗೊಂಡಿದ್ದು, ನೆನ್ನೆಯಿಂದ ಆ ಪ್ರದೇಶದಲ್ಲಿ ರೈಲುಗಳು ಮತ್ತೆ ಓಡುತ್ತಿವೆ.

ಒಡಿಶಾ ರೈಲು ಅಪಘಾತದ ಆಘಾತದಿಂದ ಜನರು ಚೇತರಿಸಿಕೊಳ್ಳುವ ಮುನ್ನವೇ ಗುಂಪೊಂದು ಕೋಮುಗಲಭೆ ಸೃಷ್ಟಿಸಲು ಯತ್ನಿಸಿರುತ್ತಿದೆ. ಅದು ಈಗ ಸುದ್ದಿಯಾಗಿದೆ. The Random Indian ಎಂಬ ಟ್ವಿಟರ್ ಖಾತೆಯಲ್ಲಿ ‘ಶುಕ್ರವಾರ ಈ ರೈಲು ಅಪಘಾತ ಸಂಭವಿಸಿದೆ; ಸಮೀಪದಲ್ಲಿ ನೋಡಿ ಮಸೀದಿ ಕಾಣುತ್ತಿದೆ’ ಎಂದು ಟ್ವೀಟ್ ಮಾಡಲಾಗಿತ್ತು. ಅಂದರೆ, ಇದು ಅಪಘಾತವಲ್ಲ; ಒಂದು ನಿರ್ದಿಷ್ಟ ಸಮುದಾಯದ ವಿಧ್ವಂಸಕ ಕೃತ್ಯ ಎಂಬಂತೆ ಚಿತ್ರಿಸಿ, ಕೋಮು ಸಂಘರ್ಷವನ್ನು ಸೃಷ್ಟಿಸಲಿಕ್ಕಾಗಿ ಈ ರೀತಿಯ ಟ್ವೀಟ್ ಮಾಡಲಾಗಿತ್ತು.

ಆದರೆ, ಅಪಘಾತ ನಡೆದ ಸ್ಥಳದ ಸಮೀಪದಲ್ಲಿ ಮಸೀದಿ ಇರಲಿಲ್ಲ. ಅದೊಂದು ಇಸ್ಕಾನ್ ದೇವಾಲಯವಾಗಿತ್ತು. ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಸಲು ಫೋಟೋ ಕತ್ತರಿಸಿ ಈ ರೀತಿ ಹರಡುತ್ತಿದ್ದಾರೆ. ಅದು ಬಹನಾಗ ಇಸ್ಕಾನ್ ದೇವಸ್ಥಾನ ಎಂಬುದನ್ನು ಸಾಕ್ಷ್ಯ ಸಹಿತ ಸಾಬೀತುಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೈಲು ಅಪಘಾತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಒಡಿಶಾ ಪೊಲೀಸರು ಹೊರಡಿಸಿರುವ ಅಧಿಸೂಚನೆಯಲ್ಲಿ, ಬಾಲಸೋರ್ ಜಿಲ್ಲೆಯ ರೈಲು ಅಪಘಾತಕ್ಕೆ ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಧಾರ್ಮಿಕ ಬಣ್ಣ ನೀಡುತ್ತಿರುವುದು ದುರದೃಷ್ಟಕರ ಎಂದು ಹೇಳಲಾಗಿದೆ. ಕೆಟ್ಟ ಉದ್ದೇಶದಿಂದ ಪೋಸ್ಟ್‌ಗಳನ್ನು ಹರಡುವುದನ್ನು ತಡೆಯಲು ಸಹ ವಿನಂತಿಸಲಾಗಿದೆ. ವದಂತಿಗಳನ್ನು ಹಬ್ಬಿಸುವ ಮತ್ತು ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳು ಆದ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು; ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ; ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳು, ಇಂಜಿನಿಯರ್‌ಗಳನ್ನು ಸೇವೆಯಿಂದ ಅಮಾನತು ಮಾಡುವಂತೆ ಸೂಚನೆ ನೀಡಿದ್ದಾರೆ. ಈಜಿಪುರ ಮೇಲ್ಸೇತುವೆ ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಲು, ಅಗತ್ಯವಿರುವ ಆಡಳಿತಾತ್ಮಕ ನಿರ್ಣಯಗಳನ್ನು ತಕ್ಷಣ ಕೈಗೊಳ್ಳಬೇಕು ಎಂದೂ ಆದೇಶ ಮಾಡಿದ್ದಾರೆ.

ಬೆಂಗಳೂರಿನ ಮುಂದಿನ 20 ವರ್ಷಗಳ ಅಗತ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಒಟ್ಟಾರೆಯಾಗಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಚಾಲನೆ ನೀಡಿದ್ದಾರೆ! ಬೆಂಗಳೂರಿನ ಕೆಲವೆಡೆ ಹೋರ್ಡಿಂಗ್‌ಗಳನ್ನು ಅಳವಡಿಸಲು ಅನುಮತಿ ನೀಡಿದ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.

ರಾಜಕೀಯ

ನೂರಾರು ಪ್ರಯಾಣಿಕರನ್ನು ಬಲಿತೆಗೆದುಕೊಂಡ ಒಡಿಶಾ ರೈಲು ಅಪಘಾತದ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರ 5 ಸದಸ್ಯರ ಸಮಿತಿಯನ್ನು ರಚಿಸಿದೆ. ‘ಸಿಗ್ನಲ್ ದೋಷದಿಂದ ರೈಲು ಅಪಘಾತ ಸಂಭವಿಸಿದೆ’ ಎಂದು ತಂಡ ಬಿಡುಗಡೆ ಮಾಡಿರುವ ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ‘ಒಡಿಶಾ ರೈಲು ಅಪಘಾತದ ಕುರಿತು ಸಿಬಿಐ ತನಿಖೆ ನಡೆಸಲಿದೆ’ ಎಂದು ಘೋಷಿಸಿದ್ದಾರೆ.ಈ ಕುರಿತು ಮಾತನಾಡಿದ ಎಂಎಂಕೆ ಪಕ್ಷದ ಮುಖಂಡ ಎಂ.ಹೆಚ್.ಜವಾಹಿರುಲ್ಲಾ ‘ಇದು ಬರೀ ಕಣ್ಣೊರೆಸುವ ತನಿಖೆಯಾಗಲಿದೆ’ ಎಂದು ಟೀಕಿಸಿದ್ದಾರೆ.

ಇದರ ಬಗ್ಗೆ ಅವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ‘ಒಡಿಶಾ ರೈಲು ಅಪಘಾತದ ಕುರಿತು ಸಿಬಿಐ ತನಿಖೆ ನಡೆಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವರು ಘೋಷಿಸಿದ್ದಾರೆ. ಇದು ಬರೀ ಕಣ್ಣೊರೆಸುವ ತನಿಖೆಯಾಗಲಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಅಪಘಾತದ ಬಗ್ಗೆ ನ್ಯಾಯಾಂಗ ತನಿಖೆ ನಡೆದಾಗ ಮಾತ್ರ ಅಪಘಾತದ ನಿಜವಾದ ಕಾರಣಗಳು ಸ್ವಲ್ಪಮಟ್ಟಿಗೆ ಹೊರಬರುತ್ತವೆ. ರಾಜಧಾನಿ ಮತ್ತು ಶತಾಬ್ದಿ ರೈಲು ಇರುವಾಗ ಈಗ ದೇಶದಲ್ಲಿ ವಂದೇ ಭಾರತ್ ರೈಲಿನ ಅಗತ್ಯ ಏನಿದೆ.

ಹಳಿಗಳ ಮೇಲ್ವಿಚಾರಣೆ ಸೇರಿದಂತೆ ಕರ್ತವ್ಯಕ್ಕಾಗಿ ಖಾಲಿ ಇರುವ ಮೂರು ಲಕ್ಷ ರೈಲ್ವೆ ಹುದ್ದೆಗಳನ್ನು ಕೂಡಲೇ ಕಾಯಂ ಸಿಬ್ಬಂದಿಯೊಂದಿಗೆ ಭರ್ತಿ ಮಾಡಬೇಕು. ಕಳೆದ ಕೆಲವು ವರ್ಷಗಳಿಂದ, ವಿಶ್ವದ ಅತಿದೊಡ್ಡ ಉದ್ಯಮವಾದ ರೈಲ್ವೇಯನ್ನು ಖಾಸಗೀಕರಣಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರವು ಭಾರತೀಯ ರೈಲ್ವೆಯನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದೆ. ರೈಲು ಪ್ರಯಾಣ ಸುರಕ್ಷಿತವಾಗಿರುವುದರಿಂದ ಹೆಚ್ಚಿನ ಜನರು ಅದನ್ನು ಅವಲಂಬಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಈ ಭರವಸೆಯನ್ನು ಮುರಿದಿದೆ.

ಕಡಿಮೆ ವೆಚ್ಚ, ಹೆಚ್ಚು ಸೌಕರ್ಯ, ಪ್ರಯಾಣದಲ್ಲಿ ಸುರಕ್ಷತೆ’ ಎಂಬುದು ರೈಲು ಪ್ರಯಾಣದ ವ್ಯಾಕರಣವಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ಪ್ರಯಾಣ ದರ, ಸೀಮಿತ ಸೌಲಭ್ಯಗಳು ಮತ್ತು ಪ್ರಯಾಣದಲ್ಲಿ ಅಭದ್ರತೆಯಿಂದಾಗಿ ರೈಲು ಪ್ರಯಾಣದ ಸ್ವರೂಪವೇ ಬದಲಾಗಿದೆ. ರೈಲ್ವೇ ವಲಯವನ್ನು ಅದಾನಿ, ಅಂಬಾನಿ ಸೇರಿದಂತೆ ಕಾರ್ಪೊರೇಟ್‌ಗಳ ಪಾದಕ್ಕೆ ಅರ್ಪಿಸಲು ತೆಗೆದುಕೊಂಡ ಉಪಕ್ರಮವೆಂಬಂತೆ ತೋರುತ್ತದೆ.

ರೈಲ್ವೆ ಕ್ಷೇತ್ರವನ್ನು ಖಾಸಗಿಯವರಿಗೆ ಹಸ್ತಾಂತರಿಸಿದರೆ ಒಳಿತು ಎಂದು ಜನ ಭಾವಿಸುವ ವಾತಾವರಣ ನಿರ್ಮಾಣ ಮಾಡಲು ಕೇಂದ್ರ ಬಿಜೆಪಿ ಸರ್ಕಾರ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ರೈಲು ಪ್ರಯಾಣವನ್ನು ಸುರಕ್ಷಿತಗೊಳಿಸಲು ಕ್ರಮ ಕೈಗೊಳ್ಳಬೇಕು. ಖಾಸಗೀಕರಣದ ಮೂಲಕ ರೈಲ್ವೆ ಹಳಿತಪ್ಪಿಸುವ ಯತ್ನವನ್ನು ಮೋದಿ ಸರ್ಕಾರ ಕೈಬಿಡಬೇಕು’ ಎಂದರು.

ರಾಜಕೀಯ

ನ್ಯೂಯಾರ್ಕ್: ಬಿಜೆಪಿಯನ್ನು ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಮೇಲೆ ಆರೋಪ ಮಾಡುವುದನ್ನೇ ರೂಡಿಸಿಕೊಂಡಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಅಮೆರಿಕಕ್ಕೆ ತೆರಳಿರುವ ಕಾಂಗ್ರೆಸ್‌ನ ಮಾಜಿ ನಾಯಕ ರಾಹುಲ್‌ ಗಾಂಧಿ, ನ್ಯೂಯಾರ್ಕ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ, “ನೀವು ಬಿಜೆಪಿಯನ್ನು ಏನೇ ಕೇಳಿದರೂ ಅದಕ್ಕೆ ಉತ್ತರ ಕೊಡದೆ, ಅದರಿಂದ ಹಾದುಹೋಗುವುದನ್ನು ಕಾಣಬಹುದು. ಒಡಿಶಾ ರೈಲು ಅಪಘಾತದ ಬಗ್ಗೆ ಬಿಜೆಪಿಯವರನ್ನು ಪ್ರಶ್ನೆ ಮಾಡಿ; 50 ವರ್ಷಗಳ ಹಿಂದಿನ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಬಿಜೆಪಿಯವರ ಬಳಿ ಇರುವ ತಕ್ಷಣದ ಉತ್ತರ ಏನು ಗೊತ್ತೆ? ಇತಿಹಾಸವನ್ನು ನೋಡಿ ಎಂಬುದೇ. ಬಿಜೆಪಿ ಮತ್ತು ಆರೆಸ್ಸೆಸ್ ಎರಡೂ ಇತರರನ್ನು ದೂಷಿಸುವ ಪ್ರವೃತ್ತಿಯನ್ನು ಹೊಂದಿದೆ.

ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ರೈಲು ಅಪಘಾತಗಳು ಸಂಭವಿಸಿದರೆ ತಕ್ಷಣವೇ ಸಚಿವರು ರಾಜೀನಾಮೆ ನೀಡುತ್ತಿದ್ದರು. ಕೇಂದ್ರ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಸರಿಯಾದ ಕ್ರಮವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ರೈಲು ಅಪಘಾತಗಳು ನಡೆದಿವೆ; ಬ್ರಿಟಿಷರ ಆಡಳಿತವೇ ಅದಕ್ಕೆ ಕಾರಣ ಎಂದು ಹೇಳಿ, ಕಾಂಗ್ರೆಸ್ ಸರಕಾರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂಬುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿ, ಆರೆಸ್ಸೆಸ್, ಪ್ರಧಾನಿ ಮೋದಿ ಯಾರೇ ಆಗಲಿ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವುದಿಲ್ಲ. ಅವರು ಹಿಂದಿನದನ್ನು ದೂಷಿಸುವುದನ್ನೇ ವಾಡಿಕೆಯಾಗಿ ಮಾಡಿಕೊಂಡಿದ್ದಾರೆ.

ಇತರರನ್ನು ದೂಷಿಸಿ ತಪ್ಪಿಸಿಕೊಳ್ಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಆಧುನಿಕ ಭಾರತದ ನಿರ್ಮಾಣದಲ್ಲಿ ಅನಿವಾಸಿ ಭಾರತೀಯರ (NRI) ಪಾತ್ರ ಪ್ರಮುಖವಾದದ್ದು. ಮಹಾತ್ಮಾ ಗಾಂಧಿಯವರು ಕೂಡ ಅನಿವಾಸಿ ಭಾರತೀಯರಾಗಿದ್ದರು. ನೆಹರೂ, ಅಂಬೇಡ್ಕರ್, ವಲ್ಲಭ ಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಎಲ್ಲರೂ ಅನಿವಾಸಿ ಭಾರತೀಯರೇ. ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದರೂ ಸಹ ಅವರು ಒಟ್ಟಿಗೆ ಕೆಲಸ ಮಾಡಿದರು. ಇದನ್ನೇ ನಾನು ಭಾರತೀಯ ಸಮಾಜದಿಂದ ನಿರೀಕ್ಷಿಸುತ್ತೇನೆ” ಎಂದರು.